ಬುಧವಾರ, ಜೂನ್ 30, 2021

ಉಪೇಕ್ಷೆ (ಕರೋನಾ ಜಾಗೃತಿ ಕತೆ) - ಸಂಗೀತ ಶಿಲ್ಪ

"ಕರುನಾಡು ಸಾಹಿತ್ಯ ಪರಿಷತ್ತು ಹಾಗು ಶ್ರೀ ಟ್ರಸ್ಟ್ - ಬೆಂಗಳೂರು ಇವರ ಜಂಟಿ ಸಹಯೋಗದ ಕಥಾಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ‌ ಪಡೆದಿರುವ ಕತೆ" 
                  "ಕೋವಿಡ್-೧೯ ನಿಯಂತ್ರಣ ಹಾಗೂ ವ್ಯಾಕ್ಸಿನ್ ಕುರಿತು ಜಾಗೃತಿ"
ಉಪೇಕ್ಷೆ
ರಾಮು ಮತ್ತು ನವೀನರು ಒಂದೇ ಊರಿನಿಂದ ಪಟ್ಟಣಕ್ಕೆ ಬಂದ ಯುವಕರು. ತಮ್ಮ ತಮ್ಮ ಹೆಂಡರು-ಮಕ್ಕಳನ್ನು ಹಳ್ಳಿಯಲ್ಲೇ ಬಿಟ್ಟು ದುಡಿಯುವ ಸಲುವಾಗಿ  ಪಟ್ಟಣ ಸೇರಿದ್ದರು. ರಾಮುವಿಗೆ  ಮೂರು ತಿಂಗಳ ಮಗುವಿದ್ದು,ಅಲ್ಪ- ಸ್ವಲ್ಪ ಹಣ ಉಳಿಸಿಕೊಂಡೇ ಮಗುವಿನ ಮುಖ ನೋಡುವುದಾಗಿ ಪಣ ತೊಟ್ಟು ಕೂತಿದ್ದನು. ನವೀನನಿಗೆ ಇಬ್ಬರು ಮಕ್ಕಳಿದ್ದು, ಎರಡು-ಮೂರೂ ತಿಂಗಳಿಗೊಮ್ಮೆ ಅವರನ್ನು ನೋಡಲು ಹೋಗುತ್ತಿದ್ದನು. ಹೀಗಿರುವಾಗ ಕರೋನ ಎಂಬ ಅಲೆಯು ಇವರಿಬ್ಬರ ಜೀವನವನ್ನೂ ಅಲ್ಲೋಲಕಲ್ಲೋಲ ಮಾಡಿತು. ದುಡಿಯಲು ಮನಸ್ಸಿದ್ದರೂ ಕೆಲಸವಿಲ್ಲದ ಕಾರಣ ಊರಿಗೆ ಮರಳಲು ಸಿದ್ದರಾದರು.
ನವೀನನು ಸಾಮಾನುಗಳನ್ನು ಮೂಟೆಗೆ ತುಂಬುತ್ತಿದ್ದರೆ, ಇತ್ತ ರಾಮನು ಅಡುಗೆ ತಯಾರಿಯಲ್ಲಿದ್ದನು. ಅಷ್ಟರಲ್ಲಿಏನೋ ಕೇಳಿಸಿಕೊಂಡವನಂತೆ ರಾಮು ಅಡುಗೆ ಕೊಣೆಯಿಂದ ಹೊರಬಂದು ಟಿವಿಯನ್ನು ತದೇಕ ಚಿತ್ತದಿಂದ ನೋಡಲಾರಂಭಿಸಿದನು.
"ಇನ್ನು ಮುಂದೆ ಹದಿನೆಂಟು ವರ್ಷಕ್ಕಿಂತ ಮೇಲ್ಪಟ್ಟ ವಯಸ್ಕರಿಗೆ  ವ್ಯಾಕ್ಸೀನ್ ಹಾಕಲಾಗುವುದು. ವ್ಯಾಕ್ಸೀನ್ ಹಾಕಿಸಿಕೊಳ್ಳಿ ಕರೋನಾ ಭಯದಿಂದ ಮುಕ್ತರಾಗಿ. ಆದರೆ ಒಂದು ಮುಖ್ಯ ಸೂಚನೆ: ವಾಕ್ಸಿನ್ ಹಾಕಿಸಿಕೊಂಡರೂ ಮಾಸ್ಕ್ ಹಾಗು ಸ್ಯಾನಿಟೈಸರ್ ಬಳಕೆಯನ್ನು ಮರೆಯದಿರಿ ".
