ಚಿಟಿಗೆವ್ವನೆಂಬ ದೇವತೆಯ ವಿಧಿಲಿಖಿತ
ವಿಜ್ಞಾನ ಎಷ್ಟೇ ಮುಂದುವರಿದಿದ್ದರೂ ಹಳೆಯ ಆಚಾರ ವಿಚಾರಗಳಿಗೆ ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ಜೀವಂತಿಕೆ ಇದೆ.ಸಹಜವಾಗಿ ಇಂದಿನ ನಮ್ಮ ತಲೆಮಾರಿನವರಿಗೆ ಅವೆಲ್ಲಾ ಈಗಿನ ಕಾಲಕ್ಕೆ ಅನ್ವಯವಾಗೋಲ್ಲ ,ಅಂತಹ ಪದ್ದತಿಗಳಿಂದ ಏನೂ ಪ್ರಯೋಜನವಿಲ್ಲ. ವಿಜ್ಞಾನ ತುಂಬಾ ಮುಂದುವರಿದಿದೆ ಹಾಗೆ ,ಹೀಗೆ ಎನ್ನುವ ವಿಚಾರಗಳು ಸರ್ವೇ ಸಾಮಾನ್ಯ.ನಮ್ಮ ಕರ್ನಾಟಕ ರಾಜ್ಯದ ಉತ್ತರ ಕರ್ನಾಟಕ ಭಾಗದಲ್ಲಿ ಶಿಶು ಜನಿಸಿದ ಮೂರನೇ ದಿನಕ್ಕೆ ಆಚರಿಸುವ ಒಂದು ವಿಶಿಷ್ಟ ಆಚರಣೆ ಅದುವೇ ಈರ್ಲ ಪೂಜೆ ಅಥವಾ ಚಿಟಿಗೆವನ ಪೂಜೆ. ಗ್ರಾಮೀಣ ಭಾಗದಲ್ಲಿ ಆಚರಿಸುವ ಈ ಪೂಜೆಯ ಬಗ್ಗೆ ಬರೆಯಬೇಕು ಅನಿಸಿತು .ಆದರೆ ನಗರ ಪ್ರದೇಶಗಳಲ್ಲಿ ಇಂತಹ ಆಚರಣೆಗಳು ಕಡಿಮೆ ಎನ್ನಬಹುದು .
ಜನಪದ ಕಥೆಗಳ ಪ್ರಕಾರ ಚಿಟಿಗೆವ್ವ ಪೌರಾಣಿಕ ಕಥೆಯಲ್ಲಿ ಬರುವ ಒಬ್ಬ ದೇವತೆ. ತಾಯಿ ಗರ್ಭದಿಂದ ಶಿಶು ಜನ್ಮ ಪಡೆದ ನಂತರ ಮೂರನೇ ದಿವಸ ಈ ದೇವತೆ ಬಂದು ಆ ಶಿಶುವಿನ ಹಣೆಬರಹ ಬರೆಯುತ್ತಾಳೆ ಎಂಬ ನಂಬಿಕೆ .ನಮ್ಮ ಕುಟುಂಬದಲ್ಲಿ ನಡೆದ ನವಜಾತ ಶಿಶುವಿನ ಮೂರನೇ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾಗ ಚಿಟಿಗೆವ್ವನ ಹಣೆಬರಹದ ಬಗ್ಗೆ ಜನಪದ ಕತೆಯ ಬಗ್ಗೆ ಮಾತಾಡ್ತಾ ಇದ್ರು. ಚಿಟಿಗೆವ್ವ ಬರೆದ ಹಣೆಬರಹವನ್ನು ಹರಿ ಹರಬ್ರಹ್ಮ ರಿಂದಲೂ ಬದಲಿಸಲು ಸಾಧ್ಯವಿಲ್ಲವಂತೆ, ಸ್ವತಃ ತನ್ನ ಮಗಳ ಹಣೆ ಬರಹವನ್ನು ಬರೆದ ಚಿಟಿಗೆವ್ವ ನಂತರ
ಪಶ್ಚಾತಾಪ ಪಟ್ಟರು ಬದಲಿಸಲು ಸಾಧ್ಯವಾಗಲಿಲ್ಲ ಎನ್ನುವುದಕ್ಕೆ ಒಂದು ದೃಷ್ಟಾಂತದ ಬಗ್ಗೆ ತಿಳಿಸಿದರು .