ರಾಜಕೀಯದಿಂದ ದೂರವುಳಿದಾಗ ಮಾತ್ರ ಉತ್ತಮ ಸಾಹಿತ್ಯ ಹುಟ್ಟಲು ಸಾಧ್ಯ --- ಶ್ರೀಮತಿ ಗಿರಿಜಾ ಮಾಲಿ ಪಾಟೀಲ್
ಹೊಸದುರ್ಗ:: ದಿನಾಂಕ 29/08/2021 ರ ಭಾನುವಾರದಂದು ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ, ಹೊಸದುರ್ಗ ತಾಲೂಕು ಘಟಕದ ಉದ್ಘಾಟನೆ, ಕವಿಗೋಷ್ಠಿ ಹಾಗೂ "ಜಾಗತಿಕ ಭಯೋತ್ಪಾದನೆ ವಿರೋಧಿಸಿ- ಮಾನವಿಯತೆಯೆಡೆಗೆ" ಆನ್ಲೈನ್ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಆನ್ಲೈನ್ ಮೂಲಕ ಹೊಸದುರ್ಗ ತಾಲೂಕು ಘಟಕದ ಉದ್ಘಾಟನಾ ಕಾರ್ಯಕ್ರಮ ನೆರವೇರಿಸಿದ, ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ನಾನಾಗೌಡ ಮಾಲಿ ಪಾಟೀಲ್ ರವರು "ಭಯೋತ್ಪಾದನೆಗೆ ಯಾವುದೇ ಧರ್ಮವಿಲ್ಲ, ಇಂದಿನ ದಿನಮಾನಗಳಲ್ಲಿ ಭಯೋತ್ಪಾದನೆಯು ತನ್ನ ಕರಾಳ ಬಾಹುಗಳನ್ನು ಪ್ರಪಂಚದ ಉದ್ದಗಲಕ್ಕೂ ಚಾಚಿದ್ದು, ಭಯದ ವಾತಾವರಣ ನಿರ್ಮಿಸಿ ಜನರಲ್ಲಿ ಬದುಕುವ ಧೈರ್ಯವನ್ನು ಕಿತ್ತುಕೊಳ್ಳುತ್ತಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ, ಮಾನವೀಯತೆಯ ಮೂಲಕ ಒಂದು ಸ್ವಾಸ್ಥ್ಯ ಸಮಾಜವನ್ನು ಕಟ್ಟುವ ಕೆಲಸ ಆಗಬೇಕಾಗಿದೆ" ಎಂದು ತಿಳಿಸಿದರು.
ನಂತರ ಕಾರ್ಯಕ್ರಮದಲ್ಲಿ ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ ಹೊಸದುರ್ಗ ತಾಲೂಕು ಘಟಕದ ಅಧ್ಯಕ್ಷರಾದ ಬೆಳಕು-ಪ್ರಿಯ ಮುರಳಿಯವರು ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ "ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆಯ ಮೂಲಕ ಸಾಹಿತ್ಯಾಸಕ್ತರನ್ನು ಒಟ್ಟುಗೂಡಿಸಿ ಕನ್ನಡ,ನಾಡು,ನುಡಿ,ಸಾಹಿತ್ಯದ ಸೇವೆಯನ್ನು ಮಾಡುತ್ತಿರುವ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಮತಿ ಗಿರಿಜಾ ಮಾಲಿ ಪಾಟೀಲ್ ದಂಪತಿಗಳ ಕಾರ್ಯವನ್ನು ಶ್ಲಾಘಿಸಿದರು, ಮುಂದುವರೆದು ಪ್ರತಿಯೊಬ್ಬ ಬರಹಗಾರನು ಕೂಡ ಮಾನವೀಯತೆಯ ನೆಲೆಗಟ್ಟಿನಲ್ಲಿ ಕಾವ್ಯ ಕಟ್ಟುವ ಮತ್ತು ಸದಾ ಸಮಾಜವನ್ನು ಜಾಗೃತಗೊಳಿಸುವ ಕಾರ್ಯ ಹಿಂದೆಂದೆಗಿಂತಲೂ ಇಂದು ಅತೀ ಅವಶ್ಯಕ ಮತ್ತು ಅನಿವಾರ್ಯವಾಗಿದೆ ಎಂದು ಬರಹಗಾರರನ್ನು ಎಚ್ಚರಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಹಿರಿಯ ಸಾಹಿತಿಗಳು ತಾಲೂಕು ಘಟಕದ ಗೌರವಾಧ್ಯಕ್ಷರಾದ ಶ್ರೀಯುತ ಧನಂಜಯ ಮೆಂಗಸಂದ್ರ ರವರು ಮಾತನಾಡಿ, ಆಧುನಿಕತೆಯ ಸಮಾಜದಲ್ಲಿ ಮಾನವಿಯತೆಯು ಕಣ್ಮರೆಯಾಗುತ್ತಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ಮುಂದಿನ ದಿನಗಳಲ್ಲಿ ನಾವು ನೀವುಗಳು ಮನೆಯ ವಾತಾವರಣದಿಂದಲೆ ಮಕ್ಕಳಲ್ಲಿ ಮಾನವೀಯತೆಯನ್ನು ಬೆಳೆಸುವ ಕಾರ್ಯವನ್ನು ಅತ್ಯಂತ ತುರ್ತಾಗಿ ಕೈಗೊಳ್ಳುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಬೇಕಾಗಿದೆ ಎಂದು ನುಡಿದರು.
