ಸವಿತಾ ನಾಗಭೂಷಣ ಅವರ ‘ಜಾತ್ರೆಯಲ್ಲಿ ಶಿವ’ ಕವನ ಸಂಕಲನವು ವಿಭಿನ್ನ ಅಭಿವ್ಯಕ್ತಿಯ ಸೂಕ್ಷ್ಮ ಭಾವದ ಕವಿತೆಗಳಿಂದಲೇ ಆಕರ್ಷಿಸುತ್ತದೆ. ಈ ಕೃತಿ ಬೆಳಕು ಕಂಡು ಸುಮಾರು ಎರಡು ದಶಕಗಳೇ ಕಳೆದಿವೆಯಾದರೂ, ಕವಿತೆಯೊಳಗಿನ ಸಾವಯವ ಅಂತಃಸತ್ವ ಮತ್ತೆ ಮತ್ತೆ ಅದರತ್ತ ಹೊರಳುವಂತೆ ಮಾಡುತ್ತದೆ. ದಲಿತ-ಬಂಡಾಯ ಸಾಹಿತ್ಯ ಘಟ್ಟದ ಪ್ರಭಾವ ವಲಯದಲ್ಲಿ ಅದರದ್ದೇ ಆದ ಒಂದು ಅವಿಭಾಜ್ಯ ಅಂಗದಂತೆ ಬೆಳೆದು ಬಂದ ಸ್ತ್ರೀವಾದವು ತನ್ನ ಅನನ್ಯ ಸಾಧ್ಯತೆಗಳನ್ನು ಪ್ರಕಟಪಡಿಸುತ್ತಲೇ ಬಂದಿದೆ. ಅದು ಪ್ರಸ್ತುತ ಪಡಿಸುವ ಲೋಕ, ಬಳಸಿಕೊಂಡ ಅಭಿವ್ಯಕ್ತಿ ಮಾದರಿ ಇದೆಲ್ಲಕ್ಕೂ ತಳಹದಿಯಂತೆ ದುಡಿಸಿಕೊಂಡ ಭಾಷೆ ಎಲ್ಲವೂ ಅದುವರೆಗೂ ಪ್ರಕಟಗೊಂಡಿರದ ಅನಾಮಿಕ ಕವಿಯೊಬ್ಬನ ಕವಿತೆಯಂತೆ ಬೆರಗು ಮೂಡಿಸುವಂತದ್ದು. ಸ್ರೀವಾದಿ ಚಿಂತನೆಗಳು ಸಾಹಿತ್ಯದ ಎಲ್ಲಾ ಕ್ಷೇತ್ರಗಳಲ್ಲಿಯೂ ತನ್ನ ಹೆಜ್ಜೆ ಗುರುತನ್ನು ಮೂಡಿಸಿವೆಯಾದರೂ ಕಾವ್ಯ ಪ್ರಕಾರದಲ್ಲಿ ಮತ್ತಷ್ಟು ದೃಡವಾಗಿ ನಾಗಾಲೋಟದಿಂದ ಮುಂದುವರೆದವು. ಯಾವ ವಿಷಯಗಳನ್ನು ಕವಿತೆಯ ವಸ್ತುವಾಗಿಸಲು ಸಾಧ್ಯವಿಲ್ಲವೆಂದು ಗಣನೆಗೇ ತೆಗೆದುಕೊಳ್ಳದೆ ಗೌಣವಾಗಿಸಲಾಗಿತ್ತೋ ಅಂತಹ ವಸ್ತುಗಳೇ ಮುಖ್ಯವಾಹಿನಿಗೆ ಬಂದು ತಮ್ಮ ಅಭಿವ್ಯಕ್ತಿಯ ಹಕ್ಕನ್ನು ಪಡೆದುಕೊಂಡವು. ಅನ್ಯಾಯ ಅಸಮಾನತೆಗಳಿಗೆ ತತ್ಕ್ಷಣಿಕ ಏರು ಧ್ವನಿಯ ವಿರೋಧವನ್ನು ತೋರದೆ, ತಣ್ಣಗೇ ಆದರೂ ಬೆಚ್ಚಗಿನ ಪ್ರತಿರೋಧವನ್ನು ತೋರುವುದು ಈ ಸಾಹಿತ್ಯ ಘಟ್ಟದ ವೈಶಿಷ್ಟ್ಯ. ಇದಕ್ಕೆ ಸಾರಾಸಗಟಾದ ಉದಾಹರಣೆ ಎಂಬಂತೆ ಸವಿತಾ ಅವರ “ಸಮಯವಿದೆಯೇ ಪಪ್ಪಾ” ಕವಿತೆಯನ್ನು ಗಮನಿಸಬಹುದು.
