ಗುರುವಾರ, ಫೆಬ್ರವರಿ 19, 2026

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ್ಕಳು ಜನಿಸುತ್ತಾರೆ. ಮೊದಲನೆಯವಳು ಗಂಗೆ ಇವಳು ನೋಡಲು ತುಂಬಾ ಸುಂದರವಾಗಿ ಜನಿಸಿರುತ್ತಾರೆ, ಎರಡನೆಯವಳು ರಂಗವ್ವ ಇವಳು ತಾಯಿಯನ್ನು ಹೋಲುತ್ತಾಳೆ, ಇನ್ನು ಮೂರನೆಯವಳು ಈ ಕಥಾನಾಯಕಿ ಕುಸುಮ. ಇವಳು ಹೆಸರಿಗೆ ತಕ್ಕಂತೆ ಹೂವಿನಷ್ಟೇ ಮೃದು ಸ್ವಭಾವದವಳು, ಇನ್ನು ನಾಲ್ಕನೇಯವಳೇ ಶಂಕರಿ, ಕೊನೆಯ ಮಗಳೆಂದು ಎಲ್ಲರೂ ತುಂಬಾ ಮುದ್ದಿನಿಂದ ನೋಡಿಕೊಳ್ಳುತ್ತಿರುತ್ತಾರೆ.
ಕುಸುಮಳಿಗೆ ಹತ್ತು ವರ್ಷವಿರುವಾಗಲೇ ಅವಳ ತಂದೆ ಸಾವನಪ್ಪುತ್ತಾರೆ, ಚಿಕ್ಕ ಮಕ್ಕಳನ್ನು ಕಟ್ಟಿಕೊಂಡು ಮುಂದಿನ ಜೀವನ ಹೇಗೆ ಎಂದು ಎಲ್ಲರೂ ಚಿಂತಿಸುತ್ತಿರುವಾಗ, ಆಗ ಗಂಗೆ ತಾಯಿಯ ಬಳಿ, ಬಂದು ಅವ್ವ ನಮಗೆ ಜೀವನ ಮಾಡಲು ಆಸ್ತಿ ಏನು ಇಲ್ಲ,ಇದ್ದ ಸ್ವಲ್ಪ ಆಸ್ತಿಯನ್ನು ಅಪ್ಪ ದೊಡ್ಡಪ್ಪನಿಗೆ ಮರೀಬಿಟ್ಟಿದ್ದಾರೆ, ಮತ್ತೆ ದೊಡ್ಡಪ್ಪನಲ್ಲಿ ಸ್ವಲ್ಪ ಜಮೀನು ಕೇಳಿ ನೋಡೋಣ ಎನ್ನುತ್ತಾಳೆ. ಆಗ ರಂಗವ್ವ ಬೇಡ ಮತ್ತೆ ದೊಡ್ಡಪ್ಪ ಕೊಡುತ್ತಾರೋ ಇಲ್ಲವೋ ಎನ್ನುತ್ತಾಳೆ. ಹೇಗಾದರೂ ಆಗಲಿ ಕೇಳಿ ನೋಡೋಣ ಎಂದು ಚಿಕ್ಕ ಮಗು ಶಂಕರಿಯನ್ನು ಕರೆದುಕೊಂಡು ಐದು ಜನರು ದೊಡ್ಡಪ್ಪನ ಮನೆಗೆ ಬರುತ್ತಾರೆ. ಅವಳ ದೊಡ್ಡಪ್ಪ ತುಂಬಾ ಉದರಿ, ಇವರ ಕುಟುಂಬದಲ್ಲಿ ದುಡಿಯಲು ಯಾರು ಇಲ್ಲ ಬರೀ ಹೆಣ್ಣುಮಕ್ಕಳು ಅವರಾದರೂ ದುಡಿದು ತಿನ್ನಲಿ ಎಂದು ತನ್ನ ಮಕ್ಕಳ ವಿರೋಧ ಕಟ್ಟಿಕೊಂಡು ಅವರಿಗೆ ಒಂದು ಎಕರೆ ಜಮೀನನ್ನು ದಾನ ಪತ್ರ ಮಾಡಿಕೊಡುತ್ತಾರೆ. ನಂತರ ಮಕ್ಕಳನ್ನು ಕೂರಿಸಿಕೊಂಡು ಜಮೀನಿನಲ್ಲಿ ಏನಾದರೂ ಬೆಳೆ ಬೆಳೆದು ಬದುಕು ನಡೆಸಿರಿ ಏನಾದರೂ ಸಹಾಯ ಬೇಕಾದರೆ ಕೇಳಿ ಎಂದು ಹೇಳಿಕಳಿಸುತ್ತಾರೆ. ಹೆತ್ತ ತಾಯಿ ನಾಲ್ಕು ಜನ ಹೆಣ್ಣು ಮಕ್ಕಳನ್ನು ಕೂಡಿಸಿಕೊಂಡು ನಿಮ್ಮ ಅಪ್ಪನಿಗೆ ಎಷ್ಟು ಹೇಳಿದರೂ ಕೇಳಲಿಲ್ಲ ಗಂಡು ಮಗು ಬೇಕೆಂಬ ಹಂಬಲದಿಂದ, ನಾಲ್ಕು ಜನ ಹೆಣ್ಣುಮಕ್ಕಳನ್ನು ನನ್ನ ಕೈಗೆ ನೀಡಿ ಕಣ್ಣು  ಮುಚ್ಚಿದ್ದಾನೆ. ಈಗ ನಿಮ್ಮ ಜವಾಬ್ದಾರಿ ನನ್ನ ಹೆಗಲ ಮೇಲಿದೆ ನೀವುಗಳು ಕಷ್ಟಪಟ್ಟು ದುಡಿದು ಮುಂದೆ ಬರಬೇಕು ಎಂತಹ ಕಷ್ಟ ಕಾಲಗಳು ಬಂದರೂ ಅಡ್ಡದಾರಿ ಹಿಡಿಯಬಾರದು ಎಂದು ನಾಲ್ಕು ಜನ ಹೆಣ್ಣುಮಕ್ಕಳಿಂದ ಭಾಷೆ ಪಡೆಯುತ್ತಾಳೆ. ಭಾಷೆಯ ನೀಡಿದ ಮಕ್ಕಳು ದೊಡ್ಡಪ್ಪ ನೀಡಿದ ಜಮೀನಿನಲ್ಲಿ ದುಡಿಯಲು ಹೊರಡುತ್ತಾರೆ ಆದರೆ ಅದಕ್ಕೆ ಗೊಬ್ಬರ, ಬೀಜ,ಇದಕ್ಕೆಲ್ಲಾ ಹಣ ಬೇಕಾದಾಗ, ಮತ್ತೆ ದೊಡ್ಡಪ್ಪನಲ್ಲಿ ಸಹಾಯ ಬಿಡಲು ಮನಸ್ಸು ಒಪ್ಪುವುದಿಲ್ಲ ಮೊದಲ ಮಗಳಿಗೆ ಬೇರೆಡೆಗೆ ಕೂಲಿ ಕೆಲಸಕ್ಕಾಗಿ ಹೊರಡುತ್ತಾಳೆ ಅವಳ ಜೊತೆ ಅವಳ ತಂಗಿ ರಂಗವ್ವಕೂಡ ಹೊರಡುತ್ತಾಳೆ, ತಾಯಿಯನ್ನು, ಚಿಕ್ಕ ಮಗು ಶಂಕರಿಯನ್ನು ನೋಡಿಕೊಳ್ಳುವ ಜವಾಬ್ದಾರಿ, ಕುಸುಮಳಾ ಹೆಗಲಮೇಲೆ ಬೀಳುತ್ತದೆ. ಇದರ ಮಧ್ಯೆ ವಿದ್ಯೆ ಎಂಬುದು ನಾಲ್ಕು ಜನ ಹೆಣ್ಣು ಮಕ್ಕಳಿಗೆ ಕನಸಾಗಿಯೇ ಉಳಿಯುತ್ತದೆ,ಆದರೂ ಚಿಕ್ಕ ಮಗಳು ಶಂಕರಿ ಯನ್ನು ಕೂಲಿನಾಲಿ ಮಾಡಿಯಾದರೂ  ಓದಿಸಬೇಕೆಂದು ಈ ಮೂರು ಜನ ಅಕ್ಕಂದಿರು ಹಂಬಲ. ಈ ರೀತಿ ಕೂಲಿ ಕೆಲಸಕ್ಕೆ ಹೋದ ಜಾಗದಲ್ಲಿ ಅಲ್ಲಿ ಕೂಲಿ ಕೆಲಸಕ್ಕಾಗಿ ಬಂದಿದ್ದ ಸೋಮಣ್ಣ ಎಂಬ ಹುಡುಗ ಗಂಗೆಯ ರೂಪಕ್ಕೆಮಾರು ಹೋಗುತ್ತಾನೆ,ಅವನು ಅವರ ತಂದೆ ತಾಯಿಗೆ ವಿಷಯ ತಿಳಿಸುತ್ತಾನೆ. ಗಂಗೆಯ ಮನೆಯ ಪರಿಸ್ಥಿತಿ ತಿಳಿದ ಅವರು, ಗಂಗೆಯ ಮನೆಯವರಿಗೆ ಯಾವುದೇ ರೀತಿಯ ತೊಂದರೆಯನ್ನು ಕೊಡದೆ ಒಂದು ದೇವಸ್ಥಾನದಲ್ಲಿ ಮಗನ ಕೈಯಿಂದ ಗಂಗೆಯ ಕೊರಳಿಗೆ ತಾಳಿ ಕಟ್ಟಿಸಿ ಅವಳನ್ನು ಮನೆಯ ಸೊಸೆಯಾಗಿ ಸ್ವೀಕರಿಸುತ್ತಾರೆ. ಆದರೆ ತಂಗಿಗೆ ತಾಯಿ ಮತ್ತು ಮೂರು ಜನ ತಂಗಿಯರನ್ನು ಬಿಟ್ಟುಹೋಗುವ ಮನಸ್ಸಿಲ್ಲ ತಾಯಿಯೂ ನಮ್ಮ ಪಾಡು ನಮ್ಮದು ನೀನು ಸುಖವಾಗಿರು ಎಂದು ಹರಸಿ ಕಳಿಸುತ್ತಾಳೆ.  ಒಲ್ಲದ ಮನಸ್ಸಿನಿಂದ ಗಂಡನ ಮನೆ ಸೇರುತ್ತಾಳೆ ಗಂಗೆ ಇದರಂಗವಾಗಿ ಮದುವೆಯ ವಯಸ್ಸು ಬರುತ್ತದೆ ತಂದೆಯಂತೆ ಜವಾಬ್ದಾರಿ ಹೊತ್ತು  ನಾದಿನಿಯರನ್ನು ಕಾಪಾಡುತ್ತಿದ್ದ ಸೋಮಣ್ಣ, ಇವರೆಲ್ಲರ ಆಸೆಯಂತೆ ಚಿಕ್ಕಮಗಳು ಶಂಕರಿಯನ್ನು ಓದಿಸುತ್ತಿರುತ್ತಾನೆ. ಶಂಕರಿ 7ನೇ ತರಗತಿಯಲ್ಲಿ ಓದುತ್ತಿರುತ್ತಾರೆ ಸೋಮಣ್ಣ ತನ್ನ ಊರಿನವನೇ ಆದ ಸತೀಶ ಇವನು ಒಳ್ಳೆಯ ಹುಡುಗ, ಇವನಿಗೆ ತನ್ನ ನಾದಿನಿ ರಂಗವನ್ನು ಕೊಟ್ಟು ಮದುವೆ ಮಾಡುತ್ತಾನೆ ಸತೀಶ ಹೆಂಡತಿಯನ್ನು ಚೆನ್ನಾಗಿ ಮಾಡಿಕೊಳ್ಳುತ್ತಿರುತ್ತಾರೆ ಆದರೆ ಅವನ ಮನೆಯವರಿಗೆ ಅವರ ಬಳಿ ಇರುವ ಒಂದು ಎಕರೆ ಜಮೀನಿನ ಮೇಲೆ ಆಸೆ ಅವನ ತಂದೆ-ತಾಯಿ  ಅಣ್ಣ,ಎಲ್ಲರೂ ಸೇರಿ ಅವನ ತಲೆ ಕೆಡಿಸುತ್ತಾರೆ ಒಂದು ದಿನ  ಸತೀಶ ನಿಮ್ಮಲ್ಲಿ ಇರುವ ಒಂದು ಎಕರೆ ಜಮೀನನ್ನು ನನ್ನ ಹೆಸರಿಗೆ ಬರೆಯಿರಿ ಇರುವ ಇಬ್ಬರು ಹೆಣ್ಣು ಮಕ್ಕಳ ಜವಾಬ್ದಾರಿ ನನ್ನದು ಎಂದು ಹೇಳುತ್ತಾನೆ, ಗಂಗೆಯ ಗಂಡ ತುಂಬಾ ಒಳ್ಳೆಯವನು, ನನಗೆ ಆಸ್ತಿ ಬೇಡವೆಂದು ಹೇಳುತ್ತಾನೆ ಹಾಗಾಗಿ ಆಸ್ತಿಯನ್ನು ಸತೀಶನ ಹೆಸರಿಗೆ ಬರೆಯುತ್ತಾರೆ ಅವಳಿಗೆ ಮದುವೆಯ ವಯಸ್ಸು ಬಂದಾಗ, ಸತೀಶನ ತಲೆಯಲ್ಲಿ ನಾನು ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಬೇಕು ಎಂಬ ಆಲೋಚನೆ ಬರುತ್ತದೆ. ಆಗ ಅವನು ತನ್ನ ಪಕ್ಕದ ಊರಿನವನೇ ಆದ ಎಲ್ಲಾ ಕೆಟ್ಟ ಚಟಗಳಿಗೆ ದಾಸನಾಗಿದ್ದ ರಮೇಶ ಎಂಬ ಹುಡುಗನಿಗೆ ಕೊಟ್ಟು ಮದುವೆ ಮಾಡಲು ಯೋಚಿಸುತ್ತಾನೆ. ಈಗಾಗಲೇ ಅವನಿಗೆ ಎರಡು ಮದುವೆ ಆಗಿರುತ್ತದೆ,ಹೆಂಡತಿಯರನ್ನು ಬಿಟ್ಟು ಜೀವನ ನಡೆಸುತ್ತಿರುತ್ತಾನೆ ನೋಡಲು ತುಂಬಾ ಸುಂದರವಾಗಿರುತ್ತದೆ ಅವನ ಮುಂದೆ ಎಲ್ಲ ಕೆಟ್ಟ ಚಟಗಳು ಅವಳಿಗೆ ತಿಳಿಯುವುದಿಲ್ಲ, ಸತೀಶ ತಿಳಿಸುವುದು ಇಲ್ಲ, ಇತ್ತ ಗಂಗೆಗೆ ಒಂದು ಆಗದ ಕಾದಿರುತ್ತದೆ. ದೇವರಂತೆ ಇದ್ದ  ಗಂಡನು, ಮೂಳೆ ಕ್ಯಾನ್ಸರ್ ಬಲಿಯಾಗಿರುತ್ತಾರೆ ಅವನನ್ನು ಉಳಿಸಿಕೊಳ್ಳಲು ಗಂಗೆ ಹಗಲು-ಇರುಳು ಕಷ್ಟಪಡುತ್ತಿರುತ್ತಾರೆ. ಗಂಡನ ಕೈ ಹಿಡಿದ ಅವನ ಜೊತೆ ಹೊರಗೆ ಹೋಗಬೇಕು, ಕೈ, ಕೈ, ಹಿಡಿದು  ಹೊಲಗದ್ದೆಗಳಲ್ಲಿ ಓಡಾಡಬೇಕೆಂಬ ಹಂಬಲ, ಆದರೆ ರಮೇಶ ಇದಾವುದಕ್ಕೂ ಒಪ್ಪುವುದಿಲ್ಲ,ಒಂದು ದಿನ ತನ್ನ ಹೆಂಡತಿಯನ್ನು ತನ್ನ ಊರಿಗೆ ಕರೆತರುತ್ತಾನೆ ರಮೇಶ. ಅಲ್ಲಿ ಗಂಡನ ನಿಜರೂಪ ತಿಳಿದು ಕುಸಿದು ಬೀಳುತ್ತಾರೆ ಕುಸುಮ ಹೆಣ್ಣುಗಳನ್ನು ಮನೆಗೆ ಕರೆತರುವುದು,ಅವರಿಗೆ ಕುಸುಮ ದಾಸಿಯಂತೆ ಸೇವೆ ಮಾಡಬೇಕೆಂದು ತಿಳಿಸುತ್ತಾನೆ. ಅದಕ್ಕೆ ಅವಳು ಒಪ್ಪದಿದ್ದರೆ ಹೊಡೆದು-ಬಡಿದು ಹಿಂಸಿಸುತ್ತಾನೆ, ಇದೇ ರೀತಿ ಮಾಡಿ ತಂದೆ ಅವನಿಗಾಗಿ ನೀಡಿದ ಆಸ್ತಿಯನ್ನೆಲ್ಲ ಕಳೆಯುತ್ತಾನೆ. ಶಂಕರಿಗೆ  ಮುಂದೆ ವಿದ್ಯಾಭ್ಯಾಸ ಮುಂದುವರಿಸಲು ಆಗುವುದಿಲ್ಲ, ತಂದೆಯಂತೆ ಇದ್ದ ಭಾವ ಕಾಯಿಲೆಯಿಂದ ನರಳುತ್ತಿರುತ್ತಾರೆ. ಇವರಲ್ಲಿ ಇದ್ದ ಒಳ್ಳೆಯತನಕ್ಕೆ ಊರಿನವರು ಇವರನ್ನು ಕಾಪಾಡುತ್ತಿರುತ್ತಾರೆ. ಒಂದು ದಿನ ಶಂಕರಿ ತಾಯಿಗೆ ವಯಸ್ಸಾಗಿದೆ,ನಾನು ದುಡಿಯಲು ಆಗುವುದಿಲ್ಲ,ಇದ್ದ ಆಸ್ತಿಯನ್ನು ಭಾವ  ಕಿತ್ತುಕೊಂಡಿದ್ದಾರೆ, ಮುಂದೆ ನಮ್ಮ ಜೀವನ ಹೇಗೆ ಎಂದು ಯೋಚಿಸುತ್ತಾ ಹೊಲದಲ್ಲಿ ನಡೆದು ಬರುವಾಗ ಹಾವು ಕಡಿದು ಸಾವನ್ನಪ್ಪುತ್ತಾಳೆ. ವಿಷಯ ತಿಳಿದು ಕುಸುಮ ದುಃಖಿಸುತ್ತಾಳೆ, ಇಂತಹ ಸಮಯದಲ್ಲೂ ಕೂಡ ತಂಗಿಯ ಮುಖ ನೋಡಲು ಗಂಡ ಕುಸುಮಗಳನ್ನು ಕಳಿಸುವುದಿಲ್ಲ. ಇದನ್ನೆಲ್ಲ ಸಹಿಸಿಕೊಂಡಿದ್ದ ಕುಸುಮಳಿಗೆ ಒಂದು ದಿನ ದೊಡ್ಡ ಆಘಾತ ಕಾದಿರುತ್ತದೆ. ಆಸ್ತಿಯನ್ನೆಲ್ಲಾ ಕಳೆದು ಮುಂದೆ ಮೋಜು ಮಾಡಲು ಹಣ ಇಲ್ಲದಾದಾಗ ರಮೇಶನಿಗೆ ನೆನಪಾಗುವುದೇ ಹೆಂಡತಿ ಕುಸುಮ. ಅವಳನ್ನು ಪರಪುರುಷರ ಬಳಿ  ಕಳಿಸಲು ನಿರ್ಧರಿಸುತ್ತಾನೆ. ಇದನ್ನು ಹೇಗೆ ತಿಳಿದುಕೊಂಡ ಕುಸುಮ ಗಂಡನ ಬಂಧನದಿಂದ ತಪ್ಪಿಸಿಕೊಂಡು,ತವರು ಮನೆ ಸೇರುತ್ತಾಳೆ. ಇವಳಲ್ಲಿ ಇದ್ದ ಒಳ್ಳೆಯತನಕ್ಕೆ,ಊರಿನವರೆಲ್ಲ ಅವಳ ಗಂಡನ ಮೇಲೆ ದೂರು ನೀಡಿ,ಜೈಲಿಗೆ ಕಳಿಸುತ್ತಾರೆ. ಈ ವೇಳೆ ದೇವರಂತೆ ಇದ್ದ ದೊಡ್ಡಪ್ಪ ಸಾವಿಗೆ ಶರಣಾಗುತ್ತಾರೆ. ತಂಗಿಯು ಸಾವನ್ನಪ್ಪಿದ್ದಾಳೆ ತಂದೆಯಂತೆ ಇದ್ದ ಭಾವ ಹಾಸಿಗೆ ಹಿಡಿದಿದ್ದಾರೆ ಮುಂದಿನ ಜೀವನ ಹೇಗೆ ಎಂದು ಚಿಂತಿಸುತ್ತಿರುವಾಗ,. ಊರಿನಲ್ಲಿ ಶ್ರೀಮಂತರ ಮನೆಯ ಮಗಳು ಹೊರದೇಶದಲ್ಲಿ ಇರುತ್ತಾರೆ. ಅವರಿಗೆ ಹೊರದೇಶದಲ್ಲಿ ಒಬ್ಬರು ಸಹಾಯಕ್ಕೆ ಬೇಕಾಗಿರುತ್ತಾರೆ. ಆಗ ಕುಸುಮಾಳ ನ್ನು ಕರೆದು ನಿನ್ನ ತಾಯಿಯನ್ನು ವೃದ್ಧಾಶ್ರಮಕ್ಕೆ ಸೇರಿಸಿಬಿಡು,ಅದರ ಖರ್ಚುವೆಚ್ಚವನ್ನು ನಾನು ನೋಡಿಕೊಳ್ಳುತ್ತೇನೆ.ನೀನು ನಮ್ಮೊಂದಿಗೆ ಹೊರದೇಶಕ್ಕೆ ಬಾ ನಿನ್ನನ್ನು ಸುಖವಾಗಿ ನೋಡಿಕೊಳ್ಳುತ್ತೇನೆ, ಎಂದು ಹೇಳುತ್ತಾರೆ. ಯೋಚಿಸಿ ತಿಳಿಸುವುದಾಗಿ ಹೇಳಿ ಕುಸುಮ ಮನೆಗೆ ಬರುತ್ತಾಳೆ. ಹಾಸಿಗೆ ಹಿಡಿದು ಮಲಗಿರುವ ತಾಯಿಯನ್ನು ನೋಡುತ್ತಾಳೆ, ಗಂಡನನ್ನು ಕಳೆದುಕೊಂಡು ನಮ್ಮನ್ನು ಕಷ್ಟಪಟ್ಟು ಸಾಕಿದ ತಾಯಿಯನ್ನು ಯಾರದು ವಶಕ್ಕೆ ಒಪ್ಪಿಸಲು ಕುಸುಮಳಿಗೆ ಮನಸ್ಸಾಗುವುದಿಲ್ಲ.ಅದರಲ್ಲೂ ವೃದ್ಧಾಶ್ರಮಕ್ಕೆ ಸೇರಿಸಲು ಮನಸ್ಸು ಒಪ್ಪುವುದೇ ಇಲ್ಲ. ಮತ್ತೆ ಆ ಮನೆಯಿಂದ ಕರೆ ಬರುತ್ತದೆ ಕುಸುಮಳಿಗೆ. ಇಲ್ಲ ನಾನು ನನ್ನ ತಾಯಿಯನ್ನು ಬಿಟ್ಟು ಬರುವುದಿಲ್ಲವೆಂದು ಹೇಳಿ ಮನೆಗೆ ಬರುತ್ತಾಳೆ. ಗೋಡೆಗೆ ಒರಗಿ ಕುಳಿತು, ದೇವರೇ ಮುಂದಿನ ಜನ್ಮ ಎಂದು ಒಂದಿದ್ದರೆ ಒಳ್ಳೆಯ ಜೀವನವನ್ನು ಕರುಣಿಸು ಎಂದು ಹೇಳಿ, ಕಣ್ಣು ಮುಚ್ಚುತ್ತಾಳೆ. ಅವಳಿಗೆ ಅರಿವಿಲ್ಲದೆ ಎರಡು ಹನಿ ಕಂಬನಿ ಅವಳ ಕೆನ್ನೆಯ ಮೇಲೆ ಜಾರುತ್ತದೆ.ಹೊರದೇಶಕ್ಕೆ ಹೋಗುವ ಅವಕಾಶ ದೊರೆತ ಕೂಡಲೇ, ವೃದ್ಧ  ತಂದೆ-ತಾಯಿಯರನ್ನು ಮರೆತು, ಆಕಾಶದಲ್ಲಿ ಹಾರಿ ಹೋಗುವ ಗಂಡು ಮಕ್ಕಳು, ನಮ್ಮ ಕುಸುಮಾಳ ಮುಂದೆ ನಾಚ ಬೇಕಲ್ಲವೇ?


