ಶನಿವಾರ, ಏಪ್ರಿಲ್ 8, 2023

ಅಕ್ಕಳ ಸ್ವಿಕೃತಿ (ಲೇಖನ) - ಶ್ರೀಮತಿ ಸುಲೋಚನಾ ಮಾಲಿಪಾಟೀಲ.

ವೀರ ವಿರಾಗಿಣಿ, ಕದಳಿಯ ಕರ್ಪುರ, ಕನ್ನಡದ ಕೋಕಿಲೆ, ಪ್ರಥಮ ಕವಯಿತ್ರಿ, ಸ್ವತಂತ್ರ ವಿಚಾರವಾದಿ, ಅತುಲ ಛಲಗಾರ್ತಿ ಹೀಗೆ ನಾನಾ ವಿಧವಾಗಿ ಸಂಬೋಧಿಸಲ್ಪಟ್ಟ ಅಕ್ಕಮಹಾದೇವಿ ಕನ್ನಡ ನಾಡಿಗೆ ಒಂದು ಅಪೂರ್ವ ಕೊಡುಗೆ ನಿತ್ತವಳು. ಕನ್ನಡ ಬರಹಗಾರರ ಅಧ್ಯಾತ್ಮದ ಹಸಿವಿಗೆ ಬಸವಣ್ಣನವರ ನಂತರ ಹೆಚ್ಚಿಗೆ ಆಹಾರವಾದವಳು ಅಕ್ಕ ಮಹಾದೇವಿಯೇ. 
ಅಕ್ಕ ಮಲ್ಲಿಕಾರ್ಜುನ ಗಂಡನನ್ನು ತನ್ನ ಅಂತರಂಗದಲ್ಲಿ ಇರಿಸಿಕೊಳ್ಳುವ ಮೊದಲ ಹೆಜ್ಜೆಯಲಿ  ಮೈದುನನರಂತಿದ್ದ ಮೂರು ಹುಲಿಗಳನ್ನು ಹೊಡೆದೊಡಿಸಿದಳು. ಅವುಗಳಾವವು ಎಂದರೆ ಭಯ, ಪ್ರಮಾಣ ಮತ್ತು ಕಾಯ. ಮತ್ತೊಂದು ಹೆಜ್ಜೆಗೆ ನಾಲ್ಕು ಒರಗಿತ್ತಿಯರು ಗಂಟು ಬಿದ್ದರು. ಅವರೆಂದರೆ ಮನ, ಬುದ್ಧಿ, ಚಿತ್ತ ಮತ್ತು ಅಹಂಕಾರ. ಇವರನ್ನು ಕೂಡ ಬದಿಗೆ ಸರಿಸಿ  ಮಲ್ಲಿಕಾರ್ಜುನನನ್ನು ಕಾಣುವ ಬಯಕೆಯಲ್ಲಿ ಮುಂದೆ ಸಾಗಿದಾಗ ಆರು ಜನ ಅತ್ತಿಗೆಯರು ಎದುರಾದರು ಅವರೆಂದರೆ ಅರಿಷಡ್ವರ್ಗಗಳು. ಅವುಗಳನ್ನು ನೂಕಿ ಮುಂದೆ ಸಾಗಿದಾಗ ಎದುರಾದ ಏಳು ಪ್ರಜೆಗಳು ಅಂದರೆ ಸಪ್ತ ವ್ಯಸನಿಗಳು. ಅವು ಅವಳನ್ನು ಕಾಡುವ ಹೊಂಚು ಹಾಕುತ್ತಿರುವಾಗಲೇ ಅವರನ್ನು ತುಳಿದು ಮುನ್ನಡೆದವಳು ಅಕ್ಕ. ಕರ್ಮವೆಂಬುದು ಬಾಯಿ ತೆರೆದು ಕಾಯುತಿರಲು