*ಕರುನಾಡು ಸಾಹಿತ್ಯ ಪರಿಷತ್ತು*
*ಜಿಲ್ಲಾ ಘಟಕ - ಕೋಲಾರ ಹಾಗೂ ಶ್ರೀ ಟ್ರಸ್ಟ್, ಬೆಂಗಳೂರು*
*ರಾಜ್ಯ ಮಟ್ಟದ ಕಥಾ ಸ್ಪರ್ಧೆಗಾಗಿ*
*ದಿನಾಂಕ: ೨೦.೬.೨೦೨೧*
*ವಿಷಯ: ಕೋವಿಡ್ - ೧೯ ನಿಯಂತ್ರಣ ಹಾಗೂ ವ್ಯಾಕ್ಸಿನ್ ಕುರಿತ ಜಾಗೃತಿ*
ಕರುನಾಡು ಕಥಾ ಸ್ಪರ್ಧೆ ಯಲ್ಲಿ ಸಮಾಧಾನಕರ ಸ್ಥಾನ ಪಡೆದ ಕತೆ
*ಕಥಾ ಶೀರ್ಷಿಕೆ: ಮುಂಜಾಗ್ರತೆಯ ಜನಜಾಗೃತಿ*
ನಗರದಲ್ಲಿ ಎಲ್ಲಾ ಕಡೆ ಕಟ್ಟಡದ ಕೆಲಸವೆಲ್ಲಾ ನಿಂತುಹೋಯಿತು. ಹನುಮಪ್ಪ ಕೂಲಿ ಕೆಲಸ ಸಿಗದೆ, ಎರಡು ದಿನ ಅಲೆದಾಡಿ, ಕೊನೆಗೆ ಹೇಗೋ ತನ್ನ ಸಣ್ಣಹಳ್ಳಿ ತಲುಪಿದ. ಹಳ್ಳಿಯ ಜನ ಹನುಮಪ್ಪನನ್ನು ಹಳ್ಳಿಗೆ ಹಿಂದಿರುಗಿ ಬರಲು ಕಾರಣವೇನೆಂದು ಕೇಳಿದರು. "ಏನೋ ಗೊತ್ತಿಲ್ಲ, ನಗರದಲ್ಲಿ ಅಂಗಡಿಗಳು ಎಲ್ಲಾ ಮುಚ್ಚಿವೆ, ಕಟ್ಟಡದ ಕೆಲಸವೂ ನಿಂತು ಹೋಗಿದೆ. ಶಾಲಾಕಾಲೇಜುಗಳು ಮುಚ್ಚಿವೆ. ಜನರು ಯಾರೂ ಓಡಾಡುವ ಹಾಗಿಲ್ಲ, ಬಸ್ , ಲಾರಿ ಯಾವುದೂ ಇಲ್ಲ. ಎಲ್ಲಾ ಕಡೆ ಪೋಲೀಸರ ಕಾವಲು. ಎಲ್ಲರೂ ಮುಖಮುಚ್ಚಿ ಓಡಾಡುತ್ತಿದ್ದಾರೆ., ಏನೋ ರೋಗವಂತೆ. ನನಗೆ ಅದರ ಹೆಸರು ಹೇಳಲು ಬರುವುದಿಲ್ಲ, ಒಂದು ಗಾಡಿ ಸಿಕ್ತು, ಹೇಗೋ ಬಂದುಬಿಟ್ಟೆ" ಎಂದನು. ಸ್ವಲ್ಪದಿನ ಕಳೆಯುವಷ್ಟರಲ್ಲಿ ಒಬ್ಬೊಬ್ಬರೇ ನಗರದಿಂದ ಹಳ್ಳಿಯ ಕಡೆ ಮುಖ ಮಾಡಿದರು. ಹನುಮಪ್ಪ ಜಮೀನ್ದಾರರೊಬ್ಬರ ತೋಟದಲ್ಲಿ ಕೂಲಿ ಕೆಲಸ ಮಾಡುತ್ತ ಪತ್ನಿ ರಾಧಮ್ಮ ಹಾಗೂ ಮೂರು ಜನ ಚಿಕ್ಕಮಕ್ಕಳೊಂದಿಗೆ ಜೀವನ ಸಾಗಿಸುತ್ತಿದ್ದನು. ರಾಧಮ್ಮ ಮಕ್ಕಳನ್ನು ಮನೆಯಲ್ಲಿ ಬಿಟ್ಟು, ಅಕ್ಕಪಕ್ಕದ ಮನೆಗಳಲ್ಲಿ ಹರಟೆ ಹೊಡೆಯುತ್ತಾ ಕಾಲಕಳೆಯುತ್ತಿದ್ದಳು.
