ಮಂಗಳವಾರ, ಜುಲೈ 20, 2021

ರಾಜಸ್ಥಾನದ ರಣಕಪೂರ್ ಜೈನ ಮಂದಿರ ಮತ್ತು ಕುಂಬಲ್ ಗಡ ಕೋಟೆ (ಪ್ರವಾಸದನುಭವ ) - ಶ್ರೀಮತಿ ಸುಮಂಗಲಾ ಕೃಷ್ಣ ಕೊಪ್ಪರದ, ಇಲಕಲ್ಲ.

ರಾಜಸ್ಥಾನದ ರಣಕಪೂರ್ ಜೈನ ಮಂದಿರ ಮತ್ತು ಕುಂಬಲ್ ಗಡ   ಕೋಟೆ (ಪ್ರವಾಸದನುಭವ ) - ಶ್ರೀಮತಿ ಸುಮಂಗಲಾ ಕೃಷ್ಣ ಕೊಪ್ಪರದ, ಇಲಕಲ್ಲ.

ಉತ್ತರ ಭಾರತದ ಪ್ರೇಕ್ಷಣೀಯ ಸ್ಥಳಗಳಲ್ಲಿ ರಾಜಸ್ಥಾನದಲ್ಲಿ ಬರುವ ಹಲವಾರು ಪ್ರೇಕ್ಷಣೀಯ ಸ್ಥಳಗಳು ಪ್ರಸಿದ್ಧವಾದವುಗಳು. ರಾಜಸ್ಥಾನದ ಉದಯಪುರದ ಸುತ್ತಮುತ್ತ ಹಲವಾರು ಪ್ರಮುಖ ಪ್ರೇಕ್ಷಣೀಯ ಸ್ಥಳಗಳಿವೆ. ಅವುಗಳಲ್ಲಿ ಪ್ರಮುಖವಾಗಿ ನಾವು ನೋಡಲು ಬಯಸಿದಂತಹ ಪ್ರಸಿದ್ಧ ಸ್ಥಳಗಳೆಂದರೆ ರಣಕಪುರದ ಜೈನ ಮಂದಿರ ದೇವಾಲಯ,
ಹಾಗೆಯೇ ವಿಶ್ವದಲ್ಲಿಯೇ ಎರಡನೇ ಅತಿ ಉದ್ದದ ಗೋಡೆ ಎಂದು ಖ್ಯಾತಿಯಾದ ಕುಂಬಲ್ಗಡ ಕೋಟೆ. 
ಕಳೆದ 2ವರ್ಷದ ಹಿಂದೆ ಅಂದರೆ  ಡಿಸೆಂಬರ್ 20 2019ರಲ್ಲಿ  ಕುಟುಂಬ ಪರಿವಾರದೊಂದಿಗೆ, 'ಮೈಸೂರು -ಉದಯಪುರ್ ಹಮ್ ಸಫರ್ ಎಕ್ಸ್ ಪ್ರೆಸ್ ಟ್ರೇನ್ 'ಗೆ ಬೆಂಗಳೂರಿನಿಂದ ಮಧ್ಯಾಹ್ನ 12 ಗಂಟೆಗೆ ಹೊರಟ ಟ್ರೇನ್'  2ದಿನದ ಪ್ರವಾಸ, ಮಾರನೆಯ ದಿನ ಬೆಳಗಿನ ಜಾವ 5ಗಂಟೆಗೆ ಉದಯ ಪುರವನ್ನು ತಲುಪಿದೆವು.ಅಲ್ಲಿ 'ಉದಯ್ ಮೀಡಿಯನ್'ಎನ್ನುವಹೋಟೆಲ್ನಲ್ಲೇ ತಂಗಿದೆವು.ರಾಜಸ್ಥಾನ ಎಂದ ಕೂಡಲೇ ಮರುಭೂಮಿ, ಆನೆಗಳು, ಒಂಟೆಗಳು ,ಅರಮನೆಗಳು, ಕೋಟೆಗಳು ಇತ್ಯಾದಿ ನೆನಪಿಗೆ ಬರುತ್ತವೆ .ಅಲ್ಲದೆ ಉದಯಪುರ ದಿಂದ ಸುಮಾರು ನೂರ ಇಪ್ಪತ್ತು ಕಿಲೋ ಮೀಟರ್ ದೂರದಲ್ಲಿರುವ ,ಅರಾವಳಿ ಬೆಟ್ಟಗಳ ಸಾಲಿನಲ್ಲಿ ನಿರ್ಮಿಸಿರುವ ಜೈನರ ಪ್ರಮುಖ ಯಾತ್ರಾ ಸ್ಥಳಗಳಲ್ಲಿ ರಣಕಪ್ಪೂರ ಜೈನ ಮಂದಿರವು ಸಹ ಒಂದು.

