ರಾಮ... ರಾಮ... ರಾಮ.. ರಾಆಆಆಮ.. ಅಂತು ಮುನ್ನೂರು ಪುಟ ರಾಮನಾಮ ಬರೆದಾಯ್ತು. ಇನ್ನು ಒಂದು ಪುಟ ಬಾಕಿ ಇದ್ನ್ನ ನಾಳೆ ಬರೆದ್ರೂ ಸಾಕು. ಯಾಕೋ ಈ ಪೆನ್ನು ಸರಿಯಾಗಿ ಹತ್ತುತ್ತಲೆ ಇಲ್ವೆ ಅಪ್ಪಯ್ಯನತ್ರ ಹೇಳಿ ಹೊಸ ಇಂಕಿನ ಕಡ್ಡಿಯನ್ನಾದ್ರೂ ತರಿಸ್ಬೇಕು ಯೆಂದ ಜಾನವಿ ತನ್ನ ಗೆಳತಿ ಮಂದಾರಳ ಮುಖ ನೋಡಿ ನಕ್ಕಳು.
"ಅದೆಷ್ಟು ರಾಮನಾಮ ಬರಿಯೋದೆ ನೀನು, ಸುಮ್ಮನೆ ಕೆಲಸವಿಲ್ಲ ಅಷ್ಟೇ.
ಈ ಜನುಮಕ್ಕೆ ರಾಮ ಸಿಕ್ಕಾಗಿದೆಯಲ್ಲ ಮತ್ತೇಕಿ ರಾಮಜಪ ಅನ್ನೋದು ತಿಳಿತಾ ಇಲ್ಲ" ಯೆಂದ ಮಂದಾರ ಜಾನವಿಯೆಡೆ ಹಾಸ್ಯಭಾವದಿಂದಲೆ ಮೂತಿ ಮುರಿದು ಬಿಟ್ಟಳು.
ಈ ಜನ್ಮಕ್ಕೆ ರಾಮ ಸಿಕ್ಕಿದ್ದಾನೆ ಸರಿ ಆದ್ರೆ ಮುಂದಿನ ಜನ್ಮಕ್ಕೆ ಅವನೆ ಪುನ್ಹ ಸಿಗೋದು ಬೇಡ್ವೇನೆ...? ಮತ್ತವನೆ ಸಿಗೋದಿಕೆ ಪುಣ್ಯ ಗಿಣ್ಯ ಅಂತ ಏನ್ ಸಂಪಾದನೆ ಮಾಡೋದು ಬೇಡ್ವಾ..? ಸುಮ್ ಸುಮ್ನೆ ಕೈ ಚಾಚಿದ್ ತಕ್ಷಣ ಸಿಕ್ಬಿಡೋಕೆ ಅವನೇನು ಹಿತ್ಲಲ್ಲಿ ಸಿಗೊ ಸೀಬೆ ಹಣ್ಣೇನು...
ಜಹ್ನವಿ ತನ್ನ ರಾಮನಾಮ ಪುಸ್ತಕವ ಮುಚ್ಚಿ,ಎದೆಗವಚಿ ಹಿಡಿದು ಕಣ್ಮುಚ್ಚಿ ಅವಳ ರಾಮನನ್ನು ಸ್ಮರಿಸುತ್ತ ಮುಗುಳು ನಕ್ಕಳು.
ಆದರೂ ನಿನ್ದೇಕೊ ಅತಿಯಾಯಿತು,ಮದುವೆಗು ಮುಂಚೆಯೆ ಅದೆಷ್ಟು ಪ್ರೀತಿ, ಅದೆಷ್ಟು ನಂಬಿಕೆ ಆ ರಾಮ ಅದೆಲ್ ಇದಾನೋ, ಅವ್ನ್ಗೇನು ನಿನ್ನ ನೆನಪುoಟೋ ಇಲ್ಲವೋ ಬಲ್ಲವ್ರಾರು.
ಮಂದಾರಳ ಈ ಮಾತು ಜಹ್ನವಿಯನ್ನು ಹರಿತವಾದ ಚಾಕುವಿನಿಂದ ಒಮ್ಮೆಲೆ ಇರಿದಂತಾಯಿತು. ಮಂದಾರಳತ್ತ ಬಿರುಸು ನೋಟವ ಬೀರುತ್ತಾ ತನ್ನ ಉದ್ದನೆಯ ಲಂಗದ ತುದಿಯಂಚು ನೆಲವನ್ನೆ ಕೊಯ್ಯುವಂತೆ ವೇಗವಾಗಿ ಚಲಿಸಿಬಿಟ್ಟಳು.
"ಅಜ್ಯಮ್ಮ ನೋಡೆ... ಮಂದಾರ ಏನ್ ಅಂದ್ಲು ಅಂತ.. ರಾಮ್ಕೃಷ್ಣಾ ನನ್ನ ಮರ್ತಿದಾನೆ ಏನೆ...?"
ತೂಗು ಜೋಲಿಯ ಮೇಲೆ ಎಲೆಅಡಿಕೆಯ ಸಂಗಡ ಕುಳಿತು ವಿಹರಿಸುತ್ತಿದ್ದ ಅಜ್ಜಿಯ ಹೆಗಲಮೇಲೆ ಕೆನ್ನೆಗಳನ್ನಿಟ್ಟು ಕೇಳಿದಳು ಜಾನ್ಹವಿ.
"ಛೆ ಛೆ ಬಿಡ್ತು ಅನ್ನು. ಅದೆಂತ ಮಾತ್ ಅಂತ ಆಡ್ತಿಯೆ..? ನಿಂಗೆ ರಾಮ, ರಾಮನಿಗ್ ನೀನು ಅಂತ ಬರ್ದೇ ಕಳ್ಸಿದ್ದ ಬ್ರಹ್ಮ. ಅದಿಕ್ಕೆ ಅಲ್ವಾ ರಾಮನಿಗಾಗಿ ನೀನು ಇಷ್ಟೊಂದು ಹಾತೊರೆಯೋದು...".
ಯೆಂದ ಅಜ್ಜಿಯ ಮಾತುಗಳಿoದ ಜಾಹ್ನವಿಯ ಜೀವ ತೃಪ್ತಿಗೊಂಡರೂ,"ಮತ್ತೆ ರಾಮ..ಅವ್ನು ನನ್ ಹಾಗೆ ನಾ..." ಯೆಂದು ಅನುಮಾನದ ರಾಗ ಎಳೆದಳು .