                                         - ಎಂ. ಆಶಾಕಿರಣ್

ಶನಿವಾರ, ನವೆಂಬರ್ 1, 2025

ನಾಳೆ ಇಂದ ಅಂಗಳ 'ಓದು-ಬರಹ' (ಕಥಾ-ಕಾವ್ಯ) ಕಮ್ಮಟ ಪ್ರಾರಂಭ.

ಅಂಗಳ ಕಮ್ಯುನಿಟಿ ಟ್ರಸ್ಟ್ ನ ವಿಚಾರ ಮಂಟಪ ಬಳಗ ಮತ್ತು ಕರ್ನಾಟಕ ರಾಜ್ಯ ಸ್ಪಂದನಸಿರಿ ವೇದಿಕೆ ಇವರ ಸಹಯೋಗದಲ್ಲಿ ಹಮ್ಮಿಕೊಂಡಿರುವ ಆರು ತಿಂಗಳ

*ಆನ್ ಲೈನ್ 'ಓದು- ಬರಹ' (ಕಥಾ-ಕವನ) ಕಮ್ಮಟ*
ದಿನಾಂಕ 03.11.2025 ರಿಂದ ಪ್ರಾರಂಭವಾಗಲಿದ್ದು, ದಿನಾಂಕ 03.11.2025 ರಂದು ಸಂಜೆ ಕಾರ್ಯಕ್ರಮದ ಉದ್ಘಾಟನೆಯನ್ನು ನಡೆಸಲಾಗುತ್ತಿದೆ. 

ಇಂದಿನ ಸ್ಪರ್ಧಾತ್ಮಕ ಆಧುನಿಕ ಯುಗದಲ್ಲಿ ಮೊಬೈಲ್ ಪೋನ್, ಆರ್ಟಿಪಿಷಿಯಲ್ ಇಂಟಲಿಜೆನ್ಸಿ ಮೊದಲಾದವುಗಳ ಪರಿಣಾಮದಿಂದಾಗಿ ಓದು ಬರವಣಿಗೆ ಯಂತಹ ಕ್ರಿಯಾಶೀಲ ಚಟುವಟಿಕೆಗಳಿಗೆ ಬೇಕಾದ ಸೂಕ್ತ ಶಿಕ್ಷಣ ಅಥವಾ ಮಾರ್ಗದರ್ಶನ ಸಿಗದೇ ಹೊಗುತ್ತಿರುವುದು ನಮಗೆಲ್ಲ ತಿಳಿದಿರುವ ವಿಚಾರವೇ. ಈ ಹಿನ್ನೆಲೆಯಲ್ಲಿ ಕವಿತೆ, ಲೇಖನ, ಕತೆ ಮುಂತಾದ ಸಾಹಿತ್ಯ ಪ್ರಕಾರಗಳನ್ನು ಕಲಿಯಲು ಆಸಕ್ತಿಯುಳ್ಳವರಿಗಾಗಿ ಆರು ತಿಂಗಳ ಅವಧಿಯ ಈ ಆನ್ ಲೈನ್ ಕಮ್ಮಟವನ್ನು ಪ್ರಾರಂಭಿಸಲಾಗುತ್ತಿದೆ. 

ಈ ಕಮ್ಮಟವು,

* ಸಾಹಿತ್ಯ ಎಂದರೇನು? ಸಾಹಿತ್ಯ ಪ್ರಕಾರಗಳು ಹಾಗೂ ಅವುಗಳ ಉಗಮ ಮತ್ತು ವಿಕಾಸ.
* ಆಯ್ದ ಸಾಹಿತ್ಯ ಪಠ್ಯಗಳ ಓದು.
* ಸಾಹಿತ್ಯ ಪಠ್ಯಗಳ ಭಾಷೆ, ಶೈಲಿ, ತಂತ್ರ, ವಿಧಾನ ಮೊದಲಾದವುಗಳ ಚರ್ಚೆ.
*  ಭಾಷಾ ಬಳಕೆ, ಶಬ್ಧಭಂಡಾರ, ಪ್ರಾಥಮಿಕವಾದ ಅಲಂಕಾರ, ವ್ಯಾಕರಣ, ಮೀಮಾಂಸೆ ಮೊದಲಾದವುಗಳ ಕಲಿಕೆ.
* ಕವಿತೆ, ಲೇಖನ, ಕತೆ ಮುಂತಾದ ಸಾಹಿತ್ಯ ಪ್ರಕಾರ ಮೊದಲಾದವುಗಳ ವಿವಿಧ ಮಾದರಿಗಳ ಕಲಿಕೆ.
* ಸಾಹಿತ್ಯ ರಚನೆ ಎಂದರೇನು?
* ಸಾಹಿತ್ಯ ಯಾಕಾಗಿ ಮೊದಲಾದ ವಿಚಾರಗಳ ಕಲಿಕೆ.
* ಸಾಹಿತ್ಯ ರಚನೆಯನ್ನು ಕುರಿತಾದ ತರಬೇತಿ.
* ಓದು ಮತ್ತು ಬರವಣಿಗೆಯಲ್ಲಿ ತಂತ್ರಜ್ಞಾನದ ಬಳಕೆ.
* ಕವಿತೆ ಅಥವಾ ಲೇಖನಗಳನ್ನು ಪ್ರಕಟಿಸುವ ಬಗ್ಗೆ, ಪುಸ್ತಕ ಪ್ರಕಟಣೆ ಇವುಗಳನ್ನು ಕುರಿತ ಮಾಹಿತಿ.
* ಪರೀಕ್ಷೆ, ಪ್ರಾತ್ಯಕ್ಷಿತೆ ಮೊದಲಾದವುಗಳನ್ನು ಪಠ್ಯಕ್ರಮವಾಗಿ ಒಳಗೊಂಡಿರುತ್ತದೆ.

