ಭಾನುವಾರ, ಆಗಸ್ಟ್ 22, 2021

ಭಾರತದ ದಕ್ಷಿಣದ ತುದಿ ಕನ್ಯಾಕುಮಾರಿ (ಪ್ರವಾಸ ಕಥನ) - ಶ್ರೀಮತಿ ಸುಮಂಗಲಾ ಕೃಷ್ಣ ಕೊಪ್ಪರದ ಶಿಕ್ಷಕಿ ಇಲಕಲ್ಲ.

ಭಾರತದ ದಕ್ಷಿಣದ ತುದಿ ಕನ್ಯಾಕುಮಾರಿ ( ಪ್ರವಾಸ ಕಥನ )

ಶಿರದಲಿ ಹಿಮದ ಶೆರಗನೊದ್ದು
ಅಡಿಯಲ್ಲಿ ತ್ರಿವಳಿ ಶರದಿಗಳಿಂದಪ್ಪಿಕೊಂಡು 
ಘಟ್ಟಗಳ ಹಚ್ಚ ಹಸಿರಿನ ನೆರಿಗೆಗಳಂದದಲಿ
ಮೈದುಂಬಿ ನಿಂತಿದೆ ನನ್ನ ಭಾರತ
ಇದು ನಮ್ಮ ದೇಶ ಇದು ನಮ್ಮ ಹೆಮ್ಮೆ॥

ದಕ್ಷಿಣ ಭಾರತದಲ್ಲಿ ಬರುವ ಪ್ರಮುಖ ರಾಜ್ಯಗಳಲ್ಲಿ ತಮಿಳುನಾಡಿನಲ್ಲಿ ಬರುವ ಸೂರ್ಯೋದಯ ಮತ್ತು ಸೂರ್ಯಾಸ್ತದ ಬಾನಂಗಳದ ಸೌಂದರ್ಯವನ್ನು ನೋಡಲು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿರುವ ಹೆಸರುವಾಸಿಯಾದ ಸ್ಥಳವೆಂದರೆ ಕನ್ಯಾಕುಮಾರಿ. 
ಭಾರತದ ದಕ್ಷಿಣ ತುದಿಯಲ್ಲಿರುವ ಕನ್ಯಾಕುಮಾರಿ ಪಟ್ಟಣವು ತ್ರಿವಳಿ ಶರದಿಗಳಿಂದ  ಅಂದರೆ ಅರಬ್ಬೀ ಸಮುದ್ರ, ಹಿಂದೂ ಮಹಾಸಾಗರ' ಮತ್ತು ಬಂಗಾಳ ಕೊಲ್ಲಿಯಿಂದ ಆವರಿಸಲ್ಪಟ್ಟಿದೆ.೩ ಸಮುದ್ರಗಳ ಸಂಗಮ ತಾಣ ಕನ್ಯಾಕುಮಾರಿ.೩ ಸಮುದ್ರಗಳೂ ಸೇರಿರುವ ಆ ವೈಶಿಷ್ಟ್ಯವನ್ನು ನೋಡುವುದೇ ಅದ್ಭುತ ಸೃಷ್ಟಿಯ ವೈಚಿತ್ರ್ಯ.ಅತ್ಯಂತ ಸ್ಪಷ್ಟವಾಗಿ ೩ ಸಮುದ್ರಗಳ ನೀರಿನ ಬಣ್ಣ ವಿಭಿನ್ನವಾಗಿ ಗೋಚರವಾಗುತ್ತದೆ.ನೀರಿಗೆ ಬಣ್ಣವಿಲ್ಲವೆಂಬುದು ಸತ್ಯವೇ ಆದರೂ ಸೃಷ್ಟಿಯ ವೈಚಿತ್ರ್ಯ ದಲ್ಲಿ ನಾವು ವಿಭಿನ್ನವಾಗಿ  ಸಾಗರವನ್ನು ಗುರುತಿಸುವಂತೆ ಪ್ರಕೃತಿಯಲ್ಲಿ  ಬಿಂಬಿತವಾಗಿದೆ.
