ಇತ್ತೀಚೆಗಷ್ಟೇ
ಡಾ// ರಂಜಿತ್ ಕುಮಾರ್ ಶೆಟ್ಟಿ ಅವರ ವೈದ್ಯಕೀಯ ವೃತ್ತಿ ಜೀವನದ ಅನುಭವಗಳ ಬಂಡಾರವನ್ನೇ ತುಂಬಿಕೊಂಡ ಲೇಖನಗುಚ್ಛಗಳ ಕೃತಿ "ನೆನಪಿನಾಳದಿಂದ " ಕೃತಿಯನ್ನು ಓದಿ ಪ್ರೇರಿತಳಾಗಿದ್ದ ನಾನು ಕುತೂಹಲದಿಂದ ಕೈಗೆತ್ತಿಕೊಂಡದ್ದು ಅವರ ಇನ್ನೊಂದು ಕಾದಂಬರಿ ಕೃತಿ ."ಜಯಂತಣ್ಣನಿಗಾಗಿ... ." .ಶೀರ್ಷಿಕೆಯೇ ತುಂಬಾ ಕುತೂಹಲವಾಗಿ ಕಂಡಿತು ನನಗೆ.ಯಾಕೆ ಈ ಹೆಸರು? ಜಯಂತಣ್ಣನಿಗಾಗಿ ಏನು ?ಯಾರು ಜಯಂತಣ್ಣ ? ಹೀಗೆ ಆಸಕ್ತಿಯಿಂದ ಪುಟ ತೆರೆದಂತೆ ಅತೀ ಕುತೂಹಲ ಬರಹ!. ಕೂಡಲೇ ಓದಿ ಮುಗಿಸಬೇಕೆಂಬ ಹಂಬಲ..! .ಸಿನಿಮಾ ಶೈಲಿಯ ಕಾದಂಬರಿಯಾದರೂ ವಾಸ್ತವಕ್ಕೆ ಹತ್ತಿರವಾದಂತೆ ಭಾಸ. ಈ ಕಾದಂಬರಿ ಚಲನಚಿತ್ರವಾದರೆ ಬಹುಶ; ಯಶಸ್ವಿಯಾಗಬುದೆಂದು ಇವರ ಸಹೋದರ ನಾದ ನಿರ್ದೇಶಕ ,ನಿರ್ಮಾಪಕ ರಿಷಬ್ ಶೆಟ್ಟಿ ಯೋಚಿಸಿದ್ದರೇನೋ ಅದಕ್ಕೆಂದೇ ಜಯಂತಣ್ಣನಿಗಾಗಿ... ಕಾದಂಬರಿಯನ್ನು ಚಲನಚಿತ್ರವನ್ನಾಗಿ ಮಾಡುವ ಆಶಯ ಹೊಂದಿದ್ದಾರೆ ಅವರು .
" ರಂಜಿತ್ ಗೆ ಪ್ರಶಸ್ತಿಗಳು ಬರಬೇಕು. ಈ ಕಥೆ ಸಿನಿಮಾ ರೂಪದಲ್ಲಿ ಬರಬೇಕು. ನಾನೊಬ್ಬ ಕಠಿಣ ಎಕ್ಸಾಮಿನರ್.ಆದರೆ ಈ ಪುಸ್ತಕಕ್ಕೆ ಅತೀ ಹೆಚ್ಚಿನ ಅಂಕಗಳನ್ನು ಕೊಡುತ್ತಿದ್ದೇನೆ.ಇದು ಕನ್ನಡದ ಒಂದು ಅತೀ ಉತ್ತಮ ಕಾದಂಬರಿ .....ಹೀಗೆಂದವರು ಬೇರೆ ಯಾಡಾ// ರಂಜಿತ್ ಕುಮಾರ್ ಅವರೊಬ್ಬ ಸ್ತ್ರೀ ರೋಗ ತಜ್ಞರು, ಮಣಿಪಾಲದಂತಹ ಖ್ಯಾತ ಮೆಡಿಕಲ್ ಕಾಲೇಜಿನಲ್ಲಿ ಕಲಿತು ಅಂದಿನ ದಿನಗಳ ಹೆಸರಾಂತ ಸ್ತ್ರೀರೋಗ ತಜ್ಞೆ ಡಾ// ಪದ್ಮಾರಾವ್ ಅವರ ಅವರ ಶಿಷ್ಯನಾಗಿ ಪಳಗಿದವರು. ಮುಂದಿನ ದಿನಗಳಲ್ಲಿ ಕುಂದಾಪುರದಲ್ಲಿ ವಿನಯ ನರ್ಸಿಂಗ್ ಹೋಂ ಸ್ಥಾಪಿಸಿ ಸುಮಾರು 42 ವರುಷಗಳ ಕಾಲ ವೈದ್ಯಕೀಯ ಸೇವೆ ಮಾಡಿದವರು.ವೈದ್ಯನೊಬ್ಬ ಬರೀ ರೋಗಿಯ ಸೇವೆ ಮಾಡುವುದು ಮಾತ್ರವಲ್ಲದೆ ಸಮಾಜದ ಅಂಕು ಡೊಂಕುಗಳನ್ನು ಕೂಡಾ ಸರಿದಾರಿಗೆ ತರಬಲ್ಲ ಎಂಬುದನ್ನು ಸಾಬೀತುಪಡಿಸಿದ ಅಪರೂಪದ ಕಾದಂಬರಿ “ ಜಯಂತಣ್ಣನಿಗಾಗಿ......”
ಇದೊಂದು ಸಿನಿಮೀಯ ಶೈಲಿಯಲ್ಲಿ ಬರೆಯಿಸಿಕೊಂಡು ಹೋದ ಕಾದಂಬರಿಯಾದರೂ ಓದುತ್ತ ಹೋದಂತೆ ‘ಇಂದಿನ ದಿನ ಈ ಕಾದಂಬರಿ ಯನ್ನು ಓದಿಯೇ ಮುಗಿಸುವೆ ಎಂಬ ಭಾವನೆ ತರಿಸಿದ , ಪುಸ್ತಕ ದಿಂದ ಕಣ್ಣು ಕೀಳಲಾಗದಂತಹ ಮಾಂತ್ರಿಕತೆಯ ಬರಹ ತುಂಬಿದ ಕೃತಿ. ಡಾ//ರಂಜಿತ್ ಕುಮಾರ್ ಅವರ ಬರಹದ ಶೈಲಿ ಬಹುಶ: ಅವರ ಬರಹಗಳನ್ನು ಓದಿದವರಿಗೆ ಮಾತ್ರ ಗೊತ್ತು ,ಒಬ್ಬ ವೈದ್ಯನಾಗಿ ಕೂಡ ಲೀಲಾಜಾಲವಾಗಿ ಬರೆಯುತ್ತಾ ಓದುಗನನ್ನು ತನ್ನ ಅಕ್ಷರದೊಳಗೆ ಹೇಗೆ ಬಂಧಿಸಬೇಕು ಎಂಬುದನ್ನು ಚೆನ್ನಾಗಿ ತಿಳಿದುಕೊಂಡ ವೈದ್ಯ ಸಾಹಿತಿ.
