ಭಾರತೀಯರು ಎಂದೂ ಮರೆಯದ ಅವಿಸ್ಮರಣೆಯ ದಿನಗಳಲ್ಲಿ ಜುಲೈ 26 ಕೂಡ ಹೌದು. ರಾಷ್ಟ್ರಕ್ಕಾಗಿ ರಣಾಂಗದಲ್ಲಿ ಹೋರಾಡಿ ಮಡಿದ ವೀರ ಯೋಧರು ಜಯಿಸಿದ ಕಾರ್ಗಿಲ್ ವಿಜಯದ ಕಥೆಯನ್ನು ನಾನೀಗ ಒಮ್ಮೆ ಮೆಲುಕು ಹಾಕಲು ಹೊರಟಿದ್ದೇನೆ.
ಕಾರ್ಗಿಲ್ ಯುದ್ಧ ಪ್ರತಿಯೊಬ್ಬ ಭಾರತೀಯರ ಮನದಾಳದಲ್ಲಿ ಅಚ್ಚಳಿಯದೆ ಉಳಿದಿದೆ. ಈ ದೇಶದ ಪರಂಪರೆ, ಇತಿಹಾಸ, ಘನತೆ, ಶ್ರೇಷ್ಠತೆಗಳನ್ನು ಹಾಗೂ ಯುದ್ಧದಂತಹ ವೀರಗಾಥೆಗಳನ್ನು ಮರೆಯುವುದಾದರೂ ಹೇಗೆ...?
ಕ್ಯಾಪ್ಟನ್ ಸೌರಭ್ ಕಾಲಿಯಾ, ಕ್ಯಾಪ್ಟನ್ ವಿಕ್ರಂ ಬಾತ್ರಾ, ಗ್ರೇನೇಡಿಯರ್ ಯೋಗೇಂದ್ರ ಸಿಂಗ್ ಯಾದವ್, ಕ್ಯಾಪ್ಟನ್ ಅಮೂಲ್ ಕಾಲಿಯಾ, ರಾಜೇಶ್ ಅಧಿಕಾರಿ, ಅಜಯ್ ಅಹುಜಾ, ಮೇಜರ್ ವಿವೇಕ್ ಗುಪ್ತ, ಕೆಂಗುರುಸೆ, ಲೆಫ್ಟಿನೆಂಟ್ ಮನೋಜ್ ಕುಮಾರ್ ಪಾಂಡೆ ಸೇರಿದಂತೆ ಸಾವಿರಾರು ತರುಣ ಯೋಧರ ಸಾಹಸ, ಶೌರ್ಯ ಮತ್ತು ತ್ಯಾಗದ ಪ್ರತೀಕವಾಗಿ ತಾಯಿ ಭಾರತಮಾತೆಗೆ ವಿಜಯ ದೊರೆತ ಕಥೆ ಇದು.
ಅದೊಂದು ಸಂದರ್ಭ ನಮ್ಮ ನಿತ್ಯ ಜೀವನದಲ್ಲಿ ಅಣ್ಣತಮ್ಮಂದಿರ ಕುರಿತು ಕೇಳುವ ಗಾದೆ ಮಾತಿದೆಯಲ್ಲ ಹುಟ್ಟುತ್ತ ಅಣ್ಣತಮ್ಮಂದಿರು ಬೆಳೆಯುತ್ತಾ ದಾಯಾದಿಗಳು ಎಂಬಂತೆ ಬೇರೆಯಾಗಿದ್ದ ಭಾರತ ಮತ್ತು ಪಾಕಿಸ್ತಾನ ಸೇರುವ ಸಮಯ ಬಂದಿತ್ತು.
