ಭಾನುವಾರ, ಡಿಸೆಂಬರ್ 19, 2021

'ನಿದ್ರೆ'ಯಂಬ ಬಂಗಾರ (ಲೇಖನ) - ಶ್ರೀಮತಿ ಸುಮಂಗಲಾ ಕೃಷ್ಣ ಕೊಪ್ಪರದ.

ದಿನದಿಂದ ದಿನಕ್ಕೆ ಬಂಗಾರದ ಬೆಲೆ ಗಗನಕ್ಕೇರುತ್ತಿದೆ. ಅದಕ್ಕೆ ಎಲ್ಲರ ಮನೆಯಲಿ  ಯಜಮಾನರು ಬಂಗಾರ ಕೊಡಿಸಿ ಎಂದು ಕೇಳಿದ ಕೂಡಲೇ.... ಅದನ್ನು ಮರೆಸಲು  ಪ್ರೀತಿಯ ಮಡದಿಗೆ ಚಿನ್ನ, ಬಂಗಾರ, ಎನ್ನುತ್ತಲೇ ಮಾತಿನಲ್ಲಿ ಬಂಗಾರ ಕೊಡಿಸುತ್ತಿದ್ದಾರೆ. ಕಾರಣ ಪ್ರತಿಯೊಬ್ಬರೂ ಇಷ್ಟಪಡುವ ಲೋಹ ಬಂಗಾರ .ಆದರೆ ಅದರ ಬೆಲೆ ಗಗನಕ್ಕೇರಿರುವುದರಿಂದ ಕೊಡಿಸುವ ಬದಲು  ಆ ಮಾತಿನಲ್ಲೇ ಬಂಗಾರ ಕೊಡಿಸುತ್ತಿದ್ದಾರೆ.ಬಂಗಾರದ ಬಳಕೆಯ ಪ್ರಮಾಣ ಹೆಚ್ಚಾಗಿದೆ. ಆದರೆ ಉತ್ಪಾದನೆ ಕಡಿಮೆಯಾದಾಗ ಸಹಜವಾಗಿ ಯಾವುದೇ ವಸ್ತುವಿನ ಬೆಲೆ ಗಗನಕ್ಕೇರುತ್ತದೆ ಅಲ್ಲವೇ..? ಅದೇ ರೀತಿ ಬಂಗಾರದ ಬೆಲೆಯೂ ಗಗನಕ್ಕೇರಿದೆ .ಅಯ್ಯೋ ....ನಿದ್ರೆಯೆಂಬ ಬಂಗಾರ ಅಂತ ಶೀರ್ಷಿಕೆ ಬರೆದು, ಬಂಗಾರದ ಬಗ್ಗೆ ಏಕೆ ಬರೆಯುತ್ತಿರುವೆ ಅನ್ನಿಸುತ್ತಿದೆಯೇ.... ಅದಕ್ಕೆ ಕಾರಣಾನೂ ಇದೆ .ಬಂಗಾರದ ಬೆಲೆ ಹೇಗೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆಯೋ ಹಾಗೆಯೇ ನಿದ್ರೆಯೆಂಬ ಆರೋಗ್ಯದ ಅತಿ ಅಮೂಲ್ಯವಾದ 'ಸ್ಥಿತಿ'ಯೂ ಸಹ ಇಂದು ಪ್ರತಿಯೊಬ್ಬರ ಜೀವನದಲ್ಲಿ ದಿನದಿಂದ ದಿನಕ್ಕೆ ಗಗನಕ್ಕೆ ಏರುತ್ತಿದೆ. ಏಕೆಂದರೆ ಧಾವಂತದ ಬದುಕಿನಲ್ಲಿ ಯಾಂತ್ರಿಕ ಜೀವನ ಸಾಗಿಸುತ್ತಿರುವ ನಮಗೆ ಆರೋಗ್ಯಯುತ ಜೀವನಕ್ಕೆ ನಿದ್ರೆಯೆಂಬುದು ಎಷ್ಟು ಅವಶ್ಯಕ ಎನ್ನುವುದನ್ನೇ ಮರೆಯುತ್ತಿದ್ದೇವೆ.ನಮ್ಮ ದೇಹ  ಒಂದು ಯಂತ್ರವಿದ್ದಂತೆ ದಿನಪೂರ್ತಿಕೆಲಸಮಾಡುವ ನಮ್ಮ ಕಣ್ಣುಗಳು, ಕಾಲುಗಳು, ಕೈಗಳು, ಕಿವಿಗಳು, ನಾಲಿಗೆ, ಮೆದುಳು, ಹೃದಯದ ಬಡಿತ, ತೀವ್ರರಕ್ತ ಸಂಚಾರ, ಉಸಿರಾಡುವ ಶ್ವಾಸಕೋಶ ಹೀಗೆ ಇತರ ಪ್ರಮುಖ ದೇಹದ ಭಾಗಗಳಿಗೆ ವಿಶ್ರಾಂತಿ ಬಹುಮುಖ್ಯವಾಗಿ ಅವಶ್ಯಕತೆ  ಇರುತ್ತವೆ. ಅವುಗಳಿಗೆ ವಿಶ್ರಾಂತಿ ನೀಡದಿದ್ದರೆ ಯಂತ್ರದ ಭಾಗಗಳು ಸವಕಳಿಯಾಗದಂತೆ ದೇಹದ ಅಂಗಾಂಗಗಳಲ್ಲಿಯೂ ನ್ಯೂನ್ಯತೆ ಕಾಣುವ ಸಂದರ್ಭಗಳೇ ಹೆಚ್ಚು. ಆದ್ದರಿಂದ ದಣಿದ ದೇಹಕ್ಕೆ ವಿಶ್ರಾಂತಿಯು ನಿದ್ರೆಯೆಂಬ ಅಮೂಲ್ಯ ಕ್ಷಣವನ್ನು ನೆಮ್ಮದಿಯಿಂದ ಅನುಭವಿಸಿದಾಗ ಮಾತ್ರ ದೊರೆಯುವುದು .
