ಮನುವಿನ ಶಾಸನದಿಂದ ವೈದಿಕಶಾಹಿಗಳ ಉಪಟಳ ಹೆಚ್ಚಾಗಿ ಜಾತಿ-ಮತ, ಬೇಧ-ಭಾವ, ಡಾಂಭಿಕತೆ, ಮೂಢನಂಬಿಕೆ, ಅಜ್ಞಾನ, ಅಂದಕಾರ ತುಂಬಿ ಕೊಳೆತು ನಾರುತ್ತಿವ ಈ ಸಮಯದಲ್ಲಿನ ತಾರತಮ್ಯ ಮತ್ತು ಜಾತಿಯ ಹೆಸರಿನಲ್ಲಿ ಬಡವರ ಮೇಲೆ ನಡೆಯುತ್ತಿರುವ ಅನ್ಯಾಯ ಕಂಡು "ಕುಲ ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ ಬಲ್ಲಿರಾ..?" ಎಂದು ಸವಾಲನ್ನು ಎಸೆಯುವುದರ ಮೂಲಕ ಸಾಂಪ್ರದಾಯಿಕ ಜಾತಿಯನ್ನು ಬೋಧಿಸುವ ವೈದಿಕಧರ್ಮ ಮತ್ತು ವೈದಿಕಶಾಹಿಗಳ ದೌರ್ಜನ್ಯ ದಬ್ಬಾಳಿಕೆಯನ್ನು ಖಾರವಾಗಿ ಟೀಕಿಸಿದ್ದವರು ದಾಸರಲ್ಲಿ ಶ್ರೇಷ್ಠ ಶ್ರೀ ಕನಕದಾಸರು.
ಇವರು ಕ್ರಿ.ಶ.1508 ರಲ್ಲಿ ಹಾವೇರಿ ಜಿಲ್ಲೆ,ಸಿಗ್ಗಾವಿ ತಾಲೂಕಿನ ಬಾಡಯಂಬ ಗ್ರಾಮದಲ್ಲಿ ಕುರುಬ ಗೌಡ ಜನಾಂಗಕ್ಕೆ ಸೇರಿದ ಬಚ್ಚಮ್ಮ ಮತ್ತು ಬೀರಪ್ಪನಾಯಕ ಎಂಬ ದಂಪತಿಗಳ ಮಗನಾಗಿ ಜನಿಸಿದರು. ಇವರ ಮೂಲ ಹೆಸರು ತಿಮ್ಮಪ್ಪನಾಯಕ ಎಂದಾಗಿತ್ತು. ಕರ್ನಾಟಕ ಸಂಗೀತಕ್ಕೆ ಅಪಾರ ಕೊಡುಗೆಯನ್ನು ನೀಡಿದ ಕನಕದಾಸರು ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೇ ಶೂದ್ರದಾಸರು.
ಒಮ್ಮೆ ಕನಕದಾಸರು ಉಡುಪಿಯ ಶ್ರೀಕೃಷ್ಣನ ದೇವಸ್ಥಾನಕ್ಕೆ ಕೃಷ್ಣನ ದರ್ಶನ ಪಡೆಯಲು ಹೋದಾಗ, ಅವರು ಶೂದ್ರರರಾದ ಒಂದೇ ಒಂದು ಕಾರಣಕ್ಕೆ ಅಲ್ಲಿನ ಪುರೋಹಿತ ಶಾಹಿ ಮತ್ತು ವೈದಿಕ ಸಂಪ್ರದಾಯಸ್ಥ ಬ್ರಾಹ್ಮಣರು ಅವರನ್ನು ಜಾತಿಯ ಹೆಸರಿನಲ್ಲಿ ಅವಮಾನಗೊಳಿಸಿ ದೇವಸ್ಥಾನದಿಂದ ಹೊರ ತಳಿದರು. ಇದು ಇತಿಹಾಸದ ಪುಟಗಳಲ್ಲಿ ಇಂದಿಗೂ ಕಪ್ಪು ಚುಕ್ಕಿಯಾಗಿ ಉಳಿದಿದೆ.
ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳೆ ಕಳೆದು ಹೋದವು. ಅದರು ಇನ್ನೂ ಈ ಜಾತಿ ವ್ಯವಸ್ಥೆಯ ಅನಿಷ್ಟ ಪದ್ಧತಿ ಕಳೆದಿಲ್ಲ. ಕೆಲವೊಂದು ಕಡೆ ಸುಧಾರಣೆ ಕಂಡಿದೆ ಸುಳ್ಳಲ್ಲ. ಅದರೆ ಜಾತಿ ವ್ಯವಸ್ಥೆಯ ಹೆಸರಿನಲ್ಲಿ ಮುಗ್ಧ ಬಡಜನರ ಮೇಲೆ ನಿರಂತರ ಅನ್ಯಾಯ ಅತ್ಯಾಚಾರ ನಡೆಯುತ್ತಿರುವುದು ಪ್ರಸ್ತುತ ಸಮಾಜದಲ್ಲಿ ಕಾಣುತ್ತಿದೆವೆ. ದಿನ ಬೆಳಗಾದರೆ ಸಾಕು ಟಿವಿಗಳಲ್ಲಿ ಪತ್ರಿಕೆಗಳಲ್ಲಿ ನಿರಂತರ ಸುದ್ದಿಯಾಗುತ್ತಿವೆ.