ಭಾರತ ಅಣ್ವಸ್ತ್ರ ಪ್ರಯೋಗ ನಡೆಸಿ 15 ದಿನಗಳಲ್ಲಿ ಪಾಕಿಸ್ತಾನ ಕೂಡ ಅಣು ಪರೀಕ್ಷೆ ನಡೆಸಿತ್ತು. ಪರಿಣಾಮ ಜಗತ್ತಿನ ರಾಷ್ಟ್ರಗಳು ಭಾರತ ಮತ್ತು ಪಾಕಿಸ್ತಾನದ ಮೇಲೆ ನಿರ್ಬಂಧ ಹೇರಿದವು. ಭಾರತ ಹಿರಿಯಣ್ಣನಾಗಿ ಪಾಕಿಸ್ತಾನವನ್ನು ತಬ್ಬಿಕೊಳ್ಳಲು, ಸ್ನೇಹದ ಮಾತುಗಳನ್ನು ಆಡಲು ಕೈ ಚಾಚಿತು. ಅಂದಿನ ಭಾರತದ ಪ್ರಧಾನಿಗಳಾಗಿದ್ದ ಅಟಲ್ ಬಿಹಾರಿ ವಾಜಪೇಯಿ 1999ರ ಫೆಬ್ರವರಿ 20ರಂದು ಭಾರತದಿಂದ ಪಾಕಿಸ್ತಾನದತ್ತ ಬಸ್ಸಂದನ್ನು ಹೊರಡಿಸಿದರು. ಇತಿಹಾಸದ ಪುಟಕ್ಕೆ ಹೊಸ ದಾಖಲೆ ಸೇರಿಸುವ ಸಂತಸ. ಇನ್ನು ಮುಂದೆ ನಾವಿಬ್ಬರೂ ವೈರಿಗಳಲ್ಲ! ಬಸ್ಸು, ರೈಲುಗಳ ಮೂಲಕ ಸಂಬಂಧ ಬೆಸೆಯಲ್ಲಿರುವ ಹಳೆಯ ಗೆಳೆಯರು! ಅಖಂಡ ಭಾರತಮಾತೆಯ ಸುಪುತ್ರರು! ಸ್ವತಹ ವಾಜಪೇಯಿಯವರೇ ಎಲ್ಲಾ ಒತ್ತಡಗಳನ್ನು ಮೀರಿ ಪಾಕಿಸ್ತಾನಕ್ಕೆ ಹೊರಟರಷ್ಟೇ ಅಲ್ಲ, ಲಾಹೋರ್ ಒಪ್ಪಂದಕ್ಕೆ ಸಹಿ ಹಾಕಿ, ಶಿಮ್ಲಾ ಒಪ್ಪಂದಕ್ಕೆ ಬದ್ಧರಾಗುವಂತೆ ಮತ್ತು ಜಮ್ಮು-ಕಾಶ್ಮೀರದ ಸಮಸ್ಯೆಗಳನ್ನು ತಮ್ಮೊಳಗೆ ಬಗೆಹರಿಸಿಕೊಳ್ಳುವಂತೆ ಭರವಸೆಯನ್ನು ಒಬ್ಬರಿಗೊಬ್ಬರು ವಿನಿಮಯ ಮಾಡಿಕೊಂಡರು.
ಪಾಕಿಸ್ತಾನ ನರಿ ಬುದ್ಧಿಯ ರಾಷ್ಟ್ರ. ಅಲ್ಲಿ ಈ ಕೊಟ್ಟ ಮಾತುಗಳಾಗಲಿ, ಇಟ್ಟ ಭರವಸೆಗಳಿಗಾಗಲಿ ಬೆಲೆ ಇಲ್ಲ. ಧರ್ಮಾಂಧತೆಯೇ ತುಂಬಿದ ಆ ದೇಶ ಎಂದೂ ತನ್ನ ಮೂಲ ಮನೋಧರ್ಮದ ಗುಣ ಬಿಡದು. ಹೀಗಾಗಿಯೇ ಇತ್ತ ಜಂಟಲ್ ಮನ್ ಒಪ್ಪಂದದ ಕರಾರುಗಳನ್ನು ಮರೆತು ಲಾಹೋರ್ ಘೋಷಣೆಗೆ ಅಂಕಿತ ಬಿದ್ದ ಐದೇ ವಾರಗಳಲ್ಲಿ ಅಂದರೆ 1999ರ ಮಾರ್ಚ್ 28ರ ವೇಳೆಗೆ ಕಾರ್ಗಿಲ್ ಬೆಟ್ಟಗಳತ್ತ ಪಾಕಿಸ್ತಾನಿ ಸೇನೆ ದಾಳಿಗೆಂದು ಕಾಲಿಟ್ಟಿತು. ಪಾಕಿಸ್ತಾನ ಭಾರತದೊಂದಿಗೆ 1948, 1965, 1971ರ ಮೂರು ನೇರ ಯುದ್ಧಗಳಲ್ಲಿ ಸೋಲುಂಡ ಮೇಲೆ ಈ ಬಾರಿ ಛದ್ಮ ಯುದ್ಧದ ಮಾರ್ಗ ಹಿಡಿಯಿತು. ಪಾಕಿ ಸೈನ್ಯ ಹಾಗೂ ಐ ಎಸ್ ಐ ಗಳು ಸಮರ್ಥ ಯೋಜನೆಗಳನ್ನು ರೂಪಿಸಿದ್ದವು. ಯೋಜನೆಯಂತೆ ಭಾರತದ ಸೇನೆಯ ದಿಕ್ಕು ತಪ್ಪಿಸಲು ಪಾಕ್ ಆಕ್ರಮಿತ ಜಿಲ್ಲೆಗಳಾದ ರಜೋರಿ, ಪುಂಚ್, ಗಂಧರ್ಬಾಲ್, ಅನಂತ್ ನಾಗ್ ಗಳಲ್ಲಿ ಭಯೋತ್ಪಾದಕ ಕೃತ್ಯ ಮಿತಿ ಮೀರಿತು. ಪಾಕಿಸ್ತಾನದ ಸೇನಾ ಮುಖ್ಯಸ್ಥ ಫರ್ವೇಜ್ ಮುಷರ್ರಫ್ ತಡಮಾಡಲಿಲ್ಲ ‘ಆಪರೇಷನ್ ಬಿದ್ರ್’ಗೆ ಚಾಲನೆ ನೀಡಿದರು. ಶತ್ರುಗಳಿಗೆ ತಿಳಿಯುವ ಮುನ್ನ ಎತ್ತರದ ಗುಡ್ಡಗಳನ್ನು ವಶಪಡಿಸಿಕೊಳ್ಳುವುದೇ ಈ ಯೋಜನೆಯ ಗುರಿಯಾಗಿತ್ತು. ಮೇ 8ರ ಹೊತ್ತಿಗೆ ಪಾಕೀಗಳು ಗುಡ್ಡಗಳನ್ನು ಆಕ್ರಮಿಸಿ ಬಂಕರುಗಳಲ್ಲಿ ಕುಳಿತುಬಿಟ್ಟರು. ಮರುದಿನ ಸೇನಾ ಠಾಣಕ್ಕೆ ದನಗಾಯಿಗಳು ಸುದ್ಧಿ ತಲುಪಿಸಿದರು.
ಮರುದುನವೇ ಸೇನೆ ಜಾಟ್ ರೆಜಿಮೆಂಟ್‌ನ ಕ್ಯಾಪ್ಟನ್ ಸೌರಭ್ ಕಾಲಿಯಾರನ್ನು ಕಳುಹಿಸಿತು. 6 ಜನರ ತಂಡದೊಂದಿಗೆ ‘ಭಜರಂಗ್’ ಪೋಸ್ಟಿನತ್ತ ಹೊರಟರು, ಶತ್ರುಗಳಿರುವುದು ಖಾತ್ರಿಯಾಗಿ ತಂಡ ಕದನಕ್ಕಿಳಿಯಿತು. ಶತ್ರುಗಳ ಸಂಖ್ಯೆಯನ್ನು ಅಂದಾಜಿಸಲು ಎಡವಿದ್ದ ತಂಡ ಜಿಹಾದಿ ಸೈನಿಕರ ಬಂಧನದಲ್ಲಿ ಸೆರೆ ಸಿಕ್ಕಿ, ಚಿತ್ರವಿಚಿತ್ರವಾಗಿ ಅವರಿಂದ ಹಿಂಸಿಸೆಗೊಳಗಾಗಿ 22ದಿನಗಳ ಸೆರೆಯ ನಂತರ ಕೊಲ್ಲಲ್ಪಟ್ಟರು.
ಮೇ 24ರಂದು ಇದು ವ್ಯವಸ್ಥಿತ ದಾಳಿ ಎಂದರಿತ ಸೇನೆ ಪ್ರಧಾನಿ, ರಕ್ಷಣಾ ಸಚಿವರು, ವಿದೇಶಾಂಗ ಸಚಿವರು, ಐಬಿ, ರಾಗಳು ಮತ್ತು ಮೂರೂ ಸೇನೆಯ ಮುಖ್ಯಸ್ಥರುಗಳನ್ನು ಸೇರಿಸಿ ಮಹತ್ವದ ಸಭೆ ನಡೆಸಿತು. ಭಾರತ ಸೇನೆಯ ಜನರಲ್ ಮಲಿಕ್ “ಸೇನೆಯ ಮೂರೂ ವಿಭಾಗಗಳು ಜೊತೆಗೂಡಿ ದಾಳಿಗೈದರೆ ಮಾತ್ರ ಪರಿಹಾರ. ಅನುಮತಿ ಕೊಡಿ” ಎಂದು ಪ್ರಧಾನಿಗೆ ತಾಕೀತು ಮಾಡಿದರು. ಅನುಮತಿ ದೊರೆತ ನಂತರ ಕೊನೆಯಲ್ಲಿ ಎದ್ದುನಿಂತು ನಿಶ್ಚಿತ ಗೆಲುವಿನ ಭರವಸೆಯಿಂದ ಇಡೀಯ ಹೋರಾಟವನ್ನು ‘ಆಪರೇಷನ್ ವಿಜಯ್’ ಎಂದು ಕರೆದರು.
