"ಅನುಭವಾಮೃತ ಸೇವಾಮೃತವಾದಡೆ ಇಳೆಯೊಂದು ಸ್ವರ್ಗ ಕಾಣಾ"
ಒಂದು ವಿಮರ್ಶಾ ಗ್ರಂಥವನ್ನು ಮತ್ತೆ ವಿಮರ್ಶಿಸುವುದು ಎಂದರೆ ನೀರೊಳಗಿದ್ದು ಬೆವರು ಸುರಿಸಿದಂತೆಯೇ ಸರಿ. ಅದರಲ್ಲೂ ಹಿರಿಯರು,ಕವಿಗಳು,ಲೇಖಕರು,ಉತ್ತಮ ವಿಮರ್ಶಕರು ಹಾಗೂ ಉತ್ತಮ ಸಂಘಟನಾ ಶೀಲರೂ ಆಗಿರುವ ಗೊರೂರು ಅನಂತರಾಜು ರವರು 163 ಪುಟಗಳ *"ಅನುಭವಾಮೃತ ಸೇವಾಮೃತ"* ಎಂಬುದು ಸುಮಾರು 25 ಕೃತಿಗಳ ಮೇಲೆ ಬರೆದಿರುವ ವಿಮರ್ಶಾಗ್ರಂಥ ಮತ್ತು ಈ ವಿಮರ್ಶಾಗ್ರಂಥ ಕುರಿತು ಇತರ ಲೇಖಕರು ಬರೆದ 6 ವಿಮರ್ಶಾ ಲೇಖನಗಳನ್ನು ಒಳಗೊಂಡ ವಿಶಿಷ್ಟ ವಿಮರ್ಶಾಗ್ರಂಥ.ಇದನ್ನು ವಿಮರ್ಶಿಸುತ್ತಾ ಹೋದಾಗ ಜೀವನದ ಹಲವು ಅನುಭವಗಳ ಸಾರ ಸವಿಯುವ ಅವಕಾಶ ನನಗೆ ಲಭಿಸಿದ್ದು ಸುಳ್ಳಲ್ಲ. ಈ ವಿಮರ್ಶಾಕಾರ್ಯದ ಹಾದಿಯಲ್ಲಿ ಮೊದಲಿಗೆ ಚಿಂತಕ ಎಚ್. ಗಂಗಾಧರನ್ ಅವರ ಸರ್ವಧರ್ಮ ಸಮನ್ವಯ ಸಾರುವ 'ಅನುಭವಾಮೃತ'ದ ಸಾರ ಇಂದಿನ ಜಾತಿಗಳ ಕೊಳಕಲ್ಲಿ ಬಿದ್ದು ಒದ್ದಾಡುತ್ತಿರುವ ರೋಗಗ್ರಸ್ತ ಸಮಾಜಕ್ಕೆ 'ಭಗವಾನ್ ಬಸವೇಶ್ವರರ ದಿವ್ಯ ತತ್ವಗಳು' ಮತಾಂಧತೆಯ ಅಂಧಕಾರ ಕವಿದ ಸಮಾಜಕ್ಕೆ ಬದುಕ ಹಾದಿಗೆ ಬೆಳಕನ್ನು ಚೆಲ್ಲುವಲ್ಲಿ ಯಶ ಕಂಡಿದೆ ಎನಿಸುವುದು.