ಅದರ ಬಾಯಿ ಹೊಲಿದು ಮನವೆಂಬ ಸಖಿಯ ಪ್ರಭಾವದಿಂದ ಶ್ರೀಶೈಲಕ್ಕೆ ಬಂದು ಮಲ್ಲಿಕಾರ್ಜುನನಲ್ಲಿ ಒಂದಾಗುವ ಬವಣೆಯಲ್ಲಿ ಎಂತಹ ಸುಂದರ ಕ್ಷೇತ್ರ. ಕಣ್ಣು ಹಾಯಿಸಿದ ಕಡೆ ಗಿಡ ಮರ ಬಳ್ಳಿಗಳು ಹೂ ಬಿಟ್ಟ ಅವುಗಳ ಚೆಲವು ದೃಷ್ಟಿಯನ್ನು ಅಲುಗಿಸಲು ಆಸ್ಪದ ಕೊಡುತ್ತಿರಲಿಲ್ಲ. ಹುಲ್ಲುಗಾವಲಿನ ಹಸುರು ಹಾಸಿಗೆ ಎಂಥ ಪ್ರಕ್ಷುಬ್ಧ ಮನಸ್ಸಿಗಾದರೂ ನೆಮ್ಮದಿಯನ್ನು ನೀಡುತ್ತಿತ್ತು. ಹಕ್ಕಿಗಳ ಹಾಡು ನಿರ್ಝರಗಳ ನಿನಾದದೊಡನೆ ಬೆರೆತು ಅಪೂರ್ವ ಸ್ವರಮೇಳದ ಸೃಷ್ಟಿಯಾಗಿತ್ತು. ಇದೇ ಚೆನ್ನಮಲ್ಲಿಕಾರ್ಜುನನ ಖಚಿತವಾದ ನೆಲೆ ಎಂದು ಮಹಾದೇವಿಗೆ ಅನ್ನಿಸಿತು. ಎಲ್ಲ ಕಡೆಯೂ ಅವನಿರುವಂತೆ ಭಾಸವಾಯಿತು. “ವನವೆಲ್ಲ ನೀವೆ, ಮನದೊಳಗಣ ದೇವ ತರುವೆಲ್ಲ ನೀವೆ. ತರವಿನೊಳಗಾಡುವ ಖಗಮೃಗವೆಲ್ಲನೀವೆ. ಸರ್ವಭರಿತನಾಗಿ ನನಗೆ ಮುಖತೋರಿಸಿರಿ” ಎಂದು ಅವಳು ಮಲ್ಲಿಕಾರ್ಜುನನನ್ನು ಪ್ರಾರ್ಥಿಸಿದಳು. ಅವನ ದರ್ಶನಕ್ಕಾಗಿ ಹಾತೊರೆದಳು. ಚಿಲಿಮಿಲಿ ಎಂದೋಡುವ ಗಿಳಿಗಳನ್ನೂ ಸ್ವರವೆತ್ತಿ ಹಾಡುವ ಕೋಗಿಲೆಗಳನ್ನೂ ಎರಗಿ ಬಂದು ಆಡುವ ದುಂಬಿಗಳನ್ನೂ ಕೊಳದ ತಡಿಯೊಳಗಾಡುವ ಹಂಸಗಳನ್ನೂ ಗಿರಿಗಹ್ವರದೊಳಗಾಡುವ ನವಿಲುಗಳನ್ನೂ ಅವಳು ಆರ್ತಳಾಗಿ ಕೇಳಿದಳು. “ಚೆನ್ನಮಲ್ಲಿಕಾರ್ಜುನನನ್ನು ನೀವು ಕಂಡಿಲ್ಲವೆ? ಅವನೆಲ್ಲಿದ್ದಾನೆ? ಹೇಳಿ” ಎಂದು ಧೈನ್ಯದಿಂದ ಬೇಡಿಕೊಂಡಳು.

