ಮಂಗಳವಾರ, ಜೂನ್ 6, 2023

ಪ್ರಕೃತಿಯ ಶಿಶು ನಾನು (ಕವಿತೆ) - ಡಾ. ಸುಸ್ಮಿತ ಕೆ.

ಜೀವನಕೆ ಅರ್ಥ ನೀಡಿದ 
ತಾಯಿ ಪ್ರಕೃತಿಯ ಶಿಶು ನಾನು

ಹಸಿರ ಮಡಿಲ ಸಿರಿತಂಪಲಿ 
ತರು ಲತೆಗಳ ತೊಟ್ಟಿಲ ತೂಗಿ 
ಮಂದಾರ ಹೂ ನಗೆಯ ಸೂಸಿದ
ತಾಯಿ ಪ್ರಕೃತಿಯ ಶಿಶು ನಾನು 

ಗರ್ಭದೊಳು ಉರಿ ಜ್ವಾಲೆ ಇದ್ದರು 
ಒಡಲ ಮಗುವಿಗೆ ಸಿಹಿ‌ ನೀರ ಹಂಚಿ
ತಾಳ್ಮೆ ಸಹನೆಗೆ ಸ್ಪೂರ್ತಿಯಾಗಿಹ
ತಾಯಿ ಪ್ರಕೃತಿಯ ಶಿಶು ನಾನು 

ರತ್ನ ಮಾಣಿಕ್ಯ ಕನಕ ವಜ್ರಗಳ ಗಣಿ 
ಕಾಡುಮೇಡುಗಳ ಸುಂದರ ಸರಣಿ
ಇಷ್ಟಿದ್ದರೂ ಸರಳತೆಯ ಮೆರೆದಿಹ
 ತಾಯಿ ಪ್ರಕೃತಿಯ ಶಿಶು ನಾನು 

ಎಷ್ಟು ಒದ್ದರೂ ಪ್ರೀತಿ ಕರುಣಿಸಿ
ಹೊತ್ತು ಹೊತ್ತಿಗೂ ಅನ್ನ ಉಣಿಸಿ
ಪ್ರತಿ ಬಾಳಿಗು ನೆಲೆಯ ನೀಡಿದ
ತಾಯಿ ಪ್ರಕೃತಿಯ ಶಿಶು ನಾನು

ಪ್ರಕೃತಿ ಮಾತೆಯ ಆರೋಗ್ಯಕಾಗಿ
ಆಕೆಯ ಚೆಲುವ ರಕ್ಷಣೆಗಾಗಿ 
ಹಗಲಿರುಳು ಶ್ರಮಿಪೆ ಅಮ್ಮನ ಕ್ಷೇಮಕಾಗಿ  
ಇಂತಿ, ತಾಯಿ ಪ್ರಕೃತಿಯ ಶಿಶು ನಾನು


- ಶ್ರೀಮತಿ ಡಾ. ಸುಸ್ಮಿತ. ಕೆ
ಕನ್ನಡ ಶಿಕ್ಷಕಿ, ಸಾಹಿತಿ
ಬೆಂಗಳೂರು.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಬೆಳಗು...

ಕವನ     ಬೆಳಗು ಬೆಳಗು ಬಾ ಬೆಳಕು ಬೆಳದಿಂಗಳ ಬೆಳಕು ಚೆಲ್ಲುತ ರಂಗು ರಂಗಿನ ಕಾಮನಬಿಲ್ಲಿನಂತೆ ಮಿನು ಮಿನುಗುವ ಬೆಳ್ಳಿಚುಕ್ಕಿಯಂತೆ ರಂಗು ರಂಗಿನ ರಂಗೋಲಿಯಂತ...