*“ಮುಗಿಲ ಹಕ್ಕು ಕೊಡಿ ನಮಗೆ ಹಾರಾಡುತ್ತೇವೆ ಗುಡಿ, ಚರ್ಚ್, ಮಸೀದಿಗಳ ಹಂಗಿಲ್ಲದಂತೆ, ಜಲ, ನೆಲ, ಭಾಷೆ ಬೇಗೆಗಳ ಸದ್ಧಿಲ್ಲದಂತೆ”-ಇನ್.ಎಲ್.ಚನ್ನೇಗೌಡ.*
ಹಾಸನ ಜಿಲ್ಲೆಯ ಹಿರಿಯ ಸಾಹಿತಿಗಳಾದ ಕನ್ನಡ ಸಾಹಿತ್ಯ ಲೋಕಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ ಮಹಾನ್ ಮುತ್ಸದ್ದಿ , ಹಾಗೂ ಸಾಹಿತ್ಯದ ಮೇರು ವ್ಯಕ್ತಿತ್ವ ಎನ್.ಎಲ್.ಚನ್ನೇಗೌಡ ಅವರು ಹಾಸನ ಜಿಲ್ಲೆಯಲ್ಲಿ ‘ಮನೆ ಮನೆ ಕವಿಗೋಷ್ಟಿ’ಯ ಮೂಲಕ ಮನೆ ಮಾತದವರು. ಇವರ ಕನ್ನಡ ಸಾಹಿತ್ಯದ ಸೇವೆ ಅಮೋಘ ಮತ್ತು ಅನನ್ಯವಾಗಿದೆ. ಒಬ್ಬ ಸಾಹಿತಿ ಮತ್ತು ಸಂಘಟನಕಾರನಲ್ಲಿರಬೇಕಾದ ನೈತಿಕ ಮೌಲ್ಯ ಮತ್ತು ಕೆಚ್ಚೆದೆಯ ದ್ಯೋತಕವಾಗಿದ್ದಾರೆ. ಇವರನ್ನು ನೋಡಿದಾಗ ನನಗೆ ಆನಂದವಾಗುವುದು ಇವರು ತಮ್ಮ ಇಳಿ ವಯಸ್ಸಿನಲ್ಲೂ ಕುಂದದೆ ನಾಡು ನುಡಿಯ ಸೇವೆಯಲ್ಲಿ ತೊಡಗಿರುವುದು ಹಾಗೂ ಸಾಹಿತ್ಯವನ್ನೂ ಬರೆದು ಕೃತಿ ಪ್ರಕಟಿಸುತ್ತಿರುವುದಕ್ಕೆ. ಇವರ ಉತ್ಸಾಹ ಮೆಚ್ಚಲೇ ಬೇಕಾದ್ದು.
ಇವರ ಈ ಕವನ ಸಂಕಲನದ ಪ್ರಾರಂಭದಲ್ಲಿಯೆ “ಹಾಲ್ದಿಂಗಳ ಉಯ್ಯಾಲೆಯಲ್ಲಿ ಮೊರೆವ ಸಾಗರದ ಅಲೆಗಳಂತೆ ಅಮವಾಸ್ಯೆಯಲಿ ಕಿಲಕಿಲನೆ ನಗುವ ನೀಲಾಕಾಶದ ನಕ್ಷತ್ರಗಳಂತೆ ನನ್ನ ಕವನ” ಎನ್ನುತ್ತಲೇ ಆರಂಭಿಸುತ್ತಾರೆ. ಇವರ ಈ ಮಾತಿಗೆ ಪುಷ್ಟಿ ಕೊಡುವಂತೆ ಇವರ ‘ಪರದೇಶಿ’ ಎನ್ನುವ ಕವನ ಅಧ್ಬುತವಾಗಿ ಮೂಡಿ ಬಂದಿದೆ. ಇದರಲ್ಲಿ “ನನ್ನವ್ವ ಊದುತ್ತಿದ್ದಾಳೆ ಒಲೆ ಉರಿಯುವಂತಿಲ್ಲ, ಉಸಿರುಗಟ್ಟಿದೆ ನನ್ನವ್ವನ ಎದೆ ಕೊಳವೆ, ಹಿಟ್ಟು ಬೇಯುವಂತಿಲ್ಲ ಗಂಜಿ ಕುದಿಯುವಂತಿಲ್ಲ. ನನ್ನವ್ವನ ಎದೆ ಬೆಂಕಿ ಆರುವಂತಿಲ್ಲ. ಎನ್ನುತ್ತಾ ತಮ್ಮ ತಾಯಿ ತಂದೆಯರನ್ನು ನೆನಪಿಸಿಕೊಳ್ಳುತ್ತಲೆ ಸಂಸರಾದ ನೊಗ ಹೊತ್ತ ಹೆತ್ತವರ ಬದುಕಿನ ಸಂಕಷ್ಟದ ಸ್ಥಿತಿಯ ಅನವಾರಣ ಮಾಡುತ್ತಾರೆ. ಮುಂದುವರೆದು ‘ಅಪ್ಪ ಗಾಣದ ಎತ್ತು ಅವ್ವ ಎಣ್ಣೆ ಬಸಿದ ಹಿಂಡಿ, ಬೆಳೆ ಬಲು ಹುಲುಸು, ಭೂಮಿ ತೂಕದ ಹೆಣ್ಣು ಈಗ ಹಣ್ಣಾಗಿದ್ದಾಳೆ ಅಪ್ಪ ಮಣ್ಣಾಗಿದ್ದಾನೆ ನನಗೀಗ ಆಕಾಶವೆಲ್ಲಾ ದಾರಿ’ ಎನ್ನುವ ಸಾಲುಗಳಂತೂ ಮನ ಮಿಡಿಯುತ್ತವೆ.
ತಾಯಿಯ ಬದುಕಿನ ಕುರಿತು ಇವರಿಗೆ ಒಂದು ರೀತಿಯ ಅಘಮ್ಯ ಪ್ರೀತಿ ಹಾಗೂ ಗೌರವ “ಉಟ್ಟು ಹರಿದ ಸೀರೆಗಳನ್ನು ನನ್ನವ್ವ ಎಸೆದ ನೆನಪಿಲ್ಲ ನಮ್ಮೂರ ಹೊಳೆಯಲ್ಲಿ ತೊಳೆದು ಒಣಗಿಸಿ ಚಂದದ ಕೌದಿ ಹೊಲೆದಿದ್ದಾಳೆ” ನಮ್ಮ ಹಿರಿಯರ ಬದುಕಿನ ಸಂಸ್ಕøತಿಯನ್ನೇ ಪ್ರತಿಬಿಂಬಿಸುವ ಈ ಕವಿತೆ ತಾಯಿಯ ಅಪ್ರತಿಮ ತ್ಯಾಗದ ಅನಾವರಣ ಮಾಡಿದೆ.
ಇವರ ಭೂರಮೆ, ನನ್ನ ಪಟ, ಕುರಿಮಂದೆ, ಹಾರೈಕೆ, ಪ್ರಶಸ್ತಿಗಳು ಬಿಕರಿಗಿವೆ, ಯುಗಾದಿ, ಅಳುಬಂದರತ್ತು ಬಿಡು, ಗೂಡು ಬಿಟ್ಟ ಹಕ್ಕಿ, ಕನಸುಗಳ ಮಾರಿಕೊಂಡವರು, ಬಡವರ ಹೆಣ್ಣು ಹಿಡಿದವರಿಗೆ ಹೆಂಡತಿ, ಪಟ್ಟಕ್ಕೇರದವರು ಇವು ತುಂಬಾ ಉತ್ತಮವಾಗಿ ಮೂಡಿಬಂದ ಕವಿತೆಗಳಾಗಿವೆ.
