*ಸಿಟಿ ಲೈಫ್ ಬಲು ಟಫ್*
ನೋಡೋ ಎಲ್ಲಿದೆ ಬೇಗ! ಮಗಾ ಅಲ್ಲಿ ಹೊರಡುತ್ತಾ ಇದೆ. ಬಾ ಓಡಣಾ. ಸರಿ ಓಡು ಓಡು ಇಡ್ಕೋ ಇಡ್ಕೋ.
ಅಬ್ಬಾ! ಜಸ್ಟ್ ಮಿಸ್ ಕಣೋ. ಈಗ ಮತ್ತೊಂದು ಬಸ್ಸಿಗಾಗಿ ಕಾಯಬೇಕು ಛೇ! ಈ ಪರಿಯ ಮಾತುಗಳು ಬೆಂಗಳೂರಂತಹ ಮಹಾನಗರದಲ್ಲಿ ಸರ್ವೇಸಾಮಾನ್ಯ. ಅಂಥಹದ್ದೆ ಒಂದು ಕಥೆ ಹೇಳಲಿಕ್ಕೆಂದೆ ನಾ ಹೊರಟಿರೋದು.
ಲಾಕ್ಡೌನ್ ಮುಗುದು ಯಥಾಸ್ಥಿತಿಗೆ ಮರಳುತ್ತಿರುವ ಸಿಲಿಕಾನ್ ಸಿಟಿಗೆ ಹೊಸದಾಗಿ ಕೆಲಸಕ್ಕೆಂದು ಬಂದಿದ್ದ ಜನರಲ್ಲಿ ನಾನು ಒಬ್ಬ. ನನಗೆ ಸಿಟಿಗಳಲ್ಲಿ ಕೆಲಸ ಮಾಡಿ ಅಭ್ಯಾಸವಿಲ್ಲ. ಬೆಂಗಳೂರಿಗೆ ಬಂದವನೆ ಮುಂಜಾನೆ ಸೂರ್ಯ ಉದಯವಾಗುವುದನ್ನು ಮೆಜೆಸ್ಟಿಕ್ನಲ್ಲಿ ಕಂಡೆ. ನಾನು ಇಲ್ಲಿ ಎಲ್ಲಿ ಇರೋದು, ಕೆಲಸಕ್ಕಾಗಿ ಯಾರನ್ನು ಕೇಳಬೇಕು, ಎಲ್ಲಿ ಹುಡುಕಬೇಕು ಎಂಬ ಹಲವಾರು ಪ್ರೆಶ್ನೆಗಳು ಮಿದುಳಲ್ಲಿ ಹರಿದಾಡಿದವು. ಆಗ ನನ್ನ ದೋಸ್ತಾ ಶಂಕ್ರ ನೆನಪಾದ. ಅವನು ಇಲ್ಲೇ ಕೂಡ್ಲು ನಲ್ಲಿ ವಾಸವಿದ್ದ. 'ಅವನೇ ನೀನು ಬೆಂಗಳೂರಿಗೆ ಬರುವುದಾದರೆ ನನಗೆ ಫೋನ್' ಮಾಡು ಅಂತ ಹೇಳಿದ ಮಾತು ಗುರುತಿಗೆ ಬಂತು. ತಕ್ಷಣ ಅವನಿಗೆ ಫೋನ್ ಮಾಡಿದೆ.ಅವನಿನ್ನು ಮಲಗಿದ್ದಂತೆ ಇತ್ತು. ಯಾರೂ ಉತ್ತರ ನೀಡಲಿಲ್ಲ. ಆದರೆ ಫೋನು ಝುಣಗುಟ್ಟುತ್ತಲೇ ಇತ್ತು. ನನ್ನ ಮನಸ್ಸು ಚಿಂತೆಯ ಪಾಲಾಗಿ ಹೋಯಿತು. ಮೆಜೆಸ್ಟಿಕ್ ನಲ್ಲೇ ಒಂದು ತಾಸು ದಿಕ್ಕು ತೋಚದೇ ಸುಮ್ಮನೆ ಕುಳಿತಿದ್ದೆ. ಮತ್ತೆ ಆತನಿಗೆ ಫೋನ್ ಮಾಡ್ದೆ. ಉತ್ತರ ಬರಲೇ ಇಲ್ಲ. ಅಯ್ಯೋ ದೇವ್ರೆ ಏನಪ್ಪಾ ಮಾಡೋದು? ಎಲ್ಲಿಗಪ್ಪ ಹೋಗೋದು ಎಂಬ ಭಯ ಹುಟ್ಟಿತ್ತು. ಅಷ್ಟರಲ್ಲಿ ಬೆಳಿಗ್ಗೆ ಎಂಟಾಗಿತ್ತು. ಸ್ವಲ್ಪ ಸಮಯದ ನಂತರ ಶಂಕ್ರ ಫೋನ್ ಮಾಡ್ದ. ನಾನು ಸಿಕ್ಕಾಪಟ್ಟೆ ಬೈದು ಬಿಡಬೇಕು ಎನ್ನುವಷ್ಟು ಕೋಪ ಬಂದರು. ಅವನಿಗೆ ಏನೂ ಅನ್ನದೆ ಅವನಿಗೆ ನಾನು ಬೆಂಗಳೂರಿಗೆ ಬಂದು ವಿಷ್ಯಾ ತಿಳಿಸಿದೆ.