                   ಮನುಷ್ಯನ ನಿಜವಾದ ನೆಮ್ಮದಿ ಇರುವುದು ಅವನ ಸುಖವಾದ ನಿದ್ರೆಯಲ್ಲಿ. ಅದಕ್ಕಾಗಿ ನಿದ್ರೆಯನ್ನು ಬಂಗಾರವೆಂದರೆ ತಪ್ಪಿಲ್ಲ. ಸಂತೃಪ್ತ ನಿದ್ರೆಯಿಂದ ಮಾತ್ರ ಆರೋಗ್ಯದ ಸ್ಥಿರತೆ ಸಾಧ್ಯ. ಸಾಮಾನ್ಯವಾಗಿ ನಿದ್ರೆಯು ನಮ್ಮಿಂದ ದೂರ ಸರಿಯುತ್ತಿರಲು ಕಾರಣ ಹುಡುಕುತ್ತಾ  ಒಮ್ಮೆ ಆಲೋಚಿಸಿದಾಗ, ನಿದ್ರಾಹೀನತೆಗೆ ಕಾರಣವಾದ ಚಿಂತೆ, ಭಯ, ಕೋಪ, ದುಃಖ, ಅವಮಾನದ ನೋವು, ನಾಳೆ ಏನಾಗುವುದೋ ಎಂಬ ಆತಂಕ, ಕೆಟ್ಟ ಆಲೋಚನೆಗಳು ,ದೈಹಿಕ ಹಾಗೂ ಮಾನಸಿಕ ಕಾಯಿಲೆಗಳು, ಕೆಲಸದ ಒತ್ತಡ, ಪ್ರೇಮದ ವ್ಯಾಮೋಹ ,ದುಶ್ಚಟಗಳು, ಮಾನಸಿಕ ತೊಳಲಾಟ ,ನಿದ್ರಿಸುವ ಸಮಯವನ್ನು ಬದಲಿಸುವುದು, ಅತಿಯಾಗಿ ದೂರದರ್ಶನ ವೀಕ್ಷಣೆ, ನಿಯಮಿತವಾಗಿ ಆಹಾರ ಸೇವಿಸದಿರುವುದು, ಅತಿಯಾದ ಮೊಬೈಲ್ ಬಳಕೆ, ಹಣಗಳಿಕೆಯ ಹಂಬಲ ಇತ್ಯಾದಿಯಾಗಿ ನೂರಾರು ಕಾರಣಗಳನ್ನು ಕೊಡಬಹುದು .
           ಹಳ್ಳಿಗಳಲ್ಲಿ ಜನರು ಆಡುಮಾತಿನಲ್ಲಿ  ಕಷ್ಟ ಸುಖ ಅನ್ನೋದು ಹಗಲು ರಾತ್ರಿಗಳಿದ್ದಂತೆ, ಒಂದೇ ನಾಣ್ಯದ ಎರಡು ಮುಖಗಳು. ಹೀಗಾಗಿ ಮಾನವ ಸಹಜ ಜೀವನದಲ್ಲಿ ಬರುವ ಚಿಕ್ಕ ಪುಟ್ಟ ತೊಂದರೆಗಳಿಗೆ ಆತಂಕಕ್ಕೆ ಒಳಗಾಗಿ ಚಿಂತೆ ಮಾಡಿ ಆರೋಗ್ಯ ಹಾಳು ಮಾಡಿಕೊಳ್ಳಬೇಡಿ ಎಂದು ಹೇಳುತ್ತಾರೆ.ಕಷ್ಟ  ಕಾಯಿಲೆಗಳು ಮನುಷ್ಯನಿಗೆ ಬರದೆ ಮರಕ್ಕೆ ಬರುತ್ತವೆಯೇ? ......ಎಂದು ಧೈರ್ಯದಿಂದ ಮಾತನಾಡುವ ಅವರೇ ನಮಗೆ ಸ್ಫೂರ್ತಿ .ಇದು ವಾಸ್ತವವಾಗಿ ಕಟು ಸತ್ಯವೂ ಸಹ. ಚಿಕ್ಕ ವಿಷಯವನ್ನೇ ದೊಡ್ಡದಾಗಿ ಮಾಡಿಕೊಂಡು ಮನಸ್ಸನ್ನು ಗೊಂದಲದ ಗೂಡಾಗಿಸಿ ಅದರ ಬಗ್ಗೆನೇ ಚಿಂತೆ ಮಾಡುತ್ತ ನಿದ್ರೆಗೆಡುವುದು ಸರಿಯಲ್ಲ .ಆದರೆ ಇಂದು ಅತಿಯಾಗಿ ನಿದ್ರಾಹೀನತೆಗೆ ಒಳಗಾಗುವವರು ವಯಸ್ಕರು, ಅವರ ಚಿಂತೆಯಲ್ಲೇ ಅವರ ಪೋಷಕರು .ಇಂದು ಆಧುನಿಕ ಜಗತ್ತು ಮೊಬೈಲನ್ನೇ ಶಿಕ್ಷಣ ಕೇಂದ್ರವಾಗಿರಿಸಿಕೊಂಡಿದೆ. ಹೀಗಾಗಿ ಪ್ರತಿಯೊಂದು ವಿಷಯವೂ ಗೂಗಲ್ ಸಹಾಯ ಕ್ಕಾಗಿ ವಿದ್ಯಾರ್ಥಿಗಳು ಮೊಬೈಲ್ ಬಳಸುತ್ತಿರುವುದು ಸಹಜ ಹಾಗೂ ಅನಿವಾರ್ಯ. ಕೊರೋನಾ ಓಮಿಕ್ರೋಮ್ ನಂತಹ ಸಾಂಕ್ರಾಮಿಕ ಕಾಯಿಲೆಗಳು ತಮ್ಮ ನಾಲಿಗೆಯನ್ನು ಜಗವೆಲೣಾ ವ್ಯಾಪಿಸುತ್ತಿರುವಾಗ, ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಲಾಕಡೌನ ಮತ್ತು ಆನ್ಲೈನ್ ಪಾಠಗಳು ಕೂಡ ಅನಿವಾರ್ಯ .