ಬಹಳ ಕಾಲ ಅಕ್ಕ ತನ್ನ ಹೃದಯವನ್ನು ಹರಿದು, ಕರುಳನ್ನು ಕತ್ತರಿಸಿ ಹಾಡಬೇಕಾಗಿ ಬರಲಿಲ್ಲ. ಕೆಂಪಾದ ಹೊಳೆಯುವ ಜಡೆಗಳ, ರತ್ನಖಚಿತ ಕಿರೀಟಧಾರಿಯಾದ, ಬೆಳಗುವ ಹುಲ್ಲುಗಳ, ನಗೆ ಮೊಗದ, ಕಾಂತಿಯಿಂದ ತುಂಬಿದ ಕಣ್ಣುಗಳ, ಇವೆಲ್ಲದರಿಂದ ಹದಿನಾಲ್ಕು ಲೋಕಗಳನ್ನೂ ಬೆಳಗುವ ದಿವ್ಯ ಸ್ವರೂಪವನ್ನು ಅವಳು ಬಹುಬೇಗನೆ ಕಂಡಳು. ಇಂದಿಗೆ ನನ್ನ ಕಣ್ಣಿನ ಬರ ತೀರಿತು ಎಂದು ತೃಪ್ತಿಯಿಂದ ಹೇಳಿದಳು. ಲೋಕದ ಮಹಾಶಕ್ತರೆನಿಸಿದವರೆಲ್ಲ ತಲೆಬಾಗುವ ಶ್ರೇಷ್ಠಮೂರ್ತಿಯ ದರ್ಶನ ಅವಳಿಗಾಯಿತು.  ಚೆನ್ನಮಲ್ಲಿಕಾರ್ಜುನನ ನಿಲುವನ್ನು ಕಂಡು ಬದುಕಿದೆ ಎಂದು ಅಕ್ಕ ಹೇಳಿಕೊಂಡಳು. ಈ ದಿವ್ಯ ದರ್ಶನದಿಂದ ಅಕ್ಕ ಉರಿಯುತ್ತಿದ್ದ ಕರ್ಪೂರವಾದಳು. ಬೆಳಗು ಬೆಳಗನ್ನು ಕೂಡಿತು. ಬಯಲು ಬಯಲನ್ನು ಸೇರಿತು.

ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ಅಧ್ಯಾತ್ಮದ ಅರಿವು, ಜ್ಞಾನದಅನುಭವ, ವೈರಾಗ್ಯವನ್ನು ಮೈಗೂಡಿಸಿಕೊಂಡಿರುವ  ಅಕ್ಕ ತನ್ನ ಬದುಕನ್ನು ತಾನೆ ವಿಶಿಷ್ಟ ರೀತಿಯಲ್ಲಿ ರೂಪಿಸಿಕೊಂಡವಳು, ಮೊಟ್ಟ ಮೊದಲ ಬಾರಿಗೆ ಮಹಿಳೆಗೆ ಅಭಿವ್ಯಕ್ತ ಸ್ವತಂತ್ರವನ್ನು ದೊರಕಿಸುವಲ್ಲಿ ಪ್ರಮುಖವಾದಳು. 
ಜೀವನದುದ್ದಕ್ಕೂ ವಿಸ್ಮಯಕಾರಿ ಬದುಕನ್ನು ಸವೆಸಿದಳು. ತನಗೆ ಒದಗಿ ಬಂದ ರಾಜಭೊಗ ತ್ಯಜಿಸಿದ ಅಕ್ಕ ಕೌಶಿಕ್ ಮಹಾರಾಜರನ್ನು ಕಡೆಗಣಿಸಿ ಕೇಶಾಂಬಿರಿಯಾಗಿ ಹೊರಟ ದಿಟ್ಟ ಹೋರಾಟಗಾರ್ತಿ, ಆತ್ಮಸ್ಥೈರ್ಯವನ್ನು ಹೊಂದಿದ ಬಂಡಾಯಗಾರ್ತಿ. ಕನ್ನಡ ಬರಹಗಾರರ ಅಧ್ಯಾತ್ಮದ ಹಸಿವಿಗೆ ಬಸವಣ್ಣನವರ ನಂತರ ಹೆಚ್ಚಿಗೆ ಆಹಾರವಾದವರು ಅಕ್ಕ ಮಹಾದೇವಿಯೇ. ಅವರ ಬಗ್ಗೆ ಹಲವಾರು ಪಿ.ಎಚ್.ಡಿ. ಗ್ರಂಥಗಳು ಬಂದುದೇ ಸಾಕ್ಷಿ. 