ಈ ಕಮ್ಮಟಕ್ಕೆ ಸುಮಾರು 40 ಜನ ಅಭ್ಯರ್ಥಿಗಳ ನ್ನು ಆಯ್ಕೆ ಮಾಡಲಾಗಿದ್ದು, ಪ್ರತಿದಿನವೂ ಓದು-ಬರಹಕ್ಕೆ ಸಂಬಂಧಿಸಿದ ವಿವಿಧ ರೀತಿಯ ಅಭ್ಯಾಸಗಳನ್ನು ಮಾಡಿಸಲಾಗುವುದು. 

ತುಮಕೂರಿನ ಶಿಕ್ಷಕಿ ಹಾಗೂ ಸಾಹಿತಿಗಳೂ ಆದ ರಂಗಮ್ಮ ಹೊದೇಕಲ್ ಇವರು ಈ ಕಮ್ಮಟವನ್ನು ಉದ್ಘಾಟಿಸಲಿದ್ದು,  ಶ್ರೀ ಚಂದ್ರಶೇಖರ ಪಡೆಸೂರ್ ಇವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಬೇರೆ ಸಂಪನ್ಮೂಲ ವ್ಯಕ್ತಿಗಳು ತರಗತಿಗಳನ್ನು ತೆಗೆದುಕೊಳ್ಳಲಿದ್ದಾರೆ ಎಂದು ಕಮ್ಮಟದ ನಿರ್ದೇಶಕರಾದ ಧನುಷ್ ಎಚ್ ಶೇಖರ್ ಇವರು ತಿಳಿಸಿರುತ್ತಾರೆ.

ಶುಕ್ರವಾರ, ಅಕ್ಟೋಬರ್ 31, 2025

ಸುಮ್ಮನೆ ಆಗಲಿಲ್ಲ ಕರ್ನಾಟಕದ ಏಕೀಕರಣ-ಜಿ.ಎಸ್.ಕಲಾವತಿಮಧುಸೂದನ, ಹಾಸನ.

ನಾವು ನವೆಂಬರ್ ಮಾಸದಲ್ಲಿ ಮಾತ್ರ ನಮ್ಮ ನಾಡ ಹಬ್ಬವನ್ನು ಗೌರಿಗಣೇಶ, ದೀಪಾವಳಿ, ಯುಗಾದಿ ಹಬ್ಬಗಳಂತೆ ಆಚರಿಸಿ ಉಳಿದಂತೆ ಸ್ಥಬ್ಧರಾಗಿಬಿಡುತ್ತೇವೆ. ಆದರೇ ಆ ಹಬ್ಬದ ಹಿನ್ನೆಲೆ, ಅದಕ್ಕಾಗಿ ನಡೆಸಿದ ಹೋರಾಟ, ಹರಿಸಿದ ನೆತ್ತರು, ಅನುಭವಿಸಿದ ಶಿಕ್ಷೆ, ಸಜೆ, ತ್ಯಾಗ, ಬಲಿದಾನ, ಒಗ್ಗಟ್ಟು, ಪಟ್ಟು ಇವುಗಳನ್ನು ಕೇಳಿದಾಗ ಮೈ ರೋಮಾಂಚನಗೊಳ್ಳುತ್ತದೆ. ಅಂತಹ ಮಹಾತ್ಮರಿಗೆ ಜನ್ಮವಿತ್ತ ಕನ್ನಡಾಂಬೆಯ ಬಗ್ಗೆಯೇ ಹೆಮ್ಮೆ ಎನಿಸುವುದಲ್ಲವೇ..?! ಆ ಮಣ್ಣಿನ ಗಾಳಿಯೇ ನಮ್ಮೆಲ್ಲರ ಚೇತನವಾಗಿರುವುದೇ ನಮ್ಮ ಪುಣ್ಯವೆನಿಸುವುದು. ಅಂತಹಾ ಹೆಗ್ಗಳಿಕೆಯ ಹೋರಾಟಗಳ ಆಳ, ಒಳಹೊರಗುಗಳನ್ನು ಸ್ಮರಿಸುವ ಮೂಲಕ ಅರ್ಥಪೂರ್ಣ ಕ್ಷಣಗಳನ್ನು ಆಗಾಗ ಮೆಲುಕು ಹಾಕುತ್ತಾ ಆಚರಿಸುವುದು, ಸಂಭ್ರಮಿಸುವುದು ಸಾರ್ಥಕವಾದೀತು. 
  ಹೀಗೆ ನಮ್ಮ ನಾಡಿನ ಹಿರಿಮೆಗರಿಮೆಗಳನ್ನು, ಹಿನ್ನೆಲೆಯನ್ನು, ತ್ಯಾಗ ಬಲಿದಾನಗಳಿಂದ ಪಡೆದ ಇತಿಹಾಸದ ವೈಶಿಷ್ಟ್ಯವನ್ನು ಮಕ್ಕಳೊಂದಿಗೆ ಹಂಚಿಕೊಳ್ಳುವ ಮೂಲಕ ನಾಡು ನುಡಿಯ ಬಗೆಗೆ ಭಕ್ತಿ ಪ್ರೀತಿಯನ್ನು ಬೆಳೆಸುವುದು ಪ್ರತಿಯೊಬ್ಬ ಪೋಷಕರ ಶಿಕ್ಷಕರ ಹೊಣೆಗಾರಿಕೆಯಲ್ಲವೇ..? ಏಕೆ ಈ ವಿಷಯದ ಪ್ರಸ್ತಾಪವೆಂದರೇ, ರಾಜ್ಯೋತ್ಸವ ಕುರಿತು ಕವನ ರಚನೆಗೆ ತಿಳಿಸಿದರೇ ಈ ಸಂಭ್ರಮದ ಹಿಂದಿರುವ ಹೋರಾಟದ ಕುರಿತು ಒಂದೆಡೆಯೂ ಒಂದು ಪದವೂ ಪ್ರಸ್ತಾಪ ಇರದಿರುವುದು ಹತಾಶೆಯೊಂದಿಗೆ ವಿಷಾದವೆನಿಸಿ, ಈ ಲೇಖನ ಬರೆಯಲು ಕಾರಣವಾಯಿತು. ಯಾವುದೇ ಸಂಭ್ರಮದ ಹಿಂದಿನ ಸಂಕಟ ಹೋರಾಟಗಳ ಸ್ಮರಣೆ ನಮ್ಮಲ್ಲಿರುವುದು ಮಾನವೀಯತೆ, ಮತ್ತು ಮಾನವನಲ್ಲಿರಬೇಕಾದ ಬಹು ಮುಖ್ಯವಾದ ಉತ್ತಮ ಗುಣ ಕೃತಜ್ಞತೆ. ಉಪಕಾರ ಸ್ಮರಣೆ. ಅದಿಲ್ಲದ ಸಂಭ್ರಮ ಅದರ ಹಿಂದಿರುವ ಶ್ರಮಕ್ಕೆ ತೋರುವ ಅಗೌರವವಲ್ಲವೇ..?ಏನಾದರಾಗು ಮೊದಲು ಮಾನವನಾಗು” ಎಂಬುದು ಬೋಧನೆಗೆ ಬರಹಕ್ಕಷ್ಟೇ ಸೀಮಿತವಾಗದೇ ಕಾರ್ಯಗತವಾದಾಗ ಆ ವಾಕ್ಯ ಸಾರ್ಥಖ್ಯವಲ್ಲವೇ.?. 
 ಮೂಕಪ್ರಾಣಿಯಾದರೂ ಶ್ವಾನಕ್ಕೆ ಒಂದು ದಿನ ಒಂದು ತುತ್ತು ಅನ್ನ ಹಾಕಿದರೇ ಧನ್ಯತೆಯಿಂದ ಅವರ ಮನೆಯ ಬಾಗಿಲನ್ನು ಕಾಯುವ ಮೂಲಕವಾದರೂ   ಕೃತಜ್ಞತೆಯಿಂದ ತನ್ನ ಸೇವೆಯನ್ನು ಸಲ್ಲಿಸುತ್ತದೆ. ಇಂತಹಾ ವಿಷಯದಲ್ಲಿ ಮಾನವ ರಾದ ನಾವು ಕೃತಜ್ಞತೆಯನ್ನು ಮರೆತಾಗ ಮಾನವ ಕುಲಕ್ಕೆ ಅಪಮಾನವಲ್ಲವೇ..? ಹಾಗಾಗಿ ಇಂತಹಾ ವಿಶಿಷ್ಟವಾದ ನಮ್ಮ ಕನ್ನಡ ನಾಡಿನ ಹೆಮ್ಮೆಯ ಅವಿಸ್ಮರಣೀ ಯ ದಿನವನ್ನು ನಾಡಿನಾದ್ಯಂತ ಅತ್ಯಂತ ಸಂಭ್ರಮದಿಂದ ಆಚರಿಸಲ್ಪಡುವ ಕನ್ನಡ ರಾಜ್ಯೋತ್ಸವದ ಸಂದರ್ಭವನ್ನು, ಅದರ ಹಿನ್ನೆಲೆಯನ್ನು, ಇತಿಹಾಸದ ಪುಟಗಳನ್ನು ಹೆಮ್ಮೆಯಿಂದೊಮ್ಮೆ ತೆರೆದು ನೋಡುವ ಮೂಲಕ  ಪ್ರಾಥಃಸ್ಮರಣೀಯರ ಸ್ಮರಣೆಯೊಂದಿಗೆ ಸಂಭ್ರಮದ
ಸಮರ್ಪಣೆಯಲ್ಲಿ ಕೃತಜ್ಞತೆ ಸಲ್ಲಿಸೋಣ..

