ಸೋಮವಾರ, ಡಿಸೆಂಬರ್ 12, 2022

ಛದ್ಮವೇಷ (ಸಣ್ಣ ಕಥೆ) - ಶ್ರೀಮತಿ ಸುಮಂಗಲಾ ಕೃಷ್ಣ ಕೊಪ್ಪರದ.

ಪದ್ಮಾ ದೇವರ ಮನೆಯಲ್ಲಿ ಪೂಜೆ ಮಾಡ್ತಾ ಇದ್ಲು . ಮಗ ವಿನೀತ, ಶಾಲೆಗೆ ಹೋಗುವುದಿಲ್ಲ ಅಂತ ಹಠ ಮಾಡ್ತಾ ಇದ್ದ. ಯಾಕೋ ಕಂದ ಶಾಲೆಗೆ ಹೋಗುವುದಕ್ಕೆ ಅಳ್ತಾ ಇದ್ದೀಯ? ಎಂದು ಪ್ರೀತಿಯಿಂದ ಕೇಳಿದಳು ಪದ್ಮಾ. ಅಮ್ಮ ಶಾಲೆಯಲ್ಲಿ ಜನವರಿ ೨೬ ನೇ ತಾರೀಕು ಗಣರಾಜ್ಯೋತ್ಸವವಂತೆ. ಅದಕ್ಕಾಗಿ ಛದ್ಮವೇಶದ ಕಾರ್ಯಕ್ರಮ ಮಾಡುತಾರಂತೆ, ನಾನು ಅದರಲ್ಲಿ ಭಾಗವಹಿಸುತ್ತೇನೆ ಎಂದೆ. ಅದಕ್ಕೆ ಅವರು ನೀನು ಚೆನ್ನಾಗಿ ಮಾತನಾಡುವುದಿಲ್ಲ, ನಿನಗೆ ಏನು ಬರುವುದಿಲ್ಲ, ಬೇಡ ಎಂದು ಬಿಟ್ಟರು. ಅದಕ್ಕೆ ನಾನು ಇಲ್ಲ ನಾನು ಪಾತ್ರ ಮಾಡುತ್ತೇನೆ ಟೀಚರ್, ನನಗೂ ಒಂದು ಪಾತ್ರ ಕೊಡಿ ಎಂದು ಎಷ್ಟು ಕೇಳಿದರು ಕೊಡಲಿಲ್ಲ. ನಾಳೆ ನೋಡೋಣ, ನಾನು ಯಾವ ಪಾತ್ರ ಕೊಟ್ಟರು ಮಾಡಬೇಕು ಎಂದು ಗದರಿದರು. ಅದಕ್ಕೆ ನನಗೆ ಇವತ್ತು ಪಾತ್ರ ಕೊಡುತ್ತಾರೋ.... ಇಲ್ಲವೋ.... ನಾನು ಶಾಲೆಗೆ ಹೋಗುವುದಿಲ್ಲ ಎಂದು ಅಳ ತೊಡಗಿದ. ಅದಕ್ಕೆ ಅಮ್ಮ ಪ್ರೀತಿಯಿಂದ ನಿನಗೆ ಪಾತ್ರ ಖಂಡಿತ ಕೊಡುತ್ತಾರೆ. ಒಂದು ವೇಳೆ ಕೊಡದಿದ್ದರೂ ಅದಕ್ಕೆ ಅಳೋದು ಬೇಡ ಕಂದ.... ಯಾಕಂದ್ರೆ ಒಂದು ವರ್ಗ ಕೋಣೆಯಲ್ಲಿ ಸಾಕಷ್ಟು ಜನ ಮಕ್ಕಳಿರತಾರೆ, ಎಲ್ಲರಿಗೂ ಪಾತ್ರ ಕೊಡುವುದು ಕಷ್ಟ. ಅವರ ಸಾಮರ್ಥ್ಯಕ್ಕನುಗುಣವಾಗಿ ಪಾತ್ರ ಕೊಡಬೇಕಾಗುತ್ತದೆ. ಅದು ಅವರ ಜವಾಬ್ದಾರಿ. ರಾಷ್ಟ್ರೀಯ ಹಬ್ಬಗಳಲ್ಲಿ ಯಾವುದೇ ರೀತಿಯ ಅಸಬ್ಯತೆಯ ಭಾಗವಹಿಸುವಿಕೆ ಇರಬಾರದು, ಹೀಗಾಗಿ ಅವರು ಜಾಗರೂಕತೆಯಿಂದ ಸ್ಪಷ್ಟವಾಗಿ ಮಾತನಾಡುವ ಮಕ್ಕಳನ್ನು ತೆಗೆದುಕೊಳ್ಳುತ್ತಾರೆ. ನೀನು ಇನ್ನಷ್ಟು ಬೆಳೆದು ದೊಡ್ಡವನಾದ ಮೇಲೆ ನಿನಗೂ ಸಹ ಪಾತ್ರ ಕೊಡುತ್ತಾರೆ ಅದಕ್ಕೆ ಅಳುವುದು ಬೇಡ ಎಂದು ಸಮಾಧಾನಪಡಿಸಿದಳು. ಒಂದು ವೇಳೆ ನಿನಗೆ ಈ ದಿನ ಯಾವುದೇ ಪಾತ್ರ ಕೊಟ್ಟರು ನೀನು ಒಪ್ಪಿಕೊಂಡು ಬಾ, ನಾನು ನಿನಗೆ ಅದರ ಬಗ್ಗೆ ಹೇಳುತ್ತೇನೆ ಎಂದು ಮಗುವನ್ನು ಶಾಲೆಗೆ ಕಳುಹಿಸಿದಳು. ವಿನೀತ ಅಮ್ಮನ ಮಾತು ಕೇಳಿ ಸಮಾಧಾನದಿಂದ ಶಾಲೆಗೆ ತೆರಳಿದ. ಎಂದಿನಂತೆ ಶಿಕ್ಷಕರು ಪ್ರತಿಯೊಂದು ಮಗುವಿಗೂ ಛದ್ಮವೇಷದ ಪಾತ್ರವನ್ನು ನೀಡಿದರು. ಟೀಚರ್ ನನಗೂ ಒಂದು ಪಾತ್ರ ಕೊಡಿ, ನಾನು ಮಾಡುತ್ತೇನೆ ಎಂದನು ವಿನೀತ .ಸರಿ ಸರಿ ಮೊದಲು ನೀನು ಚೆನ್ನಾಗಿ ಮಾತನಾಡೋದನ್ನ ಕಲಿ.... ನೀನು 'ಋಷಿ' ಪಾತ್ರವನ್ನು ಮಾಡು ಎಂದರು. ಋಷಿ ಪಾತ್ರ ಅಂದ್ರೆ ಹೇಗಿರುತ್ತೆ ಟೀಚರ್ ?ಅಂದಾಗ ಏನಿಲ್ಲ, ದಾಡಿ, ಮೀಸೆ, ತಲೆಯಲ್ಲಿ ಜಟಾಧಾರಿಯಾಗಿ ,ಕೇಸರಿ ಬಣ್ಣದ ಧೋತಿ ಮತ್ತು ಮೇಲೊಂದು ಕೇಸರಿ ಬಣ್ಣದ ಶಾಲು ಈ ರೀತಿಯ ಉಡುಪು ಧರಿಸಬೇಕು ಅಷ್ಟೇ ಎಂದರು ಟೀಚರ್. ವಿನೀತ ಏನು ಮಾತನಾಡದೆ ಸರಿ ಟೀಚರ್ ಎಂದು ಹೇಳಿದ.
