ಸ್ವಾತಂತ್ರ್ಯವಾಯಿತು! ಬೇಕು ಸ್ವರಾಜ್ಯ
ನಿನ್ನನು ನಾನು ನನ್ನನು ನೀನು
ನನ್ನನೆ ನಾನು ಅರಿಯುವ ರಾಜ್ಯ
ನಿಂತ ಮಣ್ಣದು ಕುಡಿವ ನೀರದು
ಕಾಣುವ ಗಿರಿಯು ಕಾನನ ಕಣಿವೆ
ನನ್ನದೆನ್ನುತ ಪೊರೆಯುವ ರಾಜ್ಯ
ಹಕ್ಕಿಗಿಂತ ಕರ್ತವ್ಯವೇ ಪೂಜ್ಯ
ಡೊಳ್ಳು ನನ್ನದೆ ಶಂಖವು ನನ್ನದೆ
ಜಾಗಟೆ ಘಂಟೆ ಕಹಳೆಯೂ ನನ್ನದೆ
ಶಬ್ದಶಬ್ದದಲು ಓಂಕಾರವೆ ವೇದ್ಯ
ಅದುವೆ ನನ್ನ ಕನಸಿನ ರಾಜ್ಯ
ಕನ್ನಡ ಹಿಂದಿ ತಮಿಳು ಮರಾಠಿ
ಕೊಡವ ಕೊಂಕಣಿ ತುಳು ಮಲೆಯಾಳಿ
ಬಿಡಿ ಬಿಡಿ ಕೂಡಿ ಹಾರವಾಗುತ ಏರಿ
ಸಿರಿನುಡಿ ಘರ್ಜನೆ ಸ್ವರಾಜ್ಯ ಕೇಸರಿ
ಕಾಗದ ದಾಖಲೆ ಖಾನೇಷುಮಾರಿ
ಪತ್ರ ಸಹಿಗಳ ವಿಲೇವಾರಿ
ನನ್ನ ನೆಲಕಿದು ಸಾಕಾಗದು ಕೇಳು
ಜನಮನ ಸ್ವರಾಜ್ಯ ಭಜಿಸುತ ಏಳು
ತಿಂಬರ ಬಡಿದು ಅಂಬರ ಸೆಳೆದು
ದುಡಿವ ಮಕ್ಕಳಿಗೆ ಹರಿಸಿ ಹೊಳೆಯನು
ಧನಮದ ಬಿಸುಟು ಅಜ್ಞಾನವ ಸುಟ್ಟು
ಹೊಳೆವ ಕಂಗಳಲಿ ನನಸಾಗಲಿ ಸ್ವರಾಜ್ಯ
ಆ ಮತ ಈ ಮತ ಲಕ್ಷ ಜಾತಿ
ಮರೆತೆಲ್ಲವನು ಸೇರುತ ಭಾರತಿ
ಮನವೇ ನೆಲವನು ಬೆಸೆಯುವ ರಾಜ್ಯ
ಆಳುತ ಬಾಳುತ ಒಂದಾಗುವ ರಾಜ್ಯ
'ದೇಶ ನನ್ನದೆನ್ನವನೆದೆ ಸುಡುಗಾಡು..'
ಕವಿವಾಣಿಯೇ ನಮಗೆ ಹೆಮ್ಮೆಯ ಕೋಡು
ಸ್ವತಂತ್ರರಾದೆವು! ಬೇಕು ಸ್ವರಾಜ್ಯ
ನಿನ್ನಲಿ ನಾನು ನನ್ನಲಿ ನೀನು
ತನ್ನನೆ ತಾನು ಆಳುವ ರಾಜ್ಯ
~ ಅರಬಗಟ್ಟೆ ಅಣ್ಣಪ್ಪ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