ಮಳೆ ಚಳಿ ಬಿಸಿಲೆನ್ನದೆ
ಕುಣಿದಾಡುತ್ತಿದ್ದ ಕರು
ಒಂದೇ ಒಂದು ಬೆಳ್ಳಿಕೇಶ ಮೊನೆಗೆ
ಮೂಲೆ ಸೇರಿಹುದಿಲ್ಲಿ ತೇರು
ನಗುವಿಲ್ಲ ನಡಿಗೆಯಿಲ್ಲ
ಅಲುಗಾಟವಿಲ್ಲ ಬರೀ ಅಳು
ಬಿದ್ದದೊಂದೇ ಇಬ್ಬನಿಗೆ
ಎಲೆಗಳನುದುರಿಸಿ ಬೋಳು
ಎದೆಗವಚ ಕಿರೀಟ ಕೈಖಡ್ಗ
ಕಾಲ್ಗದೆಗಳೆಲ್ಲವು ಮುರಿದಿಹವು
ಹಾಸಿಗೆ ದಿಂಬು ಖುರ್ಚಿ ಪಾತ್ರೆ
ರಾಜನಿಲ್ಲದೆ ತೂಕಡಿಸುತಿಹವು
ಮೈಯನೆಲ್ಲ ಮುಳ್ಳಾಗಿಸಿಕೊಂಡು
ತಾಯಿ ಮರವನೆ ತಬ್ಬಿಕೂತಂಥ ಹಲಸು
ಅಳುವಿನರ್ಜುನ ಬಾಣಗಳಿಗೆ ಹೆದರಿ
ಚಳಿ ಓಡುತಿದೆ! ರಾಜನಿವನೆ ನಮ್ಮ ಕೂಸು
ದವಾಖಾನೆಯದೊಂದೇ ಒಂದು ಈಟಿಗೆ
ತನ್ನೆಲ್ಲ ಶಸ್ತ್ರಾಸ್ತ್ರಗಳನು ಕೆಳಗಿಟ್ಟವನು ಇವನು
ಕೊರೆವ ಚಳಿಯಲೂ ಬೆವೆತು ಇವನಿಗಾದುರುಭಂಗಕೆ
ತಣ್ಣೀರುವಸ್ತ್ರವಿಡುತ ಸೋತವನು ನಾನು
ಹುರಿಮೀಸೆ ಉರಿಗಣ್ಣು ಬಲಶಾಲಿ ಬಾಹು
ಗುಡುಗುವ ತೊಡೆಗಳಿದ್ದರೂ ಸೋಲಬೇಕು
ಮರದಲಿರುವ ರೆಕ್ಕೆ ಬಲಿತ ಹಕ್ಕಿ ಮೊಟ್ಟೆಗೆ ಸೋತಂತೆ
ಜಗವನು ಇದೂವರೆಗು ಕಾದಿರುವುದದೆ! ನಮ್ಮೆದೆಯ ಹಣತೆ!!
~ ಅರಬಗಟ್ಟೆ ಅಣ್ಣಪ್ಪ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