18ನೇ ಶತಮಾನದಲ್ಲಿ ಮಹಾರಾಷ್ಟ್ರದ ಅಧಿಪತಿಯಾಗಿದ್ದ ಅಹಲ್ಯಾಬಾಯಿಯ ಪತಿ ಖಂಡೇರಾವ್ ಹೋಳ್ಕರ್ ನಿಧನರಾದಾಗ ಮನೆತನದ ಸಂಪ್ರದಾಯದಂತೆ ಸಹಗಮನಕ್ಕೆ ಸ್ವಪ್ರೇರಣೆಯಿಂದಲೇ ಸಿದ್ಧವಾಗಿದ್ದ ಅಹಲ್ಯಾಬಾಯಿಯನ್ನು ಅವರ ಮಾವ ವಿನಂತಿಸಿಕೊಂಡು ಸಹಗಮನ ತಪ್ಪಿಸಿದ ಪರಿಣಾಮವಾಗಿ ಮುಂದೆ ಆ ವೀರಮಹಿಳೆ ಎನೆಲ್ಲ ಗಂಡಾಂತರಗಳನ್ನು ಎದುರಿಸಿ 30 ವರ್ಷಗಳ ಕಾಲ ಜನಮೆಚ್ಚುವ ಆಡಳಿತ ನಡೆಸಲು ಸಾಧ್ಯವಾಯಿತು. ಆಕೆಯು ತನ್ನ ಆಡಳಿತದ ಅವಧಿಯಲ್ಲಿ ನೆರೆಹೊರೆಯವರಲ್ಲಿ ಸಹಕಾರ ಶಾಂತಿಯ ಬೆಳಕನ್ನು ಬಿತ್ತಿದರು. ಆಕೆಯ ಕಾಲದಲ್ಲಿ ಯಾವ ಆಕ್ರಮಣವೂ ನಡೆಯಲಿಲ್ಲ.ರೈತರ ಅಭ್ಯುದಯಕ್ಕಾಗಿ ನೀರಾವರಿ ಯೋಜನೆಗಳನ್ನು ರೂಪಿಸಿದರು. ನಿರ್ಗತಿಕರಿಗೆ ಭೂಮಿಯನ್ನೊದಗಿಸಿ ಜೀವನೋಪಾಯ ಮಾರ್ಗ ಕಲ್ಪಿಸಿದರು. ಇದು ಇಂದು ಆಡಳಿತ ನಡೆಸುವ ಸರ್ಕಾರಗಳಿಗೆ ಮಾರ್ಗದರ್ಶಿ ಸೂತ್ರವಾದರೆ ಈ ಇಳೆಯಲ್ಲಿಯೇ ಸ್ವರ್ಗ ಕಾಣಬಹುದಲ್ಲವೇ..? ಎಂಬ ಭಾವನೆ ಬಾರದಿರದು...!
ಅಮೇರಿಕಾದ ಎಡ್ಗರ್ ಕೈಸಿಯು ಸಮ್ಮೋಹನಶಾಸ್ತ್ರಜ್ಞ ಹಾರ್ಟ್ ರವರು ತಮಗೆ ಪರಿಚಯವಿದ್ದ ಲಯನೆ ಎಂಬುವರ ಮೂಲಕ ಒಂದು ವರ್ಷ ನಿರಂತರ ಸಮ್ಮೋಹನ ಚಿಕಿತ್ಸೆ ಮೂಲಕ ಗಂಟಲು ನಾಳದ ನರ ದೌರ್ಬಲ್ಯ ಸಂಪೂರ್ಣ ಮಾಯವಾಗಿ ಸ್ಪಷ್ಟವಾಗಿ ಮಾತನಾಡತೊಡಗಿದರು. ಈ ಅನುಭವಾಮೃತವು ಇಂದಿನ ಸಮಾಜಕ್ಕೆ ತನ್ನ ಸೇವೆ ವಿಸ್ತರಿಸಬಲ್ಲದು. ಹೀಗೆ 128 ಲೇಖನವುಳ್ಳ 814 ಪುಟಗಳ *'ಅನುಭವಾಮೃತ'* ಕೃತಿಯು *'ಸೇವಾಮೃತ'* ವಾಗಿ ಸಮಾಜಕ್ಕೆ ಸಲ್ಲುವುದು ಎಂಬುದು ವಿಮರ್ಶಕ ಗೊರೂರು ಅನಂತರಾಜು ರವರ ವಿಚಾರಧಾರೆ ಒಪ್ಪವಂತಹುದೇ ಆದರೂ ಅದನ್ನು ರುಜು ಮಾರ್ಗದ ಮೂಲಕ ಸಮಾಜಕ್ಕೆ ತಲುಪಿಸುವ ಸುವರ್ಣ ಮಾಧ್ಯಮದ ಅಗತ್ಯ ಇದ್ದೇ ಇದೆ ಎನ್ನುವುದನ್ನು ಮರೆಯುವಂತಿಲ್ಲ. ಅಣ್ಣಾಜಪ್ಪ ಗುಂಜೇವುರವರ *ಹೊಳೆನರಸೀಪುರ ತಾಲೂಕು ಇತಿಹಾಸ* ಕೃತಿಯು ಹತ್ತಾರು ವಿಷಯಗಳ ಸಂಗ್ರಹದ ಗೂಡು