ಇಲ್ಲಿನ ಅನ್ನ ತಿನ್ನುವ ಮುನ್ನ, ಕಲಿ ಕನ್ನಡವನ್ನು, ತಿಳಿ ಇದರ ಸಂಸ್ಕೃತಿ ಮತ್ತು ಇತಿಹಾಸವನ್ನು, ಮರೆಯದಿರು ಕರುನಾಡನ್ನು".....
"ಪರಿಪರಿಯ ಪರಿಮಳದಿ ಅತಿ ಶ್ರೇಷ್ಠ ವೆನಿಸುವುದು ಕಸ್ತೂರಿಯು, ನುಡಿಗಳಲ್ಲಿ ಅತಿಮಧುರ ವೆನಿಸುವುದು ಕನ್ನಡ ನುಡಿಯು ಸಿರಿಗನ್ನಡ ನುಡಿಯು"
ನಮ್ಮ ನಾಡು ಸಂಸ್ಕೃತಿಯ ನೆಲೆವೀಡು,ಇದು ಸಾಧಕರ ಕರ್ಮಭೂಮಿ, ನಮ್ಮ ತಾಯಿನಾಡು ಗಂಧದ ಬೀಡು,ಚಿನ್ನದ ನಾಡು, ಕಲೆ, ಸಾಹಿತ್ಯ,ಸಂಸ್ಕೃತಿಯ ತವರೂರು. ಕವಿಪುಂಗವರು, ದಾಸಶ್ರೇಷ್ಠರು, ವಚನಕಾರರು, ಸಂತರು, ಜ್ಞಾನಿಗಳು, ನೀತಿವಂತರು, ವಿಚಾರವಂತರ ತಪೋಭೂಮಿ. ಗಂಗರು, ಕದಂಬರು, ಚಾಲುಕ್ಯರು, ಹೊಯ್ಸಳರು, ರಾಷ್ಟ್ರಕೂಟರು, ವಿಜಯನಗರದ ಅರಸರು, ಮೈಸೂರಿನ ಒಡೆಯರು ಇನ್ನೂ ಮುಂತಾದ ಶ್ರೇಷ್ಠ ಮನೆತನಗಳು ನಮ್ಮ ನಾಡನ್ನು ಆಳ್ವಿಕೆ ಮಾಡಿರುವುದೇ ಅಲ್ಲದೇ, ತಮ್ಮ ಆಸ್ಥಾನದಲ್ಲಿ ಶ್ರೇಷ್ಠ ವಿದ್ವಾಂಸರು, ಕವಿಗಳಿಗೆ ಆಶ್ರಯ ನೀಡಿ, ಕನ್ನಡ ಭಾಷೆ ಮತ್ತು ಸಾಹಿತ್ಯವನ್ನು ಆಗಿನ ಕಾಲದಲ್ಲೇ ಶ್ರೀಮಂತ ಗೊಳಿಸಿರುವುದು ಮಾತ್ರವಲ್ಲದೆ, ಅದರ ಕೀರ್ತಿಯನ್ನು ವಿಶ್ವದಾದ್ಯಂತ ಪಸರಿಸಿವೆ.
ಕಾವೇರಿ, ಕೃಷ್ಣ, ತುಂಗಭದ್ರಾ, ಶರಾವತಿ ಮುಂತಾದ ನದಿಗಳು ಈ ನಾಡಿನಲ್ಲಿ ಹರಿದು ಪವಿತ್ರ ತೀರ್ಥ ಕ್ಷೇತ್ರವನ್ನಾಗಿ ಮಾಡಿವೆ.