ರತ್ನದ ಸಂಕೋಲೆಯಾದಡೆ ತೊಡರಲ್ಲವೆ?
ಮುತ್ತಿನ ಬಲೆಯಾದಡೆ ಬಂಧನವಲ್ಲವೆ?
ಚಿನ್ನದ ಕತ್ತಿಯಲ್ಲಿ ತಲೆಹೊಯ್ದಡೆ ಸಾಯದಿರ್ಪರೆ?
ಲೋಕದ ಭಜನೆಯ ಭಕ್ತಿಯಲ್ಲಿ ಸಿಲುಕಿದಡೆ
ಜನನಮರಣ ಬಿಡುವುದೆ ಚೆನ್ನಮಲ್ಲಿಕಾರ್ಜುನಾ? || ೧ ||

ರತ್ನದ ಸಂಕೋಲೆಯಾದರೂ ಅದು ಅಡ್ಡಿಯಲ್ಲವೇ?  ಮುತ್ತಿನ ಬಲೆಯಾದರೇನು ಅದೂ ಬಂಧನವಲ್ಲವೇ? ಚಿನ್ನದ ಕತ್ತಿಯಲ್ಲಿ ತಲೆಗೆ ಹೊಡೆದರೆ ಸಾಯುವುದಿಲ್ಲವೇ? ಲೌಕಿಕವಾದ ವಿಚಾರಗಳಲ್ಲಿ ತೊಡಗಿದರೆ ಜನನ ಮರಣಗಳು ಬಿಡುವವೇ? ಕೇವಲ ಬಾಹ್ಯ ಆಚಾರ, ವ್ಯವಹಾರಗಳಲ್ಲಿ ತೊಡಗಿ ಶಿವನನ್ನು ಮರೆತಂತ ಜನರನ್ನು ಕುರಿತು ಈ ಮಾತುಗಳನ್ನು ಹೇಳುತ್ತಾಳೆ. ರತ್ನದ ಸಂಕೋಲೆಯೂ ನಮಗೆ ತೊಂದರೆಯನ್ನೇ ಉಂಟುಮಾಡುತ್ತದೆ. ಮುತ್ತಿನ ಬಲೆಯೂ ನಮ್ಮನ್ನು ಬಂಧಿಸುತ್ತದೆ. ಅಂತೆಯೇ ಚಿನ್ನದ ಕತ್ತಿಯಿಂದ ಹೊಡೆಯಲು ಸಾವು ತಪ್ಪುವುದಿಲ್ಲ. ಲೌಕಿಕವಾದ ಜೀವನದ ಬಗೆಗೆ ಸದಾ ಚಿಂತಿಸುತ್ತಿರುವ ಜನರನ್ನು ಈ ಜನನ-ಮರಣಗಳು ಬಿಡುವುದಿಲ್ಲ ಅಲ್ಲವೇ?  ಮುಕ್ತಿಯನ್ನು ಪಡೆಯುವತ್ತ ಜೀವಾತ್ಮ ಚಿಂತಿಸಬೇಕು.