ಒಂದು ಸಾರಿ ಚಿಟಿಗೆವ್ವನ ಕುಟುಂಬದಲ್ಲಿ ಆಕೆಯ ಮಗಳಿಗೆ ಹೆಣ್ಣುಶಿಶುವಿನ ಜನನವಾಯಿತು. ಮೂರನೆಯ ದಿನಕ್ಕೆ ಚಿಟಿಗೆವ್ವಾ ವಿಧಿಬರಹ ಬರೆಯುತ್ತಾಳೆ, ಎನ್ನುವುದನ್ನು ಅರಿತ ಆಕೆಯ ಮಾವ ಆ ಹಣೆಬರಹದ ಬಗ್ಗೆ ತಿಳಿಯಲೇಬೇಕು ಎಂದು ನಿರ್ಧರಿಸಿ, ಚಿಟಿಗೆವ ಬರುವ ವೇಳೆ ಬಾಗಿಲಿಗೆ 'ಒನಕೆ'ಯನ್ನು ಅಡ್ಡಲಾಗಿ ಇಡುತ್ತಾನಂತೆ .ಎಷ್ಟೇ ಹೇಳಿದರೂ ಒನಕೆಯನ್ನು ತೆಗೆಯುವುದಿಲ್ಲ. ಕಾರಣ ಕೇಳಿದಾಗ ನೀನು ಈಗ ಬರೆಯುವ ವಿಧಿಲಿಖಿತದ ಬಗ್ಗೆ ನನಗೆ ತಿಳಿಸಬೇಕು, ಇಲ್ಲದಿದ್ದರೆ ನಾನು ನಾನು ಒನಕೆಯನ್ನು ತೆಗೆಯುವುದಿಲ್ಲ ಎಂದಾಗ, ಅನಿವಾರ್ಯವಾಗಿ ಮಾವನಿಗೆ ಭಾಷೆ ಕೊಡುತ್ತಾಳೆ. ನಾನು ಬರೆದ ವಿಧಿಲಿಖಿತದ ಬಗ್ಗೆ ನಿಮಗೆ ತಿಳಿಸುವೆ ಎಂದು ಹೇಳಿ ಅದರ ಒಳ ಬರುತ್ತಾಳೆ .ತನ್ನ ಮಗಳ ಹಣೆ ಬರಹವನ್ನು ಬರೆದ ಚಿಟಿಗೆವ್ವಾ ಮಾವನಿಗೆ ಕೊಟ್ಟ ಮಾತಿನಂತೆ ಬರೆದ ಬರಹವನ್ನು ಹೇಳಿದಳು "ನಿನ್ನ ಮಗನ ಮದುವೆ ಸಂದರ್ಭದಲ್ಲಿ ನೀನು ದಾರಿ ತಪ್ಪಿ ನಡೆದು ಕುಲಕ್ಕೆ ಕಂಟಕಳಾಗುವಿ" ಎಂದು ಬರೆದಿದ್ದಳು .ಅದನ್ನು ಕೇಳಿ ಮಾವನಿಗೆ ತುಂಬಾ ನೋವಾಯಿತು. ಇದು ನಮ್ಮ ಮನೆತನದ ಕುಡಿ ಇದರಿಂದ ಮನೆತನದ ಗೌರವಕ್ಕೆ ಕುತ್ತು ಬರುತ್ತದೆ ಇದನ್ನು ಬದಲಿಸು ಎಂದು ಪರಿಪರಿಯಾಗಿ ಕೇಳಿದ .ಒಮ್ಮೆ ಬರೆದ ಬರಹವನ್ನು ಬದಲಿಸಲು ತನ್ನಿಂದ ಅಸಾಧ್ಯವೆಂದಳು.ಅನಂತರ ತನ್ನಿಂದ ತನ್ನ ಕುಡಿಗೆ ಅನ್ಯಾಯ ಮಾಡಿದೆ ಎಂದೆನಿಸಿ ಪರಶಿವನ ಬಳಿ ಬರುತ್ತಾಳೆ. ಆದರೆ ಶಿವನು ನೀನು ಬರೆದ ಈ ವಿಧಿಲಿಖಿತವನ್ನು ಯಾರಿಂದಲೂ ಬದಲಿಸಲು ಸಾಧ್ಯವಿಲ್ಲ. ಆಯಾ ಕಾಲಕ್ಕೆ ಏನೇನು ನಡೆಯಬೇಕೆಂದು ಬರೆದಿರುವೆ ಅದು ನಡೆಯುತ್ತದೆ ಎಂದು ತಿಳಿಸಿದನಂತೆ .ಈ ರೀತಿಯಾಗಿ ತನ್ನ ಮಗಳ ಹಣೆಬರಹ ಬರೆದಂತೆ ಆಕೆ ಮಗನ ಮದುವೆಯ ಸಂದರ್ಭ ಕುಲಕ್ಕೆ ಕಂಟಕವಾದಳು ಎನ್ನುವ ದಂತ ಕಥೆಯನ್ನು ಹೇಳಿದರು.ಇದೇ ರೀತಿಯ ಬೇರೆ ಬೇರೆ ದಂತಕಥೆಗಳು ಇರಬಹುದೇನೋ ಈ ಸಂದರ್ಭದಲ್ಲಿ ಈ ದಂತಕಥೆಯ ಬಗ್ಗೆ ಮಾಹಿತಿ ತಿಳಿಯಿತು .