ನಿಜ ಬದುಕಿನಲ್ಲೂ ನೇರ ಹಾಗೂ ನಿಷ್ಟುರವಾದಿಯಾದ ಇವರು ‘ನೆಲೆ ಇಲ್ಲದವರು’ ಕವಿತೆಯಲ್ಲಿ “ಆಶೆಯ ಹಯನಕೆ ಜೀನನು ಕಟ್ಟಿ ನಿಲ್ಲಿಸಿದವರುಂಟೆ ಬದುಕಲ್ಲಿ ಕಾವಿಯ ತೊಟ್ಟರು ಕಾಮಿನಿ ಒಳಗಿರೆ ಈ ಕರ್ಮದ ಕಾಯಕೆ, ಶುಚಿ ಉಂಟೇನು ಮಠದಲ್ಲಿ” ಎಂದು ಸಮಾಜಿಕ ವಿಡಂಬನೆಗೆ ನಿಲ್ಲುತ್ತಾರೆ. ವಿಭಿನ್ನ ಆಯಾಮಗಳಲ್ಲಿ ಸಾಹಿತ್ಯ ರಚನೆಯಲ್ಲಿ ತೊಡಗಿದ ಇವರು ಬಹುಮುಖ ಪ್ರತಿಭಾನ್ವಿತರೂ ಹೌದು.
ಅದರಲ್ಲೂ ಇವರ ಈ ಸಂಕಲನದಲ್ಲಿ ಬರುವ ‘ಮುಗಿಲ ಹಕ್ಕು ಕೊಡಿ ನಮಗೆ ನಾವು ಹರಿದಾಡುತ್ತೇವೆ. ನೆಲ ಮುಗಿಲ ಗಡಿಯಾಚೆ ಹೆಮ್ಮೋಡದಂತೆ, ಗುಡಿ ಚರ್ಚು ಮಸೀದಿಗಳ ಹಂಗಿಲ್ಲದಂತೆ, ಜಲ,ನೆಲ,ಭಾಷೆ ಬೇಗೆಗಳ ಸದ್ದಿಲ್ಲದಂತೆ.” ಎನ್ನುವ ಇವರ ಕವಿತೆ ತುಂಬಾ ಅಧ್ಬುತವಾಗಿ ಮೂಡಿ ಬಂದಿದೆ. ಹಾಗೆಯೆ ಇವರ ಅನಾಥ ಶಿಶುವಿನ ಅರ್ಥನಾದ ಎನ್ನುವ ಕವಿತೆಯಂತೂ ಎಂತವರನ್ನೂ ತಟ್ಟಿ ಮಾತನಾಡಿಸುತ್ತದೆ. “ನಾನು ಯಾರೋ ಮಾಡಿ ಎಸೆದ ಮಣ್ಣಿನ ಹಣತೆ ತೊಟ್ಟಿಯಿಂದ ತಂದು ತೊಟ್ಟಿಲು ಕಟ್ಟಿದ್ಧಾಳೆ ನನ್ನವ್ವ, ನನ್ನಪ್ಪ ಹಣತೆಗೆ ಹಾಕಿದ್ದು ಯಾರೋ ಗಾಣದಿಂದ ಹಿಂಡಿ ತೆಗೆದ ಎಣ್ಣೆ ಅವ್ವ ಮತ್ಯರೋ ಬೆಳೆದ ಹತ್ತಿ ಹಿಂಜಿ ಬತ್ತಿ ಹೊಸೆದು ಹಣತೆ ಹಚ್ಚಿದ್ದಳೆ. ಅಗಾದವಾದ ಅಂತಶಕ್ತಿಯುಳ್ಳ ಇವರ ಪ್ರತಿ ಕವಿತೆಯು ನೊಂದವರ ಬದುಕಿನ ಕಳಕಳಿಗೆ ತೊಡಗುತ್ತವೆ. ಅದರಲ್ಲೂ ಇವರ ‘ಊರು ಭಂಗ’ ಎನ್ನುವ ಕವಿತೆಯಲ್ಲಿನ ಸಮಾಜಿಕ ಬಂಡಾಯದ ಧ್ವನಿ ಮೆಚ್ಚುವಂತಹದ್ದು “ಹೆಣ್ಣು ಬಳಿಸಿ ಬಿಟ್ಟ ವಿಟರಿದ್ದಾರೆ, ಹೊನ್ನು ವೈಡೂರ್ಯ ಬಾಚಿದ ಕಳ್ಳರಿದ್ದಾರೆ. ಹೆಗ್ಗಣಗಳಂತೆ ಮಣ್ಣ ಬಗೆವವರಿದ್ದಾರೆ. ಎಲ್ಲವನು ಅನುಭವಿಸಿ ಹಾಳಾದ ಅರಸರಿದ್ದಾರೆ.”
