ಮಾನ್ಯ ಶ್ರೀ ವೆಂಕಟೇಶ ಬಿ. ಕಮಲಾಪುರ ಇವರ ಪ್ರಧಾನ ಸಂಪಾದಕತ್ವದಲ್ಲಿ ಹಾಗೂ ಶ್ರೀ ಬಿ.ಅರುಣ್ ಕುಮಾರ್, ಶ್ರೀ ಶ್ರೀಶೈಲ ಬಡಿಗೇರ, ಶ್ರೀ ಕ್ಯಾದಿಗಾಳ್ ಉದೇದಪ್ಪ, ಹಾಗೂ ಶ್ರೀ ಸಿದ್ಧಲಿಂಗೇಶ ಅಂಕಲಕೋಟಿ ಇವರ ಸಹಸಂಪಾದಕತ್ವದಲ್ಲಿ ಒಡಮೂಡಿರುವ ʼಕಲ್ಲು ತೇರಿನ ಕುಸುರಿʼಎಂಬ ಪ್ರಾತಿನಿಧಿಕ ಕವನ ಸಂಕಲನವನ್ನು ಬಳ್ಳಾರಿ ಜಿಲ್ಲೆಯ ಶ್ರಾವ್ಯ ಪ್ರಕಾಶನ ಪ್ರಕಟಿಸಿದೆ.
ʼಅಕ್ಷರ ಲೋಕದಲ್ಲಿ ಹೆಕ್ಕಿ ತಂದಿರುವʼ ಈ ಪ್ರಾತಿನಿಧಿಕ ಕವನ ಸಂಕಲನವನ್ನು ಮಂತ್ರಾಲಯದ ಶ್ರೀ ಸುಬುಧೇಂದ್ರ ತೀರ್ಥರ ವಿದ್ವತ್ತಿಗೆ ಹಾಗೂ ಸಕಲ ಶ್ರೀಗಳ ಪಾದ ಕಮಲಕ್ಕೆ ಅರ್ಪಿಸಿರುವುದು ವಿಶೇಷ. ಕೃತಿಗೆ ʼನುಡಿ ಹೂಗಳನ್ನುʼ ಸಮರ್ಪಿಸಿರುವ ಮಾನ್ಯ ಡಾ. ಜಿ.ಬಿ. ಕನಕೇಶಮೂರ್ತಿ ಅವರ ವಿದ್ವತ್ ಪೂರ್ಣ ಮುನ್ನುಡಿ ಹಾಗೂ ಶ್ರೀ ಕೆ.ಬಿ. ವೀರೇಶರ ವಿಚಾರ ಪೂರ್ಣ ಬೆನ್ನುಡಿ ಕೃತಿಯ ಮೆರುಗನ್ನು ಹೆಚ್ಚಿಸುವುದರ ಜೊತೆಗೆ ಓದುಗರಿಗೆ ಉತ್ತಮ ಪ್ರವೇಶಿಕೆಯನ್ನು ಒದಗಿಸಿವೆ. ಸು. ೫೦ ಜನ ಕವಿಗಳ ಕವನಗಳನ್ನು ಇಲ್ಲಿ ಸಂಕಲಿಸಲಾಗಿದ್ದು, ಒಟ್ಟು ೧೦೦ ಕವಿತೆಗಳನ್ನು ʼಆಯ್ದುಕೊಂಡು ಹೂಮಾಲೆ ಕಟ್ಟಿ ಕಲ್ಲು ತೇರಿಗೆ ಸಿಂಗರಿಸಲಾಗಿದೆʼ.
ʼಕಲ್ಲುತೇರಿನ ಕುಸುರಿʼ ಎಂಬ ಶೀರ್ಷಿಕೆಯೇ ಬಹಳಾ ಆಕರ್ಷಕವಾಗಿದೆ. ಹಂಪಿಯ ಪರಿಸರದಲ್ಲಿ ಬೆಳೆದ ಸಂಪಾದಕರು ಅದೇ ಹಂಪಿಯ ವಿಶ್ವ ಪ್ರಸಿದ್ಧ ಕಲ್ಲಿನ ತೇರನ್ನು ತಮ್ಮ ಕೃತಿ ಶೀರ್ಷಿಕೆಯಾಗಿ, ಮುಖ ಪುಟದ ಚಿತ್ರವಾಗಿ ಬಳಸಿರುವುದು ಸಹಜವೂ ಸುಂದರವೂ ಆಗಿದೆ. ಈ ಪ್ರೀತಿ ಮುಖ ಪುಟಕ್ಕೆ ಸೀಮಿತವಾಗದೇ ಕೃತಿಯ ಒಳ ಪುಟಗಳಲ್ಲಿಯೂ ಸಹಾ ʼಕಲ್ಲು ಕುಸುರಿ ನಗರʼ, ʼಕಲ್ಲುತೇರಿನ ಕುಸುರಿʼ, ʼಕಲ್ಲು ತೇರುʼ, ʼನಾ ಕಂಡ ಹಂಪಿʼ, ʼಹಂಪಿಯ ಮಡಿಲುʼ, ʼಕಲ್ಲು ಕಲ್ಲಿನಲ್ಲೂ ಸಾವಿರ ಸೊಲ್ಲುʼ, ʼಹೂವಾಗಿ ಅರಳಿತು ಕಲ್ಲುʼ, ʼಶಿಲೆ ಕಲೆಯ ಸೊಂಪುʼ ಮುಂತಾದ ಕವಿತೆಗಳಲ್ಲಿ ಒಡಮೂಡಿದೆ.
ಅಗ್ನಿ ಪುರಾಣದ ಒಂದು ಶ್ಲೋಕ ಕಾವ್ಯಾಭಿವ್ಯಕ್ತಿಯ ಮಹತ್ವವನ್ನು ಮುಂದಿನಂತೆ ವಿವರಿಸುತ್ತದೆ. “ನರತ್ವಂ ದುರ್ಲಭಂ ಲೋಕೇ ವಿದ್ಯಾತತ್ರಸುದುರ್ಲಭಾ/ ಕವಿತ್ವಂ ದುರ್ಲಭಂ ತತ್ರ ಶಕ್ತಿಸ್ತತ್ರಸುದುರ್ಲಭಾ// (ಲೋಕದಲ್ಲಿ ಮನುಷ್ಯನಾಗಿ ಜನಿಸುವುದು ದುರ್ಲಭ ಹೀಗಿರುವಾಗ ವಿದ್ಯೆಯನ್ನು ಸಂಪಾದಿಸುವುದು ಇನ್ನು ದುರ್ಲಭ, ಇದಕ್ಕಿಂತ ಕಠಿಣವಾದ್ದು ಕಾವ್ಯಶಕ್ತಿಯನ್ನು ಪಡೆಯುವುದು. ಇದೆಲ್ಲದಕ್ಕಿಂತ ಕಠಿಣ ಕಾವ್ಯದ ಸಹಜ ಅಭಿವ್ಯಕ್ತಿ) ಇಂತಹಾ ದುಲರ್ಭವಾದ ಕಾವ್ಯಾಭಿವ್ಯಕಿಯ ಶಕ್ತಿಯನ್ನು ಪಡೆದಿರುವ ೫೦ ಕವಿಮನಗಳ ಪ್ರತಿಭೆಯನ್ನು ಒಂದೇ ಕೃತಿಯಲ್ಲಿ ಹಿಡಿದಿಟ್ಟಿರುವ ಹಾಗೂ ಓದುಗರ ಮುಂದೆ ತೆರೆದಿಡುವ ಹೆಗ್ಗಳಿಕೆ ಈ ಕೃತಿಯದ್ದು.
ಶಕ್ತಿ ಕವಿ ರನ್ನ “ಕಟ್ಟಿಯಮೇನೋ ಮಾಲೆಗಾರನ ಪೊಸ ಬಾಸಿಗಂ ಮುಡಿವ ಭೋಗಿಗಳಿಲ್ಲದೆ ಬಾಡಿ ಪೋಗದೇ” ಎಂಬ ತನ್ನ ಮಾತಿನಲ್ಲಿ ಕವಿತಾಭಿವ್ಯಕ್ತಿಯ ಶಕ್ತಿಯನ್ನು ಒಂದು ಸುಂದರವಾದ ಹೂವಿನ ಮಾಲೆಗೆ ಹೋಲಿಸಿ, ಕಾವ್ಯ ಎಷ್ಟೇ ಸುಂದರವಾಗಿದ್ದರೂ ಅದನ್ನು ಮುಡಿಯುವವರಿಲ್ಲದ ಅಂದರೆ ಆಸ್ವಾದಿಸುವವರಿಲ್ಲದ ಪಕ್ಷದಲ್ಲಿ ಆ ಹಾರವು ಅಥವಾ ಕಾವ್ಯವು ಹಾಗೆಯೇ ವ್ಯರ್ಥವಾಗಿ ಬಾಡಿ ಹೋಗುವುದು ಎಂದು ಹೇಳಿರುವುದು ವರ್ತಮಾನದ ಸಂಧರ್ಭಕ್ಕೆ ಸೂಕ್ತವಾಗಿ ಹೊಂದುತ್ತದೆ.
