ಶುಕ್ರವಾರ, ಫೆಬ್ರವರಿ 21, 2025

ಲೇಖನ/ಕೃತಿ ವಿಮರ್ಶೆ...

ಲೇಖನ/ಕೖತಿ ವಿಮರ್ಶೆ 


ಕಲೆಯ ಅಭಿಮಾನದಿಂದ ಲೇಖನಿಯಲ್ಲಿ  

 ಒಲವಿನಲಿ ಸ್ನೇಹವನು ಮಾಡುತಲಿ ನಡೆಯುತಿರೆ 
 ಸಲುಗೆಯನು ನೀಡುತಲಿ ಕಾರ್ಯದಲಿಯೆ 
 ಮಲಿನತೆಯ ತೋರದಲೆ ಮನವದವು ಶುದ್ಧವಿರೆ 
 ಕಲಿಸುತಲಿ ಸಾಗುವರು
 ಲಕ್ಷ್ಮಿ ದೇವಿ......

 ನಮಗೆ ಮಾರ್ಗದರ್ಶನ ನೀಡುವ ಬಹುಮುಖ ಪ್ರತಿಭೆಯ ಗುರುಗಳು
 ಶ್ರೀ ಗೊರೂರು ಅನಂತರಾಜುರವರು ಎಲ್ಲಾ ಕ್ಷೇತ್ರಗಳಲ್ಲೂ ಕೈಯಾಡಿಸುತ್ತಾ ಹೊಸದಾಗಿ ಬಂದ ಯುವ ಪ್ರತಿಭೆಗಳಿಗೆ ವೇದಿಕೆಗಳನ್ನು ನೀಡುವುದರಲ್ಲಿ ಬಹಳಷ್ಟು ಯಶಸ್ಸು ಕಂಡವರು. ಸತತವಾಗಿ ಸಾಹಿತ್ಯ ಲೋಕದಲ್ಲಿ ಮಿಂದು ಎಲ್ಲರೊಂದಿಗೂ ಸ್ನೇಹಿತರಾಗಿ ಪ್ರೀತಿ ವಿಶ್ವಾಸದಲ್ಲಿ ಬರಹ ಲೋಕದಲ್ಲಿ ತನ್ನದೇ ಆದಂತಹ ಛಾಪನ್ನು ಮೂಡಿಸಿದವರು. ಕೆಲಸ ಕಾರ್ಯಗಳಲ್ಲಿ ಸಲುಗೆಯನ್ನು ನೀಡುತ ಯಾವುದರಲ್ಲೂ ಮಲಿನತೆಯನ್ನು ತೋರದೆ ಮನವನ್ನು ಶುದ್ಧವಾಗಿಟ್ಟುಕೊಂಡವರು. ಕಲಿಕೆಯನ್ನು ಕಲಿಯದವರಿಗೆ, ಕಲಿಸುತ ಆಗದು ಎಂದು ಹೇಳಬಾರದು ಕೆಲಸ ಆಗುವುದು ಎಂದು ಮಾಡುತ್ತಿರಬೇಕು ಎಂದು ತಿಳಿಸಿದವರು.
 ಇಂತಹ ಬಹುಮುಖ ಪ್ರತಿಭೆಯ ಗೊರೂರು ಅನಂತರಾಜು ರವರ ಕಲೆ..ಸೆಲೆ ಕೃತಿಯ ಬಗ್ಗೆ ಬರೆಯುವುದು ನನಗೆ ಸಂತಸದ ವಿಚಾರವಾಗಿದೆ
 ರಂಗಭೂಮಿ ಮಾತ್ರವಲ್ಲದೆ ಸಾಹಿತ್ಯ, ಕಲೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ದಿನನಿತ್ಯದಲ್ಲಿ ಸಕ್ರಿಯವಾಗಿ ಕಾರ್ಯಕ್ರಮಗಳಲ್ಲಿ, ಬರವಣಿಗೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಸಾಗುತ್ತಿರುವುದು ನಮಗೆಲ್ಲ ಪ್ರೇರಣೆಯ ವಿಚಾರ.
 ಲೆಕ್ಕವಿಲ್ಲದಷ್ಟು ಸನ್ಮಾನ ಪ್ರಶಸ್ತಿಗಳನ್ನು ಪಡೆದು ಯಾವುದೇ ಜಂಬವಿಲ್ಲದೆ ನಮ್ಮಂತ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವುದರಲ್ಲಿ ಮೊದಲಿಗರು 
   ಇವರ ಕೃತಿ "ಕಲೆ..ಸೆಲೆ" ಯಲ್ಲಿ 
   ರಂಗಭೂಮಿಯ ಕ್ರಿಯಶೀಲ ವ್ಯಕ್ತಿತ್ವ ಗೊರೂರು ಅನಂತರಾಜು ಇದು 
 ಕೃತಿಕಾರರ ಪರಿಚಯ ಬರಹ. ಕೃತಿಯ 40 ಲೇಖನಗಳಲ್ಲಿ ನಾಟಕ, ಚಿತ್ರಕಲೆ, ನೃತ್ಯ ಸಂಗೀತ ಸಾಧಕರ ಪರಿಚಯ ಲೇಖನಗಳು ಕಲೆಯ ಸೆಳತಕ್ಕೆ ಒಳಗಾಗಿ ಆ ಪ್ರಕಾರದಲ್ಲಿ ತಮ್ಮ ಕಲಾ ಕೌಶಲ್ಯತೆ ತೋರಿ ಗುರುತಿಸಿಕೊಂಡವರದು. ಇಲ್ಲಿ ಇತ್ತೀಚೆಗೆ ಹಾಸನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಕಲಾವಿದ ಮಹನೀಯರು ಒಳಗೊಂಡಿದ್ದಾರೆ.
ಪ್ರದರ್ಶಿತ ನಾಟಕಗಳನ್ನು ವೀಕ್ಷಿಸಿ ಬರೆದ
ವಿಮರ್ಶೆ ಲೇಖನಗಳು, ನಟರು, ಚಿತ್ರ ಕಲಾವಿದರು, ಗಾಯಕರು ಉತ್ತಮ ಚಲನಚಿತ್ರಗಳು ಮತ್ತು ನೃತ್ಯ ಹೀಗೆ ಹಲವಾರು ಸಾಮಾಜಿಕ,ಸಾಂಸ್ಕೃತಿಕ ವಿಚಾರಗಳನ್ನು ಒಳಗೊಂಡ' ಕಲಾ ವೈವಿಧ್ಯತೆಯ ಕೃತಿ ಇದು.

 ಮೊದಲನೇ ನಾಟಕ ವಿಮರ್ಶೆ ಇತಿಹಾಸದ ಮೇಲೆ ಬೆಳಕು ಚೆಲ್ಲುವ ವಾರಸುದಾರ ಮತ್ತು ಚಾವುಂಡರಾಯ ನಾಟಕಗಳು ಹಾಸನದ ಹಾಸನಾಂಬ ಕಲಾಕ್ಷೇತ್ರದಲ್ಲಿ ಪ್ರದರ್ಶಿತವಾಗಿವೆ. ಲೇಖಕರು ಈ ನಾಟಕಗಳನ್ನು ನೋಡಿ ಬರೆದಿದ್ದು ಪೂರ್ಣ ಮಾಹಿತಿ ಒಳಗೊಂಡ ಈ ಲೇಖನ ಉತ್ತಮ ಪ್ರಯೋಗ.
 'ಶಿಶುನಾಳ ಷರೀಫರ ಜೀವನ ಗಾಥೆ'  
 ಎರಡು ನಾಟಕಗಳ ಪ್ರದರ್ಶನ ಸುಲಲಿತವಾಗಿ ಓದುಗರ ಮನ ಮುಟ್ಟುವಂತೆ ವಿಚಾರಗಳನ್ನು ವ್ಯಕ್ತಪಡಿಸುವ ಕಲೆಯು ಸರಳತೆಯಿಂದ ಕೂಡಿ ಅರ್ಥಪೂರ್ಣವಾಗಿದೆ. ಹಾಸನದ ಪ್ಯಾರಾ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ಮಂಜುನಾಥ ಬೆಳಕೆರೆ ರಚಿತ ಶರೀಫ ನಾಟಕ ಪ್ರದರ್ಶಿಸಿದರು. ಇಲ್ಲಿ ನಾಟಕದ ವಿಚಾರ ಸಾರವತ್ತಾಗಿ ತಿಳಿಸಿದ್ದಾರೆ.
 ನಂತರದ ಐತಿಹಾಸಿಕ ವಿಗಡ ವಿಕ್ರಮರಾಯ ರಂಜಿಸಿದ ಸುಣ್ಣದ ಸುತ್ತ ನಾಟಕಗಳಲ್ಲಿ ಐತಿಹಾಸಿಕ ಹಿನ್ನೋಟ ವಿಭಿನ್ನ ಪ್ರಯೋಗ ಬಹಳ ಸೊಗಸಾಗಿ ಅಲ್ಲಿಯೇ ಕುಳಿತಿದ್ದೇವೆನೋ ಎಂಬಂತೆ ಭಾಸವಾಗಿ ವಿಚಾರ ವಿಷಯ ಮನದಟ್ಟಾಗುತ್ತವೆ. ಕೇರಿ ಹಾಡು ನಾಟಕ ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ಹಾಸನ ಹೇಮಾವತಿ ನಗರದ ಎಲೈಟ್ ಶಾಲೆಯ ರಂಗಮಂದಿರದಲ್ಲಿ ಚನ್ನರಾಯಪಟ್ಟಣ ತಾ. ದಿಂಡಗೂರಿನ ಮಾತೆ ಸಾವಿತ್ರಿ ಪುಲೆ ಸ್ತ್ರೀಶಕ್ತಿ ಮಹಿಳಾ ಸ್ವಸಹಾಯ ಸಂಘದ ಕಲಾವಿದರು ಕೆ ಚಂದ್ರಶೇಖರ್ ರಚನೆ ನಿರ್ದೇಶನದಲ್ಲಿ ಪ್ರದರ್ಶಿಸಿ ಸರಳ ರಂಗ ಸಜ್ಜಿಕೆಯಲ್ಲಿ ಗ್ರಾಮ್ಯ ಬದುಕಿನ ನೈಜ ಚಿತ್ರಣ ಅನಾವರಣಗೊ೦ಡಿದೆ. ಹೀಗೆಯೇ ನಾಟಕಗಳು ರಂಗಭೂಮಿಯ ಮೇಲೆ ಯಾವ ರೀತಿ ವೈಭವಿಕರಿಸಿವೆ ಎಂಬುದನ್ನು ಪ್ರದರ್ಶನ ವಿವರಣೆಯಲ್ಲಿ ಕಾಣಬಹುದಾಗಿದೆ. ಮಹಾಭಾರತ ಪದ್ಮವ್ಯೂಹ ನಾಟಕ ರಂಗಾಯಣ ನಾಟಕ ವಿ ದ ಪೀಪಲ್ ಆಫ್ ಇಂಡಿಯಾ, ದಕ್ಷ ಕಥಾ ದೇವಿ ಕಾವ್ಯ, ಬಾಡಿದ ಬದುಕು ನಾಟಕ ಮತ್ತು ನಾಟಕಕಾರ ಗ್ಯಾರಂಟಿ ರಾಮಣ್ಣರ ಪರಿಚಯ ಪ್ರಚಂಡ ರಾವಣ ನಾಟಕ ಮತ್ತು ಪಾತ್ರಧಾರಿ ಜಗದೀಶ್ ರಾಮಘಟ್ಟ ಪರಿಚಯ, ಪೌರಾಣಿಕ ನಾಟಕಗಳು ರಂಗಗೀತೆಗಳೇ ರ್ಮೆಲುಗೈ! ಆನಂತರದಲ್ಲಿ ದಿಬ್ಬೂರು ರಮೇಶ್ ಅವರ ಇವನಾರವ ನಾಟಕ ವಿಮರ್ಶೆ, ಅಶೋಕನ ಯುದ್ಧ ಮಾತಿನಲ್ಲಿ ಗೆದ್ದ ಬಾಲೆ, ದೇವಿ ಮಹಾತ್ಮೆ ನಾಟಕ ಗೋವಿಂದಗೌಡರು, ಹಾಡು ನಾಟಕ ಎರಡಕ್ಕೂ ಸೈ ರಾಣಿ ಚರಾಶ್ರೀ.. ಹೀಗೆ ನಾಟಕ ಮತ್ತು ಕಲಾವಿದರ ವ್ಯಕ್ತಿ ಪರಿಚಯಗಳನ್ನು ನಾಟಕಗಳ ಜೊತೆಗೆ ಕಾಣಬಹುದಾಗಿದೆ. ಆನಂತರದಲ್ಲಿ ಕೆಲವು ಪ್ರಶಸ್ತಿ ವಿಜೇತ ಚಲನಚಿತ್ರಗಳ ಬಗ್ಗೆಯೂ ಸೊಗಸಾಗಿ ವಿಚಾರಗಳು ಓದುಗರ ಕಣ್ಮುಂದೆ ಬರುವಂತೆ ಬರೆದಿದ್ದಾರೆ. ನಾ ನೋಡಿದ ಶ್ರೀಮಂತ ಚಲನಚಿತ್ರ, ಬ್ರಹ್ಮ ಕಮಲ ಚಲನಚಿತ್ರ, ಪ್ರಮುಖವಾಗಿ ವಿಶ್ಲೇಷಿಸಲ್ಪಟ್ಟಿವೆ. ಅಭಿಜ್ಞಾ ಸ್ಕೂಲ್ ಆಫ್ ಡ್ಯಾನ್ಸ್ ಮಕ್ಕಳ ನೃತ್ಯ ಪ್ರದರ್ಶನ, ನಾಟ್ಯ ಪ್ರತಿಭೆ ಸುಬ್ರತಾ ಪಿ. ಚನ್ನರಾಯಪಟ್ಟಣ, ಬಾಲ ಪ್ರತಿಭೆ ಶೃಜನ್ಯ ಜೆ. ಕೋಟ್ಯಾನ್, ಭರತನಾಟ್ಯ ಪ್ರವೀಣೆ ಯೋಗಿತಾ ಪಿ ಪಾಟೀಲ್ ಇವು ನೃತ್ಯ ಪ್ರಕಾರದವು. ತತ್ವಪದ ಗಾಯಕರು ಜೆ.ಪಿ. ಶಿವನಂಜೇಗೌಡರು, ತತ್ವಪದ ಗಾಯಕ ಯೋಗೇಂದ್ರ ದುದ್ದ ಇವರು ಜನಪದ ಗಾಯಕರು ಮತ್ತು ಸಾಧಕರು ಭಾವಚಿತ್ರ ರಚನೆಯ ಬಾಬುರಾವ್ ನಡೋಣಿ ನಾಡಿನ ಅದ್ಭುತ ಚಿತ್ರ ಕಲಾವಿದರು. ಚಿತ್ರ ಕಲಾವಿದೆಯರು ಪ್ರೀತಿ ಹೆಚ್ ಪಿ , ಚಂದ್ರಪ್ರಭಾ, ಮಂಜುಳ,ವಿಮಲ ಎಸ್.ಕೆ. ನೇಚರ್ ಆರ್ಟಿಸ್ಟ್ ಮುರಳಿ ಎಸ್ ಕೆ ಭರವಸೆಯ ಚಿತ್ರಕಲಾವಿದ ಬಿ ಎಸ್ ನಂದನ ಭರವಸೆಯ ಯುವ ಪ್ರತಿಭೆಗಳು. ಜಾನಪದ ಕಲಾವಿದ ಶಿವಣ್ಣ ಬಿರಾದಾರ, ಕೊಳಲು ವಾದನ ಆರ್ ಬಿ ಪುಟ್ಟೇಗೌಡರು, ಗಮಕಿ ಸಿ.ಪಿ. ವಿದ್ಯಾಶಂಕರ, ಜನಪದ ಗಾಯಕ ಕುಮಾರ್ ಕಟ್ಟೆ ಬೆಳಗುಳಿ, ಇವರು ತಮ್ಮ ತಮ್ಮ ಕಲಾಕ್ಷೇತ್ರದ ಸಾಧಕರೇ ಸೈ. ಅಬ್ಬಾ! ಅದು ಅದ್ಭುತ ಗಾಲಿ ನೃತ್ಯ ಲೇಖನ ನಿಜಕ್ಕೂ ಅದ್ಭುತವೇ! ರಂಗ ನಿರ್ದೇಶಕ ಗಾಡೇನಹಳ್ಳಿ ವೀರಭದ್ರಾಚಾರ್, ಕಲಾ ಚಟುವಟಿಕೆಯ ಪ್ರತಿಮಾ ಟ್ರಸ್ಟ್ ಉಮೇಶ್ ತೆಂಕನಹಳ್ಳಿ, ಸಾಹಿತ್ಯ ಪರಿಚರಿಕೆ ಕನ್ನಡ ಸೇವೆ ಸಿಸಿರಾ ಇವು
ಕಲೆ ಸಂಸ್ಕೃತಿ ಉಳಿಸಬಲ್ಲವು.
 ಕಲಾ ಸಾಧಕರ ಬಗ್ಗೆ, ನಾಟಕಗಳ ಬಗ್ಗೆ, ಸಾಂಸ್ಕೃತಿಕ ಚಟುವಟಿಕೆಗಳ ಬಗ್ಗೆ, ಎಲೆ ಮರೆಕಾಯಿಯಾಗಿ ಉಳಿದ ಕಲಾವಿದರ ವಿಚಾರಗಳನ್ನು ಒಳಗೊಂಡ ಕೃತಿ ಕಲೆ ಸೆಲೆ ಕಲಾವಿದರನ್ನು ಬೆಳಕಿಗೆ ತರುವಲ್ಲಿ ಸಾಫಲ್ಯ ಸಾಧಿಸಿದೆ.
ಹೆಚ್.ಎಸ್.ಪ್ರತಿಮಾ ಹಾಸನ್.

ಕಹಿ ನೆನಪು ಮರೆಯೋಣ...

""ಕಹಿ ನೆನಪು ಮರೆಯೋಣ""

 ಎದೆಯ ಹೊಲದಿ ಬೆಳೆದ ಕಳೆಯ ಕೀಳೋಣ
 ಮನದ ಬಯಲನು ಹರವಿ ಹಸನುಗೊಳಿಸೋಣ 

ಪ್ರೀತಿ ಸ್ನೇಹ ವಿಶ್ವಾಸದ ಬೀಜ ಬಿತ್ತೋಣ
 ಮಮತೆ ವಾತ್ಸಲ್ಯದ ಹನಿಯ ಸಿಂಪಡಿಸೋಣ

 ಹೃದಯ ತೋಟದಿ ಪ್ರೀತಿ ಸುಮವರಳಿಸೋಣ
 ಮಧುರ ಬಾಂಧವ್ಯದ ಸೌಗಂಧ ಪಸರಿಸೋಣ 

ಬಾಳಲಿ ಬಂದೆರಗಿದ ಕಹಿ ನೆನಪ ಮರೆಯೋಣ
 ಎಲ್ಲರೊಳಗೊಂದಾಗಿ ಸಂತಸದಿ ಮೆರೆಯೋಣ

ತೇಲಿತೇಲಿ ಬರುವ ತಂಗಾಳಿಗೆ ಕಿವಿಯಾಗೋಣ
 ಹೊಸ ನಾಳಿನ ಮೂಡಣಕೆ ಮನವ ತೆರೆಯೋಣ 

ಕಹಿನೆನಪು ಮರೆತು ಸಿಹಿ ಘಳಿಗೆಯ ಸ್ವಾಗತಿಸೋಣ
 ಬಾಳ ಹಾದಿಯಲ್ಲಿ ಮಾಸದ ಹೆಜ್ಜೆ ಗುರುತು ಉಳಿಸೋಣ

 ನಾಲ್ಕು ದಿನದ ಪಯಣದಿ ನಗುನಗುತ ಸಾಗೋಣ
 ದೇವನಿತ್ತ ಬದುಕಲಿ ಹಮ್ಮುಬಿಮ್ಮು ತೊರೆಯೋಣ

 ಕಹಿನೆನಪ ನೆನೆನೆನೆದು ಮನವ ರಾಡಿಯಾಗಿಸದಿರೋಣ
 ಸಿಹಿನಾಳೆಗಳಿಗೆ ಶುಭ ಕೋರುತ್ತಾ ಮನಕೆ ತೋರಣ ಕಟ್ಟೋಣ 

 ಮಧುಮಾಲತಿ ರುದ್ರೇಶ್ ಬೇಲೂರು 

ಬುಧವಾರ, ಫೆಬ್ರವರಿ 19, 2025

ಮುನಿಸೇತಕೆ ಮನವೇ ...