ಅಪೂರ್ವವಾದ ಸಾಮಾಜಿಕ ಕಳಕಳಿಯುಳ್ಳ ಎನ್,ಎಲ್,ಸಿ ಯವರು ಹೆಚ್ಚಾಗಿ ಬರೆದ್ದದ್ದು ಸಮಾಜವನ್ನು ತಿದ್ದುವಂತಹ ವಿಷಯವಸ್ತುಗಳನ್ನು ಬಳಸಿಕೊಂಡಿದ್ದಾರೆ. ಹಾಗೆಯೆ ಇವರ ಸಾಹಿತ್ಯದಲ್ಲಿನ ಸೃಜನಶೀಲತೆ ಮತ್ತು ಕಾವ್ಯಕ್ಕಿರಬೇಕಾದ ವ್ಯಂಗ್ಯಾರ್ಥದ ಮೋಡಿ ಸಹೃದಯನನ್ನು ಸೆರೆ ಹಿಡಿಯುತ್ತದೆ. ಕಾವ್ಯ ಸೌದ ಎನ್ನುವ ಇವರ ಕವಿತೆಯಲ್ಲಿನ ಕಾವ್ಯ ಕಟ್ಟುವಾಗಿನ ವ್ಯಕ್ತಿಯ ತಾಳ್ಮೆ ಮತ್ತು ಕೌಶ್ಯದ ಕುರಿತು ಇಲ್ಲಿ ತುಂಬಾ ಸೊಗಸಾಗಿ ವರ್ಣಿಸಿದ್ದಾರೆ. “ಬಿರುಕು ಬಿಟ್ಟಿದೆ ಸೌದ ಸೋರಿಕೆ ಅಲ್ಲಲ್ಲಿ” ಹಾಗೆ ಮುಂದುವರೆದು ಮುಂದಿನ ಪ್ಯಾರದಲ್ಲಿ “ಹಳೆ ಬೇರುಗಳ ರಸ ಹೀರಿ ಹೊಸದೊಂದು ಬಳ್ಳಿ ಚಿಗುರಬೇಕು, ತುರ್ತಾಗಿ ಮುಗಿಸಬೇಕೆಂಬ ತುರ್ತು ಒಳಗುದಿಯ ಆತುರ ಮರೆಯಬೇಕು.” ಎನ್ನುವಲ್ಲಿ ಇತ್ತೀಚೆಗೆ ಯುವ ಪ್ರತಿಭೆಗಳು ಲೇಖಕರೆನ್ನಿಸಿಕೊಳ್ಳುವ ಆತುರದಲ್ಲಿ ಬರೆದು ಅದನ್ನು ಮರುಪರಿಶೀಲಗೆ ಒಳಪಡಿಸದೇ ಇರುವುದರ ಕುರಿತು ಉತ್ತಮ ಸಂದೇಶ ನೀಡಿದ್ದಾರೆ. ಹಾಗೆ ಪ್ರಶಸ್ತಿಗಳು ಬಿಕರಿಗಿವೆ ಎನ್ನುವಲ್ಲಿಯೂ “ಹೊಸಬರಿಗೆ ಹಣಕೊಟ್ಟು ಹಲ್ಕಿರಿದು ಗೌ.ಡಾ. ಪ್ರಶಸ್ತಿಗಳ ಪಡೆವ ತುರ್ತು ಸಾಧನೆ ಸೊನ್ನೆ ಇಲ್ಲಿ ಬರೀ ಕಣ್ಸನ್ನೆ. ಹೆಸರು ಉಳಿಯಬೇಕು, ಉಸಿರಿಲ್ಲಿ ಕಾಯಕೊರಡು, ಗೊತ್ತು ಕೊಟ್ಟವನಿಗೂ ಇದು ಪಾರ್ಥೀವ ಶರೀರ.” ಇದು ನಿಜಕ್ಕೂ ಪ್ರಚಲಿತದಲ್ಲಿ ನಡೆಯುತ್ತಿರುವ ಸತ್ಯ ಸಂಗತಿಯೂ ಆಗಿದೆ.
