ಮರ್ತ್ಯಲೋಕವನ್ನು ಕರ್ತಾರನ ಕಮ್ಮಟವನ್ನಾಗಿಸಿದ – ಬಸವೇಶ್ವರರು.
ಜಾತಿಯತೆಯನ್ನು ತೋಲಗಿಸಲು ಲಿಂಗ ಧೀಕ್ಷೆ ನೀಡಿದ ಮಹಾನ್ ಶರಣ.
ಬಸವಣ್ಣನವರ ಕುರಿತು ಅರ್ಜುನವಾಡ ಶಾಸನ, ಚೌಡದಾನಪುರ ಶಾಸನ, ಕಲ್ಲದೇವಪುರ ಶಾಸನಗಳ ಮೂಲಕ ಅನೇಕ ಮಾಹಿತಿಗಳು ಲಭಿಸಿದೆ ಎಂದು ತಿಳಿದುಬರುತ್ತದೆ.
ಧರ್ಮವೆಂಬ ಜ್ಯೋತಿ ಬೆಳಗಲು ನಮ್ಮ ನಾಡಿನಲ್ಲಿ ಬಸವಣ್ಣನವರು ಜನ್ಮ ತಾಳಿದರು. ತಂದೆ ಮಂಡಿಗೆಯ ಮಾದಿರಾಜ, ತಾಯಿ ಮಾದಲಾಂಬೆ, ಮಾದಿರಾಜರು ಅವರ ಅಗ್ರಹಾರದಲ್ಲಿ ಬರುವ ಐನೂರು ಮಹಾರಾಜರ ಸಭೆಗೆ ಅಧ್ಯಕ್ಷರು ಆಗಿದ್ದರು. ಪರಂಪರೆಗೆ ಅನುಗುಣವಾಗಿ ವೇದಾಧ್ಯಾಯನ, ಯಜ್ಷಯಾಗಗಳನ್ನು ನಡೆಸುವ ಶ್ರೋತ್ರಿಯ ಬ್ರಾಹ್ಮಣರಾಗಿದ್ದರು. ಬಸವಣ್ಣನವರು ತಮ್ಮ 16ನೇ ವಯಸ್ಸಿನಲ್ಲಿ ಕೂಡಲಸಂಗಮಕ್ಕೆ ಆಗಮಿಸಿ ಕೂಡಲಸಂಗಮ ದೇವನ ಸೇವೆಯಲ್ಲಿ ತೊಡಗಿಸಿಕೊಂಡರು. ಕಾಲಕಳೆದಂತೆ ಒಂದು ದಿನ ಸ್ವಪ್ನದಲ್ಲಿ ಕೂಡಲಸಂಗಮವನ್ನು ಬಿಟ್ಟು ಹೊರಡು ನಿನ್ನನ್ನು ನಾನು ಅಗಲುವುದಿಲ್ಲ ನಿನ್ನನ್ನೇ ಲೋಕದಲ್ಲಿ ಸಾಧಕನನ್ನಾಗಿ ಮೆರೆಸುತ್ತೇನೆ “ ಮಂಗಳ ವೆಡೆಯೇ ನಿನ್ನ ಮುಂದಿನ ಗಮ್ಯ “ ಎಂದು ಶಿವನ ಆಜ್ಞೆಯಾಯಿತು. ಶಿವವಾಣಿಯಂತೆ ಪಯಣಿಸಿದ ಅವರು ಧಾರ್ಮಿಕವೆಂಬ ದಾರಿಯ ಮೂಲಕ ಮಾನವ ಕುಲವನ್ನು ದೇವಲೋಕವನ್ನಾಗಿಸಿದರು. ಮರ್ತ್ಯಲೋಕವನ್ನು ಕರ್ತಾರನ ಕಮ್ಮಟವನ್ನಾಗಿಸಿದರು. ಬಸವಣ್ಣನವರು ರಚಿಸಿದ ಹದಿನಾಲ್ಕುನೂರಕ್ಕೂ ಹೆಚ್ಚು ವಚನಗಳು ನಮಗಿಂದು ದೊರಕಿದೆ. ಶರಣಧರ್ಮವನ್ನು ಜನಮನಕ್ಕೆ ತಲುಪಿಸುವ ಜವಬ್ದಾರಿಯನ್ನು ವಚನಗಳು ಪೂರೈಸಿವೆ.