ಎಂದು ವಿಮರ್ಶಿಸಿರುವ ಗೊರೂರು ಅನಂತರಾಜು ರವರು ಅದು ಅಣ್ಣಾಜಪ್ಪ ಗುಂಜೇವುರವರ ಬಹುದಿನದ ಪರಿಶ್ರಮದ ಫಲವಾಗಿ ಮೂಡಿಬಂದ ಜೇನುಗೂಡು ಎಂದು ವಿಮರ್ಶಿಸಿರುವುದು ಗೊರೂರು ಅನಂತರಾಜು ರವರೊಳಗೊಬ್ಬ ಬರಹಗಾರರಿಗೆ ಬೆನ್ನು ತಟ್ಟುವ ವಿಶಿಷ್ಟ ವಿಮರ್ಶಕನಿದ್ದಾನೆ ಎಂಬುದನ್ನು ತೋರಿಸಿಕೊಡುತ್ತದೆ,ಮಾತ್ರವಲ್ಲ ಆ ಕೃತಿಯು ಹೊಳೆನರಸೀಪುರ ತಾಲೂಕು ಪ್ರಾಗೈತಿಹಾಸ, ಮೇಲ್ಮೈ ಲಕ್ಷಣಗಳು,ಬೆಟ್ಟದ ಮೇಲಿನ ದೇವಸ್ಥಾನಗಳು, ಪಾಳೇಗಾರರು ಆಳ್ವಿಕೆ,ಹೊಯ್ಸಳ ಹೆಜ್ಜೆ ಗುರುತುಗಳು, ಜನಾಗೀಯ ಸಂಸ್ಕೃತಿ,ಸಾಹಿತ್ಯ,ಜಾನಪದ ಕಲೆ, ರಾಜಕೀಯ ಹೀಗೆ ಎಲ್ಲಾ ವಿಷಯಗಳ ಮೇಲೂ 448 ಪುಟಗಳಲ್ಲಿ 194 ಶೀರ್ಷಿಕೆಯಲ್ಲಿ ಕಿರಿದಾಗಿ ಪರಿಚಯಿಸುತ್ತಾರೆ ಎಂದು ವಿಮರ್ಶಿಸುವ ಮೂಲಕ ಓದುಗರ ಹೃದಯ ತಟ್ಟುವ ಮೂಲಕ ಓದುಗರನ್ನು ಪ್ರೇರೇಪಿಸಿದ್ದಾರೆ. ಪ್ರತಿಯೊಬ್ಬರೂ ತಮ್ಮ ಪ್ರಾದೇಶಿಕ ಇತಿಹಾಸ ಓದುವ ಮೂಲಕ ತಮ್ಮ ಹೃದಯ ಶ್ರೀಮಂತಿಕೆ ಹೆಚ್ಚಿಸಿಕೊಳ್ಳಬಹುದು ಮಾತ್ರವಲ್ಲ ತಮ್ಮ ನಾಡು ನೆಲೆಯ ಬಗ್ಗೆ ಅಭಿಮಾನ ಮೂಡಿಸಲು ಪ್ರೇರಣಾದಾಯಕವಾಗುವುದು.
ಪುಟ್ಟಣ್ಣ ಕಣಗಾಲ್ ಅವರ ಸಿನಿಮಾ ಪಯಣ ಕುರಿತಾದ ಎಸ್. ಪ್ರಕಾಶ್ ರವರ *ಬೆಳ್ಳಿ ಮೋಡದ ಅಂಚಿನಿಂದ* ಕೃತಿ ಬಗ್ಗೆ ಗೊರೂರು ಅನಂತರಾಜು ರವರ ವಿಮರ್ಶೆ ಓದುಗರನ್ನು ಸೂಜಿಗಲ್ಲಿನಂತೆ ತನ್ನತ್ತ ಸೆಳೆಯುತ್ತಾ ಸಾಗುತ್ತದೆ. ಪುಟ್ಟಣ್ಣ ಕಣಗಾಲ್ ರವರು ಚಿತ್ರನಿರ್ದೇಶನಕ್ಕೆ ತೊಡಗಿಸಿಕೊಂಡಾಗ ಕ್ಯಾಮೆರಾ ಕೇವಲ ಒಂದೇ ಕೋನದಲ್ಲಿ ನಿಂತು ನಾಟಕದ ದೃಶ್ಯೀಕರಣ ಮಾಡುತ್ತಿತ್ತು. ಛಾಯಾಗ್ರಹಣವು ಚಿತ್ರಕ್ಕೆ ಚಾಲನೆ ನೀಡಬಲ್ಲದು ಎಂಬುದನ್ನು *"ಬೆಳ್ಳಿಮೋಡ"* ಎಂಬ ತಮ್ಮ ಮೊದಲ ಚಿತ್ರದಿಂದ ಮೊದಲು ಗುರ್ತಿಸಿದವರು ಪುಟ್ಟಣ್ಣನವರು ಎಂಬ ವಾಸ್ತವವನ್ನು ಬಿಚ್ಚಿಡುವ ಮೂಲಕ ಎಚ್. ಎಸ್. ಪ್ರಕಾಶ್ ರವರ ಕೃತಿಯ ಮೇಲೆ ಮತ್ತಷ್ಟು ಹೊಳಪಿನ ಬೆಳಕು ಚೆಲ್ಲಿದ್ದಾರೆ.
