ಸೋಮವಾರ, ಡಿಸೆಂಬರ್ 12, 2022

ಹಳ್ಳಿಯಿಂದ ದಿಲ್ಲಿವರೆಗೂ ಹೆಸರು ಮಾಡಿರುವ ಉತ್ತರ ಕರ್ನಾಟಕದ ಯುವ ಪ್ರತಿಭೆ ಸಂಜಯಕುಮಾರ ಬಿರಾದಾರ - ಚಿದಾನಂದ ಪಡದಾಳೆ.

"ಕಲಿಕೆಯು ಸೃಜನಶೀಲತೆಯನ್ನು ನೀಡುತ್ತದೆ, ಸೃಜನಶೀಲತೆ ಚಿಂತನೆಗೆ ಕಾರಣವಾಗುತ್ತದೆ, ಚಿಂತನೆ ಜ್ಞಾನವನ್ನು ನೀಡುತ್ತದೆ ಜ್ಞಾನವು ನಿನ್ನನ್ನು ಶ್ರೇಷ್ಠ ನನ್ನಾಗಿ ಮಾಡುತ್ತದೆ." ಜ್ಞಾನ ಬೆಲೆಕಟ್ಟಲಾಗದ ಸಂಪತ್ತು. ಜ್ಞಾನ ವ್ಯಕ್ತಿಯಲ್ಲಿ ನೈತಿಕತೆಯನ್ನು ತುಂಬಿ ಸದೃಢರನ್ನಾಗಿ ಮಾಡಿ ಸಮಾಜದಲ್ಲಿ ಗೌರವವನ್ನು ಕಲ್ಪಿಸುವ ಮೊದಲ ಮೆಟ್ಟಿಲು. ಇದಕ್ಕಾಗಿ ಜಗಜ್ಯೋತಿ ಬಸವೇಶ್ವರರು "ಜ್ಞಾನದ ಬಲದಿಂದ ಅಜ್ಞಾನದ ಕೇಡು"ಎಂದು ತಮ್ಮ ವಚನದಲ್ಲಿ ಹೇಳಿಕೊಂಡಿದ್ದಾರೆ. ಏಕೆಂದರೆ, ಜ್ಞಾನದ ಮಹತ್ವವೇ ಇಂಥದ್ದು. ಈ ಮೇಲೆ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಹೇಳಿದ ಮಾತು ಅಕ್ಷರಶಃ ಸತ್ಯವಾದುದ್ದು.

 ಸೃಜನಶೀಲರಾಗಿ ಬದುಕಿ ಜ್ಞಾನವನ್ನು ಸಂಪಾದಿಸಿಕೊಂಡರೆ ಅದು ನಿಮ್ಮನ್ನು ಶ್ರೇಷ್ಠರನ್ನಾಗಿ ಮಾಡುವುದರಲ್ಲಿ ಎರಡು ಮಾತಿಲ್ಲ!. ಆದರೆ ಅದೆಷ್ಟೋ ವಿದ್ಯಾರ್ಥಿಗಳು ಶಿಕ್ಷಣವನ್ನು ಅಲ್ಪವಾಗಿ ಅರ್ಥೈಸಿಕೊಂಡು ಅಂಕಗಳಿಗೆ ಸೀಮಿತವಾಗಿ ಬಿಡುತ್ತಾರೆ. ಆದರೆ ಶಿಕ್ಷಣವು ಜ್ಞಾನ ಮತ್ತು ಜ್ಞಾನದ ಮೂಲಕ ಅಂತ್ಯವಿಲ್ಲದ ಪ್ರಯಾಣವಾಗಿದೆ. ಈ ಮಾತುಗಳಿಗೆ ಪಡಿಯಂಚಿನಂತಿರುವವರು ವಿದ್ಯಾರ್ಥಿ ಸಹೋದರ ಸಂಜಯಕುಮಾರ ಯಂಕನಗೌಡ ಬಿರಾದಾರ. 
ನಾನು ನಿಮಗೆ ಪರಿಚಯಿಸಲಿರುವ ಯುವಾಂಕಣದ ಯುವ ಸ್ಫೂರ್ತಿ ಬರಿ ವಿದ್ಯಾರ್ಥಿ ಮಾತ್ರವಲ್ಲ, ಬದಲಿಗೆ ತನ್ನ ವಯಸ್ಸಿಗೆ ಮೀರಿದ ಸಾಧನೆ ಮಾಡಿದ ಇನ್ನೂ ಮಾಡುತ್ತಲೇ ಸಾಗುತ್ತಿರುವ ಯುವ ಸಾಧಕ. ಸಂಜಯಕುಮಾರ ಬಿರಾದಾರ ಅವರು ಮೂಲತಃ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ತೆಲಗಿ ಗ್ರಾಮದವರು. 1999 ಜುಲೈ 4 ರಂದು ಯಂಕನಗೌಡ ಬಿರಾದಾರ ಹಾಗೂ ಸುವರ್ಣ ಬಿರಾದಾರ ಅವರ ಕಿರಿಯ ಪುತ್ರನಾಗಿ ಜನಿಸಿದರು. ತಮ್ಮ ಪಿಯುಸಿ ವರೆಗಿನ ಶಿಕ್ಷಣವನ್ನು ಸ್ವಗ್ರಾಮ ತೆಲಗಿಯಲ್ಲಿಯೇ ಪಡೆದುಕೊಂಡರು. ಕಾಲೇಜಿಗೆ ಪ್ರಥಮ ಸ್ಥಾನ ಬರುವುದರ ಮೂಲಕ ಪ್ರತಿಭಾವಂತ ವಿದ್ಯಾರ್ಥಿಯಾಗಿ ಕಾಲೇಜಿನಲ್ಲಿ ಗುರುತಿಸಿಕೊಂಡಿದ್ದರು. 