ಈ ರೀತಿ ನಿರಂತರವಾಗಿ ವಿದ್ಯಾರ್ಥಿಗಳು ಆನ್ಲೈನ್ ಪಾಠ ವೀಕ್ಷಣೆ, ಆಲಿಸುವಿಕೆಯಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿ ನಿದ್ರಾಹೀನತೆ ಉಂಟಾಗುವುದು . ಅದರ ಜೊತೆಗೆ ಇಂದಿನ ಯುವಪೀಳಿಗೆ ಅನವಶ್ಯಕ ಕಾರಣಗಳಿಗಾಗಿ ಮೊಬೈಲನ್ನ ಬಳಸದೇ ಇರುವುದು ವಿಪರ್ಯಾಸ. ಬೆಳಿಗ್ಗೆ ಎದ್ದೊಡನೆ
                      ಕರಾಗ್ರೇ ವಸತೇ ಲಕ್ಷ್ಮೀ 
                      ಕರಮಧ್ಯೆ ಸರಸ್ವತಿ 
                      ಕರಮೂಲೇ ಸ್ಥಿತೇ ಗೌರಿ 
                      ಪ್ರಭಾತೆ ಕರದರ್ಶನಂ ... ಎನ್ನುವ ಶ್ಲೋಕವನ್ನು ಪಠಣ ಮಾಡುತ್ತಾ ....ನಮ್ಮ ಕೈಗಳನ್ನು ನೋಡಿಕೊಂಡು ಕಣ್ಣುಜ್ಜಿಕೊಂಡು ಹೇಳುತ್ತಿದ್ದ ಕಾಲವೆಲ್ಲಿ, ಇಂದು ಎದ್ದೊಡನೆ ಮೊಬೈಲ್ ಉಜ್ಜುತ್ತಾ ಯಾರು ಗುಡ್ ಮಾರ್ನಿಂಗ್ ಹಾಕಿದ್ದಾರೆ, ಯಾರು ಸ್ಟೇಟಸ್ ಹಾಕಿದ್ದಾರೆ, ಫೇಸ್ಬುಕ್ ನಲ್ಲಿ ಯಾರು  ನಮ್ಮ ಕಮೆಂಟ್ಸ್ ನೋಡಿದಾರೆ ,ನಾವು ಹಾಕಿದ ಸ್ಟೇಟಸ್ ನ್ನು ಎಷ್ಟು ಜನ ವೀಕ್ಷಣೆ ಮಾಡಿದ್ದಾರೆ, ಎನ್ನುವುದರಲ್ಲಿ ಹೆಚ್ಚು ಸಮಯವನ್ನು ಕಳೆಯುತ್ತಿದ್ದೇವೆ .ಅಲ್ಲದೆ ರಾಷ್ಟ್ರೀಯ ಹಬ್ಬಗಳಾದ ಸ್ವಾತಂತ್ರ್ಯ ಹೋರಾಟ, ಮಹಾತ್ಮಾಗಾಂಧಿ ಜಯಂತಿ,ಗಣರಾಜ್ಯೋತ್ಸವ ನಾಡಹಬ್ಬವಾದ ಕನ್ನಡರಾಜ್ಯೋತ್ಸವ  ಇತ್ಯಾದಿ ಸಂದರ್ಭಗಳಲ್ಲಿ ನಾವು ಹೆಚ್ಚಾಗಿ ನಿದ್ದೆಗೆಟ್ಟಾದರೂ ಸರಿಯೇ..... ನಮ್ಮ ಭಾವಚಿತ್ರಗಳಿಗೆ ವಿಭಿನ್ನ ರೀತಿಯ ಮೆರಗನ್ನೂ ಕೊಟ್ಟು ಸ್ಟೇಟಸ್ ಹಾಕಿ ಸಂಭ್ರಮ ಪಡುತ್ತೇವೆ.ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನವನ್ನೇ ಪಣವಾಗಿಟ್ಟು ಹಗಲಿರಳು  ದೇಶವಾಸಿಗಳಿಗೋಸ್ಕರ  ನಿದ್ದೆಗೆಟ್ಟು ಸ್ವಾತಂತ್ರ್ಯ  ದೊರಕಿಸಿಕೊಟ್ಟ ಸ್ವಾತಂತ್ರಯೋಧರನ್ನು ನಮ್ಮ ಮುಂದಿನ ಪೀಳಿಗೆಗೆ ಪರಿಚಯಿಸುವದರ ಬದಲಾಗಿ ನಮ್ಮ ಪರಿಚಯವನ್ನು ಮಾಡಿಕೊಳ್ಳೋದೇ ಹೆಚ್ಚಾಗಿರುತ್ತೆ ಅಂಥ ಕೆಲವು ಸಲ ಅನ್ನಿಸತ್ತೆ. ಆದರೆ ಅದು ಎಷ್ಟರ ಮಟ್ಟಿಗೆ ಸರಿಯೋ ಗೊತ್ತಿಲ್ಲ .