ನಮ್ಮ ನಡುವೆ ಹಲವಾರು ಜನ ಕವಿಗಳು ಎಲೆಮರೆಯ ಕಾಯಿಗಳಂತೆ ಯಾರ ಕಣ್ಣಿಗೂ ಬೀಳದೇ ಬಹಳ ಅದ್ಬುತವಾದ ಸಾಹಿತ್ಯ ರಚನೆ ಮಾಡುತ್ತಿರುವುದನ್ನು ಕಾಣಬಹುದು. ಈ ಕೃತಿಯಲ್ಲಿ ಇಂತಹ ಕೆಲವು ಎಲೆ ಮರೆಯ ಪ್ರತಿಭೆಗಳ ಕವನಗಳು ಸೇರಿವೆ. ಇಂತಹ ಕವಿಗಳನ್ನು ಮತ್ತವರ ಕಾವ್ಯವನ್ನು ಜಗತ್ತಿಗೆ ಪರಿಚಯಿಸುವ, ಅವರ ಕಾವ್ಯಕ್ಕೆ ಸಾರ್ಥಕತೆಯನ್ನು ಒದಗಿಸುವ ಕೆಲಸವನ್ನು ಇಲ್ಲಿನ ಸಂಪಾದಕರು ಮಾಡಿರುವರು. ಹಲವಾರು ಜನ ಯುವ ಕವಿಗಳೂ ತಮ್ಮ ಕವಿತೆಗಳನ್ನು ಪ್ರಕಟಿಸಬೇಕೆಂಬ ಉತ್ಕಟವಾದ ವಾಂಚೆಯನ್ನು ಹೊಂದಿರುತ್ತಾರೆ. ಅಂತಹಾ ಯುವ ಬರಹಗಾರರ ಪ್ರತಿಭೆಗೆ ವೇದಿಕೆಯನ್ನು ಒದಗಿಸುವ, ಅವರನ್ನು ಜಗತ್ತಿಗೆ ಪರಿಚಯಿಸುವ ಕೆಲಸ ಬಹಳಾ ಮಹತ್ವದ್ದು ಇಂತಹ ಪುಣ್ಯದ ಕೆಲಸವನ್ನು ಕೈಗೊಂಡಿರುವ ಶ್ರೀ ವೆಂಕಟೇಶ ಬಿ ಕಮಲಾಪುರ ಅವರ ಮತ್ತು ಇತರೆ ಸಂಪಾದಕರ ಪ್ರಯತ್ನ ಅಭಿನಂದನಾರ್ಹವಾದದ್ದು.
ಕೃತಿಯ ಕವಿತೆಗಳನ್ನು ಗಮನಿಸುವುದಾದರೇ, ಯಶೋಧಾ ಭಟ್ಟರ ʼಕದʼ ಎಂಬ ಕವಿತೆ ಇದು ಮನೆಯೊಳಗೆ ʼಮನೆಯೊಡೆಯನಿದ್ದಾನೋ ಇಲ್ಲವೋʼ ಎಂಬ ವಚನವನ್ನು ನೆನಪಿಸುವಂತಿದೆ. ಇಲ್ಲಿ ʼಮನದ ಒಳಮನೆಯ ಕದವ ತೆರೆಯಬೇಕಿನ್ನು ಗಾಢಾಂಧಃಕಾರದಿ ಬೆಳಕ ತೂರಿಸಲುʼ ಎಂದು ಪ್ರಾರಂಭವಾಗುವ ಈ ಕವಿತೆ ನಮ್ಮ ಮನಸಿನ್ನ ಒಳ ಕದವನ್ನು ತೆರೆಯಬೇಕಾಗಿದೆ, ತೆರೆದು ಅಲ್ಲಿ ತುಂಬಿರುವ ಅಜ್ಞಾನದ ತಮವನ್ನು ಓಡಿಸಿ ಜ್ಞಾನದ ಪ್ರಭೆಯನ್ನು ಒಳಗೆ ಹರಿಸಿ ಆ ಮೂಲಕ ಕಳವಳ, ನರಳುವಿಕೆ, ದುಗುಡ ದುಮ್ಮಾನಗಳನ್ನು ಕಳೆದು ಜೀವನ ಗರಿಬಿಚ್ಚಿ ನವಿಲಿನಂತೆ ಆನಂದದಿಂದ ನಲಿಯುವಂತೆ ಕುಣಿಯಬೇಕು ಎನ್ನುತದೆ. ಕವಿತೆಯ ಮೊದಲ ಸಾಲಿನ ʼಮನದ ಒಳಮನೆಯ ಕದʼ ಎಂಬ ಪ್ರಯೋಗ ಮನಸ್ಸಿನ ಅಗಾಧತೆ ವ್ಯಕ್ತಮಾಡಿದೆ. ಮೇಲ್ನೋಟಕ್ಕೆ ಇದೊಂದು ಸರಳ ಕವಿತೆಯಾಗಿ ಕಂಡರೂ ಆಳವಾದ ಆಧ್ಯಾತ್ಮಿಕ ಸ್ಪರ್ಶ ಇದರಲ್ಲಿದೆ. ಅಂತರಂಗ – ಬಹಿರಂಗ, ಒಳಮನೆ – ಹೊರ ಮನೆ, ಜ್ಞಾನ – ಅಜ್ಞಾನ, ಬೆಳಕು – ಅಂಧಕಾರ, ಕಳವಳ, ನರಳುವಿಕೆ – ಆನಂದ ಮುಂತಾದ ಪದಗಳ ಬಳಕೆ ಈ ಕವಿತೆಗೊಂದು ಆಳವಾದ ಮತ್ತು ವಿಸ್ತಾರವಾದ ನೋಟಕ್ರಮವನ್ನು ಒದಗಿಸಿರುವ ಕವಿತೆ ಒಂದು ಸರಳ ತತ್ತ್ವಪದದ ಲಕ್ಷಣವನ್ನು ಒಳಗೊಂಡದ್ದಾಗಿದೆ. ಇವರದೇ ಮತ್ತೊಂದು ಕವಿತೆ ʼತಿರುವುಗಳುʼ ಇದರಲ್ಲಿ ನಮ್ಮ ಬದುಕಿನ ಪಲ್ಲಟಗಳ ಕುರಿತಾದ ಆತಂಕಗಳನ್ನು ವ್ಯಕ್ತಮಾಡುತ್ತಲೇ, ಅದಕ್ಕೆ ಹೊಂದಿಕೊಂಡೇ ಸತ್ಯ ಮಾರ್ಗದಲ್ಲಿ ನಡೆಯಬೇಕೆಂಬ ಸಂದೇಶ ಅಡಗಿದೆ. ಹಸಿರ ಸಿರಿಯ ಮನೆಯಿಂದ ಬಯಲ ಕಾಂಕ್ರೀಟ್ ಕಾಡಿಗೆ, ಇಂತಹಾ ತಿರುವುಗಳ ನಡುವೆಯೇ, ಬಾಳ ಬಂಡಿ ಸಾಗುತ್ತಿರುವ ಮತ್ತು ಸಾಗಬೇಕಾಗಿರುವ ಅನಿವಾರ್ಯತೆಯನ್ನು ಇಂತಹಾ ಅನಿವಾರ್ಯ ಸಂಧರ್ಭದಲ್ಲಿಯೂ ಸತ್ಪಥವನ್ನು ಬಿಡದೆ ನಡೆಯುವ ಛಲವನ್ನು ಈ ಕವಿತೆ ಆಶಿಸುತ್ತದೆ.
ರವಿ ದಳವಾಯಿಯವರ ʼಬಡವನ ಹಸಿವುʼ ಎಂಬ ಕವಿತೆಯಲ್ಲಿ ಇಂದಿನ ಬಡವ/ಕಾರ್ಮಿಕರು, ಊಟಕ್ಕಾಗಿ ನಗರಗಳಿಗೆ ವಲಸೆ ಬಂದು ಪಡುವ ಕಷ್ಟ, ಬಡತನ, ಹಸಿವು, ಕರೋನಾ ಕಾಲದಲ್ಲಿ ಅವರು ಅನುಭವಿಸಿದ ವೇದನೆ ಇವುಗಳನ್ನು ಬಹಳ ಸರಳ ಪದಗಳ ಮೂಲಕ ಅಷ್ಟೇ ತೀವ್ರವಾಗಿ ಮನಸ್ಸಿಗೆ ನಾಟುವಂತೆ ವಿವರಿಸಲ್ಪಟ್ಟಿದೆ. ಮನೆಯಿಲ್ಲದ ಕಟ್ಟಡ ಕಾರ್ಮಿಕರು, ತಮ್ಮ ಊಟಕ್ಕಾಗಿ ಪರದಾಡುವ ರೈತರು, ಸರಿಯಾದ ಬಟ್ಟೆಯಿಲ್ಲದ ನೇಕಾರರು ಮುಂತಾದವರು ಇಂದಿಗೂ ಇರುವ ನಮ್ಮ ದೇಶದಲ್ಲಿ ಕೋವಿಡ್ -೧೯ ವೈರಸ್ ನಿಂದ ಭಾದೆಗೊಳಗಾದವರು ಒಂದು ಕಡೆ ಆದರೆ, ಲಾಕ್ ಡೌನ್ ನ ಕಾರಣದಿಂದ ಕೆಲಸವಿಲ್ಲದೇ, ಸಂಪಾದನೆ ಇಲ್ಲದೆ, ಊಟಕ್ಕಾಗಿ ಕಷ್ಟಪಟ್ಟವರು ಮತ್ತೊಂದು ಕಡೆ. ಇಂತಹ ಕಾರ್ಮಿಕರ ಹಸಿವಿನ ಬವಣೆಯನ್ನು ನಮ್ಮ ಕಣ್ಣ ಮುಂದೆ ತರುತ್ತದೆ ಈ ಕವಿತೆ.