ಮುತ್ತು ನೀರಲ್ಲಾಯಿತ್ತು,ವಾರಿಕಲ್ಲು ನೀರಲ್ಲಾಯಿತ್ತು,
ಉಪ್ಪು ನೀರಲ್ಲಾಯಿತ್ತು
ಉಪ್ಪು ಕರಗಿತ್ತು,ವಾರಿಕಲ್ಲು ಕರಗಿತ್ತು,
ಮುತ್ತು ಕರಗಿದುದನಾರು ಕಾಣರು...
ಈ ಸಂಸಾರಿ ಮಾನವರು ಲಿಂಗವ ಮುಟ್ಟಿ
 ಭವಭಾರಿಗಳಾದರು  !
ನಾ ನಿಮ್ಮ ಮುಟ್ಟಿ ಕರಿಗೊಂಡೆನಯ್ಯಾ!
ಚೆನ್ನಮಲ್ಲಿಕಾರ್ಜುನಯ್ಯಾ 
ಇಲ್ಲಿ ಅಕ್ಕಮಹಾದೇವಿ ನೀರಿನಲ್ಲಿ ಹುಟ್ಟುವ ವಸ್ತುಗಳನ್ನು ಅರಿವಿಗೆ ಹೋಲಿಸಿ ಹೇಳುತ್ತಾರೆ..

ಮುತ್ತು, ವಾರಿಕಲ್ಲು(ಆನೇಕಲ್ಲು) ಮತ್ತು, ಉಪ್ಪು ಇವು ಮೂರು ಕೂಡ ನೀರಿನಲ್ಲೇ ರೂಪುಗೊಂಡಿದ್ದು... ಆದರೆ ವಾರಿಕಲ್ಲು ಮತ್ತು ಉಪ್ಪು ನೀರಿನಲ್ಲಿ ಕರಗಿ ಹೋಗುತ್ತದೆ. ಆದರೆ ಮುತ್ತು ಮಾತ್ರ ಕರಗುವುದಿಲ್ಲ.. ಅಂದರೆ ಮುತ್ತು ಅರಿವಿನ ಸಂಕೇತ.. ಅದರ ಶುಭ್ರತೆ ಮತ್ತು ಗಟ್ಟಿತನವನ್ನು ಇಲ್ಲಿ ಅರಿವು ಎಂದು ಹೇಳಬಹುದು.

ಉಪ್ಪು ವಾರಿಕಲ್ಲಿನಂತೆ ಈ ಸಂಸಾರಿಗಳು ಕರಗಿ ಹೋದರು. ನಾನು ನಿಮ್ಮನ್ನು ಮುಟ್ಟಿ ಕರಿಗೊಂಡೆನು ಎಂದು ಚೆನ್ನಮಲ್ಲಿಕಾರ್ಜುನನಲ್ಲಿ ಹೇಳಿಕೊಳ್ಳುತ್ತಾಳೆ. ಅಕ್ಕಮಹಾದೇವಿಯು ಮುತ್ತಿನಂತೆ ಅರಿವಿನ ಸಂಕೇತ. ಆದ್ದರಿಂದಲೇ ಅವಳು ಇಂದಿಗೂ ಅವಳ ವಚನಗಳ ಮೂಲಕ ಗಟ್ಟಿಯಾಗಿ ನೆಲೆ ನಿಂತಿರುವುದು.