ರಾಷ್ಟ್ರೀಯ ಹಬ್ಬಗಳ ಸಂಭ್ರಮಾಚರಣೆಗೋಸ್ಕರ ನಾವು ಈ ರೀತಿ ಮಾಡ್ತೀದಿವೋ ತಿಳಿಯದು.  ಇದರಿಂದಾಗಿ ನಮ್ಮ ಸಂಸ್ಕೃತಿಯಲ್ಲಾದ ಬದಲಾವಣೆ ಸಹಿಸದೆ ಮನೆಯಲ್ಲಿ ಅಜ್ಜ,ಅಜ್ಜಿಯರು ಕಾಲ ಕೆಟ್ಟೋಯ್ತು ....ಈಗಿನ ಮಕ್ಕಳು ನಮ್ ಮಾತೇ ಕೇಳೋಲ್ಲ, ಎಂದು ಗೊಣಗುತ್ತಾ ಓಡಾಡುತ್ತಿರುತ್ತಾರೆ.ಸಾಲ್ಯಾಗ ಈ ಮಕ್ಕಳು ಏನು ಕಲಿತಾವು ಏನಿಲ್ಲೋ,.....  ಒಳ್ಳೆಯದು, ಕೆಟ್ಟದ್ದು ತಿಳಿಸುತ್ತಾರೋ ಇಲ್ಲೋ..ಎಂದು ಶಾಲೆ,  ಶಾಲೆ ಮಾಸ್ತರನು ಬೈತಾ ಓಡಾಡೋದು ತಪ್ಪಿದ್ದಲ್ಲ .ಎಷ್ಟು ಹೊತ್ತು ನಿದ್ದೆ ಮಾಡಿದ್ರೆ ಆರೋಗ್ಯವಾಗಿರ್ತಾರೆ ಅನ್ನುವ ವಿಷಯವಾದರೂ ಈ ಮಕ್ಕಳಿಗೆ ತಿಳಿಸುತ್ತಾರೋ ಇಲ್ಲೋ ಎಂದು ಗೊಣಗಾಡುತ್ತಾ ಗೊಣಗಾಡುತ್ತಾ ಸಹಜವಾಗಿ ಹಿರಿಯರು ತಾವು ಅನುಭವಿಸಿದ ಅನುಭವವನ್ನು ಮಕ್ಕಳಿಗೆ ಬಿತ್ತರಿಸಲು ಪ್ರಯತ್ನಿಸುತ್ತಾರೆ .ಆದರೆ ವಾಸ್ತವವಾಗಿ ಶಾಲೆಯಲ್ಲಿ ಉತ್ತಮ ಸಂಸ್ಕೃತಿಯನ್ನೇ ಅವರು ಪಡೆಯುತ್ತಾರೆ .ಸಹವಾಸದಿಂದ ಮಕ್ಕಳು ತಮ್ಮ ಅಮೂಲ್ಯವಾದ ಸಮಯವನ್ನು,ಮಾಧ್ಯಮವನ್ನು ಬಳಸುವ ರೀತಿ ಬೇರೆಯಾಗಬೇಕು ಅಷ್ಟೆ .ಇಂದು ಶೈಕ್ಷಣಿಕ ಕ್ಷೇತ್ರದಲ್ಲಿ ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ನಿದ್ರೆಯೆಂಬ ಅಮೂಲ್ಯ ಸಂಪತ್ತು ಎಷ್ಟು ಅವಶ್ಯಕ ಎಂಬುದರ ಬಗ್ಗೆ ಅರಿವು ಮೂಡಿಸಬೇಕು.ನೀಡಿ ಪ್ರೌಢಾವಸ್ಥೆಯ ಈ ಹಂತದಲ್ಲೇ ಮಕ್ಕಳಿಗೆ ಹೆಚ್ಚು ತಿಳಿಹೇಳಿದರೆ ವಯಸ್ಕರಾದಾಗ ಅವರಿಗೆ ಅತಿಯಾದ ಮೊಬೈಲ್ ಬಳಕೆಯಿಂದ ಆಗುವ ದುಷ್ಪರಿಣಾಮಗಳ ಅರಿವು ಮನನವಾಗಿ ಅದರ ಬಳಕೆಯಲ್ಲಿ ಎಚ್ಚರಿಕೆ ವಹಿಸಬಹುದು. ನೈತಿಕ ಮೌಲ್ಯಗಳ ಕಾರ್ಯಾಗಾರವಾದ ಶಾಲೆಗೆ ಮಕ್ಕಳನ್ನು ಉತ್ತಮ ಮಾರ್ಗದಲ್ಲಿ ನಡೆಸುವ ಅದ್ಭುತ ಶಕ್ತಿಯಿದೆ ಇತ್ತೀಚೆಗೆ ವಾಟ್ಸ್ ಆ್ಯಪ್ ನಲ್ಲಿ ಹರಿದಾಡಿದ ಒಂದು ವೀಡಿಯೊದಲ್ಲಿ ಸರ್ಕಾರಿ ಶಾಲೆಯೊಂದರ ವಿದ್ಯಾರ್ಥಿಗಳಿಗೆ ,ವರ್ಗ ಕೋಣೆಯನ್ನೇ ಬಸ್ಸಿನ ಮಾದರಿಯನ್ನಾಗಿ ಮಾಡಿ, ವಿದ್ಯಾರ್ಥಿಗಳಿಂದ ಮೂಕಾಭಿನಯದ ಪಾತ್ರವನ್ನು ಮಾಡಿಸಿದ್ದರು. ಒಬ್ಬ ವಿದ್ಯಾರ್ಥಿ ಡ್ರೈವರಿನ ಅಥವಾ ಚಾಲಕನ ಸ್ಥಾನದಲ್ಲಿ, ಮತ್ತೊಬ್ಬ ಕಂಡಕ್ಟರ್ ಅಥವಾ ನಿರ್ವಾಹಕನ ಸ್ಥಾನ ,ಉಳಿದ ವಿದ್ಯಾರ್ಥಿಗಳು ಪ್ರಯಾಣಿಕರ ಪಾತ್ರದಲ್ಲಿ ಕುಳಿತಿದ್ದರು .