ಜಯಂತಣ್ಣನಿಗಾಗಿ--ಕಾದಂಬರಿಯಲ್ಲಿ ಬರುವ ಎರಡು ಪಾತ್ರದಾರಿಗಳು. ಒಬ್ಬ ಜೂನಿಯರ್ ವೈದ್ಯ ಮತ್ತೊಬ್ಬ ಸೀನಿಯರ್ ವೈದ್ಯ. ಉತ್ತಮರ ಸಂಘ ಹೇಗೆ ಮನುಷ್ಯನನ್ನು ಮುಂದಕ್ಕೆ ತರುತ್ತದೆ ಎನ್ನುವುದನ್ನೇ ಸಾಕ್ಷಿಯಾಗಿಟ್ಟುಕೊಂಡು ತನ್ನ ಬದುಕಿನಲ್ಲಿ ಸನ್ಮಾರ್ಗ ತೋರಿಸಿದ ಸೀನಿಯರ್ ವೈದ್ಯನನ್ನು ಅನುಸರಿಸಿ ಗೆದ್ದ ಜೂನಿಯರ್ ವೈದ್ಯನ ಕಥೆ .ಹಾಗೆಯೇ ಆ ಸೀನಿಯರ್ ವೈದ್ಯನ ಬದುಕು,ಭಾವನೆ, ಅವನು ಯಾವ ರೀತಿಯಿಂದ ಮಹಾತ್ಮನೆನಿಸಿಕೊಳ್ಳುತ್ತಾನೆ,ಅವನ ದ್ಯೇಯ ಧೋರಣೆಗಳೇನಿತ್ತು?,ಅವನು ಯಾವ ರೀತಿ ಇತರರಿಗೆ ಮಾದರಿಯಾಗಿದ್ದ? ಅವನು ಬಾಳಿ ಬದುಕಿದ ರೀತಿ ಇತ್ಯಾದಿ ಅಂಶಗಳು ಈ ಕಾದಂಬರಿಯ ಮೂಲಾಂಶಗಳಾಗಿವೆ .
.ಮುಕುಂದ್ ಹೊಸ ಭವಿಷ್ಯದ ಕನಸುಗಳನ್ನು ಸಾಕಾರಗೊಳಿಸಲೆಂದು ವೈದ್ಯಕೀಯ ವಿದ್ಯಾರ್ಥಿಯಾಗಿ ಮೆಡಿಕಲ್ ಕಾಲೇಜ್ ಗೆ ಸೇರಿಕೊಳ್ಳುತ್ತಾನೆ..ಒಳಗೆ ಬರುತ್ತಲೇ ರಾಗಿಂಗ್ ಕಾಟ.. ರಾಗಿಂಗ್ ಬಗ್ಗೆ ಎಲ್ಲರಿಗೂ ತಿಳಿದದ್ದೇ. .ಇದರಿಂದಾಗಿ ಬಹಳಷ್ಟು ವಿದ್ಯಾರ್ಥಿಗಳು ಮಾನಸಿಕ ರೋಗಿಗಳಾದದ್ದುಂಟು,, ವಿದ್ಯಾಭ್ಯಾಸ ತೊರೆದು ಮನೆಗೆ ವಾಪಸ್ಸು ಮರಳಿದ್ದುಂಟು,ಕೆಲವು ವಿದ್ಯಾರ್ಥಿಗಳು ಆತ್ಮಹತ್ಯೆಗ ಶರಣಾದದ್ದೂ ಇದೆ..ಮಣಿಪಾಲಕ್ಕೆ ವೈದ್ಯಕೀಯ ವಿದ್ಯಾಭ್ಯಾಸಕ್ಕೆಂದು ಬಂದ ಮುಕುಂದ್ ಗೆ ರಾಗಿಂಗ್ ಎಂಬ ವಿಷಸರ್ಪಗಳು ಸುತ್ತಿಕೊಳ್ಳುತ್ತವೆ .ಅಂತಹ ವರ್ತುಲದಲ್ಲಿ ಸಿಕ್ಕಿ ನರಳುತಿದ್ದವನಿಗೆ ದೇವರಂತೆ ಬಂದು ರಕ್ಷಿಸಿದವ ಜಯಂತ್ ಎಂಬ ಸೀನಿಯರ್ ಸ್ಟೂಡೆಂಟ್.ಆಪತ್ಕಾಲದಲ್ಲಿ ಬಂದು ರಕ್ಷಿಸಿದ ಆತನ ,ಗಾಂಭೀರ್ಯ,ವ್ಯಕ್ತಿತ್ವ ಮುಕುಂದ್ ನ ಬದುಕನ್ನು ಬದಲಾಯಿಸುತ್ತದೆ.ತನ್ನ ವಿದ್ಯಾರ್ಥಿ ಜೀವನದಲ್ಲಿ ಎಲ್ಲೆಲ್ಲಿ ತಾನು ಎಡವುತ್ತಿದ್ದೇನೆ ಎಂದೆನಿಸಿದಾಗ ಅಲ್ಲಲ್ಲಿ ಡಾ// ಜಯಂತ್ ಆತನಿಗೆ ಮಾರ್ಗದರ್ಶಿಯಾಗುತ್ತಾನೆ,ಅವನಲ್ಲಿ ಭವಿಷ್ಯದ ದ್ಯೇಯ ಅರುಹುತ್ತಾನೆ.ಹೀಗಾಗಿ ಆತ ಮುಕುಂದ್ ನ ಪ್ರೀತಿಯ ಜಯಂತಣ್ಣನಾಗುತ್ತಾನೆ. ಮುಂದೆ ಮುಕುಂದ್ ಎಂ. ಎಸ್ .ಮುಗಿಸಿ ಸರ್ಜನ್ ಆಗಿ ಮುಂಬೈ ಸೇರಿದರೆ ಡಾ// ಜಯಂತ್ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಸರ್ಜನ್ ಆಗಿ ಸೇರಿಕೊಳ್ಳುತ್ತಾರೆ(ಜಯಂತ್ ಒಂದು ಕಾದಂಬರಿಯ ಪಾತ್ರಧಾರಿಯಾದರೂ ಇಲ್ಲಿ ಒಬ್ಬ ಶ್ರೇಷ್ಠ ವೈದ್ಯ ನಮ್ಮ-ನಿಮ್ಮೊಳಗೆ ಇದ್ದಾರೆ ಎಂಬ ಭಾವನೆಯಿಂದ ಅವರನ್ನು ಅವನೆಂದು ಬರೆಯಲು ಒಪ್ಪದೇ ಮುಂದೆ ಅವರು ಎಂದು ಉಲ್ಲೇಖಿಸುತ್ತಿದ್ದೇನೆ, ಕಾರಣ ಲೇಖಕರು ಡಾ// ಜಯಂತ್ ರನ್ನು ಮಹಾನ್ ವ್ಯಕ್ತಿಯಾಗಿ ಚಿತ್ರಿಸಿದ್ದಾರೆ.ಲೇಖಕರು ಇಂತಹ ಒಬ್ಬ ವ್ಯಕ್ತಿಯನ್ನು ತನ್ನ ವೃತ್ತಿ ಜೀವನದಲ್ಲಿ ಕಂಡಿರಬಹುದು ಅದಕ್ಕಾಗಿ ಅವರನ್ನು ಈ ಕಾದಂಬರಿಯಲ್ಲಿ ಚಿತ್ರಿಸಿದ್ದಾರೆ ಎಂದುಕೊಳ್ಳುತ್ತೇನೆ).
ಡಾ//ಜಯಂತ್ ರ ಆದರ್ಶಗಳನ್ನೇ ಬಂಡವಾಳವಾಗಿರಿಸಿಕೊಂಡು ಮುಂಬಯಿ ಸೇರಿದ ಡಾ//ಮುಕುಂದ್ ಅಲ್ಲಿ ತನ್ನ ಸರ್ಜನ್ ವೃತ್ತಿಯನ್ನು ಮುಂದುವರಿಸುತ್ತಿರಬೇಕಾದರೆ ಅದೊಂದು ದಿನ ಪೇಪರ್ ನಲ್ಲಿ ಓದಿದ ನ್ಯೂಸ್ ಅವನನ್ನು ಘಾಸಿಗೊಳಿಸುತ್ತದೆ.