ಶಾಲಾ ದಿನಗಳಿಂದಲೂ ಕ್ರೀಯಾಶಿಲರಾಗಿದ್ದ ಸಂಜಯಕುಮಾರ, ಕ್ರೀಡೆ, ಯೋಗಾಸನ, ಛದ್ಮವೇಷ, ಮಿಮಿಕ್ರಿಯೆ, ಭಾಷಣ, ಸ್ಪರ್ಧೆಗಳನ್ನು ಸೇರಿದಂತೆ ಪ್ರತಿಯೊಂದರಲ್ಲಿಯೂ  ಭಾಗವಹಿಸುವುದರಲ್ಲಿ ಮೊದಲಿಗರು. ವಿದ್ಯಾರ್ಥಿ ಜೀವನದಲ್ಲಿ ಪ್ರತಿಭಾವಂತರಾಗಿದ್ದ ಸಂಜಯಕುಮಾರ ಶಾಲಾ, ಕಾಲೇಜುಗಳಲ್ಲಿ ವಿದ್ಯಾರ್ಥಿ ಪ್ರತಿನಿಧಿಯಾಗಿ ಗುರುತಿಸಿಕೊಂಡಿದ್ದು  ಅವರ ನಾಯಕ ಗುಣದ ಮೇಲೆ ಬೆಳಕು ಚೆಲ್ಲುತ್ತದೆ. ಪ್ರೌಢ ಶಿಕ್ಷಣದಲ್ಲಿ ಓದುತ್ತಿರುವಾಗ ಕ್ರೀಡಾಕೂಟದಲ್ಲಿ ಭಾಗವಹಿಸಿ ಜಿಲ್ಲಾ ಮಟ್ಟದಲ್ಲಿ 5000 ಮೀಟರ್ ವೇಗ ನಡಿಗೆಯಲ್ಲಿ ಪ್ರಥಮ ಸ್ಥಾನವನ್ನು ಪಡೆಯುವುದರ ಮೂಲಕ ಶಾಲೆಗೆ ಕೀರ್ತಿಯನ್ನು ತಂದಿದ್ದಾರೆ.
ಉನ್ನತ ವ್ಯಾಸಂಗಕ್ಕಾಗಿ ವಿದ್ಯಾಕಾಶಿ, ಫೇಡಾನಗರಿ, ಸಾಂಸ್ಕೃತಿಕ ರಾಜಧಾನಿ ಎಂದೆ ಪ್ರಸಿದ್ಧಿಯಾದ ಧಾರವಾಡಕ್ಕೆ ಬಂದರು. ಇಲ್ಲಿಯ ಪ್ರತಿಷ್ಠಿತ ಜ್ಞಾನ ದೇಗುಲವಾದ ಕರ್ನಾಟಕ ಮಹಾವಿದ್ಯಾಲಯದಲ್ಲಿ ಬಿ.ಎ ಪದವಿಗೆ ಪ್ರವೇಶ ಪಡೆದರು. ಸಮಾಜದ ಬಗ್ಗೆ ಅತೀವ ಕಾಳಜಿ ಹೊಂದಿರುವ ಸಂಜಯಕುಮಾರ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆಗೆ ಸೇರಿಕೊಂಡು ನೂರಾರು ಕಾರ್ಯಕ್ರಮಗಳಲ್ಲಿ ಸ್ವಯಂಸೇವಕರಾಗಿ ಭಾಗವಹಿಸಿದ್ದಾರೆ. ಕಾಲೇಜಿನ ವಾರ್ಷಿಕ ಸಂಚಿಕೆಯಾದ ನೀನಾದದ ವಿದ್ಯಾರ್ಥಿ ಸಂಪಾದಕರಾಗಿ, ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಅಷ್ಟೇ ಅಲ್ಲದೆ  ಭಾರತೀಯ ಸೇವಾದಳ, ಎಬಿವಿಪಿ, ಯುವಕ ಬಿರಾದರಿ ಭಾರತ, ಯುವ ಸಂಸತ್ತು, ರಾಷ್ಟ್ರೀಯ ವಿದ್ಯಾರ್ಥಿ ಪರಿಷತ್ (ಬಿ.ಸಿ.ಎಸ್), ರಾಷ್ಟ್ರೀಯ ಅಂಗವಿಕಲರ ಸಕ್ಷಮ ವೇದಿಕೆ, ಭಾವೈಸಿರಿ ವೇದಿಕೆ, ಆರ್ಟ್ ಆಫ್ ಗಿವಿಂಗ್ ಸಂಸ್ಥೆ, ಆಸರ ಇವುಗಳ ಸದಸ್ಯರಾಗಿ ಹಾಗೂ ಕರ್ನಾಟಕ ಮಾನವ ಸಂಪನ್ಮೂಲ ಅಭಿವೃದ್ಧಿ ಟ್ರಸ್ಟ್ ನ್ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾಗಿ, ಜಾನಪದ ಯುವ ಬ್ರಿಗೇಡ್ ಧಾರವಾಡ ಜಿಲ್ಲಾ ಸಂಚಾಲಕರಾಗಿ, ಸಿರಿನಾಡು ವೆಬ್ ಟಿವಿ ಕಾರ್ಯಕ್ರಮದ ಸಂಯೋಜಕರಾಗಿ ಮತ್ತು ರಾಷ್ಟ್ರೀಯ ಯುವ ವೇದಿಕೆಯ ಮೂರು ರಾಜ್ಯಗಳ (ಕರ್ನಾಟಕ, ಮಹಾರಾಷ್ಟ್ರ, ಕೇರಳ) ಸಂಯೋಜಕರಾಗಿ ಪ್ರಸ್ತುತ ಸೇವೆ ಸಲ್ಲಿಸುತ್ತಿದ್ದಾರೆ.