"ಇಲ್ಲದೆ ಇರುತ್ತಾನೇನು, ಅವನು ನಿನ್ನಂತೆಯೆ ನಿನಗಾಗಿ ಹಾತೋರಿಯುತ್ತಲೆ ಇರ್ತಾನೆ. ಅದ್ಕೆ ಅಲ್ವನೆ ಹತ್ಹನ್ನೆರಡು ವರ್ಷ ಮನೆ ಮಂದಿ ಊರನೆಲ್ಲ ಬಿಟ್ಟು ಓದು ಮುಗ್ಸಿದವನು, ಈಗ ಸೀದಾ ಮನೆಗೆ ಹೋಗ್ದೆ, 'ಮಾವ ನಿಮ್ ಮನೆಗೆ ಬರ್ತಿನಿ, ನಿಮ್ನೆಲ್ಲ ನೋಡಿ ಮಾತ್ ಆಡ್ಬೇಕು. ಆಮೇಲೆ ಮನೆಗೆ ಹೋಗ್ತೀನಿ' ಅಂತ ಕಾಗದ ಬರೆದದ್ದು...ನೋಡಲು ಬರೋದು ನಮ್ಮನ್ನಂತೆ, ಕಣ್ಗಳು ಹುಡುಕುವುದು ಮಾತ್ರ ನಿನ್ನನ್ನಂತೆ.. "ಹಲ್ಲಿಲ್ಲದ ಬಾಯಿಂದಲೆ ಕಿಲಕಿಲನೆ ನಕ್ಕು ಜಾಹ್ನವಿಯ ಕೆನ್ನೆ ಹಿಂಡಿ ಮುತ್ತಿಕ್ಕಿದಳು ಅಜ್ಜಿ.
ಜಾಹ್ನವಿಯ ಜೀವವೀಗ ಸಂತೃಪ್ತಿಗೊಂಡಿತು.
ನಾಚುತ್ತಲೆ ಓಡಿ ಹೋಗಿ ತನ್ನ ಕೋಣೆಯಲ್ಲಿನ ಪಿಟಾರಿಯ ತೆರೆದು ಯಾರಿಗೂ ತಿಳಿಯದಂತೆ ಅಡಗಿಸಿಟ್ಟ ತನ್ನ ರಾಮಕೃಷ್ಣನ ಫೋಟೋವನ್ನು ಅಂಗೈಯಲ್ಲಿ ಮುಚ್ಚಿ ಹೊರತೆಗೆದು ನೋಡಿದಳು, ಅದೇ ರಾಮ..ಹನ್ನೆರಡು ವರ್ಷದ ಮುದ್ದು ರಾಮ. ತನ್ನೊಂದಿಗೆ ಆಡಿ ನಲಿದ ರಾಮ, ನಕ್ಕು ನಲಿದ ಶ್ಯಾಮ, ಮಹಾ ಬಲಶಾಲಿಯಂತೆ ಪಂದ್ಯಕಟ್ಟಿ ತನ್ನನ್ನು ಎತ್ತಿ ಬೀಳಿಸಿದ ಭೀಮ. ಅವನ ಪಕ್ಕದಲ್ಲಿ ಅಂತರವ ಕಾಯ್ದುಕೊಂಡು ನಾಚಿ ನಿಂತ ಪೋರಿ ಬೇರಾರು ಅಲ್ಲ ಅದು ಅವಳೆ ಜಾಹ್ನವಿ.
ಅವರಿಬ್ಬರ ಹೆಗಲ ಮೇಲೆ ಕೈ ಇಟ್ಟು ನಿಂತ ಮಹಾಲಕ್ಷ್ಮಿ ಸ್ವರೂಪಿಯೆ ಜಾಹ್ನವಿಯ ಗೀತತ್ತೆ.ಗೀತತ್ತೆ ಜಾಹ್ನವಿಯ ತಂದೆಯ ತಂಗಿ ಆದರೆ ಗೀತತ್ತೆ ಇರುವುದು ಭೂತಕಾಲದ ಆನಂದಮಯ ಕ್ಷಣದ ತುಣುಕೊಂದನ್ನು ಆರಿಸಿ ಹಿಡಿದುಕೊಂಡ ಆ ಫೋಟೋದಲ್ಲಿಯೇ ಹೊರತು ವರ್ತಮಾನದ ಈ ದಿನದಲ್ಲಿಲ್ಲ.
ಅವಳು ತೀರಿ ಹೋಗಿ ಹನ್ನೆರಡು ವರ್ಷಗಳೆ ದಾಟಿ ಹೋಗಿವೆ. ಅವಳು ತೀರಿದ ನಂತರವೆ ಅವಳಮುದ್ದಿನ ಒಬ್ಬನೆ ಮಗ ರಾಮಕೃಷ್ಣ ಹಾಸ್ಟೆಲ್ ಪಾಲಾದದ್ದು.
ಆಗಾಗ ಅವನ ತಂದೆ ಶ್ರೀಪತಿ ರಾಯರು ಅವನ ಸೋದರ ಮಾವ ಎಂದರೆ ಜಾಹ್ನವಿಯ ತಂದೆ ವಿನಾಯಕ ರಾಯರು ಹಾಸ್ಟೆಲ್ನತ್ತ ಹೋಗಿ ರಾಮಕೃಷ್ಣನನ್ನು ಮಾತಾಡಿಸಿ ಯೋಗ ಕ್ಷೇಮ ವಿಚಾರಿಸಿ ಬರುತ್ತಿದ್ದರು.
ಶ್ರೀಪತಿ ರಾಯರು ಹೆಣ್ಣಿಲ್ಲದ ಮನೆಯಲ್ಲಿ ಒಬ್ಬಂಟಿಯಾಗಿ ಇರುವುದು ಕತ್ತಲ ಕೋಣೆಯಲ್ಲಿ ತಡುಗಿ ನಡೆದಷ್ಟೇ ಆಯಾಸದಾಯಕವೆಂದು , ಒಂದಿಷ್ಟು ಅಡಿಗೆ ಮಾಡಿ ಬಡಿಸಿ ಮುಸುರೆ ಗುಡಿಸಲಾದರು ಮನೆಗೊಂದು ಹೆಣ್ಣು ದಿಕ್ಕಿರಬೇಕೆಂದು ಅಲ್ಲಿಲ್ಲಿ ವಿಚಾರ ಮಾಡಿ ಎರಡನೇ ಮದುವೆಯಾಗಿ ಬಿಟ್ಟರು.