           ಕನ್ಯಾಕುಮಾರಿಯ ದೇವಾಲಯದಿಂದಾಗಿಯೇ ಈ ಪಟ್ಟಣಕ್ಕೆ ಕನ್ಯಾಕುಮಾರಿ ಎಂಬ ಹೆಸರು ಬಂದಿದೆ ಅಲ್ಲದೆ ಕನ್ಯಾಕುಮಾರಿಗೆ ಭಗವತಿಯಮ್ಮನ ದೇವಾಲಯ ಎಂದು ಕರೆಯುವರು.ಇದಕ್ಕೆ ಮೊದಲು 'ಕೇಪ್ ಕಾಮೊರಿನ್' ಎಂಬ ಹೆಸರಿನಿಂದ ಕರೆಯುತ್ತಿದ್ದರು . ಭಾರತದ  ೧೦೮ ಶಕ್ತಿಪೀಠಗಳಲ್ಲಿ ಕನ್ಯಾಕುಮಾರಿ ಶಕ್ತಿ ಪೀಠವೂ ಸಹ ಒಂದು. ಪಾರ್ವತಿದೇವಿಯ ಮರು ಅವತಾರದಲ್ಲಿ ಜನಿಸಿದ ಕನ್ಯಾಕುಮಾರಿಯ ಬಗ್ಗೆ ಪೌರಾಣಿಕ ಕಥೆಯನ್ನು ಸಹ ನಾವು ತಿಳಿದುಕೊಳ್ಳಬಹುದು .ಪೌರಾಣಿಕ ಕಥೆಯ ಪ್ರಕಾರ ಹಿಂದೆ ಬಾಣಾಸುರ ಎಂಬ ರಾಕ್ಷಸ ತನ್ನ ಅಮರತ್ವಕ್ಕಾಗಿ ಈ ಸ್ಥಳದಲ್ಲಿ ಶಿವನನ್ನು ಕುರಿತು ಉಗ್ರವಾದ ತಪಸ್ಸನ್ನು ಆಚರಿಸುತ್ತಾನೆ.ಶಿವನು ಬಾಣಾಸುರನ ತಪಶ್ಶಕ್ತಿಗೆ ಮೆಚ್ಚಿ ಆತನ ಅಮರತ್ವಕ್ಕಾಗಿ ವರವನ್ನು ದಯಪಾಲಿಸುತ್ತಾನೆ. ನಿನಗೆ ಕುಮಾರಿ ಕನ್ನಿಕೆಯಿಂದಲ್ಲದೆ ಮತ್ತಾರಿಂದಲೂ ಮರಣ ಸಂಭವಿಸುವುದಿಲ್ಲ ಎಂಬ ವರವನ್ನು ನೀಡುತ್ತಾನೆ. ಇದರಿಂದ ಸಂತೋಷನಾದ ಬಾಣಾಸುರ ಅನಾಚಾರ, ಹಿಂಸಾತ್ಮಕ ಕೃತ್ಯಗಳಲ್ಲಿ ತೊಡಗುತ್ತಾನೆ .ಈ ಬಾಣಾಸುರನ ಅಟ್ಟಹಾಸದಿಂದ ಭೂತಾಯಿಯ ಶಕ್ತಿ ಕುಂದಿ ತೊಡಗುತ್ತದೆ ಈ ರಾಕ್ಷಸನ ಅಟ್ಟಹಾಸವನ್ನು ಮಟ್ಟಹಾಕಲು ಭೂಮಾತೆಯು ಹಸುವಿನ ರೂಪಧರಿಸಿ , ಗೋಮಾತೆಯಾಗಿ ವಿಷ್ಣುವಿನ ಬಳಿ ಹೋಗುತ್ತಾಳೆ .ಶಂಖಚಕ್ರ ಗದಾಧಾರಿಯಾದ ಶ್ರೀವಿಷ್ಣುವು ಗೋಮಾತೆಗೆ ಯಾಗವನ್ನು ಮಾಡಲು ಸೂಚಿಸುತ್ತಾನೆ. ಅದರಂತೆ ಯಾಗವನ್ನು ಮಾಡಿದಾಗ, ಯಜ್ಞ ಕುಂಡದಲ್ಲಿ ಪಾರ್ವತೀದೇವಿ  ಕುಮಾರಿಯಾಗಿ ಬಾಲಕಿ ರೂಪದಲ್ಲಿ  ಉದ್ಭವಿಸುತ್ತಾಳೆ .ಬಾಲಕಿ ಬೆಳೆದು ದೊಡ್ಡವಳಾದ ಮೇಲೆ  ಶಿವನನ್ನು ವಿವಾಹವಾಗಲು ಬಯಸಿ ಕಠಿಣವಾದ ತಪಸ್ಸನ್ನು ಆಚರಿಸುತ್ತಾಳೆ .ಈಕೆಯ ತಪಶ್ಶಕ್ತಿಗೆ ಮೆಚ್ಚಿದ ಶಿವನು ವಿವಾಹವಾಗಲು ಒಪ್ಪುತ್ತಾನೆ .ಮಧ್ಯರಾತ್ರಿಯ ಶುಭ ಘಳಿಗೆಯಲ್ಲಿ ವಿವಾಹವೆಂದು ನಿಶ್ಚಿತವಾಗುತ್ತದೆ .ಬಾಣಾಸುರನ ಸಂಹರಿಸುವುದಕ್ಕಾಗಿ ಜನ್ಮತಾಳಿದ ಕುಮಾರಿಯ ವಿವಾಹದ ವಿಷಯ ನಾರದ ಮುನಿಗಳಿಗೆ ಗೊತ್ತಾಗುತ್ತದೆ. ಆಗ ನಾರದ ಮುನಿಗಳು ಪಾರ್ವತಿದೇವಿಯ ಅಂಶವಾದ ಕುಮಾರಿಯ ಬಳಿ ಬಂದು" ದುಷ್ಟರ ನಿಗ್ರಹಕ್ಕಾಗಿ ಜನ್ಮತಾಳಿದ ಹೇ ಮಾತೆಯೇ ಕುಮಾರಿಯಾಗಿರುವ ಈ ಸ್ಥಿತಿಯಲ್ಲಿ ತಮ್ಮಿಂದ ಒಂದು ಮಹತ್ಕಾರ್ಯ ನೆರವೇರಬೇಕಾಗಿದೆ. ಆದ್ದರಿಂದ ಈ ಮಹತ್ಕಾರ್ಯ ನೆರವೇರಿಸುವದಕಾಗಿ ಕಾರ್ಯಪ್ರವೃತ್ತರಾಗಬೇಕೆಂದು  ಕೇಳಿಕೊಳ್ಳುತ್ತಾನೆ.
