ಶನಿವಾರ, ಜೂನ್ 26, 2021

ಸುರಕ್ಷತಾ ಕ್ರಮದ ಮಹತ್ವ ( ಕರೋನಾ ಜಾಗೃತಿ ಕತೆ) - ಕು ಶ್ರದ್ಧಾ ದೀಪಕ ಸಾಮಂತ.

( ಕರುನಾಡು ಸಾಹಿತ್ಯ ಪರಿಷತ್ತು ಹಾಗೂ ಶ್ರೀ ಟ್ರಸ್ಟ್ ಬೆಂಗಳೂರು ಇವರ ಜಂಟಿ ಸಹಯೋಗದ ಕಥೆ ಸ್ಪರ್ಧೆಗಾಗಿ ರಚಿಸಿದ ಕತೆ
ವಿಷಯ :- ಕೋವಿಡ್ - ೧೯ ನಿಯಂತ್ರಣ ಹಾಗೂ ವ್ಯಾಕ್ಸಿನ್ ಕುರಿತ ಜಾಗೃತಿ )

🌹ಸುರಕ್ಷತಾ ಕ್ರಮದ ಮಹತ್ವ 🌹

ಒಂದು ಚಿಕ್ಕ ಹಳ್ಳಿಯಲ್ಲಿ ಗೋಪಾಲನೆಂಬ ಹುಡುಗನಿದ್ದನು. ಆತ ಪ್ರತಿದಿನ ತನ್ನ ಗೆಳೆಯರೊಂದಿಗೆ ಶಾಲೆಗೆ ಹೋಗುತ್ತಿದ್ದನು . ಒಂದು ದಿನ ಶಾಲೆ ಮುಗಿಸಿ ಗೋಪಾಲ ಓಡಿ ಬಂದು ಮನೆ ಸೇರಿದನು . ಗೋಪಾಲ ಸಂತೋಷದಿಂದ "ಅವ್ವಾ ನಾಳೆಯಿಂದ ಶಾಲೆಗೆ ಸೂಟಿ ಅಂತ. ಇನ್ನೂ ಒಂದು ತಿಂಗಳ ಪೂರ್ತಿ ನಾ ಮನೆಯಲ್ಲೇ ಇರೋದು" ಎಂದನು.
 ಗೋಪಾಲನ ಅಮ್ಮ "ಗೋಪಿ ಯಾಕಾದ್ರೂ ಸೂಟಿ ಕೊಟ್ರಪ್ಪಾ ಹೇಳು" ಎಂದಳು.  "ಅವ್ವ ಅದು ಯಾವ್ದೊ ಕೊರೋನಾ ಅಂತ ರೋಗ ಬಂದೈತಿ ಅದಕ್ಕ ಸೂಟಿ ಕೊಟ್ರು, ಮತ್ತ ನಾವು ಕೈ ತೊಳಿತಾ ಇರಬೇಕಂತ ಹೇಳ್ಯಾರ" ಅಂತ ಗೋಪಾಲ  ಹೇಳಿದ್ದನ್ನು ಕೇಳಿದ ಅಮ್ಮ " ಆ ಕೊರೋನಾ ಗಿರೋನಾ ಏನು ಮಾಡಲ್ಲ, ಅದೆಲ್ಲ ಸುಳ್ಳ್ಸುದ್ದಿ, ಅದು ಬಿಡು, ನಿನಗೆ ಸೂಟಿ ಇದೆ ಅಂತ ಮನೆಯಲ್ಲಿ ಇರಬೇಡ ನಂಜೊತೆ ಕೂಲಿ ಕೆಲಸ ಮಾಡಕ್ಕೆ ಬಂದ್ಬಿಡು"  ಎಂದಳು. ಗೋಪಾಲ "ಅದ್ಯಾಕ ನಾನ ಸುಮಾ ಮತ್ತ ರಾಜು ಜೊತಿಗ ಆಡಬೇಕ, ನಾಬರಲ್ಲಾ" ಎಂದನು. ಅಮ್ಮ ಸಿಟ್ಟಿನಿಂದ  "ನನ್ನ ಜೊತಿ ಬಾ ಆಡೋದ್ರಿಂದ   ಏನೂ ಸಿಗಂಗಿಲ್ಲ ಗೊತ್ತಾಯ್ತಾ  " ಅಂದಾಗ ಮನಸ್ಸಿಲ್ಲದಿದ್ದರೂ ಗೋಪಾಲ ಅಮ್ಮನ ಮಾತು ಕೇಳಬೇಕಾಯಿತು. ಮಾರನೆ ದಿನ ಗೋಪಾಲ ಅಮ್ಮನೊಂದಿಗೆ ಕೆಲಸಕ್ಕೆ ಹೊರಡುತ್ತಿದ್ದಾಗ ಸುಮಾ ಮತ್ತು ರಾಜು ಈ ವಿಷಯ ಕೇಳಿ ಅಲ್ಲಿ ಬಂದು ಗೋಪಾಲನಿಗೆ ಒಂದು ಮಾಸ್ಕ ಕೊಟ್ಟರು
ಗೋಪಾಲನ ಅಮ್ಮ "ಗೋಪಿ ನೀನು ಇದೆಲ್ಲಾ ಹಾಕ್ಬೇಡ ಈ ಕೊರೋನಾ ಗಿರೋನಾ ಏನು ಇಲ್ಲ ಮತ್ತ ಸುಮ್ಮನೆ ನನ್ನ ಜೋತಿ ಬಾ" ಎಂದು ಹೇಳಿದಳು. ಗೋಪಾಲ ಅಳುತ್ತಾ ಅಮ್ಮನೊಡನೆ ಕೆಲಸಕ್ಕೆ ಹೋದ. ಹೀಗೆ ಪ್ರತಿದಿನ ಕೆಲಸಕ್ಕೆ ಹೋಗುತ್ತಿದ್ದ ಗೋಪಾಲ ಮತ್ತು ಅವನ ಅಮ್ಮನಿಗೆ ಕೊರೋನಾ ವೈರಾಣುವಿನ ಸೋಂಕು ತಗುಲಿತು. ಅಮ್ಮ ನಾಲ್ಕು ದಿನದಲ್ಲೇ ಗುಣಮುಖಳಾದಳು ಆದರೆ ಗೋಪಾಲ ಆಸ್ಪತ್ರೆಗೆ ಸೇರಿದನು. ಚಿಕಿತ್ಸೆಯನ್ನು ಪಡೆದು ಗುಣಮುಖನಾದ ಕೆಲವೇ ದಿನದಲ್ಲಿ ಗೋಪಾಲನ ತಾಯಿ ಅವನ ಕಾಳಜಿ ವಹಿಸದೆ ಕೆಲಸಕ್ಕೆ ಕರೆದುಕೊಂಡು ಹೋದಳು. ಮೊದಲೇ ರೋಗನಿರೋಧಕ ಶಕ್ತಿ ಕಡಿಮೆಯಾಗಿದ್ದರಿಂದ ಇನ್ನೂ ಘಾತಕವಾದ ಕಪ್ಪು ಶಿಲೀಂಧ್ರದ ಸೋಂಕಿಗೆ ತುತ್ತಾಗಿ ಗೋಪಾಲನ ಒಂದು ಕಣ್ಣು ತೆಗೆಯಬೇಕಾಯಿತು.
ಶಸ್ತ್ರಚಿಕಿತ್ಸೆಗೆ ದುಡ್ಡಿಲ್ಲದೆ ಗೋಪಾಲನ ಅಮ್ಮ  ಕೂಲಿ ಕೆಲಸದೊಂದಿಗೆ ಬೇರೆಯವರ ಮನೆಯಲ್ಲಿ ಆಳಾಗಿ ದುಡಿಯಲು ಪ್ರಾರಂಭಿಸಿದಳು. ಗೋಪಾಲನ ಪರಿಸ್ಥಿತಿ ಅರಿತ ಸುಮಾ ಮತ್ತು ರಾಜು ತಮ್ಮ ತಂದೆ ತಾಯಿಯರಿಗೆ ಈ ವಿಷಯ ಹೇಳಿ ಶಸ್ತ್ರಚಿಕಿತ್ಸೆಗೆ ದುಡ್ಡಿನ ಸಹಾಯ ಮಾಡಿದರು. ಅಂತೂ ಇಂತೂ ಶಸ್ತ್ರಚಿಕಿತ್ಸೆಗೆ ಬೇಕಾದಷ್ಟು ಹಣ ಕೂಡಿತು. ದುಡ್ಡು ಕೊಡಲು ಬಂದ ಗೋಪಾಲನ ತಾಯಿಗೆ ಡಾಕ್ಟರ್ ಬಂದು "ಅಮ್ಮ ನಿಮ್ಮ ಮಗ ಇನ್ನಿಲ್ಲ" ಎಂದರು. ಇದನ್ನು ಕೇಳಿದ ಗೋಪಾಲನ ಅಮ್ಮನ ಹೃದಯ ಒಡೆದು ಚೂರುಚೂರಾಯಿತು. ಊರಿನ ಜನರೆಲ್ಲ ಅವಳನ್ನು ಸಮಾಧಾನ ಪಡಿಸಿದರು. ಗೋಪಾಲನ ಅಮ್ಮ 'ಈಗ ಎಲ್ಲವೂ ಮುಗಿಯಿತು' ಎಂದು ಭಾವಿಸಿದಳು. ತಾನು ಮಾಡಿದ ಒಂದು ತಪ್ಪಿಗೆ ಎಷ್ಟು ದೊಡ್ಡ ಶಿಕ್ಷೆಯೇ ಸಿಕ್ಕಿತಲ್ಲ ಎಂದು ಬಿಕ್ಕಿಬಿಕ್ಕಿ ಅತ್ತಳು.
ತಾನು ತನ್ನ  ಮಗನ ಜೀವನವನ್ನೇ ಪಣಕ್ಕಿಟ್ಟು ಹಣದ ಹಿಂದೆ ಬಿದ್ದು ಇದೆಂತಹ ಪಾಪ ಕೃತ್ಯ ಮಾಡಿದೆ ಎಂಬ ಮಾತನ್ನು ಅರಿತಳು.  ಹಣವಿದ್ದರೂ ಅಥವಾ ಹಣವಿಲ್ಲದಿದ್ದರೂ ಮರಣವನ್ನು ತಡೆಯಲು ಸಾಧ್ಯವಿಲ್ಲ. ನಾನು ಅಂದು ಆತನನ್ನು ಸುರಕ್ಷಿತವಾಗಿ ಮನೆಯಲ್ಲಿ ಬಿಟ್ಟು ಹೋಗಿದ್ದರೆ ಇಂದು ನನ್ನ ಗೋಪಿ ನನ್ನೊಟ್ಟಿಗೆ ಇರುತ್ತಿದ್ದನು ಎಂಬ ಅರಿವಾಗಿ ಸುರಕ್ಷತಾ ಕ್ರಮದ ಮಹತ್ವದ ಬಗ್ಗೆ ಪಾಠ ಕಲಿತಳು. ಇನ್ನು ನನ್ನೊಂದಿಗೆ ಆದ ಘಟನೆ ಯಾರೊಂದಿಗೂ ಆಗಬಾರದೆಂದು ಊರಿನ ಜನರಲ್ಲಿ ಕೊರೋನಾದ ಬಗ್ಗೆ ಜಾಗೃತಿ ಮೂಡಿಸಿದಳು. ಆದರೂ ತಿಳಿಯದ ಜನರಿಗೆ ತನ್ನೊಂದಿಗಾದ ಪ್ರಸಂಗವನ್ನು ಹೇಳಿ ಅವರಲ್ಲಿ ಆತ್ಮ ವಿಶ್ವಾಸವನ್ನು ತುಂಬಿದಳು. ಅವಳ ಸತತ ಪರಿಶ್ರಮದಿಂದ ಹಳ್ಳಿಯಲ್ಲಿ ಕೋರೋನಾ ಸೋಂಕಿತರ ಸಂಖ್ಯೆ ಸೊನ್ನೆಯಾಯಿತು.

✍️ಕುಮಾರಿ ಶ್ರದ್ಧಾ ದೀಪಕ ಸಾಮಂತ, ೭ ನೇ ತರಗತಿ, ಕೆನರಾ ವೆಲ್ ಫೆರ್ ಟ್ರಸ್ಟ್, ಆಂಗ್ಲ ಮಾಧ್ಯಮ ಶಾಲೆ, ದಾಂಡೇಲಿ, ಉತ್ತರ ಕನ್ನಡ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ..

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ...  ಭೂಮಿಯ ಮೇಲೆ ಹುಟ್ಟಿರುವ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಸಾಧನೆ ಮಾಡಬೇಕೆಂಬ ಹಂ...