ತಮ್ಮ ಮಗುವಿನ ವಿಧಿಲಿಖಿತ ಭವಿಷ್ಯ ಚೆನ್ನಾಗಿರಲಿ ಎನ್ನುವ ಸದುದ್ದೇಶದಿಂದ ಗ್ರಾಮೀಣ ಭಾಗದ ಜನರು ವಿಶೇಷವಾಗಿ ಈ ಪೂಜೆ ಆಚರಿಸುತ್ತಾರೆ .ಈ ಪೂಜೆಯ ವಿಧಾನಗಳೆಂದರೆ ಅಂದಿನ ದಿನ ಬಾಣಂತಿ ಮತ್ತು ಮಗುವಿನ ಶುಚಿರ್ಭೂತರಾದ ಮೇಲೆ
ಮನೆಯನ್ನು ಶುಭ್ರ ಗೊಳಿಸುತ್ತಾರೆ . ಒಂದು ಹೊಸ ಮರದ ಮೇಲೆ ಜೋಳದ ಧಾನ್ಯ ಹಾಕಿ, ಅದರ ಮೇಲೆ ಹೊಸ ವಸ್ತ್ರವನ್ನು ಹಾಕಿ, ಅದರ ಮೇಲೆ ನವಜಾತ ಶಿಶುವನ್ನು ಮಲಗಿಸಿ, ದೇವರಮನೆಯಲ್ಲಿ ಜಗಲಿಯ ಮುಂದೆ ಭಕ್ತಿಯಿಂದ ಪ್ರಾರ್ಥಿಸುತ್ತಾರೆ . ಚೀಟಿಗೆವ್ವನ ವಿಧಿಲಿಖಿತದ ಆಚರಣೆ ಮಾಡುತ್ತಿದ್ದೇವೆ. ನಮ್ಮ ಕಂದನಿಗೆ ಒಳಿತನ್ನು ಬಯಸು ಭಗವಂತ ಎಂದು ಬೇಡಿಕೊಳ್ಳುತ್ತಾರೆ. ನಂತರ ಬಾಣಂತಿ ಮಲಗಿದ್ದ ವರಸಿನ ಕೆಳಗೆ ಚಿಟಿಗೆವನ ಸಂಕೇತವಾಗಿ "ರುಬ್ಬುವ ಗುಂಡನ್ನು" ಪೋಷಿಸುತ್ತಾರೆ. ಅದುವೇ "ಚಿಟಿಗೆವ್ವನಪೂಜಾ ವಿಗ್ರಹ" .ನೆಲ ಸಾರಿಸಿ, ಜೋಳ ಹಾಕಿ, ಅದರ ಮೇಲೆ ಪೂಜಾ ವಿಗ್ರಹ ಇಟ್ಟು ಅದಕ್ಕೆ ಪೂಜೆ ಸಲ್ಲಿಸುತ್ತಾರೆ .ಈ ಪೂಜೆ ಮಾಡುವವರು ಸೂಲಗಿತ್ತಿಯವರು ಮಾತ್ರ. ವಾಸ್ತವವಾಗಿ ತಾಯಿ ಮತ್ತು ಮಗುವಿನ ಕರುಳುಬಳ್ಳಿ ಬೇರ್ಪಡಿಸಿದ ಸೂಲಗಿತ್ತಿಯರು ಪೂಜೆ ಸಲ್ಲಿಸಿದರೆ ಶ್ರೇಷ್ಠ ಎನ್ನುವ ನಂಬಿಕೆ .ಅನಂತರ ಬಾಣಂತಿಗೆ ಮತ್ತು ಮಗುವಿಗಾಗಿ ಕಾಡಿಗೆ ತಯಾರಿಸುವ ವಿಶೇಷ ತಯಾರಿಯನ್ನು ಸೂಲಗಿತ್ತಿಯಾದಂತಹ ಮಹಿಳೆ ಮಾಡುತ್ತಾಳೆ .