"ಶತಾಯು ವಜ್ರ ದೇಹಾಯ ಸರ್ವ ಸಂಪತ್ಕರಾಯಚ ಸರ್ವಾರಿಷ್ಟ ವಿನಾಶಾಯ ನಿಂಬಕಂದಳ ಭಕ್ಷಣಂ" ಎಂದು ಹೇಳುತ್ತಾ ಯುಗಾದಿಯ ದಿನದಂದು ಬೇವು ಬೆಲ್ಲ ತಿನ್ಧುವುದು ನಮ್ಮ ಸಂಪ್ರದಾಯ... ಈ ಯುಗಾದಿಯು ಚೈತ್ರ ಮಾಸದಲ್ಲಿ ಬರಲಿದ್ದು, ಪ್ರಕೃತಿಯಲ್ಲಿ ಬದಲಾವಣೆಯಾಗುವ ಸಂದರ್ಭ. ಒಣಗಿದ ಮರಗಳು ಚಿಗುರಿ ಹಸಿರು ಎಲ್ಲೆಲ್ಲೂ , ಚಳಿಗಾಲ ಮುಗಿದು ಬೇಸಿಗೆ ಆರಂಭವಾಗುವ ಸಮಯ. ದೇಹದ ಆರೋಗ್ಯದ ಮೇಲೆ ಹಲವಾರು ಪರಿಣಾಮ ಬೀರುವುದು. ಋತುಗಳು ಬದಲಾವಣೆಯಾದಾಗ ಆ ಋತುಗಳಲ್ಲಿ ಪ್ರಕೃತಿಯಲ್ಲಿ ಸಿಗುವ ಆಹಾರ ಪದಾರ್ಥಗಳನ್ನು ಸೇವಿಸಬೇಕಾಗುತ್ತದೆ. ಪ್ರಕೃತಿಯೇ ನಮಗೆ ಉಡುಗೊರೆಯಾಗಿ ನೀಡಿರುತ್ತದೆ. ನಾವು ಅದನ್ನು ಅರಿತು ಬಳಸಿಕೊಳ್ಳಬೇಕು. ಕಾಲಕಾಲಕ್ಕೆ ಅವುಗಳನ್ನು ಉಪಯೋಗಿಸಿಕೊಳ್ಳುವ ರೀತಿಯನ್ನು ನಮ್ಮ ಹಿರಿಯರು ಹಬ್ಬ ಹರಿದಿನಗಳ ಮುಖೇನ ತಿಳಿಸಿಕೊಟ್ಟಿರುತ್ತಾರೆ. ನಂಜು ನಿವಾರಕ ಬೇವು, ಪುಷ್ಟಿ ನೀಡುವ ಬೆಲ್ಲವನ್ನು, ಜೊತೆಗೆ ವಿವಿಧ ಹಣ್ಣುಗಳ ಪಾನಕಗಳನ್ನು ಸೇವಿಸುವುದರಿಂದ ದೇಹದ ಉಷ್ಣತೆಯಲ್ಲಿ ಸಮತೋಲನ ಕಾಯ್ದುಕೊಳ್ಳಲು ಅನುಕೂಲ. ದೇಹದ ಆರೋಗ್ಯಕ್ಕೆ ನಮ್ಮ ಹಿರಿಯರು, ಪ್ರಕೃತಿ ನೀಡಿರುವ ಉಡುಗೊರೆ ಇದು..
ಆರೋಗ್ಯ ಎಂದರೇನು? ದೇಹದ ಆರೋಗ್ಯವೇ ಮುಖ್ಯವೇ? ಮಾನಸಿಕ ಅನಾರೋಗ್ಯ ಇಲ್ಲವೇ?
ದೈಹಿಕ, ಮಾನಸಿಕ, ಸಾಮಾಜಿಕ ಆರೋಗ್ಯ ಮುಖ್ಯವಾಗುತ್ತದೆ. ಒಬ್ಬ ವ್ಯಕ್ತಿ ದೈಹಿಕವಾಗಿ ಮಾನಸಿಕವಾಗಿ ಸ್ವಸ್ಥನಾಗಿದ್ದರೆ ಆರೋಗ್ಯವಂತ ಸದೃಢ ಸಮಾಜ ಕಟ್ಟಲು ಸಾಧ್ಯ. ಒಂದು ಸಮಾಜದ ಒಂದು ರಾಷ್ಟ್ರದಲ್ಲಿರುವ ಎಲ್ಲರೂ ಆರೋಗ್ಯವಾಗಿರಬೇಕು. ಹಾಗಾಗಿ ಆರೋಗ್ಯ ಎನ್ನುವುದು ಸಮಾಜದ ಮೇಲೆ ಪರಿಣಾಮ ಬೀರುತ್ತದೆ.
ವೈದ್ಯ ಉಪಚಾರದಲ್ಲಿ ಹಲವಾರು ವಿಧಗಳನ್ನು ಕಾಣಬಹುದು. ಆಯುರ್ವೇದ, ಹೋಮಿಯೋಪತಿ, ಅಲೋಪತಿ, ಸಿದ್ಧ ಹೀಗೆ, ಅದರದೇ ರೀತಿಯಲ್ಲಿ ಆರೋಗ್ಯದ ಕುರಿತಂತೆ ವ್ಯಾಖ್ಯೆಗಳನ್ನು ನೀಡುತ್ತವೆ. ವಾತ, ಪಿತ್ತ, ಕಫದ ಮೂಲಕ ಆಯುರ್ವೇದ ದಲ್ಲಿ ನೋಡಿದರೆ, ಹಲವು ಪರೀಕ್ಷೆಗಳ ಮೂಲಕ ಅಲೋಪತಿಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ.
ದೇಹದ/ ಮನಸಿನ ಅನಾರೋಗ್ಯಕ್ಕೆ ಕಾರಣಗಳೇನು?
ಮೊದಲನೆಯದಾಗಿ ಇತ್ತೀಚಿನ ದಿನಗಳಲ್ಲಿ ಕಾಣಬರುತ್ತಿರುವ ಜನರ ಜೀವನಶೈಲಿ... ಯಾವುದಕ್ಕೂ ಸಮಯವಿಲ್ಲ....
ಒತ್ತಡದ ಜೀವನ- ಒತ್ತಡ ಬೇಕು.. ಆದರೆ ಅತಿಯಾಗಬಾರದು. ಒತ್ತಡದಿಂದ ಚಿಂತೆಗೊಳಗಾಗಬಾರದು.
ಋಣಾತ್ಮಕ ಭಾವನೆಗಳು/ ಗುಣಗಳು- ಇವು ಮನಸಿನ ಮೇಲೆ ಪರಿಣಾಮ ಬೀರುವುದರಿಂದ ದೇಹವೂ ಸಹ ಅನಾರೋಗ್ಯಕ್ಕೆ ಈಡಾಗುತ್ತದೆ.
ನಾವು ಸೇವಿಸುವ ಆಹಾರ- ದಿನನಿತ್ಯದ ಆಹಾರ ಹೇಗಿರಬೇಕು, ಎಷ್ಟಿರಬೇಕು, ನಮ್ಮ ದೇಹಕ್ಕೆ ಒಗ್ಗುತ್ತದೆಯೇ ಇಲ್ಲವೇ ಎಂಬ ಅರಿವು ನಮಗಿರಬೇಕು.
ಸಮಯಕ್ಕೆ ಸರಿಯಾಗಿ ಊಟ ಮಾಡಬೇಕು.
ಆಹಾರ ವಿಷವಾಗುವುದು ಯಾವಾಗ? ಪರಿಹಾರವೇನು ...ನೋಡೋಣ..
ಯಾವಾಗಲೂ ಆಹಾರವನ್ನು ಸ್ವಲ್ಪ ಸ್ವಲ್ಪವೇ ತಿನ್ನಬೇಕು. ಅತಿಯಾದರೆ ಅಮೃತವೂ ವಿಷವೇ ಅಲ್ಲವೇ.. ಊಟ ಮಾಡುವಾಗ ಸಂತೋಷದ ಭಾವನೆ ಇರಬೇಕು.
ಅತಿಯಾಗಿ ತಿನ್ನಬಾರದು.
ಅವಸರದಿಂದ ತಿನ್ನಬಾರದು
ಹಸಿವಾದಾಗ ಮಾತ್ರ ಊಟ ಮಾಡಬೇಕು.
ಪ್ರತಿದಿನವೂ ವ್ಯಾಯಾಮ ಇರಬೇಕು. ಏಕೆಂದರೆ ಇತ್ತೀಚಿನ ದಿನಗಳಲ್ಲಿ ದೈಹಿಕ ಶ್ರಮದ ಕೆಲಸ ಕಡಿಮೆ ಆಗಿರುವುದರಿಂದ ಜೀರ್ಣಕ್ರಿಯೆಯಲ್ಲಿ ವ್ಯತ್ಯಾಸ ಆಗುವುದರಿಂದ ಬೊಜ್ಜು, ದೇಹದ ವಿವಿಧ ಭಾಗಗಳಲ್ಲಿ ನೋವು ಕಾಣಿಸಿಕೊಳ್ಳುತ್ತಿರುವುದನ್ನು ನಾವು ನೋಡಬಹುದಾಗಿದೆ. ನಮ್ಮ ದೇಹ ತಡೆದುಕೊಳ್ಳುವಷ್ಟು ಮಾತ್ರ ನಿತ್ಯವೂ ವ್ಯಾಯಾಮ ಮಾಡುವುದನ್ನು ರೂಢಿಸಿಕೊಳ್ಳಬೇಕಾಗುತ್ತದೆ.