ಶ್ರೀಮತಿ ಅನ್ನಪೂರ್ಣ ಹಿರೇಮಠರ ʼನೀನಿಲ್ಲದ ಹುಣ್ಣಿಮೆʼ ಎಂಬ ಒಂದು ಕವಿತೆ ಜಯಂತ್ ಕಾಯ್ಕಿಣಿಯವರ ಈ ಸಂಜೆ ಯಾಕಾಗಿದೆ…. ಎಂಬ ಸುಂದರ ಕವಿತೆಯನ್ನು ನೆನಪಿಸುತ್ತದೆ. ಹುಣ್ಣಿಮೆಯ ರಾತ್ರಿಯ ಸೊಬಗನ್ನು ಈ ಕವಿತೆ ವಿವರಿಸುತ್ತಲೇ ಆ ರಾತ್ರಿಯ ಸುಂದರ ವಾತಾವರಣ ಕವಯತ್ರಿಗೆ ಸೌಂದರ್ಯಾನುಭವವನ್ನು ಕೊಡುವ ಬದಲು ವೇದನೆಯ ರಾತ್ರಿಯಾಗಿ ಪರಿಣಮಿಸಿರುವ ಚಿತ್ರಣ ಇಲ್ಲಿದೆ. ವಾತವರಣ, ಸಂಪತ್ತು ಇತ್ಯಾದಿಗಳು ಎಷ್ಟೇ ಇದ್ದರೂ ಮನಸಿಗೆ ಬೇಕಾದವರ ಸನಿಹ, ಅಪ್ಪುಗೆಗಳಿಲ್ಲದೆ ಹೋದ ಮೇಲೆ ಇವೆಲ್ಲವೂ ವ್ಯರ್ಥವೇ ಎಂಬುದನ್ನು ಕವಿತೆ ಬಹಳ ಚನ್ನಾಗಿ ಧ್ವನಿಸಿದೆ.
ಬಡಿಗೇರ ಮೌನೇಶರ ʼಮನಸು ನದಿಯಾಗಬೇಕುʼ ಎಂಬ ಒಂದು ಕವಿತೆಯಲ್ಲಿ ಕವಿ ಮನಸ್ಸು ನದಿಯಾಗಬೇಕು, ಆ ಮೂಲಕ ಅನಿಷ್ಟಗಳನ್ನು ಕೊಚ್ಚಿ, ನಾರುತಿರುವ ಕೊಳೆಯನ್ನು ತೊಳೆದು, ಜಡವಾಗಿ ಹಿಂಡುತ್ತಿರುವ ಬೇಡದ ನೆನಪುಗಳ ತೊಳೆದು, ಹೊಸ ಬರವಸೆಗಳ ಹೊತ್ತು ತರುವ, ಬರಡು ಹೃದಯದೊಳಗೆ ಶಾಂತಿ, ಸೌಹಾರ್ದತೆಯ ಹಸಿರು ಚಿಗುರುವಂತೆ ಮಾಡುವ ನದಿಜಲದಂತೆ ಮನಸ್ಸು ನದಿಯಾಗಿ ಹರಿಯಬೇಕುಎಂದು ಕವಿತೆ ಆಶಿಸುತ್ತೆ. ಇವರದೇ ಮತ್ತೊಂದು ಕವಿತೆ ʼಮರಳಿ ಬರಲಾರ ಅಪ್ಪʼ ಇದು ತನ್ನ ಕಂದೆಯೊಂದಿಗೆ ಮಗುವೊಂದು ಕಳೆದುಕೊಳ್ಳಬದುದಾದ ಸುಖವನ್ನು ಭಾವನಾತ್ಮಕತೆಯನ್ನು ವಿತ್ರಿಸುತ್ತಲೇ, ಮರಳಿ ಬರಲಾರದ ತಂದೆಯ ಕುರಿತ ಪ್ರೀತಿ ಮತ್ತು ಆವೇದನಾ ಮಿಶ್ರಿತ ಕೋಪ ವ್ಯಕ್ತಮಾಡುವ ರೀತಿ ಬಹಳ ವಿಶಿಷ್ಟವಾಗಿ ಮೂಡಿಬಂದಿದೆ.