ಲವಂಗ, ಮೆಣಸು,ಬಜೆಬೇರು, ಬೆಳ್ಳುಳ್ಳಿ, ಕರಿಎಲೆ ತುಂಬು ಇವುಗಳನ್ನು ಒಂದೊಂದೇ ದೀಪಕ್ಕೆ ಹಿಡಿದು ಸುಟ್ಟು ಒಂದು ಚಾಕುವಿನ ಮೇಲೆ ಸಂಗ್ರಹಿಸಿ, ಅದಕ್ಕೆ ಹರಳೆಣ್ಣೆ ಹಾಕಿ ಕಾಡಿಗೆ ತಯಾರಿಸಿ, ಅದನ್ನು ಬಾಣಂತಿಯರ ಕಣ್ಣುಗಳಿಗೆ ಹಚ್ಚುವುದು ವಿಶೇಷ . ಇದರಿಂದ ಕಣ್ಣಿನ ದೋಷಗಳು ನಿವಾರಣೆಯಾಗುತ್ತವೆ ಅಲ್ಲದೆ ನವಜಾತ ಶಿಶುವಿಗೆ ಹಣೆ ಮತ್ತು ಹುಬ್ಬುಗಳನ್ನು ಅದೇ ಕಾಡಿಗೆಯಿಂದ ಮೊದಲ ಬಾರಿಗೆ ಅಲಂಕಾರಕ್ಕಾಗಿ ಬಳಸುವ ವಿಶಿಷ್ಟ ಪದ್ಧತಿ. ಅಲ್ಲಿಯವರೆಗೆ ಆ ಶಿಶುವಿಗೆ ಯಾವುದೇ ಅಲಂಕಾರಿಕ ಕಪ್ಪನ್ನು ಹಚ್ಚಿರುವುದಿಲ್ಲ ಅನಂತರ ಪೂಜೆ ಸಲ್ಲಿಸಿದ ಚೀಟಿಗೆವ್ವನ ಸಂಕೇತದ ಪೂಜಾ ವಿಗ್ರಹದ ಮುಂದೆ ನವಜಾತ ಶಿಶುವನ್ನು ಮಲಗಿಸಿ ಒಂದು ಬಟ್ಟಲಿನಲ್ಲಿ ತುಪ್ಪಹಾಕಿ ಬಾಣಂತಿಯು ತನ್ನ ಬಲಗೈಯ ೫ ಬೆರಳಿನ ತುದಿಗಳನ್ನು ತುಪ್ಪದಲ್ಲಿ ಅದ್ದಿ ವಿಗ್ರಹದ ಮುಂದೆ "ತುಪ್ಪದ ಧಾರೆ ತೆಗೆದುಕೊಂಡು ನನ್ನ ಕಂದನಿಗೆ ಹಾಲಿನ ಧಾರೆ ಹರಿಸುವ ತಾಯೇ" ಎಂದು ೫ ಸಾರಿ ೫ ಬೆರಳುಗಳ ತುದಿಯಿಂದ ಭೂತಾಯಿಗೆ ತಾಗಿಸುತ್ತಾಳೆ. ತಾಯಿಯು ತನ್ನ ಕಂದನ ಹಸಿವು ನೀಗಿಸಲು ಹಾಲಿನ ಉತ್ಪತ್ತಿಯನ್ನು ಹೆಚ್ಚಿಸಿ, ಹಸಿವಿನಿಂದ ಬಳಲದಂತೆ ನನ್ನ ಕಂದನನ್ನು ಪೋಷಿಸುವ ಶಕ್ತಿಯನ್ನು ಕೊಡು ಎಂದು ಭಕ್ತಿಯಿಂದ ಬೇಡಿಕೊಳ್ಳುವ ಪದ್ಧತಿ ವೈಶಿಷ್ಟ್ಯಪೂರ್ಣವಾದುದು .