ಬುಧವಾರ, ಆಗಸ್ಟ್ 17, 2022

ಮೊದಲು ನೆರೆಹೊರೆಯವರನ್ನು ಪ್ರೀತಿಸು (ಲೇಖನ) - ಎಚ್.ಡಿ.ಹೊಗರಾನಾಳ.

ಮನುಷ್ಯ ತಾನು ಬೆಳೆಯುತ್ತಿದ್ದಂತೆ ಹಲವಾರು ಆಸೆ ಆಕಾಂಕ್ಷೆಗಳನ್ನು  ಹೊಂದುತ್ತಾ ಸಾಗುತ್ತಾನೆ. ಅವನ ಆಸೆಗಿಂತ ದುರಾಸೆಯೇ ದುಪ್ಪಟ್ಟಾಗಿರುತ್ತದೆ. ಮಾನವನ ಬುದ್ಧಿ ಮಟ್ಟ ಮತ್ತು ಅವನ ಗ್ರಹಿಕೆ, ವಿಚಾರ ಮಟ್ಟ ಹೆಚ್ಚಿದಂತೆಲ್ಲಾ ತನ್ನನ್ನು ಅಷ್ಟೇ ಅಲ್ಲದೇ ತಾನಿರುವ ಪರಿಸರವನ್ನೇ ಮರೆತು ಬದುಕುವ ಹಲವಾರು ಕ್ಷಣಗಳು ಬರುತ್ತವೆ. ಹೀಗೆ ಮಾನವ ತನ್ನ ಬೌದ್ಧಿಕ ಮತ್ತು ಮಾನಸಿಕವಾಗಿ ಬದಲಾಗುತ್ತಿದ್ದಂತೆ ಹಾಗೂ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಮತ್ತು ಆರ್ಥಿಕವಾಗಿ ಬೆಳೆಯುತ್ತಿದ್ದಂತೆ ಮಾನವ ತನ್ನ ಮೂಲ ನೆಲೆಯನ್ನು ತೊರೆದು ಬದುಕುವಂತಹ ಹಲವಾರು ಸನ್ನಿವೇಶಗಳು ಕಾಣಸಿಗುತ್ತವೆ. ಹೇಗೆಂದರೆ ಮಾನವ ತಾನು ಎಲ್ಲಾ ಕ್ಷೇತ್ರದಲ್ಲಿ ಬಲಿಷ್ಠನಾಗುತ್ತಿದ್ದಂತೆ ವಿವಿಧ ತೆರನಾದ ಮೌಢ್ಯತೆಗಳಿಗೆ ಮತ್ತು ಅವೈಜ್ಞಾನಿಕ ವಿಚಾರಗಳಿಗೆ ತುತ್ತಾಗಿ ಅವುಗಳನ್ನು ಪಾಲಿಸಲೇಬೇಕಾದಂತಹ ನಿಯಮಗಳಿಗೆ ಅಂಟಿಕೊಳ್ಳುತ್ತಾನೆ.
ತನ್ನ ಸ್ವಇಚ್ಛೆಯ ನಿರ್ಧಾರಗಳಿಗಿಂತ ಇತರರ ನಿರ್ಧಾರಗಳಿಗೆ ನಿಯಮಗಳಿಗೆ ನೀತಿಗಳಿಗೆ ಬಲಿಯಾಗಿ ಪರರ ಇಷ್ಟಕ್ಕೆ ಸ್ಪಷ್ಟ ಮತ್ತು ಖಚಿತವಾದ, ಉಚಿತವಾದ ಅವಲಂಬನೆ ಯಾವಾಗಲೂ ಎಲ್ಲರಲ್ಲೂ ಇಂದು ಎದ್ದು ಕಾಣುವಂತಿದೆ. ಹೇಗೆಂದರೆ ಮಾನವನಿಗೆ ಮೊದಲು ಮಾನವೀಯತೆಯಲ್ಲಿ ಮನುಷ್ಯತ್ವದಲ್ಲಿ ಮಾನವೀಯ ವಿಚಾರಗಳಲ್ಲಿ ಹೆಚ್ಚು ಆಸಕ್ತಿಯಿರಬೇಕು