ಇದೇ ರೀತಿ ಈ ಸಾಂಸಾರಿಕ ಜೀವನದಲ್ಲಿ ಬದುಕುತ್ತಿರುವ ಮಾನವರು ಲಿಂಗವನ್ನು ಧರಿಸಿ ಭವಭಾರಿಗಳಾದರು.  ಅಂದರೆ ಲಿಂಗವನ್ನು 'ಆಯತ ' ಮಾಡಿಕೊಂಡರೆ ಹೊರತು ಅದು ಮುಂದೆ ಅವರಿಗೆ  ' ಸ್ವಾಯತ ' ,  'ಸನ್ನಿಹಿತ '  ವಾಗಲೇ ಇಲ್ಲ. ಅಂಗದಲ್ಲಿ ಲಿಂಗ ಧರಿಸಿ ಲಿಂಗಧಾರಿಗಳಾಗಿ ಅದನ್ನೇ ದೇವರ ನಿಜ ಸ್ವರೂಪವೆಂದು  ಬಗೆದು 'ಸ್ಥಾವರ ' ವಾಗಿಸಿ  ಈ ಭವದ ಚಕ್ರದಲ್ಲಿ ಸಿಲುಕಿ ಭಾರವಾಗಿ ಬಿಟ್ಟರು.    ದಹಿಸಿಕೊಂಡು ಪರಿಶುದ್ಧಳಾದೆನಯ್ಯ ಚೆನ್ನಮಲ್ಲಿಕಾರ್ಜುನ 
ಕ್ಷಣಿಕ ಸುಖದ ಬೆನ್ನಟ್ಟಿ ಭವಚಕ್ರದಲ್ಲಿ ಸಿಲುಕುತ್ತಿರುವ ಮನುಜರನ್ನು ಕಂಡು ಮರುಗುವ ಅಕ್ಕ , ಮಾರ್ಗದರ್ಶನ ತೋರಬಲ್ಲ ಅರಿವೆಂಬ ಗುರು ದೊರೆತಾಗ ಮಾತ್ರ ಇವರಿಗೆ ಮುಕ್ತಿ ಸಾಧ್ಯವೆನ್ನುತ್ತಾಳೆ.   ಅಂತಹ ಸತ್ಪಥ ತೋರಬಲ್ಲ ಗುರುವನ್ನು ಹುಡುಕುವ ಅಭೀಪ್ಸೆ  ನಮ್ಮಲ್ಲಿ ಜಾಗೃತಗೊಂಡಾಗ ಮಾತ್ರ ಇದು ಸಾಧ್ಯವಾಗುತ್ತದೆ.  ತನಗೆ ಚೆನ್ನಮಲ್ಲಿಕಾರ್ಜುನನೆಂಬ ಅರಿವೆಂಬ ಗುರು ದೊರೆತು 
ಅಕ್ಕ ನಮ್ಮೆಲ್ಲರಂತೆ ಇದೇ ಲೌಕಿಕ ಸಂಸಾರದಲ್ಲಿ ಜನಿಸಿದ್ದರೂ ಸಹ ವಾರಿಕಲ್ಲು, ಉಪ್ಪಿನಂತಹ ಕ್ಷಣಿಕ ಸುಖದ ವಸ್ತುಗಳನ್ನು ಬಯಸದೆ ಶಾಶ್ವತವಾದ  'ಮುತ್ತಿ' ನಂಥ ಪರಮಸತ್ಯ ಸುಖವನ್ನರಸಿ ಅಪ್ಪಿಕೊಂಡು ಪರಮ ಸುಖಿಯಾದಳು.
ಭಗವಂತ ಪ್ರತಿನಿತ್ಯವೂ ನಮ್ಮ ಮುಂದೆ,  ಕ್ಷಣಿಕ ಹಾಗೂ ಶಾಶ್ವತ ಸುಖ ನೀಡುವ ವಸ್ತುಗಳನ್ನು  ಹರವುತ್ತಾನೆ.   ಆಯ್ಕೆ ನಮ್ಮದೇ.  ಅಂದರೆ ಭವಿಗಳಾಗುವುದೊ,  ಭವಮುಕ್ತರಾಗಿ ಅರಿವಿನ ಮಹಾ ಬೆಳಗಿನಲ್ಲಿ ಬೆಳಗಾಗಿ ಲೀನವಾಗುವುದೊ,  ಎಲ್ಲವೂ ನಮ್ಮ ಕೈಯಲ್ಲಿಯೇ ಇದೆ.