 ಶಾತವಾಹನರು ಕನ್ನಡದ ಮೊದಲ ಅರಸು ಮನೆತನದವರು. ನಂತರ ಹಲವು ವರುಷಗಳ ಕಾಲ ತಮಿಳುನಾಡಿನ ಪಲ್ಲವರ ವಶವಾಗಿತ್ತು. ಪಲ್ಲವರ ಅಡಿಯಾಳಾ ಗಿ ಕಷ್ಟದಲ್ಲಿ ಸಿಲುಕಿದ್ದ ಕನ್ನಡಿಗರನ್ನು ಕದಂಬರ ಮನೆತನದ ಅರಸ ಮಯೂರ ವರ್ಮ ಬಿಡುಗಡೆಗೊಳಿಸಿದ್ದಲ್ಲದೇ ಕನ್ನಡಿಗರ ನೆಲೆಯನ್ನು ಭದ್ರಗೊಳಿಸಿದ.
 ಆ ಬಳಿಕ ಬಂದ ಚಾಲುಕ್ಯರು, ಗಂಗರು, ಹೊಯ್ಸಳರು, ರಾಷ್ಟ್ರಕೂಟರು, ಹಾಗೂ ವಿಜಯನಗರದ ಅರಸರ ಕಾಲದ ಆಳ್ವಿಕೆಯು ಸ್ವರ್ಣಾಕ್ಷರದಲ್ಲಿ ಬರೆದಿಡುವಂತಹಾ ಬಂಗಾರದ ಯುಗವೆನಿಸಿತ್ತು. ನಾಡು ನುಡಿ ಸಂಸ್ಕೃತಿ, ವೈಭವ ಉತ್ತುಂಗಕ್ಕೇರಿದ ಕಾಲವೇ ಅದಾಗಿತ್ತು. ವಿಜಯನಗರದ ಸಾಮ್ರಾಜ್ಯದ ಅರಸರ ಆಳ್ವಿಕೆಯು ಕೊನೆಗೊಂಡ ನಂತರ ಕನ್ನಡಿಗರು ಬೇರೆಬೇರೆ ಅರಸರುಗಳ ಪಾಲಾಗಿ ಹರಿದು ಹಂಚಿ ಹೋದರು. 

ಬ್ರಿಟೀಷರ ಆಳ್ವಕೆಯಲ್ಲಿ ಕನ್ನಡಿರು ಸುಮಾರು ೨೦ ಬೇರೆಬೇರೆ ಆಳ್ವ್ವಿಕೆಯಡಿಯಲ್ಲಿ ಹಂಚಿಹೋದರು. ಬಾಂಬೆ ಪ್ರೆಡೆನ್ಸಿಯ ಆಡಳಿತ ಭಾಷೆ ಮರಾಠಿ. ನಿಜಾಮರದ್ದು ಉರ್ದು. ಹಾಗೂ ತೆಲುಗು, ಮದರಾಸಿನವರದ್ದು ತಮಿಳು. ಹೀಗಿರುವಾಗ ಕನ್ನಡಿಗರಿಗೆ ಎಲ್ಲಿಯ ಸ್ಥಾನ..? ಈಗಿನ ಸ್ಥಿತಿಯೂ ಅದಕ್ಕಿಂತ ಭಿನ್ನವಾಗಿಲ್ಲವೆಂಬುದು ವಿಷಾದಕರವಾದ ಸಂಗತಿ. ಹೀಗೆ
ಕನ್ನಡ ನುಡಿಯೊಂದಿಗೇ ಕನ್ನಡಿಗನೂ ಅನಾಥವಾದಂತಿತ್ತು. ಹಾಗೆಯೇ ಸಂಪೂರ್ಣವಾಗಿ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವ ಹಂತ ತಲುಪಿದಾಗ, ಕನ್ನಡಾಂಬೆಯ ಕಟ್ಟಾಳುಗಳು ತಮ್ಮದೆಲ್ಲವನ್ನೂ ತೊರೆದು ನಿಸ್ವಾರ್ಥದಿಂದ ನಿಷ್ಠೆಯಿಂದ ನಾಡು-ನುಡಿಗಾಗಿಯೇ ತನುಮನಧನಗಳನ್ನು ಧಾರೆ ಎರೆಯಲು ಸಿದ್ಧರಾದರು. 
  ಈ ಹಂತದಲ್ಲಿಯೇ ತಲೆ ಎತ್ತಿ ನಿಂತಿದ್ದು “ಕರ್ನಾಟಕ ವಿಧ್ಯಾವರ್ಧಕ ಸಂಘ”. ೧೮೯೦ರಲ್ಲಿ ದಾರವಾಡದಲ್ಲಿ ಆರ್.ಹೆಚ್. ದೇಶಪಾಂಡೆಯವರು ಮೊಟ್ಟ ಮೊದಲಿಗೆ ಹುಟ್ಟು ಹಾಕಿದ ಸಂಘ ಎಂಬ ಹೆಗ್ಗಳಿಕೆ ಈ ಸಂಘದ್ದು. ಇದರ ಕವಲುಗಳಾಗಿ ಹಲವಾರು ಕನ್ನಡ ಸಂಘಗಳು ಹುಟ್ಟಿಕೊಂಡವು. ಕನ್ನಡ ನಾಡುನುಡಿ ಉಳಿಯ ಬೇಕೆಂದರೇ ನಮ್ಮಲ್ಲಿ ಒಗ್ಗಟಿನ ಬಲ ಹೆಚ್ಚಿಸಬೇಕೆಂಬುದನ್ನು ಅರಿತ ಅಂದಿನ ನಮ್ಮ ಹಿರಿಯರು ಕರ್ನಾಟಕ ಏಕೀಕರಣದ ಬೀಜವನ್ನು ಬಿತ್ತಲು ಪ್ರಾರಂಭಿಸಿದರು. ಈ ಚಳುವಳಿಯ ಹೋರಾಟಕ್ಕೆ ಬಲವಾದ ಇಂಬು ಕೊಟ್ಟವರು ದಿಟ್ಟ ಹೋರಾಟಗಾರರಾದ ಆಲೂರು ವೆಂಕಟರಾಯರು. ಇವರು ಕರುನಾಡ ಮೂಲೆ ಮೂಲೆಗಳನ್ನು ಸಂಚರಿಸಿ ಸಭೆಗಳನ್ನು ನಡೆಸಿ ಕರುನಾಡ ಗತವೈಭವವನ್ನು ಸ್ಮರಿಸುತ್ತ, ಇಂದು ನಾಡು ನುಡಿಗೊದಗಿರುವ ದುಸ್ಥಿತಿಯನು ಮನದಟ್ಟಾಗುವಂತೆ ವಿವರಿಸುವ ಮೂಲಕ ಕನ್ನಡಿಗರನ್ನು ಬಡಿದೆಬ್ಬಿಸಿದರು. ಏಕೀಕರಣದ ಕಿಚ್ಚನ್ನು ಹೊತ್ತಿಸಿದರು.

  ೧೯೧೨ರಲ್ಲಿ “ಕರ್ನಾಟಕ ಗತ ವೈಭವ”ಎಂಬ ಕೃತಿಯನ್ನು ರಚಿಸಿದರು. ಈ ಹೊತ್ತಗೆಯು ಕನ್ನಡದ ಹಿರಿಯರಲ್ಲಿ ಕಿರಿಯರಲ್ಲಿ ಕಿಚ್ಚೆಬ್ಬಿಸಿ ಹುರಿದುಂಬಿಸಿತು. ಇದರ ಸಂಕೇತವಾಗಿ ಈ ಹೋರಾಟದ ತಂಡವೇ ಆಲೂರು ವೆಂಕಟರಾಯರ ಸಹಕಾರದೊಂದಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆಗೆ ಕಾರಣವಾಯಿತು. ಆದರೇ ಇಂದು ಅದರ ಧ್ಯೇಯೋದ್ದೇಶವೇ ಬದಲಾಗಿರುವುದು ವಿಷಾದಕರ ಸಂಗತಿ. ಹೀಗೇ ಆಲೂರರೊಂದಿಗೆ ಗೊರೂರು ರಾಮಸ್ವಾಮಿ ಅಯ್ಯಂಗಾರ್, ಕೌಜಲಗಿ, ಶ್ರೀನಿವಾಸ ರಾವ್ ಮಂಗಳವಾಡೆ, ಅ.ನ.ಕೃ, ಕೆಂಗಲ್ ಹನುಮಂತರಾಯರು, ಎಸ್ ನಿಜಲಿಂಗಪ್ಪ, ಟಿ. ಮರಿಯಪ್ಪ, ಸಾಹುಕಾರ್ ಚೆನ್ನಯ್ಯ, ವೀರಣ್ಣಗೌಡ, ಹೆಚ್.ಸಿ.ದಾಸಪ್ಪ ಇನ್ನು ಹಲವಾರು ಕಟ್ಟಾಳುಗಳ ದಂಡೇ ಟೊಂಕ ಕಟ್ಟಿ ನಿಂತಿತ್ತು. ಇದರೊಂದಿಗೆ ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು, ಕರ್ನಾಟಕ ಸಂಘ, ಶಿವಮೊಗ್ಗ, ಕರ್ನಾಟಕ ಸಮಿತಿ, ಕಾಸರಗೋಡು, ಈ ಮೂರು ಮುಖ್ಯವಾದ ಸಂಘಗಳ ಮೂಲಕ ಕನ್ನಡಿಗರು ಒಂದಾಗಬೇಕೆಂಬ ಬೀಜವನ್ನು ಬಿತ್ತಿದರೆ, ಕುವೆಂಪು, ಬೇಂದ್ರೆ, ಕಾರಂತರು, ಗೋಕಾಕರು, ಜೋಷಿ, ಬೆಟಗೇರಿ ಕೃಷ್ಣ ಶರ್ಮರು, ಗೋವಿಂದ ಪೈ, ಕಯ್ಯಾರ ಕಿಯಣ್ಣರೈ ಇನ್ನು ಮುಂತಾದವರು ತಮ್ಮ ಹರಿತವಾದ ಬರಹಗಳಿಂದ ಏಕೀಕರಣದ ಕಿಚ್ಚಿಗೆ ತುಪ್ಪ ಸುರಿದರು. ಭಾಷೆಯ ಬತ್ತಿಗೆ ತೈಲವಾದರು. 