ಶ್ರೀ ಗುರುನಾಥ ಬೋರಗಿಯವರ ʼಏಕೆʼ ಎಂಬ ಕವನ ಮಾನವನ ಚೇಷ್ಟೆಯ ಬುದ್ದಿಯನ್ನು, ಮಗುವನ್ನು ಚಿವುಟು ತೊಟ್ಟಿಲು ತೂಗುವ ಗುಣವನ್ನು ವಿಡಂಬಿಸುತ್ತಲೇ, ನಾವೇ ಮಾಡಿಕೊಂಡ ಇಕಟ್ಟುಗಳು ನಮನ್ನು ಬಂಧಿಸುವ ರೀತಿಯನ್ನು ಕವಿ ʼಇಳಿದು ಕೊಳೆಯ ರಾಡಿʼ, ʼಸಸಿಯ ಚಿಗುರನು ಚಿವುಟಿʼ, ಮುಂತಾದ ರೂಪಕಗಳ ಮೂಲಕ ವಿವರಿಸಿದ್ದಾರೆ. ʼಕಂಡುಂಡವರುʼ ಎಂಬ ಕವಿತೆಯಲ್ಲಿ ಕನಸು ಕಾಣುವುದರಲ್ಲಿಯೇ ನಮ್ಮ ಜೀವನವೆಲ್ಲಾ ಕಳೆದುಹೋಗುವ, ಇರುವುದರಲ್ಲಿ ತೃಪ್ತಿ ಪಡದೇ, ಹೊಸದಕ್ಕಾಗಿ ಹಂಬಲಿಸುತ್ತಾ ನಮ್ಮನ್ನು ನಾವು ಅದಕ್ಕೆ ಮಾರಿಕೊಳ್ಳುವ ದಿಕ್ಕೆಟ್ಟು ನಿಲ್ಲುವ ಪರಿಸ್ಥಿತಿಯನ್ನು ಬಹಳ ಅರ್ಥಪೂರ್ಣವಾಗಿ ಕವಿ ವೆಂಕಟೇಶ್ ಈಡಿಗರರು ವಿವರಿಸಿದ್ದಾರೆ.
ಶ್ರೀ ವೆಂಕಟೇಶ್ ಬಿ ಕಮಲಾಪುರ ಅವರ ʼಕಾರುಣ್ಯ ಶಿಶು ನೇಗಿಲ ರೈತʼ ಕವಿತೆಯು ಕಾರುಣ್ಯವನ್ನೇ ತನ್ನ ಒಡಲಲ್ಲಿ ತುಂಬಿಕೊಂಡಿರುವ, ಶಿಶುವಿನಂತ ಮುಗ್ಧ ಮನಸ್ಸಿನ ರೈತನ ತ್ಯಾಗವನ್ನು ಅವನ ಕಾಯಕ ನಿಷ್ಠೆಯನ್ನು ವರ್ಣಿಸುತ್ತಾ ರೈತನಿಗೆ ಮನಃಪೂರ್ವಕವಾಗಿ ನಮನಗಳನ್ನು ತಿಳಿಸುವುದು.