ನಾಲ್ಕು ವರ್ಷಗಳ ಅವಧಿಯಲ್ಲಿ ಸುಮಾರು ಐದುನೂರಕ್ಕೂ ಹೆಚ್ಚು ಗಿಡಗಳನ್ನು ನೆಟ್ಟಿದ್ದಾರೆ. ಅದೇ ರೀತಿ ನೂರಕ್ಕೂ ಹೆಚ್ಚು ಕಾರ್ಯಕ್ರಮದಲ್ಲಿ ವಿವಿಧ ವಿಷಯದ ಕುರಿತು ಜಾಗೃತಿಯನ್ನು ಮೂಡಿಸಿ ಜನರಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವಲ್ಲಿ ಯಶಸ್ವಿಯಾಗಿದ್ದಾರೆ. ತಮ್ಮ ಬಿಡುವಿನ ಸಮಯದಲ್ಲಿ ಅನಾಥಾಶ್ರಮ ವೃದ್ಧಾಶ್ರಮಗಳಿಗೆ ತಮ್ಮ ಕೈಲಾದ ಸಹಾಯ ಮಾಡುತ್ತಿರುವುದು ಶ್ಲಾಘನೀಯ. ವಿಶೇಷ ಚೇತನ ವಿದ್ಯಾರ್ಥಿಗಳ ಪರೀಕ್ಷೆಗಳಂತ ಸಂದರ್ಭದಲ್ಲಿ ಅವರಿಗಾಗಿ ಪರೀಕ್ಷೆಯನ್ನು ಬರೆದು ಅವರಿಗೆ ಕಣ್ಣಾಗಿದ್ದಾರೆ. ಹಾಗೂ ಐದಕ್ಕೂ ಹೆಚ್ಚು ವಿಶೇಷ ಚೇತನರ ಉದ್ಯೋಗ ಮೇಳದಲ್ಲಿ ನೂರಕ್ಕೂ ಹೆಚ್ಚು ಸ್ನೇಹಿತರ, ಸ್ವಯಂಸೇವಕರ ಸಹಾಯದಿಂದ ಸಾವಿರಕ್ಕೂ ಹೆಚ್ಚು ವಿಶೇಷ ಚೇತನರ ಸೇವೆಯನ್ನು ಮಾಡಿದ್ದಾರೆ. ವಿಶೇಷ ಚೇತನರ ದಾಖಲಾತಿ ಪರಿಶೀಲನೆಲ್ಲಿ ಹಾಗೂ ಮೇಳದಲ್ಲಿ ಪಾಲ್ಗೊಂಡವರನ್ನು ತಮ್ಮ ಸ್ವಂತ ಸ್ಥಳಗಳಿಗೆ ತಲುಪಿಸುವಲ್ಲಿ ಉಂಟಾದ ಗೊಂದಲಗಳನ್ನು ತಮ್ಮ ಸೇವಾ ಮನೋಭಾವದಿಂದ ಯಶಸ್ವಿಯಾಗಿ ಬಗೆಹರಿಸಿ ಅವರ ಆಶಾಕಿರಣರಾಗಿದ್ದಾರೆ.
ಇವರ ನಿಸ್ವಾರ್ಥ ಸೇವಾ ಮನೋಭಾವವನ್ನು ಗುರುತಿಸಿ ನ್ಯೂಸ್ ಟೈಮ್, ಧಾರವಾಡ ನ್ಯೂಸ್ ಹಾಗೂ ಹಲವಾರು ಪತ್ರಿಕೆಗಳಲ್ಲಿ, ಟಿ ವಿ ಮಾಧ್ಯಮಗಳಲ್ಲಿ ಇವರ ಸಾಧನೆಯ ಕುರಿತು ಸಂದರ್ಶನಗಳು ಬಿತ್ತರಿಸಿದ್ದಾರೆ. 