            ಪರಶಿವನು  ಮಧ್ಯರಾತ್ರಿಯ ವೇಳೆ ವಿವಾಹ ಸಮಾರಂಭಕ್ಕೆ ಹೊರಡುವ ಮುನ್ನವೇ ನಾರದ ಮುನಿಗಳು ಕೋಳಿಯ ವೇಷದಲ್ಲಿ ಕೂಗುತ್ತಾರೆ. ಅದನ್ನು ಕೇಳಿಸಿಕೊಂಡ ಪರಶಿವನು ಸೂರ್ಯೋದಯವಾಗಿಬಿಟ್ಟಿದೆ . ವಿವಾಹವಾಗುವ ಮುಹೂರ್ತ ಮುಗಿದುಹೋಗಿದೆಯಂದು ಅಲ್ಲಿಯೇ ಸ್ತಂಭೀಭೂತನಾಗಿ  ನಿಂತುಬಿಡುತ್ತಾನೆ. ಇತ್ತ ಕುಮಾರಿಯೂ ಪರಶಿವನು ಬರದಿದ್ದರಿಂದ ಮದುವೆಗಾಗಿ ಮಾಡಿದಂತಹ ಎಲ್ಲಾ ಅಡುಗೆ ಸಾಮಗ್ರಿಗಳನ್ನು ಸಮುದ್ರ ದಡದಲ್ಲಿ ಹಾಕಿದಾಗ ಅದೆಲ್ಲ ಮರಳಾಗುತ್ತಾದೆ.ದವಸ ಧಾನ್ಯ ಗಳೆಲ್ಲ ವಿಭಿನ್ನ ಬಣ್ಣದ ಮರಳಿನ ರಾಶಿಗಳಾಗಿ  ನಿರ್ಮಾಣವಾಗುತ್ತದೆ .ಈಗಲೂ ಸಹ ಕನ್ಯಾಕುಮಾರಿಯಲ್ಲಿ ವಿಭಿನ್ನ ಬಣ್ಣದ ಮರಳಿನ ಮಾದರಿಯನ್ನು ನಾವು ನೋಡಬಹುದು .ವಿವಾಹವಾಗಬೇಕಿದ್ದ ಕುಮಾರಿ ಕನ್ನೆಯಾಗಿಯೇ ಉಳಿದಿದ್ದರಿಂದ ಕನ್ಯಾಕುಮಾರಿ ಎನಿಸಿದಳು.ಅಟ್ಟಹಾಸದಿಂದ ಮೆರೆಯುತ್ತಿದ್ದ ಬಾಣಾಸುರನಿಗೆ ಈ ಕನ್ನೆಯ ರೂಪ ಲಾವಣ್ಯಗಳನ್ನು ಕಂಡು ಅವಳನ್ನು ವಿವಾಹವಾಗುವುದಾಗಿ ಪೀಡಿಸುತ್ತಾನೆ .ಅದಕ್ಕೆ ಕನ್ಯಾಕುಮಾರಿ ನನ್ನೊಂದಿಗೆ ಯುದ್ಧ ಮಾಡಿ ನನ್ನನ್ನು ಸೋಲಿಸಬೇಕು ಆಗಲೇ ನಿನ್ನನ್ನು ಮದುವೆಯಾಗುವೆನೆಂದು ಹೇಳಿದಳು .ಅದರಂತೆ ಬಾಣಾಸುರ ಮತ್ತು ಕನ್ಯಾಕುಮಾರಿಯರ ನಡುವೆ ಯುದ್ಧ ನಡೆದಾಗ ಬಾಣಾಸುರ ಕನ್ಯಾಕುಮಾರಿಯಿಂದ  ಕೊಲ್ಲಲ್ಪಟ್ಟ .ಸಾಯುವ ಮುನ್ನ ಬಾಣಾಸುರ ತನ್ನ ತಪ್ಪುಗಳನ್ನು ಮನ್ನಿಸು ಎಂದು ಬೇಡಿಕೊಂಡಾಗ ಅವನು ಮೃತ ಹೊಂದಿದ ಸ್ಥಳದಲ್ಲಿ  ಸ್ನಾನಘಟ್ಟವನ್ನು ಏರ್ಪಡಿಸಿ ಬಾಣತೀರ್ಥ ಎಂಬ ಹೆಸರಿನಿಂದ ಗುರುತಿಸಲ್ಪಟ್ಟಿತು. ಇಲ್ಲಿ ಮಿಂದು ಪಿತೃಕಾರ್ಯಗಳನ್ನು ನೆರವೇರಿಸಿದವರು ಪುಣ್ಯದಲಿ ಭಾಗೀಗಳಾಗುವರು ಎಂಬ ನಂಬಿಕೆ ಇದೆ .ಬಾಣಾಸುರನನ್ನು ವಧಿಸಿದ ನಂತರ ಇದೇ ಸ್ಥಳದಲ್ಲಿ ಕನ್ಯೆ ಯಾಗಿಯೇ ಉಳಿದು ತನ್ನನ್ನು ಆರಾಧಿಸುತ್ತಾ ಬಂದವರನ್ನು ಹರಸುತ್ತಾ ಕನ್ಯಾಕುಮಾರಿಯಾಗಿ  ದೇವಿಯು ನೆಲೆಸಿದ್ದಾಳೆ .
         ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿರುವ ಈ ದೇವಾಲಯದ ಪೂರ್ವದ್ವಾರ ಮುಚ್ಚಲ್ಪಟ್ಟಿರುವದರಿಂದ ಕನ್ಯಾಕುಮಾರಿ ದೇವಿಯ ದರ್ಶನ ಪಡೆಯಲು ಉತ್ತರ ದಿಕ್ಕಿಗೆ ಇರುವ ದ್ವಾರದಿಂದಲೇ ಭಕ್ತಾದಿಗಳು ಬರುತ್ತಾರೆ .ಎಡಗೈಯಲ್ಲಿ ಮಾಲೆ' ವಜ್ರಾಲಂಕೃತ ಕಿರೀಟ, ವಜ್ರದ ಕಾಂತೀಯ ಮೂಗುತಿಯಿಂದ ಶೋಭಿತಳಾಗಿ ,ಹೂವಿನ ಮಾಲೆಯಿಂದ ಅಲಂಕೃತಗೊಂಡ ಕನ್ಯಾಕುಮಾರಿ ದೇವಿಯ ದಿವ್ಯ ತೇಜಸ್ಸು ಎಂಥವರನ್ನೂ ಮಂತ್ರಮುಗ್ಧರನ್ನಾಗಿಸುತ್ತದೆ .ಮಧುರೆಯ ಪಾಂಡ್ಯರ ಆಡಳಿತದಲ್ಲಿ ಎಂಟನೇ ಶತಮಾನದಲ್ಲಿ ಈ ದೇವಾಲಯ ನಿರ್ಮಾಣಗೊಂಡಿದೆ ಎಂದು ಇತಿಹಾಸದಿಂದ  ತಿಳಿದುಬರುತ್ತದೆ .ನನ್ನ ಪತಿ ಕೃಷ್ಣ ನನ್ನ ಸಹೋದರನ ಮಕ್ಕಳಾದ ಮಧುಗೌಡ, ಆಕಾಶ್ , ಶಶಾಂಕ್, ಮತ್ತು ಅಕ್ಕನ ಮಗ ಸಂತೋಷ್ ಹಾಗೂ ಅತ್ತಿಗೆಯರಾದ ಜಯಸುಧಾ ,ಅನಿತಾ ಹಾಗೂ ಸಹೋದರಿ ಸವಿತಾಳೊಂದಿಗೆ ಕನ್ಯಾಕುಮಾರಿ ಪಟ್ಟಣದ ಸೌಂದರ್ಯದ ಸೊಬಗನ್ನು  ಅನುಭವಿಸಿದೆವು .ಮಧುರೆಯಿಂದ ಕನ್ಯಾಕುಮಾರಿಗೆ ಆಗಮಿಸಿದ್ದ ನಮ್ಮ ಪ್ರಯಾಣ ಅತ್ಯಂತ ಸುಮಧುರವಾಗಿತ್ತು .ಬೆಳಗಿನ ಜಾವ ೫ ಗಂಟೆಗೆ ಸಮುದ್ರ ತೀರದಲ್ಲಿ ನಾವೆಲ್ಲರೂ ಸೂರ್ಯೋದಯದ ಆ ಹೊಂಗಿರಣದ ಕಾಂತಿಯ ಸೊಬಗಿನ ಸೌಂದರ್ಯವನ್ನು ಆಸ್ವಾದಿಸಲು ಕಾದು ಕುಳಿತಿದ್ದೆವು .ದೇಶ ವಿದೇಶಗಳಿಂದ ಸಾಕಷ್ಟು ಜನ ಪ್ರವಾಸಿಗರು ಆ ರಮಣೀಯ ಸೌಂದರ್ಯದ ವೀಕ್ಷಣೆಗಾಗಿ ತಮ್ಮ ಕ್ಯಾಮೆರಾಗಳನ್ನು ಕೈಯಲ್ಲಿಡಿದು ಆ ಚಿತ್ರದ ಸೊಬಗನ್ನು ಸೆರೆಹಿಡಿಯಲು ಕಾತುರರಾಗಿದ್ದರು.