"ಜಾಗತಿಕ ಭಯೋತ್ಪಾದನೆ ವಿರೋಧಿಸಿ-ಮಾನವಿಯತೆಯೆಡೆಗೆ" ಎಂಬ ವಿಷಯಕ್ಕೆ ಸಂಬಂಧಿಸಿದಂತೆ ವಿಶೇಷ ಉಪನ್ಯಾಸ ನೀಡಿದ ಮೊಳಕಾಲ್ಮುರಿನ ಯುವ ಬರಹಗಾರ ಜಬಿವುಲ್ಲಾ ಎಂ ಅಸದ್ ರವರು."ಭಯೋತ್ಪಾದನೆ ಇಂದು ಯಾವುದೇ ಒಂದು,ಧರ್ಮ,ದೇಶ,ಭೌಗೋಳಿಕ ಪ್ರದೇಶಕ್ಕೆ ಸೀಮಿತವಾಗಿಲ್ಲ, ಮನುಷ್ಯ ಮನುಷ್ಯನಲ್ಲಿ ಭಯ ಹುಟ್ಟಿಸುವ ಇಂತ ಹೀನ ಕೃತ್ಯಕ್ಕೆ ಯಾವ ಧರ್ಮದ ಬೆಂಬಲವೂ ಕೂಡ ಇರುವುದಿಲ್ಲ ಎಂದರು. ಮುಂದುವರೆದು ಧರ್ಮ ಎಂದರೇನು, ಮಾನವೀಯತೆ ಎಂದರೇನು, ಧರ್ಮಕ್ಕೂ ಮಾನವಿಯತೆಗೂ ಇರುವ ಸಂಬಂಧ, ಅನಾದಿ ಕಾಲದಿಂದ ಹಿಡಿದು ಬುದ್ಧನವರೆಗೆ ಹಾಗೂ ಇಂದಿನ ದಿನಮಾನಗಳವರೆಗೂ ವಿವಿಧ ಧರ್ಮ, ಧರ್ಮ ಗ್ರಂಥಗಳಲ್ಲಿ ಮಾನವ ಧರ್ಮ ಮತ್ತು ಮಾನವೀಯತೆಯ ಕುರಿತು ಅತ್ಯಂತ ಸಂಕ್ಷಿಪ್ತವಾಗಿ ತಮ್ಮ ಉಪನ್ಯಾಸ ಕಾರ್ಯವನ್ನು ನೆರವೇರಿಸಿದರು.
ಮುಖ್ಯ ಅಥಿತಿಗಳಾಗಿದ್ದ ಬೆಂಗಳೂರು ಗ್ರಾಮಾಂತರ ಘಟಕದ ಅಧ್ಯಕ್ಷರಾದ ಶ್ರೀಮತಿ ಕಮಲಾಕ್ಷಿ ಕೌಜಲಗಿಯವರು ಮಾತನಾಡಿ ಭಯೋತ್ಪಾದನೆಯನ್ನು ಯಾವುದೇ ತಾರತಮ್ಯವಿಲ್ಲದೆ ಪ್ರತಿಯೊಬ್ಬರೂ ವಿರೋಧಿಸಬೇಕಾಗಿದೆ,ಹಾಗೆಯೇ ಕವಿಗಳು ತಮ್ಮ ಬರಹಗಳಲ್ಲಿ ಅದನ್ನು ರೂಢಿಸಿಕೊಳ್ಳಬೇಕೆಂದು ಕವಿಗಳಿಗೆ ಕಿವಿಮಾತು ಹೇಳಿದರು.
ತದನಂತರ ನಡೆದ ಕವಿಗೋಷ್ಠಿಯಲ್ಲಿ ರಾಜ್ಯದ ನಾನಾ ಭಾಗಗಳಿಂದ ಹಾಜರಿದ್ದ ಸುಮಾರು 30 ಕ್ಕೂ ಹೆಚ್ಚು ಹಿರಿಯ ಕಿರಿಯ, ಕವಿ ಕವಯಿತ್ರಿಯರು ತಮ್ಮ ಕವನಗಳನ್ನು ವಾಚಿಸಿದರು. ಬಹುತೇಕ ಕವನಗಳು ಭಯೋತ್ಪಾದನೆ ವಿರೋಧಿಸಿ ಮಾನವಿಯತೆಯೆಡೆಗೆ ಕುರಿತಾಗಿಯೇ ಇದ್ದದ್ದು ವಿಶೇಷವಾಗಿತ್ತು.
ಅಂತಿಮವಾಗಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಶ್ರೀಮತಿ ಗಿರಿಜಾ ಮಾಲಿ ಪಾಟೀಲ್ ರವರು ಮಾತನಾಡಿ, ಹೊಸದುರ್ಗ ತಾಲೂಕು ಘಟಕವು ಮುಂದಿನ ದಿನಗಳಲ್ಲಿ ಮತ್ತಷ್ಟೂ ವಿನೂತನವಾದ ಕಾರ್ಯಕ್ರಮಗಳನ್ನು ನಡೆಸಿಕೊಡಲಿ ಎಂದು ಶುಭ ಹಾರೈಸಿ ಹಲವು ಕವಿಗಳ ಕವನಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಮುಂದುವರೆದು ಮಾತನಾಡಿ ಪ್ರಸ್ತುತ ದಿನಗಳಲ್ಲಿ ಮಾನವೀಯತೆ ಬೆಳೆಸುವ ನಿಟ್ಟಿನಲ್ಲಿ ಕವಿಗಳ ಮತ್ತು ಕವಿತೆಗಳ ಪಾತ್ರದ ಕುರಿತು ವಿವರಿಸಿದರು. ಸಾಹಿತ್ಯದಲ್ಲಿ ರಾಜಕೀಯವನ್ನು ಬೆರೆಸುವುದು ಆರೋಗ್ಯಕರ ಬೆಳವಣಿಗೆಯಲ್ಲ,
ಸಾಹಿತ್ಯ ರಾಜಕೀಯದಿಂದ ದೂರವುಳಿದಾಗ ಮಾತ್ರ ಉತ್ತಮ ಆರೋಗ್ಯಕರ ಸಾಹಿತ್ಯ ಹುಟ್ಟಲು ಸಾಧ್ಯ, ಹಾಗೆಯೇ ಬರಹಗಾರರು ಸದಾ ತನ್ನ ಸುತ್ತಲಿನ ಸಮಾಜವನ್ನು ಸೂಕ್ಷವಾಗಿ ವೀಕ್ಷಿಸುತ್ತ ಅಲ್ಲಿಯ ತಪ್ಪು ಒಪ್ಪುಗಳನ್ನು ತಮ್ಮ ಬರಹಗಳ ಮೂಲಕ ಸಮಾಜವನ್ನು ಜಾಗೃತಗೊಳಿಸುವ ಕಾರ್ಯವನ್ನು ನಿರಂತರವಾಗಿ ಮಾಡಬೇಕೆಂದು ಬರಹಗಾರರಿಗೆ ಕಿವಿ ಮಾತು ಹೇಳಿದರು.
ಕಾರ್ಯಕ್ರಮವು ಗಾಯಕಿ ಶ್ರೀಮತಿ ಜಾನಕಿ ರಾಘು ರವರ ಸುಶ್ರಾವ್ಯ ಪ್ರಾರ್ಥನೆಯೊಂದಿಗೆ ಪ್ರಾರಂಭವಾಗಿ, ಶ್ರೀಯುತ ಶ್ರೀನಿವಾಸ್ ಡಿ ಗೊರವಿನಕಲ್ಲು ಇವರ ಸ್ವಾಗತದೊಂದಿಗೆ ಸಾಗಿತು. ವೇದಿಕೆಯ ಸಂಘಟನಾ ಕಾರ್ಯದರ್ಶಿಗಳಾದ ಶ್ರೀಮತಿ ಭಾಗ್ಯ ಗಿರೀಶ್ ರವರು ಕಾರ್ಯಕ್ರಮವನ್ನು ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸಿ,ನಿರೂಪಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ವೇದಿಕೆಯ ಸದಸ್ಯರಾದ ಬಿ.ಎಚ್. ರಾಮಣ್ಣ ರವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮಕ್ಕೆ ತೆರೆ ಎಳೆಯಲಾಯಿತು.
*ವರದಿ ::*
ಬೆಳಕು-ಪ್ರಿಯ
ಅಧ್ಯಕ್ಷರು
ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ ಹೊಸದುರ್ಗ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ )
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