ಇದೀಗ ಮೂರು ಯಶಸ್ವಿ ಯುದ್ಧಗಳ ನಂತರ ಭಾರತಕ್ಕೆ ಮತ್ತೊಂದು ಅಗ್ನಿ ಪರೀಕ್ಷೆ ಎದುರಾಗಿತ್ತು. ಸೌರಬ್ ಕಾಲಿಯಾಗೆ ಅನೇಕ ತನ್ನದೇ ಸೈನಿಕರ ಮಾರಣಹೋಮಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಅವಕಾಶ ಒದಗಿತ್ತು. ಯುದ್ಧ ಬಹಳ ಜೋರಾಗಿಯೇ ಶುರುವಾಯಿತು. ದಾಳಿ-ಪ್ರತಿದಾಳಿಗಳು ನಡೆದವು. ವಿಮಾನಗಳ ವೇಗದ ಹಾರಾಟ, ಹೆಲಿಕಾಪ್ಟರ್‌ಗಳ ಭರ್ಜರಿ ಸದ್ಧು, ಮದ್ದು-ಗುಂಡುಗಳ ಅಬ್ಬರದ ಸಿಡಿತ, ರಾಷ್ಟ್ರಕ್ಕಾಗಿ ಪ್ರಾಣಕೊಡುವ ಸೈನಿಕನ ತುಡಿತ ಎಲ್ಲವೂ ಜೋರಾಗಿಯೇ ಸಾಗಿತ್ತು. ಮೊದಮೊದಲು ಸ್ವಲ್ಪ ನಷ್ಟ ಅನುಭವಿಸಿದ ಭಾರತೀಯ ಸೇನೆ ಸಜ್ಜನರ ಸೋಗಿನ ವ್ಯಾಘ್ರ ಪಾಕಿಗಳನ್ನು ಬಗ್ಗುಬಡೆದು ತೋಲೋಲಿಂಗ್, ಟೈಗರ್ ಹಿಲ್ ಪಾಯಿಂಟ್ 5140, 4700, 5100, ಲೋನ್ ಹಿಲ್ ಮತ್ತು ಥ್ರೀ ಪಿಂಪಲ್ಸ್‌ಗಳನ್ನು ಸೇರಿದಂತೆ ಹಲವಾರು ಪ್ರದೇಶಗಳನ್ನು ಜುಲೈ 15ರ ಹೊತ್ತಿಗೆ ಅವರ ಕಪಿಮುಷ್ಠಿಯಿಂದ ವಶಪಡಿಸಿಕೊಂಡಿತು. ಸುಮಾರು 527 ಯೋಧರ ಬಲಿದಾನದ ಬಳಿಕ 1999ರ ಜುಲೈ 26ಕ್ಕೆ ಕಾರ್ಯಾಚರಣೆ ನಿಲ್ಲಿಸಿ “ಆಪರೇಷನ್ ವಿಜಯ್”ನ ಸಂಭ್ರಮಾಚರಣೆಯಲ್ಲಿ ತೊಡಗಿತ್ತು. ಭಾರತ ತನ್ನ ಸಾಮರ್ಥ್ಯವನ್ನು ಜಗತ್ತಿಗೆ ಸಾಬೀತುಪಡಿಸಿತ್ತು. ಪಾಕಿಸ್ತಾನ ತೀವ್ರ ಮುಖಭಂಗಕ್ಕೆ ಒಳಗಾತಿತಲ್ಲದೆ ಬೆನ್ನಿಗೆ ಚೂರಿಹಾಕುವ ರಾಷ್ಟ್ರ ಎಂದು ಜಗತ್ತಿಗೆ ತಿಳಿಯಿತು.
ಹೀಗೆ ಈ ಬಾರಿ ಕಾರ್ಗಿಲ್ ಯುದ್ಧದಲ್ಲಿ ಭಾರತ ವಿಜಯ ಪತಾಕೆಯನ್ನು ಹಾರಿಸಿ 25 ವರ್ಷ ತುಂಬುತ್ತದೆ. ಯುದ್ಧದಲ್ಲಿ ಹುತಾತ್ಮರಾದ ಸೈನಿಕರನ್ನು ಸ್ಮರಿಸಲು ದೇಶವು ಪ್ರತಿ ವರ್ಷ ಜುಲೈ 26ರಂದು ಕಾರ್ಗಿಲ್ ವಿಜಯ ದಿವಸ್ ಆಚರಿಸಲಾಗುತ್ತದೆ.
- ಬ್ರಿಜೇಶ್ ಕುಮಾರ್ ಬಿ.ಟಿ.
ವಿದ್ಯಾರ್ಥಿಗಳು ಹಾಗೂ ಯುವ ಚಿಂತಕರು.
ಚಿತ್ರದುರ್ಗ.