ಆದಿಕಾಲಂದಲೂ ಪಂಪನಿಂದ ರಾಘವಾಂಕ ಮೊದಲವರನ್ನೊಳಗೊಂಡು ಇತ್ತೀಚಿನ ವರೆಗೆ ಕುಲದ ಪ್ರಶ್ನೆ ಕನ್ನಡ ಸಾಹಿತ್ಯದಲ್ಲಿ ಚರ್ಚೆಗೆ ಒಳಗಾಗುತ್ತಲೇ ಬಂದಿದೆ. ಇದೇ ಪ್ರಶ್ನೆ ಕೆ. ಬಿ. ವೀರೇಶರ ʼಮರೆತವರ ಮೆಲು ದನಿʼ ಕವಿತೆಯಲ್ಲಿ ಹೊಸ ರೂಪದೊಂದಿಗೆ ವ್ಯಕ್ತವಾಗಿದೆ. ಗದ್ದೆಯ ಕೆಸರು ಅಂಟಿದ ಬಟ್ಟೆಗಳು, ಗ್ರೀಸ್ ಆಯಿಲ್ ಅಂಟಿದ ಗ್ಯಾರೇಜ್ ಕೆಲಸಗಾರರ ದಿರಿಸು, ತರಕಾರಿ ಮಾರುವ ಹೆಂಗಸಿನ ಸೀರೆ, ಬೇಡಿ ತಿನ್ನುವವರ ಹರಿದ ಬಟ್ಟೆಗಳನ್ನು ಆಯಾ ಸಮುದಾಯದ ಅಥವಾ ವೃತ್ತಿಯವರ ಪ್ರತಿನಿಧಿಗಳಾಗಿಸಿ ಅವರ್ಯಾರಿಗೂ ಇಲ್ಲದ ಕುಲದ ಕೀಳು ಮೇಲುಗಳು ಇವನ್ನು ಉಪಭೋಗಿಸುವ/ ಅವುಗಳಿಂದಲೇ ಜೀವನ ಸಾಗಿಸುವ ನಿನಗೇಕೆ ಎಂದು ಪ್ರಶ್ನಿಸುವುದು ಓದುಗನನ್ನು ಆಕರ್ಷಿಸುವ ಮತ್ತು ಚಿಂತನೆಗೆ ಹಚ್ಚುವ ಕೆಲಸವನ್ನು ಮಾಡುತ್ತದೆ.
ʼವನವಾಸʼ ಎಂಬ ಶೀರ್ಷಿಕೆಯ ಕಟ್ಟೆ ಎಂ.ಎನ್. ಕೃಷ್ಣಸ್ವಾಮಿಯವರ ಕವಿತೆಯಲ್ಲಿ ಪೌರಾಣಿಕ ಪಾತ್ರಗಳ ಮೂಲಕ ವನವಾಸವನ್ನು, ವನವಾಸದಿಂದ ವಿಕಾಸವಾದ ಪಾಂಡವರ ಬದುಕನ್ನು ಅಹಂಕಾರದಿಂದ ಬೀಗಿ ಮಣ್ಣಾದ ಕೌರವರನ್ನು ಚಿತ್ರಿಸುತ್ತ ನಿರಹಂಕಾರ, ಸತ್ಯ, ಪ್ರೀತಿ ಧರ್ಮಗಳ ಮಹತ್ವವನ್ನು ಈ ಕವಿತೆಯಲ್ಲಿ ವಿವರಿಸಲಾಗಿದೆ. ವಿರೂಪಾಕ್ಷಪ್ಪ ಯು. ಹೊಸಪೇಟೆಯವರ ʼಕುಲಪೂಜೆʼ ಎಂಬ ಮತ್ತೊಂದು ಕವಿತೆ ತಮ್ಮ ತಮ್ಮ ಕಾಯಕದಲ್ಲಿಯೇ ದೇವರನ್ನು, ಪೂಜೆಯನ್ನು, ಕೈಲಾಸವನ್ನು ಕಾಣುವ ಹಲವು ವೈವಿಧ್ಯಮಯ ವೃತ್ತಿಗಳನ್ನು, ಹಾಗೆ ನಮ್ಮ ಕೆಲಸದಲ್ಲಿ ದೇವರನ್ನು ಕಾಣುವುದರ ಮಹತ್ವ ಮತ್ತು ಅದರ ಅವಶ್ಯಕತೆ, ಅನಿವಾರ್ಯತೆಯನ್ನು ವೈಚಾರಿಕವಾಗಿ ಚರ್ಚೆಗೆ ಒಳಪಡಿಸಿದೆ.