ಕನಕನ ಹಳ್ಳಿಯ ಖ್ಯಾತ ವೈದ್ಯ ಡಾ// ಜಯಂತ್ ಕೊಲೆಯಾಗಿದೆ ,ಜಗನ್ನಾಥ್ ಎನ್ನುವ ವ್ಯಕ್ಯಿಯಿಂದ ಬರ್ಬರ ಹತ್ಯೆ ಗೊಳಗಾಗಿದ್ದಾರೆ ಎಂಬ ಸುದ್ದಿ ಓದಿ ಚಿಂತೆಗೀಡಾಗುತ್ತಾನೆ ಡಾ//ಮುಕುಂದ್. ತನ್ನ ಜೀವದ ಅಂಗದಂತಿದ್ದ,ತನ್ನ ಸರ್ವಸ್ವವೇ ಆಗಿದ್ದ ಡಾ// ಜಯಂತ್ ಕೊಲೆ ಹೇಗೆ ಆಯಿತು ಎಂದು ತಿಳಿದುಕೊಳ್ಳಲು ಡಾ //ಜಯಂತರ ಊರಾದ ಕನಕನ ಹಳ್ಳಿಗೆ ಹೊರಟು ನಿಲ್ಲುತ್ತಾನೆ ಆತ. ಈ ನಡುವಿನ ಅಧ್ಯಾಯಗಳಲ್ಲಿ ಡಾ//ಜಯಂತ್ ಹಾಗೂ ಡಾ//ಮುಕುಂದ್ ನ ಆತ್ಮೀಯತೆ,ಅವರಿಬ್ಬರ ಅನ್ಯೋನ್ಯತೆ, ಡಾ// ಜಯಂತ್ ಹೇಗೆ ಮುಕುಂದ್ ನ ಬದುಕಿನಲ್ಲಿ ಹಾಸುಹೊಕ್ಕಾಗಿದ್ದರು, ,ಹೇಗೆ ಡಾ// ಮುಕುಂದ್ ಅವರಿಂದ ಪ್ರೇರೇಪಿತನಾಗಿದ್ದ ? ಡಾ//ಜಯಂತ್ ಎನ್ನುವ ಖ್ಯಾತ ವೈದ್ಯ ಜಯಂತಣ್ಣ ನಾಗುವಷ್ಟು ಮುಕುಂದ್ ಗೆ ಹೇಗೆ ಹತ್ತಿರವಾದರು ಎನ್ನುವ ವಿಚಾರಗಳು ಬರುತ್ತವೆ. ಜೊತೆಗೆ ಜಯಂತಣ್ಣನ ಕೊಲೆ ಹೇಗೆ ಆಯಿತು ಎಂಬುದನ್ನು ತಿಳಿಯಲು ಕೊನೆಯವರೆಗೂ ಉಸಿರು ಬಿಗಿಹಿಡಿದು ಓದಲೇಬೇಕಾದ ಪ್ರಮೇಯ ಲೇಖಕರು ಮಾಡಿಕೊಟ್ಟಿದ್ದಾರೆ ಎಂದರೆ ತಪ್ಪಾಗಲಾರದು.
ತನ್ನ ವಿದ್ಯಾರ್ಥಿ ಜೀವನದಲ್ಲಿ ತನ್ನನ್ನು ಪಡೆಯಲು ಪರಿತಪಿಸುತ್ತಿದ್ದ ಜ್ಯೂಲಿಯ ಪ್ರೇಮಪಾಶಕ್ಕೆ ಸಿಲುಕಿ ಬೆಂಗಳೂರು ಸೇರಿದ ಡಾ//ಜಯಂತ ಅಲ್ಲಿಯ ಖ್ಯಾತ ಆಸ್ಪತ್ರೆಯೊಂದರಲ್ಲಿ ಸರ್ಜನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರೂ ಅಂದು ಅವರ ಪ್ರೀತಿಗಾಗಿ ಹಂಬಲಿಸಿದ ಜ್ಯೂಲಿಗೆ ಇಂದು ಡಾ// ಜಯಂತರ ದ್ಯೇಯ,ಆದರ್ಶ ,ಅವರ ನೇರ ಸ್ವಭಾವ,ಹಣಕ್ಕಾಗಿ ಉದ್ಯೋಗ ಮಾಡದೇ,ಮಾನವೀಯತೆಗೆ ಓಗೊಟ್ಟು ಬಹಳಷ್ಟು ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡುವ ಅವರ ಉದಾರತೆ ಇವೆಲ್ಲವೂ ಬೇಡವಾಗಿ,, ಪತಿಯ ಬಗ್ಗೆ ಕಾಳಜಿ ವಹಿಸದೆ ತನ್ನ ಗೆಳೆಯ ಗೆಳತಿಯರೊಂದಿಗೆ ಹೊರಪ್ರಪಂಚದಲ್ಲೇ ಸುತ್ತುತಿದ್ದ ಆಕೆಗೆ ಒಂದು ಹೆಣ್ಣು ಮಗುವಾದಾಗಲೂ .ಆ ಮಗು ತನಗೆ ಹುಟ್ಟಿದ್ದಲ್ಲ ಎನ್ನುವ ಸತ್ಯ ಅರಿತು ಕೂಡ ಮೌನಧಾರಣೆಮಾಡಿಕೊಂಡು ಆ ಮಗುವನ್ನೇ ತನ್ನ ಜೀವದ ಒಂದು ಅಂಗವಾಗಿ ಸ್ವೀಕರಿಸಿದ ಡಾ// ಜಯಂತ್ ಎಂಬ ಶ್ರೇಷ್ಠ ವ್ಯಕ್ತಿ ಹೇಗೆ ಕೊಲೆಯಾದರು,?ಅಂತಹ ವಿಶಾಲ ವ್ಯಕ್ತಿತ್ವದ ವ್ಯಕ್ತಿ ಕೊಲೆಯಾಗಲು ಹೇಗೆ ಸಾಧ್ಯ ?ಎಂದು ತಲೆಗೆ ಒಂದಷ್ಟು ಯೋಚನೆಗಳನ್ನು ತುಂಬುತ್ತ ಮತ್ತೆ ಓದಿಸಿಕೊಂಡು ಹೋಗುತ್ತದೆ ಕುತೂಹಲಕಾರಿ ಕಥೆ.
ಯಾವುದೇ ಒಂದು ರೋಗಿಯ ಶಸ್ತ್ರಕ್ರಿಯೆ ಮಾಡುವಾಗ ಆ ರೋಗಿಯ ಬ್ಲೀಡಿಂಗ್ ಟೈಮ್ ,ಕ್ಲೋಟಿಂಗ್ ಟೈಮ್ ಎನ್ನುವ ರಕ್ತ ಪರೀಕ್ಷೆ ಮಾಡಲಾಗುತ್ತದೆ.ಅದು ನಾರ್ಮಲ್ ಇದ್ದರೇನೇ ಆಪರೇಷನ್ ಗೆ ಕೈ ಹಾಕಬಹುದು.ಇಲ್ಲಿ ಸೌರಭ್ ಎನ್ನುವ ಹುಡುಗನ ಹೊಟ್ಟೆಯಲ್ಲಿ ಬೆಳೆದ ಗೆಡ್ಡೆಯನ್ನು ಆಪರೇಷನ್ ಮಾಡಿ ತೆಗೆಯಲಿಕ್ಕಿತ್ತು.ಡಾ// ಜಯಂತ್ ಪೇಷಂಟ್ ನ ಬ್ಲೀಡಿಂಗ್ , ಟೈಮ್ , ಕ್ಲೋಟಿಂಗ್ ಟೈಮ್ ಟೆಸ್ಟ್ ಮಾಡಲು ಅನುಮೋದಿಸಿದ್ದರು. ಆದರೆ ಲ್ಯಾಬ್ ಟೆಕ್ ಸೌರಭ್ ನ ಎಲ್ಲ ಟೆಸ್ಟ್ ಮಾಡಿದರೂ ಈ ಎರಡು ಟೆಸ್ಟ್ ನ್ನು ಮರೆತು ಬಿಟ್ಟ.ಗೊನೆಗೆ ವಿಧಿಯಿಲ್ಲದೆ ನಾರ್ಮಲ್ ರಿಪೋರ್ಟ್ ಟೈಪ್ ಮಾಡಿ ಕಳಿಸಿಕೊಟ್ಟಿದ್ದ.ಆದರೆ ಸೌರಭನ ದೇಹದಲ್ಲಿ ರಕ್ತಸ್ರಾವದ ತೊಂದರೆಯಿತ್ತು ಲ್ಯಾಬಿನಿಂದ ಬರುವ ರಿಪೋರ್ಟ್ ನ್ನೇ ಆಧಾರವಾಗಿಟ್ಟುಕೊಂಡು ವೈದ್ಯರು
ಆಪರೇಷನ್ ಗೆ ಸಜ್ಜಾಗುತ್ತಾರೆ.ಆತನ ರಿಪೋರ್ಟ್ ನಾರ್ಮಲ್ ಎಂದು ತಪ್ಪಾಗಿ ಬಂದುದನ್ನೇ ನಂಬಿ ಡಾ//ಜಯಂತ್ ಸರ್ಜರಿಗೆ ತಯಾರಾಗಿದ್ದರು.ಆಪರೇಷನ್ ನಂತರ ಆತನ ರಕ್ತಸ್ರಾವ ನಿಲ್ಲಲೇ ಇಲ್ಲ,೩ ಬಾಟಲಿ ರಕ್ತ ಟ್ರಾನ್ಫ್ಯೂಸ್ ಮಾಡಿದರೂ ಸೌರಭ್ ನ ಪ್ರಾಣ ಉಳಿಯಲಿಲ್ಲ..
