ಬಲೂನು
ಹರಕು ಗುಡಿಸಲಲ್ಲಿ ಅರಳಿದ ಹೂ ನಾನು
ಅಪ್ಪ ಗೋಡೆಯ ಮೇಲೆ ನೇತಾಡುತ್ತಿದ್ದಾನೆ
ಅಮ್ಮ ತುರುಬು ಕಟ್ಟಿ ಮನೆಯ ಮುಂದೆ
ತಳಿ ಹಾಕುತ್ತಿದ್ದಾಳೆ ಅಪ್ಪನಿಲ್ಲ ಅಮ್ಮನಿದ್ದಾಳೆ
ಯಾರೋ ಬರುವರು ಯಾರೋ ಹೋಗುವರು
ಅವರು ಬಂದಾಗ ಅಮ್ಮ ದುಡ್ಡು ಕೊಡುವಳು
ನಾನು ಅಂಗಡಿಗೆ ಹೋಗಿ ಬಲೂನು ತರಲು
ಅವರು ಒಳಗೆ ಹೋಗುವರು ಯಾರವರು?
ತಲೆ ನೇವರಿಸುವರು ಮತ್ತೆ ದುಡ್ಡು ಕೊಡುವರು
ಅಮ್ಮ ಒಳಗಿನಿಂದ ಬಟ್ಟೆ ಸರಿಮಾಡಿಕೊಂಡು
ನನ್ನ ನೋಡಿ ನಗುವಳು ನಕ್ಕೆ ಸುಮ್ಮನಾದಳು
ಅವರು ಹೋದರು ಸನ್ನೆ ಮಾಡಿದರು ಅಮ್ಮನಿಗೆ
ಅಂಗಡಿಯಾತನಿಗೆ ದುಡ್ಡು ಕೊಟ್ಟೆ ಅವನು ಒಂದು
ಬಲೂನು ಊದಿ ಕೊಟ್ಟ ನಗುತ್ತ ನಾನು ನಕ್ಕೆ
ಅಕ್ಕಪಕ್ಕದ ಎಲ್ಲರೂ ನಕ್ಕರು ಬಲೂನು ನೋಡಿ
ನನಗೆ ಖುಷಿ ಕೈಯಿಂದ ಆಡಿಸುತ್ತ ನಡೆದೆ ಮನೆಗೆ
ಅವರು ಹೋದರು ಬೀದಿಯಲ್ಲಿ ಸಿಕ್ಕು ನೋಡಿ ನಕ್ಕು
ತಲೆ ನೇವರಿಸಿದರು ನಕ್ಕು ಬಿಟ್ಟೆ ಅವರ ನೋಡಿ
ಅಮ್ಮ ಒಳಗಿನಿಂದ ಬಂದು ನನ್ನ ಕೈಯ ಬಲೂನು
ನೋಡಿ ಕುಸಿದು ಬಿದ್ದು ಅತ್ತಳು ನಾನು ನಗಲಿಲ್ಲ.
ಕೂದಲು ಕೆದರಿತ್ತು ಹಣೆ ಬೊಟ್ಟು ಅಳಿಸಿತ್ತು
ಹಾಸಿಗೆ ನಗುತಿತ್ತು ಹೂ ಬಾಡಿ ಹೋಗಿತ್ತು
ಕೈಕಾಲು ಅದುರುತಿತ್ತು ಅಮ್ಮ ನಡುಗಿಬಿಟ್ಟಳು
ನಾನು ಸುಮ್ಮನಿದ್ದೆ ಅಮ್ಮ ಅಳುತ್ತಿದ್ದಳು ಏಕೆ?
- ಶ್ರೀ ಇಂಗಳಗಿ ದಾವಲಮಲೀಕ, ಶಿಕ್ಷಕ ಸಾಹಿತಿಗಳು ಹತ್ತಿಮತ್ತೂರು.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