ನಂತರ ಇನ್ನೆರಡು ಹೆಣ್ಣು ಮಕ್ಕಳ ತಂದೆಯಾಗಿಯೂ ಬಿಟ್ಟರು. ತಂದೆಯ ಎರಡನೇ ಮದುವೆ ವಿಚಾರ ರಾಮಕೃಷ್ಣನಿಗೇಕೋ ಅಷ್ಟಾಗಿ ಒಗ್ಗಿ ಬರಲಿಲ್ಲ. ಆದರೆ ತಂದೆಯ ಬಳಿ ಮುನಿಸು ತೋರಲಿಲ್ಲ ಹಾಗೆಂದು ಚಿಕ್ಕಮ್ಮನಲ್ಲಿ ಅಕ್ಕರೆ ಪ್ರೀತಿ ಇತ್ತೆoದು ಸಹಾ ಅಲ್ಲ. ತಾಯಿ ತೀರಿ ಹೋದ ವರ್ಷದೊಳಗೆ
ತಂದೆಯ ಎರಡನೇ ಮದುವೆ ನಡೆದ ಮೇಲೆ ರಾಮಕೃಷ್ಣನಿಗೆ ತನ್ನ ಮನೆಯೆಕೊ ಹೊರವಲಯದಂತೆಯೂ, ನಿಸ್ತೇಜ, ನೀರ್ಜಿವದಂತೆಯೂ ಭಾಸವಾಗಿರಬೇಕು ಅಂದಿನಿಂದ ಆತ ಊರ ಕಡೆ ಮುಖ ಹಾಕಲೇ ಇಲ್ಲ.
ರಜಾ ದಿನಗಳಲ್ಲಿ ಊರಿಗೆ ಬರುವಂತೆ
ಶ್ರೀಪತಿ ರಾಯರು ಅದೆಷ್ಟು ಹಟ ಹಿಡಿದರೂ, ರಜೆ ಬಂತೆನ್ದರೆ ಗೆಳೆಯರ ಜೊತೆಗೆ ರಾಮಕೃಷ್ಣ ಅವರ ಊರಿನತ್ತ ಓಡಿ ಬಿಡುತ್ತಿದ್ದ. ಕೊನೆಗೆ ವಿಧಿ ಇಲ್ಲದೆ ಶ್ರೀಪತಿ ರಾಯರೇ ತಿಂಡಿ ತಿನಿಸು ಬಟ್ಟೆ ಬರಿಗಳನ್ನೆಲ್ಲ ಖರೀದಿಸಿ ಅವನಿಗೆ ನೀಡಿ ನಾಲ್ಕು ಮಾತನಾಡಿ, ಮಗನಲ್ಲಿ ತಂದೆಯೆಡೆಗೆ ಅಂತಹ ಒಲುಮೆಯ ಚಿಲುಮೆ ಉಕ್ಕದನ್ನು ಮನಗಂಡು, ಸಪ್ಪೆ ಮೋರೆಯಲ್ಲಿಯೆ ಹೊರಟು ಮರು ಊರ ಸೇರುವುದೇ ವಾಡಿಕೆಯಾಗಿ ಬಂದುಬಿಟ್ಟಿತ್ತು.
ಆದರೆ ವಿನಾಯಕರ ಪಾಲಿಗೆ ರಾಮಕೃಷ್ಣ ರಾಮನಾಗಿಯೇ ಉಳಿದಿದ್ದ, ತಾಯಿ ಯ ಅಣ್ಣನೆಂದರೆ ಅದೆಲ್ಲಿಲ್ಲದ ಪ್ರೀತಿ. ಅವರು ನೀಡಿದ ಕೊಬ್ಬರಿ ಮಿಠಾಯಿ, ಹಪ್ಪಳ, ಉಪ್ಪಿನಕಾಯಿ, ಸಂಡಿಗೆ ಎಲ್ಲವನ್ನೂ ಚಪ್ಪರಿಸಿ ತಿಂದು, "ಯಾರು ಅಜ್ಜಿ ಮಾಡಿದ್ದಾ...?"ಯೆಂದು ತುಟಿಯನ್ನು ನಾಲಿಗೆಯಿಂದ ಸವರಿಕೊಳ್ಳುತ್ತಿದ್ದ. ಹೌದಯ್ಯ ನಿನ್ನ ಅಜ್ಜಿಯೆ ಮಾಡಿದ್ದು ಜೊತೆಗೆ ಜಾಹ್ನವಿಯು ಸಹಾಯಕಿಯಾಗಿ ಸೇರಿಕೊಂಡಿದ್ದಳು ಎಂದಾಗ ಮುಖ ಅಡಿ ಹಾಕಿ, "ಅವಳೊಬ್ಬಳು ಬಹಳ ಗೊತ್ತಿರೋ ಹಾಗೆ ಎಲ್ಲದಕ್ಕೂ ಮುಂದೆ ಹೋಗ್ತಾಳೆ, ಗಿಡ್ಡಿ..."ಯೆಂದು ತುಟಿಯಂಚಿನಲಿ ಮುಗುಳು ನಗುತ್ತಿದ್ದ,ಒಳಗೊಳಗೆ ಅದೆಷ್ಟು ನಕ್ಕು ನಲಿಯುತ್ತಿದ್ದನೋ ಏನೊ ಅಂದಾಜಿಸುವ ಅಳತೆಗೋಲು ಅಲಭ್ಯ.
ಎಲ್ಲರಲ್ಲೂ ಇದ್ದ ಹೆಬ್ಬಯಕೆಯೊಂದೇ ರಾಮಕೃಷ್ಣನ ವಿದ್ಯಾಭ್ಯಾಸದ ನಂತರ ಜಹ್ನವಿಯನ್ನು ಅವನಿಗೆ ಧಾರೆಎರೆದು ಕೊಡುವುದು. ಏಕೆoದರೆ ಅದು ಗೀತತ್ತೆಯ ಕೊನೆಯಾಸೆಯು ಸಹಾ.