ಹಿತವಿದೇ, ಸಕಲಲೋಕದ ಜನಕ್ಕೆ ಮತವಿದೇ
ಶೃತಿ-ಪುರಾಣ-ಆಗಮದ ಗತಿಯಿದೇ
ಭಕುತಿಯ ಬೆಳಗಿನ ಉನ್ನತಿಯಿದೇ !
ಶ್ರೀವಿಭೂತಿಯ ಧರಿಸಿರೆ !
ಭವವ ಪರಿವುದು, ದುರಿತಸಂಕುಲವನೊರೆಸುವುದು,
ನಿರುತವಿದು ನಂಬು ಮನುಜ !
ಜವನ ಭೂತಿಯೇ ವಿಭೂತಿ !
ಮರಣಭಯದಿಂದ ಅಗಸ್ತ್ಯ ಕಶ್ಯಪ ಜಮದಗ್ನಿಗಳು
ದರಿಸಿದರೆಂದು ನೋಡಾ
ಶ್ರೀಶೈಲಚೆನ್ನಮಲ್ಲಿಕಾರ್ಜುನನೊಲಿಸುವ ವಿಭೂತಿ !
                                   
ಸಮಸ್ತ ಲೋಕದ ಮನುಜರಿಗೆ ವಿಭೂತಿಯ ಬಗ್ಗೆ ಗೌರವದಿಂದ ಕೂಡಿದ ಸೂಕ್ತ ವಿಷಯವಾಗಿದೆ. ಶೃತಿ ಪುರಾಣ ಆಗಮ ವಿಷಯಗಳಲ್ಲಿಯೂ ವಿಭೂತಿಯ ಒಳಹರಿವು ಇದೆ. ವಿಭೂತಿ ಬದುಕಿನಲ್ಲಿಯೂ ಕತ್ತಲೆಯನ್ನು ದೂರಸರಿಸಿ ಭಕ್ತಿಯ ಬೆಳಕಿನ ವೈಭವವು ತೋರಿದೆ. ಈ ಪವಿತ್ರ ವಿಭೂತಿಯನ್ನು ಹಣೆಯ ಮೇಲೆ ಧರಿಸಿದರೆ ಮರಣದ ಭಯ ಅಳಿಸುತ್ತದೆ. ಇದನ್ನು ಧರಿಸುವ ಒಲವಿನಲ್ಲಿ ಭಕ್ತಿಯ ಸೆಲೆಯಿದೆ. ಆಧ್ಯಾತ್ಮದ ಚಿಂತನೆಗೆ ಪ್ರೇರೆಪಿಸುವ ಶಕ್ತಿಯಿದೆ. ಜನನ ಭೂತಿಯೇ ವಿಭೂತಿ. ಇಂತಹ ಪವಿತ್ರವಾದ ವಿಭೂತಿ ಧರಿಸಿದವರಿಗೆ ಯಾವುದೇ ತರಹದ ಭಯವಿರುವುದಿಲ್ಲ .
ಇದು ಸಿರಿ ಸಂಪತ್ತಿನ ಸಂಕೇತದ ವಿಭೂತಿ. ಜೀವ ಭಯವಿದ್ದ ಅಗಸ್ತ್ಯ ಮತ್ತು ಜಮದಗ್ನಿ ಮಹರ್ಷಿಗಳು ಧರಿಸಿದ್ದರು.ಇದು ಶಿವ ಸ್ವರೂಪಿಯಾದ ಚೆನ್ನಮಲ್ಲಿಕಾರ್ಜನನಿಗೆ ವಿಭೂತಿ ಅತ್ಯಂತ ಪ್ರೀಯವಾದದ್ದು.
ಶರಣರ ನೊಸಲಿಗೆ ಶ್ರೀ ವಿಭೂತಿಯೇ ಶೃಂಗಾರ ಎಂದು ಬಸವಣ್ಣನವರ ವಚನದಂತೆ ಅಕ್ಕಮಹಾದೇವಿಯು ವಿಭೂತಿಯಲ್ಲಿ ಭಕ್ತಿ ಮತ್ತು ಆಧ್ಯಾತ್ಮದ ಮಹತ್ವವನ್ನು ಕೆಲವು ಪುರಾಣದ ನಿದರ್ಶನಗಳ ಮೂಲಕ ತಿಳಿಹೇಳಿದ್ದಾಳೆ.