  ಇವರೊಂದಿಗೆ ಹಲವಾರು ಮಹಿಳಾಮಣಿಗಳೂ ಸೊಡರಾದರು. ಸ್ವಾತಂತ್ರ್ಯ ಹೋರಾಟದಲ್ಲಿ ವೀರಾವೇಷದಿಂದ ಹೋರಾಡಿದ ಕಿತ್ತೂರು ಚೆನ್ನಮ್ಮ, ಜಾನ್ಸಿರಾಣಿ ಲಕ್ಷ್ಮಿ ಬಾಯಿ, ಅಬ್ಬಕ್ಕರಂತೆ ಕರ್ನಾಟಕದ ಏಕೀಕರಣದಲ್ಲೂ ಜಯದೇವಿ ತಾಯಿ ಲಿಗಾಡೆ, ಬಳ್ಳಾರಿ ಸಿದ್ದಮ್ಮ, ಲಿಂಗವ್ವ, ಗುಲ್ಬರ್ಗ ವಿಮಲ ಬಾಯಿ, ಮೇಲ್ಕೋಟೆ ಮಲ್ಲವ್ವ, ಸರಸ್ವತಿ, ಸುಹಾಸಿನಿ ಬಂಡಾರಿ, ಕಮಲಾಶೆಟ್ಟಿ, ಸಾವಿತ್ರಿ ದೇವಿ ಹಳ್ಳಿಕೇರಿ, ಭಾಗೀರತಿ ಪಾಟೀಲ, ಶಾಂತಾದೇವಿ ಜತ್ತಿ, ಶಕುಂತಲ ಕುರ್ತು ಕೋಟಿ, ಇನ್ನು ಹಲವಾರು ಮಹಿಳೆಯರು ಹೋರಡಿದರು. 
  ಈ ನಿಟ್ಟಿನ ಹೋರಾಟದಲ್ಲಿ ಏಕೀಕರಣದ ಕಾವು ರಾಜಕೀಯ ಮಟ್ಟದಲ್ಲೂ ಚರ್ಚೆಗೆ ಕಾರಣವಾಗಿ ೧೯೨೦ ರಲ್ಲಿ ದಾರವಾಡದಲ್ಲಿ ನಡೆದ ಕರ್ನಾಟಕ ರಾಜ್ಯ ರಾಜಕೀಯ ಸಭೆಯಲ್ಲಿ ಏಕೀಕರಣದ ಬೇಡಿಕೆಯನ್ನು ಯಾವುದೇ ತಕರಾರಿಲ್ಲದೆ ಜಾರಿಮಾಡಲಾಯಿತು. ಇದರಿಂದ ಉತ್ಸಾಹಿತರಾದ ಕನ್ನಡಿಗರು ನಾಗಪುರದಲ್ಲಿ ನಡೆದ ಕಾಂಗ್ರೆಸ್ ಸಭೆಯಲ್ಲಿ ಪಾಲ್ಗೊಂಡು ಕರ್ನಾಟಕ ಪ್ರದೇಶ ಕಾಂಗ್ರೇಸ್ಸನ್ನು ಹುಟ್ಟು ಹಾಕುವ ನಿರ್ಧಾರವನ್ನು ಕೈಗೊಳ್ಳಲಾಯಿತು. 
ಈ ಸಮಿತಿಯು ೧೯೨೪ ರಲ್ಲಿ ಬೆಳಗಾವಿಯಲ್ಲಿ ಸಮ್ಮೇಳನ ನಡೆಸಿ ಏಕೀಕರಣದ ನಿಲುವನ್ನು ಮತ್ತಷ್ಟು ಗಟ್ಟಿಗೊಳಿಸಿತು. ಈ ಸಮ್ಮೇಳನದಲ್ಲಿ ಸೇರಿದ ಸಮುದಾಯದ ಬೇರನ್ನು ಹುಯಿಲಗೋಳ ನಾರಾಯಣರಾಯರು ಬರೆದ “ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು” ಕವಿತೆ, ಮತ್ತಷ್ಟು ಭದ್ರಗೊಳಿಸಿತು. ಈ ಹೋರಾಟದ ಬಿಸಿ ಗಡಿನಾಡ ಕೋಟೆ ದೆಹಲಿಗೂ ಮುಟ್ಟಿತು. ೧೯೨೮ ರಲ್ಲಿ ನೆಹರುರವರು ಒಂದು ತಂಡವನ್ನು ಮಾಡಿ ಬೇಡಿಕೆಯ ಪರಿಶೀಲನೆಗೆ ಕಳುಹಿದರು. ಅದನ್ನು ಪರಿಶೀಲಿಸಿದ ಸಮಿತಿಯು ಏಕೀಕರಣಕ್ಕೆ ಸಮ್ಮತಿಯನ್ನು ಸೂಚಿಸಿತಾದರೂ ಸುಮಾರು ೯ ವರುಷಗಳು ಕಳೆದರು ರಾಜಕೀಯವಾಗಿ ಕಾರ್ಯಗತಗೊಳಿಸದಿರಲು ಹಲವಾರು ಕಾರಣಗಳಿದ್ದವು. ೧೯೩೭ ರ ಚುನಾವಣೆಯಲ್ಲಿ ಏಕೀಕರಣದ ಬೇಡಿಕೆಯನ್ನು ಈಡೇರಿಸುವುದಾಗಿ ಭರವಸೆಯನ್ನಿತ್ತು ಗೆಲ್ಲುವ ಹಂಬಲ ಮಾತ್ರ ಕಾಂಗ್ರೆಸ್ಸಿಗಿತ್ತು. ಹಾಗಾಗಿ ಕನ್ನಡಿಗರು ಒಂದಾಗುವ ಆಸೆ ಕನಸಾಗೇ ಉಳಿದಿತ್ತು. 