ಮುನಿಸೇತಕೆ ಮನವೇ..


ಬಾಳ ಪಯಣದಲಿ ಜಗಳವು ಉಚಿತವೆ
ಸಾಗೋಣ ಹೊಂದಿಕೊಂಡು ಪ್ರೀತಿ ಖಚಿತವು

ಮುನಿದು ಕೂತರೆ ಹೇಗೆ ಅಷ್ಟು ದೂರ
ಮತ್ತಷ್ಟು ಆಗುವುದು ಮನವು ಭಾರ

ತಪ್ಪುಗಳಾಗಿವೆ ತಿದ್ದೋಣ ತಿಳಿಯಾಗಿ
ತಿಳಿನೀರ ಕೊಳದಲ್ಲಿ ಹಂಸಗಳಂತೆ 

ಮುನಿದು ಮಾತು ಮೌನವಾದ ಮೇಲೆ
ಅನಿಸುತ್ತಿದೆ ಎಲ್ಲವೂ ಖಾಲಿ ಭೂಮಿ ಮೇಲೆ

ಮಡದಿ ಮಾಡಿಕೊಳ್ಳೊಣ ಹೊಂದಾಣಿಕೆ
ಸಮಾಜ ಹಾಕದಂಗೆ ನಮ್ಮಗಳಿಗೆ ಕುಣಿಕೆ

ಪ್ರತಿಕ್ಷಣವೂ ನೀನು ಜೊತೆಗಿದ್ದರೆ ಸಾಕು
ಮಧುವ ತುಂಬಿದಂತಿಹುದು ನಮ್ಮಿ ಬದುಕು
ಶಿವಾ ಮದಭಾoವಿ
ಗೋಕಾಕ

ಕಲಿಕಾ ಹಬ್ಬ...

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಿರೇಮಳಗಾವಿಯಲ್ಲಿ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ 

ಹುನಗುಂದ: ತಾಲೂಕಿನ ಹಿರೇಮಳಗಾವಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಎಫ್ಎಲ್ಎನ್ ಮಕ್ಕಳ ಕಲಿಕಾ ಹಬ್ಬ ನಡೆಯಿತು.  
ಕ್ಲಸ್ಟರಿನ ಹನ್ನೊಂದು ಶಾಲೆಗಳಿಂದ ಆಗಮಿಸಿದ 100ಕ್ಕೂ ಹೆಚ್ಚು ಚಿಣ್ಣರು ತಮ್ಮ ಪ್ರತಿಭೆ ಪ್ರದರ್ಶಿಸಿದರು.

ಬೆಳಿಗ್ಗೆ 10-30 ಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಲಕ್ಷ್ಮಿಬಾಯಿ ಪಕೀರಗೌಡ ಪಾಟೀಲ್ ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹಾಗೂ ಮಾನ್ಯ ಶ್ರೀಮತಿ ಜಾಸ್ಮಿನ್ ಕಿಲ್ಲೆದಾರ್ ಕ್ಷೇತ್ರ ಶಿಕ್ಷಣಾಧಿಕಾರಿಗಳು ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟನೆಗೊಳಿಸಿದರು. ಈ ಸಂದರ್ಭದಲ್ಲಿ ಎಫ್ ಎಲ್ ಎನ್ ಎಂದರೆ ಫಂಡಮೆಂಟಲ್ ಲಿಟರಸಿ ಅಂಡ್ ನ್ಯೂಮರಸಿ ಎಂಬುದು ಮಗುವಿನ ಕನಿಷ್ಠ ಕಲಿಕೆಯ ಮಾನದಂಡಗಳಾದ ಸ್ಪಷ್ಟ ಓದು ಶುದ್ಧ ಬರಹ ಸರಳ ಲೆಕ್ಕಾಚಾರ ಸಾಮರ್ಥ್ಯವಾಗಿದೆ. ಯಾವ ಮಕ್ಕಳು ಸಾಮಾನ್ಯ ಕಲಿಕೆಯಲ್ಲಿ ಈ ಸಾಮರ್ಥ್ಯಗಳನ್ನು ಸಾಧಿಸಿಲ್ಲವೋ ಅಂತಹ ಮಕ್ಕಳನ್ನು ಗುರುತಿಸಿ ಅವರಿಗೆ ಚಟುವಟಿಕೆಯಾಧಾರಿತ ವಿಶೇಷ ಬೋಧನೆಯ ಮೂಲಕ ಕಲಿಸುವ ಪ್ರಕ್ರಿಯೆಯಾಗಿದೆ. ವರ್ಷದ ಉದ್ದಕ್ಕೂ ನಡೆದ ಈ ಪ್ರಕ್ರಿಯೆ ಈಗ ಅಂತ್ಯಗೊಂಡಿದ್ದು ಆ ಮಕ್ಕಳು ಸಾಮಾನ್ಯ ಮಕ್ಕಳೊಂದಿಗೆ ಕಲಿಯುವಂತವರಾಗಿದ್ದು ಅಂಥವರಿಗೆ ವಿಶೇಷ ಸ್ಪರ್ಧೆಗಳನ್ನು ನಡೆಸಿ ಪ್ರೋತ್ಸಾಹಿಸುವ ಕಾರ್ಯಕ್ರಮವೇ ಎಫ್ಎಲ್ಎನ್ ಮಕ್ಕಳ ಕಲಿಕಾ ಹಬ್ಬವಾಗಿದೆ ಎಂದರು.

 ಕಾರ್ಯಕ್ರಮವನ್ನು ಉದ್ದೇಶಿಸಿ ಶ್ರೀ ಸದಾಶಿವ ಎಸ್ ಗುಡಗುಂಟಿ BRC ಅವರು ಪ್ರಾಸ್ತಾವಿಕವಾಗಿ ತಾವು ನಿಧಾನ ಗತಿಯ ಕಲಿಕೆಯ ಮಕ್ಕಳು ಎಂಬ ಕೀಳರಿಮೆಯಲ್ಲಿದ್ದ ಮಕ್ಕಳಲ್ಲಿ ವಿಶೇಷ ಚಟುವಟಿಕೆಗಳ ಮೂಲಕ ಎಲ್ಲ ಸಾಮರ್ಥ್ಯಗಳನ್ನು ಸಾಧಿಸುವಲ್ಲಿ ನಾವು ಸಹ ಮುಂದಿದ್ದೇವೆ ಎಂಬ ಭಾವನೆಯನ್ನು ಹುಟ್ಟು ಹಾಕಿ ಸ್ವಯಂ ಪ್ರೇರಣೆಯಿಂದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸುವ ಅವಕಾಶ ಹಾಗೂ ಮಕ್ಕಳ ಹಬ್ಬದ ಸಂಭ್ರಮವನ್ನು ಹೆಚ್ಚಿಸಿದ ಕೀರ್ತಿ ಎಲ್ಲಾ ಶಾಲೆಗಳ ಗುರುವೃಂದಕ್ಕೆ ಸಲ್ಲುತ್ತದೆ ಎಂದರು.

ಗಟ್ಟಿ ಓದು, ಕೈಬರೆಹ, ಮೆಮೊರಿ ಪರೀಕ್ಷೆ, ರಸಪ್ರಶ್ನೆಯಂತಹ ಏಳು ಚಟುವಟಿಕೆಗಳಲ್ಲಿ ಮಕ್ಕಳು ಭಾಗವಹಿಸಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನವನ್ನು ಪಡೆದುಕೊಂಡರು. ಇಪ್ಪತ್ತಕ್ಕೂ ಹೆಚ್ಚು ಸಂಪನ್ಮೂಲ ಶಿಕ್ಷಕರು ಎಲ್ಲ ಸ್ಪರ್ಧೆಗಳನ್ನು ನಡೆಸಿಕೊಟ್ಟರು. ಕಲಿಕಾ ಹಬ್ಬದಲ್ಲಿ ಆಕರ್ಷಣೀಯವಾಗಿ ಎತ್ತಿನ ಬಂಡಿಯ ಅಲಂಕಾರ ಹಾಗೂ ವಿಶೇಷವಾಗಿ ಅತಿಥಿಗಳನ್ನು ಕುಂಭಮೇಳದೊಂದಿಗೆ ಸ್ವಾಗತಿಸಿದ್ದು ಮತ್ತು ಅಕ್ಷರ ಮರ ಆಕರ್ಷಣೀಯವಾಗಿದ್ದವು.

ಬಹುಮಾನ ವಿತರಣೆ ಹಾಗೂ ಸಮಾರೋಪ: ಕೂಡಲಸಂಗಮ ಕ್ಲಸ್ಟರ್ನ ಸಂಪನ್ಮೂಲ ವ್ಯಕ್ತಿಗಳಾಗಿರುವ ಶ್ರೀ ಗೋವಿಂದಗೌಡ ಎಚ್ ಗೌಡರ ಇವರ ನೇತೃತ್ವದಲ್ಲಿ ಬಹುಮಾನ ವಿತರಣೆ ಹಾಗೂ ಸಮಾರೋಪ ಸಮಾರಂಭ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಎಸ್ ಎಸ್ ಎಲ್ ಸಿ ಹಂತದಲ್ಲಿ ಮಕ್ಕಳು ಅಮೋಘ ಸಾಧನೆ ಮಾಡಲು ಪ್ರಾಥಮಿಕ ಶಿಕ್ಷಣ ಅವರಿಗೆ ಭದ್ರ ಬುನಾದಿ ಆಗಬೇಕು. ಆ ನಿಟ್ಟಿನಲ್ಲಿ ಮಕ್ಕಳಲ್ಲಿ ಕಲಿಕಾ ಶಕ್ತಿ ಉಂಟುಮಾಡುವಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಪಾತ್ರ ದೊಡ್ಡದಾಗಿದೆ. ಕೋವಿಡ್ಡೋತ್ತರ ಕಾಲದಿಂದ ಮಕ್ಕಳ ಕಲಿಕೆಯಲ್ಲಿ ಗಣನೀಯ ಪ್ರಮಾಣದಲ್ಲಿ ಹಿನ್ನಡೆಯಾಗಿದ್ದು ಸರಕಾರ ಎಲ್ಲಾ ಸೌಲಭ್ಯಗಳನ್ನು ನೀಡಿದರೂ ನಿಗದಿತ ಕಲಿಕಾ ಸಾಧನೆ ಮಾಡುವಲ್ಲಿ ವಿಫಲತೆ ಕಾಣುತ್ತಿದ್ದು, ಮಕ್ಕಳ ಹೆಸರು ಮಕ್ಕಳ ವಿಕಾಸಕ್ಕೆ ನಾವೆಲ್ಲರೂ ಕಂಕಣ ಬದ್ಧರಾಗಿ ದುಡಿಯಬೇಕಾಗಿದೆ ಎಂದರು. 

ಈ ಸಂದರ್ಭದಲ್ಲಿ ಶ್ರೀ ಸಂಗಮೇಶ ಪಾಟೀಲ್, ಶ್ರೀಮತಿ ಬಿ.ಬಿ ದೇವದುರ್ಗ, ಶ್ರೀ ರಮೇಶ ಕುಳಗೇರಿ ಶ್ರೀಮತಿ ವಿಜಯಲಕ್ಷ್ಮಿ ನಾಗಲೋಟಿಮಠ, ಶ್ರೀ ಸಿದ್ದು ಶೀಲವಂತರ, ಶ್ರೀ ಸಂಗಮೇಶ ಹೊಲದುರು, ಶ್ರೀ ಎಂ ಎನ್ ಗೌಡರ, ಶ್ರೀ ಜಿ ವೈ ಆಲೂರ, ಶ್ರೀ ಫಕೀರಗೌಡ ಪಾಟೀಲ, ಶ್ರೀ ಡಿ.ಬಿ ಹರದೊಳ್ಳಿ, ಶ್ರೀ ಸಂಗಣ್ಣ ಭದ್ರಶೆಟ್ಟಿ, ಶ್ರೀ ಮಹಾಂತೇಶ ಮೇಟಿ, ಶ್ರೀ ಅಪ್ಪಣ್ಣಿ ಕುಂದರಗಿ, ಶ್ರೀ ಸಂಗನಬಸಪ್ಪ ಬದ್ರಶೆಟ್ಟಿ, ಶ್ರೀ ಸಂಗಣ್ಣ ಕನಕಣ್ಣವರ, ಶ್ರೀ ನಿಂಗಪ್ಪ ಹಡಪದ, ಶ್ರೀ ನೀಲಪ್ಪ ಡೋಣಿ, ಶ್ರೀ ಗ್ಯಾನಪ್ಪ ಮೇಟಿ, ಶ್ರೀ ಹೆಚ್ ಬಿ.ಮಾದರ ಶಿಕ್ಷಕರು ಹಾಗೂ ಶ್ರೀಮತಿ ವಿದ್ಯಾಕನಕನ್ನವರ ಮತ್ತು ಕೂಡಲಸಂಗಮ ಕ್ಲಸ್ಟರ್ನ ಎಲ್ಲಾ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಸಹ ಶಿಕ್ಷಕರು ಭಾಗವಹಿಸಿದ್ದರು.
 ಕಾರ್ಯಕ್ರಮದ ಪ್ರಾರ್ಥನೆ ಹಾಗೂ ಸ್ವಾಗತಿ ಗೀತೆಯನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಿರೇಮಳಗಾವಿಯ ವಿದ್ಯಾರ್ಥಿನಿಯರು ನಡೆಸಿಕೊಟ್ಟರು ಅತಿಥಿ ಮಹನೀಯರನ್ನು ಶ್ರೀ ಬಿ ಎಂ ಅಂಗಡಿ ಗುರುಗಳು ಸ್ವಾಗತಿಸಿದರು ಶ್ರೀ ಮುತ್ತು ಯ.ವಡ್ಡರ ಇವರು ಕಾರ್ಯಕ್ರಮ ನಿರೂಪಿಸಿದರು ಹಾಗೂ ಶ್ರೀ ಎಂ ಹೆಚ್ ಪೂಜಾರಿ ಗುರುಗಳು ವಂದಿಸಿದರು.

ಲೇಖನ

ಲೇಖನ

ಹೃದಯದ ಕವಿತೆ ಹೃದಯ ಮಿಡಿವ ಕವಿತೆ

     ಬದುಕಿನುದ್ದಕ್ಕೂ ಹಲವಾರು ಘಟ್ಟಗಳನ್ನು ದಾಟಿ ಬರುವ ಮನುಷ್ಯ ವ್ಯಕ್ತಿಗತವಾಗಿ ತನ್ನದೇ ಆದ ವೈವಿಧ್ಯಮಯ ಅನುಭವಗಳನ್ನು ಹೊಂದುತ್ತಾನೆ. ಗಳಿಸಿ ಉಳಿಸುತ್ತಾ ತಿಳಿದು ಕಲಿಯುತ್ತಾ ಸಿಹಿ, ಕಹಿ ಅನುಭವಗಳನ್ನು ಹೊಂದುತ್ತಾ ವಯಸ್ಸು ಇಳಿಮುಖವಾದಂತೆ ಸಾಗಿ ಬಂದ ಹಾದಿಯನ್ನು ಮತ್ತೊಮ್ಮೆ ತಿರುಗಿ ನೋಡಿದರೆ ಅಲ್ಲೊಂದು ಅಗಾಧ ಪ್ರಪಂಚವೇ ತೆರೆದುಕೊಳ್ಳುತ್ತದೆ.
       ನಮ್ಮ ಹಿರಿಯ ಸಾಹಿತಿಗಳಾದ ಗೊರೂರು ಅನಂತರಾಜು ಅವರು ಇತ್ತೀಚೆಗಷ್ಟೇ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮ ಛಾಪು ಮೂಡಿಸುತ್ತಿರುವ ಹಿರಿಯ ಜೀವ ಸಾವಿತ್ರಿ ಬಿ. ಗೌಡ ಅವರ ಕೃತಿಯನ್ನು ತಮ್ಮದೇ ದೃಷ್ಟಿಕೋನದಿಂದ ವಿಮರ್ಶಾತ್ಮಕವಾಗಿ ಪರಿಚಯಿಸುತ್ತಾರೆ. ಸಾವಿತ್ರಿ ಬಿ.ಗೌಡ ಅವರು ತಮ್ಮ ಹರೆಯದಲ್ಲೇ ಹಾಸನ ನಗರವನ್ನು ಕಂಡವರು. ಈಗ ಇಳಿವಯಸ್ಸಿನಲ್ಲಿರುವ ಅವರಿಗೆ ಅಂದಿಗೂ ಇಂದಿಗೂ ಕಾಣುವ ಅಗಾಧವಾದ ಬದಲಾವಣೆಯನ್ನು, ಲೇಖನ ರೂಪದಲ್ಲಿ ಬರೆದು ಪ್ರಕಟಿಸಿ ಬಂದ ನೂರಾರು ಪ್ರತಿಕ್ರಿಯೆಗಳಿಂದ ಪುಳಕಿತಗೊಳ್ಳುತ್ತಾರೆ. ಅಲ್ಲದೆ ಅವರ ಸಾಹಿತ್ಯಕ್ಕೆ ತನ್ಮೂಲಕ ಅಗಾಧ ಪ್ರೇರಣೆಯನ್ನು ನೀಡುವ ಆ ಲೇಖನ ಮುಂದೆ ಹಲವಾರು ಸಾಹಿತ್ಯದ ಪ್ರಕಾರಗಳ ಮೂಲಕ ತಮ್ಮ ಅನುಭವಗಳನ್ನು ವ್ಯಕ್ತಪಡಿಸಲು ಹಾದಿಯೇ ತೆರೆದುಕೊಂಡಂತಾಗುತ್ತದೆ. ಹಾಗೆಯೇ ತಾವು ಬರೆದ ಕವಿತೆಗಳನ್ನು ಮನೆ ಮನೆ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ವಾಚಿಸುವುದರ ಮೂಲಕ ಎಲ್ಲರಿಗೂ ಚಿರಪರಿಚಿತರಾಗಿ ಪುಸ್ತಕ ಪ್ರಕಟಿಸಿ ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಆದ ಒಂದು ಕೊಡುಗೆಯನ್ನು ನೀಡಿರುತ್ತಾರೆ. ಇಂತಹ ಹಿರಿಯ ಲೇಖಕಿಯವರ ಬಗ್ಗೆ ಬರೆಯುತ್ತಾ ಗೊರೂರು ಅನಂತರಾಜು ಅವರು ತಮ್ಮ ಜೀವನದ ಕೆಲವೊಂದು ಘಟನೆಗಳನ್ನು ಇಲ್ಲಿ ನೆನಪಿಸಿಕೊಳ್ಳುತ್ತಾರೆ. 
      ತಮ್ಮ ತಂದೆ ವ್ಯಾಪಾರದ ಜೊತೆ ಜೊತೆಗೆ ಭಾನುವಾರದ ಸಂತೆಗೆ ವ್ಯಾಪಾರಕ್ಕೆoದು ಬರುತ್ತಿದ್ದ ಹಲವಾರು ಮಂದಿಗೆ ತಮ್ಮ ಮನೆಯೇ ಒಂದು ಸುಂಕವಿಲ್ಲದ ತಂಗು ದಾಣವಾಗಿತ್ತೆಂದು ಹೇಳುತ್ತಾ. ತಮ್ಮ ತಾಯಿಯೂ ಕೂಡ ಮುತ್ತುಗದ ಎಲೆಗಳನ್ನು ಜೋಡಿಸಿ ಊಟದ ಎಲೆಗಳನ್ನಾಗಿ ಮಾಡಿ ಅದನ್ನು ಮಾರಿ ಬಂದ ಹಣದಿಂದ ತಮ್ಮ ಎಲೆ ಅಡಿಕೆ ಖರ್ಚನ್ನು ಭರಿಸುತ್ತಿದ್ದುದಲ್ಲದೇ ತಮ್ಮೊಡನೆ ಮಾತನಾಡಲು ಸ್ನೇಹಿತೆಯಾಗಿ ವ್ಯಾಪಾರಕ್ಕಾಗಿ ತಮ್ಮ ಮನೆಗೆ ಬಂದು ತಂಗುತಿದ್ದ ದೊಡ್ಡಕೊಂಡುಗೊಳ್ಳದಮ್ಮನೇ ಆತ್ಮೀಯ ಗೆಳತಿಯಾಗಿರುತಿದ್ದಳು ಎನ್ನುವುದರೊಂದಿಗೆ ಹಾಗೆ ಬರುವ ಹಲವಾರು ಮಂದಿಯೊಂದಿಗೆ ನಡೆಯುತ್ತಿದ್ದ ಚರ್ಚೆಗಳು ಸಂಭಾಷಣೆಗಳಿಂದಲೇ ಒಂದು ಮನೋರಂಜನೇಯ ವಾತಾವರಣ ಸೃಷ್ಟಿಯಾಗುತ್ತಿತ್ತು ಎನ್ನುವಾಗ ನಿಜಕ್ಕೂ ಅಂದಿನ ಕಾಲ ಅದೆಷ್ಟು ಆತ್ಮೀಯವಾದ ಬಂಧಗಳನ್ನು ಬೆಸೆಯುತ್ತಿತ್ತು ಎನ್ನುವುದನ್ನು ನಿರೂಪಿಸುತ್ತದೆ. ಹಾಗೆಯೇ ಸಾವಿತ್ರಿ ಬಿ ಗೌಡ ಅವರು ಕೂಡ ತಮ್ಮ ಪ್ರಾಯದ ದಿನಗಳಲ್ಲಿ ಹೊಲಿಗೆ, ಕಸೂತಿ, ಉಲ್ಲನ್ ಹೀಗೆ ಉತ್ತಮ ಹವ್ಯಾಸಗಳನ್ನು ಹೊಂದಿ ಅದರ ಮೂಲಕ ತಾನು ಒಬ್ಬ ಕಲೆಗಾರ್ತಿ ಎಂದು ನಿರೂಪಿಸಿದ್ದಲ್ಲದೆ ಈ ಮುಪ್ಪಿನಕಾಲದಲ್ಲೂ ಒಬ್ಬ ಕವಿಯತ್ರಿಯಾಗಿ ಸಾಹಿತಿಯಾಗಿ ತಮ್ಮ ಬದುಕನ್ನು ಸಮಾಜಕ್ಕೆ ಅರ್ಪಿಸಿ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮ ಮೊಹರನ್ನು ಒತ್ತಿರುವುದು ಶ್ಲಾಘನೀಯ ಹಾಗೂ ತಮಗೆ ವಯಸ್ಸಾಯ್ತು ಇನ್ನೇನೂ ಮಾಡಲು ಸಾಧ್ಯವಿಲ್ಲ ತಾವು ಅಶಕ್ತರು ಎನ್ನುವವರಿಗೆ ಅವರ ಜೀವನ ಸಂದೇಶ ನೀಡಿರುವುದು ಸತ್ಯ.. ಅಲ್ಲದೇ ನಾವೆಲ್ಲರೂ ಕಂಡಂತೆ ಅವರ ಇಳಿ ಪ್ರಾಯದ ದೇಹ ಸ್ಪಂದಿಸದೆ ಹೋದರೂ ಸಾಹಿತ್ಯಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು, ಸಾಹಿತ್ಯಾಸಕ್ತರೊಡನೆ ಬೆರೆಯಬೇಕು ಎನ್ನುವ ತೀವ್ರವಾದ ತುಡಿತ ಹರೆಯದವರನ್ನೂ ನಾಚಿಸುವಂಥದ್ದು.. ಹಾಗೆ ತಮ್ಮ ಮದುವೆಯಾದ ದಿನಗಳು ಗಂಡನ ಮನೆ, ಊರು ವಾತಾವರಣ, ಪತಿಯ ಸಾಂಗತ್ಯ ಪತಿಯವರು ತಮಗೆ ಹಾಗೂ ಇತರ ಹೆಣ್ಣು ಮಕ್ಕಳಿಗೆ ಕೊಡುತ್ತಿದ್ದ ಗೌರವ ಮರ್ಯಾದೆಗಳನ್ನು ನೆನೆಯುತ್ತಾ ಅವರು ತಮ್ಮನ್ನು ಅಗಲಿದ ನೋವು ಯಾತನೆಗಳ ದಿನಗಳಲ್ಲಿ ಕೊರೊನಾದ ಆತಂಕಕಾರಿ ಪರಿಸ್ಥಿತಿಯಲ್ಲಿಯೂ ಪರ್ಸ್, ಚೌಕಬಾರಾ, ಚೆಸ್ ನ ಹಾಸುಗಳನ್ನು ಹೊಲಿಯುತ್ತಾ ದಿನದೂಡಿದ ಸಂದರ್ಭವನ್ನು ನೆನೆದು ಇತ್ತೀಚೆಗೆ ಸಾಹಿತ್ಯದಲ್ಲಿ ತೊಡಗಿಕೊಂಡು ಅದರ ಮೂಲಕ ತಮ್ಮಲ್ಲಿ ಅಡಗಿದ್ದ ಇನ್ನೊಂದು ಪ್ರತಿಭೆಗೆ ವೇದಿಕೆ ಸಿಕ್ಕಂತಾಗಿದ್ದರೂ ತಮ್ಮ ಇಂದಿನ ಅಸಹಾಯಕ ಸ್ಥಿತಿ, ಇನ್ನೂ ಏನೋ ಸಾಧಿಸಬೇಕೆಂಬ ಹಂಬಲವಿದ್ದರೂ ಸಹಕರಿಸದ ವಯಸ್ಸು ಇಂತಹ ಹಲವಾರು ವಿಚಾರಗಳನ್ನು ಗೊರೂರು ಅನಂತರಾಜು ಅವರು ಮನಮುಟ್ಟುವಂತೆ ಈ ಲೇಖನದ ಮೂಲಕ ತಿಳಿಸುತ್ತಾರೆ.
ಮಾಲಾ ಚೆಲುವನಹಳ್ಳಿ 
ಬರಹಗಾರ್ತಿ
ಚೆಲುವನಹಳ್ಳಿ,
ಅರಸೀಕೆರೆ ತಾಲ್ಲೂಕು.

ಲೇಖನ...

ಲೇಖನ

ಭಾವನೆಗಳ ಜಗತ್ತಿನಲ್ಲಿ ಹೃದಯದ ಕವಿತೆ 
ಗೊರೂರು ಅನಂತರಾಜು, ಹಾಸನ. 