ಡಾ//ಜಯಂತ ಕಂಗಾಲಾದರು.ಯಾವ ಆಪರೇಷನ್ ನಿಂದಲೂ ಫೇಲ್ ಎಂದೆನಿಸಿಕೊಳ್ಳದ ವೈದ್ಯ ಇಂದು ಫೇಲ್ ಆದಾಗ ವಿಪರೀತ ಮಾನಸಿಕ ಒತ್ತಡಕ್ಕೆ ಬಿದ್ದು ಅವರ ಬಿಪಿ ಹೆಚ್ಚಾಗಿ ಅವರ ದೇಹದ ಎಡಭಾಗ ಪಾರ್ಷಿಯಲ್ ಪ್ಯಾರಾಲಿಸಿಸ್ ಆಗಿ ಚಿಕಿತ್ಸೆಗೆ ಒಳಗಾದರೂ ಸಂಪೂರ್ಣವಾಗಿ ಕ್ಯೂರ್ ಆಗದಾದಾಗ ಡಾ//ಜಯಂತ್ ತಾನು ಕಾರ್ಯ ನಿರ್ವಹಿಸುತ್ತಿದ್ದ ಪ್ರಸಿದ್ಧ ಸಂಜೀವನಿ ಆಸ್ಪತ್ರೆಗೆ ರಿಸೈನ್ ಕೊಟ್ಟು ತನ್ನ ಹೆತ್ತ ಊರಾದ ಕನಕನ ಹಳ್ಳಿಗೆ ಹೋಗುವ ನಿರ್ದಾರಕ್ಕೆ ಮುಂದಾಗುತ್ತಾರೆ .
ತನ್ನೊಂದಿಗೆ ಬರಲು ತಯಾರಿಲ್ಲದ ಹೆಂಡತಿಯನ್ನು ಬಿಟ್ಟು ತನ್ನ ಸರ್ವಸ್ವವಾದ ರೂಪಾಳನ್ನು ಹೊತ್ತುಕೊಂಡು ಕನಕನ ಹಳ್ಳಿಗೆ ಪ್ರಯಾಣ.ಮುಂದಿನ ಕೆಲವೇ ದಿನಗಳಲ್ಲಿ ಹೆಂಡತಿ ಆಕ್ಸಿಡೆಂಟ್ ಒಂದರಲ್ಲಿ ಮರಣ ಹೊಂದಿದಳೆಂಬ ಸುದ್ದಿ ತಲುಪಿದರೂ ನಿರ್ವೀಕಾರವಾಗಿದ್ದ ಡಾ//ಜಯಂತ್ ರದು ತಾಯಿ ಗಂಗಮ್ಮ ನೊಂದಿಗೆ ಹಳ್ಳಿಯ ಮನೆಯಲ್ಲಿ ವಾಸ .ಅದೇ ಮನೆಯ ಒಂದು ಮಗ್ಗುಲಲ್ಲಿ ಕ್ಲಿನಿಕ್ ಆಗಿ ಮಾಡಿಕೊಂಡು ಊರಿನ ಜನರಿಗೆ ಮದ್ದು ಮಾತ್ರೆ ಬರೆದುಕೊಡುತ್ತಾ ಕರ್ತವ್ಯ ನಿರ್ವಹಣೆ. ಯಾಕೆಂದರೆ ಅವರ ದೇಹದ ಒಂದು ಮಗ್ಗುಲಲ್ಲಿ ಶಕ್ತಿ ಇರಲಿಲ್ಲ,ಶಸ್ತ್ರಕ್ರಿಯೆ ಮಾಡಲು ಈಗ ಅವರಷ್ಟು ಸಶಕ್ತರಾಗಿರಲಿಲ್ಲ, ರೂಪ, ಗಂಗಮ್ಮ ನೊಂದಿಗೆ ಬಂದು ಸೇರಿಕೊಂಡ ನಿಷ್ಠಾವಂತ ಸೇವಕ ಬಾಡು.ಇಲ್ಲಿ ಆತನ ಚಿತ್ರಣ ಕೂಡ ಮನೋಜ್ಞವಾಗಿ ಲೇಖಕರು ಒಂದು ಅದ್ಯಾಯ ಪೂರಾ ಬರೆದಿದ್ದಾರಾದರೂ ಅದ್ರ ಬಗ್ಗೆ ತೀವ್ರ ವಿಮರ್ಶಿಸುವುದಕ್ಕೆ ಹೋಗುವುದಿಲ್ಲ .ಅವನ ಅದ್ಯಾಯ ಓದಿದ ನಂತರ ತಿಳಿಯಿವುದು ಆತ ಪ್ರಾಣಕ್ಕೆ ಪ್ರಾಣ ಕೊಡುವ ಕಟ್ಟಾಳು.
ರೂಪಾಳನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತ.ಜಯಂತರ ನಿಷ್ಠೆಯ ಸೇವಕನಾಗಿ,ಅವರ ತಮಾಷೆಯ ಬಡ್ಡಿಮಗನೇ ಎನ್ನುವ ಬೈಗುಳವನ್ನೇ ತನ್ನ ಜೀವನದ ಪಂಚಾಮೃತ ಎಂದು ಭಾವಿಸುತ್ತಾ ಇವರೇ ತನ್ನ ಸರ್ವಸ್ವ ಎಂದು ತನ್ನನ್ನು ತಾನು ಸಮರ್ಪಿಸಿಕೊಂಡ ಅನಾಥ ಬಾಡು .