          ವಿನೀತ ಶಾಲೆಯಿಂದ ಮನೆಗೆ ಬರುತ್ತಲೇ ತನ್ನಮ್ಮನಿಗೆ ತನಗೆ ಕೊಟ್ಟ 'ಋಷಿ' ಪಾತ್ರದ ಬಗ್ಗೆ ತಿಳಿಸಿದ. ಅವನ ಮುಖದಲ್ಲಿ ಮಂದಹಾಸ ಕಾಣಲಿಲ್ಲ. ಯಾಕೋ ಹೀಗೆ ಇದಿಯಾ? ನಿನಗೆ ಪಾತ್ರ ಕೊಟ್ಟಿದ್ದಾರಲ್ಲ ಎಂದಳು ಅಮ್ಮ. ಎಲ್ಲರಿಗೂ ಗಾಂಧೀಜಿ, ನೆಹರು, ಅಂಬೇಡ್ಕರ್, ದೇವರ ದಾಸಿಮಯ್ಯ, ಬಸವಣ್ಣ, ವಿವೇಕಾನಂದ ಹೀಗೆ ಬೇರೆ ಬೇರೆ ಪಾತ್ರ ಕೊಟ್ಟಿದ್ದಾರೆ. ನನಗೆ ಮಾತ್ರ ಋಷಿ ಆಗು ಎಂದು ಗದರಿದರು. ಸರಿ ಕಂದ ನಿನಗೆ ಋಷಿಯ ಪಾತ್ರವನ್ನೇ ನಾನು ಮಾಡಿಸುವೆ, ಖಂಡಿತ ನೀನು ಇದರಲ್ಲಿ ಯಶಸ್ವಿಯಾಗುತ್ತೀಯ ಎಂದಳು ಪ್ರೀತಿಯಿಂದ ಅಮ್ಮ.
        ಋಷಿಗೆ ಬೇಕಾದಂತಹ ಎಲ್ಲಾ ಉಡುಗೆಗಳನ್ನು ತಂದು, ಆ ಉಡುಗೆಯಿಂದ ಅಲಂಕರಿಸಿ, ಅವನನ್ನು ಮಾನಸಿಕವಾಗಿ ಸಿದ್ಧಗೊಳಿಸಿದಳು. ಕಂದ ನೀನು ಹೇಳಬೇಕಾದಂತಹ ನಿನ್ನ ಪಾತ್ರ ಅಗಸ್ತ್ಯ ಋಷಿ ಎಂದು.
       ಅಮ್ಮ ಅಗಸ್ತ್ಯ ಋಷಿ ಅಂದರೆ ಯಾರು? ಎಂದನು ವಿನೀತ. ಅದಕ್ಕೆ ತಾಯಿ, ಇವರು ನಮ್ಮ ಹಿಂದೂ ಧರ್ಮದ ಪುರಾಣದ ಪ್ರಕಾರ ಶ್ರೇಷ್ಠ ಬ್ರಹ್ಮರ್ಷಿ. ಸಪ್ತ ಋಷಿಗಳಲ್ಲಿ ಒಬ್ಬರು. ಅಂದರೆ ಕಶ್ಯಪ, ವಶಿಷ್ಠ ,ವಿಶ್ವಾಮಿತ್ರ, ಅಗಸ್ತ್ಯ, ಅತ್ರಿ, ಜಮದಗ್ನಿ, ಭಾರದ್ವಜ ಶ್ರೇಷ್ಠ ಋಷಿಗಳಲ್ಲಿ ಒಬ್ಬರಾದ ಅಗಸ್ತ್ಯ ಮಹರ್ಷಿಗಳ ಪಾತ್ರ ಎಂದು ನೀನು ನಿನ್ನನ್ನು ಪರಿಚಯಿಸು. ಸರಿಯಮ್ಮಾ..... ಅಗಸ್ತ್ಯ ಋಷಿಗಳ ಬಗ್ಗೆ ನಾನೇನು ಹೇಳಬೇಕು? ನೀನು ಇದರ ಬಗ್ಗೆ ಬರೆದು ಕೊಟ್ಟು, ಕಂಠ ಪಾಠ ಮಾಡು ಎನ್ನಬೇಡ. ನನಗೆ ಕಂಠಪಾಠ ಮಾಡಲು ಆಗುವುದಿಲ್ಲ ಎಂದು ಅಳತೊಡಗಿದ. ಇಲ್ಲ ಕಂದ ನಾನು ನಿನಗೆ ಅಗಸ್ತ್ಯ ಋಷಿಗಳ ಬಗ್ಗೆ ಕಥೆ ಹೇಳುವೆ, ನಾನು ಹೇಳಿದಂತೆ ನೀನು ಕಥೆ ಹೇಳಿದರೆ ಸಾಕು. ಎಲ್ಲರ ಮೆಚ್ಚುಗೆಗೆ ಪಾತ್ರವಾಗುವೆ ಎಂದಳು ಪದ್ಮಾ. ಸರಿ ಅಮ್ಮ ಎಂದನು ವಿನೀತ .ಶಾಲೆಯಲ್ಲಿ ಎಲ್ಲ ವಿದ್ಯಾರ್ಥಿಗಳಿಗೂ ನಿತ್ಯವೂ ಛದ್ಮವೇಷದ ಬಗ್ಗೆ ಪ್ರಾಕ್ಟೀಸ್ ಮಾಡಿಸುತ್ತಿದ್ದರು . ವಿನೀತ ನನ್ನಮ್ಮ ನನಗೆ ಪ್ರಾಕ್ಟೀಸ್ ಮಾಡಿಸುತ್ತಿದ್ದಾರೆ ಟೀಚರ್ ಎಂದು ಹೇಳುತ್ತಿದ್ದ . 