ನಾನು ಸಾಹಿತ್ಯ ಕ್ಷೇತ್ರಕ್ಕೆ ಬಂದು ಬರೆಯಲು ಪ್ರಾರಂಭಿಸಿದ್ದು ೨೦೨೦ರ ಕರೋನ ಸಮಯದಲ್ಲಿ. ಊರು ಹೋಗು ಕಾಡು ಬಾ ಎನ್ನುವ ವಯಸ್ಸಿನಲ್ಲಿ. ನನ್ನ ಹವ್ಯಾಸ ಬಟ್ಟೆ ಹೊಲಿಯುವುದು, ಕರಕುಶಲ ಕಲೆ, ಕೃತಕ ಆಭರಣಗಳ ತಯಾರಿಕೆ ಕ್ರೋಶಾವರ್ಕ್, ನಿಬ್ ಪೈಂಟಿಂಗ್, ಪರ್ಸ್ ವ್ಯಾನಿಟಿ ಬ್ಯಾಗ್ ತಯಾರಿಕೆ, ಸೀರೆ ಕುಚ್ಚು ಹಾಕುವುದು ಕಸೂತಿ ಇವುಗಳನ್ನು ಮನೆಯಲ್ಲಿಯೇ ಕಲಿಸಿ ತರಬೇತಿ ಕೊಡುತ್ತಿದ್ದೆ. ಕೊರೋನ ಮಾರಿಯಿಂದ ಸಂಪರ್ಕವಿಲ್ಲದೆ ಕೆಲಸಗಳಿಗೆ ಅಡೆ ತಡೆಯಾಗಿ ದುಡಿಮೆ ಇಲ್ಲದೆ ಮನೆಯಲ್ಲಿ ಕೂರುವಂತಾಗಿ ಸಾಲದಿದ್ದಕ್ಕೆ ಕರೋನ ಬರುವ ಒಂದು ತಿಂಗಳ ಮುಂಚೆ ೫-೨-೨೦೨೦ರಲ್ಲಿ ನನ್ನ ಪೂಜ್ಯ ಪತಿಯವರು ಕ್ಯಾನ್ಸರ್ ಕಾಯಿಲೆಯಿಂದ ತೀರಿಕೊಂಡರು. ಅದರ ನೋವು ಹೆಚ್ಚಿರುವಾಗ ಮಾರ್ಚ್ನಲ್ಲಿ ಕೊರೋನ ಬೇರೆ ಶುರುವಾಗಿ ಮನೆಯಲ್ಲಿಯೇ ಕೂತು ನೆಂಟರಿಷ್ಟರ ಮನೆಗಳ ಮಕ್ಕಳಿಗೆ ಆಡಲು ಚೌಕಾಬಾರೆ ಹಾಸುಗಳು ಸಾವಿರಗಟ್ಟಲೆ (೭ ಮನೆ ಮತ್ತು ೫ ಮನೆ) ಕವಡೆಗಳು, ಪಗಡೆ ಹಾಸುಗಳು, ಮಾಸ್ಕ್ಗಳನ್ನು ಬಟ್ಟೆಯಲ್ಲಿ ಹೊಲಿದು ಕಸೂತಿ ಮಾಡಿ ಉಚಿತವಾಗಿ ಹಂಚಿದ ಸಮಾಧಾನ ತೃಪ್ತಿಯಿದೆ. ಅಂದು ನಾನು ಬರೆದ ಮೊದಲ ಲೇಖನ ‘ಹಿಂಗಿತ್ತು ನಮ್ಮ ಹಳೇ ಹಾಸ್ನ’ ಇದು ನನ್ನ ಬಾಲ್ಯದ ಹಾಸನವನ್ನು ಬಳಸುತ್ತಿದ್ದ, ಅಂದಿನ ನಾಣ್ಯಗಳು ಪರಿಕರಗಳು ವಿಸ್ತಾರ ಸಂತೆ ಜಾತ್ರೆಗಳ ಬಗ್ಗೆ ಬರೆದ ೨೦ ಪುಟ ಲೇಖನ ಸ್ಥಳೀಯ ಪತ್ರಿಕೆಯಲ್ಲಿ ಪ್ರಕಟಗೊಂಡು ಅಭಿನಂದನೆ ಪ್ರೋತ್ಸಾಹಗಳ ಮಹಾಪೂರವೇ ಹರಿದುಬಂತು.. ಹೀಗೆ ಸಾವಿತ್ರಿ ಮೇಡಂ ಮೆಸೇಜ್ ಮಾಡಿದ್ದರು. 
ಮೇಡಂ ಪ್ರತಿ ತಿಂಗಳು ನಡೆಯುವ ಮನೆ ಮನೆ ಕವಿಗೋಷ್ಠಿ ಕಾರ್ಯಕ್ರಮಕ್ಕೆ ಆಗಿಂದಾಗ್ಗೆ ಆಗಮಿಸಿ ತಮ್ಮ ಕವಿತೆ ವಾಚಿಸುತ್ತಿದ್ದರು. ಅದೇನೋ ನಾನು ಮನೆ ಮನೆ ಕವಿಗೋಷ್ಠಿ ಸಂಚಾಲಕನಾಗಿ ೨ ವರ್ಷ ತುಂಬುತ್ತಾ ಬಂದು ನನ್ನ ಸಂಚಾಲಕತ್ವದ ಕಡೆಯ ಕಾರ್ಯಕ್ರಮ ಮೇಡಂ ಅವರ ಪುಸ್ತಕ ವಿಮರ್ಶೆ ಮಾಡಿಸುವುದು ಎನಿಸಿತು.ಇಲ್ಲಿ ಭಾವನಾತ್ಮಕ ಅಂಶವಿತ್ತು.     
ಮೇಡಂ ಅವರ ಮತ್ತೊಂದು ಮೆಸೇಜ್ ಬಂತು. ಕಲಿತು ಬರೆಯಲು ಅನುಕೂಲವಿದೆಯೆಂದು ಬರೆಯುತ್ತಿರುವೆ. ಆದರೂ ಬರೆಯುವುದೇ ಆಗಿ ನನ್ನ ಪುಸ್ತಕ ಬಿಡುಗಡೆಯ ಭಾಗ್ಯವೂ ಲಭಿಸಿದೆ. ಆದರೆ ಖರ್ಚು ಹೆಚ್ಚಾಗಿದೆಯೇ ಹೊರತು ಆದಾಯವಿಲ್ಲದಿದ್ದರೆ ಹೊಟ್ಟೆ ತುಂಬುವುದಿಲ್ಲವಲ್ಲ. ಬಿಡುಗಡೆಯಾದ ಪುಸ್ತಕವನ್ನು ಕೊಳ್ಳುವವರು ಯಾರೂ ಇಲ್ಲ. ಕವಿಗೋಷ್ಠಿ ಸಮ್ಮೇಳನ ಅಂತ ತಿರುಗುವುದರಿಂದ ನೆಡೆಯಲಾರದ ನಮ್ಮಂಥವರಿಗೆ ಆಟೋಗಳಿಗೆ ಹಣ ಹೊಂದಿಸಲಾಗುತ್ತಿಲ್ಲ. ಹೆಚ್ಚು ಬಳಗಗಳಿಗೆ ಬರೆಯುತ್ತಿರುವುದರಿಂದ ನಿದ್ರೆ ಊಟ ತಿಂಡಿಗೆ ಸಮಯವಿಲ್ಲ. ಹೊಲಿಯಲು ಸಮಯವಿಲ್ಲದೆ ಮಿಷನ್ ಮೇಲೆ ಕೂತು ವರ್ಷಗಳೇ ಸಂದಿವೆ. ವಯಸ್ಸಾದ ಕಾರಣ ಆರೋಗ್ಯದ ಸಮಸ್ಯೆ. ನನಗೀಗ ೭೭ ವರ್ಷ. ನನ್ನ ಕೆಲಸಗಳಿಗೆ ಬಿಡುವಿಲ್ಲ. ಬರೆದು ಈಗೇನು ಮಾಡಬೇಕು.. ಅರೇ.! ಹೌದಲ್ಲ. ಅವರಿಗೇಕೆ ಹೀಗೆ ಅನಿಸಿತು. ನಾಲ್ಕು ವರ್ಷಗಳ ಹಿಂದೆ ಕಾವ್ಯ ಕ್ಷೇತ್ರಕ್ಕೆ ಕಾಲಿರಿಸಿ ಮೇಡಂ ಹೃದಯದ ಕವಿತೆ ಎಂಬ ಲೇಖನ ಕವನ ಚುಟುಕು ಹಾಯ್ಕುಗಳ ಸಂಕಲನ ಹೊರತಂದಿದ್ದಾರೆ. ಆಗಲೇ ಅವರಿಂದ ಕಾವ್ಯ ದೂರವಾಗುತ್ತಿದೆಯೇ..ಛೇ..!
ಸಾಹಿತ್ಯ ಕ್ಷೇತ್ರವದು ಕಲಿತು ಬರೆಯಲು
ಅನುವು ಆಗಿಹುದು ಜ್ಞಾನವ ಪಡೆಯಲು
ಸಾವಿತ್ರಿ ಮೇಡಂ ಅವರೇ ತಮ್ಮ ಕವಿತೆಯ ಸಾಲಿನಲ್ಲಿ ಹೀಗೇ ಬರೆದಿದ್ದಾರಲ್ಲಾ. ಯಾಕೋ ಮೆಸೇಜ್ ತುಂಬಾ ಕಾಡಿಸಿತು. ಇದನ್ನು ಪುಸ್ತಕದಲ್ಲಿ ಆಶಯ ನುಡಿ ಬರೆದ ಮಾಳೇಟರ ಸೀತಮ್ಮ ವಿವೇಕ್ ಮೇಡಂ ಅವರಲ್ಲಿ ಹಂಚಿಕೊ೦ಡೆ. ಇತ್ತ ಸಾವಿತ್ರಿ ಮೇಡಂ ಜೊತೆ ಪೋನ್‌ಲ್ಲಿ ಮಾತನಾಡಲೆಂದರೆ ಸಾಧ್ಯವಾಗುತ್ತಿಲ್ಲ. ಯಾಕೆಂದರೆ ಅವರೇ ‘ಸಾರ್, ನನಗೆ ಪೋನ್‌ನಲ್ಲಿ ಏನೂ ಮಾತು ಕೇಳಿಸುವುದಿಲ್ಲ. ತಾವು ಮೆಸೇಜ್ ಮಾಡಿ ಪ್ಲೀಸ್.. ಏನೆಂದು ಮೆಸೇಜ್ ಮಾಡಲಿ..? ಅದಕ್ಕಿಂತ ಅವರ ಪುಸ್ತಕ ಓದಿ ಬರೆಯುವುದೇ ಉಚಿತವೆನಿಸಿತು. ಪುಸ್ತಕದ ಆಶಯ ನುಡಿಯಲ್ಲಿ ಸೀತಮ್ಮ ಮೇಡಂ ಒಂದು ಚುಟುಕು ಎತ್ತಿಕೊಂಡು ಕೆಲ ಸಾಲು ಬರೆದಿದ್ದಾರೆ.  
ಮೊಳಕೆಯೊಡೆವ ಮೊದಲ ಪ್ರೀತಿ
ಅದು ಹೆತ್ತವ್ವನ ಚುಂಬನದ ಪ್ರೀತಿ
ಅಪ್ಪಿ ಮುದ್ದಿನ ಮಳೆಗರೆವಾ ಪೀತಿ..
ಬೇರಾರೂ ಕೊಡಲಾಗದ ನಿಷ್ಕಲ್ಮಶ ಪ್ರೀತಿ ಎಂದು ಚುಟುಕಿನ ಮೂಲಕ ತಾಯಿ ಪ್ರೀತಿಯ ಭಾವ ವ್ಯಕ್ತಪಡಿಸಿರುವ ಇವರು ಹೆಣ್ಣು ಮನಸು ಮಾಡಿದರೆ ಯಾವಾಗ ಬೇಕಾದರೂ ಏನನ್ನು ಬೇಕಾದರೂ ಮಾಡಬಲ್ಲಳು ಎಂಬುದನ್ನು ಸಾಧಿಸಿ ತೋರಿಸಿ ಅನೇಕರಿಗೆ ಸ್ಫೂರ್ತಿಯಾಗಿದ್ದಾರೆ. ಅವರ ದೇಹ ಕ್ಷೀಣಗೊಂಡು ಕಾಡಿದರೂ ನೋವುಗಳನ್ನು ನಿರ್ಲಕ್ಷಿಸಿ ಛಲ ಬಿಡದೆ ಅನೇಕ ಸಾಹಿತ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾ ಎಲ್ಲರೊಡನೆ ಒಡನಾಡುತ್ತ ತಾವು ಮಾಡ ಬೇಕೆಂದುಕೊಳ್ಳುವ ಕೆಲಸವನ್ನು ಪ್ರೀತಿಯಿಂದ ಮಾಡುತ್ತಾ ಇರುತ್ತಾರೆ..
ಲೇಖಕಿ ಬರೆಯುತ್ತಾರೆ..ನಾನು ಹುಟ್ಟಿದ್ದು ೨೪-೮-೧೯೪೮. ದೇಶಕ್ಕೆ ಸ್ವತಂತ್ರ ಬಂದ ಮೊದಲನೆ ವರ್ಷದ ಸಂಭ್ರಮದ ಮಾಸದಲ್ಲಿ. ಹಾಸನದಲ್ಲಿ ನನ್ನ ತಂದೆ ತಿಮ್ಮಪ್ಪಗೌಡರು ಹಾಸನದ ದೊಡ್ಡಕೊಂಡುಗುಳದ ಹತ್ತಿರವಿರುವ ಹೊಸಕೊಪ್ಪಲು. ಹಿಂದಿನ ಕಾಲದಲ್ಲಿ ಒಮ್ಮೆ ಹುರುಳಿಯನ್ನು ಸಮೃದ್ಧಿಯಾಗಿ ಬೆಳೆದ ಕಾರಣ ಅಂದಿನಿಂದ ಹೊಸಕೊಪ್ಪಲು ಹೋಗಿ ಜನರ ನುಡಿಯಲ್ಲಿ ಹುರಳೀಕೊಪ್ಪಲು ಆಗಿದೆ ಎಂದು ನಮ್ಮ ಹಿರಿಯರು ಹೇಳುತ್ತಿದ್ದರು...
ಏಕೋ ಇದನ್ನು ಓದುತ್ತಿರಲು ನನಗೆ ಹಳೆಯ ವಿಚಾರವೊಂದು ತಟ್ಟನೆ ನನ್ನ ಮನದಲ್ಲಿ ಹಾಯ್ದುಹೋಯಿತು.
ನಮ್ಮ ತಂದೆ ಗೊರೂರಿನಲ್ಲಿದ್ದಾಗ ಭಾನುವಾರದ ಸಂತೆಯಲ್ಲಿ ಒಣ ಮೆಣಸಿನಕಾಯಿ ವ್ಯಾಪಾರ ಮಾಡುತ್ತಿದ್ದರು. ನಮ್ಮ ತಂದೆ ಬಸವಣ್ಣನವರ ಸಂತೆ ಕಟ್ಟೆಯಲ್ಲಿ ಸುಂಕದವರ ಕಾಟವೇ ಹೆಚ್ಚು. ಅದೇ ಗ್ರಾಮ ಪಂಚಾಯ್ತಿಗೆ ದೊಡ್ಡ ರೆವಿನ್ಯೂ. ಅದಕ್ಕೆ ವರ್ಷಕ್ಕೊಮ್ಮೆ ಟೆಂಡರ್ ಕರೆದು ಏಜೆನ್ಸಿ ಫಿಕ್ಸ್ ಆಗುತ್ತಿತ್ತು. ಸುಂಕದವರ ಮುಂದೆ ಸುಖದು:ಖ ಹೇಳಿಕೊಳ್ಳಲುಂಟೆ. ಅವನು ನಾಟಿ ಬೀಡಿ ವ್ಯಾಪಾರಿಯಾಗಿರಲಿ ಗುಡ್ಡೆ ಬೆಳ್ಳುಳ್ಳಿ ವ್ಯಾಪಾರಿಯಾಗಿರಲಿ ಎಲ್ಲರಿಗೂ ಒಂದೇ ರೇಟು ಫಿಕ್ಸು. ಸುಂಕದವನ ನಿರ್ದಾಕ್ಷಿಣ್ಯ ಕ್ರಮ. ನಮ್ಮ ತಂದೆ ಬಿಸಿಲಿನ ರಕ್ಷಣೆಗೆ ಗುಡಾರ ಹೊಡೆಯುತ್ತಿದ್ದರು. ಈ ಗುಡಾರದ ನೆರಳಿಗೆ ಗುಡ್ಡೆ ಬೆಳ್ಳುಳ್ಳಿ ಸಾಹೇಬ್ರು, ನಾಟಿ ಬೀಡಿ ಮನೆಯಲ್ಲೇ ಕಟ್ಟಿ ತಂದು ಮಾರುತ್ತಿದ್ದ ಈಗಿನ ಪ್ರಸಿದ್ಧ ವಾಲ್ ರೈಟರ್ ಯಾಕೂಬ್ ಅವರ ಮದರ್ ಹೀಗೆ ಕೆಲವು ಸಣ್ಣ ಅತೀ ಸಣ್ಣ ವ್ಯಾಪಾರಿಗಳು ಆಶ್ರಯ ಪಡೆಯುತ್ತಿದ್ದರು. ಕೆಲವು ವ್ಯಾಪಾರಿಗಳು ಗುಡಾರ ಹೊಡೆಯಲು ಬಸ್ಸಿನಲ್ಲಿ ಗಳುಗಳನ್ನು ಡೇರೆಯನ್ನು ತರಲು ಕಷ್ಟವಾಗಿ ನಮ್ಮ ಮನೆಯ ಹೊರಾಂಡದಲ್ಲಿ ಇಟ್ಟು ಹೋಗುತ್ತಿದ್ದರು. ಅವರಿಂದ ನಮ್ಮ ತಂದೆಯೇನು ಬಾಡಿಗೆ ಪಡೆಯುತ್ತಿರಲಿಲ್ಲ. ಆದರೆ ನಮ್ಮ ಮನೆ ಎದುರಿಗೆ ಮಂಜಣ್ಣನ ಮನೆ ಇತ್ತು. ಅದು ಸಂತೆಗೆ ಹತ್ತಿರವಾಗಿ ಬಹುಶ: ಅವರು ಕನಿಷ್ಟ ಬಾಡಿಗೆಗೆ ನಿಗದಿ ಮಾಡಿಕೊಂಡು ಸಾಕಷ್ಟು ಮಂದಿ ಅಲ್ಲಿ ತಮ್ಮ ಸಾಮಾನು ಸರಂಜಾಮು ಇಟ್ಟು ಹೋಗಲು ಅದೊಂದು ತರಹ ಗೋಡೌನ್ ತರಹವೇ ಆಗಿತ್ತು. ಇರಲಿ. ನಮ್ಮ ಊರ ಸಂತೆಗೆ ಹಾಸನದ ದೊಡ್ಡಕೊಂಡಗುಳದಿಂದ ಒಂದು ಹೆಂಗಸು ವ್ಯಾಪಾರಕ್ಕೆ ಬರುತ್ತಿತ್ತು. ಅದೇನೋ ವ್ಯಾಪಾರ ಎಂಬದು ತಕ್ಷಣಕ್ಕೆ ನೆನಪಾಗುತ್ತಿಲ್ಲ. ಆದರೆ ಆ ಹೆಂಗಸು ಬಹಳ ವರ್ಷ ರಾತ್ರಿ ನಮ್ಮ ಮನೆಗೆ ಬಂದು ತಂಗುತ್ತಿತ್ತು. ತನ್ನ ವ್ಯಾಪಾರಿ ಸಾಮಾಗ್ರಿಗಳ ಚೀಲವನ್ನು ಹೊರಾಂಡದಲ್ಲಿ ಇಟ್ಟು ಮನೆಯ ಹಾಲ್‌ನಲ್ಲಿ ಮಲಗಿ ಬೆಳಿಗ್ಗೆ ಎದ್ದು ಹಾಸನಕ್ಕೆ ಹೋಗುತ್ತಿತ್ತು. ಬಸ್ ಸೌಕರ್ಯಗಳ ಕೊರತೆ ಮತ್ತೇ ಹಳ್ಳಿಗೆ ಹೋಗಬೇಕಾಗಿದ್ದರಿಂದ ಪಾಪ ಆಕೆಗೆ ಇದು ಅನಿವಾರ್ಯವಾಗಿತ್ತು. ಅವರಿಗೆ ನಮ್ಮ ತಾಯಿ ದೊಡ್ಡಕೊಂಡುಗಳ್ಳದಮ್ಮ ಎಂದೇ ಕರದು ನಮಗೆ ಆಕೆಯ ಹೆಸರೇನಂದೇ ತಿಳಿಯದು. ನಮ್ಮ ತಾಯಿಯವರು ಮುತ್ತುಗದ ಎಲೆ ಕಟ್ಟಿ ಮಾರಿ ತಮ್ಮ ಎಲೆ ಅಡಿಕೆ ಖರ್ಚು ನಿಭಾಯಿಸಿಕೊಳ್ಳುತ್ತಿದ್ದರು. ಅವರಿಗೆ ಮಾತನಾಡಲು ಒಬ್ಬರು ಹೆಂಗಸು ಯಾವಾಗಲೂ ಇರಬೇಕಿತ್ತು. ಅದಕ್ಕಾಗಿಯೇ ನಾಲ್ಕೈದು ಕಟ್ಟು ಎಲೆ, ಅರ್ಧ ಕೆಜಿಯಷ್ಟು ಅಡಿಕೆ ಸಂತೆಯಲ್ಲಿ ಖರೀದಿಸುತ್ತಿದ್ದರು. ಈ ಎಲೆ ಅಡಿಕೆ ಮತ್ತು ಕಾಫಿ ಈ ಹಂಗೆಳೆಯರ ಮಧ್ಯದ ಒಡನಾಡಿಯಾಗಿತ್ತು. ಅಂತೆಯೇ ಈ ದೊಡ್ಡಕೊಂಡಗೊಳ್ಳದಮ್ಮ ಭಾನುವಾರ ಸಂಜೆಯ ವಿಶೇಷ ಅತಿಥಿ. ಇಂತಹ ವಿಷಯಗಳೇ ಒಮ್ಮೊಮ್ಮೆ ಒಂದು ಒಳ್ಳೆಯ ಲಲಿತ ಪ್ರಬಂಧಗಳಾಗುವುದು0ಟು. ಹೃದಯದ ಕವಿತೆಯ ಈ ಒಂದು ಕವಿತೆ ನನ್ನ ಬಾಲ್ಯವನ್ನು ನೆನಪಿಸಿತ್ತು.   
ತವರಿನ ತೊಟ್ಟಿಲಿನಲ್ಲಿ ಜೀಕೋಣ
ತಾಯಿಯ ಮಡಿಲಲ್ಲಿ ಮಲಗೋಣ
ತಿಳಿನೀರ ಕೊಳದಲ್ಲಿ ಮೀಯೋಣ..
ತುಂತುರು ಮಳೆಯಲ್ಲಿ ನೆನೆಯೋಣ
ತಮ್ಮ ಅನುಭವ ಜನ್ಯ ಬದುಕಿನ ಹಲವಾರು ವಿಚಾರಗಳನ್ನು ಮೆಲುಕು ಹಾಕುತ್ತಾ ಸಾಹಿತ್ಯದ ಹಲವು ಪ್ರಕಾರಗಳಾದ ಕತೆ ಕವನ ಲೇಖನ ಹಾಯ್ಕು ಟಂಕಾ ಲಿಮರಿಕ್ ಕವನ ಚುಟುಕು ಅತ್ಯಂತ ಶ್ರದ್ಧೆಯಿಂದ ಕಲಿತು ಬರೆಯುತ್ತಾ ತಮ್ಮ ಬಾಳ ಸಂಜೆಯನ್ನು ಅತ್ಯಂತ ಚಂದಗಾಣಿಸಿ ಕೊಳ್ಳುತ್ತಿದ್ದಾರೆ ಎಂದು ಬೆನ್ನುಡಿಯಲ್ಲಿ ಕವಯಿತ್ರಿ ಮಾಲಾ ಚೆಲುವನಹಳ್ಳಿ ಬರೆದಿದ್ದಾರೆ. ಇಳಿಯ ವಯಸ್ಸಿನಲ್ಲಿ ಏರುಗತಿಯಲ್ಲಿರುವ ಸಾಹಿತ್ಯ ಕೃಷಿಯ ಉತ್ಸಾಹ ಸಾಧನೆಯ ಸಂಕಲ್ಪ ತೊಟ್ಟವರಿಗೆ ವಯಸ್ಸಿನ ಹಂಗಿಲ್ಲ, ಅನಾಸಕ್ತಿಯ ಗುಂಗಿಲ್ಲ. ಇಳಿ ವಯಸ್ಸಿನಲ್ಲಿಯೂ ಪಿಹೆಚ್‌ಡಿಯಂತಹ ಉನ್ನತ ಶಿಕ್ಷಣ ಪಡೆದವರೂ ನಮ್ಮಲ್ಲಿದ್ದಾರೆ..ಇದು ಪರಮೇಶ್ ಹೊಡೇನೂರರ ಮುನ್ನುಡಿಯ ಆರಂಭಿಕ ಸಾಲು. ಹೌದು ಇದು ಖರೆ. ಇದಕ್ಕೆ ಸಾಕ್ಷಿ ತಾ.ನಂ.ಕುಮಾರಸ್ವಾಮಿಯವರು ‘ಕರ್ನಾಟಕದಲ್ಲಿ ಚೋಳರ ಕನ್ನಡ ಶಾಸನಗಳು-ಒಂದು ಅಧ್ಯಯನ’ ಎಂಬ ಮಹಾಪ್ರಬಂಧ ಮುಗಿಸಿ ಕೃತಿ ಪ್ರಕಟಿಸಿದ ಕಾಲಕ್ಕೆ ಅವರಿಗೆ ವಯಸ್ಸು ೮೦ ಆಗಿತ್ತು. ಈಗಾಗಲೇ ಅವರ ೫೦೦ ಪುಟದ ಆ ಪುಸ್ತಕ ಓದಿ ಆನಂದಿಸಿ ಬರೆದಿದ್ದೇನೆ. ಇರಲಿ ಇತ್ತ ಸಂಕಲನ ಮತ್ತೊಂದು ಕವಿತೆ: 
ಮುಪ್ಪಿನಾ ಕಾಲದಲಿ ನೋಯಿಸದಿರಿ
ಹೆತ್ತವರ ಇಂದು ನಿಮಗಿರುವ ಸೌಲತ್ತು
ಅಂದು ಅವರಿಗಿರಲಿಲ್ಲ ಆ ಹೊತ್ತು
ನಿಂದಿಸದಿರಿ ಹೆತ್ತವರ ನಿಮ್ಮೇಳಿಗೆಗೆ
ಕಾರಣ ಅವರೇ ಎಂಬುದ ತಿಳಿಯಿರಿ
ಆಧುನಿಕ ತಂತ್ರಜ್ಞಾನ ಹೆಚ್ಚು ಆವರಿಸಿ ಸಾಮಾಜಿಕ ಜಾಲತಾಣಗಳು ವಿಜೃಂಭಿಸುತ್ತಿರುವ ಪ್ರಸಕ್ತ ದಿನಗಳಲ್ಲಿ ಹಲವಾರು ವಾಟ್ಸಾಪ್ ಗ್ರೂಪ್‌ಗಳು ಬೆಳೆಸುತ್ತಿರುವ ಕವಿ ಸಾಹಿತಿಗಳಲ್ಲಿ ಸಾವಿತ್ರಿ ಮೇಡಂ ಕೂಡ ಒಬ್ಬರೆಂದು ಹೇಳಬಹುದು. ಇದು ಕರೋನ ಕಾಲದಲ್ಲಿ ಹುಟ್ಟಿಕೊಂಡ ಹೊಸ ಬೆಳವಣಿಗೆ. ಮೇಡಂ ತಮ್ಮ ಕಾಲಘಟ್ಟದ ಹಳ್ಳಿ ಬದುಕನ್ನು ಕಟ್ಟಿಕೊಡಲು ಶಶಕ್ತರಿದ್ದಾರೆ. ನಾವು ಬಾಲ್ಯದಲ್ಲಿ ಅನೇಕ ಘಟನೆಗಳಿಗೆ ಸಾಕ್ಷಿಯಾಗಿರುತ್ತೇವೆ. ಆದರೆ ಅದನ್ನು ದಾಖಲಿಸಲು ಆಗ ನಮಗೆ ಸಾಧ್ಯವಾಗಿರುವುದಿಲ್ಲ. ಏಕೆಂದರೆ ಆಗ ನಮಗೆ ಬರವಣಿಗೆ ಸಿದ್ಧಿಸಿರುವುದಿಲ್ಲ. ನನ್ನ ಮಟ್ಟಿಗೆ ಹೇಳುವುದಾದರೇ ನಾನು ಓದಿನ ದಿನಗಳಲ್ಲೇ ಸಾವಿರಾರು ಪುಸ್ತಕಗಳನ್ನು ಓದಿ ಅರಗಿಸಿಕೊಂಡಿದ್ದೆ. ಏನು ಮನರಂಜನೆ ಇಲ್ಲದ ಕಾಲದಲ್ಲಿ ಪುಸ್ತಕವೇ ನನಗೆ ಮನರಂಜನಾ ಮಾಧ್ಯಮವಾಗಿ ಹಳ್ಳಿಗಾಡಿನಲ್ಲಿ ಸಂತೋಷದ ಜೀವನ ಕಳೆಯುವುದು ಸಾಧ್ಯವಾಗಿತು. ಈಗಲೂ ಏನಾದರೂ ಬರೆಯಲೂ ಹೊರಟರೆ ಅದೇ ಬಾಲ್ಯದ ಆ ದಿನಗಳು ಹೇನಿನಂತೆ ತಲೆಯಲ್ಲಿ ಓಡಾಡುತ್ತಿರುತ್ತವೆ. ರಾತ್ರಿ ಕನಸಿನಲ್ಲೂ ಹುಟ್ಟಿದೂರೇ ಸಿನಿಮಾ ರೀಲ್‌ನಂತೆ ಓಡುತ್ತಿರುತ್ತದೆ. ಆದರೆ ಎಚ್ಚರಗೊಂಡಾಗ ಎಲ್ಲಾ ಮಾಯವೋ..! ಈ ಸಿಟಿ ಲೈಫು ನಮಗೆ ಕಥೆ, ಪ್ರಬಂಧ ಕಟ್ಟಲು ನೆರವಾಗುತ್ತಿಲ್ಲ. ಈ ದಿಶೆಯಲ್ಲಿ ಮೇಡಂ ಪ್ರಯತ್ನಿದ್ದಾರೆ. ಅವರು ಮದುವೆಯಾಗಿ ಗಂಡನ ಮನೆಗೆ ಹೋದದನ್ನು ಸ್ಮರಿಸುತ್ತಾ ೧೯೭೪ನೇ ಇಸವಿಯಲ್ಲಿ ನನ್ನ ಮದುವೆ ಆಲೂರು ತಾ. ಕುಂದೂರಿನ ದಿವಂಗತ ಛೇ: ತಿಮ್ಮೇಗೌಡ್ರು ಮತ್ತು ಕೆಂಚಮ್ಮನವರ ಕಿರಿಯ ಪುತ್ರರಾದ ಛೇ: ಕೆ.ಟಿ.ಬಸವೇಗೌಡ (ಶಾಮಣ್ಣ)ರವರೊಂದಿಗೆ ನನ್ನ ವಿವಾಹವಾಗಿ ಕುಂದೂರು ಸೇರಿದ್ದೆ. ಆದರೆ ನಮ್ಮೆಜಮಾನ್ರು ನಾನೇ ಕೆಲಸದಲ್ಲಿಲ್ಲ ನಿಮಗ್ಯಾಕೆ ರಿಸೈನ್ ಮಾಡಿ ಅಂದ್ರು, ರಿಸೈನ್ಮಾಡ್ದೆ. ನಮ್ಮೆಜಮಾನ್ರು ನನಗೆ ಬಹುವಚನದಲ್ಲಿ ಹೇಳಿದ ಮಾತುಗಳನ್ನು ಓದುಗರು ಗಮನಿಸಿರಬಹುದು. ಹೌದು ಅವರು ಯಾವಾಗಲೂ ಹೆಣ್ಣು ಮಕ್ಕಳಿಗೆ ದೊಡ್ಡವರಾಗಲೀ, ಚಿಕ್ಕವರಾಗಲೀ ಗೌರವದಿಂದ ಬೆಲೆ ಕೊಟ್ಟು ಬಹುವಚನದಲ್ಲಿ ಮಾತನಾಡಿಸುವ ಸ್ವಭಾವ. ಅವರ ಅತ್ತಿಗೆಯಂದಿರನ್ನೆಲ್ಲ ಅತ್ಗೆ ಯಮ, ನಾದಿನಿಯರನ್ನು, ಸೊಸೆ ಮೊಮ್ಮಕ್ಕಳನ್ನು ಸಹ ಬನ್ರಮ್ಮ, ಹೋಗ್ರಮ್ಮ ಅಂತಾನೆ ಮಾತನಾಡಿಸುತ್ತಿದ್ದರು. ಅದು ಅವರ ಸಂಸ್ಕಾರ. ನನ್ನ ತಾಯಿ ಅಜ್ಜಿಗೆ ಗುಣವಂತ ಅಳಿಯ ಅಂತ ಅಚ್ಚುಮೆಚ್ಚಾಗಿತ್ತು. ಅದೆಲ್ಲಾ ಈಗ ಸಿಹಿ ನೆನಪುಗಳು ಮಾತ್ರ..
-ಗೊರೂರು ಅನಂತರಾಜು, ಹಾಸನ.
ಮೊ: ೯೪೪೯೪೬೨೮೭೯
ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ.

