ಶುಕ್ರವಾರ, ಸೆಪ್ಟೆಂಬರ್ 16, 2022

ಕುಡುಕ ಗಂಡ (ಕವಿತೆ) - ಬಿ. ಹೆಚ್. ತಿಮ್ಮಣ್ಣ.

ಸಮಾಜದ ತಿರಳು ಅರಿಯಲಿಲ್ಲ ನೋಡ 
ಮನಸ್ಸಿಗೆ ಬಂದಂತೆ ಹುಚ್ಚನಂತೆ ತಿರುಗಬೇಡ 
ಎಲ್ಲರೊಳಗೊಂದಾಗಿ ಸಿಹಿ ಜೇನಿನಂತೆ ಕೂಡ 
ಗೌರವ ಸಿಗುವುದು ನಿನಗಾಗ ಮರಿಬೇಡ

ಕುಡಿತದ ಚಟಕ್ಕೆ ಆಗಿಹರು ಗುಲಾಮ 
ಮಂದಿ ಸಂಘ ಕೂಡಿ ಹಾಕುವರು ಪಂಗನಾಮ 
ಕುಡಿದ ಮತ್ತಿನಲ್ಲಿ ಕಂಡವರಿಗೆ ಹೊಡಿವರು ಸಲಾಮ
ನಶೆಯೊಳಗೆ ಹೆಜ್ಜೆ ಹಾಕಿದರೂ, ಮನೆ ಸೇರಲಿಲ್ಲ ಸುಗಮ

ಮಧ್ಯಪಾನಕ್ಕೆ ಜಂಟಿಯಾಗಿ ಬಿಡುವರು ತನ್ನ ಮನೆಯ
ಸಂದಿಗೊಂದಿ ಅಲಿಯುತ್ತಾ ಹುಡುಕುವರು ಸೇಂದಿಯ
ಕಳ್ಳಾಟದಿಂದ ಕಣ್ತಪ್ಪಿಸಿ ಕುಡಿದು ಬರುವರು ಸರಾಯಿಯ
ಜೋತಾಡ್ತಾ ಹಿಡಿಯುವರು ಮನೆ ಕಡೆಗೆ ದಾರಿಯ

ಕಣ್ಣಲ್ಲಿ ಕಾಣುವುದೇ ದ್ವಿಪಥದ ಹಾದಿಯು 
ಕುಡಿತ ಇಂಗಲಿಲ್ಲವಾದರೆ ಆಗುವುದು ಭೇದಿಯು 
ಕಾಲ್ಜಾರಿ ಬಿದ್ದರೆ ಮೈಗೆಲ್ಲಾ ಹತ್ತುವುದು ರಾಡಿಯು 
ಇದ ಕಂಡು ಓಡೋಡಿ ಬರುವಳು ಮಡದಿಯು

ಗಂಡನ ದೇಹ ಕಂಡು ಹಿಂಜರಿಯದ ಸತಿಯು
ಕಂಕುಳಲ್ಲಿ ಕೈ ಹಾಕಿ ಎದ್ದು ನಿಲ್ಲಿಸಿದಳು ರತಿಯು 
ಹೆಗಲ್ಮೇಲೆ ಅಚ್ಚುಕೊಂಡು ನಡೆದಳು ಸಬಲೆಯು 
ಮನೆಗೆ ಮುಟ್ಟಿ ಬಟ್ಟೆ ಬಿಚ್ಚಿ ತೊಳೆದಳು ಮೈಯಿಯು

ಕಾಲಿಗೆ ಬಿದ್ದು ಬೇಡುವಳು ಸತಿಯು ಪತಿಯನ್ನು 
ಮಾಡತಿಯಾಕ ಇಂಥ ದುರ್ಬುದ್ಧಿ ಕಾರ್ಯವನ್ನು
ತಿಳಿವಲ್ದು ನಿನಗ ಸಂಸಾರದ ಒಳ ತಿರುಳನ್ನು 
ದುಡಿದು ತಿಂದರೆ ಕಾಣುವೆವು ಸದ್ಗತಿಯನ್ನು

ಮಂದಿ ಮುಲಾಜಿಗೆ ಹೋಗಬೇಡ ನೀನಿನ್ನು
ಗುಲಾಮನಾಗಬೇಡ ಬಾರಿನ ಮಾಲಕನಿಗೆ ನೀನು 
ಮನೆ ಹೆಂಡ್ತಿ ಮಕ್ಕಳನ್ನು ತಳ್ಳಬೇಡ ನರಕಕ್ಕಿನ್ನು 
ತಳ್ಳಿದರೆ ನೀ ತಟ್ಟುವೆ ಯಮದೂತನ ಬಾಗಿಲನ್ನು

ಅಲ್ಪ ಸಮಯಕ್ಕೆ ಸಿಗುವ ಸುಖಕ್ಕೆ 
ನೀ ದೇಹ ಕೆಡಿಸಿಕೊಳ್ಳುವುದು ಯಾತಕ್ಕೆ 
ಹೊತ್ತು ಹೋದ ಮೇಲೆ ಚಿಂತಿಸದಿರು ಅದಕ್ಕೆ 
ಇದ್ದಾಗ ಸರಿಯಾಗಿ ಬದುಕಿ ತೋರಿಸು ಸಮಾಜಕ್ಕೆ

ಮನೆ ಮುರುಕರ ಮಾತಿಗೆ ಕಿವಿಗೊಡಬೇಡ 
ತಳ್ಳುವರು ನಿನ್ನನ್ನು ನರಕದ ಗುಂಡಿಗೆ ನೋಡ 
ಜೀವ ಹೋದಾಗ ಬರಲಿಲ್ಲ ಯಾರು ನಿನ್ನ ಕೂಡ 
ಸೂರು ಕಟ್ಟಿಕೊಂಡು ತಾನೇ ಸತ್ತಿತು ಬಲೆಯಲ್ಲಿ ಜೇಡ

ಕೊಟ್ಟಾನ ಭಗವಂತ ನಮಗೆಲ್ಲ ಪ್ರಾಣ 
ಹಾನಿ ಮಾಡದೆ ಎಚ್ಚರದಿಂದ ನಡೆಯೋಣ 
ಸಾಧನೆಯ ಮೆಟ್ಟಿಲು ಒಂದೊಂದು ಹತ್ತೋಣ
ಕುಡಿತದ ಅರೆ ಸುಖವನ್ನು ಡಬ್ಬಿಯೊಳಗಿಟ್ಟು ಮುಚ್ಚೋಣ

   - ಬಿ. ಹೆಚ್. ತಿಮ್ಮಣ್ಣ.

1 ಕಾಮೆಂಟ್‌:

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...