ʼಎಲ್ಲರೂ ಸಮಾನರುʼ ಎಂಬ ಲೊಕೇಶ್ ಕಲ್ಕುಣಿಯವರ ಕವಿತೆ ಎಲ್ಲರೂ ಸಮಾನರು ʼಎನ್ನುವ ತತ್ತ್ವಕ್ಕೆ ಶ್ರೀ ಗಂಧವ ಲೇಪಿಸುʼ ಎನ್ನುವ ಮೂಲಕ ಎಲ್ಲರೂ ಸಮಾನರು ಎಂಬುದನ್ನು ಪ್ರತಿಪಾದಿಸುವುದು. ಎ.ಎನ್.ರಮೇಶ್ ಗುಬ್ಬಿಯವರ ʼಅಭಿನಂದನೆʼ ಎಂಬ ಕವಿತೆಯಲ್ಲಿ ನಮ್ಮ ಜೀವನದಲ್ಲಿ ನಮಗೆ ಬದುಕು ಕಲಿಸಿದ ಕಷ್ಟಗಳನ್ನು, ಒಳ್ಳೆಯದರ, ಒಳ್ಳೆಯವರ ಮಹತ್ವವನ್ನು ತಿಳಿಸಿದ ಕೆಟ್ಟ, ಕೆಟ್ಟವರನ್ನು ಅಲ್ಲದೆ ಇನ್ನು ಹಲವು ಹಿತ -ಅಹಿತಗಳನ್ನು ನೆನಸಿಕೊಂಡು ಅವುಗಳಿಗೆ ಅಭಿನಂದನೆ ಸಲ್ಲಿಸುವುದು ವಿಶೇಷವೆನಿಸುತ್ತದೆ. ಒಬ್ಬ ಮಾನವನನ್ನ ಪಕ್ವಗೊಳಿಸಲು ಕಷ್ಟ -ಸುಖ, ನೋವು- ನಲಿವು ಇತ್ಯಾದಿಗಳು ಬೇಕೆ ಬೇಕು ಕೆಲವು ನಮಗೆ ಆ ಕ್ಷಣಕ್ಕೆ ಸಂತಸವನ್ನು ನೀಡದೆ ಇದ್ದರೂ ಸಹಾ ಜೀವನದ ಪಾಠವನ್ನಂತು ತಪ್ಪದೇ ಕಲಿಸುತ್ತವೆ. ಈ ಹಿನ್ನೆಲೆಯಲ್ಲಿ ಮಾನವನು ತನಗೆ ಒದಗಿದ ಕಷ್ಟಗಳನ್ನು, ಅಹಿತಕತ ಅನುಭವಗಳನ್ನು ಸಹಾ ಸಮತಾ ದೃಷ್ಠಿಯಿಂದ ಸ್ವೀಕರಿಸಬೇಕೆನ್ನುವ ಆಶಯ ಈ ಕವಿತೆಯಲ್ಲಿ ಅಡಗಿದೆ. ಇವುಗಳ ಜೊತೆಗೆ ʼಜ್ಞಾನದ ಹಣತೆʼ, ʼವಿಪರ್ಯಾಸʼ, ʼದೀಪಾವಳಿʼ, ʼಅರಳುವ ಹೂಗಳುʼ ಸೇರಿದಂತೆ ಹಲವಾರು ವಿಚಾರಪೂರ್ಣ, ವೈವಿಧ್ಯಪೂರ್ಣ ಕವಿತೆಗಳನ್ನು ಈ ಕೃತಿ ಒಳಗೊಂಡಿದೆ. ಸಹೃದಯರು ಪುಸ್ತಕವನ್ನು ಕೊಂಡು ಓದಿ ಬರಹಗಾರರನ್ನು ಪ್ರೋತ್ಸಾಹಿಸಬೇಕೆಂದು ಕೋರುವೆ. ನಮಸ್ಕಾರಗಳು.
(ಪುಸ್ತಕದ ಹೆಸರು : ಕಲ್ಲು ತೇರಿನ ಕುಸುರಿ
ಪ್ರಧಾನ ಸಂಪಾದಕರು : ಶ್ರೀ ವೆಂಕಟೇಶ ಬಿ. ಕಮಲಾಪುರ ಪ್ರಕಾಶಕರು : ಶ್ರಾವ್ಯ ಪ್ರಕಾಶನ, ಬಳ್ಳಾರಿ.
ಪುಟಗಳು : ೧೨೮, ಬೆಲೆ : ೧೨೫. ಪ್ರತಿಗಳಿಗಾಗಿ ಸಂಪರ್ಕಿಸಿ : ೯೪೪೮೩೩೦೫೩೫)
ವಿಚಾರ ಮಂಟಪ ಸಾಹಿತ್ಯ ಬಳಗ – ಕರ್ನಾಟಕ.
# ೯೪೪೮೨೪೧೪೫೦
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
"ಕಲ್ಲು ತೇರಿನ ಕುಸುರಿ"ಕೃತಿಯ ಮುಖಪರಿಯ ಕೃತಿಯ ಕುರಿತಾದ ಆಸಕ್ತಿಯನ್ನು ಇಮ್ಮಡಿಗೊಳಿಸಿದೆ.
ಪ್ರತ್ಯುತ್ತರಅಳಿಸಿ