ಪ್ರೀತಿಯೆಂದರೆ ಒಲವಿನ ಆರ್ದತೆಯು
ಪ್ರತಿಧ್ವನಿಸುವ ಮೋಹಕ ಚೆಲುವ ಸುಧೆಯು
ಪ್ರತಿಷ್ಠಾಪಿಸಿದ ಜೀವಕ್ಕೆ ಪ್ರೇಮದ ಸಿಂಚನವು
ಪ್ರತಿರೋಧಿಸದ ಭಾವೋತ್ಕರ್ಷದ ವೈಚಿತ್ರ್ಯವು
ಅಕ್ಷರದಲ್ಲಿ ಬರೆಯಲಾಗದ ನವೀನ ಕಾವ್ಯವು
ಅಕ್ಷಿಯಲ್ಲಿ ಅಕ್ಷಯವಾದ ನಿಜ ಬಂಧುರವು
ಸಾಕ್ಷಿಯಾಗಿದೆ ಜೇನ ಸ್ರವಿಸುವ ಅಧರವು
ಪ್ರಕ್ಷೋಭಿತ ಚಿತ್ತಕ್ಕೆ ಹೆಗಲಾದ ಸಾಂಗತ್ಯವು
ಧರಣಿ ಕಾದದಂತೆ ವರುಣನ ನಲ್ಮೆಯ ಪ್ರೀತಿಗೆ
ಧಾರಣಿಯ ಉಸಿರಾಟದ ಏರಿಳಿತದ ಧಾಟಿಗೆ
ಕನಸಿನ ಮೋಡ ವರ್ಣಚಿತ್ತಾರದಿ ಮೂಡಿದೆ
ಮನಸಿನ ಮುಂಗಾರು ಎದೆಯ ತಂತಿ ಮೀಟಿದೆ
ಚಿತ್ರಿಸಿದೆ ಚಿತ್ರವನು ಆಗಸದಿ ಕಾಮನಬಿಲ್ಲಂತೆ
ಚಿತ್ತ ಚೋರನ ಉಸಿರು ಚೆಲುವೆಯಲಿ ಬೆರೆತಂತೆ
ಪ್ರೇಮದುಸಿರಿಗೆ ವರ್ಷಧಾರೆಯ ಸಿಂಚನವು
ಪ್ರೇಮದಂತರ್ಜಲವಾಗಿದ ಬತ್ತದ ಸಂಭ್ರಮವು
ಮಧುರನಾದ ನಭಕ್ಕೂ ಆಸೆಯಲಿ ಲಗ್ಗೆಯಿಟ್ಟಂತೆ
ಮಾಧುರ್ಯದ ಜೇನ ಚೆಂದುಟಿಯು ಸವಿದಂತೆ
ವೃಷ್ಟಿಯ ಸ್ಪರ್ಶಕ್ಕೆ ಹೊಮ್ಮಿದ ಸೌರಭವು
ಸೃಷ್ಟಿಯ ನಿಯಮಕೆ ಉದ್ಗರಿಸಿದ ಭಾವವು
ತನುವಲಹರಿಗೆ ಸ್ಫರಿಸಿದ ಅವ್ಯಕ್ತ ಮಾರ್ದನಿ
ತನ್ನವಳ ಪ್ರೇಮಕೆ ಬಾಗಿದ ಸೋನೆಯ ಇನಿದನಿ
ನಿಲ್ಲದಿರಲಿ ಮತ್ತಿನಲಿ ನೆನೆಸುವ ವರ್ಷಧಾರೆಯು
ನಲ್ಲನೊಲವಲಿ ಕರಗಿಸಿತು ಸುರಿದ ಮಳೆಯು
- ಡಾ.ಕಲ್ಪನಾ ಡಿ.ಎನ್.,ಬೆಂಗಳೂರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