ಶುಕ್ರವಾರ, ಜನವರಿ 5, 2024

ಯೋಗ (ಕವಿತೆ) - ಅರಬಗಟ್ಟೆ ಅಣ್ಣಪ್ಪ.

ನನಗೆ ಒಳ್ಳೆಯ ಕವಿಯಾಗುವ
ಯೋಗವಿಲ್ಲದಿರಬಹುದು
ರಸವು ರವಿಯಂತೆ ಉದಯಿಸುತ್ತದೆ
ನನ್ನ ಬದುಕೆಲ್ಲ ಹೂವು!

ನನಗೆ ಒಳ್ಳೆಯ ಸಂಗಾತಿಯಾಗುವ
ಯೋಗವಿಲ್ಲದಿರಬಹುದು
ಭಾವವು ಮಳೆಯಂತೆ ಸುರಿಯುತ್ತದೆ
ನನ್ನ ಬದುಕೆಲ್ಲ ಹಸಿರು!

ನನಗೆ ಒಳ್ಳೆಯ ಗುರುವಾಗುವ
ಯೋಗವಿಲ್ಲದಿರಬಹುದು
ಅರಿವು ವಜ್ರದಂತೆ ಮಿನುಗುತ್ತದೆ
ನನ್ನ ಬದುಕೆಲ್ಲ ಕನ್ನಡಿ!

ನನಗೆ ಒಳ್ಳೆಯ ಓದುಗನಾಗುವ
ಯೋಗವಿಲ್ಲದಿರಬಹುದು
ಆನಂದವು ಹೊಳೆಯಂತೆ ಹರಿಯುತ್ತದೆ
ನನ್ನ ಬದುಕೆಲ್ಲ ಸಾಗರ!

ನನಗೆ ಒಳ್ಳೆಯ ಬಂಧುವಾಗುವ
ಯೋಗವಿಲ್ಲದಿರಬಹುದು
ಸ್ನೇಹವು ಬೇರಿನಂತೆ ಇಳಿಯುತ್ತದೆ
ನನ್ನ ಬದುಕೆಲ್ಲ ಹೆಮ್ಮರ!

ನನಗೆ ಒಳ್ಳೆಯ ನಾನಾಗುವ
ಯೋಗವಿಲ್ಲದಿರಬಹುದು
ನಿಮ್ಮಲ್ಲಿ ನಿಮ್ಮಂತೆ ನಾನಿರುವೆ
ನನ್ನ ಬದುಕೆಲ್ಲ ನಿಮ್ಮದು!
- ಅರಬಗಟ್ಟೆ ಅಣ್ಣಪ್ಪ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...