ಡಾ //ರಂಜಿತ್ ಕುಮಾರ್ ಶೆಟ್ಟಿ ಯವರ ಬರಹಗಳು ಒದುಗರಿಗೆ ಅತೀವ ಇಷ್ಟವಾಗುವುದು ಯಾಕೆಂದರೆ ಅತೀ ಸೀರಿಯಸ್ ವಿಚಾರಗಳ ನಡುವೆಯೂ ಅವರು ಉಣಬಡಿಸುವ ತಿಳಿಹಾಸ್ಯ,ಅದು ಓದುಗನನ್ನು ಪುಸ್ತಕ ಬದಿಗಿರಿಸುವಲ್ಲಿ ವಿಪಲವಾಗುತ್ತದೆ. ಒಮ್ಮೆ ಓದಿಯೇ ಮುಗಿಸುವೆ ಎನ್ನುವ ತರಾತುರಿ ಹೆಚ್ಚಿಸುತ್ತದೆ..ಈ ಕಾದಂಬರಿಯಲ್ಲಿ ಬರುವ ಡಾ//ಜಯಂತ್. ಡಾ// ಮುಕುಂದ್, ರೂಪ ,ಗಂಗಮ್ಮ .ಬಾಡು ಇವರೆಲ್ಲಾ ನಮ್ಮವರೇ ಎಂದು ಬಿಡುವಷ್ಟು ಆತ್ಮೀಯತೆ ಬಂದು ಬಿಡುತ್ತದೆ. ಕಾದಂಬರಿಯೊಂದನ್ನು ಓದುತ್ತಿದ್ದೇನೆ ಎನ್ನುವುದಕ್ಕಿಂತ ಈ ಪಾತ್ರದಾರಿಗಳೆಲ್ಲ ನಮ್ಮ ಸುತ್ತಮುತ್ತಲೇ ಇದ್ದಾರೆ ಎನ್ನುವಂತಹ ಭಾವನೆ ಬೆಳೆಯುತ್ತದೆ ..ಇದು ಡಾ//ರಂಜಿತ್ ಶೆಟ್ಟಿ ಯವರ ಬರಹದ ಮಟ್ಟ ಎನ್ನಬಹುದು .ಈ ರೀತಿಯ ಬರಹಗಳು ಎಲ್ಲ ಬರಹಗಾರರಿಂದ ಬರಲು ಅಸಾಧ್ಯ.ನೂರಾರು, ಸಾವಿರಾರು ರೋಗಿಗಳ ನೋವನ್ನು ಹತ್ತಿರದಿಂದ ಕಂಡು,ಅವರ ಭಾವದಲ್ಲಿ ಭಾವವಾಗಿ.ಅವರ ನೋವಿನಲ್ಲಿ ನೋವಾಗಿ ತಾನೂ ಬಹಳಷ್ಟು ಉದ್ವಿಗ್ನತೆಗಳನ್ನು,ಅಸಹಾಯಕತೆಗಳನ್ನು ಅನುಭವಿಸಿದ ವೈದ್ಯನೊಬ್ಬನಿಂದ ಮಾತ್ರ ಇಂತಹ ಪಾತ್ರದಾರಿಗಳು, ಬರಹಗಳು ಮೂಡಿಬರಲು ಸಾಧ್ಯ ಎಂದು ಕಾದಂಬರಿಯ ಪ್ರತೀ ಹಂತದಲ್ಲೂ ತಿಳಿದು ಬರುವುದು.
ತನ್ನ ಮಗಳನ್ನು ವೈದ್ಯೆಯಾಗಿ ಮಾಡಬೇಕೆಂಬ ಅಸೆ ಮೂಗಿನ ತುದಿಯವರೆಗೆ ಇದ್ದರೂ ಹಳ್ಳಿಯ ಜನರಿಂದ ಸಿಗುವ ೫-೧೦ ರೂಪಾಯಿಯಿಂದ ಮಗಳನ್ನು ವೈದ್ಯೆ ಮಾಡಲಾರೆ ಎನ್ನುವ ಸತ್ಯ ಡಾ //ಜಯಂತ ರಿಗೂ ತಿಳಿದಿತ್ತು .ಹಾಗಾಗಿ ತನ್ನನ್ನುದೇವರೆಂದು ಭಾವಿಸುವ ತನ್ನ ಶಿಷ್ಯ ನ ಸ್ಥಾನದಲ್ಲಿದ್ದ ಡಾ//ಮುಕುಂದ್ ಗೆ ಒಂದು ಪತ್ರವನ್ನು ಬರೆದಿಟ್ಟಿದ್ದರು
ಡಾ //ಜಯಂತ್” ’ನನ್ನ ಮಗಳ ವೈದ್ಯಕೀಯ ವಿದ್ಯಾಭ್ಯಾಸಕ್ಕೆ ನೆರವಾಗುವೆಯಾ ಎಂದು? ಆದರೆ ಆ ಪತ್ರವನ್ನು ಮುಕುಂದ್ ಗೆ ಮುಟ್ಟಿಸುವ ಧೈರ್ಯ ಮಾತ್ರ ಅವರಲ್ಲಿರಲಿಲ್ಲ. ಈ ಕಾದಂಬರಿಯ ಕ್ಲೈಮಾಕ್ಸ್ ಎಂದರೆ ಕನಕನ ಹಳ್ಳಿಯ ಬಡ ಬಗ್ಗರ ಅತೀ ಮೆಚ್ಚಿನ ವೈದ್ಯನಾದ ಡಾ//ಜಯಂತರ ಕೊಲೆ ಹೇಗಾಯಿತು?ಮುಂದೆ ವಿವರಣೆಗಳು ಸಿಗಲಾರಂಭಿಸುತ್ತವೆ !!
ತನ್ನ ಕನಕನ ಹಳ್ಳಿಯ ಜನ ಇತ್ತೀಚೆಗೆ ಹೊಟ್ಟೆನೋವು ವಾಂತಿ. ಜುಲಾಬು ಎಂದು ಅವರ ಬಳಿ ಬರಲು ಪ್ರಾರಂಭಿಸಿದಾಗ, ಇದಕ್ಕೆ ಕಾರಣ ಏನೆಂದು ಡಾ/ ಜಯಂತ್ ಪರಾಮರ್ಶಿ ಸುತ್ತಾರೆ .ಆಗ ಅವರ ಗಮನಕ್ಕೆ ಬಂದದ್ದು ಕನಕನ ಹಳ್ಳಿಯ ಪಂಚಾಯತ್ ಬೋರ್ಡ್ ಪ್ರೆಸಿಡೆಂಟ್ .ಲೋಕಲ್ ಪುಡಾರಿ ಪರಮೇಶಪ್ಪನ ರಾಸಾಯನಿಕ ಗೊಬ್ಬರದ ಕಾರ್ಖಾನೆ ಎಂಬ ಸತ್ಯ . ಆ ಕಾರ್ಖಾನೆಯ ತ್ಯಾಜ್ಯಗಳು ನೇರವಾಗಿ ನೆಲಕ್ಕೆ ಹೋಗುತಿತ್ತು. ಅಲ್ಲಿ ಭಾವಿಯ ಹತ್ತಿರದ ನೆಲದಲ್ಲಿ ಈ ತ್ಯಾಜ್ಯಗಳು ಮಣ್ಣಿನ ಮೂಲಕ ಕೆಳಗಿಳಿಯುತ್ತಾ ಭಾವಿಯ ನೀರನ್ನು ಹಾಳು ಮಾಡಿ ಬಿಟ್ಟಿದ್ದವು. ಆ ನೀರನ್ನು ಕುಡಿದ ಅಮಾಯಕ ಜನರು ಅನಾರೋಗ್ಯಕ್ಕೆ ಈಡಾಗುತ್ತಿದ್ದರು. ಗರ್ಭಿಣಿಯರಿಗೆ ಹುಟ್ಟಿದ ಮಕ್ಕಳು ನರದ ಕಾಯಿಲೆಗೆ ಒಳಗಾಗುತ್ತಿದ್ದರು.ಈ ವಿಚಾರ ತಿಳಿದ ಡಾ//ಜಯಂತ್ ಪರಮೇಶಪ್ಪನಲ್ಲಿ ತ್ಯಾಜ್ಯ ಹೋಗಲು ಬೇರೆ ಯೂನಿಟ್ ಮಾಡಿಸಿ ಎಂದಾಗಿನಿಂದ ಪರಮೇಶ ಡಾ// ಜಯಂತರ ವಿರೋಧಿ ಯಾಗುತ್ತಾನೆ.ಅವನಿಗೆ ಬೇರೆ ಯೂನಿಟ್ ಕಟ್ಟಿಸಿ ೧೫ ಲಕ್ಷ ವ್ಯರ್ಥ ಮಾಡಲಿಕ್ಕಿರಲಿಲ್ಲ ,ಡಾ/ ಜಯಂತ್ ಬಾವಿಯ ನೀರು ಕಲುಷಿತಗೊಂಡ ಬಗ್ಗೆ ರಿಪೋರ್ಟ್ ಕೂಡ ಮಾಡಿಸಿದ್ದರು .ಡಾ// ಜಯಂತ್ ಪರಮೇಶನಲ್ಲಿ ಈ ತೊಂದರೆಗೆ ಬೇರೆ ವ್ಯವಸ್ಥೆ ಮಾಡುವ ಬಗ್ಗೆ ವಿನಂತಿಸಿಕೊಂಡರೂ ಪರಮೇಶ ಫ್ಯಾಕ್ಟರಿ ಬಂದ್ ಮಾಡಲು ಅಥವಾ ಯೂನಿಟ್ ಹಾಕಲು ಒಪ್ಪದಿದ್ದಾಗ ಡಾ// ಜಯಂತ್ ಆರೋಗ್ಯಮಂತ್ರಿಗಳಿಗೆ ನೀರಿನ ಲ್ಯಾಬ್ ರಿಪೋರ್ಟ್ ನೊಂದಿಗೆ ವಿಚಾರ ತಿಳಿಸುತ್ತೇನೆ ಎಂದಾಗ ಪರಮೇಶ ಹುಷಾರಾಗುತ್ತಾನೆ, ಡಾ// ಜಯಂತ್ ಗೆ ಬುದ್ದಿ ಕಲಿಸಬೇಕೆಂದು ಭಾವಿಸುತ್ತಾನೆ .
