ಬುಧವಾರ, ಸೆಪ್ಟೆಂಬರ್ 22, 2021

ಗೊರೂರು ಅನಂತರಾಜು ಮುರಿದು ಬಿದ್ದ ಭಜನೆ ಮನೆ ( ಪುಸ್ತಕ ಪರಿಚಯ) - ಶ್ರೀಮತಿ ಮಾಲಾ ಚಂದ್ರಶೇಖರ್ ಚೆಲುವನಹಳ್ಳಿ.

ಗೊರೂರು ಅನಂತರಾಜು ಮುರಿದು ಬಿದ್ದ ಭಜನೆ ಮನೆ

ಹಾಸನ ಎಂದಾಕ್ಷಣ ಶಿಲ್ಪಕಲೆಗಳ ತವರೂರು ಸಾಹಿತ್ಯ 
ಸಂಸ್ಕೃತಿಗಳ  ಆಗರ, ಹಿರಿಯ ಸಾಹಿತಿಗಳು, ರಾಜಕಾರಣಿಗಳನ್ನು ದೇಶಕ್ಕೆ ಕೊಡುಗೆಯಾಗಿ ಕೊಟ್ಟಿರುವ ಅರೆ ಮಲೆನಾಡು, ಅರೆ ಬಯಲು ಸೀಮೆಯ ಸುಂದರ, ವೈಭವೋಪೇತ ಜಿಲ್ಲೆ ಎಂಬುದು ಮೊದಲು ನೆನಪಾಗುತ್ತದೆ.
   ಹಾಸನ ಜಿಲ್ಲೆಯ ಸಾಹಿತ್ಯ ಕ್ಷೇತ್ರದಲ್ಲಿ ತನ್ನದೇ ಸರಳ ಶೈಲಿಯ ಬರವಣಿಗೆಯಲ್ಲಿ ಛಾಪು ಮೂಡಿಸಿರುವ ಸಾಹಿತಿಗಳಲ್ಲಿ ಶ್ರೀಯುತ ಗೊರೂರು ಅನಂತ ರಾಜುರವರು ಮುಂಚೂಣಿಯಲ್ಲಿ ನಿಲ್ಲುತ್ತಾರೆ.ಇತ್ತೀಚೆಗಷ್ಟೇ ಅತ್ಯುನ್ನತ ಪ್ರಶಸ್ತಿಯಾದ *ಕವಿ ವಿಭೂಷಣ *ಪ್ರಶಸ್ತಿ ಪಡೆದಿರುವುದು ಅವರ ನೈಪುಣ್ಯತೆಗೆ ನಿದರ್ಶನವೆನ್ನಬೇಕು, ಇಂತಹ ಹಲವಾರು ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದರೂ, ಸಲ್ಪವೂ ಗರ್ವವಿಲ್ಲದ ಸರಳ, ಸಜ್ಜನಿಕೆಯ ವ್ಯಕ್ತಿ ಗೊರೂರು ಅನಂತ ರಾಜುರವರು.
       ಯಾವುದೇ ಪತ್ರಿಕೆಯಲ್ಲಿಯಾಗಲೀ ಅವರದೊಂದು ಲೇಖನ ಇರಲೇಬೇಕು ಎನ್ನುವಷ್ಟರ ಮಟ್ಟಿಗೆ ಅವರು ಸಾಹಿತ್ಯದಲ್ಲಿ ಬರವಣಿಗೆಯಲ್ಲಿ ತೊಡಗಿಕೊಂಡಿರುವುದು ಸ್ತುತ್ಯಾರ್ಹ, ಅವರ ಬರಹಗಳನ್ನು ಓದುತ್ತಿದ್ದರೆ ಅವರ ಜ್ಞಾನದ ಆಳ, ಅರಿವಿನ ವಿಸ್ತಾರ, ಕ್ಷಣವೂ ವಿರಮಿಸಲು ಬಿಡದೇ ಸದಾ ಬರೆಯುತ್ತಿರುವ ಲೇಖನಿ, ಕ್ರಿಯಾಶೀಲವಾಗಿರುವ ಅವರ ಮನಸ್ಸು ಇವೆಲ್ಲವುಗಳ ಬಗ್ಗೆ ಕ್ಷಣ ಕಾಲ ಯೋಚಿಸುವಂತಾಗುವುದು ಸಹಜ.
    ಪಾಚ್ಚಾತ್ಯ ನಾಟಕಗಳು, ಕಲೆಗಳು ಹಾಗೂ ರಂಗಭೂಮಿಯ ಬಗ್ಗೆಯೂ ಅಧ್ಯಯನ ಮಾಡಿ  ವಿಮರ್ಷಾತ್ಮಕ ಲೇಖನಗಳನ್ನು ಬರೆದಿರುವುದು ಓದಿದಾಗ ಅವರ ಅಧ್ಯಯನ ವಿಶ್ವ ಮಟ್ಟಕ್ಕೆ ಏರಿರುವುದು ಖಚಿತವಾಗುತ್ತದೆ.ಅಲ್ಲದೇ ತಾನೇ ಬರೆದು ಪ್ರಕಟವಾದ ಪುಸ್ತಕಗಳನ್ನು ಗ್ರಂಥಾಲಯಗಳಿಗೆ ಕೊಡಲು ಅಲೆದು ಕೊನೆಗೆ ತಮ್ಮ ಹುಟ್ಟೂರು ಗೊರೂರಿನಲ್ಲೂ ತಾವೇ ಮುಂಚೂಣಿಯಲ್ಲಿ ನಿಂತು ಓಡಾಡಿ ಒಂದು ಗ್ರಂಥಾಲಯವನ್ನು ಸ್ಥಾಪಿಸಿದ್ದು, ಹಳೇ ಚಲನ ಚಿತ್ರಗಳು ಹೇಗೆ ಆಗಿನ ಕಾಲಕ್ಕೆ ಜನರಿಗೆ ಪ್ರೇರಣೆಯಾಗಿದ್ದವು ಎಂದು ತಮ್ಮದೇ ಸರಳ ಶೈಲಿಯಲ್ಲಿ ಸಾಮಾನ್ಯರಿಗೂ ಅರ್ಥವಾಗುವಂತೆ ಬರೆಯುತ್ತಾ ಪೌರಾಣಿಕ ನಾಟಕಗಳ ದೃಶ್ಯಗಳ ಬಗ್ಗೆ, ಅಲ್ಲದೇ,ಬಿಂಡಿಗದ ದೇವಿರಮ್ಮನ ದೇವಸ್ಥಾನಕ್ಕೆ ಪ್ರವಾಸ ಹೋದ ಬಗ್ಗೆ ಬರೆಯುತ್ತಾ ತಮ್ಮ ಸ್ವಂತ ಊರಾದ ಗೊರೂರಿನಲ್ಲಿಯೂ ಅನೇಕ ಚಲನ ಚಿತ್ರಗಳ, ಧಾರಾವಾಹಿಗಳ ಚಿತ್ರೀಕರಣ ಮಾಡಲು ಓಡಾಡಿ ನಂತರ ಬೇರೆ ಕಡೆ ಹೋಗಿದ್ದು, ಚಿತ್ರೀಕರಣ ಮಾಡಿದ ಚಿತ್ರಗಳೂ ತೆರೆ ಕಾಣದೇ ನಿಂತು ಹೋಗಿದ್ದು ಅವೆಲ್ಲವೂ ತಮಗೆ ಹತಾಶೆಯಾಯಿತು ಎಂದು ಹೇಳುತ್ತಾ ಕೊನೆಗೆ ""ಮುರಿದು ಬಿದ್ದ ಭಜನೆ ಮನೆ""ಯ ಬಗ್ಗೆ ಬರೆಯುತ್ತ ಆ ಚಿತ್ರದಲ್ಲಿ ಕೊನೆಗೆ ತನ್ನಹೆಸರನ್ನು ಹೇಳಿದ್ದಕ್ಕಾಗಿ ಸಮಾಧಾನ ಪಟ್ಟುಕೊಳ್ಳುವುದು  ಇಂತಹ ಅನೇಕ ವಿಷಯಗಳನ್ನು ಕೂಡ ಲೇಖನಗಳ ಮೂಲಕ ಬರೆಯುವ ಹವ್ಯಾಸ ನಮ್ಮಂಥ ಉದಯೋನ್ಮುಖ ಬರಹಗಾರರಿಗೆ ಪ್ರೇರಣೆ ಎಂದರೆ ತಪ್ಪಾಗಲಾರದು.