ಹನುಮಪ್ಪ ಕೆಲಸ ಮುಗಿಸಿ ಸಾಯಂಕಾಲ ಮನೆಗೆ ಬಂದಾಗ ಹೆಂಡತಿ ಜ್ವರದಿಂದ ನರಳುತ್ತಿದ್ದಳು. ಮಕ್ಕಳು ಹಸಿವಿನಿಂದ ಅಳುತ್ತಿದ್ದರು. ಹನುಮಪ್ಪ ದಿಕ್ಕು ತೋಚದೆ, ಕೊನೆಗೆ ಒಲೆಯ ಮೇಲೆ ಅಕ್ಕಿ ಇಟ್ಟು, ನೀರು ಹೆಚ್ಚಿಗೆ ಹಾಕಿ ಗಂಜಿ ಮಾಡಿ, ಮಕ್ಕಳಿಗೂ ಹಾಗೂ ಮಡದಿಗೂ ನೀಡಿ, ತಾನೂ ಕುಡಿದು ಮಲಗಿದರು. ಮಾರನೇದಿನ ಬೆಳಿಗ್ಗೆ ಹನುಮಪ್ಪನಿಗೂ ಜ್ವರ ಕಾಣಿಸಿಕೊಂಡಿತು. ಬೆಳಿಗ್ಗೆ ಹೇಗೋ ಕಷ್ಟಪಟ್ಟು ಎದ್ದು, ಸ್ವಲ್ಪ ಅನ್ನ, ಸಾರು ಮಾಡಿ ಎಲ್ಲರಿಗೂ ತಿನ್ನಲು ಕೊಟ್ಟು, ತಾನೂ ತಿಂದು ತೋಟದ ಕೆಲಸಕ್ಕೆ ಹೋದನು.
ಸಾಯಂಕಾಲ ದಣಿದು, ತೋಟದಿಂದ ಹನುಮಪ್ಪ ಮನೆಗೆ ಬಂದಾಗ, ಪಕ್ಕದ ಮನೆಯ ಗಂಡಹೆಂಡತಿಯನ್ನು ಪಕ್ಕದೂರಿನ ಆಸ್ಪತ್ರೆಗೆ ಕೊಂಡೊಯ್ಯಲು ರುಗ್ಣಯಾನ (ಆಂಬುಲೆನ್ಸ್) ನಿಂತಿರುವುದು ಕಾಣುತ್ತದೆ.
ಏನಾಯಿತೆಂದು ಅವರ ಮಗ ಕೇಶವನನ್ನು ವಿಚಾರಿಸಿದನು ಹನುಮಪ್ಪ. ಕೇಶವ ಪದವೀಧರನಾಗಿ, ನಗರದ ಸಂಸ್ಥೆಯೊಂದರಲ್ಲಿ ಉದ್ಯೋಗದಲ್ಲಿರುವನು. ಸರ್ಕಾರವು ಲಾಕ್ಡೌನ್ ಘೋಷಿಸಿರುವ ಕಾರಣ, ಸಂಸ್ಥೆ ತಾತ್ಕಾಲಿಕವಾಗಿ ಮುಚ್ಚಿರುವುದರಿಂದ ಹಳ್ಳಿಗೆ ಹಿಂದಿನ ದಿನವಷ್ಟೇ ಬಂದಿದ್ದನು. "ಒಂದು ವಾರದ ಹಿಂದೆ, ತಂದೆ ಪಟ್ಟಣಕ್ಕೆ ವ್ಯಾಪಾರಕ್ಕೆಂದು ಹೋಗಿದ್ದರು. ಸ್ವಲ್ಪ ದಿನಗಳ ನಂತರ ತಂದೆ ಹಾಗೂ ತಾಯಿ ಇಬ್ಬರಿಗೂ ಜ್ವರ ಬರುತ್ತಿತ್ತು. ನೆನ್ನೆಯಿಂದ ಇಬ್ಬರಿಗೂ ಉಸಿರಾಟದ ತೊಂದರೆ ಕಾಣುತ್ತಿದೆ, ಅದಕ್ಕೆ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದೇನೆ" ಎಂದು ಹನುಮಪ್ಪನಿಗೆ ಹೇಳಿದನು ಕೇಶವ.