ಪ್ರತಿ ಊರು ಬಂದಾಗಲೂ ಬಸ್ ನಿಲ್ಲುವಂತಹ ಒಂದು ಧ್ವನಿಯ ಸಂಕೇತ .ಅಲ್ಲಿ ಅಂಗವಿಕಲರು, ಗರ್ಭಿಣಿಯರು ,ವಯೋವೃದ್ಧರು, ಮಹಿಳೆಯರು ಬಸ್ ಒಳಗೆ ಪ್ರವೇಶಿಸುವ ದೃಶ್ಯ. ಅವರು ಬಂದೊಡನೆ ಆರೋಗ್ಯವಂತ ವ್ಯಕ್ತಿ ತಾನು ನಿಂತುಕೊಂಡು ತನ್ನ ಸೀಟನ್ನು ಅವರಿಗೆ ಬಿಟ್ಟುಕೊಡುವಂತಹ ದೃಶ್ಯಾಧಾರಿತ ಮೂಕಾಭಿನಯದ ಪಾತ್ರಗಳು ಎಂಥವರಿಗೂ ಮನಕರಗಿಸುವಂತಿತ್ತು. ಇಂತಹ ಮೌಲ್ಯಗಳಿಂದ ಮಕ್ಕಳು ಉತ್ತಮವಾದದ್ದನ್ನು ಕಲಿತು ಭವಿಷ್ಯದಲ್ಲಿ ಉನ್ನತ ವಿಚಾರಗಳತ್ತ ತಮ್ಮ ಮನಸ್ಸನ್ನು ಕೇಂದ್ರೀಕರಿಸಲು ಸಹಾಯವಾಗುತ್ತದೆ .ನೈತಿಕ ಪಾಠ ಬೋಧನೆಯನ್ನು ವಿಶಿಷ್ಟವಾದ ಅಭಿನಯ ಕಲಿಕೆಯ ಮೂಲಕ ಕಲಿಸಿದ ಸರ್ಕಾರಿ ಶಾಲೆಯ ಆ ಗುರುವೃಂದಕೆ ನನ್ನ ನಮನಗಳು. ಯಾಕಂದ್ರೆ ಎಷ್ಟೋ ಸಂದರ್ಭಗಳಲ್ಲಿ ದಿನ ನಿತ್ಯದ ಪ್ರಯಾಣದಲ್ಲಿ ಗರ್ಭಿಣಿಯರು, ವೃದ್ಧರು,ಅಂಗವಿಕಲರು  ನಿಂತುಕೊಂಡೇ ಪ್ರಯಾಣ ಬೆಳೆಸುತ್ತಿದ್ದರೂ, ಕನಿಕರವಿಲ್ಲದ ಯುವಪೀಳಿಗೆಯನ್ನು ನಿಸ್ಸಾಹಯಕರಾಗಿ ನೋಡುತ್ತಿದ್ದಂತಹ ದೃಶ್ಯ ಸರ್ವೇಸಾಮಾನ್ಯ. ಅಂಥವರಿಗೆ ಇದೊಂದು ಪಾಠ ಮನಮುಟ್ಟುವಂತಿತ್ತು. ಇಂತಹ ಮೌಲ್ಯಗಳಿಂದ ಕೂಡಿದ ನೈತಿಕ ಪಾಠದಿಂದ ವಿದ್ಯಾರ್ಥಿಗಳಲ್ಲಿ ಉತ್ತಮ ವರ್ತನೆಗಳು ರೂಢಿಯಾಗುತ್ತವೆ. 
          ಇತ್ತೀಚೆಗೆ ಯುವಪೀಳಿಗೆ ,ವಯಸ್ಕರು, ತಮ್ಮ ಅಮೂಲ್ಯವಾದ ಆರೋಗ್ಯವನ್ನು ನಿದ್ರಾಹೀನತೆಯಿಂದ ಹಾಳು ಮಾಡಿಕೊಳ್ಳುತ್ತಿದ್ದಾರೆ.ಅದರಲ್ಲೂ  ಪ್ರೇಮದ ಬಲೆಗೆ ಬಿದ್ದಂತವರ ಮಾನಸಿಕ ತೊಳಲಾಟ ಎಷ್ಟು ಹೇಳಿದರೂ ಕಡಿಮೆಯೇ? ಪ್ರತಿಕ್ಷಣವೂ ಅವರು ಮೊಬೈಲ್ ನಲ್ಲಿಯೇ ಇರೋಕೆ ಬಯಸುತ್ತಾರೆ.ಏಕೆಂದರೆ ಬೆಳಗಿನ ಶುಭೋದಯದಿಂದ ಹಿಡಿದು, ತಡರಾತ್ರಿಯ ಶುಭರಾತ್ರಿಯ ಮೆಸೇಜ್ ಹೇಳುವವರೆಗೂ ಅವರಿಗೆ ನಿದ್ರೆಯಿಲ್ಲ .ಅನವಶ್ಯಕವಾಗಿ ಮೆಸೇಜ್ ಹಾಕುತ್ತ ಹಾಕುತ್ತ ನಿದ್ರೆಯೆಂಬ ಅಮೂಲ್ಯ ಬಂಗಾರವನ್ನು ತಳ್ಳಿ ತಡರಾತ್ರಿಯವರೆಗೆ ಚಾಟಿಂಗ್ ಮಾಡುತ್ತಾ ಕಾಲ ಕಳೆಯುತ್ತಿರುವ  ಯುವಪೀಳಿಗೆಯು ಅನಾರೋಗ್ಯದ ಸ್ಥಿತಿ ಎದುರಿಸುತ್ತಿದ್ದಾರೆ.ಇದನ್ನು ಗಮನಿಸುತ್ತಿರುವ ಪೋಷಕರು ಹೀಗೇ ಆದರೆ ನಮ್ಮ ಮಕ್ಕಳ ಆರೋಗ್ಯದ ಗತಿಯೇನು ಎಂದು ಆತಂಕಕ್ಕೆ  ಒಳಗಾಗುತ್ತಿದ್ದಾರೆ.