ಅಷ್ಟೇ ಅಲ್ಲದೆ ಸಹೋದರ ಸಂಜಯ್ ಡಿ ಡಿ ಚಂದನದ ಮಧುರ ಮಧುರವಿ ಮಂಜುಳಗಾನದಲ್ಲಿ ಭಾಗವಹಿಸಿದ್ದಾರೆ. ಹಾಗೂ ಧಾರವಾಡದ ಆಕಾಶವಾಣಿಯಲ್ಲಿ ಕವಿತಾ ವಾಚನ ಮಾಡಿದ್ದಾರೆ. ದೇಶದ ಐದು ಭಾಷೆಗಳಲ್ಲಿ ನಿರರ್ಗಳವಾಗಿ (ಕನ್ನಡ, ಹಿಂದಿ, ಇಂಗ್ಲೀಷ್,ಲಂಬಾಣಿ, ತೆಲುಗು) ಮಾತನಾಡುತ್ತಾರೆ. ಇವರು ಕರ್ನಾಟಕ ರಾಜ್ಯದ ಮೂರು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಸ್ವಯಂಸೇವಕನಾಗಿ ಕಾರ್ಯನಿರ್ವಹಿಸಿ ಅತ್ಯುತ್ತಮ ಸ್ವಯಂಸೇವಕ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ನೂರಕ್ಕೂ ಹೆಚ್ಚು ಜನರಿಗೆ ರಕ್ತದಾನವನ್ನು ಮಾಡಿಸಿದ್ದಾರೆ. 500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪುಸ್ತಕ, ಪೆನ್, ಸ್ವಯಂಸೇವಕರಿಗೆ ಕ್ಯಾಪ್ ಮತ್ತು ಸರ್ಕಾರಿ ಶಾಲೆಗಳಿಗೆ ಗಿಡಗಳನ್ನು ಕೊಡುಗೆಯಾಗಿ ನೀಡಿರುವುದು ಇವರ ಇನ್ನೊಂದು ಸಾಧನೆ ಎನ್ನಬಹುದು. ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಆಯೋಜಿಸಿದ ಮಾತಾಡ್ ಮಾತಾಡ್ ಕನ್ನಡ, ಲಕ್ಷ ಕಂಠಗಳ ಗೀತಗಾಯನ ಕಾರ್ಯಕ್ರಮದಲ್ಲಿ 35 ಯುವ ಕಲಾವಿದರನ್ನು ಸಂಘಟಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ. ಆದ್ದರಿಂದ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಮಾನ್ಯ ಶ್ರೀ ಸುನಿಲ್ ಕುಮಾರ್ ಅವರು ಇವರಿಗೆ ಪ್ರಶಂಸನಾ ಪತ್ರ ಮತ್ತು ಐದು ಸಾವಿರ ನಗದು ನೀಡಿ ಗೌರವಿಸಿದ್ದಾರೆ. ಹೀಗೆ ಚಿತ್ರಕಲಾ ರಂಗೋಲಿ ವಿನ್ಯಾಸಕರಾಗಿ, ಯುವ ಬರಹಗಾರರಾಗಿ, ಭಾಷಣಕಾರರಾಗಿ, ಉತ್ತಮ ನಿರೂಪಕರಾಗಿ, ಕಾರ್ಯಕ್ರಮ ಸಂಘಟಕರಾಗಿ, ಯುವ ಸಮಾಜ ಸೇವಕರಾಗಿ, ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ.
ಸಹೋದರ ಸಂಜಯಕುಮಾರ ರಾಜ್ಯ, ರಾಷ್ಟ್ರಮಟ್ಟದಲ್ಲಿ ಅದೆಷ್ಟೊ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಅವುಗಳಲ್ಲಿ ಕೆಲವೊಂದಿಷ್ಟು ನಿಮಗೆ ತಿಳಿಸಲು ಬಯಸುತ್ತೇನೆ. 2019/20ನೇ ಸಾಲಿನ ಪೂನಾದ ವರ್ಲ್ಡ್ ಫೀಸ್ ಯೂನಿವರ್ಸಿಟಿ ಆಯೋಜಿಸಿದ ‘9ನೇ ಭಾರತೀಯ ಛಾತ್ರ ಸಂಸತನಲ್ಲಿ’ ಮಾಜಿ ರಾಷ್ಟ್ರಪತಿಗಳಾದ ಪ್ರತಿಭಾ ದೇವಿ ಪಾಟೀಲ್ ಅವರ ಸಮಕ್ಷಮದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. 2020 ರಲ್ಲಿ ನ್ಯಾಷನಲ್ ಯೂತ್ ಡೆವಲಪ್ಮೆಂಟ್ ಕೌನ್ಸಿಲ್ ಆಯೋಜಿಸಿದ ‘ನ್ಯಾಷನಲ್ ಕಾನ್ಫರೆನ್ಸ್ ಆಫ್ ನೇಚರ್ ಕಂಜರ್ವೇಶನ್’ ನಲ್ಲಿ ರಾಜ್ಯಸಭಾ ಸದಸ್ಯರಾದ ವಂದನಾ ಚೌವ್ಹಾಣ್ ಅವರೊಂದಿಗೆ ಸಂವಾದದಲ್ಲಿ ಪಾಲ್ಗೊಂಡಿದ್ದಾರೆ. 