ಪ್ರಕೃತಿಯ ಶಿಶು ನಾನು
ಶೃತಿಬದ್ಧ ಹಾಡೊoದ ಹಾಡಲೇನು...
ಅವಳಾ ಕೃತಿಗೆ ಆಕೃತಿಯ ಅಳುಕಿಲ್ಲ
ತುದಿ ಮೊದಲು ಇದ್ದರದು ಭೂಮಿ ಬಾನು...!
ಪ್ರಕೃತಿಯ ಆವೃತ್ತಿಯೊಳಗೆ ಸೆರೆಸಿಕ್ಕ ನಾನು,
ವಿಕೃತಿಯ ಜಗದಿಂದ ಹೊರಬಿದ್ದೆನು....
ಅವಳಾ ಜಾಗೃತಿಯ ಜೋಲಿಯಲಿ ತಲೆಯಿಟ್ಟು ತೂಗುತಾ
ಪ್ರತಿ ವಸಂತಗೀತೆಯೊಳಹೊಕ್ಕು ಶರಣೆದೆoನು...
ಕಣ್ಣೆದುರು ಕಾಣದೆ ಕುಳಿತು ಈ ಕೋಮಲೆಯ ಕೆತ್ತಿದಾ ದೇವನು
ಕಣ ಕಣವು ಅವಳಾಗಿ ಪರಿಸರದ ಸರಿಗಮದಿ ಕಲೆತೋದನು...
ಪ್ರಕೃತಿಯ ಶಿಶು ನಾನು,
ಅವಳಾ ಶೃತಿಬದ್ಧ ಹಾಡೊಂದ ಹಾಡಲೇನು....!
ಹೃದಯ ದಿಗಂತದಿ ರವಿಯಾಗಿ ನೆಲೆನಿಂತು
ಉದಯಿಸಿದಳು ಶ್ಯಾಮಲೆ ನಿತ್ಯ ಎನಗಾಗಿ...
ಹಗಲಿರುಳು ಹಸಿರಾಗಿ, ಹಣ್ಣಾಗಿ, ಕಾಯಾಗಿ
ಹರಸಿದಳು ಸದಾ ಹಸನಾಗಿ ಮಾಗಿ...
ಬೀಗುವೆ ನಾ ನಿನ್ನ ಕಂದನೆಂದು,
ಬಾಗುವೆ ಸದಾ ನಿನ್ನೆದುರು ಓ ಆತ್ಮ ಬಂಧು...
ಈ ಪ್ರಕೃತಿಯ ಶಿಶು ನಾನು
ಅವಳಾ ಶೃತಿಬದ್ಧ ಹಾಡೊಂದ ಹಾಡಲೇನು...!
ನನ್ನೆದೆಯ ಅಂಗಳದಿ ನದಿಯಾಗಿ, ವಿಧಿಯಾಗಿ
ಹರಿದವಳವಳು ನಿಸರ್ಗೆ ಗಂಗೆ ತುಂಗೆಯಾಗಿ...
ಕೊನೆಗೂ ಮಿಣುಕು ಹುಳುವಾಗಿ ಇಣುಕಿದಳು ನನ್ನಾತ್ಮದೆಡೆ ಸಾಗಿ,
ದಿಗ್ಬ್ರಮೆಯೊಳು ದಿಟ್ಟಿಸುತ ಮರುಳಾದೆ ಅವಳಾಟಕೆ ನಾ ಬೆರಗಾಗಿ...
ನಾನವಳ ತೊರೆದು ಮರೆಯಾಗುವೆನೆಂದು ಮುನಿದು ನಿಂತಾಗ
ನಸುನಗುತಲೆಂದಳು, "ಎಲೆ ಮರುಳೆ ಕೇಳು, ನಾನೇ ನೀನೀಗ....!".
ಆ ಪ್ರಕೃತಿಯ ಶಿಶುನಾನು
ಅವಳಾ ಶೃತಿಬದ್ಧ ಹಾಡೊನ್ದ ಹಾಡಲೇನು...!
ಬೆಟ್ಟ ಗುಡ್ಡವ ಹೊಸೆದಳು
ನಡುವೆ ಕಾನನವ ನೆಟ್ಟು,
ಹಸಿರು ಸೆರಗುಟ್ಟಳು,
ಜಲಪಾತ ಝರಿ ಜುಮುಕಿ ಓಲೆಯ ತೊಟ್ಟು...
ಅವಳುಸಿರ ಉಷೆ ಸಾಕು ಜಗದ ವಿಷ ವಿಷಯವ ಹೊಸಕು ಹಾಕಲು ...
ಅವಳ ಹೊಸತನ ಬೇಕು,
ಅವಳ ಕಲರವ ಬೇಕು
ಅವಳ ಚೈತನ್ಯ ಪಸರಿಸಿದರೆ ಸಾಕು
ನನ್ನೊಳ ಬದುಕ ಬತ್ತದಂತೆ ಬೆಳಗಲು...
ಆ ಪ್ರಕೃತಿಯ ಶಿಶು ನಾನು
ಅವಳ ಶೃತಿಬದ್ಧ ಹಾಡೊಂದ ಹಾಡಲೇನು..!
ದೀರ್ಘ ಉಸಿರಿನ ಒಳಗೆ ಋತುಗಾನದ ಚೇತನವುಂಟು,
ನನ್ನಾಂತರ್ಯದಿ ಚಿಗುರಿದ ಕಾಂತಿಯಲಿ ಧಾತ್ರಿಯದೆ ನಂಟು...
ನಿಲಾoಬರದ ತಿಳಿ ನೆತ್ತಿಯ ಸೊಗಡುಂಟು ಅವಳಾಕಳಿಕೆಯಲಿ
ವಿಶಾಲ ಹಗಲು ರಾತ್ರಿಗಳೆಂಬ ಜೋಡಿ ಜನ್ಮಗಳುoಟು....
ಹೆಣೆದಳು ಗಿರಿಜೆ ಕಾಡು ಮಲ್ಲಿಗೆ ಸಂಪಿಗೆಯೊಳು ಸೆಳೆವ ಬಂಧ,
ಅದರೊಳಗೆ ಕಟ್ಟಿದಳೆನಗಾಗಿ ತಂಪೆರೆವ ತೊಟ್ಟಿಲೊಂದ...
ಆ ಪ್ರಕೃತಿಯ ಶಿಶುನಾನು
ಅವಳದೇ ಶೃತಿಬದ್ಧ ಹಾಡೊಂದ ಹಾಡಲೇನು...!
- ಸೌಜನ್ಯ ದಾಸನಕೊಡಿಗೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