ಚುಕ್ತವಾಗದ ಲೆಕ್ಕ ಎನ್ನುವ ಕವಿತೆಯಲ್ಲಿ ರೈತರ ಇಡೀ ಬದುಕನ್ನು ತುಂಬಾ ಮಾರ್ಮಿಕವಾಗಿ ತಮ್ಮ ತಂದೆಯನ್ನು ನೆನೆಯುತ್ತಲೇ ಕಟ್ಟಿಕೊಟ್ಟು ಬಿಡುತ್ತಾರೆ. “ಅಪ್ಪನ ಹಣೆಯಲ್ಲಿ ಸೊಕ್ಕಿಲ್ಲದ ಸುಕ್ಕು ಗೆರೆಗಳು ನೂರು ಮೂಳೆಗಳ ಎಣಿಸಿ ಗುಣಿಸಬಹುದಾದ ಕಾಯ” ಹಾಗೆಯೆ ವಾಸ್ತು ಹುಡುಕುತ್ತಿದ್ದಾರೆ ವಸ್ತು ಸ್ಥಿತಿ ಮರೆತು. ವಾಸ್ತವ ಅರಿಯದವರು. ಅರಮನೆಯಲ್ಲಿ ಕುಳಿತು ಋಣ ಭಾರ ತಿಳಿಸಲಾರದೆ ನನ್ನಪ್ಪ ಪಂಚಭೂತಗಳಲ್ಲಿ ಲೀನ. ನನ್ನವ್ವನ ಕನಸೂ ಕೂಡ.”
ಸ್ತ್ರೀ ಪರವಾದ ಧ್ವನಿ ಎತ್ತುವ ಇವರ ಸ್ತ್ರೀ ಸಂವೇದನೆಗಳ ಪರವಾದ ವಾದ ಪ್ರಶಂಸನೀಯವಾದದ್ದು ಇಸ್ಲಾಂ ಸಂಸ್ಕಂತಿಯಲ್ಲಿರುವ ತಲಾಖ ಪದ್ದತಿಯನ್ನು ಖಂಡಿಸಿ ಬರೆಯುತ್ತಾ ಇವರು “ವಾಟೆ ಎಸೆದವರ ಸುಳಿವಿಲ್ಲ ಎಸೆದ ವಾಟೆಯೊಳಗಿನ ಬೀಜ ಮೊಳೆಯುತ್ತಿದೆ. ಈಗ ಈ ಒಡಲ ಕುಡಿಗೆ ಅಪ್ಪ ಯಾರು?” ಎನ್ನುವ ಧ್ವನಿ ಎಂತವರನ್ನೂ ಕಣ್ಣೀರಾಗಿಸದೆ ಬಿಡದು.
ಇವರ ಕಾವ್ಯ ಮೋಡಿಗೂ ಸಾಕ್ಷಿ ಎನ್ನುವಂತೆ “ಹೊತ್ತು ಕಾಣದ್ಹೊತ್ತಲ್ಲಿ ಒತ್ತರಿಸಿದ ಕನಸುಗಳು ಹೊತ್ತೇರಿ ಬಂದಾಗ ಬಟಾ ಬಯಲು.” ‘ಭಾವ ಲೋಕದ ಕನಸು’ ಎನ್ನುವ ಇವರ ಇನ್ನೊಂದು ಕವಿತೆಯಲ್ಲಿ “ಭಾವ ಲೋಕದ ಕನಸು ಅರಳುವುದು ಹೀಗೆ ಅವರವರ ಮನಸ್ಸು ಹುತ್ತ ಕಟ್ಟಿದಂತೆ.” ಎಂದು ಅಧ್ಬುತ ಸಾಲನ್ನೆಣೆಯುತ್ತಾರೆ. ಇವರ ಪದಸಂಪತ್ತು ಮತ್ತು ಕಾವ್ಯ ಕಟ್ಟುವಲ್ಲಿನ ಕವಿಯ ಭಾವತೀವ್ರತೆ ಈ ಸಂಕಲನ ದುತ್ತಿದ್ದಂತೆ ತಟ್ಟನೆ ಗೋಚರಿಸಿ ಬಿಡುತ್ತದೆ’. ಅದರಲ್ಲೂ ಎನ್.