ದಟ್ಟವಾದ ಕಾಡಿನಲ್ಲಿ ಹೋಗಬೇಕಾಗಿದ್ದರಿಂದ ಉದಯ್ಪುರದಿಂದ ಒಂದು ಕ್ಯಾಬ್ ಬುಕ್ ಮಾಡಿಕೊಂಡು ಹೋದೆವು. ಈ ಮಂದಿರವನ್ನು  ಜೈನರ ಪ್ರಮುಖ 24 ತೀರ್ಥಂಕರರಲ್ಲಿ ಒಬ್ಬರಾದ ಆದಿನಾಥ  ತೀರ್ಥಂಕರರಿಗಾಗಿ ನಿರ್ಮಿಸಲಾಗಿದೆ ಎಂದು ತಿಳಿಯಿತು .ತಿಳಿಬಣ್ಣದ ಬಿಳಿ ಅಮೃತ ಶಿಲೆಯಿಂದ ನಿರ್ಮಾಣಗೊಂಡಂತಹ ಈ ವಿಶಾಲ ಜೈನ ಮಂದಿರವನ್ನು ನೋಡಲು ಎರಡು ಕಣ್ಣುಗಳು ಸಾಲದೆಂದರೂ ತಪ್ಪಿಲ್ಲ .ಏಕೆಂದರೆ ಭವ್ಯವಾದ ವಾಸ್ತುಶಿಲ್ಪ ರಚನೆಯೇ ಹಾಗಿದೆ .ಅಲ್ಲಿರುವ ಗೈಡ್ಸ್ ಗಳು  ಹೇಳುವ ಪ್ರಕಾರ, ಮೇವಾರದ ರಜಪೂತರ ರಾಜ ರಾಣಾಕುಂಭನು  ಇದನ್ನು ನಿರ್ಮಿಸಿದನೆಂದು ತಿಳಿಯಿತು . ಈ ಮುಖ್ಯ ದೇವಾಲಯ ಇನ್ನಿತರ ಜೈನ  ತೀರ್ಥಂಕರರ ದೇವಾಲಯಗಳನ್ನು ಸುತ್ತಲೂ ಹೊಂದಿದೆ .ಜೈನ ಮಂದಿರದ ಅಡಿಪಾಯ 48 ಸಾವಿರ ಚದರ ಅಡಿ ವಿಸ್ತೀರ್ಣವಿದೆ. ಮತ್ತು 80 ಗೋಪುರಗಳು ,29 ಹಜಾರಗಳು ,1444 ಸ್ತಂಭ ಗಳನ್ನು ಒಳಗೊಂಡ ವಿಶಾಲವಾದ ಅದ್ಭುತ ಮಂದಿರವಾಗಿದೆ .ಈ ಮಂದಿರದಲ್ಲಿರುವ ಸ್ತಂಭಗಳ ವಿಶೇಷತೆಯೆಂದರೆ  ಪ್ರತಿಕಂಬದ ಶಿಲ್ಪಕಲೆಯ ಕೆತ್ತನೆಯು ಒಂದರಂತೆ ಇನ್ನೊಂದಿಲ್ಲ. ಆದ್ದರಿಂದ ಇಲ್ಲಿರುವ ಕಂಬಗಳ ಶಿಲ್ಪಕಲಾ ಕೆತ್ತನೆಯನ್ನು  "ಸೌಂದರ್ಯದ ಗಣಿ" ಎಂದು ಕರೆಯಲಾಗಿದೆ. ಒಬ್ಬ ರಜಪೂತ ದೊರೆ ಜೈನ ಮಂದಿರದ ನಿರ್ಮಾಣಕ್ಕೆ ಶ್ರಮಿಸಿದ್ದನ್ನು ಗಮನಿಸಿದರೆ, ಆಗಿನ ಅವಧಿಯಲ್ಲಿ ಅನ್ಯ ಧರ್ಮಗಳನ್ನು ಗೌರವಿಸುವಂತಹ ಮನೋಭಾವನೆಯನು ತಿಳಿಸುತ್ತದೆ. ಆದಿನಾಥ ತೀರ್ಥಂಕರ ಮಂದಿರಕ್ಕೆ  ಅಭಿಮುಖವಾಗಿ ಪಾರ್ಶ್ವನಾಥ ನೇಮಿನಾಥ ಮಂದಿರಗಳು  ಇವೆ. ಕರ್ನಾಟಕದ ವಿಶ್ವ ಪರಂಪರೆಯ ತಾಣಕ್ಕೆ ಸೇರಿರುವ ಬೇಲೂರು ಹಳೇಬೀಡಿನ ದೇವಾಲಯಗಳ ಶಿಲ್ಪಗಳ ಕೆತ್ತನೆಯನ್ನು ಮತ್ತೆಮತ್ತೆ ನೆನಪಿಸುವಂತಿದೆ. ಸುಮಾರು ಹೊತ್ತು ಆ ಮಂದಿರದ ಸುತ್ತಲೂ ನಾವು ನೋಡುತ್ತಾ ಹೋದಂತೆಲ್ಲಾ ಅಲ್ಲಿಯ ಶಿಲ್ಪ ವೈಭವ ಅದ್ಭುತ ಎನಿಸಿತು. ಹಾಗೆಯೇ ಆ ಮಂದಿರದ ಆವರಣದಲ್ಲಿ ಸ್ವಲ್ಪ ಹೊತ್ತು ಕುಳಿತು ಧ್ಯಾನಾಸಕ್ತರಾಗಿ ಅಲ್ಲಿಂದ ನಿರ್ಗಮಿಸಿದೆವು. ನನ್ನ ಜೀವನದಲ್ಲಿ ಇಂತಹ ಮಂದಿರ ನೋಡುವಂತಹ ಅವಕಾಶ ಒದಗಿಸಿಕೊಟ್ಟ ನನ್ನ ಪತಿಗೆ ಧನ್ಯವಾದ ಹೇಳುತ್ತಾ. ಪ್ರವಾಸದ ಸವಿ ನೆನಪಿಗಾಗಿ ಫೋಟೋಗಳನ್ನು ತೆಗೆಸಿಕೊಂಡು ತಮ್ಮ ಪ್ರಯಾಣವನ್ನು ಕುಂಬಲ್ ಘಡ್  ಕೋಟೆಯತ್ತ ಬೆಳೆಸಿದೆವು.
     ಕುಂಬಲಗಡ ಕೋಟೆ  ರಾಜಸ್ಥಾನದ ರಾಜಸಮಂದ  ಜಿಲ್ಲೆಯಲ್ಲಿ ಬರುವ ಒಂದು ಅದ್ಭುತ ಕೋಟೆ.  2013 ರಲ್ಲಿ ಯುನೆಸ್ಕೋ, ವಿಶ್ವ ಪರಂಪರೆಯ ತಾಣವನ್ನಾಗಿ ಈ ಕೋಟೆಯನ್ನು ಆಯ್ಕೆ ಮಾಡಿದೆ.ಏಕೆಂದರೆ ಚೀನಾದ ಮಹಾಗೋಡೆಯನ್ನು ಹೊರತುಪಡಿಸಿದರೆ ವಿಶ್ವದಲ್ಲಿಯೇ ಎರಡನೇ ಅತಿ ಉದ್ದದ ಗೋಡೆ ಎಂಬ ಖ್ಯಾತಿಗೆ ಇದು  ಪಾತ್ರವಾಗಿದೆ.ಅರಾವಳಿ ಬೆಟ್ಟಗಳ ಸಾಲಿನಲ್ಲಿ ಬರುವಂತಹ ಈ ಕೋಟೆಯನ್ನು ಹದಿನೈದನೇ ಶತಮಾನದಲ್ಲಿ ಮೇವಾರ ಪ್ರಾಂತ್ಯವನ್ನು ಆಳ್ವಿಕೆ ಮಾಡಿದ ರಜಪೂತ ರಾಜ ವಂಶದ ಸಿಸೋಡಿಯ ಕುಲದ ರಾಜನಾದ ರಾಣಾ ಕುಂಭ ಇದನ್ನು ಕಟ್ಟಿಸಿದ್ದರಿಂದ ಇದಕ್ಕೆ ಕುಂಬಲ್ ಗಡ್ ಎಂದು ಹೆಸರು ಬಂದಿದೆಯಂದು ಗೈಡ್ಸ್ ಗಳು ಅಲ್ಲಿಯ ಇತಿಹಾಸ ತಿಳಿಸಿದರು .ಈಗಿರುವ ವಾಸ್ತವ ಕೋಟೆಯು 36 ಕಿಲೋಮೀಟರ್ ಉದ್ದ , 23ಮೀಟರ್ ಅಗಲ, 15 ಅಡಿ ದಪ್ಪವಿದ್ದು ,7ಎತ್ತರವಾದ ದ್ವಾರಗಳನ್ನು ಹೊಂದಿರುವ ಮಾಹಿತಿ ತಿಳಿಯಿತು. 