ಆಗ ಅವನು ಅವನ ವಿಳಾಸವನ್ನು ತಿಳಿಸಿ. ಬಿಎಂಟಿಸಿ ಬಸ್ಸು ಸಂಖೆ ಹೇಳಿ ಕಂಡೆಕ್ಟರ್ ಬಳಿ ಕೂಡ್ಲು ಗೇಟ್ ಅಂತ ಹೇಳು ಅವರೇ ನಿಲ್ಲಿಸುತ್ತಾರೆ ಎಂದು ಹೇಳಿದ. ಸರಿ ನಾನು ಬರ್ತಿನಿ ಅಂತ ಹೇಳಿ ಬಸ್ಸು ಹಿಡಿದು ಬಸ್ಸಿನಲ್ಲಿ ಕುಳಿತೆ. ಅಷ್ಟರಲ್ಲಿ 9 ಗಂಟೆ ಆಗಿತ್ತು. ಉಪಾಹಾರ ತಿನ್ನದೇ ಬಸ್ಸು ಹತ್ತಿದ್ದೆ. ನಾನು ಬಸ್ಸಿನಲ್ಲಿ ಸುಮಾರು ಒಂದೂವರೆ ತಾಸು ಪಯಣ ಮಾಡಿರುತ್ತೇನೆ. ಸಿಟಿ ಲೈಫ್ ಹೇಗಿರುತ್ತೆ ಎಂಬುದು ಆಗಲೇ ನನಗೆ ಅರಿವಾಗಿದ್ದು. ಸ್ತ್ರೀಯರನ್ನದೆ, ಪುರುಷರನ್ನದೇ ಬಸ್ಸುನ್ನು ಹಿಡಿಯಲು ಓಡುವ ಜನ. ಇನ್ನೊಂದೆಡೆ ಕೆಲಸಕ್ಕೆ ತಡವಾದರೆ ಎಲ್ಲಿ ಮೇಲಾಧಿಕಾರಿಗಳ ಕೈಯಲ್ಲಿ ಬೈಸ್ಕೋಬೇಕು ಎಂದು ಸಿಗ್ನಲ್ ಜಂಪ್ ಮಾಡುವ ವಾಹನ ಸವಾರರು. ಇವರ ನಡುವೇ ಆತುರಾತುರವಾಗಿ ನಡೆದಾಡುವ ಪಾದಾಚಾರಿಗಳು, ಸ್ಕೂಲ್ ಬೆಲ್ ಹೊಡಿಯುವುದರ ಮುನ್ನವೇ ಶಾಲೆಗೆ ಹೋಗಬೇಕೆಂಬ ಹಂಬಲ ಮಕ್ಕಳದ್ದು. ಇಂತಹದ್ದರಲ್ಲಿ ಹೇಗೋ 10.40ಕ್ಕೆ ಸರಿಯಾಗಿ ಬಸ್ಸು ಕೂಡ್ಲು ಗೇಟ್ ಗೆ ಬಂತು. ನಾ ಬಸ್ಸು ಇಳಿದು ಶಂಕ್ರನಿಗೆ ಫೋನ್ ಮಾಡ್ದೆ. ಆತ ಮತ್ತೊಮ್ಮೆ ಇನ್ನೊಂದು ವಿಳಾಸ ಹೇಳಿ ಕೂಡ್ಲು ಒಳಗಡೆ ಬಾ ಎಂದ. ನನಗೆ ಅದು ಹೊಸ ಜಾಗ . ಆಟೋ ರಿಕ್ಷಾ ಮಾಡಿಕೊಂಡು ಅವನೇಳಿದ ಅಡ್ರೆಸ್ಗೆ ಹೋದೆ. ಶಂಕ್ರ ಆಗಲೆ ಕೆಲಸಕ್ಕೆ ಹೊರಟಂತೆ ಇತ್ತು. ನನ್ನನ್ನು ರೂಂನಲ್ಲಿ ಬಿಟ್ಟು ಅಲ್ಲಿ ಕಿಚನ್ ನಲ್ಲಿ ತಿಂಡಿ ಇದೆ ತಿಂದ್ಕೋ ನಾನು ಕೆಲಸಕ್ಕೆ ಹೋಗಿ ಬರ್ತಿನಿ. ಸಂಜೆ ಮಾತಾಡೋದಾಗತ್ತೆ ಎಂದು ಅವನು ಕೆಲಸಕ್ಕೆ ಹೋದ.
ನಾನು ದೈನಂದಿನ ಕಾರ್ಯ ಮುಗಿಸಿ ತಿಂಡಿ ತಿನ್ನುವಾಗ ನಗರ ಜೀವನದಲ್ಲಿ ಇಷ್ಟೇಲ್ಲಾ ಅವಸ್ಥೆ ಇರುತ್ತಾ , ನನಗ್ಯಾರು ಕೆಲ್ಸ ಕೊಡ್ತಾರೆ ಎಂದು ಚಿಂತೆಗೀಡಾಗಿ ಶಂಕ್ರ ಬರುವುದನ್ನೇ ಕಾದು ಬಾಗಿಲಲ್ಲಿ ಕುಳಿತಿದ್ದೆ.
- ಗೋಪಾಲ್ ಪುರುಷೋತ್ತಮ
ಪತ್ರಿಕೋದ್ಯಮ ವಿದ್ಯಾರ್ಥಿ
ತುಮಕೂರು
ಮೊ ನಂ: 9148922850.
(ತಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ : 9448241450 ಸಂಪಾದಕರು ವಿ ಮ ಸಾ ಪತ್ರಿಕೆ )
😘😘😘well said bro
ಪ್ರತ್ಯುತ್ತರಅಳಿಸಿ