ಈಗ ಕಾಲ ಹನ್ನೆರಡು ವರ್ಷಗಳ ತನ್ನ ದಟ್ಟ ಹೆಜ್ಜೆಗಳ ಊರಿ ಮುಂದೆಬಂದು ನಿಂತಿದೆ.ತನ್ನ ಹನ್ನೆರಡನೆ ವರ್ಷದಲ್ಲಿ ಊರನ್ನು ತೊರೆದ ರಾಮನಿಗೀಗ ಇಪ್ಪತ್ತನಾಲ್ಕು ವರ್ಷ, ಜಾಹ್ನವಿಗೆ ಇಪ್ಪತ್ತು.
ಈಗಂತೂ ಜಹ್ನವಿಗೆ ಬರೀ ರಾಮನದೆ ಕನವರಿಕೆ, ಹನ್ನೆರಡು ವರ್ಷದ ಹಿಂದೆ ಅವನನ್ನು ನೋಡಿದ್ದು ಅಂದಿನಿಂದ ಇಂದಿನವರೆಗೂ ಬಸ್ ಹತ್ತಲು ಹೊರಟು ನಿಂತು ಒಂದು ಕೈಯಲ್ಲಿ ಮಂಡಕ್ಕಿ ಪೊಟ್ಟಣ ಇನ್ನೊಂದು ಕೈಯಲ್ಲಿ ಸಣ್ಣ ಪುಸ್ತಕಗಳ ಚೀಲ, ಆದರೂ ಅಂಗೈಯನ್ನು ಸರಕುರಹಿತ ಗೊಳಿಸಿಕೊಂಡು ಜಾಹ್ನವಿಯತ್ತ ತೋರಿ" ಹೋಗಿ ಬರ್ತೀನಿ ಗಿಡ್ಡಿ" ಯೆಂದ ಆ ಪಿಳಿಪಿಳಿ ಕಣ್ಗಳ ಮುದ್ದು ರಾಮನೆ ಕಣ್ಅಲ್ಲಿ ಉಳಿದು ಬಿಟ್ಟಿದ್ದ.
ಆದರೀಗ ಇನ್ನೆರಡು ದಿನಗಳಲ್ಲಿ ಬರುತ್ತೇನೆ ಯೆಂದು ತಿಳಿಸಿದ ರಾಮ ಹೇಗಿರುವನೋ, ಬೆಳ್ಳಗಿನ ಸುಣ್ಣವೊ , ತೆಳ್ಳಗಿನ ಸಣ್ಣನೋ , ದಪ್ಪನೆಯ ಗುಂಡನೋ , ಕಪ್ಪನೆಯ ಕೆಂಪನೋ ಹೇಗಿದ್ದಾನೋ ಎಂಬ ಕುತೂಹಲ ಅವಳದು. ಹೇಗಾದರೂ ಇರಲಿ ಗೂನು ಬೆನ್ನಾದರೂ ಆಗಲಿ, ಮಹಡಿ ತಾಗುವಷ್ಟು ನಿಲುವೇ ಇರಲಿ, ಹಲ್ಲು ಮುಂಬಾದರು ಇರಲಿ,ತಲೆ ನೊಣ್ಣಗಾದರೂ ಇರಲಿ ಹೇಗಿದ್ದರು ಅವನೆ ನನ್ನ ರಾಮ ನಾನೇ ಅವನ ಗಿಡ್ಡಿ ಯೆಂದು ಒಮ್ಮೊಮ್ಮೆ ತನ್ನನ್ನು ತಾನೆ ಸಮಾಧಾನಿಸಿ ಕೊಂಡು ಬಿಡುತ್ತಿದ್ದಳು.
ಆದರೆ ತನ್ನ ರಾಮನಿಗೆ ಎದುರಾಗುವ ದಿನ ಬರುತ್ತಿದ್ದಂತೆ ಸೂರ್ಯನಿಗೆ ಮುಖ ತೋರುವುದೇ ನಿಲ್ಲಿಸಿ ಬಿಟ್ಟಿದ್ದಳು ಎಲ್ಲಿಯಾದರು ಸೂರ್ಯ ಚುಂಬನಕೆ ತನ್ನ ಬಿಳಿಮೊಗ ಕಂದೇರಿ ಬಿಟ್ಟರೆ ಗತಿ ಏನು. ರಾಮ ಆಡಿಕೊಳ್ಳುವುದಿಲ್ಲವೆ ಗಿಡ್ಡಿ ಕಪ್ಪಾದಳೆಂದು.ದಿನದಲ್ಲಿ ಹತ್ತು ಬಾರಿ ತಲೆ ಬಾಚಿ ಕಟ್ಟುವುದು, ಹತ್ತತ್ತು ಬಾರಿ ಮುಖ ತೊಳೆಯುವುದು, ಹೂ ಕಿತ್ತುಕಟ್ಟಿ ಮುಡಿದು, ಪೌಡರ್ ಕ್ರೀಮ್ಗಳ ಮುಖ ಸವೆಯುವಷ್ಟು ತಿಕ್ಕಿ, ಬಿಂದಿ ಏರಿಸಿ ಕನ್ನಡಿಯ ಮುಂದೆ ಗಂಟೆಗೊಂದು ದಾವಣೆಯುಟ್ಟು ಹಿಂದು ಮುಂದು ತಿರುತಿರುಗಿ ಕತ್ತಾಡಿಸಿ ಕೊಳ್ಳುತ್ತ ಮತ್ಯಾವುದೋ ಒಂದು ಅವಲಕ್ಷಣ ಕಂಡಂತಾಗಿ ಚೀಕರಿಸಿ ಸಿಟ್ಟೆದ್ದು ಮತ್ತೆ ಶಾಂತಳಾಗಿ ಕನ್ನಡಿಗೆ ದೃಷ್ಟಿತೆಗೆದು ಮುಗುಳು ನಗುವುದೇ ದಿನಚರಿಯಾಗಿ ಬಿಟ್ಟಿತ್ತು.
