ಮಂಗಳವಾರ, ಸೆಪ್ಟೆಂಬರ್ 20, 2022

ನಾವು 'ಗೇ'ಗಳೇ ಹೀಗೆ (ಕವಿತೆ) - ಗೌತಮ್ ಗೌಡ(ಮಾನಿನಿ)

ಹೌದು ಕಣೋ
ಸುಭಾಸ್
ನಾವು ಗೇ ಗಳೇ
ಹೀಗೆ

ಪ್ರಕೃತಿ ಸಹಜತೆಯಿಂದ
ಹೀಗೆ ಹುಟ್ಟಿದ ನಾವು
ಜಗತ್ತಿನ ಎದುರಿಗೆ ಅಸಹಜರಾಗುತ್ತೇವೆ.
ಜನರ ಅಸಹ್ಯಕ್ಕೆ ಗುರಿಯಾಗುತ್ತೇವೆ.

ಜನಗಳು ಕಟ್ಟುವ 
ಅವಾಚ್ಯ ನಾಮಗಳನ್ನು
ಕೇಳಿಯು ಕೇಳದಂತೆ
ಜೀವಿಸುತ್ತೇವೆ
16ರಲ್ಲಿ ಅಲ್ಲೊಬ್ಬನ
ಕಣ್ಣಿನ ಕಾಂತಿಗೆ ಮೋಹಿತರಾಗಿ
ಪ್ರೀತಿಯ ವಿಷಯ ಮುಟ್ಟಿಸಲು ಹೆಣಗುತ್ತೇವೆ
ಹೇಳಿ ಏಟು ತಿನ್ನುವ ಬದಲು
ಹೇಳದೆ ಇರುವುದೇ ಲೇಸು ಸುಮ್ಮನಾಗುತ್ತೇವೆ

21ರಲ್ಲಿ ಸಿಕ್ಕ ಗೆಳೆಯನನ್ನು
ಶಾಶ್ವತವಾಗಿ ಉಳಿಸಿಕೊಳ್ಳವ
ಸಾಹಸ ನಡೆಸುತ್ತೇವೆ
ಅವನು ಇನ್ಯಾರನ್ನೋ
ಮದುವೆಯಾದಾಗ
ಆತ್ಮ ಹತ್ಯೆಗೆ ಪ್ರಯತ್ನ ನಡೆಸುತ್ತೇವೆ
ಸಾಯುವುದು ಸುಲಭವಲ್ಲ ಎಂದು ತಿಳಿದಾಗ
ಬದುಕಲೊರಡುತ್ತೇವೆ

ಮನೆಯವರ ಬಲವಂತ
ತಾಳಲಾರದೇ
25ರಲ್ಲಿ ಯಾವುದೊ ಹುಡುಗಿಯ
ಮದುವೆಯಾಗಿ ಸತ್ತು ಬದುಕಿದಂತೆ
ಜೀವಿಸುತ್ತೇವೆ

28ರಲ್ಲಿ ಯಾವುದೆ ಅವಕಾಶವಿಲ್ಲದೆ
ಅಂಕಲ್ ಗಳಿಗೆ ದೇಹ ಚಾಚುತ್ತೇವೆ

45ರಲ್ಲಿ ಕಾಮ ಮತ್ತೆ ತೆನೆ ಬಿಟ್ಟಾಗ
ತರುಣನೊಬ್ಬನ ತೊಡೆಯ ಮೇಲೆ ಕೈ ಇಟ್ಟು
ಕಪಾಲ ಮೋಕ್ಷ ಮಾಡಿಸಿಕೊಳ್ಳುತ್ತೇವೆ

ಸಹಜತೆ ಇಂದ ಹೀಗೆ ಹುಟ್ಟಿದರು
ಮನೆ, ಮಾನಕ್ಕಾಗಿ
ಅಸಹಜವಾಗಿ ಬದುಕಿ
ಕೊನೆಗೊಂದು ದಿನ ಇಲ್ಲವಾಗುತ್ತೇವೆ
ಮತ್ತೆ ಮತ್ತೆ ಹುಟ್ಟುತ್ತಾ,, ಇದ್ದು ಇಲ್ಲದಂತೆ
ಜೀವಿಸುತ್ತೇವೆ

ಹೌದು ಕಣೋ
ಸುಭಾಸ್
ನಾವು 'ಗೇ' ಗಳೇ ಹೀಗೆ.

(ಪ್ರಭಾವ ಹಾಗೂ ಅನುಕರಣೆ :ಪ್ರತಿಭಾ ಅವರ ನಾವು ಹುಡುಗಿಯರೇ ಹೀಗೆ ಕವಿತೆ)

-maanini
Gowtham Gowda.

1 ಕಾಮೆಂಟ್‌:

ಶ್ರೀಮತಿ ಬಿ ಬಿ ದೇವದುರ್ಗ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಪ್ರಶಸ್ತಿ...

ಶ್ರೀಮತಿ ಬಿ ಬಿ ದೇವದುರ್ಗ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಪ್ರಶಸ್ತಿ.....            ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ್   ಉಪನಿರ್ದೇಶಕರ ಹಾಗೂ ಕ್ಷೇತ್ರ...