ಎಲ್.ಸಿ ಅವರು ಪ್ರಾಸ, ವರ್ಣನೆ, ಕಾವ್ಯ ವಿಜೃಂಭನೆಯ ಗೋಜಿಗೆ ಹೋಗದೆ ಭಾವ ತೀವ್ರತೆಯನ್ನು ಯತಾವತ್ತಾಗಿ ಹಿಡಿದಿಟ್ಟಿರುವುದು ಗಮನಾರ್ಹ ಹಾಗೂ ಅವರ ಸತ್ವಯುತ ಸಾಹಿತ್ಯಕ್ಕೆ ಇದೇ ರಹದಾರಿಯೂ ಆಗಿದೆ. ಇತ್ತೀಚಿಗೆ ಇಡೀ ಜಗತ್ತನ್ನೆ ಬೆಚ್ಚಿ ಬೀಳಿಸಿದ ಕರೋನಾ ಕುರಿತು ಕಾವ್ಯ ಬರೆಯುತ್ತ “ಕಳೆಗಳೆಲ್ಲಾ ಕೊಳಾಗುತ್ತಿಲ್ಲ. ಬಿದಿರೆಲ್ಲಾ ಮೇದರೆಣೆವ ಬುಟ್ಟಿ ಬೊಂಬೆ ಬೀಸಣಿಕೆಯಾಗುತ್ತಿಲ್ಲ. ತಟ್ಟಿಲಾಗುತ್ತಿಲ್ಲ ಚಟ್ಟದ ಬಡಿಗೆಯಾಗುತ್ತಿವೆ ಯಾರೋ ಹಚ್ಚಿದ ಬೆಂಕಿಗೆ ಕೆಂಡವಾಗುತ್ತಿಲ್ಲ ಉರಿದು ಬೆಳಕು ನೀಡುತ್ತಿಲ್ಲ ಬೂದಿಯಾದರೂ ವಿಭೂತಿಯಾಗುತ್ತಿಲ್ಲ.” ಎನ್ನುವ ಸಾಲುಗಳು ಕರೋನಾದಿಂದುಂಟಾದ ಪ್ರಕ್ಷುಬ್ಧ ಸ್ಥಿತಿಯನ್ನು ಕಟ್ಟಿ ಕೊಡುವಲ್ಲಿ ಸಫಲವಾಗಿದೆ.
ಪೌರಾಣಿಕ ಪಾತ್ರಗಳ ಕುರಿತು ಸಾಕಷ್ಟು ಒಲವಿರುವ ಇವರು ಹೆಚ್ಚಾಗಿ ಉಪಮೆಗೆ ಬಳಸಿಕೊಂಡಿದ್ದು ಸಂಕಲನಕ್ಕೆ ಮೆರಗು ತಂದಿದೆ. ತಮ್ಮ ನಿಜ ಬದುಕಿನಲ್ಲೂ ಸತ್ಯ ಪ್ರಮಾಣಿಕತೆ, ನ್ಯಾಯ, ನಿಷ್ಟೆಗೆ ಬದ್ದರಾಗಿದ್ದಾರೆ. ಅದರಲ್ಲೂ ವಾಸ್ತವವಾದಿಯಾದ ಇವರ ‘ರಂಗ ಮಂಚ’ ಎನ್ನುವ ಕವಿತೆಯು ವಾಚ್ಯರ್ಥಕ್ಕೆ ಉತ್ತಮ ಉದಾಹರಣೆಯಾಗಿ ನಿಲ್ಲುತ್ತದೆ. “ಇಡಿ ರಾತ್ರಿ ಬಣ್ಣ ಹಚ್ಚಿ ಕುಣಿದವನಿಗೆ ಬೆಳಗಾದರೆ ಬಣ್ಣ ಅಳಿಸುವ ತುರ್ತು ಕತ್ತಲೆಯಲ್ಲಿ ನಟ ಬಳಿದುಕೊಂಡ ಬಣ್ಣ ನೂರೆಂಟು ನೋವಿನ ಸುಕ್ಕುಗಳನ್ನು ಮುಚ್ಚುವ ಸಾಕ್ಷಿಕಲ್ಲು.”