ಮತ್ತೊಮ್ಮೆ ಕನ್ಯಾಕುಮಾರಿಯತ್ತ ನಮ್ಮ ಪ್ರಯಾಣ ಯಾವಾಗ ಬರುವುದೋ  ಎಂದುಕೊಂಡು ನಾವೆಲ್ಲರೂ ಆ ಸೊಬಗಿನ ದೃಶ್ಯಾವಳಿಗಳನ್ನು ನಮ್ಮ ಕ್ಯಾಮೆರಾಗಳಲಿ ಕ್ಲಿಕ್ಕಿಸಿಕೊಂಡೆವು .ಸೂರ್ಯೋದಯವಾಗುತ್ತಿದ್ದಂತೆ, ನಮ್ಮ ಗಮನವೆಲ್ಲಾ ಆ ಸಮುದ್ರದ ತೆರೆಗಳಲಿ ಮಿಂದು ಸಮುದ್ರಸ್ನಾನ ಮಾಡುವ ತವಕ .ಸಮುದ್ರದಲ್ಲಿ ಸ್ನಾನ ಮಾಡಲು ಹಂಬಲಿಸುತ್ತಿದ್ದ ಆಕಾಶ್ ಮತ್ತು ಶಶಾಂಕ್ ಎಂಬ ಹನ್ನೆರಡು ವರ್ಷದ ಮಕ್ಕಳಿಗಂತೂ ಸಮುದ್ರ ಸ್ನಾನವೆಂದರೆ ಸ್ವರ್ಗವೇ ಧರೆಗಿಳಿದಂತೆ ಅನ್ನಿಸಿತ್ತು. ನೀರಿನಿಂದ ಹೊರ ಬರುವುದಕ್ಕೆ ಹಿಂದೇಟು ಹಾಕುತ್ತಿದ್ದರು .ಆ ಮಕ್ಕಳ ಜೊತೆ ನಾವೂ  ಸಮುದ್ರಸ್ನಾನ ಮಾಡಿ ನಮ್ಮ ಪ್ರಯಾಣವನ್ನು ಅಲ್ಲಿಯೇ ಇರುವ ಇತರ ಸ್ಥಳಗಳನ್ನ ನೋಡಲು ಬೆಳಸಿದೆವು.
 *ಗಾಂಧಿ ಮಂಟಪ*
    ಮಹಾತ್ಮ ಗಾಂಧೀಜಿಯವರು ೧೯೪೮  ಫೆಬ್ರುವರಿಯಲ್ಲಿ ಅಸ್ತಂಗತರಾದಾಗ, ಅವರ ಆಸ್ತಿ ಸಂಚಲನವನ್ನು ಕನ್ಯಾಕುಮಾರಿಯಲ್ಲಿ ನೆರವೇರಿಸಲಾಯಿತು.ಅದರ ಸ್ಮರಣಾರ್ಥವಾಗಿ ಮಹಾತ್ಮಗಾಂಧೀಜಿಯವರ ನೆನಪಿಗೋಸ್ಕರ ಒರಿಸ್ಸಾದ ವಾಸ್ತುಶಿಲ್ಪ ಶೈಲಿಯಲ್ಲಿ ಗಾಂಧಿಸ್ಮಾರಕ ಮಂಟಪವನ್ನು ನಿರ್ಮಿಸಿದ್ದಾರೆ .ಪ್ರತಿವರ್ಷ ಅಕ್ಟೋಬರ್ ೨ ರಂದು ಈ ಮಂಟಪದ ಮೇಲ್ಛಾವಣಿಯ ಒಂದು ರಂಧ್ರದಿಂದ ನೇರವಾಗಿ ಸೂರ್ಯನ ಕಿರಣಗಳು ಗಾಂಧಿ ಪ್ರತಿಮೆಯ ಮೇಲೆ ಬೀಳುವಂತೆ ಮಾಡಿರುವುದು ವಿಶೇಷ .ಗಾಂಧಿ ಪ್ರತಿಮೆಗೆ ನಾವೆಲ್ಲರೂ ನಮಿಸಿ, ಕನ್ಯಾಕುಮಾರಿಯಿಂದ ಹನ್ನೊಂದು ಕಿಲೋ ಮೀಟರ್ ದೂರದಲ್ಲಿರುವ ಸುಚೀಂದ್ರಂ ಎಂಬ ಸ್ಥಳಕ್ಕೆ ಭೇಟಿ ನೀಡಿದೆವು .