ಮೇವಾರದ ಆಡಳಿತಗಾರರಿಗೆ ಆಶ್ರಯ ತಾಣವಾಗಿತ್ತು. ಅರಾವಳಿ ಪರ್ವತ ಶ್ರೇಣಿಯ ನಡುವಿನ ಪ್ರದೇಶ ಇದಾಗಿದೆ. ಸಮುದ್ರ ಮಟ್ಟದಿಂದ 1100 ಮೀಟರ್ ಎತ್ತರ ನಿರ್ಮಿಸಲಾಗಿದೆ. ಕೋಟೆಯ ಒಳಗೆ      ಹಲವಾರು  ದೇವಾಲಯಗಳಿವೆ. ಅದರಲ್ಲಿ ಜೈನ ಮತ್ತು ಹಿಂದೂ ದೇವಾಲಯಗಳನ್ನು ನೋಡಬಹುದು. ಬೆಟ್ಟದ ಮೇಲ್ಭಾಗದಲ್ಲಿ ಮಹಾರಾಜ ರಾಣ ಕುಂಭನ ಅರಮನೆ ನೋಡಬಹುದು. ಈ ಕೋಟೆಯ ಮತ್ತೊಂದು ವಿಶೇಷವೆಂದರೆ ರಜಪೂತರ ಪ್ರಸಿದ್ಧ ಅರಸ ಮಹಾ ರಾಣಾಪ್ರತಾಪನ ಜನ್ಮಸ್ಥಳವೂ ಇದೆ. ನಾವು ಅಲ್ಲಿಗೆ ತಲುಪಿದಾಗ ಸರಿ ಸುಮಾರು 5ಗಂಟೆಯ ಸಮಯ. ಏರು ಪ್ರದೇಶವಾಗಿದ್ದರಿಂದ ಎಚ್ಚರಿಕೆಯ ಪ್ರಯಾಣ ಅತಿಅಗತ್ಯ. ಪರಿವಾರದವರಲ್ಲ ಆ ಕೋಟೆಯನ್ನು ಹತ್ತುವ ಹುಮ್ಮಸ್ಸಿನಿಂದ ಹೊರಟೆವು. ಆದರೆ ಮಾರ್ಗ ಮಧ್ಯದಲ್ಲಿ ನನ್ನ ಪತಿ ಕೃಷ್ಣ  ಆಯಾಸವಾಗಿ ಕುಳಿತಿದ್ದರಿಂದ,  ಕೋಟೆಯ ಮೇಲ್ಭಾಗದವರೆಗೂ, ನಾನು ನನ್ನ ಅಕ್ಕನ ಮಗಳಾದ ವಾಣಿ ಮತ್ತು ಅವಳ ಪತಿ ನಾಗೇಂದ್ರ, ಅವರ ಮುದ್ದು ಕುವರನಾದ ನಿಶಾಂತ್ ಉತ್ಸಾಹದಿಂದಲೇ ಹೋದೆವು ಸುತ್ತಲೂ ಕಣ್ಣಾಯಿಸಿದಷ್ಟೂ ಹಚ್ಚ ಹಸಿರಿನ ಸೊಬಗು. ಪರಕೀಯರ ದಾಳಿಯಿಂದ ರಕ್ಷಣೆ ಪಡೆದುಕೊಳ್ಳುವುದಕ್ಕೋಸ್ಕರವಾಗಿ ನಿರ್ಮಿಸಲಾದಂತಹ ಈ ಅದ್ಭುತ ಕೋಟೆಯನ್ನು ನೋಡಲೇ ಬೇಕು. ಇತಿಹಾಸ ಪಾಠ ಬೋಧನೆಯನ್ನು ಮೌಕಿಕವಾಗಿ ಹೇಳುವುದಕ್ಕಿಂತ ಆ ಪ್ರೇಕ್ಷಣೀಯ ಸ್ಥಳಗಳಿಗೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಿ ತೋರಿಸುವುದು ಸೂಕ್ತ, ಎನ್ನುವುದಕ್ಕಾಗಿಯೇ ಪ್ರತಿವರ್ಷ ಶೈಕ್ಷಣಿಕ ಪ್ರವಾಸವನ್ನು ಶಾಲಾ ಕಾಲೇಜುಗಳಲ್ಲಿ ಹಮ್ಮಿಕೊಳ್ಳುವುದು  ಎಷ್ಟೊಂದು ಔಚಿತ್ಯಪೂರ್ಣವಾಗಿದೆ ಯಲ್ಲವೇ? 
