ಸೋಮವಾರ, ಜೂನ್ 28, 2021

ಗಜಲ್ - ಶ್ರೀಮತಿ ಗಿರಿಜಾ ಮಾಲಿ ಪಾಟೀಲ

*ಗಜಲ್*
ಉಸಿರಿನೇರಿಳಿತದಲಿ ನಿನ್ನೆಸರ ಹೇಳುತಲಿ ನಿನಗಾಗಿ ಕಾದಿರುವೆ ನೀ ಬಾರೆಯಾ
ಮೌನ ಧ್ಯಾನದ ಈ ವಿರಹ ವೇದನೆಯಲಿ ನಿನಗಾಗಿ ಕಾದಿರುವೆ ನೀ ಬಾರೆಯಾ

ಊರ್ವಿಯ ಸಹನೆಯೊಳು ಉರ್ಮಿಳೆಯು ಕಾದಿಹಳು ನಿನ್ನದೇ ಧ್ಯಾನದೊಳು ಘೋರ ತಪವು
ಕಾತರಿಸಿ ಕಳವಳಿಸಿ ನಿನ್ನದೇ ನೆಪಿನಲಿ ನಿನಗಾಗಿ ಕಾದಿರುವೆ ನೀ ಬಾರೆಯಾ

ಬಾಳ ಕಗ್ಗತ್ತಲ ಕರಾಳ ಕಾನದಿ ಕರ ಹಿಡಿದ ರಾಘವನು ಜಾನಕಿಗೆ ಜೊತೆಯಾದನು
ಯಾವ ಜನ್ಮದ ಪಾಪಕೀ ಶೀಕ್ಷೆ ಏಕಾಂತದಲಿ ನಿನಗಾಗಿ ಕಾದಿರುವೆ ನೀ ಬಾರೆಯಾ

ಮನದ ವ್ಯಾಕುಲತೆ ಅರಿಯವುದಿರಲಿ ರಾಮ ನನ್ನತ್ತ ಕಣ್ಣೂ ಹಾಯಿಸಲಿಲ್ಲ
ರಘುಕುಲ ತಿಲಕ ನೀಡಿದ ನೋವಿನಲಿ ಬೇಯುತಲಿ ನಿನಗಾಗಿ ಕಾದಿರುವೆ ನೀ ಬಾರೆಯಾ

ಸ್ತ್ರೀ ಸಂವೇದನೆಗೆ ಜಾಗವಿದ್ದಂತಿಲ್ಲ ಭಾವನಲಿ ಸೀತೆಯನ್ನೂ ಓರೆಗಚ್ಚಿದವ 
ವಿಪ್ರಲಂಭದ ಅನುಭವದ ಅನುಭಾವದಲಿ ನಿನಗಾಗಿ ಕಾದಿರುವೆ ನೀ ಬಾರೆಯ

ಅಂತರಾಳದಲಿ ಅಂತರ್ಪಿಶಾಚಿಯಂತೆ ಖಿನ್ನ ಮನಸ್ಕಳಾಗಿ ಮಲಗಿರುವೆ 
ನಿದ್ರಾ ಉರ್ಮಿಳಾ ಎಂಬ ಲೋಕ ನಿಂದನೆಯಲಿ ನಿನಗಾಗಿ ಕಾದಿರುವೆ ನೀ ಬಾರೆಯ

ನಿನ್ನನೆ ಪರಿತಪಿಸೊ 'ಆರಾಧ್ಯೆ'ಯ ತಪಸ್ಸಿಗೆ ದೇವತೆಗಳೂ ಮೌನವಾಗಿದ್ದಾರೆ
ಲಾವಣ್ಯ ಲಯವಾಗುತಿದೆ ಕಾಲದ ಉರುಳಿನಲಿ ನಿನಗಾಗಿ ಕಾದಿರುವೆ ನೀ ಬಾರೆಯ   


*ಶ್ರೀಮತಿ ಗಿರಿಜಾ ಮಾಲಿ ಪಾಟೀಲ* ಸಂಸ್ಥಾಪಕ ಅಧ್ಯಕ್ಷರು ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ಸಂಪಾದಕರು ವಿ‌ ಮ ಸಾ ಪತ್ರಿಕೆ )

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...