ಮೊದಲೆಲ್ಲ ವಧು ಪರೀಕ್ಷೆಯ ಪರಂಪರೆಯ ಸಂಸ್ಕೃತಿಯಿಂದ ಎರಡು ಕುಟುಂಬಗಳ ನಡುವೆ ಬಾಂಧವ್ಯ ಬೆಸೆದು ವಿವಾಹ ಸಂಸ್ಕಾರದ ಸಮಾರಂಭ ನೆರವೇರುತಿತ್ತು. ಆದರೆ ಈಗ ಮೊಬೈಲ್ ಇರುವುದರಿಂದ ವಧುಪರೀಕ್ಷೆ ತನ್ನ ಸ್ಥಾನ ಕಳೆದುಕೊಂಡಿದೆ. ಪರಸ್ಪರ ಅರಿತುಕೊಂಡು ವೈವಾಹಿಕ ಜೀವನಕ್ಕೆ ಕಾಲಿಡುವ ಹೊಸ ಪರಿಸರ ನಿರ್ಮಾಣವಾಗಿದೆ. ಇದು ಉತ್ತಮವೇ... ಯಾವುದೇ ಆಗಲಿ ಹಿತಮಿತವಾಗಿದ್ದರೆ ಅದಕ್ಕೊಂದು ಅರ್ಥವಿರುತ್ತದೆ.ಇಲ್ಲದಿದ್ದರೆ ಮಾನಸಿಕ ತೊಳಲಾಟಕ್ಕೆ ಇದು ಕಾರಣವಾಗುವುದು. ಅನವಶ್ಯಕ ಚರ್ಚೆಗಳಿಂದಾಗಿ ವಿನಾಕಾರಣ ಕೌಟುಂಬಿಕ ಕಲಹಗಳುಂಟಾಗಿ ಎಷ್ಟೋ ವೈವಾಹಿಕ ಶುಭ ಸಂದರ್ಭಗಳು ಮದುವೆಗೆ ಮುನ್ನವೇ ನಿಂತಂತಹ ಉದಾಹರಣೆಗಳು ಸಾಕಷ್ಟಿವೆ.
               ಶಿಸ್ತಿನ ಜೀವನವಿದ್ದಾಗ ನೆಮ್ಮದಿಯ ನಿದ್ರೆ ಸಾಧ್ಯ. ದಿನನಿತ್ಯ ರೈತರು, ನೇಕಾರರು, ಶ್ರಮಿಕರು ,ಇತ್ಯಾದಿಯಾಗಿ ದೇಹ ದಂಡಿಸಿ ಕೆಲಸ ಮಾಡುವ ಕೆಲಸಗಾರರು ಮತ್ತು ಬೌದ್ಧಿಕ ಶ್ರಮವಹಿಸಿ ದುಡಿಯುವ ಕೆಲಸಗಾರರು, ದಿನವಿಡೀ ದುಡಿದು ವಿಶ್ರಾಂತಿಗಾಗಿ ಮಲಗಿದಾಗ, ನಿದ್ರಾದೇವಿ ಹಾಗೆಯೇ ಅವರನ್ನು ಆವರಿಸಿ ನೆಮ್ಮದಿಯ ನಿದ್ರೆ ಮಾಡುತ್ತಿದ್ದರೆ ಪ್ರತಿ ಬೆಳಗು ಅವರಿಗೆ ನವಚೈತನ್ಯ ನೀಡುತ್ತದೆ .ಅದಕ್ಕೆ ತಿಳಿದವರು ಹೇಳೋದು.... ಚಿಂತೆಯಿಲ್ಲದವನಿಗೆ ಸಂತೆಯಲ್ಲೂ ನಿದ್ರೆ ಎಂದು.ಅದೇ ರೀತಿ ರಾಷ್ಟ್ರದ ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿದ ನಾಯಕರು ಅವಿರತ ಶ್ರಮದಿಂದ ಶಿಸ್ತಿನ ಜೀವನಕ್ಕನುಗುಣವಾಗಿ ವಿಶ್ರಾಂತಿ ತೆಗೆದುಕೊಂಡಾದ ಮಾತ್ರ ನಿಯಮಿತ ಜೀವನ ನಡೆಸಲು ಸಾಧ್ಯ. ಅಂತಹ ಶಿಸ್ತಿನ ಜೀವನ ಅವರನ್ನು ಹಲವಾರು ಸಾಧನೆಗಳತ್ತ ಎಳೆದೊಯ್ಯುವ ಚೈತನ್ಯ ನೀಡುತ್ತದೆ. ಅದಕ್ಕೆ ಪ್ರತ್ಯಕ್ಷ ಸಾಕ್ಷಿಯೇ ರಾಷ್ಟ್ರದ ಗೌರವವನ್ನು ಉತ್ತುಂಗಕ್ಕೇರಿಸಿದ ಹಲವಾರು ಸಾಧಕರು .ಅವರು ಕ್ರೀಡಾಪಟು, ರಾಜಕಾರಿಣಿ, ವಿಜ್ಞಾನಿ, ಸಾಹಿತಿ, ಬರಹಗಾರರು, ಕವಿಗಳು, ಶಿಕ್ಷಕರು, ರಂಗಭೂಮಿಕಲಾವಿದರು, ಪತ್ರಿಕೋದ್ಯಮಿಗಳು  ಮುಂತಾದ ಯಾವುದೇ ಕ್ಷೇತ್ರದವರೇ ಆಗಲಿ, ತಮ್ಮ ಕಾರ್ಯಸಾಧನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ನೆಮ್ಮದಿಯ ಸುಖನಿದ್ರೆಯಿಂದ ಸಾಧನೆಯ ಉತ್ತುಂಗಕ್ಕೇರಿದ್ದು ಶ್ಲಾಘನೀಯ.