        ಮುರಿದು ಬಿದ್ದ ಭಜನೆ ಮನೆಯ ಅವರ ಭಾವನಾತ್ಮಕ ಸಂಬಂಧ, ಅಲ್ಲಿ ನಡೆಯುತ್ತಿದ್ದ ಎಲ್ಲ ವಿಶೇಷಗಳೊಡನೆ ವರ್ಣಿಸುವಾಗ ಅವೆಲ್ಲವೂ ಕಣ್ಮುಂದೆ ಬಂದಂತೆ ಅನ್ನಿಸುವುದು ಸುಳ್ಳಲ್ಲ.ಇನ್ನು ಲಾಕ್ ಡೌನ್ ಆದ ಸಂದರ್ಭಕ್ಕೆ ಹೊಂದುವಂತೆ ಬರೆದಿರುವ ಸಮಯ ಕಳೆಯಲು ಬೇಸರವೇ *ದಿ ಬೆಟ್ *ಕಥೆ ಓದಿ,ಎಂಬ ಲೇಖನವಂತೂ  ವಿಸ್ಮಯ ಎನ್ನಿಸದೇ ಇರದು. "ಲಾಯರ್ ಮತ್ತು ಬ್ಯಾಂಕರ್ ನಡುವೆ 20  ಲಕ್ಷದ ಬೆಟ್ ಕಟ್ಟುವ ಕಥಾನಕ. ಒಬ್ಬ 25  ವರ್ಷ ಪ್ರಾಯದ ವಕೀಲ ಯಾರ ಸಂಪರ್ಕವೂ ಇರದೇ, ಕೋಣೆಯಿಂದ ಹೊರಗೂ ಹೋಗದೇ, ಟಿವಿ, ಫೋನ್ ಇಲ್ಲದೇ 20  ಲಕ್ಷ ಹಣಕ್ಕಾಗಿ ಏಕಾಂತ ಸೆರೆ ವಾಸ ಅನುಭವಿಸುವಾಗಿನ ಮನ ಮಿಡಿಯುವ ಕಥಾನಕ.ಅದೇ ಅವಧಿಯಲ್ಲಿ ವಕೀಲ ಅನೇಕ ಪುಸ್ತಕಗಳನ್ನೂ ಓದುತ್ತಾ ಉತ್ತಮ ಕೃತಿಗಳನ್ನು ಬರೆದು ಕೊನೆಗೆ ಆಗುವ ದುಃಖದ ಅಂತ್ಯ, ಓದುಗರ ಮನಸ್ಸನ್ನು ಸೆರೆ ಹಿಡಿಯುವಲ್ಲಿ ಸಫಲವಾಗಿದೆ ಎಂದರೆ ತಪ್ಪಿಲ್ಲ."ಕಥೆ ಗೆ ವಸ್ತುವಾದಳು ಹುಡುಗಿ "ಎಂಬ ಕತೆಯoತೂ ಕೊನೆಯಲ್ಲಿ ಆಕೆ ಏನಾದಳು,ಏನಾಯಿತು ಎಂಬ ಜಿಜ್ಞಾಸೆಗೆ ಓದುಗರನ್ನು ದೂಡುತ್ತದೆ 
      ಇನ್ನು ಸನ್ಮಾನ, ಪ್ರಶಸ್ತಿ, ಪರಂತೂ ಎಂಬ ಹಾಸ್ಯ ಲೇಖನ ಕಥೆಗಳು, ಅವುಗಳ ಕಥಾ ವಸ್ತು, ಪಾತ್ರಗಳು, ಹೆಸರುಗಳು, ಸನ್ನಿವೇಶ, ಸಂದರ್ಭಗಳು,ಅದರಲ್ಲಿ ಬರುವ ಸಂಭಾಷಣೆಗಳಂತೂ ಓದುತ್ತಾ ನಗು ತಡೆಯಲಾರದೇ ಕೆಲ ಹೊತ್ತು ಸುಧಾರಿಸಿಕೊಂಡು ನಂತರ ಓದುತ್ತಾ ಮತ್ತೂ ನಕ್ಕೂ ನಕ್ಕೂ ಹೊಟ್ಟೆ ಹುಣ್ಣಾಗಿಸುವಲ್ಲಿ ಯಶಸ್ವಿಯಾಗಿವೆ. ರೆಕ್ಸೋನ, ಲೈಫ್ ಬಾಯ್, ಲಕ್ಸ್ ನ ನಗೆಹನಿಗಳಂತೂ  ಮತ್ತೆ ಮತ್ತೆ ಕೇಳಬೇಕು, ಓದಬೇಕು ಎನಿಸುವುದರಲ್ಲಿ ಸಂಶಯವಿಲ್ಲ.ಹೀಗೇ ಸಾಹಿತ್ಯದ ಎಲ್ಲಾ ಪ್ರಕಾರಗಳ ಬರವಣಿಗೆಯನ್ನೂ ಕರತಲಾಮಲಕ 
ಮಾಡಿಕೊಂಡಿರುವ ಗೊರೂರು ಅನಂತ ರಾಜು ಅವರು ತಮ್ಮ ಸಾಧನೆಯ ಜೊತೆ ಜೊತೆಗೆ ಬೆಳಕಿಗೆ ಬಾರದ ಅನೇಕ ಪ್ರತಿಭೆಗಳಿಗೂ ಪ್ರೋತ್ಸಾಹಿಸಿ ನಮ್ಮಂಥ ಅಲ್ಪ ಮತಿಗಳ ಚಿತ್ತಕ್ಕೂ ಅಪಾರ ಜ್ಞಾನ ತುಂಬುತ್ತಾ ತಮ್ಮೊಡನೆ ಸಾಧನೆಯ ಪಥದತ್ತ ಕರೆದೊಯ್ಯುತ್ತಿರುವುದು ಶ್ಲಾಘನೀಯ ಹಾಗೂ ಹಾಸನ ಜಿಲ್ಲೆಗೂ ಅವರಿಂದ ಹಿರಿಮೆ ಬಂದಿದೆಯೆಂದರೆ ತಪ್ಪಾಗಲಾರದು.ಶ್ರೀಯುತರನ್ನು ನಾನು ಕೇವಲ ಎರಡು ಬಾರಿ ಭೇಟಿಯಾಗಿದ್ದರೂ ಸ್ವಲ್ಪವೂ ಗರ್ವವಿಲ್ಲದ ಸದಾ ನಗು ನಗುತ್ತಿರುವ ಸರಳ, ಸಜ್ಜನಿಕೆಯ, ಸುಸಂಸ್ಕೃತ ವ್ಯಕ್ತಿ ಅನಂತ ರಾಜು , ಅಂತಹ ಮಹಾನ್ ವ್ಯಕ್ತಿ ನಮ್ಮ ಜಿಲ್ಲೆಯವರು ಎನ್ನುವುದು  ಜಿಲ್ಲೆಗೆ ಒಂದು ಹೆಮ್ಮೆಯ ವಿಷಯವಾಗಿದೆ.
- ಶ್ರೀಮತಿ ಮಾಲಾ ಚಂದ್ರಶೇಖರ್ 
ಚೆಲುವನಹಳ್ಳಿ.
ಉಪಾಧ್ಯಕ್ಷರು, ಸಿರಿಗನ್ನಡ ವೇದಿಕೆ ಹಾಸನ ಜಿಲ್ಲೆ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ) 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...