ಹನುಮಪ್ಪ ನಗರದಿಂದ ಬಂದಿದ್ದರೂ, ಕೊರೊನ ಸೋಂಕಿನ ಬಗ್ಗೆ ಸ್ವಲ್ಪವೂ ತಿಳಿದಿಲ್ಲ. ಕೇಶವ ತನ್ನ ತಂದೆತಾಯಿಯನ್ನು ಆಸ್ಪತ್ರೆಯಲ್ಲಿ ಸೇರಿಸಿ ಮನೆಗೆ ಬಂದನು. ಮುಖಕ್ಕೆ ಮುಖಕವಚ ಧರಿಸಿದ್ದನು. ಹನುಮಪ್ಪ ಹಾಗೂ ರಾಧಮ್ಮಳಿಗೂ ಜ್ವರ ಬಂದಿರುವುದು ತಿಳಿಯಿತು. ಕೇಶವನಿಗೆ ಇದು ಸೋಂಕಿನ ಲಕ್ಷಣವೇ ಎಂದು ಖಚಿತವಾಯಿತು. ಏಕೆಂದರೆ ರಾಧಮ್ಮ ತನ್ನ ತಾಯಿಯ ಹತ್ತಿರ ಆಗಾಗ ಹರಟೆಗೆ ಕೂಡುತ್ತಿದ್ದಳು. ಕೇಶವ ಹನುಮಪ್ಪನಿಂದ ದೂರ ನಿಂತು "ನೀನು ಮತ್ತು ರಾಧಮ್ಮ ಇಬ್ಬರೂ ಬೇರೆ ಬೇರೆ ಕೋಣೆಯಲ್ಲಿ ವಾಸಮಾಡಿ, ವೈದ್ಯರು, ಔಷಧಿ ಹಾಗೂ ಊಟದ ವ್ಯವಸ್ಥೆ ನಾನು ಮಾಡುತ್ತೇನೆ. ಇದು ಒಬ್ಬರಿಂದ ಒಬ್ಬರಿಗೆ ಹರಡಿ, ಉಸಿರಾಟದ ತೊಂದರೆ ಉಂಟಾಗುತ್ತದೆ. ಕೈಗಳನ್ನು ಸೋಪಿನಿಂದ ಆಗಾಗ್ಗೆ ತೊಳೆದು ಸ್ವಚ್ಛವಾಗಿರಿ, ಹೊರಗಡೆ ಬರಬೇಡಿ, ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿ ನನ್ನದು" ಎಂದನು.
ಹಳ್ಳಿಯವರನ್ನು ಕರೆದು, ಕೊರೊನಾ ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ ಶೀಘ್ರವಾಗಿ ಹರಡುವ ರೀತಿ, ಅದರಿಂದಾಗುವ ಪ್ರಾಣಹಾನಿಯನ್ನು ವಿವರಿಸಿದನು. ಕೊರೊನಾ ಸೋಂಕು ಹರಡದಂತೆ ತಡೆಯಲು ಎಚ್ಚರಿಕೆಯ ಕ್ರಮಗಳನ್ನು ತಿಳಿಸಿದನು. "ಒಬ್ಬರಿಂದ ಒಬ್ಬರು ದೂರದೂರವಿರಿ, ಹೊರಗೆ ಹೋಗುವಾಗ ತಪ್ಪದೆ ಮುಖಕವಚ ಧರಿಸಿ, ಆಗಿಂದಾಗ್ಗೆ ಸೋಪಿನಿಂದ ಕೈಗಳನ್ನು ತೊಳೆಯಿರಿ. ಅನಾವಶ್ಯಕವಾಗಿ ಹೊರಗಡೆ ಹೋಗಬೇಡಿ. ಮಕ್ಕಳಿಗೆ ಶಾಲೆಗಳು ಇಲ್ಲ. ಮಕ್ಕಳನ್ನು ಜಾಗ್ರತೆಯಾಗಿ ನೋಡಿಕೊಳ್ಳಿ. ಮನೆಯಲ್ಲಿಯೇ ಓದಿಕೊಳ್ಳಲು ಹೇಳಿ. ಅಕ್ಕಪಕ್ಕದ ಮನೆಗಳಿಗೆ, ಬೇರೆ ಊರುಗಳಿಗೆ, ಸಮಾರಂಭಗಳಿಗೆ ಹೋಗಬೇಡಿ, ಗುಂಪು ಸೇರಬೇಡಿ, ನಿಮ್ಮ ಕುಟುಂಬದ ರಕ್ಷಣೆ ನಿಮ್ಮ ಕೈಯ್ಯಲ್ಲಿ" ಎಂದು ಕೊರೊನ ನಿಯಂತ್ರಣದ ಬಗ್ಗೆ ಹೇಳಿದನು. ನಗರ, ದೇಶ ಹಾಗೂ ಇಡೀ ವಿಶ್ವದ ನೋವಿನ ಚಿತ್ರಣವನ್ನು ವಿವರಿಸಿದನು. ದೇಶದಲ್ಲಿ ಲಾಕ್ಡೌನ್ ಇರುವುದರಿಂದ ಎಲ್ಲವೂ ಸ್ಥಗಿತಗೊಂಡಿದೆ. ಸರ್ಕಾರದ ನಿಯಮಗಳನ್ನು ಚಾಚೂ ತಪ್ಪದೆ ಆಚರಿಸುವುದು ನಾಗರೀಕರಾದ ನಮ್ಮೆಲ್ಲರ ಕರ್ತವ್ಯವೆಂದು ಸರಳವಾಗಿ ತಿಳಿಸಿದನು.