ಇಂದು ಮೊಬೈಲ್ ಜಗತ್ತನ್ನೇ ಕಿರಿದಾಗಿಸಿದೆ .ವಿಶ್ವದ ನಾನಾ ರಾಷ್ಟ್ರಗಳ ಸಂಪರ್ಕವನ್ನು ಕ್ಷಣಮಾತ್ರದಲ್ಲಿ ಕಲ್ಪಿಸುತ್ತದೆ .ಜಗತ್ತಿನ ಜ್ಞಾನ ಭಂಡಾರವನ್ನೇ ತನ್ನ ಮಡಿಲಲ್ಲಿ ಗೂಗಲ್ ತೋರಿಸುತ್ತಿದೆ.ಜ್ಞಾನಕ್ಕೆ ಬಳಕೆಯಾಗಬೇಕಾದ ಮೊಬೈಲನ್ನು ಅನವಶ್ಯಕ ಚರ್ಚೆಗಳಿಗೆ ಬಳಸಿಕೊಂಡು ನಿರ್ಮಲ ಮನಸ್ಸನ್ನು ಗೊಂದಲದ ಗೂಡಾಗಿ ಮಾಡಿಕೊಂಡು ನಿದ್ರೆಯೆಂಬ ಅಮೂಲ್ಯ ಸಂಪತ್ತನ್ನು ಕಳೆದುಕೊಳ್ಳುತ್ತಿದ್ದೇವೆ ಎಂಬ ಅರಿವು ನಮಗಿಲ್ಲ.ಸಂಪತ್ತನ್ನು ಸಂಪಾದಿಸಬಹುದು, ಆದರೆ ನಿದ್ರೆಯನ್ನು ಸಂಪಾದಿಸಲು ಸಾಧ್ಯವಿಲ್ಲ. ಅನವಶ್ಯಕ ನಿದ್ರಾಮಾತ್ರೆಗೆ ಬಲಿಯಾಗಿ ಗೋಳಾಡುತ್ತಿರುವ ದೃಶ್ಯಗಳಿಂದು ಸರ್ವೇ ಸಾಮಾನ್ಯ. ವೈದ್ಯರ ಬಳಿ ಬರುವ ಎಷ್ಟೋ ರೋಗಿಗಳು ನನಗೆ ನಿದ್ರೆಯೇ ಬರುತ್ತಿಲ್ಲ, ಏನಾದರೂ ಮಾಡಿ ಡಾಕ್ಟ್ರೆ ಅಂತಾನೇ ಬರುತ್ತಾರೆ. ಅದಕ್ಕಿರುವ ಒಂದೇ ದಾರಿಯೆಂದರೆ ನಮ್ಮ ಜೀವನಶೈಲಿಯನ್ನು ಬದಲಾಯಿಸಿಕೊಳ್ಳುವುದು. ದೇಶ ಕಂಡ ಅದ್ಭುತ ವ್ಯಕ್ತಿಗಳ ಜೀವನ ಯಶೋಗಾಥೆಗಳ ಸಾಧನೆಯ ಸಾಕಷ್ಟು ಪುಸ್ತಕಗಳಿವೆ.ಸಾಹಿತ್ಯಿಕ ಕ್ಷೇತ್ರದಲ್ಲಿ ನಮ್ಮ ಕನ್ನಡ ಭಾಷೆ ೮ ಜ್ಞಾನಪೀಠ ಪ್ರಶಸ್ತಿಗಳನ್ನು ಬಾಚಿ ತಬ್ಬಿಕೊಂಡಿದೆ .ತಮ್ಮ ಕಾರ್ಯಸಾಧನೆಯಲ್ಲಿ ಸತತ ಪರಿಶ್ರಮದಲ್ಲಿ ತೊಡಗಿ ಜ್ಞಾನಪೀಠ ಪ್ರಶಸ್ತಿಗೆ ಭಾಜನವಾದ ಕೃತಿಗಳು ನಮಗೆ ಸ್ಫೂರ್ತಿಯಾಗಬೇಕು. ಅತ್ಯುತ್ತಮ ಪುಸ್ತಕಗಳನ್ನು ಓದುವ ಹವ್ಯಾಸ, ನಿಯಮಿತ ವ್ಯಾಯಾಮ ,ಸಹವರ್ತಿಗಳೊಂದಿಗೆ ಮಂದಹಾಸದ ಮಾತುಕತೆ ,ನಮ್ಮ ಮನಸ್ಸನ್ನು ಅನವಶ್ಯಕ ವಿಚಾರಗಳಿಂದ ದೂರ ಮಾಡಿ ಸುಖನಿದ್ರೆಗೆ ತಳ್ಳುತ್ತದೆ.ಕೆಲವು ಕುಟುಂಬಗಳಲ್ಲಿ ಪೋಷಕರೇ ಅತಿ ಹೆಚ್ಚಾಗಿ ಮೊಬೈಲ್  ಬಳಕೆ ಮಾಡುವುದನ್ನು ಗಮನಿಸುತ್ತಿದ್ದಂತಹ ಮಕ್ಕಳು ಅವರನ್ನು ಅನುಕರಣೆ ಮಾಡಿ ತಾವೂ ಸಹ ಮೊಬೈಲ್ ಬಳಕೆ ಮಾಡುತ್ತಾರೆ.ಪೋಷಕರು ಬುದ್ಧಿ ಹೇಳಲು ಹೋದಾಗ ನೀವೇ ಯಾವಾಗ್ಲೂ ಮೊಬೈಲ್ ಉಪಯೋಗಿಸ್ತೀರಾ ನಿಮಗೆ  ತೊಂದ್ರೆ ಆಗಲ್ವಾ .....? ಎಂದು ಕೇಳುವ ಈಗಿನ ಮಕ್ಕಳ ಪ್ರಶ್ನೆಗೆ ಪೋಷಕರಲ್ಲಿ ಉತ್ತರವಿಲ್ಲ. 