ರಾಮನು ನವೀನನ ಕಡೆ ತಿರುಗಿ,"ಅಲ್ಲಾ ನವೀನ, ವ್ಯಾಕ್ಸೀನ್ ಹಾಕಿಸ್ಕೊಂಡ್ರು ಮಾಸ್ಕ್ ಹಾಕ್ಕೋಬೇಕಂತೆ, ಮತ್ತೆ ಕೈಗೆ ಅದೇನೋ ಬಳಕೋಬೇಕಂತೆ, ಇಷ್ಟ್ ಮಾತ್ರಕ್ಕೆ ಔಷಧಿ ಯಾಕ್  ಬೇಕೋ?" ಎಂದನು.
 ನವೀನನು ಉತ್ತರಿಸುತ್ತಾ, "ಅದ್ಯಾಕೋ ಹಾಗಂತಿ? ನಾನು ದುಡ್ಡು ಕೊಟ್ಟು ಹಾಕುಸ್ಕೊಂಡಿಲ್ವ. ಉಚಿತವಾಗಿ ಹಾಕ್ತಿರ್ಬೇಕಾದ್ರೆ ಹಾಕಿಸ್ಕೊಳಕ್ಕೆ ನಿಂಗೇನೋ?"
"ಬಿಡೋಲೆ ಕಂಡಿವ್ನಿ,ಎರಡು ಸಲ ವ್ಯಾಕ್ಸೀನ್ ಹಾಕಿಸ್ಕೊಂಡಾಗಲೂ ಮೂರೂ-ನಾಲ್ಕು ದಿನ ಜ್ವರದಿಂದ ಮಲಗಿದ್ದಿ, ಕೈ ನೋವಂತ ಒದ್ದಾಡಿದ್ದಿ, ಕೆಲಸಕ್ಕೂ ಬರದೇ ಚಕ್ಕರ್ ಹಾಕಿ ತಿಂಗಳ ಕೊನೆಯಲ್ಲಿ ನನ್ನಿಂದ ಸಾಲ ಪಡೆದಿ, ನನಗೆ ಹೇಳಕ್ಕೆ ಬರ್ತೀಯ.ಬಂದೀವಿ ದುಡ್ಡುಉಳುಸ್ಕೊಂಡು ಹೋಗೊದ್ಬಿಟ್ಟು, ಇವೆಲ್ಲಾ ಯಾಕ್ ಬೇಕು? ಈಗ ನಾನು  ಹಾಕ್ಸ್ಕೊಂಡಿಲ್ಲ, ನೀನು ಹಾಕ್ಸ್ಕೊಂಡಿ, ಏನ್ ವ್ಯತ್ಯಾಸ ಆತಪ್ಪ? ಇಬ್ಬರೂ ಚಂದ್ ಇದ್ದೀವಿ. ಹೊರಗ್ ಹೋಗ್ಬೇಕಾದ್ರೆ ಮಾಸ್ಕ್ ಹಾಕ್ತೀವಿ. ಇನ್ನೇನ್ ಬೇಕು? ಬೇಕಾದವರು ತಗೊಳ್ಳಿ. ಕರೋನಾ ತಂತಾನೇ ಕಡಿಮೆ ಆಗ್ತದ" ಎಂದನು.
"ಎಲ್ರು ನಿನ್ ಹಾಗೆ ಯೋಚಿಸಿದ್ರೆ  ಹಾಕಿಸ್ಕೊಳ್ಳೋರ್ಯಾರು? ದೊಡ್ಡವರು, ಹೆಂಡತಿ- ಮಕ್ಳು ಇದಾರ ಊರಾಗ, ಒಸಿ ಹುಷಾರಾಗಿರ್ಬೇಕು. ಅದೂ ಬೇರೆ ಗೆಳೆಯರ ಜೊತೆ ಇರುವಾಗ ಮಾಸ್ಕ್ ಎಲ್ಲಿ ಹಾಕೊತ್ತೀವೋ? ಯಾರಿಗೆ ಏನ್ ಕಾಯಿಲೆ ಇರುತ್ತೋ ಏನೋ? ನಮ್ ಕೆಲಸ ನಾವ್ ಮಾಡುವ, ಮುಂದೆ ನಮ್ ಹಣೆಬರಹ." ಎನ್ನುತ್ತಾ ನವೀನನು ತನ್ನ ಕೆಲಸವನ್ನು ಮುಂದುವರಿಸಿದನು.