2020ರಲ್ಲಿ ದೆಹಲಿಯ ವಿಗ್ಯಾನ್ ಭವನದಲ್ಲಿ ವರ್ಲ್ಡ್ ಫೀಸ್ ಯೂನಿವರ್ಸಿಟಿ ಆಯೋಜಿಸಿದ ‘10ನೇ ಭಾರತೀಯ ಛಾತ್ರ ಸಂಸತ್ತನಲ್ಲಿ’ ಮಾಜಿ ರಾಷ್ಟ್ರಪತಿಗಳಾದ ಶ್ರೀ ಪ್ರಣಬ್ ಮುಖರ್ಜಿ ಹಾಗೂ ಉಪರಾಷ್ಟ್ರಪತಿ ಶ್ರೀ ವೆಂಕಯ್ಯ ನಾಯ್ಡು ಅವರ ಉಪಸ್ಥಿತಿಯಲ್ಲಿ ವಿದ್ಯಾರ್ಥಿ ಪ್ರತಿನಿಧಿಯಾಗಿ ಭಾಗಿಯಾಗಿದ್ದಾರೆ. 2021ರಲ್ಲಿ ಬಾಂಬೆಯಲ್ಲಿ ಪದ್ಮಶ್ರೀ ಪುರಸ್ಕೃತರಾದ ಶ್ರೀ ಕ್ರಾಂತಿ ಷಾ ಅವರು ಆಯೋಜಿಸಿದ ಎರಡು ದಿನಗಳ ‘ರಾಷ್ಟ್ರೀಯ ದಾಂಡಿ ಸ್ಮೃತಿ’ ಶಿಬಿರದಲ್ಲಿ ಭಾಗವಹಿಸಿದ್ದಾರೆ. 2021ರಲ್ಲಿ ಕೋವಿಡ್ ನಿಂದಾಗಿ ವರ್ಚುವಲ್ ನಲ್ಲಿ ಆಯೋಜಿಸಿದ ‘11ನೇ ಭಾರತೀಯ ಛಾತ್ರ ಸಂಸತನಲ್ಲಿ’ ವಿದ್ಯಾರ್ಥಿ ಪ್ರತಿನಿಧಿಯಾಗಿ ಭಾಗವಹಿಸಿದ್ದಾರೆ. 2022ರಲ್ಲಿ ಅಂತರಾಷ್ಟ್ರೀಯ ತ್ರಿಪುರ ರಾಜ್ಯದ ಗೌರ್ನರ್ ಭವನದಲ್ಲಿ ನಡೆದ ‘ರಾಷ್ಟ್ರೀಯ ಹೆರಿಟೇಜ್ ಫೆಸ್ಟನಲ್ಲಿ’ ಭಾಗವಹಿಸಿದ್ದಾರೆ. 2022ರಲ್ಲಿ ಭಾರತದ ಟ್ಯಾಲೆಂಟ್ ನೋಮಿಕ್ಸ ಮತ್ತು ಜಪಾನ್ ನ ಕೆಎಎಸ್ ಸಂಸ್ಥೆಗಳ ಜಂಟಿ ಆಯೋಜನೆಯಲ್ಲಿ 'ಯೂನಿವರ್ಸ ಟು ಇಕ್ವಿವೆರಸ್: ಸ್ಟಾರ್ಟ್ ದ ರಿಪ್ಪಲ್' ನ 6ನೇ ವಾರ್ಷಿಕ ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ. 
2022ರಲ್ಲಿ ಭಾರತ ಸರ್ಕಾರ ವರ್ಚುವಲ್ ನ ಮೂಲಕ ಪುದುಚೇರಿಯಲ್ಲಿ ಎರಡು ದಿನಗಳ ಕಾಲ ಆಯೋಜಿಸಿದ ‘25ನೇ ವರ್ಷದ ನ್ಯಾಷನಲ್ ಯೂತ್ ಫೆಸ್ಟಿವಲ್’ ನಲ್ಲಿ ಭಾಗವಹಿಸಿದ್ದಾರೆ. ಇತ್ತಿಚಿಗೆ ಯುವಕ ಬಿರಾದರಿ ಭಾರತ ಆಯೋಜಿಸಿದ ಉತ್ತರ ಪ್ರದೇಶದಲ್ಲಿ ‘ರಾಷ್ಟ್ರೀಯ ಯುವ ನಾಯಕತ್ವ ಶಿಬಿರದಲ್ಲಿ’ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದಾರೆ. ಜೂನ್ ನಲ್ಲಿ ಯುವಕ ಬಿರಾದರಿ ಭಾರತ ಸಂಸ್ಥೆಯು ಮಹಾರಾಷ್ಟ್ರ ರಾಜ್ಯದ ಶಹಪುರ್ ತಾನೆಯಲ್ಲಿ ಆಯೋಜಿಸಿದ ಐದು ದಿನಗಳ ಕಾಲ ‘ರಾಷ್ಟ್ರೀಯ ವೃಕ್ಷ ಮೀಟ್ ಹಾಗೂ ರಾಷ್ಟ್ರೀಯ ನಾಯಕತ್ವ ಶಿಬಿರದಲ್ಲಿ’ ಭಾಗಿಯಾಗಿದ್ದಾರೆ. ದೆಹಲಿಯ ಮಹಾರಾಷ್ಟ್ರ ಸದನದಲ್ಲಿ ಅಂತರಾಷ್ಟ್ರೀಯ ಯುವ ದಿನದ ಅಂಗವಾಗಿ ನಡೆದ ‘ರಾಷ್ಟ್ರೀಯ ಯುವ ಪಾರ್ಲಿಮೆಂಟಿನಲ್ಲಿ’ ಕರ್ನಾಟಕವನ್ನು ಪ್ರತಿನಿಧಿಸಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಭಾರತ ಸರ್ಕಾರವು ಆಯೋಜಿಸಿದ ಎನ್.ಎಸ್.ಎಸ್ ‘ರಾಷ್ಟ್ರೀಯ ಭಾವೈಕ್ಯತೆ ಶಿಬಿರದಲ್ಲಿ’ ಆರ್ಗನೈಸ್ ಕಮಿಟಿ ಸದಸ್ಯರಾಗಿ ಪಾಲ್ಗೊಂಡಿದ್ದಾರೆ. ಹಾಗೆಯೇ 5 ‘ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ’ ಭಾಗವಹಿಸಿದ್ದಾರೆ. 