ಜಗತ್ತಿನಲ್ಲಿ ಎಷ್ಟೋ ಕಂದಮ್ಮಗಳು ತಾಯಿಯ ಎದೆ ಹಾಲಿನ ಪೂರೈಕೆ ಇಲ್ಲದೆ ಬಳಲುತ್ತಿದ್ದಾರೆ .ಒತ್ತಡದ ಜೀವನದಿಂದಾಗಿ ಅಥವಾ ಇನ್ನಾವುದೋ ಕಾರಣಗಳಿಂದ ಮಗುವಿಗೆ ಎದೆಹಾಲು ಉಣಿಸದೇ ಆಕಳ ಹಾಲನ್ನು,ಪುಡಿಹಾಲನು ಕುಡಿಸುತ್ತಿದ್ದಾರೆ .ಈ ರೀತಿ ಮಾಡುವುದರಿಂದ ಮಕ್ಕಳು ಹಲವಾರು ಕಾಯಿಲೆಗಳಿಂದ ಬಳಲುತ್ತಾರೆ .ವೈದ್ಯರ ಸಲಹೆಯ ಪ್ರಕಾರ ನವಜಾತ ಶಿಶುವಿಗೆ ಕನಿಷ್ಠ ಒಂದೂವರೆ ವರ್ಷದಿಂದ ೨ ವರ್ಷದವರೆಗೂ ಎದೆ ಹಾಲು ಕೊಡುವುದರಿಂದ ತಾಯಿ ಮತ್ತು ಮಗು ಆರೋಗ್ಯಯುತವಾಗಿರುತ್ತಾರೆ . ಚೀಟಿಗೆವ್ವನ ಪೂಜಾ ಸಂದರ್ಭದಲ್ಲಿ ಅಗೋಚರ ಶಕ್ತಿಯ ರೂಪದಲ್ಲಿ ಚಿಟಿಗೆವ್ವ ಆ ಕಂದನ ವಿಧಿಲಿಖಿತ ಅಥವಾ ಹಣೆ ಬರಹವನ್ನು ಬರೆದು ಹೋಗುವಳು ಎಂಬ ನಂಬಿಕೆ. ವಿಧಿ ಲಿಖಿತ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂಬ ನಂಬಿಕೆಯಿಂದ ಆ ಸಂದರ್ಭದಲ್ಲಿ ಬಾಣಂತಿಯನ್ನು ಒಳಗೊಂಡು ಎಲ್ಲರೂ ಸಂತಸದಿಂದ ಪೂಜಾ ಕಾರ್ಯದಲ್ಲಿ ಭಾಗಿಯಾಗುತ್ತಾರೆ ."ಬಜೇ ಎಂಬ ಬೇರನ್ನು" ಚಿಕ್ಕ ಚಿಕ್ಕ ಪೀಸ್ ಮಾಡಿ ಅದಕ್ಕೆ ದಾರ ಕಟ್ಟಿ ಎಲ್ಲರ ಕೈಗೆ ಕಟ್ಟುತ್ತಾರೆ .ಇದನ್ನು "ಚಿಟಿಗೆವ್ವನ ಕಂಕಣ" ಎನ್ನುವುದು ವಾಡಿಕೆ.