*ಸುಚೀಂದ್ರಂ*
 ಸುಚೀಂದ್ರಂ  ಕನ್ಯಾಕುಮಾರಿಯಿಂದ ಹನ್ನೊಂದು ಕಿಲೋ ಮೀಟರ್ ದೂರದಲ್ಲಿರುವ ಒಂದು ಪಟ್ಟಣ. ಇಲ್ಲಿ ಇತಿಹಾಸ ಪ್ರಸಿದ್ಧ 'ತನುಮಲೈಯನ್' ಎಂಬ ದೇವಸ್ಥಾನವಿದೆ.ಇದನ್ನು "ಜ್ಞಾನವನ ಕ್ಷೇತ್ರ"ವೆಂದು ಕರೆಯುತ್ತಾರೆ. ಇಲ್ಲಿಯೇ ಬ್ರಹ್ಮ, ವಿಷ್ಣು, ಮಹೇಶ್ವರರಮೂರ್ತಿಗಳನ್ನು ಕಾಣಬಹುದು. ನಾವು ಮಹಾಸತಿ ಅನಸೂಯಾದೇವಿಯ ಪಾತಿವ್ರತ್ಯದ ಕಥೆಯನ್ನು ಕೇಳಿದ್ದೇವೆ. ಅನುಸೂಯಾದೇವಿಯ ಪಾತಿವ್ರತ್ಯವನ್ನು ಪರೀಕ್ಷಿಸಲು ಬ್ರಹ್ಮ ವಿಷ್ಣು ಮಹೇಶ್ವರರು ಸನ್ಯಾಸಿಗಳ ವೇಷದಲ್ಲಿ ಬಂದು ಪಾತಿವ್ರತ್ಯ ಪರೀಕ್ಷಿಸಿದಾಗ, ಬ್ರಹ್ಮ ವಿಷ್ಣು ಮಹೇಶ್ವರರನ್ನು ಮಕ್ಕಳನ್ನಾಗಿ ಸೃಷ್ಟಿಸಿ ತನ್ನ ಪಾತಿವ್ರತ್ಯದ ಮಹಿಮೆಯನ್ನು ಸಾರಿದ  ಪೌರಾಣಿಕ ಕಥೆ ನಮಗೆಲ್ಲರಿಗೂ ತಿಳಿದಿರುವಂತಹ ವಿಷಯ. ಅಲ್ಲದೇ ಅರ್ಧರಾತ್ರಿಯ ವೇಳೆಯಲ್ಲಿ ದೇವೇಂದ್ರನು ಈ ಮಂದಿರದಲ್ಲಿ ಪೂಜೆ ಮಾಡುತ್ತಾನೆ ಎಂದು ನಂಬಿಕೆಯಿದೆ. ಇದನ್ನು ದೇವೇಂದ್ರ ಪೂಜೆಯೆಂದು ಕರೆಯುತ್ತಾರೆ.ಈ ದೇವಾಲಯದ ಮತ್ತೊಂದು ವಿಶೇಷವೆಂದರೆ , ೧೮  ಅಡಿ ಎತ್ತರದ ಆಂಜನೇಯನ ವಿಗ್ರಹವಿದೆ.ಆಂಜನೇಯನ ವಿಗ್ರಹದ ಬಾಲಕ್ಕೆ ಭಕ್ತಾದಿಗಳು ಬೆಣ್ಣೆಯನ್ನು ಹಚ್ಚಿಬೇಡಿಕೊಳುತ್ತಾರೆ.ಕಾರಣ ಲಂಕೆಯ ದಹನದ ಸಂದರ್ಭದಲ್ಲಿ ಹನುಮಂತನ ಬಾಲಕ್ಕೆ ಆದ ಗಾಯ ಮಾಯಲಿ ಎಂಬ ಭಾವನೆಯಿಂದ ಬೆಣ್ಣೆಯನ್ನು ಸವರಿ ಅದರಿಂದ ತಮ್ಮ ಬೇಡಿಕೆಗಳನ್ನು ಈಡೇರಿಸು ದೇವಾ ಎಂಬ ಕೋರಿಕೆಯನ್ನು ಇಡುತ್ತಾರೆ.ಪ್ರತಿವರ್ಷ ಧನುರ್ಮಾಸದಲ್ಲಿ ರಥೋತ್ಸವ ಕಾರ್ಯಕ್ರಮ ನಡೆಯುತ್ತದೆ ಎಂಬ ವಿಷಯ ತಿಳಿಯಿತು .ಶುಚೀಂದ್ರಂ ಸ್ಥಳದಿಂದ ನಮ್ಮ ಪ್ರಯಾಣ 'ಸ್ವಾಮಿ ವಿವೇಕಾನಂದ ರಾಕ್ ಮೆಮೋರಿಯಲ್' ಸ್ಥಳ ನೋಡಲು ಹೊರಟಿತು. 