ಸಮಯವಿದೆಯೇ ಪಪ್ಪಾ? ಎಂದು ಪ್ರಾರಂಭವಾಗುವ ಕವಿತೆ ಕೊನೆಯವರೆಗೂ ಪಪ್ಪನಿಗೆ ಯಾಕೆ ಸಮಯವಿಲ್ಲ ಎನ್ನುವುದನ್ನೇ ಕುರಿತು ಚರ್ಚಿಸುತ್ತದೆ. ಕವಿತೆಯ ಮೊದಲ ಭಾಗದಲ್ಲಿ ಹುಡುಗಿಗೆ ತನ್ನ ಸುತ್ತಲಿನ ಪ್ರಕೃತಿಯಲ್ಲಿ ಕಾಣುವುದೆಲ್ಲ ಸೋಜಿಗವೇ! ಅಲ್ಲಿ ಹರಿಯುವ ನದಿ, ಅದರಲ್ಲಾಡುವ ಪುಟಾಣಿ ಮೀನು, ಮರದ ಕೊಂಬೆಗಳಲ್ಲಿ ಅಡಗಿರುವ ಗುಬ್ಬಚ್ಚಿ ಗೂಡು ಎಲ್ಲದರಲ್ಲಿಯೂ ತಾನೆಲ್ಲೂ ಕಾಣದಂತಹ ದಿಗ್ಭ್ರಮೆಯೊಂದು ಪುಟ್ಟ ಹುಡುಗಿಯನ್ನು ಆವರಿಸುತ್ತಾ ಹೋಗುತ್ತದೆ. ಮಗಳು ತನ್ನ ತಂದೆಗೆ ಭಿನೈಸುವ ಶೈಲಿ ಇದರಲ್ಲಿದೆ. ಮಗಳಿಗೆ ಯಾರೂ ಕಾಣಿಸದ ವಿಸ್ಮಯಗಳನ್ನು ಕಂಡಾಗ ಅದನ್ನು ಮೊದಲು ತೋರಬೇಕೆನಿಸುವುದು ತನ್ನ ಪಪ್ಪನಿಗೇ ಆದರೂ ಪಪ್ಪನಿಗೆ ಇದ್ಯಾವುದಕ್ಕೂ ಸಮಯವಿಲ್ಲ. ಮಗುವಿಗೆ ಪಪ್ಪಾ ಪರಿಚಯಿಸಬೇಕಿದ್ದ ಪ್ರಪಂಚವನ್ನು ಮಗುವೇ ಅವನಿಗೆ ಪರಿಚಯಿಸ ಹೋಗಿರುವುದು ಸಮಯವಿಲ್ಲದ ಪಪ್ಪನಿಗೆ ತೋರುವ ವ್ಯಂಗ್ಯ!
ನೀನು ಬಾ ನೋಡು
ನಿಂಬೆಯ ಎಲೆ ಮೆದ್ದು
ಗಡದ್ದು ನಿದ್ದೆಯಲ್ಲಿದೆ ಕಂಬಳಿ ಹುಳು
ಬಾ ಪಪ್ಪಾ ತೋರಿಸುವೆನು...