ಮತ್ತು ಅಳವಡಿಸಿಕೊಳ್ಳುವ ಅನುಸರಿಸುವ ಆತ್ಮವಲೋಕನ ಪ್ರತಿಯೊಬ್ಬರಲ್ಲಿರಬೇಕು. ಆದರೇ ಪ್ರಸ್ತುತ ದಿನಮಾನಗಳಲ್ಲಿ ಪ್ರತಿಯೊಬ್ಬರ ಬದುಕು ತಮ್ಮಿಷ್ಟದಂತೆ ಸಾಗದೇ ಪರರ ಕೈಗೊಂಬೆಯಾಗಿದೆ. ತಮ್ಮ ಬದುಕನ್ನು ತಾವೇ ಮುನ್ನೆಡೆಸುವಂತಹ ಮೂಲ ಅಂಶಗಳನ್ನು ತಾವೇ ರೂಪಿಸಿಕೊಳ್ಳಬೇಕು ಒಳಿತಿನ ಮಾರ್ಗದಲ್ಲಿ ತಾವೇ ನಡೆಯಬೇಕು ಆದರೇ ಇಂದು ಅದೆಲ್ಲವನ್ನು ಬಿಟ್ಟು ಪರರ ಆಶಯದಂತೆ ನೀತಿ ನಿಯಮಗಳಂತೆ ಸ್ವಂತ ನಿರ್ಧಾರವನ್ನು ಬದಿಗಿಟ್ಟು ಯರವರ ಮಾರ್ಗವೇ ಬಹು ಆಕರ್ಷಣೀಯವಾಗಿ ತೋರುವಂತಾಗಿದೆ. ಮನುಷ್ಯನಿಗೆ ಒಂದು ಭಾವ ಬದುಕು ಮತ್ತು ಬಯಕೆ ಭರವಸೆ ಎನ್ನುವಂತಹ ಅಂಶಗಳು ಪ್ರತಿಯೊಬ್ಬರಲ್ಲಿ ಸೇರಿರುವುದು ಸಹಜ ಇದರ ಜೊತೆಗೆ ಪ್ರೀತಿ-ಭಕ್ತಿ, ಪ್ರೇಮ - ಮಮತೆ, ಸ್ನೇಹ -ಸಂಬಂಧ, ಕರುಣೆ-ಸಹಕಾರ ಮನೋಭಾವ ಹೀಗೆ ಹತ್ತಾರು ಬಂಧನಗಳು ಪ್ರತಿಯೊಬ್ಬ ಮಾನವನ ಬದುಕಿನಲ್ಲಿ ಕಾಣುತ್ತವೆ. ಹೀಗಿರುವಾಗ ನಾವು ದಿನನಿತ್ಯ ವಾಸಿಸುವ ಸ್ಥಳವನ್ನು ಅಥವಾ ನಾವು ವಾಸಿಸಲು ಅನುವುಮಾಡಿಕೊಟ್ಟ ಪ್ರಕೃತಿಯನ್ನು, ಪರಿಸರವನ್ನು ಪ್ರೀತಿಸಲು ಅಥವಾ ಆರಾಧಿಸಲು ಮತ್ತೊಬ್ಬರ ಸಲಹೆ ಸಹಕಾರಬೇಕೇ? ಪ್ರತಿಯೊಬ್ಬ ಮನುಷ್ಯನಿಗೆ ಮೊದಲು ಪರಿಸರದ ಕಾಳಜಿ ಮತ್ತು ಸಂರಕ್ಷಣೆಯ ಬಗ್ಗೆ ಅರಿವಾಗಬೇಕಿದೆ ಹಾಗೂ ನಾವು ಮೊದಲು ದೇಶವನ್ನು ಪ್ರೀತಿಸುವುದರ ಜೊತೆಗೆ ನಮ್ಮ ಸುತ್ತಲಿನ ಪ್ರಕೃತಿಯನ್ನು, ಪ್ರಕೃತಿಯಲ್ಲಿ ಜೀವಿಸುವ ಪ್ರತಿಯೊಂದು ಜೀವಿಯನ್ನು ಮರ-ಗಿಡಗಳನ್ನು, ಪ್ರಾಣಿ-ಪಕ್ಷಿಗಳನ್ನು ಅಷ್ಟೇ ಅಲ್ಲದೇ ಮಾನವ ಸಮುದಾಯದ ಪ್ರತಿಯೊಂದು ಜನಾಂಗವನ್ನು ಜಾತಿ-ಧರ್ಮ, ವರ್ಣ-ಲಿಂಗವೇನ್ನದೆ ನಾವೆಲ್ಲರೂ ಸಮಾನರೆಂಬ ಭಾವ ಪ್ರತಿಯೊಬ್ಬರಲ್ಲಿ ಮೂಡಬೇಕಿದೆ, ಅವರಿವರೆನ್ನದೇ ಎಲ್ಲರನ್ನೂ ಸತ್ಕರಿಸುವ ಸರಳ ಮಾನವೀಯ ಗುಣಗಳು ಮೊದಲು ಮಾನವನಲ್ಲಿ ಮೂಡಬೇಕಿದೆ. ಭಯ-ಭಕ್ತಿ ದೇಶಕ್ಕಷ್ಟೇ ಅಲ್ಲದೇ ಮಾನವೀಯತೆಯ ಮೌಲ್ಯಯುತವಾದ ಬದುಕಿಗೂ ಅವಶ್ಯವಾಗಿ ಬೇಕಾಗಿದೆ. ಮೊದಲು ನಾವು ನಮ್ಮ ಸುತ್ತಲಿನ ಪ್ರತಿಯೊಬ್ಬ ಮನುಷ್ಯನೊಂದಿಗೆ ಸ್ನೇಹ-ಸಂಬಂಧ, ಪ್ರೀತಿ-ಪ್ರೇಮ, ಕರುಣೆ ಮನೋಭಾವ ಬೆಳೆಸಿಕೊಳ್ಳಬೇಕು ಹಾಗೂ ನಮ್ಮ ಸುತ್ತಲೂ ನೆರೆದ ಸಂಪದ್ಭರಿತವಾದ ಪ್ರಕೃತಿಯ ಮಡಿಲನ್ನೂ ಕೂಡ ಪ್ರೀತಿಸಿ ಕಾಪಾಡುವುದು ಪ್ರತಿಯೊಬ್ಬರ ಮೊದಲ ಕರ್ತವ್ಯವಾಗಿದೆ.
ದೇಶ ಪ್ರೇಮ ಎಷ್ಟು ಮುಖ್ಯವೋ ಮಾನವೀಯ ಪ್ರೇಮವೂ ಅಷ್ಟೇ ಮುಖ್ಯವಾಗಿದೆ ಏಕೆಂದರೆ ದೇಶ ಪ್ರೇಮ ಯಾವ ವ್ಯಕ್ತಿಯಲ್ಲಿ ಇರುವುದಿಲ್ಲ ಪ್ರತಿಯೊಬ್ಬ ಮಾನವನ ದೇಹದ ರೋಮರೋಮಗಳಲ್ಲಿ ನೆಲೆಸಿದೆ ಹೀಗಿರುವಾಗ ನಾವು ಮೊದಲು ನಮ್ಮ ನೆರೆಹೊರೆಯವರನ್ನು ಅವರಿವರೆನ್ನದೇ, ಆ ಜಾತಿ, ಆ ಧರ್ಮವೇನ್ನದೆ ಪ್ರತೀ ಘಳಿಗೆಯಲ್ಲಿ  ಒಟ್ಟಾಗಿ ಕೂಡಿ ಬದುಕುವ ಕೂಡಿ ನಲಿಯುವ ಮನೋಭಾವ ಪ್ರೀತಿ ಮಮತೆ ಸ್ನೇಹ ಸಂಬಂಧ ಕ್ಕೆ ಹಿರಿದಾದ ಸೇತುವೆ ಏರ್ಪಡಬೇಕಿದೆ. ನಮ್ಮ ಸುತ್ತಲಿನ ಜನರನ್ನೇ ಮಾತನಾಡಿಸದ, ಮತ್ತೊಬ್ಬರ ಕಷ್ಟ-ಸುಖಗಳಲ್ಲೇ ಭಾಗಿಯಾಗದ, ಸರಿ-ತಪ್ಪುಗಳಲ್ಲಿ ಭಯ ಭಕ್ತಿ ತೋರದ ಇಂತಹ ಅಂಶಗಳಿಗಿಲ್ಲದ ಭಕ್ತಿ ಭಾವ ಅದೆಷ್ಟು ಸರಿ? ದೇಶ ಸ್ವತಂತ್ರ ಪಡೆದಿದ್ದು ಮತ್ತು ಸ್ವಾತಂತ್ರ್ಯ ಪಡೆಯಲು ನಡೆದ ಯುದ್ಧ ಸಮರಗಳು, ತ್ಯಾಗ ಬಲಿದಾನಗಳು ಮತ್ತು ಸ್ವಾತಂತ್ರ್ಯ ಪಡೆಯುವಲ್ಲಿ ಭಾರತೀಯರ ಶೌರ್ಯ ಎಷ್ಟಿತ್ತು ಎನ್ನುವುದು ಇಡೀ ಜಗತ್ತಿಗೆ ತಿಳಿದ ವಿಚಾರ ಮತ್ತು ವಿಶೇಷವಾಗಿ ಕಳೆದ 74 ವರ್ಷಗಳಿಂದ ಸ್ವಾತಂತ್ರ್ಯತ್ಸವ ದಿನಾಚರಣೆಯನ್ನು ವಿಭಿನ್ನ ರೀತಿಯಲ್ಲಿ ಅತೀ ವಿಜೃಂಭಣೆಯಿಂದ ಆಚರಿಸಿಕೊಂಡು ಬಂದಿರುವುದನ್ನು ಎಲ್ಲರೂ ಮನಗಂಡಿರುವ ವಿಚಾರ ಹಾಗೂ ಇಷ್ಟು ದಿನ ರಾಷ್ಟ್ರ ಧ್ವಜವೆಂದರೇ ಅದೊಂದು ಭಯ ಮತ್ತು ಭಕ್ತಿ ಇರುತ್ತಿತ್ತು ಆದರೇ ಈಗ ರಾಷ್ಟ್ರ ಧ್ವಜವನ್ನು ಸ್ವತಃ ಅವರವರ ಮನೆಯ ಮೇಲೆ ಪ್ರತಿಯೊಬ್ಬ ಸಾರ್ವಜನಿಕರಿಗೂ ಆರಿಸಲು ಅವಕಾಶ ಮಾಡಿಕೊಟ್ಟಿರುವುದು ಎಷ್ಟು ಸಮಂಜಷವಾಗಿದೆ? ರಾಷ್ಟ್ರ ಧ್ವಜಕ್ಕಿರುವ ಬೆಲೆ ಮತ್ತು ಗೌರವ ಇಂತಹ ಸಾರ್ವಜನಿಕವಾಗಿ ನೀಡಿದ ಅವಕಾಶದಿಂದ ಸ್ವಲ್ಪ ಕಡಿಮೆಯಾಗಬಹುದು ಮತ್ತು ರಾಷ್ಟ್ರ ಧ್ವಜದ ಮೇಲಿರುವ ಭಯ ಭಕ್ತಿ ಸ್ವಲ್ಪ ಕುಂದುತ್ತಾ ಹೋಗಬಹುದು. ಮೊದಲು ರಾಷ್ಟ್ರ ಧ್ವಜವನ್ನು ಆರಿಸಲು ಅದಕ್ಕೆ ಸೀಮಿತವಾದ ಸ್ಥಳದಲ್ಲೇ ಹಾಗೂ ನಿಗದಿ ಪಡಿಸಿದ ಸಮಯದಲ್ಲೇ ಮತ್ತು ನಿಗದಿ ಪಡಿಸಿದ ದಿನದಂದೇ ಧ್ವಜವನ್ನು ಆರಿಸಬಹುದಾಗಿತ್ತು ಆದರೆ ಇಂದು ಬೀದಿ ಬೀದಿಯಲ್ಲಿ ಅಷ್ಟೇ ಅಲ್ಲದೇ ಮನೆ ಮಾಳಿಗೆಯಲ್ಲಿ ಕಟ್ಟಿ ಕೈ ಬಿಟ್ಟಾಗ ಅದು ರಭಸದ ಗಾಳಿಗೆ ಕೀಳಬಹುದು, ಹರಿಯಬಹುದು ಅಷ್ಟೇ ಅಲ್ಲದೇ ಬೀದಿ ಬೀದಿಯಲ್ಲಿ ತಿರಂಗವನ್ನು ಹಿಡಿದು ಮೆರವಣಿಗೆ ಮಾಡುವಾಗ ಅಕಸ್ಮಾತಾಗಿ ಕೈಯಿಂದ ಜಾರಿ ಬೀಳುವಂತಹ ಸನ್ನಿವೇಶಗಳು ಬರಬಹುದು ಮತ್ತು ಈಗಾಗಲೇ ಎಷ್ಟೋ ಮನೆಗಳ ಮೇಲೆ, ಮನೆಯ ಮತ್ತು ಕಛೇರಿ, ಇಲಾಖೆಗಳ ಕಟ್ಟಡಗಳ ಮೇಲೆ ನಮ್ಮ ರಾಷ್ಟ್ರ ಧ್ವಜ ಹಾರಾಡುತ್ತಿದ್ದು ಯಾರೊಬ್ಬರೂ ಸರಿಯಾಗಿ ರಾಷ್ಟ್ರ ಧ್ವಜಕ್ಕೆ ಗೌರವ ಸೂಚಿಸುವಂತಹ ಕ್ಷಣಗಳು ಬಹಳ ವಿರಳವಾಗಿ ಕಾಣುತ್ತಿವೆ. ಹೀಗಾಗಿ ಪ್ರತಿಯೊಂದು ಕಚೇರಿ, ಇಲಾಖೆ,ಮನೆ, ಕಟ್ಟಡಗಳ ಮೇಲೆ ಹಾಗೂ ರಸ್ತೆಯುದ್ಧಕ್ಕೂ ರಾಷ್ಟ್ರ ಧ್ವಜವನ್ನು ಹಿಡಿದು ಮೆರವಣಿಗೆ ಮಾಡಿದರೆ ರಾಷ್ಟ್ರ ಧ್ವಜಕ್ಕೆ ಗೌರವ ಸಿಗುವುದೆಂಬ ನಂಬಿಕೆ ಎಷ್ಟಿದೆಯೋ ಅಷ್ಟು ಅಭಿಮಾನಕ್ಕೂ ಕೊರತೆಯಾಗುವಂತಿದೆ ಎಂಬುದು ನನ್ನ ಭಾವನೆ. ಧ್ವಜ ಕಂಬಕ್ಕೆ ಸಿಂಗಾರ ಮಾಡಿ, ಸುತ್ತಲೂ ರಂಗೋಲಿ ಬಿಡಿಸಿ, ಗಣ್ಯರೆಲ್ಲಾ ಸೇರಿ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಕ್ಕೆ ಗೌರವ ಸಲ್ಲಿಸಿ, ರಾಷ್ಟ್ರ ಧ್ವಜ ಹಾರಿಸಿ ತಲೆ ಎತ್ತಿ ಸೆಲ್ಯೂಟ್ ಹೊಡೆದು ರಾಷ್ಟ್ರಗೀತೆ ಹಾಡಿ, ಸ್ವಾತಂತ್ರ್ಯ ಹೋರಾಟಗಾರ ಮತ್ತು ಸ್ವಾತಂತ್ರ್ಯಕ್ಕಾಗಿ ನಡೆದ ಯುದ್ಧ ಸಮರ, ತ್ಯಾಗ ಬಲಿದಾನ ಮತ್ತು ಸಾಹಸಗಳ ಕುರಿತು ಭಾಷಣ ಮಾಡಿ ಸಿಹಿ ತಿಂದು ಕೈ ಮುಗಿದು ಮನೆ ನಡೆದು ಸಂಜೆ ಸಮಯಕ್ಕೆ ಸರಿಯಾಗಿ ಸರಿಯಾದ ರೀತಿಯಲ್ಲಿ ರಾಷ್ಟ್ರ ಧ್ವಜವನ್ನು ಕೆಳಕ್ಕೆ ಇಳಿಸಿ ಗೌರವ ಸಲ್ಲಿಸಿದರೆ ಅದು ದೇಶ ಭಕ್ತಿಯೇ? ರಾಷ್ಟ್ರ ಧ್ವಜದ ಮಧ್ಯೆಇರುವ ಅಶೋಕ ಚಕ್ರದಲ್ಲಿರುವ ಗೆರೆಗಳು ದೇಶದ ಪ್ರತಿಯೊಬ್ಬ ಮಾನವನ ಮತ್ತು ಪ್ರತಿಯೊಂದು ಜೀವಿಗಳ ಏಕತೆ ಹಾಗೂ ಮಾನವೀಯತೆಯ, ಬ್ರಾತೃತ್ವ ಮನೋಭಾವಗಳನ್ನು ಮೂಡಿಸುವಂತಹ ಗೆರೆಗಳಾಗಿವೆ ಹಾಗೂ ರಾಷ್ಟ್ರ ಧ್ವಜದಲ್ಲಿರುವ ಕೇಸರಿ,ಬಿಳಿ,ಹಸಿರು ಬಣ್ಣಗಳು ಒಂದೊಂದು ಭಾವಗಳನ್ನು ಒಳಗೊಂಡಿವೆ ಹೀಗಾಗಿ ರಾಷ್ಟ್ರ ಧ್ವಜವಿಡಿದು ಘೋಷಣೆ ಕೂಗಿ ದೇಶಕ್ಕೆ ಗೌರವ ಸಲ್ಲಿಸುವುದರ ಜೊತೆಗೆ ದೇಶದ ಏಕತೆಗೆ ಒತ್ತು ಕೊಡಬೇಕಿದೆ ಮಾನವ ಮಾನವರ ಮಧ್ಯೆ ಕಚ್ಚಾಟ, ಜಗಳ,ಜಾತಿ ಜಾತಿಗಳ ಮಧ್ಯೆ ಹೊಡೆದಾಟದಂತಹ ಸನ್ನಿವೇಶಗಳಿಗೆ ಕಡಿವಾಣ ಹಾಕಿ ದೇಶದ ಏಕತೆಗಾಗಿ ಪಣತೋಡಬೇಕಿದೆ, ನಾವೆಲ್ಲರೂ ಒಂದೇ, ನಾವೆಲ್ಲರೂ ಭಾರತೀಯರೆಂಬ ಭಾವ ಎಲ್ಲರಲ್ಲೂ ಮೂಡಬೇಕಿದೆ ಹಾಗೂ ನಾವು ಮೊದಲು ನಮ್ಮನ್ನು ಪ್ರೀತಿಸಿಕೊಳ್ಳಬೇಕಿದೆ, ನೆರೆಹೊರೆಯವರನ್ನು ಪ್ರೀತಿಸಿ ಗೌರವಿಸಬೇಕಿದೆ, ಹಿರಿಯರಿಗೆ ಭಯ ಭಕ್ತಿ ತೋರಬೇಕಿದೆ ಮತ್ತು ದೇಶ ಪ್ರೇಮದ ಜೊತೆ ಪ್ರಕೃತಿ ಪ್ರೇಮ, ಪರಿಸರ ಪ್ರೇಮ, ನಿಸರ್ಗ ಪ್ರೇಮವೂ ಅತಿಮುಖ್ಯವಾಗಿದೆ ಸುತ್ತಲಿನ ಪರಿಸರವನ್ನು ಸ್ವಚ್ಛ ಮತ್ತು ಸಂರಕ್ಷಣೆ ಮಾಡುವ ಮೂಲಕ ಹಾಗೂ ಜಾತಿ ಬೇಧ ಲಿಂಗ ತಾರತಮ್ಯ ಎಣಿಸದೆ ಎಲ್ಲರೂ ಸಹಾನುಭೂತಿಯಿಂದ ಎಲ್ಲರೂ ಒಂದಾಗಿ ರಾಜಕೀಯವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಮುನ್ನೆಡೆದರೆ ಮಾತ್ರ ನಮ್ಮ ದೇಶ ಇಡೀ ಜಗತ್ತಿಗೆ ಮಾದರಿಯಾಗುವಲ್ಲಿ ಯಾವುದೇ ಸಂಶಯವಿಲ್ಲ ಮತ್ತು ಇವೆಲ್ಲಾ ಅಂಶಗಳನ್ನು ಪಾಲನೆ ಮಾಡಿದ್ದಲ್ಲಿ ಭಾರತೀಯರಾದ ನಾವುಗಳು ನಮ್ಮ ದೇಶವನ್ನು ಜಗತ್ತಿಗೆ ವಿಶೇಷವಾಗಿ ಪರಿಚಯಿಸಲು ಸಾಧ್ಯವಾಗುತ್ತದೆ.

- ಎಚ್.ಡಿ.ಹೊಗರಾನಾಳ
ಮೊ: 9945246234.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...