" ಹಸುರಿನ ಬನಸಿರಿಗೇ ಒಲಿದು ಸೌಂದರ್ಯ ಸರಸ್ವತಿ ಧರೆಗಿಳಿದು" ಎಂಬ ನುಡಿಯಂತೆ ನಿತ್ಯಹರಿದ್ವರ್ಣ ಕಾಡುಗಳಿಂದ ಕಂಗೊಳಿಸುತ್ತಿರುವ ಸಹ್ಯಾದ್ರಿ ಪರ್ವತಶ್ರೇಣಿಯ ಮಲೆನಾಡಿನ ಹಸಿರು ತಾಯಿ ಭುವನೇಶ್ವರಿಯ ಕಿರೀಟದಂತೆ ಕಂಗೊಳಿಸುತ್ತಿದ್ದು,ಅನೇಕ ಖಗ- ಮೃಗಗಳಿಗೆ ಆಶ್ರಯ ತಾಣವಾಗಿದೆ. "ಸರ್ವ ಜನಾಂಗದ ಶಾಂತಿಯ ತೋಟ"ಎಂಬ ರಸಋಷಿ ಕುವೆಂಪು ಅವರ ಮಾತಿನಂತೆ ಇಲ್ಲಿ ಅನೇಕ ಧರ್ಮ-ಜಾತಿ,ಸಂಪ್ರದಾಯ, ಸಂಸ್ಕೃತಿ, ಆಚಾರ-ವಿಚಾರವನ್ನು ಪಾಲಿಸುವ ಜನರಿದ್ದರೂ ಕೂಡ, ಒಂದೇ ಬಳ್ಳಿಯ ಹೂಗಳಂತೆ ಜೀವನ ನಡೆಸುತ್ತಿದ್ದಾರೆ.
ಭಾರತೀಯ ಭಾಷೆಗಳಲ್ಲಿ ಅತಿ ಹೆಚ್ಚು ಅಂದರೆ ಎಂಟು ಜ್ಞಾನಪೀಠ ಪ್ರಶಸ್ತಿಯನ್ನು ತನ್ನ ಮಡಿಲಿಗೆ ಹಾಕಿಕೊಂಡ ಏಕೈಕ ಭಾಷೆಯೆಂದರೆ ಅದು ನಮ್ಮ ಕನ್ನಡ ಭಾಷೆ ಮಾತ್ರ ಇದು ನಮ್ಮ ಸಾಹಿತ್ಯ ದಿಗ್ಗಜರ ಸಾಧನೆಯ ಒಲುಮೆಗೆ ಹಿಡಿದ ಕೈಗನ್ನಡಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಅಷ್ಟೇ ಅಲ್ಲದೆ ಶಾಸ್ತ್ರೀಯ ಸ್ಥಾನಮಾನ ಪಡೆದ ಕೆಲವೇ ಕೆಲವು ಭಾಷೆಗಳಲ್ಲಿ ಕನ್ನಡವು ಕೂಡ ಒಂದು.
ಕರುನಾಡು ಎಂದರೆ ಎತ್ತರದ ನಾಡು, ಕಪ್ಪುಮಣ್ಣಿನ ನಾಡು, ಪರಿಮಳ ವಾಚಿಯಾದ ನಾಡು ಎಂಬ ವಿವಿಧ ರೀತಿಯ ವ್ಯಾಖ್ಯಾನಗಳನ್ನು ವಿದ್ವಾಂಸರು ನೀಡಿದ್ದಾರೆ. ಕನ್ನಡ ನಾಡು ತನ್ನ ಭೂಗರ್ಭದಲ್ಲಿ ಅಸಂಖ್ಯಾತ ಖನಿಜ ಸಂಪತ್ತು ಹಾಗೂ ಹೇರಳವಾದ ಚಿನ್ನದ ನಿಕ್ಷೇಪವನ್ನು ಒಳಗೊಂಡಿತ್ತು. ಆದ್ದರಿಂದ ಇದನ್ನು 'ಚಿನ್ನದ ನಾಡು' ಎಂತಲೂ ಕರೆಯುತ್ತಾರೆ.