      ಈ ಕೋಟೆಯನ್ನು ನಿರ್ಮಿಸುವ ಪೂರ್ವದಲ್ಲಿ ನಡೆದ ಒಂದು ದಂತಕಥೆಯನ್ನು ಕೇಳಿದೆವು. ರಜಪೂತ ದೊರೆ ರಾಣಾ ಕುಂಭ ಇಷ್ಟೊಂದು ಎತ್ತರವಾದ ಬೆಟ್ಟದ ಮೇಲೆ ಕೋಟೆ ಯನ್ನು ನಿರ್ಮಿಸುವ ಪ್ರಯತ್ನದಲ್ಲಿ ತೊಡಗಿದಾಗ ಸಾಕಷ್ಟು ತೊಂದರೆಗಳು ಎದುರಾದವು .ಆಗ ತನ್ನ ಧರ್ಮ ಗುರುಗಳನ್ನು ಕೇಳಿದಾಗ ಈ ಪ್ರದೇಶದಲ್ಲಿ ಒಂದು ನರ ಬಲಿಯಾಗಬೇಕಾಗಿದೆ. ಸ್ವಇಚ್ಛೆಯಿಂದ ಯಾವ ವ್ಯಕ್ತಿ ಈ ಒಳ್ಳೆಯ ಕಾರ್ಯಕ್ಕೆ ಆಹುತಿಯಾಗುತ್ತಾನೆಂದು ಮುಂದೆ ಬರುತ್ತಾನೋ ಅಂತಹ ವ್ಯಕ್ತಿಯ ನರಬಲಿಯ ಆದ ನಂತರ ಅದೇ ಸ್ಥಳದಲ್ಲಿ ಒಂದು ದೇವಾಲಯ ನಿರ್ಮಾಣ ಮಾಡಿ ನಂತರ  ಕೋಟೆಯ ನಿರ್ಮಾಣ ಕಾರ್ಯ ಮುಂದುವರೆಯಬೇಕು ಎಂದು ಧರ್ಮಗುರುಗಳು ಹೇಳಿದಾಗ, ರಾಣಾಕುಂಭನು ಸರ್ವ ರೀತಿಯಿಂದ ಪ್ರಯತ್ನಿಸಿದರೂ ಯಾರೂ ಸ್ವಇಚ್ಛೆಯಿಂದ ಬಲಿಯಾಗಲು ಮುಂದೆ ಬರಲಿಲ್ಲ .ಕೊನೆಗೆ ಒಬ್ಬ ಯಾತ್ರಿಕ ತಾನು ನರಬಲಿಯ ಆಗಲು ಸಿದ್ಧ ಎಂದು ಮುಂದೆ ಬಂದು ನರಬಲಿಯ ಆಗಲೂ ಒಪ್ಪುತ್ತಾನೆ .ಅನಂತರ ತಿಳಿಯುತ್ತದೆ ಆ ವ್ಯಕ್ತಿ ಬೇರಾರು ಅಲ್ಲ ಆ ಧರ್ಮಗುರುವೇ ಆಗಿದ್ದ ಎಂಬುದು .ಹೀಗೆ ನರಬಲಿಯ ನಂತರ ಕೋಟೆಯ ಕಟ್ಟಡ ನಿರ್ಮಾಣ ಕಾರ್ಯವು ಯಶಸ್ವಿಯಾಗಿ ಆಯಿತು ಎಂಬುದು ಸ್ಥಳೀಯರಿಂದ ಮೂಡಿಬಂದ ದಂತಕತೆ. ಕಥೆ ಕೇಳುವ ವೇಳೆಗೆ ಸಾಯಂಕಾಲವಾಗಿತ್ತು ಅಲ್ಲಿಯೇ ಇದ್ದಂತಹ ಒಂಟೆಯ ಸವಾರಿಯನು ಮಾಡುತ್ತಿದ್ದ ಪ್ರವಾಸಿಗರನ್ನು ನೋಡಿ ನಮಗೂ ಒಂಟೆ ಸವಾರಿ ಮಾಡಬೇಕೆನಿಸಿತು .ಒಂಟೆ ಸವಾರಿಯ ಆನಂದವನ್ನು ಸವಿದೆವು.ಅಲ್ಲಿಂದ ಮುಂದಕ್ಕೆ ಉದಯ್ಪುರದಿಂದ 3ಕಿಲೋ ಮೀಟರ್ ದೂರದಲ್ಲಿರುವ ಶಿಲ್ಪಗ್ರಾಮ ಅಥವಾ ಕುಶಲಕರ್ಮಿಗಳ ಗ್ರಾಮಕ್ಕೆ ಬಂದೆವು. ರಾಜಸ್ಥಾನ ,ಗುಜರಾತ್, ಮಹಾರಾಷ್ಟ್ರ, ಗೋವಾದ ಗ್ರಾಮೀಣ ಜನರ ಸೊಗಡು ಅಲ್ಲೆ ಕಂಡುಬರುತ್ತದೆ .ಅವರೆಲ್ಲರೂ ಕರಕುಶಲ ಕೈಗಾರಿಕೆಯಿಂದ ತಯಾರಿಸಿದ ವಸ್ತುಗಳ ಮಾರಾಟ ಕೇಂದ್ರವದು. ಜೊತೆಗೆ ಎಲ್ಲಾ ರಾಜ್ಯಗಳ ಜಾನಪದ ನೃತ್ಯಗಳನ್ನು ಸಹ ನೋಡಿ ಆನಂದ ಪಟ್ಟೆವು.ಅಲ್ಲಿಂದ ಉದಯಪುರದಿಂದ 3ಕಿಲೋ ಮೀಟರ್ ದೂರದಲ್ಲಿರುವ ಮಾನಸ ಪುರಂ  ದೆವಾಲಯದ ಕರಣಿಕಾ ಮಾತಾ ದೇವಿಯ ದರ್ಶನ ಪಡೆಯುವ ಮನಸ್ಸಾಯಿತು.ಅಲ್ಲಿಗೆ ಹೋದೆವು .ಆದರೆ ಅಲ್ಲಿಗೆ ಹೋಗ ಬೇಕೆಂದರೆ ನಮ್ಮ ವಾಹನದ ಲಭ್ಯತೆ ಇಲ್ಲ. ಬೆಟ್ಟದ ಮೇಲಿರುವಂತಹ ದೇವಾಲಯವಾಗಿದ್ದರಿಂದ ಅಲ್ಲಿ ಹೋಗಲು  ರೋಪ್ ವೇ ಅಥವಾ ಕೇಬಲ್ಕಾರ್ ರೈಡ್ ಮುಖಾಂತರವೇ ಪ್ರಯಾಣಿಸಬೇಕಾಗಿತ್ತು .ಎಲ್ಲರೂ ರೋಪ್ ವೇ ಮಾರ್ಗದ ಮುಖಾಂತರ ಹೋಗಿ ಕರಣಿಕ ಮಾತಾಳ ದರ್ಶನ ಪಡೆದೆವು. ರಾಜಸ್ಥಾನಿ ಉಡುಗೆಯ ವಿಶಿಷ್ಟತೆ ಯನ್ನು ಅನುಭವಿಸಬೇಕೆಂದು ರಾಜಸ್ಥಾನಿ ಉಡುಗೆಯಲ್ಲಿ ಫೋಟೋಗಳನ್ನು ಕ್ಲಿಕ್ಕಿಸಿಕೊಂಡು ಸಂತಸ ದಿಂದ  ಮರಳಿದೆವು. ರಾಜಸ್ತಾನದಲ್ಲಿ ಇನ್ನೂ ಸಾಕಷ್ಟು ಪ್ರವಾಸಿ  ತಾಣಗಳಿವೆ .ಅವುಗಳಲ್ಲಿ ಸಿಟಿ ಪ್ಯಾಲೇಸ್, ಲೇಕ್ ಪಿಚೋಲಾ, ಜಗದೀಶ ಮಂದಿರ ,  ಇತ್ಯಾದಿ ಸ್ಥಳಗಳನ್ನು ನೋಡಿಕೊಂಡು ಪುನಃ ಬೆಂಗಳೂರಿಗೆ ಆಗಮಿಸಿದೆವು .ನಮ್ಮ ದೇಶದ ಪ್ರತಿಯೊಂದು ರಾಜ್ಯವೂ ತನ್ನದೇ ಆದಂತಹ ಶಿಲ್ಪ ವೈಭವವನ್ನು ಹೊಂದಿದ್ದು ಪ್ರತಿಯೊಂದು ರಾಜ್ಯದಲ್ಲಿಯೂ ವಿಭಿನ್ನ ಶೈಲಿಯ  ದೇವಾಲಯಗಳು ಅಲ್ಲಿನ ಶಿಲ್ಪ ಕೆತ್ತನೆಯ ಸೌಂದರ್ಯವನ್ನು ಸವಿಯಲು  ಪ್ರವಾಸ ಮಾಡುವ ಹವ್ಯಾಸವಿದೆ .ಅಂತಹ  ಸದಾವಕಾಶ ಎಲ್ಲರಿಗೂ ದೊರೆಯಲಿ ಎಂದು ಬಯಸುತ್ತೇನೆ  .ಯಾವುದೇ ರೀತಿಯ ತಾಂತ್ರಿಕ ಸೌಲಭ್ಯಗಳು ಇರದೇ ಇದ್ದಂತಹ ಕಾಲದಲ್ಲಿಯೇ ಅಷ್ಟೊಂದು ಭವ್ಯವಾದ, ಅದ್ಭುತವಾದ ದೇವಾಲಯಗಳ ನಿರ್ಮಾಣ, ಕೋಟೆಗಳ ನಿರ್ಮಾಣ ಮಾಡಿರುವುದು ಆ ಶಿಲ್ಪಿಗಳೆಲ್ಲರ ಕಲಾನೈಪುಣ್ಯತೆಗೆ ಹಿಡಿದ ಕನ್ನಡಿಯಾಗಿದೆ .ಅಷ್ಟೊಂದು ಶ್ರಮದಿಂದ  ಕಲ್ಲನ್ನು ಬೆಣ್ಣೆ ಎನ್ನುವ ರೀತಿಯಲ್ಲಿ ಭಾವಿಸಿ ಸೂಕ್ಷ್ಮ ಕೆತ್ತನೆಗಳನ್ನು ಕೆತ್ತಿರುವ ಅವರ ಕಲಾನೈಪುಣ್ಯತೆಗೆ ನನ್ನದೊಂದು ನಮನ 🙏.ಜೀವನದಲ್ಲಿ ಮತ್ತೊಮ್ಮೆ ಮತ್ತೊಮ್ಮೆ ಇಂತಹ ಪ್ರವಾಸಿ ತಾಣಗಳ ನೋಡುವ ಸೌಭಾಗ್ಯ ಒದಗಿ ಬರಲಿ ಎಂದು ಪ್ರಾರ್ಥಿಸುತ್ತಾ ........

    ನೆನಪಿನಂಗಳದಲ್ಲಿ ..........
ಶ್ರೀಮತಿ ಸುಮಂಗಲಾ ಕೃಷ್ಣ ಕೊಪ್ಪರದ  ಶಿಕ್ಷಕಿ ಇಲಕಲ್ಲ .





(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

1 ಕಾಮೆಂಟ್‌:

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...