ಗರ್ಭದಲ್ಲಿರುವ ಕಂದ ತನ್ನ
ಮೊಳಕೆಯ ಕೈಕಾಲು ಮಿಸುಕಿದಾಗ
ಆ ತಾಯಿ ಆನಂದದಿ ಆಡುವ
ಪ್ರೇಮದ ಬೈಗುಳ ಆಲಿಸಲು
ಮತ್ತೊಮ್ಮೆ ನಾ ಮಗುವಾಗಬಾರದಿತ್ತೇ..?
ತೊಟ್ಟಿಲಲ್ಲಿ ಮರಿ ಚಂದ್ರಮನಂತೆ
ತುಟಿ ಅರಳಿಸಿ ನಗುವಾಗ
ಪುಟ್ಟ ಕೈಗಳ ಹಿಡಿದು ಅಲುಗಿಸಿ
ನಗುವ ಚಂದ್ರಮುಖಿ ಅಮ್ಮನ ನೋಡಲು
ಮತ್ತೊಮ್ಮೆ ನಾ ಮಗುವಾಗಬಾರದಿತ್ತೇ..?
ಅಂಬೆಗಾಲಿಡುತಾ ಅಮ್ಮಾ.ss ಎನುತಾ
ಒಮ್ಮೊಮ್ಮೆ ಎಳೆ ಪಾದದಿ ನಿಲ್ಲುತಾ
ಸುಮ್ಮ ಸುಮ್ಮನೇ ಬಿದ್ದು ಅಳುವಾಗ
ಅಮ್ಮನ ತೋಳಲಿ ಸೇರಿ ಹರ್ಷಿಸಲು
ಮತ್ತೊಮ್ಮೆ ನಾ ಮಗುವಾಗಬಾರದಿತ್ತೇ..?
ಮನೆ ಮುಂದೆ ಹಾದು ಹೋಗುವ
ಓಣಿಯ ಮಂದಿ ಇಣಿಕಿ ನೋಡಿ
ಜಾಣಮರೀ.ss ಪುಟ್ಟಾ.ss ಎಂದು
ಗೋಣಾಡಿಸಿ ಮುದ್ದಾಡೋದ ಸವಿಯಲು
ಮತ್ತೊಮ್ಮೆ ನಾ ಮಗುವಾಗಬಾರದಿತ್ತೇ..?
ಓರಿಗೆ ಹುಡುಗರ ಜೊತೆ ಆಟವಾಡಿ
ಜಾರಿ ಬಿದ್ದು ಗಾಯ ಮಾಡಿಕೊಂಡು
ಚೀರುತ್ತಾ ಮನೆಗೆ ಬಂದಾಗ ಅಮ್ಮ
ತೋರುವಾ ಪ್ರೀತಿಯ ಅಪ್ಪುಗೆಗೆ
ಮತ್ತೊಮ್ಮೆ ನಾ ಮಗುವಾಗಬಾರದಿತ್ತೇ..?
- ಜಗದೀಶ ತಿಗರಿ. ಹೊಳಗುಂದಿ, ಹೂವಿನ ಹಡಗಲಿ ತಾ. ವಿಜಯ ನಗರ ಜಿ. 8970273749.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