ಇವರು ಸಮಾಜಕ್ಕೆ ಸಲ್ಲಿಸಿದ ಅಭೂತಪೂರ್ವ ಸೇವೆಯನ್ನು ಕಂಡು  ರಾಜ್ಯ ಹಾಗೂ ರಾಷ್ಟ್ರಮಟ್ಟದ ಪ್ರಶಸ್ತಿ ಗೌರವಗಳು ಹರಸಿಬಂದಿವೆ. ಅವುಗಳಲ್ಲಿ ಕೆಲವು -ಗ್ರಾಮ ಸ್ವಚ್ಛತೆಗಾಗಿ 2017ರಲ್ಲಿ ಕೇಂದ್ರ ಸಚಿವರಾದ ಶ್ರೀ. ಪ್ರಲ್ಹಾದ ಜೋಶಿ ಮತ್ತು ಸಭಾಪತಿಗಳಾದ ಸನ್ಮಾನ್ಯ. ಬಸವರಾಜ ಹೊರಟ್ಟಿ ಅವರಿಂದ ‘ರಾಜ್ಯ ಯುವ ಪುರಸ್ಕಾರ’ ಪಡೆದುಕೊಂಡಿದ್ದಾರೆ. 2019-20 ನೇ ಸಾಲಿನ ಕರ್ನಾಟಕ ಸರ್ಕಾರ ಕೊಡ ಮಾಡುವ ‘ಎನ್.ಎಸ್.ಎಸ್ ಅತ್ಯುತ್ತಮ ಸ್ವಯಂಸೇವಕ ರಾಜ್ಯ ಪ್ರಶಸ್ತಿಯನ್ನು’ ಪಡೆದುಕೊಂಡಿದ್ದಾರೆ. 2018ರಲ್ಲಿ ಹೂವಿನಹಡಗಲಿಯಲ್ಲಿ ನಡೆದ 11ನೇ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದಲ್ಲಿ ‘ಚಿಕ್ಕ ಪ್ರಾಯದಲ್ಲಿ ಅಪೂರ್ವ ಸಾಧನೆ  ಮಾಡಿದ್ದಕ್ಕಾಗಿ ಕರ್ನಾಟಕ ಪ್ರತಿಭಾ ರತ್ನ ರಾಜ್ಯಪ್ರಶಸ್ತಿ’ ಯನ್ನು ನೀಡಿ ಗೌರವಿಸಿದ್ದಾರೆ. 2019/20 ನೇ ಸಾಲಿನ ಕರ್ನಾಟಕ ವಿಶ್ವವಿದ್ಯಾಲಯ ಕೊಡ ಮಾಡುವ ಪ್ರತಿಷ್ಠಿತ ‘ಡಾ.ಡಿ ಸಿ ಪಾವಟೆ ಎನ್.ಎಸ್.ಎಸ್. ಅತ್ಯುತ್ತಮ ಸ್ವಯಂಸೇವಕ ಪ್ರಶಸ್ತಿ’ ಯನ್ನು ಪಡೆದುಕೊಂಡಿದ್ದಾರೆ. 2020ನೇ ಸಾಲಿನಲ್ಲಿ ಶ್ರೀಮತಿ ಅಂಜಲಿ ಮಾಯಾಡಿಯೋ ಅಂಬೇಡ್ಕರ ಅವರು ಇವರ ಸಮಾಜಸೇವೆಗಾಗಿ ಅಂಬೇಡ್ಕರ ಅವರ 64ನೇ ಮಹಾಪರಿನಿರ್ವಾಣ  ದಿವಸದ ಪ್ರಯುಕ್ತ ‘ಮೂಕನಾಯಕ ಅ ಸೈಲೆಂಟ್ ಹಿರೋ’ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ. 2020ರಲ್ಲಿ ಅಖಿಲ ಕರ್ನಾಟಕ ಹವ್ಯಾಸಿ ರಂಗಭೂಮಿ ಮತ್ತು ಸರ್ವ ಜಾನಪದ ಕಲಾವಿದರ ಸಂಘ, ಬೆಂಗಳೂರು ಇವರ ಜಾನಪದ ಹಾಗೂ ಸಮಾಜ ಸೇವೆಯಲ್ಲಿ ಸಲ್ಲಿಸಿದ ಸೇವೆಗಾಗಿ ‘ಸಾಹಿತ್ಯ ಸೇವಾರತ್ನ ರಾಜ್ಯ ಪ್ರಶಸ್ತಿ’ ನೀಡಿ ಗೌರವಿಸಿದ್ದಾರೆ. ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದಿಂದ ಯುವ ಸಬಲೀಕರಣ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ 2020/21ನೇ ಸಾಲಿನ ‘ಸ್ವಾಮಿ ವಿವೇಕಾನಂದ ಸದ್ಭಾವನಾ ರಾಜ್ಯ ಪ್ರಶಸ್ತಿ’ ಯನ್ನು ನೀಡಿ ಗೌರವಿಸಿದ್ದಾರೆ. ಇ.ಎಸ್.ಎನ್ ಪಬ್ಲಿಕೇಶನ್ ಅವರು ಆಯೋಜಿಸಿದ್ದ ಇಂಟರ್ನ್ಯಾಷನಲ್ ಕಾನ್ಫರೆನ್ಸ್ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಸಮಾಜ ಸೇವಾ ಕ್ಷೇತ್ರಕ್ಕೆ 2022ನೇ ಸಾಲಿನ ‘ಗ್ಲೋಬಲ್ ಐಕಾನಿಕ್ ಎಜುಕೇಶನ್ ಅವಾರ್ಡ್’ ನ್ನು ನೀಡಿ ಗೌರವಿಸಲಾಗಿದೆ. 2022ನೇ ಸಾಲಿನ ಸಮಾಜ ಸೇವೆ ಹಾಗೂ ಎನ್.ಎಸ್.