ಕುಟುಂಬದ ಎಲ್ಲ ಸದಸ್ಯರಿಗೂ ಈ ಚಿಟಿಗೆವ್ವನ ಕಂಕಣವನ್ನು ಕಟ್ಟುತ್ತಾರೆ.ಇದನ್ನು ಕಟ್ಟುವ ಉದ್ದೇಶ ಮನೆಯಲ್ಲಿ ಇದೇ ರೀತಿ ಸಂತಾನಾಭಿವೃದ್ಧಿ ಬೆಳೆಯಲಿ ಮನೆ ಯಾವಾಗಲೂ ನಗುವಿನಿಂದ ಕೂಡಿರಲಿ ಎನ್ನುವದು.ಪೂಜಾ ಕಾರ್ಯದ ನಂತರ ಸೂಜಿಯನ್ನು ಕಾಯಿಸಿ ಕೇರಿಗೆ ಚುಚ್ಚಿ ಕೇರಿನ ರಸವನ್ನು ನವಜಾತ ಶಿಶುವಿನ ಕಾಲಿಗೆ (+)ಚಿಹ್ನೆಯನ್ನು ಹಾಕಿ ಅದಕ್ಕೆ ಬೂದಿ ಸವರುತ್ತಾರೆ .ಈ ರೀತಿ ಪ್ರತಿದಿನ ಒಂದು ವರ್ಷದವರೆಗೆ ಮಾಡುವುದರಿಂದ ಮಕ್ಕಳು ನರದೌರ್ಬಲ್ಯದಿಂದ ಬಳಲುವುದಿಲ್ಲ ಎಂಬ ತಿಳುವಳಿಕೆಯ ಮಾತನ್ನು ಹೇಳುತ್ತಾರೆ. ವೈಜ್ಞಾನಿಕವಾಗಿ ಅದು ಯಾವ ರೀತಿ ಸರಿಯೋ ಗೊತ್ತಿಲ್ಲ. ಆದರೂ ಅವರು ನಮ್ಮ ಮನೆಯ ಪ್ರತಿಯೊಂದು ಮಗುವಿಗೂ ಇದೇ ರೀತಿ ಮಾಡುತ್ತೇವೆ ಎಂದು ಹೇಳುತ್ತಾರೆ.ಎಲ್ಲಾ ಪೂಜಾ ವಿಧಾನಗಳು ಮುಗಿದ ನಂತರ ಸೂಲಗಿತ್ತಿಗೆ ಉಡಿ ತುಂಬುವ ಶಾಸ್ತ್ರ ಮಾಡುತ್ತಾರೆ ಜೋಳದ ಉಡಿಯಕ್ಕಿ ಹಾಕಿ ಆಕೆಯನ್ನು ಬೀಳ್ಕೊಡಲು ತೆರಳುತ್ತಾರೆ .ಸೂಲಗಿತ್ತಿಯೂ ತನ್ನ ಉಡಿಯಲ್ಲಿ ನಜೋಳದ ಕೆಲವು ಕಾಳುಗಳನ್ನು ಭೂತಾಯಿಗೆ ಹಾಕುತ್ತಾ" ಮುತ್ತು ಚೆಲ್ಲಿರುವೆ ಆಯ್ದುಕೊಳ್ಳಿ" ಎನ್ನುತ್ತ ಮುಂದೆ ಹೋಗುತ್ತಾಳೆ. ಅವರ ಹಿಂದೆಯೇ ಮನೆಯ ಒಡತಿ ಒಂದು ತಾಮ್ರದ ತಂಬಿಗೆಯಲ್ಲಿ ನೀರನ್ನು ಹಿಡಿದು "ಮುತ್ತು ಆಯ್ದುಕೊಳ್ಳುವೆನಮ್ಮ ಮುತ್ತು ಆಯ್ದುಕೊಳ್ಳುವೆನಮ್ಮ "ಎಂದು ನೀರನ್ನು ಪ್ರೋಕ್ಷಣೆ ಮಾಡುತ್ತಾ, ಬೀಳ್ಕೊಡುವ ರೀತಿ ವಿಶೇಷ .ನನ್ನ ಹುಡಿಯನ್ನು ಧಾನ್ಯಗಳಿಂದ ತುಂಬಿಸಿದ ನಿಮ್ಮ ಮನೆ ಧಾನ್ಯಗಳಿಂದ ಸಮೃದ್ಧಿಯಾಗಲಿ. ಹಸಿವೆಯಿಂದ ಯಾರೂ ಬಳಲದಂತೆ ಇರಲಿ ಎಂದು ಶುಭಕೋರಿ ಸೂಲಗಿತ್ತಿ ಹೋಗುವುದೇ ಒಂದು ಆಚರಣೆ.