ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹಣಮಸಾಗರ ಎಂಬ ಪುಟ್ಟ ಹಳ್ಳಿಯಲ್ಲಿ ಕಳಕಪ್ಪ ಮತ್ತು
ಬಾಳವ್ವ ಎಂಬ ದಂಪತಿಗಳ ಉದರದಲ್ಲಿ ನಾಲ್ಕನೇ ಮಗುವಾಗಿ ಸುಮಾರು 1953ನೇ ಇಸ್ವಿಯಲ್ಲಿ
ಜನಸಿದ್ದು ಮುದ್ದಾದ ಮಗು. ಆ ಮಗುವಿನ ಹೆಸರು ದೇವಮ್ಮ. ಈ ಹೆಣ್ಣು ಮಗು ಜಗತ್ತಿನ ಅರಿವಿಲ್ಲದ
ಸಮಯದಲ್ಲಿ ತಾಯಿಯಿಲ್ಲದ ತಬ್ಬಲಿಯಾಯಿತು ಎಂದು ಹೇಳಲು ದುಃಖ ಉಮ್ಮಳಿಸಿ ಬರುತ್ತದೆ.
ನೋವಿನಲ್ಲಿ ಇದ್ದಾಗ ತಂದೆ ಮಕ್ಕಳನ್ನು ನೋಡಿಕೊಳ್ಳಲು ಒಬ್ಬ ಹೆಂಗಸು ಬೇಕೆಂದು ಹಣಮಸಾಗರದ
ಪಕ್ಕದ ಹಳ್ಳಿ ಹಲಗೇರಿಯ ಕನ್ಯೆಯನ್ನು ಮದುವೆಯಾಗಲು ನಿರ್ಧರಿಸಿದನು. ಆಗ ಹೆಣ್ಣಿನ ಕಡೆಯವರು
ನಿನ್ನ ಮಗಳನ್ನು ನಮ್ಮ ಹುಡುಗನಿಗೆ ಕೊಟ್ಟರೆ ನಾವು ನಿಮಗೆ ನಮ್ಮ ಮಗಳನ್ನು ಕೊಡುತ್ತೇವೆ
ಎಂದು ತಿಳಿಸಿದರು. ಅದಕ್ಕೆ ಒಪ್ಪಿದ ಕಳಕಪ್ಪ, ಮುದ್ದಾದ ದೇವಮ್ಮಳನ್ನು ಆ ಹುಡುಗನ ಬಗ್ಗೆ
ತಿಳಿದುಕೊಳ್ಳದೆ ಮದುವೆ ಮಾಡಿಯೇ ಬಿಟ್ಟ. ಸುಂದರವಾದ ದೇವತೆಯಂತೆ ಕಾಣುತ್ತಿರುವ ದೇವಮ್ಮಳ
ಮದುವೆಯಾದಾಗ ಆಕೆಗೆ ಕೇವಲ ಏಳು ವರ್ಷ ಮಾತ್ರ, ಕುಟುಂಬ ನಿರ್ವಹಿಸುವುದು ಎಂದರೆ ಏನು ಎಂದು
ತಿಳಿಯದ ಮುಗ್ಧೆಯ ಮದುವೆ ಆಗಿದ್ದು ಒಬ್ಬ ಕುಡುಕ ವ್ಯಕ್ತಿ, ಆತನ ಹೆಸರು ಯಮನಪ್ಪ. ಸಂಸಾರ
ನೌಕೆ ಸಾಗುತ್ತಾ ಇತ್ತು, ಪ್ರತಿದಿನ ಗಂಡನ ಬೈಗುಳ, ಹೊಡೆತ ಇದ್ದಿದ್ದೆ. ಇಷ್ಟೆಲ್ಲಾ
ನೋವನ್ನು ನುಂಗಿಕೊಂಡು ಕುಡುಕನ ಜೊತೆಯೇ ಜೀವನ ಸಾಗಿಸಿದ ಆ ದೇವತೆಯು 8 ಮಕ್ಕಳಿಗೆ ಜನ್ಮ
