ಬುಧವಾರ, ಆಗಸ್ಟ್ 13, 2025

ಕವಿತೆ

ಇರುವ ಬದುಕನ್ನು
ಚೆನ್ನಾಗಿ ಬದುಕಬೇಕೆನಿಸಿದೆ!
ಮಗಳಿಗಿಷ್ಟು ತಲೆಬಾಚಿ
ಮಗನೊಂದಿಗೆ ಕತೆಯಾಗಿ
ಬದುಕುವುದೆಂದರೆ ಇದೇ ತಾನೆ?

ಇರುವ ಬದುಕಲ್ಲಿ
ತುಂಬಿ ಜೀವಿಸಬೇಕೆನಿಸಿದೆ!
ಅವ್ವಳಿಗೊಂದು ಎಲೆಯಡಿಕೆ ಕೊಟ್ಟು
ಅಣ್ಣನಿಗೊಂದಿಷ್ಟು ಚೌರ ಮಾಡಿ
ಬದುಕುವುದೆಂದರೆ ಇದೇ ತಾನೆ?

ಇರುವ ಬದುಕಿಗಿಷ್ಟು
ಬದ್ಧನಾಗಬೇಕೆನಿಸಿದೆ!
ಶಾಲೆಯಲಿಷ್ಟು ಪಾಠ ಮಾಡಿ
ಆಟೋಟಗಳಲಿ ನಕ್ಕು ನಲಿದು
ಬದುಕುವುದೆಂದರೆ ಇದೇ ತಾನೆ?

ಇರುವ ಬದುಕನ್ನೆಲ್ಲ
ಹಾಸಿ ಹೊದೆಯಬೇಕೆನಿಸಿದೆ!
ಸೋಲುವಷ್ಟು ನಡೆ ನಡೆದು
ಬರಿಗಣ್ಣಿನಲೆ ಕಂಡುದುಂಡು
ಬದುಕುವುದೆಂದರೆ ಇದೇ ತಾನೆ?

ಇರುವ ಬದುಕನಿಷ್ಟು
ಪ್ರೀತಿಸಬೇಕೆನಿಸಿದೆ!
ಮಡದಿಯಲಿ ಮಗುವಾಗಿ
ಗೆಳೆಯರೊಳಗೆ ಬಂಧುವಾಗಿ
ಬದುಕುವುದೆಂದರೆ ಇದೇ ತಾನೆ?

ಇರುವ ಬದುಕಲಿಷ್ಟು
ಸುಮ್ಮನೆ ಬಾಳಬೇಕೆನಿಸಿದೆ!
ಏನನೂ ಸಾಧಿಸದೆ! ಮತ್ತೇನಕೂ ತಹತಹಿಸದೆ!
ಬದುದನುಂಡು ಸವಿಯಬೇಕೆನಿಸಿದೆ
ಬದುಕುವುದೆಂದರೆ ಇದೇ ತಾನೆ?
~ ಅರಬಗಟ್ಟೆ ಅಣ್ಣಪ್ಪ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಬೆಳಗು...

ಕವನ     ಬೆಳಗು ಬೆಳಗು ಬಾ ಬೆಳಕು ಬೆಳದಿಂಗಳ ಬೆಳಕು ಚೆಲ್ಲುತ ರಂಗು ರಂಗಿನ ಕಾಮನಬಿಲ್ಲಿನಂತೆ ಮಿನು ಮಿನುಗುವ ಬೆಳ್ಳಿಚುಕ್ಕಿಯಂತೆ ರಂಗು ರಂಗಿನ ರಂಗೋಲಿಯಂತ...