       ಜನವರಿ ೨೬ ನೇ ತಾರೀಕು ವೇದಿಕೆಯ ಮೇಲೆ ಮುಖ್ಯ ಗುರುಗಳು, ಶಿಕ್ಷಕ ವೃಂದ ಒಳಗೊಂಡಂತೆ ಎಲ್ಲರೆದುರಿಗೆ ಪ್ರತಿಯೊಂದು ಮಗು, ತನ್ನ ಪಾತ್ರಕ್ಕನುಗುಣವಾಗಿ ವೇದಿಕೆಗೆ ಆಗಮಿಸಿ, ಅದಕ್ಕೆ ಸಂಬಂಧಿಸಿದ ವಿಷಯವನ್ನು ಹೇಳಿ ಹೋಗುತ್ತಿದ್ದರು. ಅದೇ ಪ್ರಕಾರ ೬ ನೇ ತರಗತಿಯಲ್ಲಿ ಓದುತ್ತಿದ್ದ ವಿನೀತನನ್ನು 'ಋಷಿ' ವೇಷದಲ್ಲಿ ಎಂದು ಕೂಗಿದರು. ಆಗ ವಿನೀತ    ತನ್ನ ತಾಯಿ ಹೇಳಿದಂತೆ,ಗಾಂಭೀರ್ಯದಿಂದ ಋಷಿಯ ಉಡುಗೆಯಲ್ಲಿ ವೇದಿಕೆಗೆ ಬಂದನು.
       ನನ್ನ ಛದ್ಮವೇಷದ ಹೆಸರು "ಅಗಸ್ತ್ಯ ಋಷಿ" ಎಂದು ಪರಿಚಯಿಸಿಕೊಂಡ. ಒಂದು ಪುರಾಣದ ಕಥೆಯ  ಪ್ರಕಾರ ವರುಣ ಮತ್ತು ಮಿತ್ರ ಎಂಬ ದೇವತೆಗಳ ಮಗನೇ ಅಗಸ್ತ್ಯರು .ಹೀಗಾಗಿ ಈತನನ್ನು 'ಮೈತ್ರಾವರುಣಿ' ಎಂದು ಸಹ ಕರೆಯುತ್ತಾರೆ .ಈತನ ಪತ್ನಿಯ ಹೆಸರು ಲೋಪ ಮುದ್ರ. ಅಗಸ್ತ್ಯ ಎಂದು ಹೆಸರು ಬರಲು ಒಂದು ಕಥೆ ಕೂಡ ಇದೆ.  ಮಧ್ಯಭಾರತದಲ್ಲಿರುವ ವಿಂಧ್ಯಪರ್ವತ ಸೂರ್ಯನಿಗೆ ಸವಾಲಾಗಿ ಎತ್ತರಕ್ಕೆ ಬೆಳೆಯುತ್ತಿತ್ತು. ಇದರಿಂದ ಜನಸಾಮಾನ್ಯರಿಗೆ ತೊಂದರೆಯಾಗಿ ಅವರೆಲ್ಲರೂ ಮೈತ್ರಾವರುಣಿಯ ಹತ್ತಿರ ಬಂದರು. ಪರ್ವತದ ಬೆಳವಣಿಗೆಯನ್ನು ನಿಲ್ಲಿಸಿ, ಇದರಿಂದ ನಮಗೆ ತೊಂದರೆಯಾಗುತ್ತಿದೆ ಎಂದು ಋಷಿಯನ್ನು ಕೇಳಿಕೊಂಡರು. ಆಗ ಮೈತ್ರಾವರುಣಿಯು ಪರ್ವತದ ಬಳಿ ಬಂದು "ನೀನು ಬೆಳೆಯುವುದನ್ನು ನಿಲ್ಲಿಸು" ಎಂದು ಆಜ್ಞಾಪಿಸಿದಾಗ, ಪರ್ವತದ ಬೆಳವಣಿಗೆ ನಿಂತಿತು. ಈ ಪರ್ವತವನ್ನು ,'ಅಗ' ಎಂದೂ ಸಹ ಕರೆಯುತ್ತಾರೆ. ಹೀಗೆ ಪರ್ವತ ಅಥವಾ ಅಗದ ಬೆಳವಣಿಗೆಯನ್ನು ಸ್ಥಂಬಿಸಿದ್ದರಿಂದ ಅಥವಾ ನಿಲ್ಲಿಸಿದ್ದರಿಂದ 'ಅಗಸ್ತ್ಯ' ಎಂಬ ಹೆಸರು ಬಂತು ಎಂದು ಕಥೆ ಇದೆ.