ಕೇಶವ, ಮುಂದುವರೆದು "ಕೋವಿಡ್-೧೯ ನಿಯಂತ್ರಣಕ್ಕೆ ಎರಡು ರೀತಿಯ ವ್ಯಾಕ್ಸಿನ್ ನಮ್ಮ ದೇಶದಲ್ಲಿ ಲಭ್ಯವಿದೆ. ಈ ಲಸಿಕೆ ಹಾಕುವುದರಿಂದ, ರೋಗವು ಬಂದರೂ, ಶ್ವಾಸಕೋಶದಲ್ಲಿ ಸೋಂಕಿನ ಪ್ರಮಾಣ ಕಡಿಮೆಯಾಗಿ, ಪ್ರಾಣಹಾನಿಯಿಂದ ಪಾರಾಗಬಹುದು. ಎಲ್ಲರೂ ದಯವಿಟ್ಟು ತಪ್ಪದೇ ಹತ್ತಿರದ ಆಸ್ಪತ್ರೆಗೆ ತೆರಳಿ ಎರಡು ಬಾರಿ ಲಸಿಕೆ ಹಾಕಿಸಿಕೊಳ್ಳೋಣ, ಕುಟುಂಬ, ದೇಶ ಹಾಗೂ ವಿಶ್ವವನ್ನು ಕೊರೊನ ಮುಕ್ತವನ್ನಾಗಿ ಮಾಡೋಣ. ಭಯಪಡದೆ ಊಹಾಪೋಹಗಳಿಗೆ ಕಿವಿಗೊಡದೆ ಧೈರ್ಯದಿಂದ, ಮುಂಜಾಗ್ರತಾ ಕ್ರಮದಿಂದ ಆರೋಗ್ಯ ಕಾಪಾಡಿಕೊಳ್ಳೋಣ" ವೆಂದು ಹಳ್ಳಿಯ ಜನರಿಗೆ ಮನದಟ್ಟು ಮಾಡಿದನು. ನಿಯಮಗಳನ್ನು ಪಾಲಿಸಲು ಹಾಗೂ ಲಸಿಕೆ ಹಾಕಿಸಿಕೊಳ್ಳಲು ಎಲ್ಲರೂ ಸಿದ್ಧರಾದರು. ಊರಿನಲ್ಲಿದ್ದ ದರ್ಜಿ ರಾಜಪ್ಪ ಹಳ್ಳಿಯವರಿಗೆಲ್ಲಾ ಮುಖಕವಚಗಳನ್ನು ಹೊಲಿದುಕೊಟ್ಟನು. ಹಳ್ಳಿಯ ಜನ ಕೇಶವನನ್ನು ಹೊಗಳಿದರು.
ಕೇಶವನ ತಂದೆತಾಯಿ ಸೋಂಕುರಹಿತರಾಗಿ ಮನೆಗೆ ಹಿಂದಿರುಗಿದರು. ಹನುಮಪ್ಪ ಹಾಗೂ ರಾಧಮ್ಮ ದಿನೇದಿನೇ ಚೇತರಿಸಿಕೊಂಡರು. ಸರಿಯಾದ ಸಮಯಕ್ಕೆ ಕೇಶವನು ನೀಡಿದ ಕೋವಿಡ್-೧೯ ನಿಯಂತ್ರಣ ಹಾಗೂ ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಲಸಿಕೆಯ ಕುರಿತ ಜಾಗೃತಿಯಿಂದಾಗಿ ಹಳ್ಳಿಯ ಜನ ಸುರಕ್ಷಿತರಾದರು. ಕೊರೊನಾ ಮುಕ್ತ ಹಳ್ಳಿಯೆಂದು ಘೋಷಿಸಲಾಯಿತು.
ನೀತಿ: *ರೋಗ ವಾಸಿಯಾಗಲು ಸೆಣಸಾಡುವುದಕ್ಕಿಂತ ರೋಗ ತಡೆಯಲು ಮುಂಜಾಗ್ರತೆಯು ಸೂಕ್ತವು*
*ಕೊಂಡಮ್ಮ ಪ್ರಭಾಕರ್*
*ವಿಳಾಸ:*
ಕೊಂಡಮ್ಮ ಪ್ರಭಾಕರ್
#107, ರಿಟ್ರೀಟ್ ಗಾರ್ಡನ್ಸ್
2ನೇ ಮುಖ್ಯರಸ್ತೆ, ವೈಟ್ ಸಿಟಿ ಲೇಔಟ್,
ಸೀಗೇಹಳ್ಳಿ, ಬೆಂಗಳೂರು - 560 049
ಮೊ.9663812303.
( ತಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448241450 ಸಂಪಾದಕರು ವಿ ಮ ಸಾ ಪತ್ರಿಕೆ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