ಅಕ್ಕಪಕ್ಕದ ಮನೆಯ ಗೆಳತಿಯರ ಸಂಕುಲವು
ಅಕ್ಕರದಿ ಬಂದು ಹಂಚುವರು ಎಳ್ಳು
ಸಕ್ಕರೆಯ ರಸಗುಲ್ಲ ಹೋಳಿಗೆಯ ಎಡೆನೀಡಿ
ನಕ್ಕುನಲಿಯುವರಾಗ ಕಮಲಾತ್ಮವೆ
ಬಣ್ಣಬಣ್ಣದ ರೇಷ್ಮೆ ಸೀರೆಯನು ತೊಟ್ಟಿರುವ
ಹೆಣ್ಣುಮಕ್ಕಳು ಇಕ್ಕೆಲದಿ ನಿಂತಿರೆ
ಹಣ್ಣುಹಂಪಲು ಹಂಚಿ ಸಂಭ್ರಮಿಸೆ ನಾಯಕರು
ಕಣ್ಣ ಕಾಂತಿಯ ಹೊಳಪು ಕಮಲಾತ್ಮವೆ
ಕೆಂಡವನು ಹಾಕುವರು ರಾಸುಗಳ ಓಡಿಸಲು
ಗಂಡುಗಲಿ ವೀರ ಅದರೊಡನೆ ಸರಿವ
ಕೊಂಡಾಟ ಕೂಗಾಟ ಮುಗಿಲನ್ನು ಮುಟ್ಟಿರಲು
ತಿಂಡಿಯನು ಹಂಚುವರು ಕಮಲಾತ್ಮವೆ
ಎಳ್ಳು ಜೀರಿಗೆ ಜೊತೆಗೆ ಬೆಲ್ಲವನು ಸೇರಿಸುತ
ಹಳ್ಳಿಯಲಿ ಹಂಚುವರು ತೋಷದಲ್ಲಿ
ಎಳ್ಳು ಬೆಲ್ಲವ ತಿಂದು ಸಖರನುಜರೊಡಗೂಡಿ
ಒಳ್ಳೊಳ್ಳೆ ಮಾತಾಡಿ ಕಮಲಾತ್ಮವೆ
ರೈತರಿಗೆ ಸುಗ್ಗಿಯಾ ಹಬ್ಬವಿದು ಸಂಕ್ರಾಂತಿ
ರಾತ್ರಿಯಲಿ ಹಾಕುವರು ಧಾನ್ಯರಾಶಿ
ಪಾತ್ರಧಾರಿಯ ಕರೆದು ದಾನಧರ್ಮವ ನೀಡೆ
ಭೂತಳಕೆ ಮಾದರಿಯು ಕಮಲಾತ್ಮವೆ.
- ಕಮಲಾ ರಾಜೇಶ್, ತುಮಕೂರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