     ಅಗಸ್ತ್ಯರು ಮಹಾಮಹಿಮರು.
 ಅರಣ್ಯದಲ್ಲಿನ ಋಷಿಗಳಿಗೆ ಒದಗಿದ್ದ ಕಾಟವನ್ನು ತಪ್ಪಿಸಿದ್ದವರು. 'ವಾತಾಪಿ' ಮತ್ತು 'ಇಲ್ವಲ್ಲ' ಎಂಬ ರಾಕ್ಷಸ ಸಹೋದರರು  ಅತಿಥಿಗಳನ್ನು ಭೋಜನಕ್ಕೆ ಆಹ್ವಾನಿಸಿ ಹತ್ಯೆ ಮಾಡುತ್ತಿದ್ದರು. ಯಾರಾದರೂ ಅತಿಥಿಗಳು ಬಂದರೆ ವಾತಾಪಿಯು 'ಮೇಕೆ' ರೂಪ ಧರಿಸುತ್ತಿದ್ದ. ಇಲ್ವಲ ಮೇಕೆಯನ್ನು ಕೊಂದು ಅಡುಗೆ ಮಾಡಿ  ಅತಿಥಿಗಳಿಗೆ ಊಟಕ್ಕೆ  ಬಡಿಸುತ್ತಿದ್ದ. ಅತಿಥಿಗಳು ಊಟ ಮಾಡಿದ ಮೇಲೆ ಇಲ್ವಲನು "ವಾತಾಪಿ ಹೊರಗೆ ಬಾ" ಎಂದಾಗ, ವಾತಾಪಿಯು ಅತಿಥಿಯ ಹೊಟ್ಟೆಯನ್ನು ಸೀಳಿಕೊಂಡು ಹೊರಗೆ ಬರುತ್ತಿದ್ದ. ಈ ರೀತಿಯಾಗಿ ಈ ರಾಕ್ಷಸರು ಹಲವಾರು ಋಷಿಗಳನ್ನು ಹತ್ಯೆ ಮಾಡುತ್ತಿದ್ದರು. ಇದನ್ನು ತಿಳಿದಂತಹ ಅಗಸ್ತ್ಯರು, ಈ ಕೃತ್ಯವನ್ನು ತಪ್ಪಿಸಲು ಒಂದು ಸಾರಿ ವಾತಾಪಿ ಮತ್ತು ಇಲ್ವಲ ಇದ್ದಲ್ಲಿಗೆ ಬಂದರು. ಇಲ್ವಲ ರಾಕ್ಷಸ ಅದೇ ರೀತಿ 'ಮೇಕೆ'ಯ ರೂಪದಲ್ಲಿದ್ದ ವಾತಾಪಿಯನ್ನು ಕೊಂದು, ಅಗಸ್ತ್ಯರಿಗೆ ಊಟ ಬಡಿಸಿದ. ಈ ವಿಷಯ ತಿಳಿದಿದ್ದ ಅಗಸ್ತ್ಯರು ಊಟವಾದ ಕೂಡಲೇ ಹೊಟ್ಟೆಯ ಮೇಲೆ ಕೈ ಆಡಿಸುತ್ತಾ "ವಾತಾಪಿ ಜೀರ್ಣವಾಗಿ ಹೋಗು" ಎಂದರು. ವಾತಾಪಿ ಅಗಸ್ತ್ಯರ ಹೊಟ್ಟೆಯಲ್ಲಿಯೇ ಕರಗಿ ಹೋದ. ಇಲ್ವಲ್ಲ ಎಷ್ಟೇ ಕರೆದರೂ ಬರಲಿಲ್ಲ. ಅಗಸ್ತ್ಯರು ಇಲ್ವಲನಿಗೂ  ಶಾಪಕೊಟ್ಟು ಅವನನ್ನು ಕೊಂದರು.