ಆದರೆ ಹೋರಾಟಗಾರರ ಕಾವೇನೂ ಕುಗ್ಗಿರಲಿಲ್ಲ. ಇದು ರಾಜಕೀಯ ನಾಯಕರ ಅರಿವಿಗೆ ಬಂದ ಕಾರಣ ೧೯೪೬ ರಲ್ಲಿ ಮುಂಬಯಿಯಲ್ಲಿ ನಡೆದ ಏಕೀಕರಣದ ಸಭೆಯಲ್ಲಿ ಸರದಾರ್ ವಲ್ಲಬಾಯಿ ಪಟೇಲರು, “ಇನ್ನೇನು ಕೆಲವೇ ದಿನಗಳಲ್ಲಿ ಬ್ರಿಟೀಷರಿಂದ ಬಿಡುಗಡೆ ಸಿಗಲಿದೆ, ಆಗ ಕರ್ನಾಟಕ ಏಕೀಕರಣ ಸ್ವಾತಂತ್ರ್ಯ ಭಾರತದ ಮೊದಲ ಕೆಲಸ ವಾಗಲಿದೆ” ಎಂದು ಹೇಳಿಕೆ ಕೊಟ್ಟರು. ೧೯೪೭ ರಲ್ಲಿ ಬ್ರಿಟೀಷರಿಂದ ಭಾರತ ಬಿಡುಗಡೆ ಹೊಂದಿತು. ಹಾಗೆಯೇ ಕರುನಾಡೂ ಒಂದಾಗಲಿದೆ ಎಂದು ಕಾದದ್ದೇ ಬಂತು. ನಿಜಾಮರ ತೆಕ್ಕೆಯಲ್ಲಿದ್ದ ಕೆಲವು ಭಾಗಗಳನ್ನು ಅವರು ಬಿಟ್ಟುಕೊಡಲು ಸಿದ್ಧರಿರಲಿಲ್ಲ, ಹಲವು ಸುತ್ತಿನ ಮಾತುಕತೆಯ ನಂತರ ೧೯೪೮ ರಲ್ಲಿ ನಿಜಾಮ ಅರಸರ ಆಳ್ವಿಕೆಯಿಂದ ಬಿಡುಗಡೆ ಸಿಕ್ಕಿತು. ಹೈದರಾಬಾದ್ ನಿಜಾಮರ ಅಡಿಯಲ್ಲಿದ್ದ ಭಾಗಗಳೂ ಒಕ್ಕೂಟದಡಿ ಬರಲು ಸಿದ್ಧವಾದವು. ನಂತರ ರಾಜ್ಯದ ರಚನೆಯ ಕೆಲಸವಾದ ಕರ್ನಾಟಕದ ಏಕೀಕರಣದ ಬೇಡಿಕೆಯನ್ನು ಪರಿಶೀಲಿಸಲು “ದಾರ್” ಕಮಿಟಿಯನ್ನು ರಚಿಸಿತು.  ಆದರೆ ಈ ಕಮಿಟಿಯೂ ನುಡಿಯ ಆಧಾರದ ಮೇಲೆ ರಾಜ್ಯಗಳನ್ನಾಗಿ ಮಾಡುವುದನ್ನು ವಿರೋಧಿಸಿತು. ಅದು ಕನ್ನಡಿಗರ ಹೋರಾಟದ ಬಿಸಿಯನ್ನು ಮತ್ತಷ್ಟು ಹೆಚ್ಚಿಸಿತು. ಆ ಬಿಸಿಯನ್ನು ತಣಿಸುವ ಸಲುವಾಗಿ ಒಕ್ಕೂಟ ಸರ್ಕಾರವು ನೆಹರು, ವಲ್ಲಬಾಯಿ ಪಟೇಲ್. ಪಟ್ಟಾಭಿ ಸೀತಾರಾಮ ರನ್ನು ಒಳಗೊಂಡಂತೆ “ಜೆವಿಪಿ” ಕಮಿಟಿಯನ್ನು ಮಾಡಿ ಪರಿಶೀಲಿಸಿತು. ಅಂದೂ ಸಹ ಕಾರ್ಯಗತವಾಗಲಿಲ್ಲಾ. 
ಹೀಗೆ ಆಗಾಗ ಕಮಿಟಿಗಳಾಗಿ ದೊಂಬರಾಟವಾಗುತ್ತಿತ್ತು. ಇದು ಹೋರಾಟ ಗಾರರನ್ನು ಮತ್ತಷ್ಟು ಕೆರಳಿಸಿತು. ಅದಕ್ಕಾಗಿ “ಕರ್ನಾಟಕ ಏಕೀಕರಣ ಪಕ್ಷ” ವನ್ನು ಹುಟ್ಟು ಹಾಕಿದರು. ಇಷ್ಟಾದರೂ ಕಾಗ್ರೇಸ್ ಏಕೀಕರಣಕ್ಕೆ ಮನಸ್ಸು ಮಾಡದ ಕಾರಣ ಕಾಂಗ್ರೆಸ್ಸಿನ ಹಿರಿಯರಾದ ಎ.ಜೆ.ದೊಡ್ಡಮೇಟಿಯವರು ರಾಜಿನಾಮೆ ಕೊಟ್ಟರು. ಅವರಿಂದ ತೆರವುಗೊಂಡ ಸ್ಥಾನಕ್ಕಾಗಿ ಮರುಚುನಾವಣೆಯಲ್ಲಿ ಕಾಂಗ್ರೇಸ್ ಹೀನಾಯ ವಾಗಿ ಸೋಲನ್ನು ಕಂಡಿತು. ಕರ್ನಾಟಕ ಏಕೀಕರಣ ಪಕ್ಷ ಹೆಚ್ಚು ಮತಗಳಿಂದ ಗೆಲುವನ್ನು ಸಾಧಿಸಿ ರಾಜಕೀಯವಾಗಿಯೂ ನೆಲೆಗೊಂಡಿತು. ಇಂತಹಾ ಪೆಟ್ಟುಗಳನ್ನು ಪದೇಪದೇ ಕೊಡುತ್ತಲೇ ೫೦ ವರುಷಗಳೇ ದಾಟಿದವು. ಇನ್ನು ಸುಮ್ಮನೆ ಕುಳಿತರಾಗದೆಂದು ಉಪವಾಸದ ಚಳುವಳಿಯನ್ನು ಪ್ರಾರಂಭಿಸಿದರು. ನಾಡಿನೆಲ್ಲೆಡೆ ಇದೇ ಹಾದಿಯನ್ನು ಅನುಸರಿಸಿದರು. ಆದರೆ ಹುಬ್ಬಳ್ಳಿಯಲ್ಲಿ “ಶಂಕರ ಗೌಡ ಪಾಟೀಲರು” ನಡೆಸಿದ ಏಕೀಕರಣದ ಉಪವಾಸ ೨೩ ದಿನಗಳನ್ನೂ ಸುದೀರ್ಘವಾಗಿ ದಾಟಿತ್ತು. ಇದನ್ನೂ ಸರ್ಕಾರ ಲೆಕ್ಕಿಸದಿದ್ದಾಗ, ಇದೇ ಹೊತ್ತಿನಲ್ಲಿ ಹುಬ್ಬಳ್ಳಿಯಲ್ಲಿ ೧೯೫೩ ಏಪ್ರಿಲ್ ೧೯ ರಂದು ನಡೆದ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯೊಂದಕ್ಕೆ ಮುತ್ತಿಗೆ ಹಾಕಿ ಬೇಡಿಕೆ ಈಡೇರುವವರೆಗೆ ಹೋರಾಟ ನಿಲ್ಲದೆಂಬ ಸಂದೇಶವನ್ನು ಸರ್ಕಾರಕ್ಕೆ ನೀಡಿತು. ಅಂದು ಮುತ್ತಿಗೆ ಹಾಕಿದ ೨೫೦೦೦ಕ್ಕೂ ಅಧಿಕ ಸಂಖ್ಯೆಯಲ್ಲಿದ್ದ ಕನ್ನಡಿಗರನ್ನು ಕಂಡು ರಾಜಕಾರಣಿಗಳು ಬೆಚ್ಚಿಬಿದ್ದರು. ರಾಜಕೀಯ ನಾಯಕರಾದ ನಿಜಲಿಂಗಪ್ಪನವರನ್ನೊಳಗೊಂಡಂತೆ ಕೆಲವರಿಗೆ ಬಳೆಯನ್ನು ತೊಡಿಸಿ ಚಪ್ಪಲಿ ಸೇವೆಯನ್ನು ಮಾಡಿದರು. ಗುದ್ಲೆಪ್ಪ ಹಳ್ಳಿಕೇರಿಯವರ ಜೀಪಿಗೆ ಬೆಂಕಿ ಇಟ್ಟು ನಾಯಕರಿಗೆ ರಾಜೀನಾಮೆ ಕೊಡಲು ಒತ್ತಾಯಿಸಿದರು. ಯಾರ ಬೆದರಿಕೆಗೂ ಜಗ್ಗದ ಹೋರಾಟಗಾರರನ್ನು ಪೋಲೀಸರು ಮನಬಂದಂತೆ ಲಾಟಿಚಾರ್ಜ ಮಾಡ ತೊಡಗಿದರು. ಮೈಮೇಲೆ ಬಾಸುಂಡೆಗಳು ಬಂದರೂ, ನೆತ್ತರು ಹರಿದರೂ ಜಗ್ಗದೇ ಎದೆಯೊಡ್ಡಿ ನಿಂತರು ಅಂದು ವೀರ ಕೆಚ್ಚೆದೆಯ ಕನ್ನಡಿಗರು. ಮನಬಂದಂತೆ ಥಳಿಸಿ ಥಳಿಸಿ ಕೈನೊಂದ ಪೋಲೀಸರು ೧೪೪ ಸೆಕ್ಷನ್ ಜಾರಿಗೊಳಿಸಿದರು. ಹಲವು ಹಿರಿಯ ಹೋರಾಟಗಾರರನ್ನು ಸೆರೆ ಹಿಡಿದರು. ಹೋರಾಟಗಾರರ ಪರವಾಗಿ ತಮ್ಮ ಶುಲ್ಕವನ್ನು ಪಡೆಯದೇ ವಾದ ಮಾಡಿ ಎಸ್.ಆರ್. ಬೊಮ್ಮಾಯಿಯವರು ತಮ್ಮ ಜಾಣ್ಮೆಯಿಂದ ಅವರನ್ನೆಲ್ಲಾ ಬಿಡಿಸಿದರು. ಆದರೆ ಎಡೆಬಿಡದೆ ಸಭೆಗಳು ಉಪವಾಸಗಳು, ಗಲಭೆಗಳು ಆಗಿಂದಾಗ್ಗೆ ನಡೆಯುತ್ತಲೇ ಇದ್ದವು. ಈ ಬಿಸಿ ಒಕ್ಕೂಟದ ಸರ್ಕಾರವನ್ನು ಸುಡಲಾರಂಭಿಸಿತು. ರಾಜ್ಯಗಳ ಮರು ವಿಂಗಡನೆಯನ್ನು ಪರಿಶೀಲಿಸಲು ಮತ್ತೊಮ್ಮೆ “ಪಜಲ್‌ಆಲಿ” ಕಮಿಟಿಯನ್ನು ಮಾಡಿ ನುಡಿಯ ಆಧಾರದ ಮೇಲೆ ರಾಜ್ಯಗಳನ್ನು ಮಾಡಲು ಸಲಹೆ ನೀಡಿತು. ಸುಮಾರು ೭೫ ವರ್ಷಗಳಿಗೂ ಮೀರಿದ ಹೋರಾಟದ ಪರಿಣಾಮ ಕಡೆಗೂ ೧೯೫೬ ನವೆಂಬರ್ ೧ ರಂದು ಕರ್ನಾಟಕದ ಏಕೀಕರಣಗೊಳಿಸುವಲ್ಲಿ ನಿಷ್ಠ ಕನ್ನಡಿಗರ ಹೋರಾಟ ಸಫಲವಾಯಿತು. ಕರುನಾಡಾಯಿತು.  
  ಹೀಗೇ ಕರ್ನಾಟಕದ ಏಕೀಕರಣಕ್ಕಾಗಿ ಹಗಲಿರುಳು ಹೋರಾಡಿದ ಇಂತಹಾ ಹೆಮ್ಮೆಯ ಮಹನೀಯರ ಸ್ಮರಣೆಯೊಂದಿಗೆ ಕನ್ನಡ ರಾಜ್ಯೋತ್ಸವದ ಆಚರಣೆಯ ಅರ್ಪಣೆಯಾಗುವಂತೆ ಅರ್ಥಪೂರ್ಣವಾಗಿ ಆಚರಿಸದಾಗ ಆಚರಣೆ ಸಾರ್ಥಕವಾಗುತ್ತದೆ. ಅಂತಹಾ ಮಹನೀಯರ ಅರ್ಪಣೆಗಾಗಿ ಹೊಮ್ಮಿದ ನನ್ನ ಕವಿತೆ..

“ಕರುನಾಡ ಹುಟ್ಟಿನ ಹಿಂದಣ ಹೆಜ್ಜೆಗಳನ್ನು ಗಟ್ಟಿಯಾಗಿ ಹಿಡಿದಿಟ್ಟಬೇಕಿದೆ..                         ಅದು... ಬಿಟ್ಟಿ ಬಂದದ್ದಲ್ಲಾ...!                                                             
ನಮ್ಮ ಹಿರಿಯರು ಉಸುರುಗಟ್ಟಿದ                           ದಿಟ್ಟ ಹೋರಾಟದ ಹಿರಿಮೆಯಿದೆ. ಪೆಟ್ಟು ತಿಂದ ನೆತ್ತರ ಹೊಳೆಯಿದೆ..,             ನಿದ್ದೆಗೆಟ್ಟು ಕೆಚ್ಚು ತುಂಬಿದ ದಿಟ್ಟ ನಯನಗಳಿವೆ.  
ಹೋರಾಟವನೇ ಉಂಡುಟ್ಟ ಹೊಟ್ಟೆಗಳಿವೆ.               ಹಣ್ಣಾಗಿ ಮಣ್ಣಾದ ಜೀವಗಳ ಹಸಿವು ನರಳಕೆಗಳಿವೆ..!                             “ಇದಂ ನ ಮಮ” ಎಂದು ತಮ್ಮ ಬಾಳನೇ                                      ಬಟಾಬಯಲಿಗಿಟ್ಟವರ ನಿಟ್ಟುಸಿರಿನಲಿ              ಕಟ್ಟಿ ಬೆಳೆಸಿ ಉಳಿಸಿದವರ ತ್ಯಾಗದ ಉಡುಗೊರೆಯ ನಾಡ ನುಡಿಯ                                                          ನಿರ್ಲಕ್ಷಿಸಿದೊಡೆ ನಮ್ಮ ಉಳಿವೆಂತು..?                                                        ನಾಡ ಉಳಿವೆಂತು.. ನುಡಿಯ ಉಳಿವೆಂತು..!!? ನಿಷ್ಠೆಯಲಿ ಉಲಿಯುತಿರಲಿ ಉಸಿರುಸಿರು ನಲುಮೆಯಲಿ ಎಲ್ಲೆಡೆ ಕನ್ನಡದ ಒಲುಮೆ..
ಸಿರಿಗನ್ನಡಂಗೆಲ್ಗೆ ಸಿರಿಗನ್ನಡಂ ಬಾಳ್ಗೆ..