ಜಗನ್ನಾಥ ಪರಮೇಶನ ತಮ್ಮ. ಡಾ/ಜಯಂತ್ ರಿಗೆ ಸ್ವಲ್ಪ ಬುದ್ದಿ ಹೇಳು ಎಂದು ಅಣ್ಣ ಪರಮೇಶ್ ಅವರ ಬಳಿ ಕಳಿಸುತ್ತಾನೆ . ಬುದ್ಧಿಹೇಳಲೆಂದು ಬಂದವ ಡಾ//ಜಯಂತ್ ರ ನೇರ ಹಾಗೂ ಖಡಾಖಂಡಿತವಾದ ಉತ್ತರಕ್ಕೆ ಉಗ್ರನಾಗುತ್ತಾನೆ.ಮಾತಿಗೆ ಮಾತು ಬೆಳೆದು ಡಾ/ ಜಯಂತ್ ರಿಗೆ ಮನ ಬಂದಂತ ಹೊಡೆಯುತ್ತಾನೆ,ಕಾಲಿಂದ ಒದೆಯುತ್ತಾನೆ,ಅಸಹಾಯಕರಾದ ಡಾ// ಜಯಂತ್ ನೋವಿನಿಂದ ಬಿದ್ದು ಹೊರಳಾಡುತ್ತಿರಬೇಕಾದರೆ ಜಗನ್ನಾಥನ ಕಣ್ಣು ಗೊಂಬೆಯಂತಹ ಅವರ ಮಗಳು ರೂಪಾಳತ್ತ ಬೀಳುತ್ತದೆ .ಆಕೆಯನ್ನು ನೋಡಿ ಜೊಲ್ಲು ಸುರಿಸುತ್ತಾನೆ. ಜಗನ್ನಾಥ್ ಗೆ ಈಗ ಜಯಂತ್ ರಿಗಿಂತಲೂ ರೂಪಾಳನ್ನು ಅನುಭವಿಸುವುದು ಮುಖ್ಯವಾಗಿ ಕಾಣುತ್ತದೆ..ತನ್ನ ಜೀವವಾದ ಮಗಳು ಅವನ ಮುಷ್ಟಿಯಲ್ಲಿ ಸಿಲುಕಿ ನಲುಗುತ್ತಿರುವುದನ್ನು ಕಂಡ ಡಾ// ಜಯಂತ್ ರಲ್ಲಿ ರೋಷ ಉಕ್ಕುತ್ತದೆ. ಈಗಾಗಲೇ ಜಗನ್ನಾಥನಿಂದ ಪೆಟ್ಟು ತಿಂದು ಏಳಲಾಗದ ಸ್ಥಿತಿಯಲ್ಲಿ ಅವರಿದ್ದರೂ ತನ್ನ ಮಗಳ ಬಟ್ಟೆಯ ಮೇಲೆ ಅವನು ಕೈ ಹಾಕಿದಾಗ ಅವರಲ್ಲಿ ಅದೆಂತಹುದೋ ಅಸಾಧಾರಣ ಶಕ್ತಿ ಬರುತ್ತದೆ..ಏಳುತ್ತ ಬೀಳುತ್ತಾ ಜಗನ್ನಾಥನಿಂದ ಮಗಳನ್ನು ಬಿಡಿಸಲು ಮುಂದಾಗುತ್ತಾರೆ. ತನ್ನ ಬಳಿಬಂದ ಅವರನ್ನು ಚೂರಿಯಿಂದ ಆತ ಭಾರಿ ಭಾರಿ ಇರಿದರೂ ಆತನಿಂದ ಹೇಗೋ ತನ್ನ ಮಗಳನ್ನು ಬಿಡಿಸಿ ಆತನನ್ನುನಾಯಿಯಂತೆ ಎಳೆಯುತ್ತ ಮಾಳಿಗೆಯಿಂದ ನೇರವಾಗಿ ಕೆಳಗಿನ ರಸ್ತೆಗೆ ನೂಕಿದ ನಂತರ ಅವರು ತನ್ನ ಪ್ರಾಣ ಬಿಡುತ್ತಾರೆ ಜಗನ್ನಾಥನನ್ನು ಮೇಲಿಂದ ಕೆಳಗೆ ತಳ್ಳಿದ ಪರಿಣಾಮವಾಗಿ ಜಗನ್ನಾಥನ ಎರಡೂ ಕಾಲುಗಳು ಜಜ್ಜಿಹೋಗಿದ್ದವು .
ಇತ್ತ “ ಜಯಂತಣ್ಣನ ಕೊಲೆ ಹೇಗೆ ಆಯಿತು?” ಎಂಬ ವಿಷಯ ತಿಳಿಯಲು ಬಂದ ಮುಕುಂದ ಬಾಡುವಿನಿಂದ ಎಲ್ಲಾ ವಿಷಯವನ್ನೂ ಸಂಗ್ರಹಿಸುತ್ತಾನೆ . ಏನೋ ನಿರ್ಧರಿಸಿದವನಂತೆ ಜಗನ್ನಾಥ ಸೇರಿಕೊಂಡಿದ್ದ ಅದೇ ಊರಿನ ಹೆಲ್ತ್ ಹೆಲ್ತ್ ಸೆಂಟರ್ ಗೆ ಹೋಗುತ್ತಾನೆ. ಮಗಳು ರೂಪ, ಇನ್ಸ್ಪೆಕ್ಟರ್ ಶಿವಣ್ಣ, ಬಾಡು ಎಲ್ಲರೂ ಅಚ್ಚರಿ ಪಡುವಂತೆ ಜಗನ್ನಾಥನ ಜೀವ ಉಳಿಸಲು ಮುಂದಾಗುತ್ತಾನೆ ಡಾ/ಮುಕುಂದ್ .ಆ ಸಂಧರ್ಭದಲ್ಲಿ ಆ ಹೆಲ್ತ್ ಸೆಂಟರ್ ನಲ್ಲಿ ಅವನ ಚಿಕಿತ್ಸೆಗೆ ಸರಿಯಾದ ವೈದ್ಯರುಗಳಿರಲಿಲ್ಲ.ತಾನು ಅವನನ್ನು ಟ್ರೀಟ್ ಮಾಡುತ್ತೇನೆ ಎಂದ ಡಾ// ಮುಕುಂದ್ ಓದುಗರನ್ನೂ ಅಚ್ಚರಿಗೊಳಿಸುತ್ತಾನೆ.