ಭವಿಸಂಗವಳಿದು ಶಿವಭಕ್ತನಾದ ಬಳಿಕ
ಭಕ್ತಂಗೆ ಭವಿಸಂಗ ಅತಿಘೋರ ನರಕ !
ಶರಣ ಸತಿ - ಲಿಂಗ ಪತಿಯಾದ ಬಳಿಕ
ಶರಣಂಗೆ ಸತಿಸಂಗ ಅತಿಘೋರ ನರಕ !
ಚೆನ್ನಮಲ್ಲಿಕಾರ್ಜುನ,
ಲಿಂಗೈಕ್ಯಂಗೆ ಪ್ರಾಣಗುಣ ಅಳಿಯದವರ ಸಂಗವೇ ಭಂಗ !

ಈ ವಚನದಲ್ಲಿ ಅಕ್ಕಮಹಾದೇವಿ ಶರಣ ಸತಿ-ಲಿಂಗ ಪತಿ ಎಂಬ ಅಂಶವನ್ನು ಪ್ರತಿಪಾದಿಸುತ್ತಾಳೆ.ಅಲ್ಲದೆ ತಾನೂ ಕೂಡ ಅದೇ ರೀತಿ ಬದುಕಿದವಳು ಅಕ್ಕ.ಚೆನ್ನಮಲ್ಲಿಕಾರ್ಜುನನೇ  ತನ್ನ ಪತಿ ಎಂದು ಭಾವಿಸಿ ಶಿವ ಸ್ವರೂಪವಾದ ಲಿಂಗವನ್ನು ಆರಾಧಿಸಿದವಳು  ಅಕ್ಕ.
ಲೌಕಿಕ ಸುಖವನ್ನು ಬಿಟ್ಟು ಸಂಸಾರ ಬಂಧನಕ್ಕೆ ಹೊಳಗಾಗದೆ ಎಲ್ಲವನ್ನೂ ತೊರೆದು ಶಿವ ಭಕ್ತನಾದವನು ಮತ್ತೆ ಭವಿಯ ಸಂಗವನ್ನು ಬಯಸುವುದು ನರಕವಿದ್ದಂತೆ.  ಭಕ್ತನೇ ಸತಿ,ಲಿಂಗವೇ ಪತಿ ಎಂದು ಭಾವಿಸಿರುವ ಭಕ್ತನಿಗೆ ಹೆಣ್ಣಿನ ಮೇಲೆ ವ್ಯಾಮೋಹ ಆದರೆ ಅದು ಘನಘೋರ ತಪ್ಪು, ಅದು ನರಕವಿದ್ದಂತೆ. 
ಲಿಂಗದ ಸಂಗ ಬೆಸೆಯುವವನು ಅಂದರೆ ಲಿಂಗದೊಡನೆ ಒಂದುಗೂಡುವವನಿಗೆ, ತನ್ನ ಆತ್ಮವನ್ನು, ಪ್ರಾಣವನ್ನು ಬಿಡಲು ಒಲ್ಲದವನ ಸಂಗವು ಗೊಂದಲ ಇದ್ದ ಹಾಗೆ ಹೇಳುತ್ತಾ ಅಂಥವನ ಸಂಗದಿಂದ ಹೊರಬಂದರೆ ಮಾತ್ರ ಭಕ್ತನೊಬ್ಬ ದೇವರನ್ನು ಕಾಣಲು ಸಾಧ್ಯ . ಅಕ್ಕಮಹಾದೇವಿ ಕೂಡ ಸಂಸಾರ ಬಂಧನದಿಂದ ಹೊರ ಬಂದು ಚೆನ್ನಮಲ್ಲಿಕಾರ್ಜುನನನ್ನು ಅರಸುತ್ತಾ ಆಧ್ಯಾತ್ಮದ ಮೂರ್ತಿಯಾಗಿ ನಿಂದವಳು.

- ಶ್ರೀಮತಿ ಸುಲೋಚನಾ ಮಾಲಿಪಾಟೀಲ, ಧಾರವಾಡ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...