ಕರುನಾಡ ಬೆಟ್ಟದ ತುದಿಯ
ರಾಜ ಮರದ ಹೂವು
ನೋಡಿದರೆ ಮುಟ್ಟಬೇಕು
ಮುಟ್ಟಿದರೆ ಮುಡಿಯಬೇಕು
ಎಂಬ ಪರಿಶುದ್ಧ ಪ್ರೀತಿಯ
ಭಾವ ಸ್ಫುರಿಸುವಂತ ಜೀವ...
ಕನ್ನಡಿಗರ ಮನೆ ಮನದಂಗಳದಿ
ಮಗುವಾಗಿ
ನೀ ಚೆಲ್ಲುತ್ತಿದ್ದ ಆ ನಗೆ ಹೂ
ಸದಾ ಹಚ್ಚ ಹಸಿರು ಬನ
ಆನಂದ ಸೂಸುವ ನಂದನವನ
ಎಳೆಮಗುವಿನ ಮನದ
ಪ್ರತಿಬಿಂಬದ ದರ್ಪಣ
ಇಳಿವಯಸ್ಸಿನ ಊರುಗೋಲಾಸರೆಯ
ಹಿರಿಜೀವಗಳ ಬಾಳ ಪ್ರೇರಣ
ಹಮ್ಮು - ಬಿಮ್ಮುಗಳು
ತಮ್ಮಷ್ಟಕ್ಕೆ ತಾವು ಮಾತಾಡಿದವೇನೋ
ತಮ್ಮನ್ನು ನಿರಾಕರಿಸಿದ
ಪುನೀತನ ವಿನಯದ ವಿಶ್ವಾಸ ಜರಿದು
ಹೇ ದೇವಾ... ನಿನ್ನ ನಾಡಲ್ಲಿ
ಪ್ರಹ್ಲಾದನ ಪಾತ್ರಧಾರಿ ಸಿಗಲಿಲ್ಲವೇನೋ
ಹಿರಣ್ಯಕಶಿಪುವಿನ ಊರುಭಂಗಗೊಳಿಸಲು
ಆಮಂತ್ರಣವಿಲ್ಲದೇ, ಬಯಸದೇ ಇದ್ದರೂ,
ಬರಮಾಡಿಕೊಂಡೆಯಾ ಬಾನ ದಾರಿಯಲ್ಲಿ...
ಕೋಟ್ಯಧಿಪತಿಯ ಅಪ್ಪುಗೆಗೆ
ಕೋಟ್ಯಂತರ ಹೃದಯಗಳು
ಕನಸಿನ ಕಿಟಕಿಯಿಂದ ಕೈಚಾಚಿ
ಎದುರು ನೋಡುತ್ತಿರುವಾಗಲೇ
ನಿನ್ನ ತೋಳ ತೆಕ್ಕೆಯಲ್ಲಿ ಬಂಧಿಸಿಬಿಟ್ಟೆಯ..
ಕನ್ನಡಿಗರ ಕಣ್ಣ ಹನಿಗಳಿಗೆ
ಪುನೀತನ ಪಾದ ತೊಳೆಯುವ ತವಕ
ಮಲಗಿದ ಮುತ್ತಿನ ಕೂಸಿಗೆ
ತಿಳಿಯದು ಅಶ್ರುತರ್ಪಣದ ಪುಳಕ
ಇಂದು ಒಂದು ಕನಸಾಗಿ
ನಾಳೆ ಮತ್ತೆ ಬೆಳಗಾಗಿ
ಅಪ್ಪು ಬದುಕಲಿ ನಮಗಾಗಿ
ಆಸೆ ಇದು ಅಭಿಮಾನಿಯಾಗಿ....
- ಜಗದೀಶ ತಿಗರಿ, ಹೊಳಗುಂದಿ, ಹೂವಿನ ಹಡಗಲಿ ತಾ.
ವಿಜಯ ನಗರ ಜಿ. 8970273749.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