                  ಬಂಗಾರವೆಂಬ ಈ ಲೋಹವನ್ನು ಹೆಚ್ಚಾಗಿ ಹೊಂದಿದ್ದರು ಕಷ್ಟ, ಕಡಿಮೆ ಇದ್ದರೆ ಮನಸ್ಸಿಗೆ ಅಶಾಂತಿ.ಏಕೆಂದರೆ ಹೆಚ್ಚಾಗಿ ಖರೀದಿಸಿದ ಈ ಲೋಹಕ್ಕೆ ಲೆಕ್ಕ ಕೊಡಬೇಕಾಗುತ್ತದೆ. ಅದೇ ರೀತಿ ನಿದ್ರೆಯೂ ಸಹ ಹಿತಮಿತವಾಗಿರಬೇಕು ಅತಿಯಾಗಿ ನಿದ್ರೆ ಮಾಡಿದರೆ ಯಾವುದೋ ಕಾಯಿಲೆಗೆ ಪೀಡಿತನಾಗಿದ್ದಾನೆ ಎಂದರ್ಥವಾಗುತ್ತದೆ. ಇಲ್ಲವೇ 'ಸೋಂಬೇರಿ' ಎಂಬ ಹಣೆಪಟ್ಟಿ ಕಟ್ಟುತ್ತಾರೆ.ಅದಕ್ಕಾಗಿ ಬಂಗಾರವೆಂಬ ಈ ಲೋಹ ಎಷ್ಟು ಅಮೂಲ್ಯವೋ ಅಷ್ಟೇ ಅಪಾಯಕಾರಿ. ಅದೇ ರೀತಿ ದಣಿದ ದೇಹಕ್ಕೆ ಎಷ್ಟು ಅವಶ್ಯಕವೋ ಅಷ್ಟು ನಿದ್ರೆ ಮಾತ್ರ ಬೇಕು .ಮಾನವನ ಜೀವನ ನೀರ ಮೇಲಿನ ಗುಳ್ಳೆಯಂತೆ. ಈ ಕ್ಷಣ ಕಂಡದ್ದು ಮರುಕ್ಷಣ ಕಾಣದೆ ಒಡದು ಹೋಗುವಂತಹದ್ದು. ನಾವು ಎಷ್ಟೇ ಗಳಿಸಿದರೂ, ಎಷ್ಟೇ ಶ್ರೀಮಂತರಾಗಿದ್ದರೂ, ಎಷ್ಟೇ ಶಿಸ್ತಿನ ಜೀವನ ನಡೆಸಿದ್ದರೂ, ಸಹ ಕೆಲವು ಸಂದರ್ಭದಲ್ಲಿ ವಿಧಿ ನಮ್ಮ ಜೀವನದ ಜೊತೆ ಆಟವಾಡುತ್ತದೆ ಎಂಬುದಕ್ಕೆ ಪ್ರತ್ಯಕ್ಷ ಸಾಕ್ಷಿ ಇತ್ತೀಚೆಗೆ ವಿಶ್ವದ ಜನರ ಮನಸ್ಸನ್ನು ಗೆದ್ದಂತಹ ಶ್ರೇಷ್ಠ ನಟ ನಮ್ಮ ಕನ್ನಡ ನಾಡಿನ ಡಾಕ್ಟರ್ ರಾಜ್ ಕುಮಾರ್ ರವರ ಪುತ್ರನಾದ ಪುನೀತ್ ರಾಜ್ ಕುಮಾರ್ ರವರ ಅಕಾಲಿಕ ಮರಣ ಎಂಥವರ ಹೃದಯವನ್ನು ಕದಡುವಂತಿತ್ತು.ಎಷ್ಟೋ ವಯೋವೃದ್ಧರೂ, ಮಹಿಳೆಯರು,  ಆ ಭಗವಂತ ನಮ್ಮ ಆಯಸ್ಸನ್ನಾದರೂ ಈ ನಟನಿಗೆ ಕೊಡಬಾರದಾಗಿತ್ತಾ? ನಾವಿದ್ದಾದ್ರೂ ಏನು ಸಾಧಿಸುವುದಿದೆ? ಹಣ್ ಣ್ಣಾದ ಈ ಜೀವಗಳು ಭೂಮಿಗೆ ಭಾರ.ಇಂತಹ ಪ್ರತಿಭಾನ್ವಿತ ನಟ, ಪರೋಪಕಾರಿ, ಅನಾಥಾಶ್ರಮಗಳನು, ವೃದ್ಧಾಶ್ರಮಗಳನು  ಸ್ಥಾಪಿಸಿದಂತಹ, ಸಾವಿರಾರು ವಿದ್ಯಾರ್ಥಿಗಳ ಜೀವನಕ್ಕೆ ದಾರಿದೀಪವಾದಂತಹ ವ್ಯಕ್ತಿ ನೂರ್ಕಾಲ ಬದುಕಿ ಬಾಳಬೇಕಾಗಿತ್ತು  ಎಂದು ಹಂಬಲಿಸಿ ಅಳುತ್ತಿರುವ ಎಷ್ಟೋ ರೋಧನಕಾರಿ ವಿಡಿಯೋ ಗಳು ಈಗಲೂ ಮನಕಲಕುತ್ತಿವೆ.ಇದ್ದೂ ಇಲ್ಲದಂತಿರುವ ಜನರಿಗಿಂತ ಮರಣದಲ್ಲೂ ಅಮರತ್ವವನ್ನು ಕಂಡಂತಹ ಇಂತಹ ನಟನ ಹಾಗೆ ನಾವು ಉದಾತ್ತ ವಿಚಾರಗಳನ್ನು ಹೊಂದಿ ಶ್ರೇಷ್ಠ ಜೀವನವನ್ನು ನಡೆಸೋಣ.
- ಶ್ರೀಮತಿ ಸುಮಂಗಲಾ ಕೃಷ್ಣ ಕೊಪ್ಪರದ ಇಲಕಲ್ಲ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...