ತನ್ನ ಸುತ್ತಲಿನ ಪ್ರಕೃತಿಯೊಂದಿಗೇ ಆಡಿ ಕೂಡಿ ಬೆಳೆದ ಹುಡುಗಿಗೆ ಶಾಲೆಯನ್ನೂ ತಪ್ಪಿಸಿ ಅಸಹಜವಾದದ್ದನ್ನು ಪರೀಕ್ಷಿಸಿ ನೋಡುವ ಕೌತುಕವೊಂದು ಹುಟ್ಟಿಕೊಳ್ಳುತ್ತದೆ. ಯಾವುದನ್ನು ಸಮಾಜ ನಿಜವೆಂದು ಬಿಂಬಿಸಹೊರಟಿದೆಯೋ ಅದರ ಸತ್ಯಾಸತ್ಯತೆಗಳನ್ನು ತಿಳಿಯುವ ಅರಿವು ಅವಳಲ್ಲಿ ಮೂಡಿದೆ. ಪುಟ್ಟ ಹುಡುಗಿಯಾಗಿದ್ದಾಗ ಯಾವುದನ್ನು ತದೇಕ ಚಿತ್ತದಿಂದ ಅಚ್ಚರಿಗೊಂಡು ನೋಡಿದ್ದಳೋ ಅವೆಲ್ಲವನ್ನು ಪರೀಕ್ಷೆಗೊಡ್ಡುವಲ್ಲಿಗೆ ಪುಟ್ಟ ಹುಡುಗಿ ಬೆಳೆದಿದ್ದಾಳೆ. ಅವಳಿಗೆ ಶಾಲೆಯಲ್ಲಿ ಸಿಗದೇ ವಂಚಿಸಿದ ತಿಳಿವು ಪ್ರಕೃತಿಯಲ್ಲೇ ಸಿಗುತ್ತಿದೆ. ಅದೇ ಅವಳಿಗೆ ನಿತ್ಯ ನೂತನವಾಗಿ, ಭ್ರಮೆ ಕಳಚಿ ವಾಸ್ತವ ಪ್ರಪಂಚಕ್ಕೆ ತೆರೆದುಕೊಳ್ಳುವ ಹೆದ್ದಾರಿಯಾಗಿ ಕಾಣಿಸುತ್ತಿದೆ. ಆದರೆ ಈ ಬಗೆಯ ತಿಳಿವನ್ನು ಜ್ಞಾನವೆಂದೇ ಒಪ್ಪಲು ಸಿದ್ದವಿಲ್ಲದ ಸಮಾಜಕ್ಕೆ, ಪಪ್ಪನನ್ನೂ ಒಳಗೊಂಡಂತೆ ಅದೊಂದು ಸಮಯ ವ್ಯರ್ಥಗೊಳಿಸುವ ಕ್ಲೀಷೆಯಾಗಿ ಕಾಣುತ್ತದೆ.
ಶಾಲೆ ತಪ್ಪಿಸಿ ಅಡ್ಡಾಡುತ್ತಿರುವಳೆಂದು ಪಪ್ಪಾ ಬೆತ್ತ ಹಿಡಿದು ಕಾದಿದ್ದಾನೆ. ಅವನ ಬೆತ್ತ ಎಲ್ಲ ನಿಜಗಳನ್ನು ಬಾಯಿ ಬಿಡಿಸುವ ಅಸ್ತ್ರದಂತಿದೆ. ಆದರೆ ನಿಜವ ಹೇಳಲು ಸಾಧ್ಯವಿರುವುದು ಬೆತ್ತ ಆಚೆ ಇಟ್ಟಾಗಲೇ ಹೊರತು ಅದನ್ನು ಪ್ರಯೋಗಿಸುವುದರಿಂದಲ್ಲ ಎನ್ನುತ್ತದೆ ಕವಿತೆ.