ಅಂತೂ ನಾಳೆ ರಾಮ ಬರುವನೆಂದು ಕಾತರಿಯಾಗಿ ಬಿಟ್ಟಿದೆ. ಕೈಲಿದ್ದ ಫೋಟೋವನ್ನು ಮತ್ತೆ ಪಿಟಾರಿಯೊಳಗೆ ದಬ್ಬಿಟ್ಟು, ಊರಾಚೆಯ ಗುಡಿಗೆ ಕತ್ತಲಾಗುವ ಮುನ್ನ ಓಡಿ ಹೋಗಿ ಓಡೋಡಿ ಬರುತ್ತೇನೆಂದು ಅಮ್ಮನ ಬಳಿ ಒಪ್ಪಿಗೆ ಪಡೆದು ಗೆಳತಿ ಮಂದಾರಳೊಂದಿಗೆ ನಡೆದಳು. ದೇಗುಲ ಪೇಟೆವಲಯವಾದ್ದರಿಂದ ಜನಜಂಗುಳಿ ಹೆಚ್ಚೆಚ್ಚೆ ಇರುತ್ತಿತ್ತು. ದೇವರಿಗೆ ಕೈ ಮುಗಿದು ಗೆಳತಿಯರಿಬ್ಬರು ಹೊರ ಬಂದು ಕಲ್ಲು ಕಟ್ಟೆಯ ಮೇಲೆ ಕುಳಿತು ಹರಿಯುವ ನದಿಯತ್ತ ಕಣ್ಹಾಯಿಸಿದರು.. ತುಂಗೆ ಸಂಜೆ ತಂಪಿನಲಿ ಉಕ್ಕಿ ನಲಿಯುತ್ತಿದ್ದಳು. ನಾಳೆ ಇದೆ ಸಮಯಕ್ಕೆ ರಾಮನನ್ನು ಇಲ್ಲಿಗೆ ಕರೆತರಬೇಕು, ಅವನೊಂದಿಗೆ ತಾನು ಬಚ್ಚಿಟ್ಟ ಪ್ರೇಮ ಲೇಖನಗಳೆಲ್ಲವನ್ನು ಬಿಡಿ ಬಿಡಿಸಿ ವರದಿ ಒಪ್ಪಿಸಿ ಬಿಡಬೇಕು. ಅವನು ಸಾಕು ಸಾಕು ಎನ್ನುವ ವರೆಗೂ ಅವನಿಷ್ಟದ ಚುರ್ಮುರಿಯನ್ನು ಕೈಯಾರಿ ಬಾಯಿಗೆ ತುರುಕಿ ತಿನ್ನಿಸಬೇಕು. ಅವನೇನಾದರು ಸಿಡುಕನಂತೆ ಸಿಡಿಯಲಿ ಇದೇ ತುಂಗೆಯಲ್ಲಿ ಮುಳುಗಿಸಿ ಎತ್ತುತ್ತೀನಿ ಯೆಂದು ಮನದಲ್ಲಿ ಕಲ್ಪಿಸಿಕೊಂಡವಳೆ ಜೋರಾಗಿ ನಕ್ಕುಬಿಟ್ಟಳು. ಇವಳ ಈ ರೀತಿಯ ವರ್ತನೆ ಹೊಸದಲ್ಲದ ಕಾರಣ ಮಂದಾರ ಹೆಚ್ಚೇನು ಗಮನ ಹರಿಸದೆ "ಅಲ್ಲಿ ನೋಡೆ ಫಾರಿನ್ ಫಾರಿನ್ ಜೋಡಿ"ಎನ್ನುತ್ತ ಜಹ್ನವಿಯನ್ನು ಹಗಲುಗನಸಿನಿಂದ ಎಚ್ಚರಿಸಿ ಬಿಟ್ಟಳು.
ಇಬ್ಬರು ನದಿಯ ಪಕ್ಕದ ಕಲ್ಲು ಚಪ್ಪಡಿಯತ್ತ ಕಣ್ಹಾಯಿಸಿದರು. ಟೀ ಶರ್ಟ್, ಪ್ಯಾಂಟ್, ಹ್ಯಾಟ್ ನೊಂದಿಗೆ ಹುಡುಗ ಹುಡುಗಿಯ ಆ ಜೋಡಿ ಒಬ್ಬರಿಗೊಬ್ಬರು ಒರಗಿಕೊಂಡು ಸ್ವಚ್ಛ ಗಾಳಿಯ ಸಂವೇದನೆಯ ಜೊತೆಗೆ ಪ್ರೇಮ ಸೇವನೆಯಲ್ಲಿದ್ದರು. ಸ್ವಲ್ಪ ಹೊತ್ತಿನಲ್ಲಿಯೇ ಇಬ್ಬರು ಎದ್ದು ಮೇಲ್ಮುಕ ನಡೆದು ಬಂದರು, ಇತ್ತ ಲೋಕದ ಜ್ಞಾನವಿರದೆ ಒಬ್ಬರನ್ನೊಬ್ಬರು ಬಿಗಿಯಾಗಿ ತಬ್ಬಿ ಸರಸ ಸಲ್ಲಾಪದಲ್ಲಿ ನಿರತರಾಗಿದ್ದರು. ಅವರು ಇತ್ತ ಬರುತ್ತಿದ್ದಂತೆ ಅವರೇನೋ ಭಾರತಿಯರೆ ಯೆಂದು ತಿಳಿಯಿತು ಆದರೆ ಅವರ ವೇಷ, ಅವರು ದೇವಸ್ಥಾನದಂತಹ ಸಾರ್ವಜನಿಕ ಸ್ಥಳದಲ್ಲಿ ನಡೆದುಕೊಳ್ಳುತ್ತಿದ್ದ ರೀತಿ ನೀತಿ ಇವರಿಬ್ಬರಿಗು ಮುಖ ಅಡಿಇಡುವoತೆ ಮಾಡಿತ್ತು.
"ಥೋ... ಇವರಿಗೆ ಮನೆ ಮಠ ಇಲ್ವೇನೇ ಎಲ್ಲೆಂದರಲ್ಲಿ ಅದು ದೇವಸ್ಥಾನದ ಬಳಿ ಶಿಸ್ತಿನಿಂದ ಇರೋದಿಕೆ ಏನ್ ರೋಗ. ಹೆಂಗಸರು ಮಕ್ಕಳು ನೆಮ್ಮದಿಯಿಂದ ಓಡಾಡೊ ಹಾಗೂ ಇಲ್ಲ ಎಲ್ಲರಿಗೂ ಮುಜುಗರ.".
ಎಂದಳು ಮಂದಾರ.