ಲೇಖನ...

: ಲೇಖನ


ಬಯಲಾಟ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕಲಾವಿದ ಶಿವಣ್ಣ ಬಿರಾದಾರ

 -ಗೊರೂರು ಅನಂತರಾಜು .

  ಡಾ. ಸಿಂಪಿಲಿಂಗಣ್ಣನವರು ಜಾನಪದ ಕ್ಷೇತ್ರದಲ್ಲಿ ಮಾಡಿದ ಸಾಧನೆ ನಮಗೆಲ್ಲ ತಿಳಿದ ವಿಷಯ. ಇವರು ಜನಿಸಿದ್ದು ಉತ್ತರ ಕರ್ನಾಟಕದ ಗಡಿನಾಡು ಪ್ರದೇಶ ಚಡಚಣದಲ್ಲಿ. ಇದೇ ಗ್ರಾಮದ ಶ್ರೀ ಶಿವಣ್ಣ ಬಿರಾದರ ಇವರಿಗೆ ಬಯಲಾಟ ಕ್ಷೇತ್ರದ ಸಾಧನೆಗೆ ಕರ್ನಾಟಕ ಬಯಲಾಟ ಅಕಾಡೆಮಿ, ಬಾಗಲಕೋಟೆ 2024-25ನೇ ಸಾಲಿನ ಗೌರವ ಪ್ರಶಸ್ತಿಗೆ ಭಾಜನರಾಗಿ ನೆನ್ನೆ ಸೋಮುವಾರ (10-2-2024)ಪ್ರಶಸ್ತಿ ಸ್ವೀಕರಿಸಿದರು. ಎರಡು ವರ್ಷಗಳ ಹಿಂದೆ ಹಾಸನದಲ್ಲಿ ಶ್ರೀ ಶಾರದ ಕಲಾ ಸಂಘದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಇವರ ಪರಿಚಯವಾಯ್ತು. ಇವರ ಜೊತೆಗೆ ಶ್ರೀ ಲಕ್ಷ್ಮಿ ಅಕ್ಕನ ಬಳಗ, ಚಡಚಣದ ಮಹಿಳಾ ಕಲಾವಿದರು ಬಂದಿದ್ದರು. ಇವರು ಸೋಬಾನೆ ಪದ, ತತ್ವಪದಗಳ ಹಾಡುಗಾರಿಕೆ ಪ್ರಸ್ತುತಿ ಪಡಿಸಿದರು. ಕಾಯ೯ಕ್ರಮ ನಿರೂಪಣೆ ಮಾಡುತ್ತಿದ್ದ ನಾನು ಬೇರೆ ಯಾವುದಾದರೂ ಜಾನಪದ ಕಲೆ ತಮ್ಮಲಿದ್ದರೆ ಪ್ರದರ್ಶನ ನೀಡುವಂತೆ ತಿಳಿಸಿದೆ. ಆಗ ಅವರು ಬಯಲಾಟ ಕಲೆ ಇದೆ. ಆದರೆ
ಈಗ ನಾವು ಕೇವಲ ಮೂರು ಜನ ಬಂದಿದ್ದೇವೆ. ಬಯಲಾಟ ಕಲೆಯ ಪ್ರದರ್ಶನ ನೀಡಬೇಕಾದರೆ ಗಾಯನ ಕಲೆಗಾರರು ಬೇಕಾಗುತ್ತದೆ. ಅಂದರೇನೆ ನಮ್ಮ ಕಲೆಯನ್ನು ಯೋಗ್ಯ ಪ್ರದಶಿ೯ಸಲು ಸಾಧ್ಯ ಎಂದರು. ಆಗ ನಾನು ಪರ್ವಾಗಿಲ್ಲ ನೀವು ಮೂರು ಜನ ಮಾತ್ರವೇ
ನಿಮ್ಮಲ್ಲಿರುವ ಕಲೆಯನ್ನು ಪ್ರದರ್ಶನ ನೀಡಿರಿ ಎಂದೆ. ಅವರು ತಮ್ಮ ತಮ್ಮಲ್ಲಿ ಮಾತನಾಡಿಕೊಂಡು ಒಬ್ಬರು ಸಾರಥಿ, ಒಬ್ಬರು ಕೃಷ್ಣನ ಪಾತ್ರ, ಇನ್ನೊಬ್ಬರು ದುರ್ಯೋಧನನ ಪಾತ್ರ ನಿರ್ವಹಿಸಿ ಒಂದು ಸಣ್ಣ ಪ್ರಸಂಗವನ್ನು ಆಯ್ಕೆ ಮಾಡಿ ಕೋಡು ಯಶಸ್ವಿಯಾಗಿ ಪ್ರದರ್ಶಿಸಿದರು.. ಕೇವಲ 10 ನಿಮಿಷದ ಈ ಪ್ರದರ್ಶನವು ಉತ್ತರ ಕರ್ನಾಟಕ ರಂಗಕಲೆಯ ಸೊಗಡನ್ನು ಬಿ೦ಬಿಸಿತು.ನಂತರ ಊಟ ಮಾಡುವಾಗ ನಾನು ಶಿವಣ್ಣರನ್ನು
 ವಿಚಾರಿಸಲು ಅವರು ತಮ್ಮ ರಂಗ ಅನುಭವವನ್ನು ಬಿಚ್ಚಿಟ್ಟರು. 1951 ರಲ್ಲಿ ಜನಿಸಿದ ಇವರ ತಂದೆಯವರಾದ ದಿವಂಗತ ಮಾಧುರಾಯಗೌಡ್ರು ಮೂಲತ: ಬೈಲಾಟ ಕಲಾವಿದರು. ಇವರ ವಿದ್ಯಾಭ್ಯಾಸ ಕೇವಲ ನಾಲ್ಕನೆಯ ತರಗತಿ ಆದರೂ ಓದು ಒಕ್ಕಾಲು ಬುದ್ದಿ ಮುಕ್ಕಾಲು ಎನ್ನುವ ನಾಣ್ಣುಡಿಯನ್ನು ಚೆನ್ನಾಗಿ ಅರ್ಥೈಸಿಕೊಂಡು ಸಾಮಾಜಿಕ ಧಾರ್ಮಿಕ ರಾಜಕೀಯ ಜಾನಪದ ಎಲ್ಲ ಕ್ಷೇತ್ರಗಳಲ್ಲಿ ತಮ್ಮ ಸೇವೆಯನ್ನು ಮುಂದುವರಿಸಿಕೊಂಡು ಗ್ರಾಮದ ಗಣ್ಯ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರು. ಇಂತಹ ಒಳ್ಳೆಯ ತಂದೆಯ ಮಗನಾಗಿ ಈ ಸಮಾಜಕ್ಕೆ ತಾವು ಕೂಡ ಒಳ್ಳೆಯ ಕಾರ್ಯವನ್ನು ಮಾಡಿ ತಂದೆಗೆ ತಕ್ಕ ಮಗ ಎನಿಸಿಕೊಂಡು ತಮ್ಮ ಜೀವನ ಸಾರ್ಥಕ ಮಾಡಿಕೊಳ್ಳಬೇಕು ಎನ್ನುವ ಮನೋಭಿಲಾಶೆಯಿಂದ ಇವರು ತಂದೆಯವರು ಅತಿ ಪ್ರೀತಿಯಿಂದ ಅಪ್ಪಿಕೊಂಡ ಬಯಲಾಟ ಕಲೆಯನ್ನು ಒಪ್ಪಿಕೊಂಡರು. ಇದೀಗ ಈ ಕಲೆ ನಶಿಸುತ್ತಿದೆ. ಇದಕ್ಕೆ ಮರು ಜೀವ ತುಂಬಲು ಪ್ರಯತ್ನ ಮಾಡುವ ಹಂಬಲದಿಂದ ಇವರು ಈ ಕ್ಷೇತ್ರದಲ್ಲಿ ಪ್ರಯತ್ನಶೀಲರು. ತಮ್ಮ ಗ್ರಾಮದಲ್ಲಿ ಲಕ್ಷ್ಮಿ ದೊಡ್ಡಾಟ ಸಂಘವನ್ನು ಕಟ್ಟಿ ಬಾಣಸುರ ಕಥೆ, ಚಿತ್ರಸೇನ ಗಂಧರ್ವ, ಇಂದ್ರಜಿತ ಕಾಳಗ, ಧರ್ಮ ವಿಜಯ ಎಂಬ ಬಯಲಾಟಗಳನ್ನು ಕಲಿಸಿ ಆಡಿಸಿದ್ದಾರೆ. ಈ ಧರ್ಮ ವಿಜಯ ಬಯಲಾಟದ ಕಥೆಯು ಬಹಳ ಚೆನ್ನಾಗಿದ್ದು ಪದ್ಯಗಳು ಕೂಡ ರಾಗ ತಾಳಗಳಲ್ಲಿ ಸುಮಧುರವಾಗಿವೆ. ಈ ಕತೆಯನ್ನು ಕೇವಲ 6ನೇ ತರಗತಿ ಕಲಿತ ಇಸ್ಲಾಂ ಧರ್ಮದ ವ್ಯಕ್ತಿ ಓರ್ವರು ಬರೆದಿದ್ದಾರೆ. ಇವರ ಹೆಸರು ಅಬ್ದುಲ್ ಮೇಸ್ತ್ರಿ. ಗ್ರಾಮ ಹಾವಿನಾಳ ಎಂದರು. ಈ ಕಲೆಯ ಬಗ್ಗೆ ಹೇಳುವುದು ಸಾಕಷ್ಟು ಇದೆ. ಕಲೆಯು ಯಾಕೆ ನಶಿಸುತ್ತಿದೆ ? ಕಲಾವಿದರ ಸಮಸ್ಯೆಗಳೇನು? ಯಕ್ಷಗಾನಕ್ಕೂ ಬಯಲಾಟಕ್ಕೂ ಇರುವ ಸಾಮ್ಯತೆಗಳು ಏನು? ವೈವಿಧತೆಗಳು ಏನು? ಮುಂತಾದ ವಿಷಯಗಳ ಬಗ್ಗೆ ತಾವು ಅಭ್ಯಾಸ ಮಾಡುತ್ತಲಿದ್ದು ಇದರ ಬಗ್ಗೆ ಮುಂದಿನ ದಿನಗಳಲ್ಲಿ ಒಂದು ಲೇಖನ ಸಿದ್ಧಪಡಿಸುವದಾಗಿ ಹೇಳಿದರು. ನಾನು ಬರೆದ ಭೀಮಾ ತೀರದ ಬಯಲಾಟ ಕೃತಿಯು ಮುದ್ರಣವಾಗುತ್ತಿದೆ ಎಂದರು. ಪಂಪ ಮಹಾಕವಿ ಹೇಳಿದ ಆರಂಕುಶ ವಿಟ್ಟೊಡೆ0 ನೆನೆಯುದಂ ಎನ್ನ ಮನ ಬನವಾಸಿ ದೇಶವಂ ಇದನ್ನು ಇವರು ನೆನೆಯುವುದೆನ್ನ ಮನ ಬಯಲಾಟ ಕಲೆಯು ಎಂದು ಪರಿವರ್ತಿಸಿಕೊಂಡು ಸಾಗಿದ್ದಾರೆ. ಕಲೆ ಬಗ್ಗೆ ಆಸಕ್ತಿವುಳ್ಳ ವಿದ್ವಾಂಸರ ತಜ್ಞರ ಸಂಪರ್ಕದಲ್ಲಿ ಶಿವಣ್ಣರವರು ತಮ್ಮ ಜ್ಞಾನ ಸಮೃದ್ಧಿಯನ್ನು ಹೆಚ್ಚಿಸಿಕೊಳ್ಳುವ ದಿಶೆಯಲ್ಲಿ ಸದಾ ತಲ್ಲಿನರು. ಇಂದು ಪೊನ್ ಗೆ ಸಿಕ್ಕಿ ಸನ್ಮಾನದ ಪೋಟೋ ಕಳಿಸಿ, ನಿಮ್ಮ ಕಡೆ ನಮ್ಮ ಕಲೆಯ ಪ್ರದರ್ಶನಕ್ಕೆ ಒಮ್ಮೆ ಅವಕಾಶ ಮಾಡಿ, ನಾವು ಒಂದು ತಂಡ ಬರುತ್ತೇವೆ ಎ೦ದರು. ಸರಿ, ಬಯಲಾಟ ಅಕಾಡೆಮಿ ಸದಸ್ಯರು ಡಾ.ಚಂದ್ರು ಕಾಳೇನಹಳ್ಳಿಯವರು ಈ ದಿಶೆಯಲ್ಲಿ ಪ್ರಯತ್ನಿಸಿದರೆ ನಮ್ಮ ಕಡೆಯ ಸಹಕಾರ ಇರುತ್ತದೆ ಎಂದು ಶಿವಣ್ಣ ಬಿರಾದಾರರಿಗೆ ಅಭಿನಂದನೆ ಹೇಳಿದೆ..

      
ಗೊರೂರು ಅನಂತರಾಜು,
ಹಾಸನ.
ಹುಣಸಿನಕೆರೆ ಬಡಾವಣೆ,
29ನೇ ವಾರ್ಡ್,
3 ನೇ ಕ್ರಾಸ್,
ಹಾಸನ - 573120

ಹಾಸ್ಯ...

ಹಾಸ್ಯ

   ನಿಮ್ಮಪ್ಪ ಏನಂತಾ ಕರೀತಾರೆ..? ಈಡಿಯಟ್..ಸ್ಟುಪಿಡ್..!

ಗೊರೂರು ಅನಂತರಾಜು, ಹಾಸನ

ಮುದ್ದಣ್ಣ: ಮನೋರಮೆ, ನೀನು ಯುಗಾದಿ ಹಬ್ಬಕ್ಕೆ ಮಾಡಿರುವ ಪಾಯಸ ತುಂಬಾ ರುಚಿಯಾಗಿದೆ ಕಣೆ.
ಮನೋರಮೆ: ಅದಕ್ಕೆ ಬೆಕ್ಕು ಬಾಯಿ ಹಾಕಿರದೆ ಇದ್ದಿದ್ರೇ..ಚೆನ್ನಾಗಿರುತ್ತಿತ್ತು.

ಮು: ರಾತ್ರಿ ಒಂಭತ್ತು ಗಂಟೇಲಿ ಎಲ್ಲಿಗ್ಹೊರಟೆ..?
ಮ: ನರಕಕ್ಕೆ.. ಇಲ್ಲಿ ಮೂರ‍್ಹೊತ್ತು ನಿಮ್ಮತ್ರ ಜಗಳ ಆಡ್ಕೊಂಡು ಇರೋದಕ್ಕಿಂತ ಅಲ್ಲಿ ಇರೋದೆ ವಾಸಿ. 
ಮು: ನರಕದಲ್ಲಿರುವ ನಿನ್ನ ಅಮ್ಮನಿಗೆ ನನ್ನ ನಮಸ್ಕಾರ ತಿಳಿಸು. ಸದ್ಯ ಸರ್ಕಾರದ ಉಚಿತ ಬಸ್ಸಿನಲ್ಲಿಯೇ ಸಾವಕಾಶವಾಗಿ ಹೋಗಿ ಬಾ.

ಮ: ರೀ, ನೀವು ಈ ರೀತಿ ಜಗಳ ಆಡ್ತಿದ್ರೆ ಅಕ್ಕಪಕ್ಕ ಮನೆಯವರಿಗೆ ಕೇಳಿಸುತ್ತೆ..
ಮು: ಸರಿ ಹಾಗಾದ್ರೇ, ಬೇರೆ ಯಾವ ರೀತಿ ಜಗಳ ಆಡಬೇಕು ಅಂತ ನೀನೇ ಹೇಳು. ದಿನಾ ರಾತ್ರಿ ಬಿಗ್ ಬಾಸ್ ಹಾಕ್ಕೊಂಡು ನೋಡ್ತ ಇರ‍್ತಿಯಲ್ಲಾ.. ಅದು ಅಕ್ಕಪಕ್ಕ ಮನೆಗೆ ಹಾಗೇ ಕೇಳಿಸುತ್ತೇ ತಾನೇ..

ಮ: ರೀ, ನಾನು ಮುಂದೆ ದಪ್ಪ ಆದ್ರೂ ನೀವು ಇದೇ ರೀತಿ ಪ್ರೀತಿ ಮಾಡ್ತೀರಾ..?
ಮು: ಅದ್ಹೇಗೆ ಸಾಧ್ಯ..?
ಮ: ತಾಳಿ ಕಟ್ಟುವ ವೇಳೆ ಅಗ್ನಿಸಾಕ್ಷಿಯಾಗಿ ಪ್ರಮಾಣ ಮಾಡಿದ್ರಿ..!
ಮು: ನಿನ್ನ ಕಷ್ಟಗಳಲ್ಲಿ ಭಾಗಿಯಾಗುತ್ತೇನೆ ಎಂದಷ್ಟೇ ಪ್ರಮಾಣ ಮಾಡಿದ್ದೇನೆ. ಆದರೆ ನೀನು ದಪ್ಪ ಆಗುವ ವಿಚಾರದಲ್ಲಿ ಮಾತು ಕೊಟ್ಟಿಲ್ಲ..ದಯವಿಟ್ಟು ಒಂದ್ಹೊತ್ತು ಊಟ ಬಿಟ್ಟು ಡಯಾಟ್ ಮಾಡು. ಐದು ವರ್ಷದಲ್ಲಿ ನೀನು ಗ್ಯಾರಂಟಿ ತೆಳ್ಳಗಾಗ್ತಿಯಾ..

