ಕನಸೊಂದು ಹಾರಲು ಕಣ್ ರೆಪ್ಪೆಗಳ ಕಟ್ಟಿ
ನನಸಾಗಿಸೆ ಹಿಂತಿರುಗುವೆ ರೆಕ್ಕೆಗಳ ಕಟ್ಟಿ
ರೆಪ್ಪೆಗಳಿಲ್ಲದೆ ಬಾರದು ನಿದ್ರೆ ಕಂಗಳಿಗೆ
ರೆಕ್ಕೆಗಳಿಲ್ಲದೆ ಹಾರಲಾಗದು ಕನಸುಗಳಿಗೆ
ಆಶ್ವಾಸನೆಯೊಂದು ಮಾಯಾವಿ ಕಡ್ಡಿಯಲಿ
ಹಾರು ನೀನೆಂದು ಲೇಖನಿಯ ತೆಕ್ಕೆಗಳಲಿ
ಪಡೆಯಲಿ ಹೇಗೆಂದು ಕಾಣದ ರೆಕ್ಕೆಗಳ
ಚಿಂತಿಸುತ ದಣಿಸಿದೆ ಈ ಕಣ್ಣ ರೆಪ್ಪೆಗಳ
ಮಿಂಚಿ ಉರುಳಲು ಮಾಯಾವಿ ಕಡ್ಡಿಯೊಂದು
ಚಕಿತನಾದೆ ಚಿಂತಿಸುತ ಮಂತ್ರಿಸಲಿ ಹೇಗೆಂದು
ಪ್ರಕಾಶಮಾನದಿ ನನ್ನೆಡೆಗೆ ಹಾರಿತ್ತು ಬಿಳುಪೊಂದು
ಬರಿ ಕಾಗದವೇ ಇದು ಪಠಿಸಲಿ ನಾ ಇದಕೇನೆಂದು
ಮಸ್ತಕದಿ ಮಂತ್ರವೊಂದು ಲೇಖನಿಗೆ ನುಡಿದಿತ್ತು
ಬರಿ ಕಾಗದವು ಭರವಸೆಯ ಬೆಳಕನ್ನು ಕಂಡಿತ್ತು
ಲೇಖನಿಯ ಸಾಗಿತ್ತು ಮಸ್ತಕವ ಹಿಂಬಾಲಿಸಿ
ಗದ್ಯ ಪದ್ಯಗಳ ರಾಶಿಯೊಂದು ಪುಸ್ತಕವ ರಚಿಸಿ
ಬರಿ ಕಾಗದಕ್ಕೀಗ ಪುಸ್ತಕದ ಯುಕ್ತಿಯು
ಪಡೆದಂತೆ ಅದ್ಭುತ ರೆಕ್ಕೆಗಳ ಶಕ್ತಿಯು
ಬೇರೆ ಏನಿಲ್ಲ ಲೋಕದಲಿ ಜ್ಞಾನಕ್ಕೆ ಸಮಾನ
ಜ್ಞಾನವಿದ್ದರೆ ಮಾತ್ರ ಏರುವೆ ಪುಸ್ತಕ ವಿಮಾನ
- ಜೀನಮ್, ಮಲ್ಲಾಡಿಹಳ್ಳಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