ಬಸವಣ್ಣನವರಿಗೆ ಮಹಾಮನೆ ಮತ್ತು ಅನುಭವ ಮಂಟಪ ಎರಡು ಕಣ್ಣುಗಳಿದ್ದಂತೆ. ಮಹಾಮನೆ ಅನ್ನದಾಸೋಹಕ್ಕೆ ಪ್ರಸಿದ್ದಿಯಾದರೆ ಅನುಭವ ಮಂಟಪದಲ್ಲಿ ಜ್ಞಾನದಾಸೋಹಕ್ಕೆ ಆದ್ಯತೆ ಇತ್ತು. ಸೊನ್ನಲಿಗೆ ಸಿದ್ದರಾಮ, ಸಕಲೇಶಮಾದರಸ, ಮಡಿವಾಳ ಮಾಚಿದೇವ, ಮೋಳಿಗೆ ಮಾರಯ್ಯ, ಚನ್ನಬಸವಣ್ಣನವರ ಚಿಂತನಾಧಾರೆಗಳೂ ಅನುಭವ ಮಂಟಪದಲ್ಲಿ ಆಧ್ಯಾತ್ಮ ವಿಸ್ತಾರವಾಗಿ ಹಬ್ಬಿತ್ತು. ಜಾತಿಯತೆಯನ್ನು ತೋಲಗಿಸಲು ಬಸವಣ್ಣನವರು ಎಲ್ಲಾ ಸಮೂದಾಯದ ವ್ಯಕ್ತಿಗಳಿಗೂ ಲಿಂಗಧೀಕ್ಷೆ ನೀಡುವದಷ್ಟೇ ಅಲ್ಲ ತಮ್ಮ ನಡೆ-ನುಡಿಗಳಲ್ಲೂ ಸಮಾನತೆಯಿಂದ ಕಾಣುತ್ತಿದ್ದರು. ಒಮ್ಮೆ ಹರಳಯ್ಯನೆಂಬ ಚಮ್ಮಾರನು ತನ್ನ ಚರ್ಮದಿಂದಲೇ ಪಾದುಕೆಗಳನ್ನು ತಯಾರಿಸಿ ಬಸವಣ್ಣನವರಿಗೆ ಅರ್ಪಿಸಿದಾಗ ಅದನ್ನು ಪಾದಗಳಿಂದ ಮುಟ್ಟಲಿಲ್ಲ. ತಮ್ಮ ತಲೆಯ ಮೆಲೆ ಹೊತ್ತು ಹರಳಯ್ಯನ ಆರಾಧನೆಗೆ ತಕ್ಕ ಗೌರವ ಸೂಚಿಸಿದ್ದರು. ಕನ್ನಡ ನಾಡಿಗೆ ಆಧ್ಯಾತ್ಮಿಕ , ಧಾರ್ಮಿಕ ದೃಷ್ಟಿಯಿಂದ ಸರ್ವಸಮ್ಮತವಾದ ನೆಲೆ ಒದಗಿಸಿ ಕೊಟ್ಟ ಕೀರ್ತಿ ಬಸವೇಶ್ವರರಿಗೆ ಸಲ್ಲುತ್ತದೆ. ಕಾಲಕಳೆದಂತೆ ಮತ್ತೆ ಕೂಡಲಸಂಗಮಕ್ಕೆ ಬಂದು ನೆಲೆಸಿದಾಗ ಬಸವಣ್ಣನವರಿಗೆ ಕೇವಲ 36 ವರ್ಷ. ಎಲ್ಲಿ ಅವರ ಆದರ್ಶ ಆಧ್ಯಾತ್ಮಿಕ ಮೂಲ ಪ್ರೇರಣೆಯಾಯಿತೊ ಅಲ್ಲೆ ಜಗದ ಜ್ಯೋತಿಯು ಆರುವುದು ಶಿವನಿಚ್ಚೆಯಾಗಿತ್ತು.
ಭಕ್ತಿಯೆಂಬ ಪೃಥ್ವಿಯ ಮೇಲೆ, ಗುರುವೆಂಬ ಬೀಜವಂಕುರಿಸಿ, ಲಿಂಗವೆಂಬ ಎಲೆಯ ಮೇಲೆ ವಿಚಾರವೆಂಬ ಹೂವಾಯಿತ್ತು, ಆಚಾರವೆಂಬ ಕಾಯಾಯಿತ್ತು, ಹಣ್ಣು ಕಳಚಿ ಬೀಳುವಲ್ಲಿ ಕೂಡಲ ಸಂಗಮದೇವ ತನಗೆ ಬೇಕೆಂದು ಎತ್ತಿಕೊಂಡ.
ಮೊ.9740755308.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಅದ್ಬುತವಾದ ಬರವಣಿಗೆ ಗುರುಗಳೇ
ಪ್ರತ್ಯುತ್ತರಅಳಿಸಿ