" ನಮ್ಮವರು ತಮ್ಮವರು ಅಂತ ಇರ್ಬೇಕು. ಕಾಯಿಲೆ ಬರುತ್ತೆ ಅಂತ ಸ್ನೇಹಿತರ ಕೂಡ ಇರೋವಾಗ  ಮೂತಿ ಕಟ್ಕೊಂಡಿರಕ್ಕಾಗುತ್ತಾ?" ಎಂದು ಗೊಣಗುತ್ತಾ ರಾಮನು ಅಡುಗೆ ಮನೆ ಸೇರಿದನು.
ಇಬ್ಬರೂ ಅಂದು ಸಂಜೆಯೇ ಹೊರಡಲು ಸಿದ್ದರಾದರು. ವಾಹನಗಳು ಸಿಗದೇ ಕೆಲವು ಗಂಟೆಗಳ ಕಾಲ  ಪರದಾಡಿದರೂ, ಹೇಗೋ ಹಾಗೆ ಇಬ್ಬರೂ ಊರನ್ನು ಮುಟ್ಟಿದರು. ನವೀನನು ಮನೆಗೆ ಬಂದೊಡನೆಯೇ ತಂದಿದ್ದ ಸಾಮಾನುಗಳ ಮೂಟೆಯನ್ನು ದನದ ಕೊಟ್ಟಿಗೆಯಲ್ಲಿಟ್ಟು, ಮಾಸ್ಕ್ ತೆಗೆದು, ಬಟ್ಟೆಗಳನ್ನು ಒಗೆಯಲು ಹಾಕಿ, ಸ್ನಾನ ಮಾಡಿದ ಮೇಲೆಯೇ ಎಲ್ಲರನ್ನು ವಿಚಾರಿಸಿದನು.
ಇತ್ತ ರಾಮನು ಮನೆಗೆ ಬಂದವನೇ ತಂದಿದ್ದ ಸಾಮಾನುಗಳ ಮೂಟೆಯನ್ನು ಮೂಲೆಗೆ ಹಾಕಿ, ಮಾಸ್ಕ್ ತೆಗೆದು, ಕೈ ಕಾಲು ಮುಖ ತೊಳೆದು, ಹೆಂಡತಿಯ ಆರೋಗ್ಯವನ್ನು ವಿಚಾರಿಸಿ, ಮಗುವನ್ನು ಮನಸಾರೆ ಎತ್ತಿ ಮುದ್ದಾಡಿದನು.
ಹೀಗೆಯೇ ದಿನಗಳು ಉರುಳಿ ವಾರವಾಯಿತು. ರಾಮುವಿನ ಹೆಂಡತಿ ಕಮಲಳಿಗೆ ಜ್ವರ ಕಾಣಿಸಿಕೊಂಡಿತು. ಬಾಣಂತಿಯಾದ್ದರಿಂದ ದೃಷ್ಟಿಯಾಗಿರಬಹುದೆಂದು ಸುಮ್ಮನಾದರು. ಎರಡು- ಮೂರು ದಿನಗಳಲ್ಲಿ ಜ್ವರ ಕೆಮ್ಮು ಜಾಸ್ತಿಯಾದ್ದದ್ದರಿಂದ ಮಗುವನ್ನೂ ಕರೆದುಕೊಂಡು ಆಸ್ಪತ್ರೆಗೆ ತೆರಳಿದರು.
 ಕಮಲಳಿಗೆ ಕರೋನಾದ ಲಕ್ಷಣಗಳು ಇದ್ದದ್ದರಿಂದ  ಮೂವರಿಗೂ ಪರೀಕ್ಷೆ ನಡೆಸಿದರು. ಆಸ್ಪತ್ರೆಯ ಸಿಬ್ಬಂದಿಯು ಕಮಲಾಳನ್ನು ಮಾತ್ರ ಆಸ್ಪತ್ರೆಯಲ್ಲಿ ಇರಿಸಿಕೊಂಡು, ರಾಮನನ್ನು ಮನೆಗೆ ಹೋಗಲು ಹೇಳಿ, ಯಾರೊಂದಿಗೂ ಸಂಪರ್ಕಕ್ಕೆ ಬರಬಾರದೆಂದು ಸೂಚಿಸಿದರು.