ಜಹ್ನವಿಗು ಸಹಾ ಅವರ ಸರಸ ಸಲ್ಲಾಪ ಅಣುಜುಣು ಏನಿಸಿತಾದರೂ ಅವರ ಪ್ರೀತಿ ಅವರ ನಗು ಮಾತು ಮುದ್ದಾಟ ರಾಮನನ್ನು ಅವಳೊಳಗೆ ಅವತರಿಸಿ ಬಿಟ್ಟಿತು. ನಾನು ಸಹಾ ರಾಮನೊಂದಿಗೆ ಹೀಗೆ ರಸಮಯ ಗಳಿಗೆಯ ಕಳೆಯುವ ಕ್ಷಣ ಬರುತ್ತವಲ್ಲವೆ... ಇಂತೆಯೇ ನಾನು ರಾಮನು ಒಬ್ಬರನ್ನೊಬ್ಬರು ಉಸಿರುಗಟ್ಟುವಂತೆ ಬಿಗಿದು ಅಪ್ಪಿಕೊಳ್ಳುತ್ತೇವೆ ಯಲ್ಲವೇ.... ಎಂದೆಲ್ಲ ಮನ ಹವಣಿಸಿ ಹದವಾಯಿತು. ಆದರೆ ಮಂದಾರಳ ಮುನಿಸಿಗೆ ಸಮಾಧಾನವಾಗುವಂತೆ "ಹೌದ್ ಹೌದು ಇವರಿಗೆ ಬೇರೆ ಜಾಗವೇ ಇಲ್ಲ. ದೇವರ ಮೇಲಿ ನ ಭಕ್ತಿಗೆ ಬರುತ್ತಾರಾ ಇಂತಹ ಚೆಲ್ಲಾಟಕ್ಕೆ ಬರುತ್ತಾರಾ ಛೆ ಛೆ.." ಎಂದವಳೇ ಹೋಗೋಣ ನಡೆ ಎಂದಳು.
ಈ ರಾತ್ರಿ ಕಳೆದರೇ ತಾರೆಗಳೆಲ್ಲ ಮರಳಿ ಗೂಡು ಸೇರಿಬಿಟ್ಟವೆಂದರೆ ಮುಗಿಯಿತಲ್ಲ, ನಾಳೆ ರಾಮ ಬಂದೆ ಬಿಡುತ್ತಾನೆ ಆ ನಂತರ ಅವನ ಮೊಗವೆ ಜಾಹ್ನವಿಯ ಚಂದ್ರ, ಕಣ್ಗಳೆ ನಕ್ಷತ್ರ,ಕೂದಲೇ ಕರೀಬಾನು. ಬೆಳಿಗ್ಗೆ ಬೇಗ ನೆ ಎದ್ದು ಮನೆಯೆಲ್ಲ ಅಲಂಕರಿಸಿ ಅಂಗಳದಿ ಕೃಷ್ಣಪಾದಗಳ ಅಚ್ಚೊತ್ತಿ ರಾಮನ ಬರುವಿಕೆಯ ಕಾದು ಕುಳಿತು ಕಣ್ತುಂಬಿಕೊಳ್ಳುವ ಆಸೆಯನ್ನೆಲ್ಲ ಪೋಣಿಸಿ ಹೊದಿಕೆಯೊಳಗೆ ಸೇರಿಸಿ ಬಿಟ್ಟಳು.
ಕಣ್ಗಳು ರೆಪ್ಪೆಮುಚ್ಚಿ ರಾಮಲೋಕವ ಅನಾವರಣ ಗೊಳಿಸಿದವು.
ಗಿಳಿಹಸಿರ ಲಂಗ ಗುಲಾಬಿ ದಾವಣೆ ತೊಟ್ಟು ನೀಳ ಜಡೆ ಹೆಣೆದ ಜಹ್ನವಿ ಮುಗುಳುನಗುವಿಂದ ಮೊಗವ ಅಲಂಕರಿಸಿ ಮಲ್ಲೆಯ ಮೊಗ್ಗು ಮಾಲೆಯ ಮುಡಿದು ಊರಾಚೆಯ ಗುಡಿಯೆದುರಿನ ಕಲ್ಲುಮಂಟಪದಲ್ಲಿ ಕುಳಿತುಬಿಟ್ಟಿದ್ದಾಳೆ, ಉಸಿರೇಕೋ ಬಿಗಿ ಹಿಡಿದಿದೆ, ಅಂಗೈಯೆಕೋ ಒಂದೇ ಸಮನೆ ಬೆವರಿ ನೀರಾಡುತಿದೆ, ಕಾಲ್ಗಳಲ್ಲಿ ನಡುಕ. ಭುಜವನ್ನಾರೋ ಸೋಕಿದಂತಾಯಿತು, ಸೋಕಿದ ಆ ಅವನ ಕೈಗಳು ಅವಳನ್ನು ಅವನತ್ತ ಸಂಪೂರ್ಣವಾಗಿ ಸೆಳೆದು ಕೊಂಡವು. ಅವನ ಹೃದಯದ ಬಡಿತ ಇವಳ ಕಿವಿಗೆ ತಾಕುವಷ್ಟು ಸನಿಹಕ್ಕೆ ಇವಳನ್ನು ತಬ್ಬಿ ಹಿಡಿದಿದ್ದ. ಅದೆಷ್ಟು ನಾಜೂಕಾದ ಸ್ಪರ್ಶ, ಅದೆಂತ ಅನೋನ್ಯತೆಯ ಭಾವ ಅವಳ ಉಸಿರಿನ ಏರಿಳಿತ ಈಗ ಸುಧಾರಿಸಿದಂತಿತ್ತು, ಕಂಪನ ನಿರಾಳವಾಯಿತು, ಅವಳೊರಗಿದ ಅವನ ಭುಜ ಮುದವೆನಿಸಿತ್ತು. ಹಾಗಾದರೆ ಆ ಕೋಮಲ ಸ್ಪರ್ಶವಾರದು? ರಾಮನಲ್ಲದೆ ಇನ್ನಾರು ಜಹ್ನವಿಯನು ಸೋಕಲು ಸಾಧ್ಯ?. ಜಹ್ನವಿ ಅವನಲ್ಲಿಯೆ ಒರಗಿ ಕುಳಿತು ಕತ್ತೆತ್ತಿ ರಾಮನ ಮೊಗದತ್ತ ಓರೆನೋಟವ ಬೀರಿದಳು. ಆ ವೇಳೆಯ ಸವಿರುಚಿ ಲೋಕದ ಇನ್ನಾವ ಅವ್ತಣವು ನೀಡಲಾರದಷ್ಟಿತ್ತು. ಅವನ ಕೆಂಪೇರಿದ ಕೆನ್ನೆಗಳಕಂಡು ಜಿವುಟಿ ಕಾಡಿಸುವ ಬಯಕೆ ಅಂಗೈ ಏರಿ ಕುಳಿತಿತ್ತು.