- ಜಿ.ಎಸ್.ಕಲಾವತಿಮಧುಸೂದನ, ಹಾಸನ.
  

ಭಾನುವಾರ, ಅಕ್ಟೋಬರ್ 26, 2025

ಗಜೇಂದ್ರ ಮೋಕ್ಷ (ಪದ್ಯ ಕಥನ) - ಎಂ ಆಶಾ ಕಿರಣ್.

ಗೌಳ ದೇಶದ ಅರಸ  ಇಂದ್ರದ್ಯುಮ್ನನು,
 ಸಂಸಾರ ಬಂಧನವ ತೊರೆದನು 
 ದೊರೆಯ ಪಟ್ಟವೇ ನನಗೆ ಬೇಡವೆಂದನು 
 ದಿನವೂ ಹರಿನಾಮ ಜಪವೇ ಸಾಕೆಂದನು.

 ಸುಂದರ ತಪ್ಪಲಿನಲ್ಲಿ ಕುಳಿತನು 
 ಹರಿನಾಮ ಸ್ಮರಣೆಯಲ್ಲಿ ತಲ್ಲೀನನಾದನು 
 ತನ್ನ ಶಿಷ್ಯರೊಂದಿಗೆ  ಬಂದನಲ್ಲಿಗೆ  ಅಗಸ್ತ್ಯ ಮುನಿ ವರ್ಯನು 
 ನಾ ಬಂದರೂ  ನನ್ನ ಸತ್ಕರಿಸಲಿಲ್ಲವೆಂದನು.

 ದೊರೆಗೆ ಸಿಟ್ಟಿನಿಂದ ಶಪಿಸಿದನು 
 ಮಂದ ಹೆಜ್ಜೆಗಳನಿಡುವ ಗಜ ರೂಪ ನಾಗೆಂದನು 
 ಸಿಟ್ಟೇಕೆ ಮುನಿವರ್ಯ ನಾ ಗಮನಿಸಲಿಲ್ಲ ನಿಮ್ಮ ಆಗಮನವನ್ನು 
 ಶಾಪವನು ಹಿಂಪಡೆಯಿರಿ ಮನ್ನಿಸಿ ನನ್ನ ತಪ್ಪನ್ನು.

 ಕೊಟ್ಟ ಶಾಪವ ಹಿಂಪಡೆಯೆನು  ನಾನು
 ಶಾಪ ವಿಮೋಚನೆಯ ಮಾರ್ಗವ ತಿಳಿಸಿ ಕರುಣಿಸಿ ನನ್ನನು 
 ಹಲವು ವರ್ಷಗಳು ಗಜರಾಜನಾಗಿರು ನೀನು 
 ಅನುಭವಿಸ ಬೇಕಾಗುವುದು ನೀನೊಮ್ಮೆ ನೋವನ್ನು.

 ಜಪಿಸುವೆ ನೀ ನಂದು ಹಿಂದಿನ ಜನ್ಮದ ಹರಿ ನಾಮವನ್ನು 
 ಬಂದು ನಿನಗೆ ತಾಕಿಸಲು ನೀಲ ಮೇಘನು ಸುದರ್ಶನವನ್ನು 
 ಶ್ರೀ ಹರಿಯು ನೀಡುವನಂದು ನಿನಗೆ ಮುಕ್ತಿಯನ್ನು 
 ಎಂದು ದೊರೆಗೆ ಪೇಳಿ ಹೊರಟನು 
ಮುನಿವರ್ಯನು.

 ನೀಲಾಕಾಶದಲ್ಲಿ ಮುಳುಗುತ್ತಿರಲು ಆ ಭಾಸ್ಕರನ್ನು 
 ಸುತ್ತಲೂ ಆವರಿಸಿ ನಿಶೆ ಕತ್ತಲಾಯಿತು ಕಾನನ
 ನೋಡು ನೋಡುತ ದೊರೆಯಾದನು ಗಜರಾಜನು 
 ಕರಿಯಾಗಿ ಜನಿಸಿ ಸಂತಾನವ ಪಡೆದನು.

 ಆಡಿ ನಲಿದು ಅವರೊಂದಿಗೆ  ಸಂತೋಷದಿಂದ ಇದ್ದನು 
 ಕಂಡನು ಎಂದೂ ಕಾಣದ ಬರಗಾಲವನ್ನು 
 ಬಾ ಯಾರಿದರೆ ನೀರಿಲ್ಲ ಹಸಿವಾದರೆ ಆಹಾರವಿಲ್ಲ  ಬಳಲಿದನು ಗಜರಾಜನು 
 ತನ್ನ ಜೊತೆ ಕೂಡಿಕೊಂಡು ಹೆಂಡತಿ ಮಕ್ಕಳನ್ನು.

 ಬೆಟ್ಟ ಗುಡ್ಡಗಳ ಹತ್ತಿ ಇಳಿದನು 
 ಮರಗಳ ಮುರಿದು ತುಳಿದು ತುಂಡರಿಸಿದನು 
 ಆಗ ಕಂಡನು ಸುಂದರ ಸರೋವರವನ್ನು 
 ಮಕರದ ರೂಪದಲ್ಲಿ ಸರೋವರದಲ್ಲಿದ್ದನು.

 ಶಾಪಗ್ರಸ್ತ ಹುಹು ಗಂಧರ್ವನು 
 ಮಹರ್ಷಿ ದೇವಲರು ಇತ್ತರವನಿಗೆ ಶಾಪವನ್ನು 
 ಮಹರ್ಷಿಗೆ ತೋರಿದನವನು ಅನುಚಿತ ವರ್ತನೆಯನ್ನು 
 ಅದರ ಪಾಪದ ಫಲವಾಗಿ ಪಡೆದನು ಮಕರ ಜನ್ಮವನ್ನು.

 ಸಂತಾನ ದೊಂದಿಗೆ ಸೇರಿ ಕರಿ ರಾಜ ಕಲಕಿದನು 
 ಗಂಧರ್ವ ಕಿನ್ನರರು ಜಲ ಕ್ರೀಡೆಯಾಡುವ ಸರೋವರವನ್ನು 
 ಇದ ಕಂಡು ಸಿಟ್ಟಿಗೆದ್ದನ್ನು ಮಕರನ್ನು 
  ಹಿಡಿಯಿತು ಬಲವಾಗಿ ಕುಂಜರದ ಕಾಲನ್ನು.

 ಸತಿ ಸುತರೆಲ್ಲ ಸೇರಿ ಎಳೆದರೂ ಗಜ ರಾಜನನ್ನು 
 ಆಗದೆಂದು ದುಃಖದಲಿ ದೂರದಲ್ಲಿ ನಿಂತರು ನೋಡುತ್ತಾ ಕುಂಜರವನ್ನು 
 ನನ್ನ ಪಾಪದಲ್ಲಿ ಪಾಲೇಕೆ ದೂರದಲ್ಲಿರಿ ನೀವು ಎಂದನು 
 ಮತ್ತೊಮ್ಮೆ ಎಳೆದನು  ಬಲದಿಂದ ತನ್ನ ಕಾಲನ್ನು.

 ಕೋಪದಲ್ಲಿ ಕಚ್ಚುತಲಿದ್ದನು ಮಕರ ರೂಪದ ಗಂಧರ್ವನು 
 ತುಂಬಿತು ಕೊಳದ ನೀರಲ್ಲಿ ನೆತ್ತರು ನಾಚುವಂತೆ ನೇಸರನು 
 ಗಜರಾಜನು ಹಿಂದಿನ ಜನ್ಮದಂತೆ ಶ್ರೀಹರಿಯ ಕಂಡನು 
 ಹತ್ತು ಅವತಾರಗಳ ಎತ್ತಿ ಕಾಪಾಡಿದಂತೆ ಎಲ್ಲರನ್ನು.

 ಕಾಪಾಡು ತಂದೆ ಶ್ರೀಹರಿ ನೀ ಬಂದು ನನ್ನನ್ನು 
 ಎಂದು ಶ್ರೀಹರಿಯ ಕೂಗಿ ಕರೆದನು ಕುಂಜರನ್ನು 
 ಓಡಿ ಬಂದನು ಗಜರಾಜ ನಿದ್ದಲ್ಲಿಗೆ ಮಾಧವನು 
 ಬಿಟ್ಟು ಕ್ಷಿರಾಬ್ದಿಯಲ್ಲೇ ಲಕ್ಷ್ಮಿಯನು.


 ಹೊಡೆದನು ಮಕರದ ದಂತಕ್ಕೆ ತನ್ನ ಚಕ್ರವನ್ನು 
 ಗಂಧರ್ವನಾಗಿ ನಿಂತನು ಮಕರನು
 ಶ್ರೀ ಹರಿಯು ವೈಕುಂಠಕ್ಕೆ ತೆರಳಿದನು 
 ನೃಪನಿಗೆ ಹುಹುವಿಗೆ ಕೊಟ್ಟು ಮುಕ್ತಿಯನ್ನು.


 - ಎಂ ಆಶಾ ಕಿರಣ್.
 ಶಿಕ್ಷಕಿ ಹಾಗೂಸಾಹಿತಿ ಬೇಲೂರು 
 ಹಾಸನ ಜಿಲ್ಲೆ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...