ಮತ್ತೊಂದು ವಿಚಾರವನ್ನು ಗಮನಿಸಿದರೆ, ಕರ್ನಾಟಕ ನೋಡಲು ಗೋಡಂಬಿ ಆಕಾರದಲ್ಲಿದೆ. ಅದರಷ್ಟೇ ಇಲ್ಲಿನ ಜನ ಹೃದಯ ಶ್ರೀಮಂತರು ಎಂಬುದಕ್ಕೆ ಸಾಕ್ಷಿ ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯ ಕಾಲದಲ್ಲಿ ಮುತ್ತು-ರತ್ನ, ವಜ್ರ-ವೈಢೂರ್ಯಗಳನ್ನು ಹಾದಿ- ಬೀದಿಯಲ್ಲಿ ಮಾರುತ್ತಿದ್ದ ಶ್ರೀಮಂತ ರಾಜ್ಯ ನಮ್ಮದು. ಆದರೆ ಕಾರಣಾಂತರಗಳಿಂದ ಕ್ರೂರಿಗಳ ದುರಾಸೆಗೆ ಒಳಗಾಗಿ ಅವಸಾನದ ಹಾದಿ ಹಿಡಿದದ್ದು ವಿಷಾದನೀಯ. ಅವಸಾನದ ಹಾದಿ ಹಿಡಿದಿತ್ತು ಎಂದ ಮಾತ್ರಕ್ಕೆ ನಮ್ಮ ನಾಡು ಸಂಪೂರ್ಣವಾಗಿ ಅವನತಿ ಹೊಂದಿತು ಎಂದು ಅರ್ಥವಲ್ಲ.ತನ್ನ ಗತಕಾಲದ ವೈಭವವನ್ನು ಸ್ವಲ್ಪ ಮಟ್ಟಿಗೆ ಕಳೆದುಕೊಂಡಿತು ಅಷ್ಟೇ,
ಬೀದರ್ ನಿಂದ ಹಿಡಿದು ಚಾಮರಾಜನಗರದವರೆಗೆ ವಿಭಿನ್ನ ಭಾಷೆ,ಸಂಸ್ಕೃತಿ, ವೇಷಭೂಷಣ ಈ ಎಲ್ಲಾ ವೈವಿಧ್ಯತೆಯನ್ನು ತನ್ನ ಒಡಲಲ್ಲಿ ಇಟ್ಟುಕೊಂಡು, ಪೋಷಿಸುತ್ತಿರುವವಳು ಕರುನಾಡ ತಾಯಿ. ಕನ್ನಡನಾಡಿನ ಕಾಶ್ಮೀರ ದಂತಿರುವ ಕೊಡಗು, ಸಾಂಸ್ಕೃತಿಕ ರಾಜಧಾನಿ ಮೈಸೂರು, ವಿದ್ಯಾಕಾಶಿ ಧಾರವಾಡ, ಕರ್ನಾಟಕದ ಮ್ಯಾಂಚೆಸ್ಟರ್ ದಾವಣಗೆರೆ, ಸಕ್ಕರೆಯ ಪಾಕದಂತೆ ಅಕ್ಕರೆಯ ಜನರಿರುವ ಬೆಳಗಾವಿ, ಮಂಡ್ಯ, ಬಾಗಲಕೋಟೆ, ಹೀಗೆ ತನ್ನದೇ ಆದಂತಹ ವಿಶೇಷತೆಯನ್ನು ನಮ್ಮ ನಾಡು ಹೊಂದಿದೆ. ಇವಿಷ್ಟೇ ಅಲ್ಲದೇ 'ನಮ್ಮ ನಾಡು ಹೆಮ್ಮೆಯ ನಾಡು' ಎಂದು ಎದೆ ತಟ್ಟಿ ಹೇಳಿಕೊಳ್ಳಲು ಅನೇಕ ಸಂಗತಿಗಳಿವೆ. ಐಟಿ-ಬಿಟಿ ಖ್ಯಾತಿಯ ವಿಶ್ವವಿಖ್ಯಾತ ಸಿಲಿಕಾನ್ ಸಿಟಿ ಬೆಂಗಳೂರು ನಮ್ಮ ರಾಜ್ಯದ ರಾಜಧಾನಿಯಾಗಿದ್ದು,ನಮ್ಮ ನಾಡಿನ ಹೆಮ್ಮೆಯ ಕಳಶವಿದ್ದಂತೆ. ಆಧುನಿಕ ಯುಗದ ಕೈಗಾರಿಕೆಗಳ ನೆಲೆಬೀಡು, ಕೃಷಿ ವಿಜ್ಞಾನದ (ಜಿಕೆವಿಕೆ )ತವರು, ವಿಶ್ವವಿಖ್ಯಾತ ಸಾಫ್ಟ್ವೇರ್ ಕಂಪನಿಗಳಾದ ಇನ್ಫೋಸಿಸ್,ವಿಪ್ರೋ, ಇಂಟೆಲ್ ಇನ್ನೂ ಮುಂತಾದ ನೂರಾರು ಕಂಪನಿಗಳನ್ನು ವಿಶ್ವಕ್ಕೆ ಪರಿಚಯಿಸಿದ ನಾಡು ನಮ್ಮದು. ಇದರ ಮಗ್ಗುಲಲ್ಲೇ ಜಗದ್ವಿಖ್ಯಾತ ಅರಮನೆಯನ್ನು ಹೊಂದಿರುವ ಸಾಂಸ್ಕೃತಿಕ ರಾಜಧಾನಿ ಮೈಸೂರು, ಹಾಗೆಯೇ ಮುಂಬೈ ಕರ್ನಾಟಕ ಪ್ರಾಂತ್ಯಕ್ಕೆ ಬಂದರೆ ನಮಗೆ ಸಿಗುವ ಕುರುಹುಗಳು ಒಂದೇ-ಎರಡೇ? ತಾಯಿ ತಾಯಿನಾಡಿಗೆ ಪ್ರಾಣಕೊಟ್ಟ ಕಿತ್ತೂರು ಸಂಸ್ಥಾನದ ರಾಣಿ ಚೆನ್ನಮ್ಮ ಹಾಗೂ ಆಕೆಯ ಬಲಗೈ ಬಂಟ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಅದೇ ರೀತಿ 12ನೇ ಶತಮಾನದಲ್ಲಿ ವಚನ ಕ್ರಾಂತಿಯ ಹರಿಕಾರರಾದ ಭಕ್ತಿ ಭಂಡಾರಿ ಬಸವಣ್ಣ, ಅಕ್ಕಮಹಾದೇವಿ ಮುಂತಾದವರು ನಡೆದಾಡಿದ ಪವಿತ್ರ ಭೂಮಿ. ಜನಪದರು ಹಾಗೂ ಸರ್ವಜ್ಞನ ತ್ರಿಪದಿಗಳು ಇಂದಿನ ಆಧುನಿಕ ಯುಗಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಅಷ್ಟೇ ಅಲ್ಲ ತಮ್ಮ ಕೀರ್ತನೆಯ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದಿದ ಶ್ರೇಷ್ಠರಾದ ಕನಕ-ಪುರಂದರದಾಸರು ಬದುಕಿ ಬಾಳಿದ ಪುಣ್ಯ ಭೂಮಿ. ಹಾಗೆಯೇ ಪಂಪ,ಪೊನ್ನ,ರನ್ನ, ಶ್ರೀವಿಜಯ, ಕುಮಾರವ್ಯಾಸನಿಂದ ಹಿಡಿದು,ಕುವೆಂಪು,ಬೇಂದ್ರೆ, ಗೋಕಾಕ್,ಕಾರ್ನಾಡ್, ಕಂಬಾರರ ವರೆಗೂ ಸಾಹಿತ್ಯಲೋಕದ ಗಣಿಯಿಂದ ತುಂಬಿದ ನಾಡು
ನಮ್ಮದು.
" ಕೈಗಾರಿಕೀಕರಣ ಇಲ್ಲವೆ ವಿನಾಶ" ಎಂದು ಸಾರಿದ ಭಾರತದ ಭಾಗ್ಯ ಶಿಲ್ಪಿ ಸರ್ ಎಂ ವಿಶ್ವೇಶ್ವರಯ್ಯನವರು ಮೈಸೂರಿನ ದಿವಾನರಾಗಿ ಕರ್ನಾಟಕದಲ್ಲಿ ಅನೇಕ ಕೈಗಾರಿಕೆಗಳನ್ನು ಸ್ಥಾಪಿಸಿರುವುದು ಅಲ್ಲದೆ ಕೃಷ್ಣರಾಜಸಾಗರ ಅಣೆಕಟ್ಟು, (ಕೆ ಆರ್ ಎಸ್ ),ಮೈಸೂರು ಬ್ಯಾಂಕ್, ಮೈಸೂರು ವಿಶ್ವವಿದ್ಯಾನಿಲಯದ ಸ್ಥಾಪನೆಯಲ್ಲಿ ಅವರ ಕೊಡುಗೆ ಅವಿಸ್ಮರಣೀಯವಾದದ್ದು. ವಿಶ್ವವಿಖ್ಯಾತ ಜೋಗ ಜಲಪಾತ, ಬಾದಾಮಿ,ಐಹೊಳೆ ,ಪಟ್ಟದಕಲ್ಲು, ವಿಜಯಪುರದ ಗೋಲಗುಮ್ಮಟ, ಹಂಪಿ ,ಬೇಲೂರು ,ಹಳೇಬೀಡು, ಶ್ರವಣಬೆಳಗೊಳ ಇಲ್ಲಿನ ಶಿಲ್ಪಕಲೆ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತವೆ.ಧರ್ಮಸ್ಥಳ, ಶೃಂಗೇರಿ, ಹೊರನಾಡು, ಕುಕ್ಕೆ ಸುಬ್ರಮಣ್ಯ, ಕೂಡಲಸಂಗಮ, ಮಲೆಮಹದೇಶ್ವರ ಬೆಟ್ಟ, ಚಾಮುಂಡಿ ಬೆಟ್ಟ ನಮ್ಮ ನಾಡಿನ ಭಕ್ತಿ ಕೇಂದ್ರಗಳು ಹಾಗೂ ಮನಶಾಂತಿಯ ತಾಣಗಳಾಗಿವೆ.
ನಮ್ಮ ನಾಡಿನ ಜನರು ದಕ್ಷಿಣದಲ್ಲಿ ಭತ್ತ-ರಾಗಿ ಬೆಳೆದು ನಿರೋಗಿಗಳಾಗಿ ಕಾವೇರಿಯಲ್ಲಿ ಮಿಂದೆದ್ದರೆ, ಉತ್ತರದಲ್ಲಿ ಜೋಳ- ಕಬ್ಬು ಬೆಳೆದು ಸಿಹಿಯನ್ನು ಹಂಚುವವರಾಗಿ ಕೃಷ್ಣೆಯಲ್ಲಿ ಮಿಂದು, ಪುಣ್ಯಜೀವಿ ಗಳಾಗಿದ್ದಾರೆ. ಇದನ್ನು ನೋಡಿಯೇ ಪಂಪ "ಆರಂಕುಶವಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ"ಎಂದು ಉದ್ಘೋಷಿಸಿದ್ದಾನೆ. "ಮರಿದುಂಬಿಯಾಗಿ, ಮೇಣ್ ಕೋಗಿಲೆಯಾಗಿ ಪುಟ್ಟುವುದು ನಂದನದೊಳ್ ಬನವಾಸಿ ದೇಶದೊಳ್" ಎಂಬಂತೆ ಕರುನಾಡು ನಂದನವನ,ಚಂದನವನವೇ ಆಗಿದೆ. ಇಲ್ಲಿನ ಜನರು ಹೃದಯ ವೈಶಾಲ್ಯ ಉಳ್ಳವರಾಗಿದ್ದು ಸಹೃದಯ ಶೀಲ ರಾಗಿದ್ದಾರೆ. ಆದರೆ ಇಂದಿನ ದಿನಗಳಲ್ಲಿ ಜನರಲ್ಲಿ ನಮ್ಮ ನಾಡಿನ ಹಾಗೂ ಭಾಷೆಯ ಬಗ್ಗೆ ಅಭಿಮಾನ ಕ್ಷೀಣಿಸುತ್ತಿದೆ.