       ಅಗಸ್ತ್ಯ ಮುನಿಗಳು ದೇವತೆಗಳನ್ನು ಸಹ ರಕ್ಷಿಸಿದವರು. ಹೇಗೆಂದರೆ ಕಾಲಕೇಯರೆಂಬ ರಾಕ್ಷಸರು ದೇವತೆಗಳಿಗೆ ಸಾಕಷ್ಟು ತೊಂದರೆಯನ್ನು ಕೊಡುತ್ತಿದ್ದರು. ಹಗಲು ಹೊತ್ತಿನಲ್ಲಿ ಸಮುದ್ರದಲ್ಲಿ ಅಡಗಿ ಕುಳಿತುಕೊಳ್ಳುತ್ತಿದ್ದರು. ರಾತ್ರಿ ದೇವತೆಗಳ ಮೇಲೆ ಆಕ್ರಮಣ ಮಾಡುತ್ತಿದ್ದರು. ಇದರಿಂದ ದೇವತೆಗಳಿಗೆ ಚಿಂತೆಯಾಯಿತು. ಅವರು ಬ್ರಹ್ಮದೇವನ ಬಳಿ ಹೋದರು .ಆಗ ಬ್ರಹ್ಮದೇವ ಸಮುದ್ರದಲ್ಲಿರುವಂತಹ ಅವರನ್ನು ಶಿಕ್ಷಿಸುವುದು ಕಷ್ಟ. ಇದಕ್ಕೆ ಅಗಸ್ತ್ಯರೇ ಪರಿಹಾರ ನೀಡುತ್ತಾರೆ ಎಂದುಕೊಂಡು ಅಗಸ್ತ್ಯರ ಬಳಿಗೆ ತೆರಳಿದರು.ಅಗಸ್ತ್ಯರು ಸಮುದ್ರದ ಬಳಿ ಬಂದು, ನೀರನ್ನು ಸಂಪೂರ್ಣವಾಗಿ ಆಪೋಷಣೆ ಮಾಡಿ ಕುಡಿದು ಬಿಟ್ಟರು. ಆಗ ದೇವತೆಗಳು ಸಮುದ್ರದಲ್ಲಿ ಅಡಗಿ ಕುಳಿತಿದ್ದ ರಾಕ್ಷಸರನ್ನು  ಸಂಹಾರ ಮಾಡಿದರು. ಈ ರೀತಿಯಾಗಿ ಕಾಲಕೇಯರಂಬ ರಾಕ್ಷಸರಿಂದ ದೇವತೆಗಳನ್ನು ರಕ್ಷಿಸಿದರು. ಅಲ್ಲದೆ ರಾಮಾಯಣದಲ್ಲಿ   ಶ್ರೀ ರಾಮ ಸೀತಾ ಮತ್ತು ಲಕ್ಷ್ಮಣರು ಹದಿನಾಲ್ಕು ವರ್ಷಗಳ ವನವಾಸದ ಅವಧಿಯಲ್ಲಿ ಅಗಸ್ತ್ಯ ಮಹರ್ಷಿಗಳ ಆಶ್ರಮಕ್ಕೆ ಬಂದಿದ್ದರು.....ಇಷ್ಟು ಹೇಳಿ ಅಗಸ್ತ್ಯ ಋಷಿಯು  ಛದ್ಮವೇಷದಿಂದ ನಾನು ಸಂತೋಷವಾಗಿದ್ದೇನೆ ಎಂದು ವೇದಿಕೆಯಿಂದ ಕೆಳಗಿಳಿದನು.