ಆದರೆ ಆದರೆ ಅವನು ರಾಮನಾಗಿರಲಿಲ್ಲ..
ತಾನು ಒರಗಿ ಕುಳಿತ ಆ ಪರಪುರುಷ ಸಂಜೆ ಹೊತ್ತಿನಲಿ ನದಿ ತೀರದಲ್ಲಿ ಕಂಡ ಆ ಹ್ಯಾಟ್ ಧರಿಸಿದ ಪಟ್ಟಣದ ಹುಡುಗ, ಹೊತ್ತು ಗೊತ್ತಿಲ್ಲದೆ ಜನ ಜಾಗದ ಅರಿವಿಲ್ಲದೆ ಸರಸ ಸಲ್ಲಾಪದಲ್ಲಿ ತೊಡಗಿದ ಆ ಜೋಡಿಯ ಆ ಹುಡುಗ ಹೌದು ಅವನೇ.ಅಯ್ಯೋ..!!ಇವನೇಕೆ ತನ್ನ ಬಳಿಗೆ ಬಂದ ಅಯ್ಯೋ... ಯೆಂದು ಚೀಕರಿಸಿ ಹೌಹಾರಿ ಕುಳಿತ ಜಾನ್ಹವಿಗೆ ನಡೆದದ್ದೆಲ್ಲ ಕನಸೆoದು ತಿಳಿಯಿತಾದರೂ ಕನಸಿನ ಆ ಪ್ರಸಂಗ ನಾಚಿಕೆಗೇಡೆನಿಸಿತು.
ರಾಮನಲ್ಲದೆ ಮತ್ತಾರೋ ಪರಪುರುಷನ ಸ್ಪರ್ಶವನ್ನು ನಾಜೂಕು ಎಂದೆಣಿಸಿದ್ದು ಅಪರಾಧವಾಗಿ ತೋರಿತು. ಬಿದ್ದದ್ದು ಕನಸೇ ಆದರೂ ಅದರೊಳಗೆ ಅವನ್ಯಾರೋ ಇಣುಕಿದ್ದು ತಾನು ತನ್ನ ರಾಮನಿಗೆ ಮಾಡಿದ ಘೋರ ಅನ್ಯಾಯ ವೆಂದೆಣಿಸಿ ಬಿಟ್ಟಿತ್ತು. ನನ್ನ ರಾಮನಲ್ಲದೆ ಇನ್ನೊಬ್ಬನ ಉಸಿರು ಕನಸಿನಲ್ಲು ಸೋಕುವುದು ಸಹಿಸಲಸಾಧ್ಯ ವೆಂದೆನಿಸಿ ಹಾಸಿಗೆಯಿಂದ ನೇರ ಬಚ್ಚಲಿಗಿಳಿದಳು. ಕೊರೆವ ಚಳಿ ಲೆಕ್ಕಿಸದೆ ತನ್ನಿಂದಾದ ಅಪರಾಧಕ್ಕೆ ತಣ್ಣೀರ ಸ್ನಾನವನ್ನೆ ಶಿಕ್ಷೆಯಾಗಿ ವಿಧಿಸಿಕೊಂಡು ಹೊರ ಬಂದಳು.
ಹಕ್ಕಿ ಕಲರವ ಬಿಕ್ಕುತ್ತಿದ್ದವು. ಸೂರ್ಯ ಕಿರಣಗಳು ಆಗಷ್ಟೇ ಹೊರ ಉಕ್ಕುತ್ತಿದ್ದವು. ತಡ ಮಾಡದೆ ಜಹ್ನವಿ ದೇವರ ಕೋಣೆ ಹೊಕ್ಕಳು. ಅಪಾರ್ಥವಾದ ಕನಸಿಗೆ ದಂಡವಿಕ್ಕಲು ನೂರಾಒಂದು ಸಲ ಹಣೆಜೆಜ್ಜಿ ನಮಸ್ಕರಿಸಿದಳು.ರಾಮನಾಮ ಪುಸ್ತಕವ ಕೈಲಿಡಿದಳು, ಲೇಖನಿಯೇಕೊ ಹತ್ತಿಕೊಳ್ಳುತ್ತಲೆ ಇಲ್ಲ.
ಜಗುಲಿಯ ಬಾಗಿಲು ಬಡಿಯಿತು, ಬಂದದ್ದು ತನ್ನ ರಾಮನೆ ಎಂಬ ಖಾತ್ರಿಯಿಂದಲೆ ಹೃದಯ ಹದ್ದುಮೀರಿ ಬಡಿದು ಕೊಂಡಿತು.
ಹನ್ನೆರಡು ವರ್ಷದ ನಂತರ ರಾಮನ ಮುದ್ದು ಮೊಗವನ್ನು ನೋಡುವ ಆತುರ ಕಾತುರಗಳೆಲ್ಲದರ ಒಟ್ಟು ಮೊತ್ತ ಹೆಜ್ಜೆಯನ್ನು ಕೋಣೆಯಿಂದ ಹೊರತೆಗೆಯಲು ತ್ರಾಣವೆ ಇಲ್ಲದಂತಾಗಿಸಿ ಬಿಟ್ಟಿತ್ತು.
ಜಾಹ್ನವಿಯ ಅಮ್ಮ ಬಾಗಿಲು ತೆರೆದಳು, ಬಂದಾತ "ಹೇಗಿದ್ದೀರ" ಯೆಂದ, ಇವರು ಮುಖವರಳಿಸಿ ನೀನು ನಮ್ಮ ರಾಮಕೃಷ್ಣನೇನು ಎನ್ನುವಷ್ಟರಲ್ಲಿ ಅಜ್ಜಿ ದೊಣ್ಣೆಕುಟ್ಟುತ್ತಾ ಬಾಗಿಲತ್ತ ಬಂದಳು, ಅವಳ ಸೆರಗ ತುದಿಗೆ ಜೋತುಬಿದ್ದಂತೆ ಜಾಹ್ನವಿ ಅಜ್ಜಿಯ ಗೂನು ಬೆನ್ನನ್ನೇ ಮರೆಯಾಗಿಟ್ಟುಕೊಂಡು ನಸು ನಗುತ್ತಾ ಬಾಗಿಲೆಡೆಗೆ ಕಳ್ನೋಟ ನೆಟ್ಟಳು.