ತನ್ನ ಜಯಂತಣ್ಣನ ಸಾವಿಗೆ ಕಾರಣನಾದ ಜಗನ್ನಾಥನನ್ನು ಮುಕುಂದ್ ಏಕೆ ಬದುಕಿಸುವ ಪ್ರಯತ್ನ ಮಾಡುತ್ತಿದ್ದಾನೆ ಎಂದೂ ಓದುಗನೂ ತಲೆಕೆರೆದುಕೊಳ್ಳುತ್ತಾನೆ. ಅವನನ್ನು ಪರೀಕ್ಷಿಸಿದ ಡಾ// ಮುಕುಂದ್ “ ಎರಡೂ ಕಾಲ್ಗಳಿಗೆ ರಕ್ತಸಂಚಾರ ನಿಂತು ಕಾಲುಗಳು ಕೊಳೆಯಲು ಪ್ರಾರಂಭವಾಗಿದೆ.ಕಾಲುಗಳೆರಡನ್ನು ಕತ್ತರಿಸಬೇಕು, ಇಲ್ಲವಾದಲ್ಲಿ ಗ್ಯಾಂಗ್ರೀನ್ ಹರಡಿ ಜೀವಕ್ಕೇ ಅಪಾಯ.ತಕ್ಷಣ ಆಪರೇಷನ್ ಮಾಡಬೇಕು” ಎಂದಾಗ ಎಲ್ಲರಿಗೂ ಅಚ್ಚರಿ !! ಇದರ ಹಿಂದಿನ ಗೂಡಾರ್ಥಗಳನ್ನು ಲೇಖಕರು ಕುತೂಹಲಕಾರಿಯಾಗಿ ತೆರೆದಿಟ್ಟಿದ್ದಾರೆ .ಇದೊಂದು ಕಾದಂಬರಿಯ ಅಂತಿಮ ಘಟ್ಟ, ಹಾಗು ಕೊನೆಯ ಅತೀ ಮುಖ್ಯ ಘಟ್ಟ. ಏನೂ ವ್ಯವಸ್ಥೆ ಇರದ ಆಸ್ಪತ್ರೆಯಲ್ಲಿ ಎಲ್ಲವನ್ನು ಹೊಂದಾಣಿಸಿಕೊಂಡು “, ನಾನೊಬ್ಬ ಡಾಕ್ಟರ್ ,ನನ್ನ ವೈರಿಯನ್ನು ಸಾಯಲು ಬಿಡಲಾರೆ ಎನ್ನುವ ವೈದ್ಯ ಧರ್ಮವನ್ನು ಅನುಸರಿಸಿದ ಡಾ// ಮುಕುಂದ್ ನ ಈ ಆಪರೇಷನ್ನ ಮರ್ಮವೇನು ?ಇದು ರೂಪಾಳಿಗಾಗಲಿ,ಬಾಡುವಿಗಾಗಲಿ.ಇನ್ಸ್ಪೆಕ್ಟರ್ ಶಿವಣ್ಣನೀಗಾಗಲಿ ಅಥವಾ ಊರಿನ ಡಾ// ಜಯಂತ್ ರ ಯಾವುದೇ ಅಭಿಮಾನಿಗಳಿಗಾಗಲಿ ಬಹುಶ: ತಿಳಿಯಲೇ ಇಲ್ಲ.
ಆಪರೇಷನ್ ಮಾಡಿ ಅವನ ಎರಡು ಕಾಲೂ ಕತ್ತರಿಸಿದ ಬಳಿಕ ಡಾ/ ಮುಕುಂದ್ ಜಗನ್ನಾಥನ ಕಿವಿಯಲ್ಲಿ ಅದೇನೋ ಉಸುರಿದ್ದ.ಒಬ್ಬ ರೋಗಿಯ ಕಿವಿಯಲ್ಲಿ ಉಸುರುವ ಅಗತ್ಯ ವೈದ್ಯನಿಗೇನಿದೆ? ಎಂದು ಅಲ್ಲಿದ್ದ ನರ್ಸ್ ಯೋಚಿಸಿದ್ದು ಸಹಜ !! ಇದು ಕಾದಂಬರಿಯ ಸಸ್ಪೆನ್ಸ್. “ನನ್ನ ತಂದೆಯನ್ನು ಕೊಂದ ಪಾಪಿಯ ಆಪರೇಷನ್ ಮಾಡಿ ಯಾಕೆ ಬದುಕಿಸಿದಿರಿ? ಅಂಕಲ್ “ಎನ್ನುವ ರೂಪಾಳ ಪ್ರಶ್ನೆಗೆ “ ಜಯಂತಣ್ಣನಂತಹ ವ್ಯಕ್ತಿಯನ್ನು ಕೊಂದ ಪಾಪಿಗೆ ಅಷ್ಟು ಸುಲಭವಾಗಿ ಸಾಯುವಂತಹ ಶಿಕ್ಷೆಯೇ? “ಎಂದು ಉತ್ತರವಿತ್ತ ಡಾ// ಮು ಕುಂದ್ ನ ಮನಸ್ಸಿನಲ್ಲಿದ್ದ ವಿಚಾರ ಏನು?
ಆಪರೇಷನ್ ಮುಗಿದ ನಂತರ ಡಾ// ಮುಕುಂದ್ ಜಗನ್ನಾಥನ ಕಿವಿಯಲ್ಲಿ "ಹಲ್ಕಾ ,ಸುವಾರ್ ನನ್ನ ಮಗನೆ,ಜಯಂತಣ್ಣನನ್ನು ತುಳಿದ ನಿನ್ನ ಕಾಲುಗಳ ಶಕ್ತಿಯ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುತಿದ್ದಿ ಅಲ್ಲವೇನು ? ನೋಡಲ್ಲಿ ,ಆ ಎರಡು ಕಾಲುಗಳನ್ನು ಕತ್ತರಿಸಿ ಬಿಸಾಕಿದ್ದೇನೆ,ನ್ಯಾಯಾಲಯ ನಿನ್ನನ್ನು ಶಿಕ್ಷಿಸದೆ ಬಿಡಬಹುದು .ಆದರೆ ಜಯಂತಣ್ಣನ ಶಿಷ್ಯ ನಿನ್ನನ್ನು ಸುಮ್ಮನೆ ಬಿಡುತ್ತಾನೆ ಎಂದೆ ಣಿಸಿದ್ದೀಯಾ? ಅನುಭವಿಸು ಪಾಪಿ " ಎಂದದ್ದು ಬರೀ ಜಗನ್ನಾಥನಿಗೆ ಮಾತ್ರ ಗೊತ್ತಿದೆ. ಎಂದು ಲೇಖಕರು ಇಲ್ಲಿ ಡಾ//ಮುಕುಂದ್ ನ ಮನದಾಳದ ಮಾತನ್ನು ಬೆಚ್ಚಿ ಬೀಳುವಂತೆ ಎತ್ತಿಟ್ಟಿದ್ದಾರೆ!!
ಇಂದು ಜಗನ್ನಾಥ “ಕಾಲಿಲ್ಲದ ನನ್ನನ್ನು ಸಾಯಿಸಿ “ ಎಂದು ಬೊಬ್ಬೆ ಹಾಕಿದರೂ ಯಾರೂ ಸಾಯಿಸುವವರಿಲ್ಲ. ಡಾ// ಜಯಂತ್ ರನ್ನು ತುಳಿದ ಆ ಕಾಲುಗಳನ್ನು ಕತ್ತರಿಸಿಕೊಂಡು ಜೀವಂತ ಶವವಾಗಿ ಬದುಕಬೇಕಿದೆ. ಆ ರೀತಿ ಮಾಡಿ ತನ್ನ ಪಾಲಿಗೆ ದೇವರಂತಿದ್ದ ಡಾ// ಜಯಂತ್ ರ ಕೊಲೆಗಾರನಿಗೆ ಕೊಟ್ಟ ಶಿಕ್ಷೆ ಡಾ/ಮುಕುಂದ್ ನದ್ದು. ಮುಕುಂದ್ ಮಾಡಿದ ಈ ಕೆಲಸ ಸರಿಯೇ ತಪ್ಪೇ ಎಂಬ ನಿರ್ದಾರ ಲೇಖಕರು ಓದುಗರಿಗೆ ಬಿಟ್ಟಿದ್ದಾರೆ.