ಪರಭಾಷಾ ವ್ಯಾಮೋಹ ಜಾಸ್ತಿಯಾಗುತ್ತಿದ."ಉದರ ನಿಮಿತ್ತಂ ಬಹುಕೃತ ವೇಷಂ" ಎಂಬಂತೆ ಉದರ ಪೋಷಣೆಗಾಗಿ ಅನ್ಯ ರಾಜ್ಯದಿಂದ ನಮ್ಮ ರಾಜ್ಯಕ್ಕೆ ಬಂದವರು ಇಂದು ನಮ್ಮ ತನವನ್ನೇ ಕಸಿದುಕೊಳ್ಳುತ್ತಿದ್ದಾರೆ. ಆದ್ದರಿಂದ ನಾವು ಮೊದಲು ಅವರಿಗೆ ನಮ್ಮ ಭಾಷೆಯ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ,ನಮ್ಮ ನಾಡಿನ ಇತಿಹಾಸ, ಸಂಸ್ಕೃತಿ, ಪರಂಪರೆ,ಆಚಾರ- ವಿಚಾರದ ಬಗ್ಗೆ ತಿಳಿಸಿ, ಹಂತಹಂತವಾಗಿ ನಮ್ಮ ಭಾಷೆಯನ್ನು ಕೂಡ ಕಲಿಸಬೇಕು.ಈ ನಿಟ್ಟಿನಲ್ಲಿ ನಮ್ಮ ರಾಜ್ಯ ಸರ್ಕಾರಗಳೂ ಕೂಡ ಹೊರರಾಜ್ಯಗಳಿಂದ ಉದ್ಯೋಗ ಅರಸಿ ಬಂದವರಿಗೆ ಕಡ್ಡಾಯವಾಗಿ ಕನ್ನಡವನ್ನು ಕಲಿಯಬೇಕೆಂಬ ಕಾನೂನನ್ನು ಜಾರಿಗೊಳಿಸಬೇಕು..
" ಭೂಮಿಗೆ ಬಿದ್ದ ಬೀಜ, ಎದೆಗೆ ಬಿದ್ದ ಅಕ್ಷರ ಇಂದಲ್ಲ ನಾಳೆ ಫಲ ಕೊಡುವುದು" ಎಂಬ ಮಾತಿನಂತೆ ನಾವು ಮೊದಲು ನಮ್ಮ ಮಾತೃಭಾಷೆಯನ್ನು ಹೆಚ್ಚು ಹೆಚ್ಚು ಬಳಸಿ,ಅನ್ಯರಿಗೆ ಅದನ್ನು ತಿಳಿಸುತ್ತಾ, ಕಲಿಸುತ್ತಾ ಹೋದಾಗ ಒಂದಲ್ಲ ಒಂದು ದಿನ ಅವರು ಕೂಡ ಕನ್ನಡ ಭಾಷೆಯನ್ನು ಕಲಿಯುತ್ತಾರೆ. ಬೆಂಗಳೂರಿನಲ್ಲಂತೂ ಎನ್ನಡ ಎಕ್ಕಡ ದ ಮಧ್ಯೆ ನಮ್ಮ ಕನ್ನಡದ ಸ್ಥಿತಿ ಡೋಲಾಯಮಾನವಾಗಿದೆ. ಆದ್ದರಿಂದ ನಾವು ಮೊದಲು ಎಚ್ಚೆತ್ತುಕೊಳ್ಳಬೇಕು. ಕೇಂದ್ರ ಸರ್ಕಾರ ನಡೆಸುವ ಪರೀಕ್ಷೆಗಳಲ್ಲಿ ಕರ್ನಾಟಕದಲ್ಲಿ ಕನ್ನಡ ಭಾಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು,ಈ ನಿಟ್ಟಿನಲ್ಲಿ ರಾಜ್ಯ ಸರಕಾರದ ಜೊತೆಗೆ ಕನ್ನಡಪರ ಸಂಘಟನೆಗಳು ಅಲ್ಲದೇ ಪ್ರತಿಯೊಬ್ಬ ಕನ್ನಡಿಗರೂ ಕೂಡ ತನ್ನ ಜವಾಬ್ದಾರಿಯನ್ನರಿತು ಹೋರಾಟ ಮಾಡಬೇಕು, ಹಾಗೆಂದ ಮಾತ್ರಕ್ಕೆ ನಾವು ಪರಭಾಷಾ ವಿರೋಧಿಗಳಾಗಬಾರದು. "ಕಲಿಯೋಕೆ ಕೋಟಿ ಭಾಷೆ ಆಡೋಕೆ ಒಂದೇ ಭಾಷೆ ಕನ್ನಡ ಕನ್ನಡ "ಎಂದು ನಮ್ಮ ಭಾಷೆಯನ್ನು ನುಡಿಯುತ್ತಾ ,ನುಡಿಸುತ್ತಾ, ಅನ್ಯಭಾಷೆಗೂ ಗೌರವ ಕೊಡುವುದನ್ನು ಅರಿತವನೇ ನಿಜವಾದ ಕನ್ನಡಿಗ.
ಸ್ನೇಹಿತರೆ ನಾವೆಲ್ಲರೂ ಈ ಮಣ್ಣಿನ ಅನ್ನವನ್ನು ತಿಂದಿದ್ದೇವೆ. ಅದರ ಋಣವನ್ನು ತಿಳಿಸಬೇಕೆಂದರೇ ವಿಶ್ವಮಾನವತೆ ಸಂದೇಶವನ್ನು ಸಾರುವ ನಮ್ಮ ನಾಡಿನ ಚರಿತ್ರೆಯನ್ನು ಅರಿತು,ಇತರರಿಗೆ ಅದನ್ನು ತಿಳಿಸಿ,ಐಕ್ಯತೆಯೇ ನಮ್ಮೆಲ್ಲರ ಉಸಿರಾಗಬೇಕೆಂದು ಹೇಳುತ್ತಾ, " ಕನ್ನಡನಾಡಿನ ಅನ್ನ ತಿನ್ನುವ ಮುನ್ನ, ಕಲಿ ಕನ್ನಡವನ್ನು, ತಿಳಿ ಸಂಸ್ಕೃತಿ-ಇತಿಹಾಸವನ್ನು, ಮರೆಯದಿರು ಕರುನಾಡನ್ನು"ಎಂಬ ಸಂದೇಶವನ್ನು ಪರಕೀಯರು ಹಾಗೂ ನಮ್ಮವರಾಗಿದ್ದರು ಪರಕೀಯರಂತೆ ವರ್ತಿಸುವ ಕೆಲವರಿಗೆ ತಿಳಿಸುತ್ತಾ,
" ಕಟ್ಟುವೆವು ನಾವು ಹೊಸ ನಾಡೊಂದನು,ರಸದ ಬೀಡೊಂದನು" ಎಂಬ ಅಡಿಗರ ಮಾತಿನಂತೆ ಕನ್ನಡ ನಾಡಿನ ಸಂಸ್ಕೃತಿ, ಇತಿಹಾಸ, ಪರಂಪರೆಯನ್ನು ಮುಗಿಲೆತ್ತರಕ್ಕೆ ಏರಿಸಲು ಕಂಕಣಬದ್ಧರಾಗೋಣ..... "ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ"
- ಮಹದೇವಪ್ರಸಾದ್.ಜಿ . ಕೆಸ್ತೂರು. ಶಿಕ್ಷಕರು. ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ ಮೈಸೂರು.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ : 9448241450 ಸಂಪಾದಕರು ವಿ ಮ ಸಾ ಪತ್ರಿಕೆ )
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