ಎಲ್ಲದಕ್ಕಿಂತ ಮುಖ್ಯವಾಗಿ 5 ಬಿಳಿವಿಷಗಳಾದ ಉಪ್ಪು, ಸಕ್ಕರೆ, ಮೈದಾ, ಹಾಲು, ಮೊಸರು ಇವುಗಳನ್ನು ಆದಷ್ಟೂ ಕಡಿಮೆ ಉಪಯೋಗಿಸಬೇಕು. ತೊರೆದರೆ ಇನ್ನೂ ಒಳ್ಳೆಯದು.
ಕೊನೆಯದಾಗಿ, ಬಸವಣ್ಣನವರು ಹೇಳಿರುವಂತೆ, ಕಾಯಕವೇ ಕೈಲಾಸ ಎಂದು ತಿಳಿದು, ನಾವು ಮಾಡುವ ಕಾರ್ಯಗಳಲ್ಲಿ ಉದಾಸೀನತೆ ತೋರದೇ ಸಂತೋಷದಿಂದ ಮಾಡುವುದರಿಂದ, ದೈಹಿಕವಾಗಿ, ಮಾನಸಿಕವಾಗಿ ನೆಮ್ಮದಿ ಹೊಂದುವುದರಿಂದ ಆರೋಗ್ಯವಾಗಿರಲು ಸಾಧ್ಯ ಎನ್ನುವುದು ವೈದ್ಯರ ಅಭಿಪ್ರಾಯ..ನಮ್ಮ ಆರೋಗ್ಯ ನಮ್ಮ ಕೈಯಲ್ಲಿ..
ಎಲ್ಲರಿಗೂ ವಿಶ್ವ ಆರೋಗ್ಯ ದಿನದ ಶುಭಾಶಯಗಳು..
1948 ರಲ್ಲಿ ಜಿನೀವಾದಲ್ಲಿ ನಡೆದ ವಿಶ್ವ ಆರೋಗ್ಯ ಶೃಂಗಸಭೆಯಲ್ಲಿ ವರ್ಷಕ್ಕೊಮ್ಮೆ ವಿಶ್ವ ಆರೋಗ್ಯ ದಿನವನ್ನು ಆಚರಣೆ ಮಾಡಲು 61 ದೇಶಗಳು ಈ ವಿಶ್ವ ಆರೋಗ್ಯ ಸಂಸ್ಥೆಯ ರಚನೆಯ ಒಪ್ಪಂದಕ್ಕೆ ಸಹಿ ಹಾಕಿದವು. ಈ ದಿನವನ್ನು ಮೊದಲ ಬಾರಿಗೆ ವಿಶ್ವ ಆರೋಗ್ಯ ದಿನವನ್ನಾಗಿ 1949ರಲ್ಲಿ ಜುಲೈ 22ರಂದು ಆಚರಣೆ ಮಾಡಲಾಯಿತು. ನಂತರ ಏಪ್ರಿಲ್ 07ಕ್ಕೆ ವಿಶ್ವ ಆರೋಗ್ಯ ದಿನವನ್ನಾಗಿ ಆಚರಣೆ ಮಾಡಲು ನಿರ್ಧಾರ ಕೈಗೊಳ್ಳಲಾಯಿತು.
ಪ್ರತಿ ವರ್ಷ ಈ ದಿನವನ್ನು ವಿಶೇಷ ಘೋಷವಾಕ್ಯದೊಂದಿಗೆ ಆಚರಣೆ ಮಾಡಲಾಗುತ್ತದೆ. ಈ ಬಾರಿ " ಎಲ್ಲರಿಗೂ ಆರೋಗ್ಯ" ಎಂಬ ಘೋಷವಾಕ್ಯ ಮಾಡಲಾಗಿದೆ. ಆರೋಗ್ಯ ಮತ್ತು ಸ್ವಾಸ್ಥ್ಯದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ಆಚರಣೆ ಮಾಡಲಾಗುತ್ತಿದೆ. ಪ್ರತಿಯೊಬ್ಬ ಮನುಷ್ಯನು ಆರೋಗ್ಯಕರವಾಗಿ ಜೀವನ ನಡೆಸಲು ಸಹಾಯ ಮಾಡಲು ಈ ದಿನ ಹಲವು ಸಲಹೆಗಳನ್ನು ನೀಡಲಾಗುತ್ತದೆ.
- ಆಶಾ ಎಲ್. ಎಸ್, ಶಿವಮೊಗ್ಗ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