ಈ ಬಾರಿ ರಾಮನು ಹಾಗು ತನ್ನ ಕುಟುಂಬದವರು ಡಾಕ್ಟರ್ ನ ಮಾತುಗಳನ್ನು ಗಂಭೀರವಾಗಿ ಪರಿಗಣಿಸಿದರು. ಯಾರೊಂದಿಗೂ ಭೇಟಿಯಾಗದೆ ಮನೆಯಲ್ಲೇ ಉಳಿದುಕೊಂಡು ಡಾಕ್ಟರ್ ಸೂಚಿಸಿದಂತೆ ಬಿಸಿನೀರಿನ ಹಬೆಯನ್ನು ತೆಗೆದುಕೊಂಡರು ಹಾಗು ಬಿಸಿನೀರು, ಬಿಸಿ ಆಹಾರ, ಹಣ್ಣುಗಳನ್ನು ಸೇವಿಸಿದರು. ಡಾಕ್ಟರ್ ಮಾಡಿದ ಪರೀಕ್ಷೆಯಲ್ಲಿ ರಾಮನಿಗೆ ಹಾಗು ಕಮಲಳಿಗೆ ಮಾತ್ರ ಕರೋನಾ ಇದ್ದು, ಅದೃಷ್ಟವಶಾತ್ ಮಗುವು ಆರೋಗ್ಯದಿಂದಿತ್ತು. ರಾಮನು ತನ್ನ ಸಂಪರ್ಕಕ್ಕೆ ಬಂದಿದ್ದವರಿಗೆಲ್ಲಾ ವಿಷಯ ತಿಳಿಸಿ  ತಮ್ಮ ತಮ್ಮ ಮನೆಯಲ್ಲೇ ಉಳಿದು ಆರೈಕೆ ಮಾಡಿಕೊಳ್ಳುವಂತೆ ನಿವೇದಿಸಿಕೊಂಡನು.
ಸ್ವಲ್ಪ ದಿನಗಳಲ್ಲೇ ಕಮಲಾಳು ಚೇತರಿಸಿಕೊಂಡು ಮನೆಗೆ ಬಂದಳು. ಮುಖಕ್ಕೆ ಮಾಸ್ಕ್ ಧರಿಸಿ, ಸ್ವಚ್ಛತೆಯನ್ನುಕಾಪಾಡಿಕೊಳ್ಳುತ್ತಾ ಮಗುವಿಗೆ ಹಾಲು ಕೊಡಬಹುದಾಗಿ ಡಾಕ್ಟರ್ ಹೇಳಿದ್ದರು.
 ವ್ಯಾಕ್ಸಿನ್ ಹಾಕಿಸಿಕೊಳ್ಳದೆ, ಮಾಸ್ಕ್ ಇಲ್ಲದೆ ಸ್ನೇಹಿತರೊಂದಿಗೆ ಬೆರೆತದ್ದು ಹಾಗೂ ಊರಿನಿಂದ ಬಂದವನು ಕೆಲವು ದಿನಗಳು ಮನೆಯಲ್ಲೇ ಪ್ರತ್ಯೇಕವಾಗಿ ಉಳಿಯದೆ, ತಕ್ಷಣ ಮನೆಯವರೊಂದಿಗೆ ಬೆರೆತದ್ದು, ತನ್ನ ತಪ್ಪುಗಳೆಂದು ಡಾಕ್ಟರ್  ಹೇಳಿದ ಮೇಲೆಯೇ ರಾಮುವಿಗೆ ಅರಿವಾಯಿತು. ತನ್ನ ಉಪೇಕ್ಷೆಯ ಫಲವಾಗಿ ಮಗುವು ತಾಯಿಯ ಹಾಲಿಲ್ಲದೆ ಬಹುಕಾಲ ಹಾತೊರೆಯಬೇಕಾಯಿತೆಂದು  ನೊಂದುಕೊಂಡನು.
ಇತ್ತ ಒಬ್ಬ ಜವಾಬ್ದಾರಿಯುತ ನಾಗರಿಕನಾಗಿ ನವೀನನು ಮುಂಜಾಗ್ರತ್ತಾ ಕ್ರಮಗಳನ್ನು ಪಾಲಿಸಿದ್ದರಿಂದ ಅವನ ಕುಟುಂಬವು ಆರೋಗ್ಯವಾಗಿತ್ತು. ಹೊಲ- ಗದ್ದೆ ಹಾಗು ಹಸು-ಕರುಗಳನ್ನು ನೋಡಿಕೊಳ್ಳುತ್ತಾ ಮನೆಯವರೊಂದಿಗೆ ಖುಷಿಯಿಂದಿದ್ದನು.
                                                                                                                  ಸಂಗೀತ ಕೌಶಿಕ್ 
                                                  ಬೆಂಗಳೂರು.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ : 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...