ಮ: ರೀ, ನೀವು ಪಿಹೆಚ್‌ಡಿ ಮಾಡಿದ್ರಲ್ಲಾ. ನಿಮ್ಮನ್ನೀಗ ಡಾಕ್ಟರ್ ಅಂತ ಕರಿಲೋ ಫ್ರೊಫೆಸರ್ ಅಂತ್ಲೇ ಕರಿಲೋ..?
ಮು: ನಿನ್ನಿಷ್ಟ ಬಂದಾಗೆ ಕರಿ..
ಮ: ನಿಮ್ಮಪ್ಪ ಏನಂತ ಕರೀತಾರೆ..?
ಮು: ಈಡಿಯಟ್.. ಸ್ಟುಪಿಡ್..!

ಮ: ಏಳ್ರೀ ಹತ್ತು ಗಂಟೆಗ ಗೊರಕೆ ಹೊಡಿತ್ತಿದ್ದೀರಾ..
ಮು: ಯಾಕೆ ನನ್ನನ್ನು ಎಬ್ಬಿಸಿದೆ..?
ಮ: ರಾತ್ರಿ ಹತ್ತು ಗಂಟೆಗೆ ಸರಿಯಾಗಿ ನಿದ್ರೆ ಮಾತ್ರೆ ಕೊಡಿ ಅಂತ ಡಾಕ್ಟರ್ ಹೇಳಿದ್ರಲ್ಲಾ..!

ಮು: ಇದೇ ತಿಂಗಳು ಇಪ್ಪತ್ತಕ್ಕೆ ನನ್ನ ಫ್ರೆಂಡ್ ಮಗನ ಮದುವೆ ಇದೆ. ನಾವಿಬ್ರೂ ಹೋಗಲೇಬೇಕು. ನನಗೆ ಅವರು ಆತ್ಮೀಯ ಮಿತ್ರರು. ಮರೆಯದೆ ನೆನಪು ಮಾಡು.
ಮ: ಇವತ್ತು ತಾರೀಖು ಇಪ್ಪತ್ತೆರೆಡು..!
ಮು: ಹಾಗಾದರೇ ನಾವು ಮದುವೆ ಫಂಕ್ಷನ್ ಮಿಸ್ ಮಾಡ್ಕೊಂಡ್ವಿ ಅಲ್ಲವಾ..?
ಮ: ನೀವು ನಾನು ಮೊನ್ನೆ ಮದುವೆಗೆ ಹೋಗಿ ಗಡದ್ದಾಗಿ ತಿಂದು ಬಂದಿಲ್ವಾ..!

ಮ: ಇದೇನ್ರೀ ಮನೆಗೆ ಇಷ್ಟು ಬೇಗ ಬಂದ್ರೀ..?
ಮು: ನಮ್ಮ ಬಾಸ್ ನರಕಕ್ಕೆ ಹೋಗು ಅಂತ ಬೈದ್ರು.. ಅದಕ್ಕೆ ಇಲ್ಲಿಗೆ ಬಂದೆ.

ಮ: ರೀ, ಒಂದು ನಿಮಿಷ ಬಂದು ಬಿಡ್ತಿನಿ. ಮನೇಲಿರಿ.
ಮು: ಎಲ್ಲಿಗೆ ಹೋಗ್ತಿದ್ದಿಯಾ..?
ಮ: ಪಕ್ಕದ್ಮನೆ ಪದ್ಮಕ್ಕನ ಮನೆಗೆ ಸಕ್ಕರೆ ಸಾಲ ತರ‍್ಲಿಕ್ಕೆ..
ಮು: ಸಾಲ ಯಾಕೆ ತರಬೇಕು. ನಿನ್ನೆ ತಾನೇ ೨ ಕೆಜಿ ಸಕ್ಕರೆ ತಂದಿದ್ದೀನಲ್ಲ.
ಮ: ಈಗ ನಾನು ಹೋಗ್ದೆ ಇದ್ರೇ ಅವಳೇ ಸಾಲ ಕೇಳ್ಕೊಂಡು ಇಲ್ಲಿಗೆ ಬಂದುಬಿಡ್ತಾಳೆ..!

ಮ: ರೀ, ನೀವು ನನಗೆ ಮುತ್ತಿನ ಹಾರ ಕೊಡಿಸುತ್ತಿದ್ದಂತೆ ಕನಸು ಬಿತ್ತು.
ಮು: ಹೌದಾ..! ಅದನ್ನು ಭದ್ರವಾಗಿ ಬೀರುನಲ್ಲಿ ಇಡು.

ಮ: ರೀ, ನಮಗೆ ಮಕ್ಕಳಿಲ್ಲ. ಅದಕ್ಕೆ ನನ್ನ ತಾಯಿ ಮನೆಯಿಂದ ಕೊಟ್ಟ ಮನೆಯನ್ನು ಯಾರಾದ್ರೂ ಸನ್ಯಾಸಿಗೆ ಮಾರಿಬಿಡೋಣವೆಂದುಕೊಂಡಿದ್ದೇನೆ..
ಮು: ಬಾಗಿಲು ತೆಗಿ
ಮ: ಎಲ್ಲಿಗೆ ಹೋಗ್ತಿರಾ..?
ಮು: ಸನ್ಯಾಸಿಯಾಗಲಿಕ್ಕೆ..!

ಮ: ರೀ, ನಾಳೆ ನಿಮ್ಮ ಹ್ಯಾಪಿ ಬರ್ತಡೆ. ಏನ್ ಗಿಫ್ಟ್ ಕೊಡ್ಲಿ..?
ಮು: ಡ್ಯೆವೋರ್ಸ್ ಕೊಟ್ಟುಬಿಡು..
   
ಗೊರೂರು ಅನಂತರಾಜು, ಹಾಸನ.
          ಮೊ: ೯೪೪೯೪೬೨೮೭೯
ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್,
ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ

ಒಂದು ಸುಡುಗಾಡು ಕಥೆ...

ಒಂದು ಸುಡುಗಾಡು ಕಥೆ. 


ಮೂಲ ಕಥೆ: ಮಧು ನಾಯ್ಕ ಲಂಬಾಣಿ, ಹೂವಿನಹಡಗಲಿ.

ರಂಗ ರೂಪಾಂತರ: ಗೊರೂರು ಅನಂತರಾಜು, ಹಾಸನ.

ದೃಶ್ಯ-೧ 

( ಆ ಊರಿನ ಜನರೆಲ್ಲಾ ಒಂದು ಕಡೆ ಸೇರಿದ್ದಾರೆ)

ಅಧಿಕಾರಿ: ಎಲ್ಲರೂ ಸುತ್ತಲೂ ಕುಂತಕೋ ಬೇಕು. ಗಲಾಟೆ ಮಾಡ್ಬಾರ‍್ದು. ಸಾಹೇಬ್ರು ಏನ್ ಹೇಳ್ತಾರ ಕೇಳ್ಕೋಬೇಕು. ಅವರು ಯಾರಿಗೆ ಪ್ರಶ್ನೆ ಕೇಳ್ತಾರ ಅವರು ಉತ್ತರ ಕೊಡ್ಬೇಕು ತಿಳಿತಾ.? ಊರ ಯಜಮಾನ್ರು ಅಂದ್ರ ನೀವಾ ಏನ್ರೀ.

(ಸೇರಿದ್ದ ನಾಲ್ಕು ಮಂದಿ ಹೌದು ಎನ್ನುವಂತೆ ಗೋಣು ಅಲುಗಾಡಿಸುವುದರ ಜೊತೆಗೆ ಶಬ್ಧನೂ ಮಾಡಿದ್ರು)

ಅಧಿಕಾರಿ: ಎಲ್ಲರೂ ಶಾಂತವಾಗ್ರಿ. ನಿಮ್ಮ ನಿಮ್ಮಲ್ಲಿ ಮಾತಾಡ್ಬೇಡ್ರಿ. ಸಾಹೇಬ್ರ ಮಾತನ್ನ ಕೇಳ್ರಿ. ಅವ್ರು ಹೇಳಿದ ಮೇಲೆ ನಿಮ್ಮ ಮಾತು ಶುರು ಮಾಡ್ರಿ.
ತಹಸೀಲ್ದಾರ್: ಎಲ್ಲರಿಗೂ ನನ್ನ ನಮಸ್ಕಾರಗಳು. ನಾನು ನಿಮ್ಮ ಈ ತಾಲ್ಲೂಕಿನ ತಹಸೀಲ್ದಾರ್. ನಿಮ್ಮೂರಾಗ ಶ್ಮಶಾನ ಇಲ್ಲ. ಹೆಣ ಹೂಳಕು ಜಾಗ ಇಲ್ಲ. ಹೆಣ ಸುಡಾಕು ಜಾಗ ಇಲ್ಲ ಅಂತ ಸುದ್ಧಿ ತಿಳೀತು. ಅದಕ್ಕೆ ಬಂದೆ. ಈಗ ಇದಕ್ಕ ಪರಿಹಾರನ ನೀವಾ ಹೇಳ್ರಿ. ಒಬ್ಬೊಬ್ರೆ ಮಾತಾಡ್ರಿ. ಹಂಗಾದ್ರೆ ನನಗೆ ಅರ್ಥ ಆಗ್ತೈತಿ.

ಮಂದಿ-೧ (ಎದ್ದು ನಿಂತು)
 ಮುಂದಿರೋ ಮಲ್ಡಿ ಎಡಕ್ಕ ಒಂದಿಷ್ಟು ಜಾಗ ಇತ್ತು ಸಾಹೇಬ್ರ. ಊರ ಜನ ಎಲ್ಲಾ ಅಲ್ಲೇ ಸುಡೋದು, ಹೂಳೋದು. ಆದ್ರೆ.. ಆದ್ರೆ.. ಈ ಊರ ಗೌಡ್ರು ಹೆಣನ ನಮ್ಹೊಲ ದಾಟ್ಸಬಾರ‍್ದು ಅಂತ ಬೈದು ಗಲಾಟೆ ಮಾಡಿ ಬಿಡ್ಸಿಬಿಟ್ರು. ಅವತ್ತಿನಿಂದ ಇವತ್ತಿನವರೆಗೂ ನಾಲ್ಕು ವರ್ಷ ಆತು. ಹೆಣ ಸುಡಾಕು ಜಾಗ ಇಲ್ಲ. ಹೂಳಾಕು ಜಾಗ ಇಲ್ಲ.

ತಹಸೀಲ್ದಾರ್: ಗೌಡ್ರು ಅಂದ್ರ..ಯಾರಪ್ಪ ಇಲ್ಲಿ..?

ಊರಗೌಡ: ನಾನರೀ..

ತಹಸೀಲ್ದಾರ್: ಯಾಕ್ರಿ ಗೌಡ್ರ. ಒಡ್ಡಿನ ಮ್ಯಾಲಸಿ ಅಂದ್ರೆ ಬದುವಿನ ಮ್ಯಾಲಾಸಿ ಹೆಣ ಹೊತ್ಕೊಂಡು ಹೋಗಾಕ ದಾರಿ ಕೊಡಬಹುದಲ್ವಾ..?

ಊರಗೌಡ: ಹಂಗ ಆಗಾಂಗಿಲ್ರಿ ಸಾಹೇಬ್ರ. ಮನುಷ್ಯ, ದನಕರು, ಕುರಿ ಎತ್ತು ಬಂಡಿ ಬೇಕಾದ್ರ ಹೊಲ್ದಾಗಾಸಿ ಹೋಗ್ಲಿ ನಾ ಬ್ಯಾಡ ಅನ್ನಲ್ಲ. ಆದ್ರ ಹೆಣ ಮಾತ್ರ ಅಲ್ಯಾಸಿ ಒಯ್ಯಂಗಿಲ್ಲ.

ತಹಸೀಲ್ದಾರ್: ಯಾಕ್ರೀ..?

ಊರಗೌಡ: ಹೆಣ ನಮ್ಮ ಹೊಲ್ದಗಾಸಿ ಹೋಗೋದು ನಮಗಿಷ್ಟ ಇಲ್ಲ. ಬೇರೆ ಯಾರ‍್ದಾನ ಹೊಲ್ದಾಗಾಸಿ ಹೋಗಾಕ ಒಪ್ಗಿ ಕೊಟ್ರೆ ಬೇಕಾದ್ರ ಹೋಗ್ಲಿ ನಾ ಬ್ಯಾಡ ಅನ್ನಲ್ಲ.

ತಹಸೀಲ್ದಾರ್: ನೀವಾ ಬ್ಯಾಡ ಅಂದ್ರ ಬೇರೆ ಯಾರು ಒಪ್ಕೋತಾರ ಹೇಳ್ರಿ..

ಊರಗೌಡ: ನಾ ಏನ್ ಮಾಡ್ಲಿ ಸಾಹೇಬ್ರ. ನನಗಿಷ್ಟ ಇಲ್ರಿ. ಅದು ಅಲ್ದೆ ಅದಿಷ್ಟು ಜಾಗ ಇಡೀ ಊರ ಹೆಣನ ಹೂಳಾಕಾಗುವುದಿಲ್ಲ. ಅಲ್ಲಿ ಹೋದ್ರ ಹೆಣ ಸುಡೋರಿಗೆ ನಿಂದ್ರಾಕ ಜಾಗ ಇಲ್ಲ. ಅಷ್ಟರಾಗ ಏನು ಮಾಡಾಕ್ ಆಗೋದಿಲ್ಲ. ಅದಕ್ಕ ಬಿಡ್ಸಿ ಬಿಟ್ಟಿವ್ರಿ.

ತಹಸೀಲ್ದಾರ್: ಸರಿ ಈಗ ಮುಂದ್ಹೆಂಗ ಮಾಡೋದು ನೀವಾ ಹೇಳ್ರಿ..

ಯಜಮಾನ: ಏನ್ ಮಾಡ್ಬೇಕು ಅನ್ನೊದ್ನ ನೀವಾ ಹೇಳ್ರಿ ಸಾಹೇಬ್ರ..

ತಹಸೀಲ್ದಾರ್: ಶ್ಮಶಾನಕ್ಕಾಗಿ ಎರಡೆಕರೆ ಜಮೀನು ಯಾರಾದ್ರು ಕೊಡೋರಿದ್ರೆ ನೋಡ್ರಿ. ಸರಕಾರದಿಂದ ಅದನ್ನು ಖರೀದಿ ಮಾಡ್ತೀವಿ. ಅದಕ್ಕ ತಕ್ಕ ಬೆಲೆ ಕಟ್ಟಿ ದುಡ್ಡು ಕೊಡ್ತೀವಿ.

ಮಂದಿ-೨: ಹಿರಿಯರು ಮಾಡಿದ ಆಸ್ತಿನ ಯಾರೂ ಮಾರಂಗಿಲ್ಲ ಬಿಡ್ರಿ. ಈಗಿರೋ ಜಮೀನನ್ನು ಕೊಟ್ಟವ್ರು ಸುಡುಗಾಡಿಗೆ ಹೋಗ್ಬೇಕಾದೀತು..

ತಹಸೀಲ್ದಾರ್: ಜಮೀನು ಕೊಟ್ಟವ್ರು ಅಲ್ಲಿಗೆ ಹೋಗಬೇಕು. ಕೊಡದವನು ಅಲ್ಲಿಗೆ ಹೋಗ್ಬೇಕು ತಿಳಿತಾ..

ಮಂದಿ-೩: ಸಾಹೇಬ್ರ, ಆಸ್ತಿ ಮಾರಿ ದುಡ್ಡು ತಗೊಂಡು ಏನು ಮಾಡ್ಬೇಕು ಹೇಳ್ರಿ.

ತಹಸೀಲ್ದಾರ್: ಬೇರೆ ಕಡೆ ಜಮೀನು ತಗೋಬೇಕು

ಮಂದಿ-೧: ಅದು ಆಗಾಂಗಿಲ್ಲ ಬಿಡ್ರಿ (ಎಲ್ಲರೂ ಧ್ವನಿಗೂಡಿಸಿದರು)

ತಹಸೀಲ್ದಾರ್: ಗೌಡ್ರೆ, ಮುಂದಿನ ವ್ಯವಸ್ಥೆ ಆಗುವವರೆಗೂ ನೀವು ನಿಮ್ಮ ಹೊಲ್ದಾಗಾಸಿ ದಾರಿ ಕೊಡ್ಬೇಕು. ಇಲ್ಲಾಂದ್ರೆ ನಿಮ್ಮ ಊರ ಸುಡುಗಾಡು ಆಗತೈತಿ. ಕಾಡೇ ನಿಮಗೆಲ್ರಿಗೂ ಊರಾಗತೈತಿ. ನೋಡ್ರಿ ನಾನೇನ್ ಹಚ್ಗೆ ಹೇಳಾಂಗಿಲ್ಲ.

ಊರಗೌಡ: ಸಾಹೇಬ್ರ ಜೀವ ಹೋದ್ರು ಚಿಂತಿಲ್ಲ. ನಾ ಮಾತ್ರ ದಾರಿ ಕೊಡಂಗಿಲ್ರಿ. ನಮ್ಮವರು ಯಾರಾನ ಸತ್ರ ಯಾವ ನನ್ನ ಮಕ್ಳಿಗೂ ದಾರಿ ಕೊಡ್ರಿ ಅಂತ ಕೇಳಂಗಿಲ್ಲ. ನಮ್ಮೊಲದಾಗ ಸುಡತೀವಿ ಅಲ್ಲೆ ಹೂಳತೀವಿ.

ತಹಸೀಲ್ದಾರ್: ಕಾನೂನಿನ ಪ್ರಕಾರ ನೀವು ದಾರಿ ಕೊಡ್ಲೇಬೇಕು. ಇಲ್ಲಾಂದ್ರೆ ನಿಮ್ಮ ಮೇಲೆ ಕೇಸು ಹಾಕ್ತೀವಿ ಅಷ್ಟೆ..

ಊರಗೌಡ: ಕೇಸಾಗ್ಲಿ ಯಾರ ಹೆಣ ಅಲ್ಯಾಸಿ ಬರತೈತಿ ನಾನು ನೋಡೇ ಬಿಡ್ತೀನಿ.

ತಹಸೀಲ್ದಾರ್: ನಾನು ಇದು ಮೊದ್ಲನೆ ಸಾರಿ ನಿಮಗ ಹೇಳಿ ತಿಳಿಸಿಹೋಗೋಣಾಂತ ಬಂದಿದ್ದೀನಿ. ನಿಮ್ಮಷ್ಟಕ್ಕ ನೀವಾ ತಿಳ್ಕೊಂಡು ಅನುಕೂಲ ಮಾಡಿ ಕೊಟ್ರ ಸರಿ, ಇದ ತೊಂದ್ರಿ ಮುಂದುವರದ್ರ ಖಂಡಿತ ನಿಮ್ಮ ಮ್ಯಾಲೆ ಕೇಸು ಹಾಕಿ ಜೈಲಿಗೆ ಕಳಿಸ್ತೀನಿ ತಿಳ್ಕೊಳ್ರಿ.

