ತಂಗಾಳಿಯೆ ನೀ ಬೇಗ ಬಾ
ನನ್ನವಳ ಮನ ಸೇರಲು
ತಂಬೆಲರೇ ತಂಪಾಗಿ ಬಾ
ಮನದ ಬೇಗೆ ನೀಗಲು
ದೇಹ ಎದುರಿದೆ ಮನವು ದೂರಿದೆ
ಎದುರೆ ಇದ್ದರು ಮಾತು ಮರೆತಿದೆ
ಏನಾಗಿದೆ ಮನವು ಹೇಳದಿದೆ
ನನಗೇತಕೊ ದಿಗಿಲಾಗಿದೆ
ದಿನವು ಹೀಗೆಯೆ ಬದುಕು ಸಾಗಿದೆ
ಚೇತನವಿಲ್ಲದೆ ಮನಸು ಬಾಡಿದೆ
ಪ್ರೀತಿಯ ನುಡಿ ಕೇಳದೆ ಮನವು
ವಿಲವಿಲ ಒದ್ದಾಡಿದೆ
ಪ್ರೀತಿ ಪ್ರೇಮವು ಎಲ್ಲೋ ಮಲಗಿವೆ
ನೋವು ಬೇಸರ ಎದೆಯ ಬಿರಿದಿವೆ
ಕಾಮನಬಿಲ್ಲಾಗಿವೆ ಮನದಾಸೆಗಳು
ನಿಲ್ಲದೆ ಹಾರೋಡುತಿವೆ
ಓಡೋಡಿ ಬಾ ತಂಗಾಳಿಯೆ
ಸಡಗರ ಹೊತ್ತು ಬಳಿಗೆ ಬಾ
ನನ್ನವಳ ನಕ್ಕು ನಗಿಸು ಬಾ
ಪ್ರೀತಿಯ ಸೊಗಸ ಮೆರೆಸು ಬಾ.
- ಸಬ್ಬನಹಳ್ಳಿ ಶಶಿಧರ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