ಪುಟ್ಟಣ್ಣ ಕಣಗಾಲರು ಸದಾ ಪ್ರಯೋಗಶೀಲ ಪ್ರವೃತ್ತಿಯವರು. ಅವರು ಸಾಹಿತ್ಯ ಕೃತಿಗಳನ್ನು ತಮ್ಮ ಸ್ವತಂತ್ರ ಚಿಂತನಾಶೀಲ ಗುಣದಿಂದ ಚಲನಚಿತ್ರ ವ್ಯಾಕರಣಕ್ಕೆ ಸರಿ ಹೊಂದಿಸುತ್ತಿದ್ದರು. ಸ್ಟುಡಿಯೋಗಳಿಗೆ ಸೀಮಿತವಾಗದೇ ಹೊರಾಂಗಣದಲ್ಲಿ ಚಿತ್ರೀಕರಣ ಮಾಡಿ, ಹೊಸ ಕಲಾವಿದರಿಂದ ಅಭಿನಯ ಮಾಡಿಸಿ,ಚಲನಚಿತ್ರಗಳಿಗೆ ಒಂದು ಹೊಸ ಮೆರಗು ನೀಡುತ್ತಿದ್ದರು. ಹಾಡುಗಳಿಗೆ ವಿಶೇಷ ಪ್ರಾಮುಖ್ಯತೆ ನೀಡಿ, ಚಲನಚಿತ್ರಗಳನ್ನು ಸೂಪರ್ ಹಿಟ್ ಮಾಡುತ್ತಿದ್ದರು. ಆ ಮೂಲಕ ಕನ್ನಡ ಸಂಸ್ಕೃತಿ ಬಗ್ಗೆ ಹೆಮ್ಮೆ ಉಕ್ಕಿಸುವಂತಹ ಸನ್ನಿವೇಶಗಳನ್ನು, ಗೀತೆಗಳನ್ನು ಬಳಸಿ, ಮನೆ ಮಂದಿಯೆಲ್ಲ ಒಟ್ಟಿಗೆ ಕುಳಿತು ನೋಡಬಹುದಾದ ಸದಭಿರುಚಿಯ ಚಿತ್ರಗಳನ್ನು ನಿರ್ಮಿಸುವ ಮೂಲಕ ಭಾರತೀಯ ಚಿತ್ರರಂಗ ಕನ್ನಡ ಚಿತ್ರರಂಗದತ್ತ ಹುಬ್ಬೇರಿಸಿ ನೋಡುವಂತೆ ಮಾಡಿದ್ದು ಕನ್ನಡ ಚಿತ್ರರಂಗದ ತಾಕತ್ತನ್ನು ಹೆಚ್ಚಿಸಿತು ಎಂಬುದು ಎಲ್ಲರೂ ಒಪ್ಪಿಕೊಳ್ಳುವ ಮಾತೇ ಸರಿ.
ಕೆ. ಬಾರಾವಲಿ ಬಾವಿಹಳ್ಳಿ
(ಬಾರಾಸಾಹೇಬ ಕಲಾರಿ)
# 590 ಮನ್ಸೂರ್ ಮಂಜಿಲ್
39ನೇ ವಾರ್ಡ್ ದಾನಮ್ಮ ಗುಡಿ ಹತ್ತಿರ, ಆನಂದನಗರ ಹಳೇ ಹುಬ್ಬಳ್ಳಿ, ಹುಬ್ಬಳ್ಳಿ -580024.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