ಅರೆ ಕ್ಷಣದ ಮೌನವನು
ಉಡುಗೊರೆಯಾಗಿ ಕೊಟ್ಟು ನೋಡು
ನೂರು ಜನುಮಗಳ
ಕಥೆ ಹೇಳುವೆ
ಅದೆಂಥಾ ಶಕ್ತಿಯೋ
ಆ ದಿವ್ಯ ಮೌನಕೆ
ಬಿಸಿಯುಸಿರ ಬಸಿದು ಗಾವುದ ದೂರ
ಮೇಘ ಸಂದೇಶ ರವಾನಿಸಿ ಬಿಡುತ್ತದಲ್ಲಾ
ಅಲ್ಲಿಂದ ತೇಲಿ ಬರುವ ನಿಟ್ಟುಸಿರಿಗೆ
ಅವೆಷ್ಟು ಅರ್ಥಗಳಿವೆಯೋ
ಕಲ್ಪಿಸಬಲ್ಲೆ
ಮೌನದೊಂದಿಗೆ ಮಿಳಿತವಾಗಿ
ಬಂದು ತಾಕುವ ಅಳುದನಿಗೆ
ಕಂಗಳು ಕೊಳವಾಗದೇನು
ಅದು ಅಳುವಲ್ಲ ಗಾಳಿಯ ಝೆoಕಾರ
ಎನ್ನದಿರು
ಎಲ್ಲೋ ಗೂಡುಕಟ್ಟುವ ಆಸೆ ತೊರೆದು
ಹೆಜ್ಜೆಯಿಡು ಜೊತೆಯಾಗಿ
ಪಯಣಿಸಬಲ್ಲೆ
ಮಗ್ಗುಲಲ್ಲೇ ಕುಳಿತ ಮೌನ
ಮತ್ತೂ ಕೊಲ್ಲುವುದಲ್ಲೋ
ಮೊದಲ ಮಾತಿನ ಸರದಿ ಯಾರದೋ
ಶಿಥಿಲಗೊಂಡ ಇತಿಹಾಸಕ್ಕೆ
ಕೊಳ್ಳಿಯಿಟ್ಟರೆ ಮೌನ ಮಾತಾಗದು
ನಾಳೆಯದೊಂದು ಕನಸು
ಉಳಿದುಕೊಂಡಿದೆಯಲ್ಲಾ
ಆ ನಾಳೆಗೆ ಮಾತು ಕಲಿಸು
ಅದು ಮಾತಾದರೆ
ಬದುಕಬಲ್ಲೆ
ಅರೆ ಕ್ಷಣದ ಮೌನವನು
ಉಡುಗೊರೆಯಾಗಿ ನೀಡು
ಕೊನೆಯುಸಿರ ಕ್ಷಣವನ್ನೂ
ನಿನ್ನ ಹೆಸರಿಗೆ ಬರೆದಿಡುವೆ.
- ಶ್ರೀಮತಿ ಪ್ರತಿಮಾ, ಹೆಚ್. ಎಸ್
ಶಿಕ್ಷಕಿ. ಕಂಚಮರನ ಹಳ್ಳಿ. ಹಾಸನ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9113036287 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