ಬುಧವಾರ, ಅಕ್ಟೋಬರ್ 20, 2021

ಮಾತೃ ದೇವತೆ (ಕವಿತೆ) - ಸೂಗಮ್ಮ ಡಿ ಪಾಟೀಲ್.

  ಹೆತ್ತು ಹೊತ್ತು ತುತ್ತು ನೀಡಿದ ನಿಮ್ಮ ತಾಯಿಗೆ 
ತುತ್ತು ಅನ್ನ ನೀಡಲು ಯಾಕೆ  ಲೆಕ್ಕ ಹಾಕಿಹೆ 
ಜನ್ಮವಿದು ತಾಯಿ ಕೊಟ್ಟ ಭಿಕ್ಷೆ ಎಂದು ಮರೆತಿಹೆ 
ಮುತ್ತು ಕೊಡುವವಳ ಮಡಿಲಲಿ ಮಮತೆ ತೊರೆದಿಹೆ
ಅತ್ತು ಅತ್ತು ತಾಯಿ ಕಣ್ಣೀರು ಬತ್ತಿವೆ  ಮಾತೃ ಶಾಪ ಹತ್ತದೆ //೧//

ಹೆತ್ತ ಹೊಟ್ಟೆಗೆ ಹಳಸಿದ ಅನ್ನವ ಕೊಟ್ಟು ಕೂತಿಹೆ 
ಮುದ್ದಾದ ಮಡದಿಗೆ ಮೃಷ್ಟಾನ್ನವ ಉಣಿಸಿದರೇನು ಫಲ
ಹಸಿದ ಹೊಟ್ಟೆ ತುಂಬಿಸದೆ  ಹಂಗಿಸಿದೆ ಪ್ರತಿದಿನವೂ
ಹಸಿಯದ ಹೊಟ್ಟೆಗೆ ತುತ್ತು ಮಾಡಿ ತಿನಿಸಿದೆ
ನಿನಗೆ ತುತ್ತು ಮಾಡಿ ತಿನ್ನಿಸಿದವಳ ದೂರಿದೆ  //೨//

ತಾಯಿ ದೇವರ ತಳ್ಳಿ ಗುಡಿ ಗುಂಡಾರವ ಸುತ್ತಿದೆ 
ಸುತ್ತುವದಾದರೆ ಸುತ್ತಿಬಿಡು ನೀ ಹೆತ್ತ ತಾಯಿಯ
ಎತ್ತಲು ಸುತ್ತಿದರೂ ಸಿಕ್ಕದು ಮಾತೃ ದೇವರು
ಬದಿಗೊತ್ತಿ ಸಾಗಬೇಡ ಅವಳನೆಂದು ನೀನು
ಮೋಹದ  ಮಡದಿಯ ಮಾತು ಕೇಳಿಕೊಂಡು //೩//

ಒಡತಿಯ ಒಲವಿಗೆ ಮರುಳಾಗಿ ಹೊಂಬನಾಗಬೇಡ
ಕರುಳಿನ ಕುಡಿ ಸಂಬಂಧವ ಕಳೆದುಕೊಳ್ಳಬೇಡ
ಹರುಷದ ಬಾಳಿಗೆ ಹರಸಿದ ಮಮತೆಯ ತಾಯಿಯ
ವರುಷದ ಕೂಳಿಗೂ  ಭಾರವೆಂದು ಜರಿಯಬೇಡ 
ಬಡಪಾಯಿ ಜೀವವಿದು ಬಾಂಧವ್ಯದಿಂದ  ಕಾಣು //೪//

ಭವಣೆಯ ಬದುಕಲಿ ಅಕ್ಕರೆಯಿಂದ ಕಂಡೋಳು
ಅನಕ್ಷರಸ್ತಳಾದರೂ ಅಕ್ಷರವ ಕಲಿಸಿದವಳು 
ಅಪ್ಪಿ ಮುದ್ದಾಡಿದವಳ ತಪ್ಪಿಯೂ ತೊರೆಯಬೇಡ
ತೊರೆದು ಮತೀಹೀನನಾಗಿ ಮರುಗಬೇಡ
ಸಹನಾ ಮೂರ್ತಿಯ ಸೇವಕನಾಗಿ ಬಾಳು //೫//

 -  ಸೂಗಮ್ಮ ಡಿ ಪಾಟೀಲ್
         ಉತ್ನಾಳ್ (ಬಿಜಾಪುರ ).


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

2 ಕಾಮೆಂಟ್‌ಗಳು:

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...