     ವೇದಿಕೆಯಲ್ಲಿದ್ದ ಮುಖ್ಯ ಗುರುಗಳನ್ನು ಒಳಗೊಂಡಂತೆ ಮುಂಭಾಗದಲ್ಲಿ ಕುಳಿತಿದ್ದ ಎಲ್ಲ ವಿದ್ಯಾರ್ಥಿಗಳು ಚಪ್ಪಾಳೆಯೊಂದಿಗೆ ವಿನೀತನನ್ನು ಅಭಿನಂದಿಸಿದರು. ಮುಖ್ಯ ಗುರುಗಳು ಒಬ್ಬ ಋಷಿಯ ಗಾಂಭೀರ್ಯ ಹೇಗಿರುತ್ತೆ, ಎನ್ನುವುದನ್ನು ತುಂಬಾ ಚೆನ್ನಾಗಿ ಛದ್ಮವೇಷದಲ್ಲಿ ತಯಾರಿ ಮಾಡಿದ್ದೀರಾ ಎಂದು ಶಿಕ್ಷಕರಿಗೆ ಅಭಿನಂದಿಸಿದರು. ಆಗ ವಿನೀತನ ಶಿಕ್ಷಕರು ಇದನ್ನು ನಾವು ಮಾಡಿಸಿಲ್ಲ ಗುರುಗಳೇ, ವಿನೀತನ ತಾಯಿಯೇ ಈತನಿಗೆ ಈ ಪಾತ್ರದ ಬಗ್ಗೆ ತಯಾರಿ ಮಾಡಿಸಿದ್ದಾರೆ ಎಂದು ಅಭಿಮಾನದಿಂದ ಹೇಳಿದಾಗ ,ಇದಕ್ಕೆ ಹೇಳುವುದು  ತಾಯಿಯೇ ಮೊದಲ ಗುರು ಎಂದು  ಹೇಳಿ ,ವಿನೀತನ ತಾಯಿಯನ್ನು ವೇದಿಕೆಗೆ ಕರೆದು,  ವಿನೀತನಿಗೆ ಪ್ರಥಮ ಬಹುಮಾನ ನೀಡುವುದರ ಜೊತೆಗೆ  ಅಭಿನಂದಿಸಿದರು.  ತಾಯಿಯು ಪ್ರೀತಿಯಿಂದ ಹೇಳಿದ ವಿಷಯಗಳು ಮಗುವಿನ ಮನದಲ್ಲಿ ಆಳವಾಗಿ ಬೇರೂರಿ ಅವನು ಕಲಿಕೆಯಲ್ಲಿ ನಿಪುಣನಾಗುತ್ತಾನೆ. ಆದ್ದರಿಂದ ಮಗುವಿನ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಶಿಕ್ಷಕರ ಜೊತೆಜೊತೆಗೆ ತಂದೆ ತಾಯಿಯ ಪಾತ್ರವೂ ಸಹ ಮುಖ್ಯ ಎಂದು ನಾವು ಮೇಲಿಂದ ಮೇಲೆ ಹೇಳುತ್ತೇವೆ. ಮಕ್ಕಳ ಶ್ರಯೋಭಿವೃದ್ಧಿಗಾಗಿ ಎಲ್ಲ ಪಾಲಕರು ಸಹಕರಿಸಿ ಎಂದು ಎಲ್ಲರನ್ನುದ್ದೇಶಿಸಿ ಮುಖ್ಯ ಗುರುಗಳು ಮಾತನಾಡಿದರು.ಪದ್ಮಾಳಿಗೆ ತನ್ನ ಮಗ ವಿನೀತನಲ್ಲಿ ಮೂಡಿದ ಆತ್ಮವಿಶ್ವಾಸದ ಬಗ್ಗೆ ಹೆಮ್ಮೆ ಎನಿಸಿತು.
- ಶ್ರೀಮತಿ ಸುಮಂಗಲಾ ಕೃಷ್ಣ ಕೊಪ್ಪರದ, ಇಲಕಲ್.


1 ಕಾಮೆಂಟ್‌:

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...