ಶುಕ್ರವಾರ, ಫೆಬ್ರವರಿ 2, 2024

ಬೆಳಗು (ಕವಿತೆ) - ಮಾಲತಿ ಮೇಲ್ಕೋಟೆ.

ನಸುಕನ್ನು ಸರಿಸುತ್ತ ರವಿಯು ಮೂಡುತಲಿರಲು
ಮೂಡಣದ ಆಗಸದಿ ರಂಗು ತುಂಬಿರಲು
ಅನುಪಮ ಚೆಲುವಿನಲಿ ಪ್ರಕೃತಿ ಮೀಯುತಲಿರಲು
ಅರುಣ ಕಾಂತಿಯ ರಂಗು ಕಣ್ತುಂಬುತಿರಲು

ಇಬ್ಬನಿಯ ಸಾಲು ಹಸಿರು ಹುಲ್ಲಿನ ಮೇಲೆ
ಕಿರಣದಲಿ ಹೊಳೆಯುತಿದೆ ಮುತ್ತಿನಾ ಮಾಲೆ
ಅಚ್ಚರಿಯ ಮೊಗದಲ್ಲಿ ಸೂಸುತ್ತ ಬಾಲೆ
ಎಣಿಸಿಹಳು ಏನಿದುವು ಪ್ರಕೃತಿಯಾ ಲೀಲೆ

ಚೇತನವ ಪಡೆದಿರಲು ಜೀವಸಂಕುಲವು
ಮೂಡುತಿದೆ ಮತ್ತೊಂದು ಹೊಸತು ದಿನವು
ಹಕ್ಕಿಗಳ ಚಿಲಿಪಿಲಿಯ ಸಂಭ್ರಮೋತ್ಸವವು
ಪಸರಿಸಿದೆ ಸಂಪಿಗೆಯ ಹೂವ ಪರಿಮಳವು

ಇಕ್ಕೆಲದಿ ನೆಳಲೀವ ಹಸಿರು ಮರಗಳ ಸಾಲು
ಎಲೆಗಳಾ ನಡುವಲ್ಲಿ ತೂರಿ ಬಿಸಿಲಿನ ಕೋಲು
ಪ್ರೀತಿಯಲಿ ಇಳೆಯನ್ನು ಮುತ್ತಿಡುತಲಿರಲು
ಭೂರಮಣಿ ಮೊಗದಲ್ಲಿ ಸಂತಸದ ಹೊನಲು

- ಮಾಲತಿ ಮೇಲ್ಕೋಟೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಬೆಳಗು...

ಕವನ     ಬೆಳಗು ಬೆಳಗು ಬಾ ಬೆಳಕು ಬೆಳದಿಂಗಳ ಬೆಳಕು ಚೆಲ್ಲುತ ರಂಗು ರಂಗಿನ ಕಾಮನಬಿಲ್ಲಿನಂತೆ ಮಿನು ಮಿನುಗುವ ಬೆಳ್ಳಿಚುಕ್ಕಿಯಂತೆ ರಂಗು ರಂಗಿನ ರಂಗೋಲಿಯಂತ...