ಹಾಗೆ ಯೋಚಿಸುವಾಗ ಒಬ್ಬ ವೈದ್ಯನಾಗಿ ಡಾ// ಮುಕುಂದ್ ತನ್ನ ವೈದ್ಯ ವೃತ್ತಿಗೆ ಚ್ಯುತಿ ತರದ ಕೆಲಸ ಮಾಡಿದ್ದಾ ನೆ. ಒಬ್ಬ ವೈದ್ಯನಾಗಿ ತನ್ನ ಕಣ್ಣೆದುರೇ ರೋಗಿಯೊಬ್ಬ ಸಾಯುವುದನ್ನು ಬಿಡದೆ ಇಡೀ ದೇಹವನ್ನೆಲ್ಲ ಗ್ಯಾಂಗ್ರೀನ್ ಆವರಿಸಿಕೊಂಡು ನಾಲ್ಕೈದು ದಿನಗಳೊಳಗೆ ಸಾಯಬೇಕಿದ್ದ ವನನ್ನು ತುರ್ತು ಆಪರೇಷನ್ ಮಾಡಿ, ಅವನ ಕಾಲು ಕತ್ತರಿಸಿ ,ಸಾಯದಂತೆ ಬದುಕಿಸಿದ್ದಾನೆ.ತನ್ನ ವೈದ್ಯ ಧರ್ಮ ನಿಭಾಯಿಸಿದ್ದಾನೆ.
ಇನ್ನೊಂದು ಮಗ್ಗುಲಲ್ಲಿ ಯೋಚಿಸುವಾಗ ಒಬ್ಬ ಮಹಾನ್ ವೈದ್ಯ ಡಾ// ಜಯಂತ್ ಕೊಲೆಗಾರ ಇಷ್ಟು ಬೇಗ ಸಾಯುವುದು ಆತನಿಗೆ ಬೇಡವಾಗಿತ್ತು.ಆತ ಇನ್ನಷ್ಟು ದಿನ ಬದುಕಬೇಕು.ದೇವತಾ ಮನುಷ್ಯನೊಬ್ಬನನ್ನು ಕೊಂದು ತಾನು ತಪ್ಪು ಮಾಡಿಬಿಟ್ಟೆ ಎಂದುಕೊಂಡು ಮಲಗಿದ್ದಲ್ಲೇ ಹೊರಳಾಡಿ ಕೊರಗಬೇಕು.ಅವರನ್ನು ಒದೆದು ಒದೆದು ಸುಸ್ತಾದ ಆ ಕಾಲುಗಳೇ ಇಂದು ತನ್ನಲ್ಲಿ ಇಲ್ಲವಲ್ಲಾ ಎಂದು ಅಳಿದುಳಿದ ತನ್ನ ಅರ್ಧ ಕಾಲುಗಳನ್ನು ಸವರುತ್ತ ಆತ ದಿನೇ ದಿನೇ ಸಾಯಬೇಕು ,ತಾನು ಮಾಡಿದ ತಪ್ಪಿಗಾಗಿ ಜೀವನ ಪರ್ಯಂತ ಕಣ್ಣೀರು ಹಾಕಬೇಕು.ಅದಕ್ಕಾಗಿ ಡಾ// ಮುಕುಂದ್ ಅವಸರವಸರವಾಗಿ ಆಪರೇಷನ್ ಗೆ ಮುಂದಾದದ್ದು .ಹಾಗಾಗಿ ಈ ಕಥೆಯ ಅಂತ್ಯವನ್ನು ತಿಳಿಯುವಾಗ ಡಾ/ ಮುಕುಂದ್ ಎರಡು ವಿಧದಲ್ಲೂ ಗೆದ್ದು ಬಂದಿದ್ದಾನೆ. ವೈದ್ಯನಾಗಿ ತನ್ನ ಕರ್ತವ್ಯವನ್ನು ಕೂಡ ಮಾಡಿದ ಜೊತೆಗೆ .ತನ್ನ ಪಾಲಿನ ದೇ ವರಾದ ಜಯಂತರ ಕೊಲೆಗಾರನಿಗೆ ತಕ್ಕ ಶಿಕ್ಷೆ ಕೂಡ ನೀಡಿದ .
ಕೊನೆಯದಾಗಿ ಜಯಂತಣ್ಣ ತನಗಾಗಿ ಬರೆದಿಟ್ಟ ಪತ್ರವನ್ನೂ ಓದಿ ಅವರ ಮಗಳ ಎಲ್ಲ ಜವಾಬ್ದಾರಿಯನ್ನು ಹೊತ್ತುಕೊಳ್ಳುವ ನಿರ್ಧಾರಕ್ಕೆ ಬಂದ ಡಾ// ಮುಕುಂದ್ ಕೂಡ ಜಯಂತಣ್ಣನಂತೆ ಇಲ್ಲಿ ಮಹಾನ್ ಆಗಿ ಕಂಡುಬರುತ್ತಾನೆ.
ಡಾ// ರಂಜಿತ್ ಕುಮಾರ್ ಅವರ ಬರಹದ ಶೈಲಿ ಇತರ ಇತರ ಬರಹಗಾರರಿಗಿಂತ ಭಿನ್ನವಾಗಿದೆ. ಓದುಗನನ್ನು ಯಾವ ರೀತಿ ತನ್ನ ಬರಹಗಳೊಳಗೆ ಸೆಳೆದಿಟ್ಟುಕೊಳ್ಳಬೇಕು ಎಂಬ ಬರಹದ ಕಲೆ ಅವರಿಗೆ ಸಿದ್ದಿಸಿದೆ .ಹೀಗಾಗಿ ಈ ಕಾದಂಬರಿ ಎಲ್ಲಿಯೂ ನೀರಸವಾಗದೆ ಕೊನೆಯವರೆಗೂ ನಿರಾಯಾಸವಾಗಿ ಓದಿಸಿಕೊಂಡು ಹೋಗುತ್ತದೆ .ವೈದ್ಯ ಕಾಂಬರಿಕಾರರ ಈ ಕೃತಿಯನ್ನೊಮ್ಮೆ ಕನ್ನಡದ ಜನತೆ ಓದಿ ಅವರ ಬರಹದ ಸಾಮರ್ಥ್ಯವನ್ನು ಅರಿತುಕೊಳ್ಳಬೇಕು,ಡಾ// ಬಿ.ಮ್.ಹೆಗ್ಡೆಯವರು ಹೇಳುವಂತೆ ಈ ಕಾದಂಬರಿ ಖಂಡಿತ ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನವಾಗಬೇಕು..ಅವರ ಬರಹಗಳ ಶೈಲಿ ಗೆ ಕನ್ನಡದ ಜನತೆ ತಲೆದೂಗಬೇಕು ಎನ್ನುತ್ತಾ ಸದ್ಯ ನಿವೃತ್ತ ಜೀವನ ನಡೆಸುತ್ತಿರುವ ಡಾ//ರಂಜಿತ್ ಕುಮಾರ್ ಶೆಟ್ಟಿ ಅವರಿಂದ ಇನ್ನಷ್ಟು ಇಂತಹ ಅಪರೂಪದ ಕೃತಿಗಳು ಹೊರಬರಲೆಂದು ಆಶಿಸುತ್ತೇನೆ.
- ಶ್ರೀಮತಿ ಶಾರದಾ ಎ. ಅಂಚನ್ ಕೊಡವೂರು
ನವಿ-ಮುಂಬೈ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
Yes it is an unputdownable book,enjoyed reliving our college days and life thru this book...
ಪ್ರತ್ಯುತ್ತರಅಳಿಸಿWritten in simple language and easy flow...waiting for the movie vertion.