ನೀಡಿದಳು. ಆ ಎಲ್ಲಾ ಮಕ್ಕಳನ್ನು ಜತನವಾಗಿ ಕಾಪಾಡಿಕೊಂಡು ಬಂದಳು. ಗಂಡನ ಬೈಗುಳ ಹೊಡೆತ
ಇನ್ನೂ ನಿಂತಿಲ್ಲ. ಒಂದು ಮಗುವನ್ನೇ ನೋಡಿಕೊಳ್ಳಲು ಕಷ್ಟ ಎನ್ನುವ ಆಧುನಿಕ ಕಾಲದ ಜನರು ಈ
ತಾಯಿಯ ಧೈರ್ಯ ಮೆಚ್ಚಲೇಬೇಕು. ಮುಂದೆ ತಾನು ಉಪವಾಸವಿದ್ದರೂ ಪರವಾಗಿಲ್ಲ ಮಕ್ಕಳನ್ನು ಸಾಕಿ
ಸಲಹಿದ ಮಾತೆ ದೇವಮ್ಮ, ಎಲ್ಲಾ ಮಕ್ಕಳಿಗೂ ಒಳ್ಳೆಯ ಸಂಸ್ಕಾರ ತುಂಬಿದಳು. ಐದು ಮಕ್ಕಳ
ಮದುವೆಯನ್ನೂ ಮಾಡಿದಳು. ಒಂದು ದಿನ ದೀಪಾವಳಿ ಅಮವಾಸ್ಯೆ, ಅಂದು ನೆಮ್ಮದಿಯಿಂದ ಬದುಕಲು
ದೇವರು ಬಿಡಲಿಲ್ಲ ಅನಿಸುತ್ತೆ, ತಾಯಿಯ ಮಡಿಲಿಗೆ ಕಿಚ್ಚು ಹಚ್ಚುವ ರೀತಿ ದೇವರು ದೇವಮ್ಮಳ
ಮುದ್ದು ಮಗಳು ರೇಣುಕಾಳನ್ನು ಕಿತ್ತುಕೊಂಡ, ತಾಯಿ ದೇವಮ್ಮ ನನ್ನ ಕಣ್ಣುಮುಂದೆ ನನ್ನ ಮಗಳು
ಮರೆಯಾದಳು ಎಂದು ಚಿಂತೆಯಲ್ಲಿಯ 12 ವರ್ಷಗಳ ಕಾಲ ಗಂಡು ಮಕ್ಕಳ ಆಶ್ರಯದಲ್ಲಿ ಮಗುವಿನಂತೆ
ಪೋಷಿತಳಾದಳು. ವಿಧಿ ಬಿಡಲಿಲ್ಲ ನಮ್ಮೆಲ್ಲರ ಬಾಳಿನ ದೇವತೆ ನನ್ನ ಅವ್ವ ಮಾರ್ಚ್ 7, 2015
ರಲ್ಲಿ ರಾತ್ರಿ 12 ಗಂಟೆಗೆ ತನ್ನ ಎಲ್ಲಾ ಮಕ್ಕಳನ್ನು ಬಿಟ್ಟು ಕೈಲಾಸವಾಸಿಯಾದಳು. ಈ ತಾಯಿಯ
ಕೃಪೆಯಿಂದ ಮಕ್ಕಳು ಇವಾಗ ಒಳ್ಳೆಯ ಜೀವನ ನಡೆಸುತ್ತಿದ್ದಾರೆ, ಅಂತಹ ಮಕ್ಕಳಲ್ಲಿ ನಾನೂ ಒಬ್ಬ.
ಲೇಖಕ:- ಹನುಮಂತ ಭಜಂತ್ರಿ ಹನಮಸಾಗರ
ಧನ್ಯವಾದಗಳು,
ಹನಮಂತ ಭಜಂತ್ರಿ ಹನಮಸಾಗರ |
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