ಬೆತ್ತಲಾದ ಕರುಳ ಕಂದನೆದೆಗೆ
ಮುತ್ತನಿಟ್ಟು ಹುರುಳು ತುಂಬಿದಾಕೆ...
ಹೆತ್ತು ಹೊತ್ತು ಇರುಳು ನಿದ್ದೆಗೆಟ್ಟಾ ಮೇಲು
ಹಿತ್ತಲೊಳಗಿನ ಅವರೆಯಂತವಳು ಕಾಣೆ ಹೆಗ್ಗಳಿಕೆ...
ಚಿತ್ತವರಳಲು ಸ್ವಾತಿ ಮುತ್ತು ಮುನಿಸು ಮೊಗವಷ್ಟೇ
ಬತ್ತಲಾರದ ಒಲುಮೆ ಕೊಳವೊಂದಿದ್ದರೆ ಅದಕೆ ಸಾಟಿ
ಅವ್ವಾ.. ಅವಳಷ್ಟೇ..
ಬಿಸಿಲ ಗಾಢ ಗರ್ಭದಿಂದ ತಂಗಾಳಿ ಎಳೆತಂದು
ಬಾಳ ಹೊಸಿಲ ಮೇಲೆ ಎರೆದಳವ್ವ ತಾಪದಿ ತಾ ಮಿಂದು..
ಹೊರ ನುಸುಳಲಿಲ್ಲ ಗೋಳುಎನುತ
ಹರಿದ ಬದುಕ ಮುನ್ನೂಕಿದಳು
ಮರು ನಸು ನಕ್ಕಳವ್ವ ಅಳುವ ನುಂಗಿ
ಬಾಳಿನೆಳೆಗಳ ತೇಪೆ ಹಾಕಿದಳು...
ಕೂಡಿ ಬಾಳಲು ಕಲಿಸಿದಾಕೆ ಮರಗಿಡಗಂಟಿನಂಟಿಗೊರಗಿ...
ಬೇಡಲಿಲ್ಲ ಬಡವಿಯಾದರು
ಕರದಿ ಬಿತ್ತಿಬೆಳೆದಳು ವಸಂತಗಳ
ಕುಳಿತವಳಲ್ಲ ಕೊರಗಿ..
ಮೋಡಿಯವಳ ಲಾಲಿ ಹಾಡು
ಕಾಡೊ ಅಮಲು ಅವಳಾ ಪದ...
ಜಾಡು ತಿಳಿಸದ ಪ್ರಶಾಂತ ಬೀಡು
ನೋಡಾ ನನ್ನವ್ವಾ ಅನಂತ ಆನಂದ ಸದಾ....
ಅವಳ ಮೂಗುತ್ತಿ ಮಿನುಗಿಗೆ ನಾಚಿಯಾವು
ಬಾನ ಬಿಳಿ ಚುಕ್ಕಿ,
ಬಹಳ ಆತುರವು ಶಶಿಗೆ ಒಮ್ಮೆಗಾದರೂ ತಣಿಯಬೇಕಂತೆ ಅವ್ವನಂತರಾಳದ ಆ ತಂಪಿನಂಗಳವ ಹೊಕ್ಕಿ..
ಹವಳದಂತವಳ ನಗೆ ತಿಳಿಬೆಳಕಿನಾ ಛಾಯೆ
ನಿರಾಳ ಅವ್ವಾ ಎಂಬೀ ಪ್ರೇಮ ಭುಗ್ಗೆ ಅರಿಯಲಾರೆನಾ ಮಾಯೆ...
ಇಳೆ ಅತ್ತು ನಡುಗಿದಂತೆ,
ಮಳೆಯಿರದ ಬರದಂತೆ
ತಾಳಲಾರದ ಒಡಲ ಹಸಿವಿನoತೆ
ನನ್ನವ್ವನಾ ಅರೆಕ್ಷಣದಾ ದುಗುಡ..
ಕಳೆಕಟ್ಟಿ ನೆಲ ತಟ್ಟಿ ಹದವಾಗಿ ನಿಲ್ಲುವಳು
ಗಟ್ಟಿಗಿತ್ತಿ ನನ್ನವ್ವ ಹಿರಿವುದೇ ತಡ ಮನದ ಕಾರ್ಮೋಡ...
ನೋವಿನೆಸಳೆಲ್ಲವಾ ನುಂಗಿ ಸಿಹಿಯಾಮೃತವನ್ನಷ್ಟೇ ನೀಡುವಳು,
ಗೋವಿನಂತವಳು ಮೆಲುಕುಹಾಕುವಳು ನೆನಪ
ತುಸು ನೀ ತಿನ್ನವ್ವ ಎನ್ನಲು ಹಸಿವಿಲ್ಲವೆಂಬ ಹುಸಿ ನೆಪ....
- ಸೌಜನ್ಯ ದಾಸನಕೊಡಿಗೆ.
Estu artapurnavada salugalalli amma na bagge barediddiri.. Nimagondu salam 🙏
ಪ್ರತ್ಯುತ್ತರಅಳಿಸಿ