ಸಂಕಲನದ ಕೊನೆಯಲ್ಲಿ ಬರುವ ಕೆಲವು ವಚನಗಳು ಕೂಡ ತುಂಬಾ ಅರ್ಥಗರ್ಭಿತವಾಗಿ ಮೂಡಿ ಬಂದಿವೆ. “ಒಂಬತ್ತು ತೂತಿನ ಹುತ್ತ ನುಸುಳಿದರೆ ಆರು ತಲೆಯ ಹಾವು ಆಡಿಸಬೇಕು ಮೂರು ಪುಂಗಿಗಳ ಊದಿ ಹಾವು ಹಾಡಿದರೆ ಹಾಡು ಆಡದಿದ್ದರೆ ಪಾಡು ತ್ರಿಕರ್ಣ ಶುದ್ಧಿಯಲಿ ಹಾವ ಆಡಿಸು ಬುದ್ದಿ ಕೊಡೋ ಶ್ರೀ ಚೆನ್ನಕೇಶವ.” ಎನ್ನುವ ವಚನ ನಮ್ಮ ಅರಿಷಡ್ವರ್ಗಗಳ ನಿಯಂತ್ರಣದಿಂದ ಬದುಕನ್ನು ನಡೆಸುವ ಕುರಿತಾಗಿದೆ.
ಅಂತಮವಾಗಿ ಹೇಳುವುದಾದರೆ ಹೀಗೆ ಉತ್ತಮ ಕವಿತೆಯ ಸಾಲುಗನ್ನು ಒಳಗೊಂಡ ಈ ಕವನ ಸಂಕಲನ ಸಮಾಜ ಮುಖಿಯಾಗಿದ್ದು ಉತ್ತಮ ಸಂದೇಶಗಳನ್ನು ಸಾರುತ್ತಿದೆ. ಜನಮಾನಸದಲ್ಲಿ ಪುಟ್ಟ ಹಣತೆಯಾಗಿ ಪ್ರಜ್ವಲಿಸಲಿ ಎನ್ನುವ ಶುಭ ಹಾರೈಕೆಯೊಂದಿಗೆ ಹಾಗೂ ನಾನು ಇಷ್ಟು ಹೊತ್ತು ಕವನ ಸಂಕಲನ ಓದುವ ತವಕದಲ್ಲಿ ಹಿಡಿದಿಟ್ಟುಕೊಂಡ ಮನದ ಮಾತೊಂದನ್ನು ಹೇಳಿಯೇ ಬಿಡುತ್ತೇನೆ, ಈಗ ತಾನೆ ಸಾಹಿತ್ಯ ಲೋಕಕ್ಕೆ ಹೆಜ್ಜೆ ಇಡುತ್ತಿರುವ ನಾನು ಎನ್.ಎಲ್.ಸಿ ಅಂತಹ ಹಿರಿಯ ಸಾಹಿತಿಗಳ ಭಾವದಳಕ್ಕಿಳಿದು ವಿಶ್ಲೇಷಿಸುವಲ್ಲಿ ಸೋತಿದ್ದೇನೇನೋ ಎನ್ನುವ ಅಳಕು ಇದೆ. ತಪ್ಪುಗಳಿದ್ದರೆ ಈ ಕಿರಿಯ ಲೇಖಕಿಯನ್ನು ಮನ್ನಿಸಿ ಎಂದು ಹೇಳುತ್ತಾ ಎನ್.ಎಲ್.ಸಿ ಅವರ ಸಾಹಿತ್ಯ ಹೀಗೆ ನಿರಂತರವಾಗಿ ಸಾಗಲಿ ಎಂದು ಆಶಿಸುತ್ತಾ.
ಶ್ರೀಮತಿ ಗಿರಿಜಾ ಮಾಲಿ ಪಾಟೀಲ ಸಂಸ್ಥಾಪಕ ಅಧ್ಯಕ್ಷರು ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ:9448713659)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