ಬೆತ್ತ ಆಚೆ ಇಡು
ನಿಜವ ಹೇಳುವೆನು
ಪಾಠದ ಪುಸ್ತಕ ತೆರೆದರೆ
ಬರೀ ಗುಡ್ಡ ಬೆಟ್ಟ ನದಿಯೇ ಕಾಣುವುದು
ಓದಿನಲ್ಲಿ ಹಿಂದೆ ಬಿದ್ದ ಮಕ್ಕಳ ಸ್ಥಿತಿ ಹೇಗಿರುತ್ತದೆ ಮತ್ತು ಸ್ವತಃ ಹೆತ್ತ ತಂದೆ ತಾಯಿಗಳೇ ಓದಿನಲ್ಲಿ ಮುಂದಿರುವ ಹಾಗೂ ಓದಿನ ಆಸಕ್ತಿಯೇ ಇಲ್ಲದ ಮಕ್ಕಳನ್ನು ಯಾಕೆ ಭಿನ್ನ ದೃಷ್ಟಿಯಿಂದ ಕಾಣುತ್ತಾರೆಂಬುದರ ಸೂಕ್ಷ್ಮ ಪ್ರಜ್ಞೆಯೊಂದು ಕವಿತೆಯ ಅಂತರಾಳದಲ್ಲಿ ಹುದುಗಿದೆ. ಆಧುನಿಕತೆಯು ಉಂಟುಮಾಡಿದ ಹಲವು ಗೊಂದಲಗಳಲ್ಲಿ ಇಂದಿನ ಶಿಕ್ಷಣ ವ್ಯವಸ್ಥೆಯೂ ಕೂಡ ಒಂದು. ಇದಕ್ಕೆ ಒಂದು ನಿರ್ದಿಷ್ಟ ಗುರಿ ಹಾಗೂ ಉದ್ದೇಶ ಇರಲೇಬೇಕೆ? ಇದರ ಹೊರತಾಗಿಯೂ ಆಯ್ಕೆಗಳಿವೆಯೇ ಎಂಬ ದ್ವಂದ್ವದಲ್ಲಿ ಸಿಲುಕಿ ತೊಳಲಾಡುತ್ತಿರುವುದು ಇಲ್ಲಿ ಗೋಚರವಾಗುತ್ತದೆ. ಇದು ಬದುಕನ್ನು ಅರಿಯುವ ಮತ್ತು ಜೀವನದ ಹಠ, ಛಲಗಳನ್ನು ವೃದ್ಧಿಸುವ ಆತ್ಮವಿಶ್ವಾಸದ ಬಾಗಿಲುಗಳನ್ನೇ ತೆರೆಯದೆ, ಪೈಪೋಟಿಗೆ ಬಿದ್ದು ಮನುಷ್ಯನ ಅಸೀಮ ಸಾಧ್ಯತೆಗಳನ್ನೇ ಕಸಿಯುತ್ತಿರುವ ಸಣ್ಣ ಭಯ ಕಾಡದಿರದು. ಸ್ವಾತಂತ್ರೋತ್ತರ ಭಾರತದಲ್ಲಿ ಇನ್ನೂ ವಿದ್ಯೆಯ ಬೆಳಗನ್ನೇ ಕಾಣದ ಸಮುದಾಯಗಳು ಇರಬಹುದಾದ ನಮ್ಮ ಸಮಾಜದಲ್ಲಿ, ಅಲ್ಪಪ್ರಮಾಣದಲ್ಲಾದರೂ ಓದಿದವರು ಎನಿಸಿಕೊಂಡ ಜನರು ತಮ್ಮ ಮಕ್ಕಳನ್ನು ಬೆಳಸುತ್ತಿರುವ ಪರಿಗೆ ಕವಿತೆ ಕನ್ನಡಿ ಹಿಡಿದಂತಿದೆ. ಮಕ್ಕಳಿಗೆ ಅವರ ಶಕ್ತಿ-ಸಾಮರ್ಥ್ಯಗಳನ್ನು ತಿಳಿದುಕೊಳ್ಳಲು ಒಂದು ಪ್ರತ್ಯೇಕ 'ಸ್ಪೇಸ್' ನ ಅವಶ್ಯಕತೆ ಇರುತ್ತದೆ. ಅದನ್ನು ಸೃಷ್ಟಿಸುವ ಹೊಣೆಗಾರಿಕೆ ಏಕಕಾಲದಲ್ಲಿ ಶಿಕ್ಷಕರನ್ನೂ, ಪೋಷಕರನ್ನೂ ಅವಲಂಬಿಸಿರುತ್ತದೆ. ಇದನ್ನರಿಯದೆ ಒಬ್ಬರನ್ನು ಮತ್ತೊಬ್ಬರ ಜೊತೆಗೆ ತುಲನೆ ಮಾಡುವುದು, ದೂರುವುದು ಮಾನಸಿಕ ಹಿಂಸೆಯಾಗುತ್ತದೆಯೇ ವಿನಃ ಮತ್ತಾವ ನಿರೀಕ್ಷೆಯನ್ನೂ ಪೂರೈಸಲಾರದು.
ಛೀ...ಕೂಳಿಗೆ ದಂಡ ಎಂದು
ದೂರದಿರು ಪಪ್ಪಾ
ಬೇಜಾರಾಗದಿರು...
ಇಂದು ನಮ್ಮ ಮುಂದಿರುವ ಸವಾಲಿನಂತಹ ಶಿಕ್ಷಣವನ್ನು ಒತ್ತಾಯಪೂರ್ವಕವಾಗಿ ಕಲಿಯಲಸಾಧ್ಯವಾದರೆ ಬದುಕನ್ನು ಕಟ್ಟಿಕೊಳ್ಳುವುದಾದರೂ ಹೇಗೆ? ಎಂಬ ಪ್ರಶ್ನೆಗೆ ಕವಿತೆಯೇ ಉತ್ತರಿಸುತ್ತದೆ. ಪಪ್ಪನ ಇಚ್ಚೆಯಂತೆಯೇ ಓದಿದ ಶಾರಿ ಮತ್ತು ಗಣಿ ದೊಡ್ಡ ಅಧಿಕಾರಿಯಾಗಬಹುದು ದೂರ ದೇಶಕ್ಕೆ ರೆಕ್ಕೆಬಿಚ್ಚಿ ಹಾರಿಹೋಗಬಹುದು. ಆದರೆ ಅವರಂತಲ್ಲದ ಈ ಹುಡುಗಿ ಅದೇ ಸಮಯವಿರದ ಪಪ್ಪಾ ಒಪ್ಪಿದರೆ,
ಅಜ್ಜ ನಿನಗಿತ್ತ
ತುಂಡು ಭೂಮಿಯನ್ನೇ
ಉತ್ತುವೆನು, ಬಿತ್ತುವೆನು
ಈ ಹಳೆಯ ಮನೆಯೇ ಸಾಕು
ಇಲ್ಲೇ ನಿನ್ನೊಂದಿಗೆ ಒಂದು
ತುತ್ತು ಉಣ್ಣುವೆನು.
ಎಂಬ ಮಹತ್ವದ ಆಶಯವೊಂದನ್ನು ವ್ಯಕ್ತಪಡಿಸುತ್ತಾಳೆ. ಇದರಲ್ಲಿ ಗಮನಿಸಬಹುದಾದ ಮತ್ತೊಂದು ಅಂಶವಿದೆ. ಯಾವ ಜವಾಬ್ದಾರಿಯನ್ನು ನಮ್ಮ ಪುರುಷ ಪ್ರಧಾನ ವ್ಯವಸ್ಥೆ ಗಂಡಿನ ಮೇಲೆ ಹೊರಿಸುತ್ತದೆಯೋ ಅದರ ಸ್ಥಾನ ಪಲ್ಲಟವೊಂದರ ಉದಾಹರಣೆ ಇಲ್ಲಿ ನಿರಾಡಂಬರವಾಗಿ ದಾಖಲಾಗಿದೆ. ತಂಗಿ ಅಣ್ಣನ ಹಾಗೆ ವಿದ್ಯಾವಂತೆಯಲ್ಲದಿದ್ದರೇನು, ಕೊನೆಯಲ್ಲಿ ನಿನ್ನೊಂದಿಗೆ ಒಂದು ತುತ್ತು ಉಣ್ಣುವ ಹಂಬಲವನ್ನು ಉಳಿಸಿಕೊಂಡವಳು ನಾನೊಬ್ಬಳೇ ಅಲ್ಲವೇನು ಎನ್ನುವ ವಿಶ್ವಾಸ ಅವಳೊಟ್ಟಿಗಿದೆ. ಇದೇ ವಿಶ್ವಾಸ ಅವಳಿಗೆ ಕವಿತೆಯನ್ನು ಕಟ್ಟಲು ಅದರೊಂದಿಗೇ ಬಾಳಲು ಬದುಕಿನ ಎಂದೂ ಬತ್ತದ ಉತ್ಸಾಹದ ಚಿಲುಮೆಯನ್ನು ಕಾಪಿಟ್ಟುಕೊಳ್ಳಲು ಆಧಾರವಾಗಿದೆ.
ನೋಡುತ್ತಾ...ಇರು
ನಿನ್ನ ಮೇಲೆಯೇ ಒಂದು
ಕವಿತೆ ಕಟ್ಟುವೆನು
ಕವಿತೆಯ ಬಲದಿಂದಲೇ
ಕೊನೆತನಕ ಬಾಳುವೆನು.....
- ಧನುಷ್ ಎಚ್ ಶೇಖರ್
ಬೆಂಗಳೂರು, 6362470940.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