ಊರಗೌಡ: ಖಂಡಿತ ನಾ ಬಿಡಂಗಿಲ್ರಿ (ಎದ್ದು ನಿಂತು) ಕೇಸರ ಆಗ್ಲಿ. ಜೈಲಿಗಾದ್ರು ಹೋಗ್ಲಿ ಮಾತ್ರ ದಾರಿ ಕೊಡಂಗಿಲ್ಲ.

ತಹಸೀಲ್ದಾರ್: ಊರ ಯಜಮಾನ್ರಾಗಿ ಊರ ಜನರಿಗೆ ಸಹಾಯ ಮಾಡೋದು ಬಿಟ್ಟು ನೀವಾ ಹಿಂಗ ತೊಂದ್ರಿ ಕೊಟ್ರ ಈ ಊರ ಗತಿ ಏನು? ‘ಊರಿಗೆ ಉಪಕಾರ ಹೆಣಕ್ಕೆ ಸಿಂಗಾರ ನನಗೂ ತಿಳಿತೈತಿ. ಅದೆಲ್ಲ ನಮಗ ಗೊತ್ತಿಲ್ಲ. ನಿಮ್ಮ ಹೊಲ ದಾಟಿ ಸುಡುಗಾಡು ಐತಿ. ಅಲ್ಲಿಗೆ ಹೋಗಾಕ ನೀವು ದಾರಿ ಕೊಡಬೇಕು. ಇಲ್ಲಾಂದ್ರೆ ಮುಂದೆ ನೀವೇ ನೋವು ಅನುಭವಿಸ್ತೀರಿ ತಿಳ್ಕೊಳ್ರಿ (ನಿರ್ಗಮನ)

ಊರಗೌಡ: (ಸ್ವಗತ) ಸಾಹೇಬ್ರಂತ...ಸಾಹೇಬ್ರು. ನನ್ನ ಜೈಲಿಗೆ ಹಾಕ್ತಾರಂತ. ಹೆದರ‍್ಸಾಕ ಬಂದಾರ. ಇಡೀ ಊರಿಗೆ ದಾರಿ ಕೊಡಬೇಕಂತ ದಾರಿ ಕೊಟ್ಟು ನಾನು ಬೇಕಾದ್ರ ಕೆಟ್ಟು ಹಾಳಾಗಬಹುದಂತ. ಊರ ಜನ ಮಾತ್ರ ಸುಖವಾಗಿ ನೆಮ್ಮದಿಯಿಂದ ಇರಬೇಕಂತ. ಹೆಂಗೈತಿ ನೋಡಿ ಸಾಹೇಬ್ರ ಮಾತು. ಹಾಕ್ಲಿ ಕೇಸು. ಕಳಿಸ್ಲಿ ಜೈಲಿಗೆ ನೋಡೇ ಬಿಡ್ತೀನಿ ಒಂದು ಕೈ. ಈಗ ನೋಡ್ಲಿದ್ರ ಇನ್ನು ಯಾವಾಗ? ಊರಾಗಿರೋ ಸಣ್ಣ ಸೂಳೇ ಮಕ್ಳು ನಮ್ಮ ಮ್ಯಾಲೆ ಚ್ಯಾಡ ಹೇಳ್ತಾರ. ಚಾಡ ಹೇಳಿ ನಂಗೇನು ಮಾಡ್ಕೊಂಡ್ರು. ಅವ್ರಿಗೂ ಒಂದು ಗತಿ ಕಾಣಸ್ತಿನಿ. (ಕತ್ತಲು)

ಕತೆಗಾರ: ಈ ಊರಿಗೆ ಸುಡುಗಾಡು ಇಲ್ಲದ್ಕ ಊರ ಸುಡುಗಾಡು ಆಗೈತಿ. ಒಂದು ಪಕ್ಷ ಸುಡುಗಾಡು ಇದ್ದಿದ್ರೆ ಈ ಊರು ವೈಶಮ್ಯದ ತಾಣ ಆಗ್ತಿರಲಿಲ್ಲ ಅಂತ ನನ್ನ ಭಾವನೆ. ಗೌಡ್ರೆ ಹೆಣಕ್ಕೆ ದಾರಿ ಕೊಡಲ್ಲ ಅಂತ ಹಟ ಹಿಡದಾವ್ರೆ ಅಂದ್ರೆ ಉಳಿದವರೆಲ್ಲರೂ ಕೂಡ ಅವರ ಹೊಲಕ್ಕ ಹೋಗೋ ದಾರ‍್ಯಾಗ್ಯಾಸಿ ಹೆಣ ಒಯ್ಯಾಕ ಬಿಡಲ್ಲ. ಹೆಣ ಸುಡಕ್ಕಾಗ್ಲಿ ಹೂಳಕ್ಕಾಗ್ಲಿ ಹೋಗೋಕೆ ದಾರಿ ಕೊಡಲ್ಲ ಅಂತ ಗಟ್ಟಿ ನಿರ್ಧಾರ ಮಾಡಿಕೊಂಡಿದ್ದರು ಈ ಊರ ಜನ. ತಹಸೀಲ್ದಾರರು ಎಚ್ಚರಿಕೆ ಕೊಟ್ರು ಕೂಡ ಗೌಡ್ರು ಮಣಿಯಲಿಲ್ಲ. ಊರ ಹೆಣ ಸುಡೋಕೆ ಸಹಾಯ ಮಾಡ್ಬೇಕು ಅಂಥ ಅನ್ನಿಸಲಿಲ್ಲದ ಗೌಡನೂ ನಾಳೆ ಸಾಯುವವನು ತಾನೆ..ನಾಳೆಯದನ್ನು ಯೋಚಿಸದ ಊರ ಗೌಡನಿಗೆ ಎಡುರಾಗದ ಜನ. ಈ ಊರಿನಲ್ಲಿದುದರಿಂದ ಈ ಊರಿನ ಹೆಣಗಳು ಅನಾಥವಾಗುತ್ತಿವೆ.  

ದೃಶ್ಯ-೨ (ಬಸವನ ಮನೆ)

ಬಸವ: ಲೇ ಕರಿಯ, ನೀ ಏನಾರ ನಮ್ಮ ಹೊಲ್ದಾಗಾಸಿ ನಿಮ್ಮಪ್ಪನ ಹೆಣ ಓಯ್ದಿಯಂದ್ರ ನಿನ್ನ ಹೆಣಾನು ಅಲ್ಲೇ ಬೀಳತೈತಿ ಮಗನಾ. ಹಗಲಿ ಹನ್ನೆಲ್ಡು ತಾಸು ನಮ್ಮ ಮನಿಮಂದಿಯೆಲ್ಲಾ ಹೊಲ್ದಾಗ ಇರ‍್ತಾರ. ನಿನ್ನ ಹೊಲಕ್ಕ ಒಯ್ಯಿ. ನಾ ಬ್ಯಾಡಾ ಅನ್ನಂಗಿಲ್ಲ. ಎಲ್ಯಾಸ್ಯಾರ ಒಯ್ಯಿ. ಆದ್ರ ನನ್ನ ಹೊಲ್ದಾಗಾಸಿ ಒಯ್ಯಂಗಿಲ್ಲ ತಿಳಿತಾ.?

ಕರಿಯ: ಬಸವ ಆಕಿ ನನಗಷ್ಟ ತಾಯಿಯಲ್ಲೊ ನಿನಗೂ ತಾಯಿ ಅಲ್ಲೇನೋ. ನಾನು ನೀನು ಆಟ ಆಡುವಾಗ ಇಬ್ರಗೂ ಕರದು ಉಣಸಿದ್ದು ಮರ‍್ತ ಬಿಟ್ಟಿ ಏನು? ನಾವಿಬ್ರು ಒಮ್ಮಿ ಜಗಳಾಡಿದ್ವಿ. ನೀನಾ ನನಗ ಹೊಡದಿದ್ದಿ. ಆದ್ರ ನಮ್ಮಪ್ಪ ಮತ್ತ ನನಗ ಹೊಡದು ನಿನಗ ರಮಿಸಿದ್ದು ಮರ‍್ತಿ ಏನು? ಆಕಿ ಅಡ್ಯಾಡಿದ ಜಾಗದಾಗ ಆಕೆ ಹೆಣ ಒಯ್ಯಬಾರದಂದ್ರ ಹೆಂಗೋ? ನಿನಗ ಕೈ ಮುಗಿತೀನಿ ಯಾರು ದಾರಿ ಬಿಡಂಗಿಲ್ಲ. ನೀನು ದೊಡ್ಡ ಮನಸ್ಸು ಮಾಡಿ ನನ್ನ ಹೊಲಕ್ಕ ನಮ್ಮಪ್ಪನ ಹೆಣ ಒಯ್ಯಾಕ ದಾರಿ ಕೊಡು. ಇವು ನಿನ್ನ ಕೈ ಅಲ್ಲ ಕಾಲು ಅಂತ ತಿಳ್ಕೊ. ನಿನ್ನ ಕಾಲಿಗೆ ಬಿದ್ದು ಬೇಡ್ತಿನಿ ಬ್ಯಾಡ ಅನ್ನಬೇಡೋ ಬಸವ ನನ್ನ ಹಡದಾಕಿ ಆತ್ಮಕ್ಕ ಶಾಂತಿ ಸಿಗಬೇಕಾದ್ರ ನೀನು ಕರುಣೆ ತೋರ‍್ಸು.
ಬಸವ: ಕರಿಯಾ, ಗೆಳೆತನ ಅಷ್ಟಕ್ಕ ರ‍್ಲಿ. ಆಕೇನೋ ಸತ್ಲು. ಈಗ ಇರೋರಾದ್ರು ಸುಖವಾಗಿರ‍್ಲಿ. ಆಕಿ ಸತ್ಲಂತ ನಾವೂ ಇದ್ದು ಸಾಯಿಬಾರ‍್ದು. ಸತ್ತರ‍್ಹಿಂದ ಯಾರೂ ಸಾಯಂಗಿಲ್ಲ ಹೋಗಿ ಅಡಿವ್ಯಾಗ ಸುಟ್ಟು ಬಾ ಏನೂ ಆಗಂಗಿಲ್ಲ.
ಕರಿಯ: ಬಸವ, ನೋಡು ಅಕ್ಕ ತಂಗ್ಯಾರು ಸತ್ತ ತಾಯಿನ್ನ ನೋಡಾಕ ಬಂದಾರ. ಅಕ್ಕ ತಂಗಿ ಅಂತ ಕರಿತಿದ್ವಿ. ಈಗ ನಮ್ಮವ್ವ ಸತ್ಲಂತ ಅನ್ನು ಮರ‍್ತಿ ಏನು? ಕಣ್ಮುಚ್ಚಿ ಕಣ್ಣು ತೆಗಿಯೋದ್ರಾಗ ನಮ್ಮವ್ವನ ಹೆಣ ದಾಟಿಸಿ ಬಿಡ್ತೀನಿ ಒಪ್ಪಿಕೊಳ್ಳೊ.

ಬಸವನ ಹೆಂಡತಿ: ಕರಿಯಣ್ಣ, ನಮ್ಮೆಜಮಾನ್ರು ಇಷ್ಟ ಹೇಳಿದ್ರು ನೀವು ಹಟ ಮಾಡ್ತ ಇದ್ದೀರಲ್ಲ. ಆಗಲ್ಲಂದ್ರ ಆಗಲ್ಲ.

ಕರಿಯ: (ದು:ಖಿಸುತ್ತಾ) ತಂಗಿ, ನೀನೂ ಹಂಗ ಮಾತಾಡ್ತಿ ಏನವಾ ? ನಮ್ಮವ್ವನ ಅತ್ತಿ..ಅತ್ತಿ ಅಂತ ಕರಿತಿದ್ದಿ. ಈಗ ಅದನ್ನು ಮರ‍್ತಿ ಏನು? ಒಂದೇ ಮನಿಯವ್ರು ಇದ್ದಾಂಗ ಇದ್ವಿ. ಕಡಿಗೆ ಆಕಿ ಮಾರಿ ನೋಡಾಕು ನೀವು ಬರಲಿಲ್ಲ (ನಿರ್ಗಮನ)

ಕತೆಗಾರ: ವಯಸ್ಸಾದ ತಾಯಿ ತೀರಿಕೊಂಡಿದ್ಲು. ಆಕಿನ್ನ ಎಲ್ಲಿ ಸುಡಬೇಕು ಅನ್ನೊ ಚಿಂತಿ ಕರಿಯನದು. ತಾಯಿ ಸತ್ದದ್ಕ ಅವನಿಗೆ ನೋವಾಗಿರಲಿಲ್ಲ. ಈ ಊರಾಗ ಹೆಣ ಸುಡಾಕ ಜಾಗ ಇಲ್ಲ. ತಮ್ಮ ಹೊಲಕ್ಕೆ ಹೆಣ ಒಯ್ಯಾಕ ಯಾರೂ ದಾರಿ ಕೊಡಂಗಿಲ್ಲ. ಕರಿಯ ಸತ್ತಿರುವ ತನ್ನ ತಾಯಿಯ ಅಂತ್ಯ ಸಂಸ್ಕಾರ ಮಾಡುವ ಪರಿಯನ್ನು ಅರಿಯದೇ ಕಂಗಲಾಗಿಹೋಗಿದ್ದ. ಮನೆ ತುಂಬಾ ಬೀಗರು ಬಿಜ್ರು ಬಂದು ಸೇರಿದ್ದಾರೆ. ಹೆಣ ಸಿಂಗಾರ ಮಾಡೋದಕ್ಕೂ ಆಗದೆ ಕರಿಯನ ಮನಸ್ಸು ಅತಂತ್ರವಾಗಿತ್ತು. ಎಷ್ಟೇ ಬೇಡಿಕೊಂಡರೂ ಬಸವ ತನ್ನ ಹೊಲ ದಾಟಲು ಅವಕಾಶ ಕೊಡಲು ಒಪ್ಪಲಿಲ್ಲ. ಅಲ್ಲದೇ ಅಕ್ಕ ಪಕ್ಕದ ಹೊಲದವರೂ ಕೂಡ ಒಪ್ಪದೇ ಕರಿಯನ ತಾಯಿಯ ಹೆಣ ಬರುವ ದಾರಿಯಲ್ಲಿ ಅಡ್ಡಗಟ್ಟಿ ಕಾದು ಕುಳಿತಿದ್ದರು. ಸತ್ತ ಮೇಲೆ ತನ್ನ ತಾಯಿಗೆ ಬಂದೊಗಿದ ಈ ಪರಿಸ್ಥಿತಿಯಿಂದ ಕರಿಯನ ಮನೆ ಮಂದಿಯೆಲ್ಲಾ ದು:ಖತಪ್ತರಾಗಿದ್ದರು. 

ದೃಶ್ಯ-೩

(ಬಿಳಿ ಬಟ್ಟೆ ಹೊದಿಸಿದ ಹೆಣದ ದೃಶ್ಯ. ಸುತ್ತಾ ಎರಡು ಮೂರು ಮಂದಿ ಕುಳಿತಿರುವರು)

ಕರಿಯ: ಯಾರೂ ಕೂಡ ಹೆಣ ಸುಡಾಕ ಬರಬ್ಯಾಡ್ರಿ. ನಾನೊಬ್ನೆ ಹೋಗ್ತಿನಿ. ಊರು ದಾಟಿ ಹತ್ತು ಕಿಲೋಮೀಟರ್ ದೂರದ ಅಡವಿಗೆ ಹೋಗ್ಬೇಕು. ಅದು ಅಲ್ಲದೆ ಹಳ್ಳದ ಗುಂಟ ಹೋಗಾಕೆ ನಿಮಗ್ಯಾರಿಗೂ ಸರಿಹೋಗಲ್ಲ. ಅದಕ್ಕ ಬಂಡಿ ಕಟ್ರಿ ಅದರಾಗ ಅವ್ವನ ಸುಡಾಕ ಕಟಿಗಿ ಹಾಕಿ ಅದರ ಮ್ಯಾಲೆ ಆಕಿನ ಮಲಗಿಸಿಬಿಡ್ರಿ. 

ಕತೆಗಾರ: ಕರಿಯ ಹೇಳಿದಂಗ ಬಂಡಿ ತಯಾರಾಯಿತು. ಮಕ್ಕಳು, ಮೊಮ್ಮಕ್ಕಳು ಸಂಬಂಧಿಕರು ಅತ್ತು ಎಲ್ಲಾ ತಯಾರಾಗಿ ಬಂಡಿ ಹೊರಡುವ ವೇಳೆಗಾಗ್ಲೆ ಮದ್ಯಾಹ್ನ ಆಗಿತ್ತು. ಉರಿ ಉರಿ ಬಿಸಿಲು. ಹಳ್ಳದ ದಾರಿ ಬಿಟ್ರೆ ಬೇರೆ ದಾರಿನೇ ಇಲ್ಲ. ದಾರಿ ತುಂಬಾ ಮರಳು. ಮುಳ್ಳಿನ ಪೊದೆ. ಮಳೆಗಾಲದಲ್ಲಿ ಹರಿದು ಬಂದ ಕಲ್ಲು, ಮಣ್ಣಿನಿಂದಾಗಿ ಬಂಡಿ ಸಾಗುವುದು ಸುಲಭವಾಗಿರಲಿಲ್ಲ. ತಗ್ಗು ದಿನ್ನೆಯಲ್ಲಿ ಹೆಣ ಹೊತ್ತ ಬಂಡಿ ಸಾಗಿತ್ತು. ಊರು ದಾಟುವ ಹೊತ್ತಿಗಾಗಲೇ ಎತ್ತುಗಳು ದಣಿದುಬಿಟ್ಟವು. ಅಲ್ಲಿ ಸ್ವಲ್ಪ ಹೊತ್ತು ನಿಲ್ಲಿಸಿ ಎತ್ತು ಬಿಚ್ಚಿ ನೆರಳಿಗೆ ಕಟ್ಟಿದ. ತಾನು ನೆರಳಲ್ಲಿ ಕುಳಿತುಕೊಂಡು ಬಂಡಿಯಲ್ಲಿದ್ದ ತಾಯಿಯ ಹೆಣವನ್ನೇ ನೋಡುತ್ತಾ ಕುಳಿತುಕೊಂಡ. ಅವನ ಮನಸ್ಸು ಮಿಡಿಯುತ್ತಿತ್ತು. ಆ ಮನಸ್ಸಿನ ಮಿಡಿತಕ್ಕೆ ಬಾಯಿ ಅದರುತ್ತಿತ್ತು. ಕೈಕಾಲುಗಳು ನಡುಗುತ್ತಿದ್ದವು. ಆ ಮೂಲಕ ಕಣ್ಣುಗಳು ನೀರನ್ನು ಸುರಿಸುತ್ತಿದ್ದವು. ಹಳೆಯ ನೆನಪುಗಳು ಕಾಡಿದವು.