ಎಸ್. ನಲ್ಲಿಯ ಕಾರ್ಯವೈಖರಿಗಾಗಿ ಭಾರತ ಸರ್ಕಾರದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಶ್ರೀ ಮಹೇಂದ್ರನಾಥ ಪಾಂಡೆ ಅವರು ‘ರಾಷ್ಟ್ರೀಯ ಯುವ ಐಕಾನ್ ರಾಷ್ಟ್ರ ಪ್ರಶಸ್ತಿಯನ್ನು’ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಮಿಜೋರಾಂನ ನಿವೃತ್ತ ರಾಜ್ಯಪಾಲರಾದ ಶ್ರೀ ಅಮಲೋಕ್ ರತನ್ ಕೋಹ್ಲಿ ಹಾಗೂ  ಉಪಸ್ಥಿತರಿದ್ದರು. ರಕ್ತದಾನ ಫೌಂಡೇಶನ್ ರಾಜಸ್ಥಾನದವರು ರಾಷ್ಟ್ರೀಯ ರಕ್ತದಾನ ಆಂದೋಲನ ದಿನಾಚರಣೆಯ ಪ್ರಯುಕ್ತ ಆಯೋಜಿಸಿದ್ದ ರಕ್ತದಾನ ಕ್ವಿಜ್ ಸ್ಪರ್ಧೆಯಲ್ಲಿ ‘ಕರ್ನಾಟಕ ರಾಜ್ಯಕ್ಕೆ ಮೂರನೇ ಸ್ಥಾನ’ ಪಡೆದಿದ್ದಾರೆ. ಭಾರತ ಸರ್ಕಾರ ಆಯೋಜಿಸಿದ್ದ 25ನೇ ವರ್ಷದ ವರ್ಚುವಲ್ ನ್ಯಾಷನಲ್ ಯೂತ್ ಫೆಸ್ಟಿವಲ್ ನಲ್ಲಿ ಭಾಗವಹಿಸುವುದರ ಮೂಲಕ ‘2047 ರಲ್ಲಿ ಭಾರತ ಎಂಬ ಪ್ರಬಂಧ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ’ ಪಡೆದಿದ್ದಾರೆ.
ಇವರು ಹಲವಾರು ಗಣ್ಯವ್ಯಕ್ತಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇನ್ಫೋಸಿಸ್ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ. ಸುಧಾಮೂರ್ತಿ ಅವರು ಅತ್ಯುತ್ತಮ ಸ್ವಯಂಸೇವಕ ಎಂದು ಇವರನ್ನು ಸನ್ಮಾನಿಸಿ ಅಭಿನಂದಿಸಿದ್ದಾರೆ. ಹಿಂದಿನ ಧಾರವಾಡ ಜಿಲ್ಲಾಧಿಕಾರಿಗಳಾದ ಶ್ರೀಮತಿ. ದೀಪಾ ಚೋಳನ್ ಅವರು ಸಂಜಯಕುಮಾರ ಅವರನ್ನು ‘ವೆರಿ ಆಕ್ಟಿವ್ ಪರ್ಸನ್’ ಎಂದು ಕರೆದಿದ್ದಾರೆ. ಶ್ರೀಮತಿ. ಕಲ್ಪನಾ ಗೋಪಾಲನ್ ಐಎಎಸ್ ಅಧಿಕಾರಿಗಳಿಂದ, ಹಿರಿಯ ಐಎಎಸ್ ಅಧಿಕಾರಿಗಳಾದ ಡಾ.ಟಿ.ಸಿ. ಪೂರ್ಣಿಮಾ ಪ್ರಸಾದ್ ಅವರಿಂದ ಅತ್ಯುತ್ತಮ ಸ್ವಯಂ ಸೇವಕ ಎಂದು ಮೆಚ್ಚುಗೆಯನ್ನು ಪಡೆದಿದ್ದಾರೆ. ಅಷ್ಟೇ ಅಲ್ಲದೇ ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ. ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಮುಖ್ಯಮಂತ್ರಿಗಳಾದ ಶ್ರೀ. ಸಿದ್ದರಾಮಯ್ಯ ಅವರಿಂದಲು ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಕೇಂದ್ರ ಸಚಿವರಾದ ಶ್ರೀ ಪ್ರಲ್ಹಾದ ಜೋಶಿ, ಸಭಾಪತಿಗಳಾದ ಶ್ರೀ ಬಸವರಾಜ ಹೊರಟ್ಟಿ, ಕೇಂದ್ರ ಸಚಿವರಾದ ಕುಮಾರಕೇತಕರ ಹಾಗೂ ಕರ್ನಾಟಕ ಸರ್ಕಾರದ ಮಾಜಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಮತ್ತು ಪ್ರಸ್ತುತ ಬಸವನ ಬಾಗೇವಾಡಿ ತಾಲ್ಲೂಕಿನ ಶಾಸಕರಾದ ಶ್ರೀ ಶಿವಾನಂದ ಎಸ್ ಪಾಟೀಲ್ ಅವರಿಂದಲೂ ಮೆಚ್ಚುಗೆಯನ್ನು ಪಡೆದಿದ್ದಾರೆ.