ಚಿಟಿಗೆವ್ವನ ಪೂಜೆಯ ಈ ಆಚರಣೆಯ ಸತ್ಯಾಸತ್ಯತೆಗಳು ಏನೇ ಇರಲಿ, ಒಂದು ಕುಟುಂಬದ ಎಲ್ಲ ಜನರು ಒಗ್ಗೂಡಿ ಪೂಜಾ ಕಾರ್ಯದಲ್ಲಿ ಪಾಲ್ಗೊಳ್ಳಲು ಸಹಾಯಕವಾದಂತ ಇಂತಹ ಹಲವಾರು ಆಚರಣೆಗಳಿದ್ದರೂ ತಪ್ಪಿಲ್ಲ ಎನ್ನಸಿತು. ಆ ಸಂಭ್ರಮ, ಎಲ್ಲ ಮಕ್ಕಳ ಮೊಗದಲ್ಲಿ ನಗುವಿನ ಮಂದಹಾಸ ಮೂಡಿಸುವ ಈ ಒಂದು ಆಚರಣೆಯಲ್ಲಿ ಭಾಗವಹಿಸಿದ್ದು ಸಂತಸವನುಂಟುಮಾಡಿತು.ಹಾಗೆಯೇ ಸುಮ್ಮನೆ ಅವರನ್ನು ಹಣೆಬರಹವನ್ನು ಬರೆಯುವುದು ಪೌರಾಣಿಕ ಕಥೆಯ ಪ್ರಕಾರ ಬ್ರಹ್ಮದೇವರು ಅಲ್ಲವೇ ?ಎಂದು ಕೇಳಿದೆ ಅದಕ್ಕೆ ಅವರು ನಮ್ಮ ದೇಶದ ಪ್ರಧಾನ ಮಂತ್ರಿಗಳು ಎಲ್ಲಾ ಕೆಲಸವನ್ನು ಅವರೇ ಮಾಡ್ತಾರಾ? ಒಂದೊಂದು ಕೆಲಸವನ್ನು ಒಬ್ಬೊಬ್ಬ ಮಂತ್ರಿಗೆ ಹಂಚಿ ಕೊಟ್ಟಿಲ್ವಾ ?ಹಾಗೆ ಬ್ರಹ್ಮದೇವರು ಸಹ ಲಕ್ಷಾಂತರ ಜೀವರಾಶಿಗಳ ಹಣೆಬರಹವನ್ನು ತಾವೇ ಬರೆದರೂ ಪ್ರತಿಯೊಬ್ಬರಿಗೂ ಒಂದೊಂದು ಕೆಲಸವನ್ನು ಹಂಚಿಕೊಟ್ಟಿದ್ದಾರೆ.ಮಾನವನ ಹಣೆಬರಹದ ಕೆಲಸವನ್ನು ಚಿಟಿಗೆವ್ವ ಎಂಬ ದೇವತೆಗೆ ವಹಿಸಿದ್ದಾರೆ ಎಂಬ ಅವರ ಉತ್ತರದಿಂದ ನಾನು ನಿರುತ್ತರಳಾದೆ.ಅವರ ಜೀವನದ ಅನುಭವದ ನುಡಿ ಆಡಳಿತ ವಿಕೇಂದ್ರೀಕರಣದ ಪಾಠ ಕಲಿಸಿತ್ತು ನನಗೆ .
- ಶ್ರೀಮತಿ ಸುಮಂಗಲಾ ಕೃಷ್ಣ ಕೊಪ್ಪರದ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ನಿಜ ಮೇಡಂ ಪ್ರತಿ ಹಳ್ಳಿಯಲ್ಲೂ ಆಚರಿಸುವ ಪದ್ದತಿಯಾಗಿದೆ.ನನಗೆ ಸ್ವಲ್ಪ ಮಾತ್ರ ಗೊತ್ತಿತ್ತು ಪೂರ್ಣ ಮಾಹಿತಿ ತಮ್ಮ ಅಂಕಣದ ಬರಹದಿಂದ ತಿಳಿಯಿತು ಮೇಡಂ...ಯಾವುದೇ ವಿಷಯವನ್ನು ಅತ್ಯಂತ ಸ್ಪಷ್ಟ ಹಾಗೂ ನಿಖರವಾಗಿ ಮನಮುಟ್ಟುವಂತೆ ಮಾಡಬಲ್ಲ ಕೌಶಲ ತಮ್ಮಲ್ಲಿದೆ ಮೇಡಂ..ಧನ್ಯವಾದಗಳು ಮೇಡಂ.ತುಂಬಾ ಖುಷಿಯಾಯಿತು..🙏🙏🙏🙏🙏🙏🙏🙏
ಪ್ರತ್ಯುತ್ತರಅಳಿಸಿ