ಕರಿಯ: (ಸ್ವಗತ) ಬೇರೆ ಯಾರಿಗಾದ್ರು ನಾ ಬೈಯ್ದರೆ ಯಾರೂ ಕೂಡ ಸುಮ್ನಿರಲ್ಲ. ನನ್ನ ಕಾಟವನ್ನು ಯಾರು ತಡ್ಕೊಳಲ್ಲ. ನಾ ಆಡಿದ್ದೆ ಆಟ. ನಾ ಮಾಡಿದ್ದೆ ಹಟ. ಆಕಿ ತನ್ನ ಕರ್ತವ್ಯವನ್ನು ಅಚ್ಚುಕಟ್ಟಾಗಿ ಮುಗಿಸಿ ನಿಶ್ಚಿಂತೆಯಾಗಿ ಹೊಂಟುಹೋದ್ಲು. ಮಗನಾಗಿ ನಾನು ನನ್ನ ಕರ್ತವ್ಯವನ್ನು ಮಾಡಲು ಆಗುತ್ತಿಲ್ಲ. ತನ್ನೆಲ್ಲ ಆಸೆ ಆಕಾಂಕ್ಷೆಗಳನ್ನು ಬದಿಗೊತ್ತಿ ನಮಗಾಗಿ ಇಡೀ ಬದುಕನ್ನೇ ಸವೆಸಿದ ಆ ಜೀವ ಇವತ್ತು ಅನಾಥವಾಗಿ ಮಲಗಿಬಿಡ್ತು. ತಾನು ಉಪವಾಸವಿದ್ದು ನಮಗಾಗಿ ಕಾದು ಕುಳಿತವಳು. ಕಾಣದ ಲೋಕಕ್ಕೆ ಹೊರಟುಹೋದಳು. ಏನೇ ಮಾಡಿದರು ಮರಳಿ ಬರುವುದಿಲ್ಲ. ಏನೇ ಕೊಟ್ಟರೂ ತಾಯಿ ಮತ್ತೆ ಸಿಗುವುದಿಲ್ಲ. ಊರಿಗೊಂದು ಸುಡುಗಾಡು ಇದ್ದಿದ್ರೆ ಮಗನಾಗಿ ನಾನು ನನ್ನ ಪಾಲಿನ ಕರ್ತವ್ಯವನ್ನು ಸಮಾಧಾನದಿಂದ, ಎಲ್ಲರೊಂದಿಗೆ ಮಾಡಿ ಮುಗಿಸಿಬಿಡುತ್ತಿದ್ದೆ. ಆ ನನ್ನ ತಾಯಿ ಮಾಡಿದ ಕರ್ಮವೋ ಅಥವಾ ನನ್ನ ಕರ್ಮವೋ ಒಂದೂ ತಿಳಿಯುತ್ತಿಲ್ಲ. ಈ ಊರ ಗೌಡ ತನ್ನ ಹೊಲ್ದಾಗಾಸಿ ಹೆಣ ಒಯ್ಯಾಕ ದಾರಿ ಕೊಟ್ಟಿದ್ರೆ ಇದೆಲ್ಲ ಸಮಸ್ಯೆ ಆಗುತ್ತಿರಲಿಲ್ಲ. ಅಲ್ಲಾ ಆ ಬಸವ ಎಂಥವನಿರಬೇಕ..ನಮ್ಮವ್ವ ಸಾಯೋದಕ್ಕೂ ನಾಕೈದು ದಿನ ಮುಂಚೆ ಆಕಿ ಉಣ್ಣಾಕ ನೀಡಿದ್ಲು. ನಾವಿಬ್ರು ಉಂಡೀವಿ. ಅದನ್ನು ಮರ‍್ತಾನೇನು.? 

ಕತ್ತಲು (ದೃಶ್ಯ-೪)

ಬಸವ: ನಮ್ಮವ್ವ ಇದ್ದಿದ್ರೆ ನನ್ನ ಇಷ್ಟು ಚೆನ್ನಾಗಿ ನೋಡ್ಕೋತ್ತಿದ್ಲೋ ಇಲ್ವೋ. ಆದ್ರ ನೀನು ಮಾತ್ರ ನನ್ನನ್ನ ಹಡದಾಕಿಗಿಂತ ಚೆನ್ನಾಗಿ ಮಾತಾಡಸ್ತಿ. ನನ್ನ ನೋಡ್ಕೊಂತಿ. ನನ್ನ ತಾಯಿ ನನಗ ನೆನಪಗಾಂಗಿಲ್ಲ.

ಕರಿಯನ ಅವ್ವ: ಮಗಾ ನನಗ ನೀನು ಬೇರೆ ಅಲ್ಲ ನನ್ನ ಮಗ ಕರಿಯಾ ಬೇರೆ ಅಲ್ಲ. ಇಬ್ರೂ ಒಂದೇ. ನೀವೀಬ್ರೂ ನನಗೆ ಮಕ್ಳೇ. ನೀವು ಅಣ್ಣ ತಮ್ಮ ಇದ್ದಾಂಗ ಇರಬೇಕು. ಯಾಕಂದ್ರ ಹೊಲ, ಮನಿ ಜೋಡಿಲೇ ಅದಾವು. ಹಿಂದ ನಿಮ್ಮಪ್ಪ ಇವರಪ್ಪ ಜತೀಲೇ ಇರ‍್ತಿದ್ರು. ಹೊಲಕ್ಕ ಹೋಗೋದು ಕೆಲ್ಸ ಮಾಡೋದು. ಬಿತ್ತೋದು, ಒಕ್ಲಿ ಮಾಡೋದು, ಇಬ್ರು ಕೂಡಿ ಮಾರಾಟಕ್ಕೆ ಹೋಗೋದು, ಹಬ್ಬ ಹುಣ್ಣಿಮೀಗೆ ಏನು ಬೇಕು ಅದನ್ನ ಇಬ್ರು ಕೂಡೇ ತರತಿದ್ರು. ನಿಮ್ಮನಿಯವ್ರು ನಮ್ಮನಿಗೆ, ನಮ್ಮನಿಯವ್ರು ನಿಮ್ಮನಿಗೆ ಹೋಗ್ತಿದ್ರು. ಹೀಗಾಗಿ ನೀವೂ ಮುಂದ ಹಂಗ ಇರ‍್ಬೇಕು.

ಬಸವ: ಹಿರಿಯರು ಹೇಂಗಿದ್ರು ಹಂಗ ನಾವೂ ಇರ‍್ತೀವಿ. ಜೀವಕ್ಕ ಜೀವ ಕೊಟ್ಟು ಬದಕ್ತೀವಿ. ಕರಿಯಾಗ ಏನಾರ ತೊಂದ್ರಿಯಾದ್ರ ನಾನು ಸಹಾಯ ಮಾಡ್ತೀನಿ. ನನಗೇನಾರಾದ್ರ ಅವ ಇರ‍್ತಾನ. ನೀ ಹೇಳಿದ್ಹಾಂಗ ಚೆಂದಾಗಿ ಬದಕ್ತೀವಿ. ನೀ ಏನು ಚಿಂತಿ ಮಾಡ್ಬೇಡ.

 (ಕತ್ತಲು)

ಕತೆಗಾರ: (ಪ್ರವೇಶಿಸಿ) ಅಂತ ಹೇಳಿದ್ದ ಬಸವ ಇವತ್ತು ಹೆಣ ಸುಡಾಕ ದಾರಿ ಕೊಡೋದು ಹೋಗ್ಲಿ ಆತನ ಹೊಲ್ದಾಗಾಸಿ ಹೆಣ ಒಯ್ಯಾಕ ದಾರಿ ಕೊಡೋದು ಬ್ಯಾಡ. ಪಕ್ಕದ್ಮನಿಯಾಗಿದ್ದವ್ನು ಸತ್ತಾಕಿ ಮಾರಿ ನೋಡಾಕ್ ಬರ‍್ಲಿಲ್ಲ. ಎಂಥಾ ಕಟುಕ ಇರಬಹುದು. ಎಂಥಾ ಮೋಸಗಾರ.. ಎಂದೆಲ್ಲಾ ಕರಿಯ ಬಸವನ ಬದಲಾದ ವರ್ತನೆಗೆ ಹಲ್ಲು ಕಡಿದ. ಆದರೆ ಅವನ ಸ್ಥಿತಿ ಹಲ್ಲು ಕಿತ್ತ ಹಾವಿನಂತಾಗಿತ್ತು. ಸುಡುವ ಬಿಸಲಲ್ಲಿ ತನ್ನ ತಾಯಿಯ ಹೆಣ ಇರುವುದನ್ನು ಕಂಡು ಓಡಿ ಬಂದು ಮುಖ ನೋಡಿ ಮತ್ತೆ ಅಳುತ್ತಿದ್ದ. ಹೊತ್ತಾಗಲೇ ಬಹಳ ಸಾಗಿತ್ತು. ಲಗುಬಗೆಯಿಂದ ಬಂಡಿ ಕಟ್ಟಿದ. ಹೆಣ ಹೊತ್ತ ಬಂಡಿ ಸಾಗಿತ್ತು. ಇನ್ನೂ ಅರ್ಧ ದಾರಿ ಉಳಿದಿತ್ತು. ದೊಡ್ಡ ದೊಡ್ಡ ತಗ್ಗುಗಳಿದ್ದವು. ಬಂಡೆಗಳಿದ್ದವು. 
ಅವುಗಳನ್ನೆಲ್ಲಾ ದಾಟಿ ಕಾಡು ಸೇರುವ ಹೊತ್ತಿಗೆ ಕತ್ತಲಾಗುತ್ತಾ ಬಂದಿತ್ತು. ಅದು ದೊಡ್ಡ ಕಾಡು. ಹಿಂದೆ ಇಲ್ಲಿ ಹುಲಿ ಕಂಡಿದ್ದು, ಅದು ಊರಿನ ಒಂದೆರಡು ದನಗಳನ್ನು ತಿಂದಿದ್ದು ದನಕಾಯೋ ಹುಡುಗನ್ನ ಎಳೆದುಕೊಂಡು ಹೋಗಿದ್ದೆಲ್ಲ ನೆನೆದು ಕರಿಯ ಬೆವರತೊಡಗಿದ. ಕಾಡಿನ ಅಂಚಿನಲ್ಲಿ ಒಂದು ಸಮನಾದ ಜಾಗದಲ್ಲಿ ಬಂಡಿ ನಿಲ್ಲಿಸಿ ಹಾಗೂ ಹೀಗೂ ಪೇಚಾಡಿ ಹೆಣವನ್ನು ಕೆಳಗಿಳಿಸಿದ. ಕಟ್ಟಿಗೆಯ ದೊಡ್ಡ ದೊಡ್ಡ ಬಡ್ಡೆಗಳನ್ನು ಕೂಡ ತೆಗೆದು ಸಮತಟ್ಟಾಗಿ ಇಡುತ್ತಾ ಬಂದ. ಆತನ ಕೈಗೆ ಕಾಲಿಗೆ ಅಲ್ಲಲ್ಲಿ ಗಾಯಗಳಾದವು. ಅದ್ಯಾವುದು ಗಮನಿಸುತ್ತಿಲ್ಲ. ಕಟ್ಟಿಗೆಯ ರಾಶಿಯ ಮೇಲೆ ತನ್ನ ತಾಯಿಯ ಹೆಣವನ್ನು ಇಟ್ಟು ಸೀಮೆಎಣ್ಣೆಯನ್ನು ಕೆಳಗಿನ ಕಟ್ಟಿಗೆಗೆ ಸುರುವಿದ. ಇನ್ನೇನು ತನ್ನ ತಾಯಿಯನ್ನು ಸುಡುತ್ತಿದ್ದೇನೆ ಎನ್ನುವುದನ್ನೇ ಮರೆತುಹೋದ ಕರಿಯ. ಯಾಕೆಂದರೆ ಹುಲಿ ನನ್ನ ಮೇಲೆ ಬಂದೆರಗಿದರೆ ಎಂಬ ಭಯ ಆವರಿಸಿಬಿಟ್ಟಿತು. ಕೈಕಾಲು ನಡುಗತೊಡಗಿದವು. ಎತ್ತುಗಳು ಹೋಗ್ಲಿ. ನನ್ನ ತಾಯಿ ಹೋಗ್ಲಿ. ನಾನು ಬಚಾವಾಗಬೇಕಲ್ಲ. ಒಂದು ವೇಳೆ ಹುಲಿ ನನ್ನ ಮೇಲೆ ಹಿಂದಿನಿಂದ ಹಾರಿ ಬಂದುಬಿಟ್ಟರೇ, ದನ ಕಾಯುವ ಹುಡುಗನ್ನ ಎಳೆದುಕೊಂಡು ಹೋದಂತೆ ನನ್ನನ್ನು ಎಳೆದುಕೊಂಡು ಹೋಗಿಬಿಟ್ಟರೆ ಏನೆಲ್ಲಾ ಯೋಚನೆಯ ಮಧ್ಯೆ ಬೆಂಕಿ ಹಚ್ಚಲು ಲಗುಬಗೆಯಿಂದ ಬೆಂಕಿಪಟ್ಟಣಕ್ಕಾಗಿ ತನ್ನ ಜೇಬಿನಲ್ಲಿ ಕೈ ಹಾಕುತ್ತಾನೆ. ಇಲ್ಲ. ನಾಕೈದು ಬಾರಿ ನೋಡ್ತಾನೆ ಸಿಗಲಿಲ್ಲ. ಕರಿಯನ ಜಂಘಾಬಲವೇ ಅಡಗಿಹೋಯಿತು. ಕತ್ತಲಾಗುತ್ತಿದೆ. ಏನೂ ಕಾಣಿಸುತ್ತಿಲ್ಲ. ಅನಿವಾರ್ಯವಾಗಿ ಸದ್ದು ಮಾಡದೆ ಎತ್ತು ಬಂಡಿ ಕಟ್ಟಿಕೊಂಡು ಬಂದ ದಾರಿಯಗುಂಟ ಮನೆಗೆ ಬರತೊಡಗಿದ. ತನ್ನ ತಾಯಿಯ ಸಾವಿನಿಂದ ನೊಂದವನಿಗೆ ತನ್ನ ಸಾವಿನ ಬಗ್ಗೆ ಭಯ ಹುಟ್ಟಿತು. ಅವಸರವಸರವಾಗಿ ಮನೆ ಕಡೆಗೆ ಬರುತ್ತಾನೆ. ಊರು ಹತ್ತಿರವಾಗುತ್ತಿದ್ದಂತೆ ಮತೆ ತಾಯಿ ನೆನಪಾಗುತ್ತಾಳೆ.

 (ಕತ್ತಲು)

ಕರಿಯ: (ಪ್ರವೇಶಿಸಿ) ಆಯ್ಯೋ ಹಾಳಾದ್ದು ಮರೆವು ನಾನು ಬೆಂಕಿಪಟ್ನ ನೆನಪುಮಾಡಿ ತೆಗೆದು ಕೊಂಡು ಹೋಗಿದ್ರೆ ಎಲ್ಲಾ ಮುಗಿದೇ ಹೋಗುತ್ತಿತ್ತು. ಎಂಥಾ ತಪ್ಪು ಮಾಡಿದೆ. ಏನು ಮಾಡುವುದು. ಮತ್ತೆ ಮರಳಿ ಹೋಗಲೇ. ಮನೆಯವರಿಗೆ ಏನಂತ ಹೇಳಲಿ. ನನ್ನ ದಡ್ಡತನಕ್ಕೆ ಅವರೆಲ್ಲಾ ಬೈಯುತ್ತಾರಲ್ಲ. ಏನು ಮಾಡಲಿ.? ಎಲ್ಲಾ ಸರಿಯಾಗಿ ಮುಗಿದುಹೋತು ಅಂದುಬಿಟ್ರೆ.? ಅನ್ನಲೇ ಬೇಕು. ಅನ್ನದಿದ್ರೆ ನನ್ನ ಮೂರ್ಖತನಕ್ಕೆ ಶಾಪಹಾಕುತ್ತಾ ದು:ಖ ಇಮ್ಮಡಿಯಾಗುತ್ತದೆ. ಇವರೆಲ್ಲರೂ ಸಮಾಧಾನವಾಗಿರಬೇಕಾದರೆ ಖಂಡಿತವಾಗಿ ನಾನು ಸುಳ್ಳು ಹೇಳಲೇಬೇಕು. ಆದ್ರೆ ಹುಲಿ, ಚಿರತೆ ತಾಯಿಯ ಹೆಣವನ್ನು ತಿಂದು, ಕಟ್ಟಿಗೆಯ ರಾಶಿ ಹಾಗೆ ಉಳಿದರೆ.? ಈ ವಿಷಯ ನಮ್ಮವರಿಗೆ ಯಾರಿಗಾದರೂ ಗೊತ್ತಾದ್ರೆ.? ಏನು ಮಾಡುವುದು, ಏನೂ ಮಾಡುವುದು, ಒಂದೂ ಗೊತ್ತಾಗವಲ್ದು, ಸತ್ಯ ಹೇಳಿಬಿಡಲೇ..? ಬೇಡ..ಸುಳ್ಳು ಹೇಳಬೇಕು..
(ನಿರ್ಗಮನ)

ಕತೆಗಾರ: ಮನೆಗೆ ಬಂದ ಕರಿಯ ಎತ್ತುಗಳನ್ನು ಬಿಚ್ಚಿದ. ತಾನು ಕೈಕಾಲು ಮುಖ ತೊಳೆದುಕೊಂಡು ಹೊರಗಿನ ಕಟ್ಟೆಯ ಮೇಲೆ ಕುಳಿತ. ಆತ ಬಂದುದನ್ನು ನೋಡಿ ಎಲ್ಲರೂ ಪುನ: ಅಳತೊಡಗಿದರು. ಕರಿಯ ಕಟ್ಟೆಯ ಮೇಲೆ ಮಲಗಿಬಿಟ್ಟ. ಯಾರೂ ಎಬ್ಬಿಸಿದರೂ ಏನೂ ತಿನ್ನದೇ ಹಾಗೆ ನಿದ್ರೆ ಹೋದ. ಮುಂಜಾನೆ ಬೇಗ ಎದ್ದವನು ಅವಸರದ ಜೊತೆಗೆ ಭಯ. ಭಯದ ಜೊತೆಗೆ ಅಳುಕು. ಅಳುಕಿನ ಜೊತೆಗೆ ತಾಯಿ ಪ್ರೀತಿ ಹೊತ್ತ ಕರಿಯ ಹೇಗೋ ಧೈರ್ಯಮಾಡಿ ಕಾಡಿಗೆ ಬಂದು ನೋಡ್ತಾನೆ ಹೆಣ ಕಾಣೆಯಾಗಿತ್ತು. ಹುಡುಕಲು ಭಯವಾಗಿ ಕಡ್ಡಿಗೀರಿ ಕೂಡಿಟ್ಟಿದ್ದ ಕಟ್ಟಿಗೆಯ ರಾಸಿಗೆ ಬೆಂಕಿ ಹಚ್ಚಿ ಅಲ್ಲಿಂದ ಹಿಂದೋಡಿದ. ಮನೆಯಲ್ಲಿದ್ದವರೆಲ್ಲರಿಗೂ ಗಾಬರಿಯಾಗಿತ್ತು. ಎದ್ದವನೇ ಎಲ್ಲಿಗ್ಹೋದ ಎಂದು ಹುಡುಕಾಡುತ್ತಿದ್ದರು. ಇಡೀ ಊರೆಲ್ಲಾ ಜಾಲಾಡಿದರು. ಆದರೂ ಸಿಗದೆ ಕಾಡಿನಿಂದ ಬಂದವನನ್ನು ಕಂಡು ಆಶ್ಚರ್ಯದಿಂದ ವಿಚಾರಿಸತೊಡಗಿದರು. ಏನೂ ಹೇಳಲಾಗದೆ ಕರಿಯ ಕಟ್ಟೆಯ ಮೇಲೆ ಕುಳಿತು ಬಿಕ್ಕಳಿಸತೊಡಗಿದ. ತನ್ನ ಅಕ್ಕ ತಂಗಿಯರನ್ನು ತಬ್ಬಿ ಅಳುತ್ತಿದ್ದ.
      
- ಗೊರೂರು ಅನಂತರಾಜು, ಹಾಸನ.
 ಮೊ: ೯೪೪೯೪೬೨೮೭೯.
ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ೩ನೇ ಕ್ರಾಸ್, ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ-೫೭೩೨೦೧

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...