ಸ್ವಾಮಿ ವಿವೇಕಾನಂದರ ವಾಚನಾಲಯ :
ಕನ್ಯಾಕುಮಾರಿಯಿಂದ ೪೦೦ ಮೀಟರ್ ಅಂತರದಲ್ಲಿ ಹಿಂದೂ ಮಹಾ ಸಾಗರದ ನಡುವೆ ೨ ಹೆಬ್ಬಂಡೆಗಳನ್ನು ನಾವು ಕಾಣುತ್ತೇವೆ.ಅವುಗಳಲ್ಲಿ ಹಿರಿದಾದ ಬಂಡೆಯ ಮೇಲೆ ೧೮೯೦ರ ಅವಧಿಯಲ್ಲಿ ಕನ್ಯಾಕುಮಾರಿ ಸ್ಥಳಕ್ಕೆ ಆಗಮಿಸಿದ ಸ್ವಾಮಿ ವಿವೇಕಾನಂದರು, ಸಮುದ್ರದ ಅಲೆಗಳನ್ನು ಲೆಕ್ಕಿಸದೆ ಈಜುತ್ತಾ ಹಿರಿದಾದ ಹೆಬ್ಬಂಡೆಯ ಮೇಲೆ ಕುಳಿತು ಧ್ಯಾನಾಸಕ್ತರಾಗಿ ಯೋಗ ಸಿದ್ಧಿಯನ್ನು ಪಡೆದರು ಎಂಬುದು ಜನಜನಿತ. ಅವರ ಆಗಮನದ  ಸ್ಮರಣಾರ್ಥವಾಗಿ ಇಲ್ಲಿ ವಿವೇಕಾನಂದ ವಾಚನಾಲಯ ಎಂಬ ಸಂಸ್ಥೆಯೊಂದನ್ನು ಸ್ಥಾಪಿಸಿದ್ದಾರೆ .ಸ್ವಾಮಿ ವಿವೇಕಾನಂದರ ೨.೨ ಮೀಟರ್ ಎತ್ತರದ ಕಂಚಿನ ವಿಗ್ರಹವಿದೆ.ಈ ಸ್ಥಳದಲ್ಲಿ ಮಂದಿರದ ನಿರ್ಮಾಣ, ನೆಲಮಾಳಿಗೆಯಲ್ಲಿ ಧ್ಯಾನ ಮಂದಿರ, ಮತ್ತು ವಸ್ತು ಸಂಗ್ರಹಾಲಯವನ್ನೂ ಕಾಣಬಹುದು.

  ಈ ಸ್ಮಾರಕಗಳನ್ನು ನೋಡಲು ನಾವು ಮಿನಿ ಹಡಗುಗಳ ಮುಖಾಂತರ ಪ್ರಯಾಣ ಬೆಳೆಸಿ ಅಲ್ಲಿರುವ ಸ್ವಾಮಿ ವಿವೇಕಾನಂದರ ಪುತ್ಥಳಿಗೆ ನಮಸ್ಕರಿಸಿ, ೩ ಸಮುದ್ರಗಳು ವಿಭಿನ್ನ ಬಣ್ಣಗಳಿಂದ ಬಿಂಬಿತವಾಗಿರುವುದನ್ನು ಕಂಡು ಹರ್ಷಗೊಂಡೆವು.ಸುತ್ತಲೂ ನೀರಿನಿಂದಾವೃತವಾದ ಹಿರಿದಾದ ಹೆಬ್ಬಂಡೆಯ ನಡುವೆ ನಿಂತಾಗ ನಾವೊಂದು ದ್ವೀಪದಲ್ಲಿ ನಿಂತಿರುವಂತೆ  ಭಾಸವಾಗುತಿತ್ತು.ಕಣ್ಣು ಹಾಯಿಸಿದಷ್ಟು ದೂರ ಸಮುದ್ರದ ಅಲೆಗಳ ಕಂಪನ.ಅಲ್ಲಿ ಕೆಲವು ಫೋಟೋಗಳನ್ನು ತೆಗೆಸಿಕೊಂಡು ಅಲ್ಲಿಂದ ಪುನಃ ಹಡಗಿನ ಮುಖಾಂತರ ಅಲ್ಲಿಯೇ ಇರುವ ಮತ್ತೊಂದು ಹೆಬ್ಬಂಡೆಯ ಮೇಲೆ ತಮಿಳುನಾಡಿನ ಪ್ರಸಿದ್ಧ ಮಹಾಕವಿ 'ತಿರುವಳ್ಳುವರ್' ಪ್ರತಿಮೆಯನ್ನು ನೋಡಲು ಹೋದೆವು .೧೩೩ಅಡಿ ಎತ್ತರದ ತಿರುವಳ್ಳುವರ್ ಕಾಂಕ್ರೀಟ್ ನಿರ್ಮಿತ ಪ್ರತಿಮೆ ,೨೦೦೦ ರಲ್ಲಿ  ಜನೆವರಿ ೧ ರಂದು ಅನಾವರಣ ಗೊಂಡಿತು. ಎಂಬ ವಿಷಯ ಅರಿತೆವು. ತಮಿಳು ಮಹಾಕವಿಯ ಪ್ರತಿಮೆಗೆ ನಮಸ್ಕರಿಸಿ ಪುನಃ ಕನ್ಯಾಕುಮಾರಿಗೆ ಬಂದೆವು. ಆ ವೇಳೆಗಾಗಲೇ ಸಾಯಂಕಾಲವಾಗಿತ್ತು. ನಮ್ಮ ಗಮನವೆಲ್ಲ ಪುನಃ ಸೂರ್ಯ ಅಸ್ತಂಗತವಾಗುವ ದೃಶ್ಯವನ್ನು ನೋಡಲು ಕಾತರಿಸುತ್ತಿತ್ತು .