ಇತ್ತೀಚಿಗೆ ಸೆಪ್ಟೆಂಬರ್ 25ರಂದು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಮಿಯಾಪುರ ಗ್ರಾಮದಲ್ಲಿ ದಲಿತ ಬಾಲಕ ದೇವಾಲಯ ಪ್ರವೇಶಿಸಿದ ಎನ್ನುವ ಕಾರಣಕ್ಕೆ ಗ್ರಾಮಸ್ಥರು ಸಾರ್ವಜನಿಕವಾಗಿ ಶಿಕ್ಷೆ ವಿಧಿಸಿ ದಂಡ ಹಾಕಿರುವುದು. ಗುಂಡ್ಲುಪೇಟೆಯಲ್ಲಿ ದಲಿತ ವ್ಯಕ್ತಿಯೊಬ್ಬ ದೇವಾಲಯ ಪ್ರವೇಶಿಸಿದ್ದ ಎನ್ನುವ ಒಂದೇ ಕಾರಣಕ್ಕೆ ವ್ಯಕ್ತಿಯನ್ನು ಬೆತ್ತಲೆಗೊಳಿಸಿ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ್ದಷ್ಟೇ ಅಲ್ಲದೆ ಬೆತ್ತಲೆಯಾಗಿ ಮೆರವಣಿಗೆಯನ್ನೂ ಕೂಡ ಮಾಡಿದ್ದರು.
ಕ್ರಿ.ಶ 2018 ಮೇ 18ರಂದು ನಮ್ಮ ದೇಶದ ಪ್ರಪ್ರಥಮ ಪ್ರಜೆಯಾದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪುರಿ ಜಗನ್ನಾಥ್ ಮಂದಿರಕ್ಕೆ ಹೋದಾಗ ಅವರು ದಲಿತರೇನ್ನುವ ಕಾರಣಕ್ಕೆ ಪುರಿ ಜಗನ್ನಾಥ್ ಮಂದಿರದಲ್ಲಿ ಪ್ರವೇಶ ನಿರಾಕರಿಸಲಾಯಿತ್ತು.
ಯಾವ ಜನರು ಅಂದು ಕನಕದಾಸರಿಗೆ ಶೂದ್ರನೆಂದು ಉಡುಪಿಯ ದೇವಾಸ್ಥಾನದ ಒಳಗೆ ಬಿಡಲಿಲ್ಲವೊ ಅದೇ ಜನರು ಸ್ವಾತಂತ್ರ ಭಾರತದ ಪ್ರಥಮ ಪ್ರಜೆ ರಾಷ್ಟ್ರಪತಿ ಅವರನ್ನು ಪುರಿ ಜಗನ್ನಾಥ್ ಮಂದಿರದಲ್ಲಿ ಪ್ರವೇಶಿಸದಂತೆ ತಡೆದರು. ಈ ವಿಷಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿ ವಿಶ್ವ ಸಂಸ್ಥೆಯ ಮುಂದೆ ತಲೆ ತಗ್ಗಿಸುವಹಾಗೆ ಮಾಡಿತು.
ಕ್ರಿ.ಪೂ.185 ರಿಂದ ಇಲ್ಲಿಯವರೆಗೆ ಮನು ಧರ್ಮಶಾಸ್ತ್ರದ ಶಾಸನವನ್ನು ಮನುವಾದಿಗಳು ಒಂದಲ್ಲ ಒಂದು ರೀತಿಯಲ್ಲಿ ಕಾಯ್ದು ಕೊಂಡು ಬಂದಿದ್ದಾರೆ. ಇಂತಹ ಮನುವಾದವನ್ನು ಮಟ್ಟಹಾಕಲು ಮತ್ತೊಬ್ಬ ಕನಕದಾಸರು ಹುಟ್ಟಿ ಬರಬೇಕಾಗಿದೆ. ಇಂದಿನ ದಿನಗಳಲ್ಲಿ ಯುವಕರು ಅವರ ತತ್ವ ಸಿದ್ಧಾಂತ ಮೈಗೂಡಿಸಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕ್ಕಾಗಿದೆ. ಕುಲ ಮತ ಧರ್ಮಗಳು ತೊರೆದು ಹಿಂದೂ, ಮುಸ್ಲಿಂ, ಕ್ರೈಸ್ತ, ಬೌದ್ಧ, ಜೈನ, ಸಿಖ್, ಸಾಯಿ, ಇಸಾಯಿ ಇತ್ಯಾದಿ ಹಲವಾರು ಧರ್ಮಿಯರೆಲ್ಲ ಒಂದುಗೂಡಿ ಸಹೋದರ ಸಹೋದರಿಯರಂತೆ ಐಕ್ಯತೆ ಭಾವವನ್ನು ಬೆಳೆಸಿಕೊಂಡು ಬದುಕಬೇಕಾಗಿದೆ. ಮತ ಎನ್ನುವ ಸಹವಾಸವನ್ನು ತೊರೆದು ಎಲ್ಲರು ವಿಶ್ವ ಮಾನವರಾಗಿ ಪ್ರಬುದ್ಧ ನಾಡನ್ನು ಕಟ್ಟಬೇಕ್ಕಾಗಿದೆ.
- ಅಶ್ವಜೀತ ದಂಡಿನ , ಬೀದರ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