ಹನ್ನೆರಡು ವರ್ಷಗಳ ಹಿಂದೆ ಕಂಡ ಆ ರೂಪಗಳೆರಡು ಮತ್ತೀಗ ನೆರೆದ ಮುತ್ತಾಗಿ ಎದುರುಬದಿರಾಗಿ ನಿಂತಿದ್ದವು.
ಜಾಹ್ನವಿ ಕತ್ತೆತ್ತಿ ತನ್ನ ರಾಮನತ್ತ ದೃಷ್ಟಿ ಹಾಯಿಸಿದಳು.,. ಅಯ್ಯೋ... ಮತ್ತೆ ಅವನೇ.. ಆ ಹ್ಯಾಟ್ ಧರಿಸಿದ ಹುಡುಗ ಇವನ್ಯಾಕೆ ಇಲ್ಲಿಗೆ ಬಂದ. ಅಥವಾ ಮತ್ತೆ ನಾನು ಕನಸಿನಲ್ಲಿಯೇ ಕಾಲಕಳೆಯುತ್ತಿದ್ದೇನೆ ಯೇ.. ಅಯ್ಯೋ..!!ಯೆಂದು ಕೈ ಚಿವುಟಿ ಕೊಳ್ಳುವ ಮೊದಲೆ.
"ಓಹ್ಹ್ಹ್ ರಾಮಕೃಷ್ಣ ಬಂದ್ಯೇನೋ.. ಹೇಗಿತ್ತೋ ಪ್ರಯಾಣ..?". ಎನ್ನುತ್ತಾ ವಿನಾಯಕ ರಾಯರು ಓಡೋಡಿ ಒಳಗಿಂದ ಹೊರ ಬಾಗಿಲತ್ತ ಬಂದರು.
ನಗು ನಗುತ್ತಾ ಒಳ ಬಂದ ರಾಮಕೃಷ್ಣನ ಹಿಂದೆಯೇ ಆ ಜೀನ್ಸ್ ಟೀ ಶರ್ಟ್ ಧರಿಸಿದ ಹುಡುಗಿ ನಿಂತಿದ್ದಳು.
ಒಳ ಬಂದವನೇ ತಡಮಾಡದೆ,"ಇವಳು ಮೋನಿಷಾ ಅಂತ ನಾನು ಮದ್ವೆ ಆಗಿರೋ ಹುಡ್ಗಿ" ಯೆಂದು ಬಿಟ್ಟ.
ಗೂನು ಬೆನ್ನಿನ ಅಜ್ಜಿ ಕುಸಿದು ಜೋಕಾಲಿ ಯ ಮೇಲೆ ಕುಳಿತಳು, ನೇರ ನಿಂತ ಜಾಹ್ನವಿಯ ಕೈಲಿದ್ದ ರಾಮನಾಮ ಪುಸ್ತಕ ಕೈಚೆಲ್ಲಿ ಬಿದ್ದಿತು .
ರಾಮಕೃಷ್ಣ ಜಹ್ನವಿಯ ಪ್ರೇಮಗೋಪುರದಿಂದ ಅದೆಂದೊ ಕಾಲ್ಕಿತ್ತು ಮೋನಿಶಳ ಅರಮನೆಯ ಅರಸನಾಗಿದ್ದಾಗಿತ್ತು.
ತನ್ನ ತಂದೆಯನ್ನು ಕಾಣುವ ಮೊದಲು ಈ ಗುಟ್ಟಿನ ಮದುವೆ ವಿಚಾರವ ತನ್ನ ಮಾವನಿಗೆ ತಿಳಿಸಿ ಅವರ ಸಹಾಯದಿಂದ ತಂದೆಯನ್ನು ಒಪ್ಪಿಸುವ ಉಪಾಯಹೂಡಿ ರಾಮಕೃಷ್ಣ ನೇರ ಇಲ್ಲಿಗೆ ಬಂದಿದ್ದನೇ ಹೊರತು ಮತ್ಯಾವ ಕಾರಕ್ಕೂ ಆಗಿರಲಿಲ್ಲ.
ವಿನಾಯಕರಾಯರು ಬೇರೇನೂ ಮಾತನಾಡದೆ ಬಾಗಿಲಲಿ ನಿಂತ ಅತಿಥಿಗಳ ಒಳ ಕರೆದರು. ಜಾಹ್ನವಿಯ ಹೃದಯ ಕುಸಿದು ಒಡೆದ ಮಡಕೆಯಂತೆ ನೂರು ಚೂರಾಗಿತ್ತು
"ಅಜ್ಜಿ.. ನಾನು ರಾಮನ್ನ ಪಡೆಯೋಕೆ ಪುಣ್ಯ ಮಾಡಿರ್ಲಿಲ್ವೇನೇ ...." ಅಜ್ಜಿಯ ಮಡಿಲಲ್ಲಿ ಮೊಗವಿಟ್ಟು ಬಿಕ್ಕಿ ಅಳುತ್ತಾ ಕೇಳಿದಳು ಜಾಹ್ನವಿ.
ಅತ್ತಿತ್ತ ಚಲಿಸದೆ ನಿಂತ ಜೋಕಾಲಿಯಲ್ಲಿ ಕಣ್ಮುಚ್ಚಿ ಕುಳಿತ ಅಜ್ಜಿ,"ಇಲ್ವೇ... ಸೀತೆಗೆ ಪುಣ್ಯವಿದ್ದರಾಯಿತೇನೇ.. ಇಂತಹ ಸೀತೆಯ ಪಡಿಯೋಕೆ ರಾಮನು ಪುಣ್ಯ ಮಾಡಿರಬೇಕು. ಈ ರಾಮನಿಗೆ ಪುಣ್ಯವಿಲ್ಲ ಬಿಡು...".ಯೆಂದು ಧೀರ್ಘಉಸಿರೊಂದ ಹೊರ ಸೂಯ್ದಳು.
- ಸೌಜನ್ಯ ದಾಸನಕೊಡಿಗೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