 ಅದೇ ರೀತಿಯಾಗಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಹಿರಿಯ ಸಾಹಿತಿ ಚಂದ್ರಶೇಖರ ಕಂಬಾರ, ನಾಡೋಜ್ ಪಾಟೀಲ ಪುಟ್ಟಪ್ಪ, ಸಾಹಿತಿ ವೀಣಾ ಶಾಂತೇಶ್ವರ, ನಾಡೋಜ ಡಾ. ಚೆನ್ನವೀರ ಕಣವಿ, ಸಾಹಿತಿ ವೈದೇಹಿ, ಬಂಡಾಯ ಸಾಹಿತಿ ಕುಂ. ವೀರಭದ್ರಪ್ಪ, ಹಾಸ್ಯ ಸಾಹಿತಿ ಭುವನೇಶ್ವರಿ ಹೆಗಡೆ, ಹಿಂದಿ ಸಾಹಿತಿ ಉರ್ಮಿಳಾ ಶಿರೀಷ್, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿಗಳಾದ ದಿವಂಗತ ಪ್ರೋ. ಎಚ್.ಎಮ್. ಮಹೇಶ್ವರಯ್ಯ, ಸಾಹಿತಿ ಪ್ರತಿಭಾ ನಂದಕುಮಾರ್ ಅವರಿಂದಲೂ ಮೆಚ್ಚುಗೆಯನ್ನು ಪಡೆದಿದ್ದಾರೆ. ಮಹಾರಾಷ್ಟ್ರದ ಯುವಕ ಬಿರಾದರಿ ಭಾರತ ಸಂಸ್ಥೆಯ ಸಂಸ್ಥಾಪಕ-ಅಧ್ಯಕ್ಷರಾದ ಪದ್ಮಶ್ರೀ ಪುರಸ್ಕೃತ ಶ್ರೀ ಕ್ರಾಂತಿ ಷಾ ಅವರಿಂದಲೂ ಮೆಚ್ಚುಗೆಯನ್ನು ಪಡೆದಿದ್ದಾರೆ. ಹೀಗೆ ಹಲವಾರು ಮಹನಿಯರಿಂದ ಮೆಚ್ಚುಗೆಯನ್ನು ಪಡೆದು ಸಾಧನೆಯ ಶಿಖರವನ್ನು ಏರುತ್ತಿದ್ದಾರೆ.
ಇಷ್ಟೆಲ್ಲಾ ಸಾಧನೆ ಮಾಡಿದಾಗಲೂ ಯಾವುದೇ ಹಮ್ಮು ಬಿಮ್ಮು ತೊರದೆ ಎಲ್ಲರೊಡನೆ ಆತ್ಮೀಯವಾಗಿ ಬೆರೆಯುತ್ತ ಯಾರೇ ಕಷ್ಟದಲ್ಲಿದ್ದರೂ ತನ್ನ ಕೈಲಾದಷ್ಟು ಸಹಾಯ ಮಾಡುತ್ತ, ಏನಾದರೂ ಒಳ್ಳೆಯ ಕೆಲಸವಾಗುತ್ತದೆ ಎಂದರೆ ಹಿಂದೆ ಮುಂದೆ ನೋಡದೆ ಮುನ್ನುಗ್ಗಿ ಆ ಕೆಲಸವನ್ನು ಯಶಸ್ವಿಯಾಗಿ ಮಾಡಲು ಪ್ರಯತ್ನಿಸುವ ಸಹೋದರ ಸಂಜಯಕುಮಾರರಂತ ಸಜ್ಜನರ ಸಂತತಿ ಸಾವಿರವಾಗಲಿ ಎಂದು ಆಶಿಸುತ್ತೇನೆ. ಹಾಗೆಯೇ ಸಹೋದರ ಸಂಜಯ ತನ್ನ ಜೀವನದಲ್ಲಿ ಇನ್ನೂ ಉನ್ನತ ಸಾಧನೆ ಮಾಡಲಿ ಮತ್ತು ಅವರಿಂದ ಹೆಚ್ಚು ಹೆಚ್ಚು ಸಮಾಜಮುಖಿ ಕೆಲಸಗಳಾಗಲಿ ಎಂದು ಹಾರೈಸುತ್ತೇನೆ.
- ಚಿದಾನಂದ ಪಡದಾಳೆ, ಲೇಖಕರು ಹಾಗೂ ಸಹ್ಯಾದ್ರಿ ಸ್ಪರ್ಧಾತ್ಮಕ ಮಾಸಪತ್ರಿಕೆ ಸಂಪಾದಕರು.




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...