ಹೂವಿನಂತೆ ನಗುತಿರಲಿ ಮನಸು
ಮಗುವಿನಂತಿರಲು ಇನ್ನೂ ಸೊಗಸು
ಮನಮಂದಿರದಲಿ ಪ್ರೀತಿಯಿರಲಿ
ತುಂಬಿರಲಿ ಸ್ನೇಹಭಾವ ಅದರಲಿ
ಮನಸಿನಲಿ ಚಿಂತೆಯ ಕಾರ್ಮೋಡ ಏಕೆ
ಜೀವನವಿರುವುದೇ ನಗುತಾ ಬಾಳುವುದಕ್ಕೆ
ಚಂಚಲತೆ ಬೇಡ ನಿಶ್ಚಲತೆ ಇರಲಿ
ಕಠೋರತೆ ಬೇಡ ಮಧುರತೆ ತುಂಬಿರಲಿ
ಮನಸಿನೊಳಗೆ ಅಡಗಿಹುದೆಷ್ಟೊಂದು ಮನಸು
ಕಪಟವರಿಯದ ಮಗುವಿನ ಮನಸು,
ಸದಾ ಸಹಾಯಕೆ ನಿಂತ ತೆರೆದ ಮನಸು
ಕಷ್ಟಗಳಿಗೆ ಜಗ್ಗದೆ ನಿಂತ ಗಟ್ಟಿ ಮನಸು,
ನಂಬಿಕೆದ್ರೋಹಕೆ ಒಡೆದ ಮನಸು,
ದುಃಖದಿಂದ ಭಾರವಾದ ಮನಸು,
ಸಂತೋಷದಿಂದ ಕುಣಿದಾಡುವ ಮನಸು,
ಹಕ್ಕಿಯಂತೆ ಹಾರಾಡಿದೆ ಮನಸು
ಒಲಿದ ಮನಸು, ದೂರಾದ ಮನಸು,
ಹತ್ತಿರವಾಗಲು ಕಾತರಿಸುವ ಮನಸು,
ಮೋಸಕೆ ಛಿದ್ರವಾದ ಮನಸು,
ಉದಾಸೀನತೆಗೆ ಕಿರಿದಾಗುವ ಮನಸು
ಸಂತೋಷಪಡಿಸಿದಾಗ ಹಿಗ್ಗುವ ಮನಸು
ಮನಸಿನಲಿ ಇರದಿರಲಿ ಗೊಂದಲ
ಮನೆಯಲೂ ಮನಸಲೂ ತುಂಬದಿರಲಿ ಕಶ್ಮಲ
ಮನಸ್ಸಿಗಿಂತ ದೊಡ್ಡದಾವುದಿದೆ ನಮ್ಮಲ್ಲಿ
ಮನಸ್ಸಾಕ್ಷಿಯೇ ಮುಖ್ಯ ಎಲ್ಲದರಲ್ಲಿ
ಹರಿಯಬಿಡಬೇಡಿ ನಿಮ್ಮಯ ಮನಸು
ನುಚ್ಚುನೂರಾಗುವುದು ಕಂಡಕನಸು
ಚಿಂತೆ ಮಾಡುವುದು ಏಕೆ ಅದಕೆ
ಕಾಯಕ ಮಾಡಿದರೆ ಬಾಳೇ ಸೊಗಸು
- ಎಲ್. ಎಸ್. ಆಶಾ ಶ್ರೀಧರ್, ಶಿವಮೊಗ್ಗ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