ನೀನಿರ ಬೇಕು ನನ್ನ ಬಳಿ
ನಾನಿರ ಬೇಕು
ನಿನ್ನ ತೋಳ್ತೆಕ್ಕೆಯಲಿ
ಪ್ರೀತಿ ಪ್ರೇಮಕ್ಕಾಗಿ ಅಲ್ಲ
ಸರಸಕ್ಕಂತು ಅಲ್ಲವೇ ಅಲ್ಲ
ನನ್ನ ನಿನ್ನ ಉಸಿರುಗಳು
ಮೇಳೈಸಲು
ನಿನ್ನ ಬೆರಳುಗಳು
ನನ್ಮುಂಗುರುಳಿನಲಿ
ಮೆರವಣಿಗೆಯಾಗಲು
ನಿನ್ನ ಹೃದಯ ಬಡಿತವ
ನಾ ಅರಿಯಲು
ನಿನ್ನ ಬಗೆಗಿನ
ನನ್ನ ತುಡಿತವ
ನೀ ತಿಳಿಯಲು
ಒಬ್ಬರಿಗೊಬ್ಬರು
ನಾವಿಬ್ಬರೂ ಎಂದು
ನಾವೀರರ್ವರೂ
ಎಂಬ ಬಿಸುಪ
ಅನುಭವಿಸಲು
ಪ್ರೇಮ ಕಾಮಕ್ಕೂ
ಮೀರಿದ ಮಧುರಾತಿ
ಮಧುರ
ಅನುಭೂತಿಯಾಗಲು
ನಾನೇ ನೀನಾಗಲು
ನೀನು ನಾನೇ
ಆಗಲು
ಆಗಿರಲು
ಆಗುತ್ತಲೇ ಇರಲು
ಜಂಗಮವಾಗಲು
ಸ್ಥಾವರವಾಗಲು
ಒಬ್ಬರಲ್ಲಿ
ಮತ್ತೊಬ್ಬರು
ಐಕ್ಯವಾಗಲು
ನಾವಿರಬೇಕು
ನಮ್ಮಿಬ್ಬರ
ಜೊತೆಯಲ್ಲಿ
ಸಂಗದಲಿ
ನಿರಂತರ
ನಿರಾಕಾರ
ಅನವರತ.
- ಜ್ಯೋತಿ ಕುಮಾರ್.ಎಂ(ಜೆ.ಕೆ.).