ಸೂರ್ಯನ ಅಸಂಗತ ದೃಶ್ಯವನ್ನು ನೋಡುತ್ತಾ ಅಲ್ಲಿ ಬಂದಿದ್ದ ಸಾವಿರಾರು ಪ್ರವಾಸಿಗರ ವೇಷಭೂಷಣಗಳನ್ನು ನೋಡುತ್ತಾ ಅವರಂತೆ ನಾವು ಒಂದು ಫೋಟೋ ತೆಗೆಸಿಕೊಳ್ಳೋಣ ಎಂದುಕೊಂಡು ಅತ್ತಿಗೆಯರ ನ್ನೊಳಗೊಂಡು ಎಲ್ಲರೂ  ಮುಖಕ್ಕೆ ವೇಲ್ ಕಟ್ಟಿಕೊಂಡು ಅರೇಬಿಯನ್ ಸ್ತ್ರೀಯರಂತೆ ಪೋಸ್ ಕೊಟ್ಟಿದ್ದು ನೆನೆಸಿಕೊಂಡರೆ ಈಗಲೂ ನಗು ಉಕ್ಕಿ ಬರುತ್ತದೆ .ಕನ್ಯಾಕುಮಾರಿಯ ಮತ್ತೊಂದು ವಿಶೇಷವೆಂದರೆ, ಪೌರ್ಣಿಮೆಯ ದಿನ ಸಾಯಂಕಾಲದ ಸಮಯದಲ್ಲಿ ಮೆಲ್ಲಮೆಲ್ಲನೆ ಉದಯಿಸುತ್ತಿರುವ ಚಂದ್ರ ಮತ್ತು ಅಸ್ತಂಗತನಾಗುತ್ತಿರುವ  ಸೂರ್ಯ, ಹಾಗೆಯೇ ಬೆಳಗಿನ ಜಾವ ಪ್ರಾತ:ಕಾಲದಲ್ಲಿ ಉದಯಿಸುವ ಸೂರ್ಯ ,ಅಸ್ತಂಗತನಾಗುವ ಚಂದ್ರ ಈ ದೃಶ್ಯಗಳನ್ನು ನೋಡಲು ಕಣ್ಣುಗಳೆರಡು ಸಾಲದು .ಇದನ್ನು ಕಾಣಬಹುದಾದ ಏಕಮಾತ್ರ ಸ್ಥಳ  ಕನ್ಯಾಕುಮಾರಿ. ಈ ದೃಶ್ಯ ವೈಭವವನ್ನು ಕಣ್ಮನಗಳಲ್ಲಿ ತುಂಬಿಕೊಳ್ಳಲು ಲಕ್ಷಾಂತರ ಜನ ಇಲ್ಲಿಗೆ ಬರುತ್ತಾರೆ .ಇಂತಹ ದೃಶ್ಯವನ್ನು ನೋಡಲು ನಮಗೆಲ್ಲ ಅವಕಾಶ ಕಲ್ಪಿಸಿ ಕೊಟ್ಟಂತಹ ನನ್ನ ಪತಿಗೆ ಕೃಷ್ಣನಿಗೆ ಮನಪೂರ್ವಕವಾಗಿ ಧನ್ಯವಾದ ಸಲ್ಲಿಸಿದೆ .ಸಮುದ್ರದ ಅಲೆಗಳ ಜೊತೆಗೆ ಬರುವಂತಹ ಕಪ್ಪೆಚಿಪ್ಪು, ಶಂಖ, ಕವಡೆಗಳನ್ನು, ತೀರಪ್ರದೇಶದಲ್ಲಿ ನಿಂತು ಸಮುದ್ರದ ಉಪ್ಪು ನೀರಿನ  ಅಲೆಗಳನ್ನು ಕಾಲಿಗೆ ಬಡಿಸಿಕೊಳ್ಳುವ ಸಂಭ್ರಮದ ಜೊತೆಗೆ ಅವುಗಳನ್ನು  ಆಯ್ದುಕೊಂಡು ,ವಿಭಿನ್ನ ಬಗೆಯ ಬಣ್ಣಬಣ್ಣದ ಮರಳನ್ನು ಸಂಗ್ರಹಿಸಿ ಕೊಂಡು ನಮ್ಮ ಪ್ರಯಾಣವನ್ನು ರಾಮೇಶ್ವರದತ್ತ ಬೆಳೆಸಿದೆವು .ಕನ್ಯಾಕುಮಾರಿಯಿಂದ ರಾಮೇಶ್ವರಕ್ಕೆ ರೈಲು ಪ್ರಯಾಣದ ಸಿದ್ಧತೆಯಲ್ಲಿ ನಾವು ರೈಲ್ವೆಸ್ಟೇಷನ್ನಿಗೆ ಬಂದೆವು .ಆ ರಾತ್ರಿ ರೈಲ್ವೆ ಸ್ಟೇಷನ್ನಿನಲ್ಲಿ ಊಟ ಮಾಡಿ ನಮ್ಮ ಪ್ರಯಾಣವನ್ನು ರಾಮೇಶ್ವರದತ್ತ ಬಳಸಿದೆವು ..........
- ಶ್ರೀಮತಿ ಸುಮಂಗಲಾ ಕೃಷ್ಣ ಕೊಪ್ಪರದ ಶಿಕ್ಷಕಿ ಇಲಕಲ್ಲ .



(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...